ಸಂವಾದ-೨
ಗಣೇಶ್ . ಕೆ. , ವಿನಾಯಕ ಮತ್ತು ಸಿರಿ ಪ್ರಶ್ನೆಗಳನ್ನು ಕೇಳಿ ಹಲವು ದಿನಗಳಾಗಿತ್ತು. ಆದರೆ ಚುನಾವಣೆಯಲ್ಲಿ ಮುಳುಗಿದ್ದರಿಂದ ಮೇಲಕ್ಕೆ ಬರಲು ಇಷ್ಟು ದಿನಗಳಾದವು. ತಡವಾಗಿದ್ದಕ್ಕೆ ವಿಷಾದವಿದೆ.
ಗಣೇಶ್ ಅವರು ಸಂಪಾದಕ, ಸುದ್ದಿ ಸಂಪಾದಕ, ಉಪ ಸಂಪಾದಕರ ಕೆಲಸದ ಬಗ್ಗೆ ಕೇಳಿದ್ದಾರೆ.
ಉ : ಪತ್ರಿಕೆ ಒಬ್ಬನೇ ಸಂಪಾದಕ ಮತ್ತು ಸುದ್ದಿ ಸಂಪಾದಕ, ಉಪ ಸಂಪಾದಕರು ಹಲವರು. ಹೀಗೊಂದು ಮಾತಿದೆ. ಯಾವಾಗಲೂ ಪತ್ರಿಕೆಗೆ ಒಬ್ಬ ಸಂಪಾದಕರಿರುತ್ತಾರೆ. ಅವರು ಪತ್ರಿಕೆಯ ಎಲ್ಲ ನಿರ್ಧಾರಗಳನ್ನು ಕೈಗೊಳ್ಳುವ ಮತ್ತು ಪತ್ರಿಕೆಯ ಸಂಪೂರ್ಣ ಜವಾಬ್ದಾರಿ ಹೊತ್ತವರು. ನಂತರದ ಸ್ಥಾನದಲ್ಲಿರುವವರೆಲ್ಲಾ ಈ ಸಂಪಾದಕರ ಹಲವು ಜವಾಬ್ದಾರಿಗಳನ್ನು ವಿಭಾಗಿಸಿಕೊಂಡವರು.
ಸುದ್ದಿ ಸಂಪಾದಕರೆಂದರೆ ಸುದ್ದಿಯನ್ನು ಸಂಪಾದಿಸುವವರು ಎಂದೂ ಕರೆಯಬಹುದು. ಆದರೆ ವಾಸ್ತವವಾಗಿ ಅವರು ಪತ್ರಿಕೆಗೆ ಹೋಗುವ ಎಲ್ಲಾ ಸುದ್ದಿಗಳ ಹೊಣೆಗಾರರು. ಯಾವುದೇ ಸುದ್ದಿ ಅವರ ಗಮನಕ್ಕೆ ಬಾರದೇ ಅಚ್ಚಿಗೆ ಹೋಗುವಂತಿಲ್ಲ. ಅಂಥ ಪ್ರಸಂಗ ನಡೆದರೆ ಸಂಪಾದಕರು ಸುದ್ದಿ ಸಂಪಾದಕರನ್ನು ಪ್ರಶ್ನಿಸುತ್ತಾರೆ. ಹಾಗೆಯೇ ತಮ್ಮ ಅಧೀನ ಸಿಬ್ಬಂದಿಗಳನ್ನು ತರಾಟೆಗೆ ತೆಗೆದುಕೊಳ್ಳುವ ಎಲ್ಲ ಅವಕಾಶ, ಹಕ್ಕು ಸುದ್ದಿ ಸಂಪಾದಕರದ್ದಾಗಿರುತ್ತದೆ. ಸುದ್ದಿ ಮನೆಯಲ್ಲಿ ಸದಾ ತಮಾಷೆ ಮಾಡುವುದುಂಟು.
ತಪ್ಪು ಮಾಡುವುದಿದ್ದರೂ ಅವರನ್ನು (ಸುದ್ದಿ ಸಂಪಾದಕರು) ಕೇಳಿ ಮಾಡಿ, ಅದಕ್ಕೆ ಕ್ಷಮೆ ಇರುತ್ತದೆ ಎಂದು. ಆದರೆ ಸ್ಥಿತಿ ಹಾಗಿಲ್ಲ. ಸುದ್ದಿ ಮನೆಯಲ್ಲಿ ಪ್ರತಿಯೊಬ್ಬರನ್ನೂ “ನೀವು ಈ ಕೆಲಸ ಮಾಡಿದಿರಾ, ಇಲ್ಲವಾ?’ ಎಂದು ಕೇಳುವವರು ಯಾರೂ ಇರುವುದಿಲ್ಲ. ನಿಮ್ಮ ಮೇಲಿನವರೂ ಸಹ ಕೇಳುವುದೂ ಇಲ್ಲ. ಆದರೆ ದೃಷ್ಟಿಸುತ್ತಿರುತ್ತಾರೆ. ಒಬ್ಬ ಎಡವಿದರೂ ಅದರ ಪರಿಣಾಮ ಪತ್ರಿಕೆಯ ಮೇಲಾಗುವುದು ಖಚಿತ.
ಇನ್ನು ಉಪ ಸಂಪಾದಕರೆಂದರೆ ಪತ್ರಿಕೋದ್ಯಮಕ್ಕೆ ಕಾಲಿಟ್ಟ ಕೂಡಲೇ ಸಿಗುವ ಹುದ್ದೆ. ನಾನಾ ಪಾಳಿಗಳಲ್ಲಿ, ವಿಭಾಗಗಳಲ್ಲಿ ಕಾರ್‍ಯ ನಿರ್ವಹಿಸುವ ಇವರು, ವಿವಿಧ ನೆಲೆಯ ನಿರ್ವಹಣೆಗಳನ್ನು ಹೊಂದಿರುತ್ತಾರೆ. ಒಂದೊಂದು ಕಚೇರಿಯಲ್ಲೂ ಒಂದೊಂದು ಪಾಳಿಯಲ್ಲಿ ಹತ್ತಾರು ಮಂದಿ ಉಪ ಸಂಪಾದಕರು ಕೆಲಸ ಮಾಡುತ್ತಾರೆ. ಈ ಪೈಕಿ ಜನರಲ್, ಬ್ಯೂರೋ, ಮೊಫಿಸಿಯಲ್ (ಗ್ರಾಮೀಣ) ಹೀಗೆ ಹಲವು ವಿಭಾಗಗಳಿರುತ್ತವೆ.
ಇನ್ನು ಸಿರಿಯವರ ಪ್ರಶ್ನೆ ವರದಿ ಮಾಡುವ ಕುರಿತಾದದ್ದು (ರಿಪೋರ್ಟಿಂಗ್)
ವರದಿಗಾರಿಕೆ ಅತ್ಯಂತ ಕುತೂಹಲವಾದದ್ದು. ಜತೆಗೆ ಜನರೊಂದಿಗೆ ನಿತ್ಯವೂ ನಮ್ಮನ್ನು ಸಂಪರ್ಕವಿಡುವಂಥದ್ದು. ನನಗೂ ಮೊದಲು ವರದಿಗಾರಿಕೆಗೆ ಹೋದಾಗ ಸಹಜವಾಗಿ ಭಯವಾಗಿತ್ತು. ಅದನ್ನು ನಾನು ನನ್ನ “ಬ್ರಹ್ಮಚಾರಿಗಳ ಪುಟಗಳು’ ಬ್ಲಾಗಿನಲ್ಲಿನ ಧಾರಾವಾಹಿಯಲ್ಲಿ ಹೇಳಿಕೊಂಡಿದ್ದೆ.
ವರದಿಗಾರಿಕೆ ಮಾಡುವುದು ಎಲ್ಲರೂ ತಿಳಿದಂತೆ ಕಷ್ಟವಲ್ಲ. ಮೊನ್ನೆ ಒಬ್ಬರು ಇಂಟರ್ನ್‌ಶಿಪ್‌ಗೆ ಬಂದಿದ್ದ ಪತ್ರಿಕೋದ್ಯಮ ವಿದ್ಯಾರ್ಥಿಯ ಬಳಿ ಈ ಬಗ್ಗೆ ಸುಮಾರು ಹೊತ್ತು ಮಾತನಾಡಿದೆ. ಬಹಳಷ್ಟು ಬಾರಿ ಅನಿಸುವ ಸಂಗತಿಯೆಂದರೆ ( ಇದು ಎಲ್ಲರಿಗೂ ಇಷ್ಟವಾಗದಿರಬಹುದು) ವರದಿಗಾರಿಕೆಗಾಗಲೀ, ಸುದ್ದಿ ಸಂಪಾದನೆ (ಎಡಿಟಿಂಗ್) ಗಾಗಲೀ “ಸಾಮಾನ್ಯ ಜ್ಞಾನ’ (ಕಾಮನ್ ಸೆನ್ಸ್) ಅತ್ಯವಶ್ಯ. ಇದರರ್ಥ ವಿಶೇಷ ಜ್ಞಾನ, ಪರಿಣತಿ ಇರಬಾರದೆಂದಲ್ಲ. ಇದ್ದರೆ ಅದು ಪೂರಕ (ಸಪ್ಲಿಮೆಂಟ್). ಆದರೆ ಮೂಲವಾದುದು ಸಾಮಾನ್ಯಜ್ಞಾನ. ಇಂಟೆಲ್‌ಕ್ಚುಯಲಿಟಿಯಿಂದ ಇಲ್ಲಿ ಪ್ರಯೋಜನ ಕಡಿಮೆ.
ವರದಿಗಾರಿಕೆ ಮಾಡುವವರಿಗೆ ಮೊದಲು ನಿತ್ಯದ ಬೆಳವಣಿಗೆಗಳ ಅರಿವಿರಬೇಕು. ಹಾಗೆಯೇ ಪ್ರತಿ ಬೆಳವಣಿಗೆಗಳ ಭವಿಷ್ಯವನ್ನು ಅಂದಾಜು ಮಾಡುವ ಸಾಮರ್ಥ್ಯ ಇರಬೇಕು. ಉದಾಹರಣೆಗೆ ರಾಜ್ಯಾದ್ಯಂತ ನಾಳೆಯಿಂದ ಬೆಳಗ್ಗೆ 9 ಕ್ಕೆ ಶಾಲೆ ಆರಂಭ. ಇದುವರೆಗೆ 9.30 ಕ್ಕೆ ಆರಂಭವಾಗುತ್ತಿತ್ತು ಎಂಬ ಶಿಕ್ಷಣ ಇಲಾಖೆ ಪ್ರಕಟಣೆಯನ್ನು ಇಟ್ಟುಕೊಂಡು ಅದರಿಂದುಂಟಾಗುವ ಸರಣಿ ಬೆಳವಣಿಗೆಗಳನ್ನು ಗ್ರಹಿಸಬೇಕು. ಇಂದಿನ ಪೋಷಕರು ತಮ್ಮ ಎಲ್ಲ ಚಟುವಟಿಕೆಗಳನ್ನು ಅರ್ಧ ಗಂಟೆ ಮುಂಚಿತವಾಗಿಯೇ ರೂಪಿಸಿಕೊಳ್ಳಬೇಕು. ಇದನ್ನು ಅರ್ಥವತ್ತಾಗಿ ಬರೆದರೆ ಒಂದು ಮಾನವೀಯ ವರದಿ.
ಹಾಗಾಗಿ ನಿತ್ಯ ಬೆಳವಣಿಗೆಗಳ ಪರಿಣಾಮ ಗ್ರಹಿಸುವ ಸಾಮರ್ಥ್ಯ ಅಗತ್ಯ. ಇದೇನೂ ಕಷ್ಟವಲ್ಲ. ನಿತ್ಯವೂ ರೂಢಿಸಿಕೊಂಡುಹೋಗುವಂಥದ್ದು.
* ವರದಿಗಾರಿಕೆಗೆ ಹೋಗುವ ಮೊದಲು ಸಂಬಂಧಪಟ್ಟ ಕಾರ್‍ಯಕ್ರಮದ ವಿಷಯದ ಬಗ್ಗೆ ಮೊದಲೇ ತಿಳಿದಿದ್ದರೆ ಅದಕ್ಕೆ ಸಂಬಂಧಿಸಿದ ಇತ್ತೀಚಿನ ಬೆಳವಣಿಗೆಗಳನ್ನು ತಿಳಿದು ಹೋಗಿ. ಇದರಿಂದ ಅಲ್ಲಿ ಚರ್ಚೆಯಾಗುವ ವಿಷಯ ಹೆಚ್ಚು ಸ್ಪಷ್ಟವಾಗುತ್ತದೆ.
* ನೀವು ಕಾರ್ಯಕ್ರಮದಲ್ಲಿ ಮಾತನಾಡುವುದನ್ನೆಲ್ಲಾ (ಮುಖ್ಯ ಸಂಗತಿ) ಬರೆದುಕೊಂಡು ಬನ್ನಿ. ಅನುಮಾನಗಳಿದ್ದರೆ ಸಂಬಂಧಪಟ್ಟ ಭಾಷಣಕಾರರನ್ನೇ ನಂತರ ಕೇಳಿ. ಇದರಿಂದ ಮರ್ಯಾದೆಯೇನೂ ಹೋಗುವುದಿಲ್ಲ. ಅಸ್ಪಷ್ಟ ಮತ್ತು ತಪ್ಪಾದ ಸಂಗತಿ ಬರೆದು ಎಲ್ಲರನ್ನೂ ದಾರಿ ತಪ್ಪಿಸುವುದಕ್ಕಿಂತ ನಮ್ಮ ಅನುಮಾನ ಬಗೆಹರಿಸಿಕೊಂಡು ಸರಿಯಾದುದನ್ನೇ ಬರೆಯುವುದು ಸರಿ.
* ನಂತರವೂ ಅನುಮಾನಗಳಿದ್ದರೆ ನಿಮ್ಮ ಹಿರಿಯರೊಂದಿಗೆ (ಕಚೇರಿಯಲ್ಲಿರುವ) ಚರ್ಚಿಸಿ. ಇಲ್ಲವಾದರೆ ಆ ಸಂಬಂಧಪಟ್ಟ ವಿಷಯತಜ್ಞರನ್ನು ಕೇಳಿ. ಒಟ್ಟೂ ವಿಷಯವನ್ನು ನಿಮ್ಮೊಳಗೆ ಮೊದಲು ಸ್ಪಷ್ಟಗೊಳಿಸಿಕೊಳ್ಳಿ. ಆಮೇಲೆ ಯಾವುದು ಹೆಚ್ಚು ಚರ್ಚಿತವಾಗಬಲ್ಲದೋ, ಸುದ್ದಿ ಎನಿಸಬಲ್ಲದೋ ಅದನ್ನು ಬರೆಯಿರಿ. ಯಾವಾಗಲೂ ಸರಣಿ ಘಟನೆಗಳು ಮುಖ್ಯ. ಉದಾಹರಣೆಗೆ ಲೋಕಾಯುಕ್ತರು ಗಣಿ ವರದಿಯನ್ನು ಶೀಘ್ರವೇ ಕೊಡುವುದಾಗಿ ಹೇಳುತ್ತಾರೆ. ಇದಕ್ಕೆ ಸಂಬಂಧಿಸಿದಂತೆ ಸರಕಾರವಾಗಲೀ, ಗಣಿ ಉದ್ದಿಮೆದಾರರಾಗಲೀ, ಅಧಿಕಾರಿಗಳಿಗಾಗಲೀ ಪ್ರತಿಕ್ರಿಯಿಸಿದರೆ ಅದು ಸುದ್ದಿ. ಇದನ್ನು ಸರಣಿ ಘಟನೆಗಳೆಂದು ಹೇಳಬಹುದು. ಇದೊಂದು ಉದಾಹರಣೆಯಷ್ಟೇ.
ಇನ್ನು ಸಂದರ್ಶನಕ್ಕೆ ಹೋಗುವಾಗ ಸಿದ್ಧವಾಗುವ ಬಗೆ ಹಾಗೂ ವರದಿಗಾರಿಕೆಯಲ್ಲಿ ಬರುವ ಮುಖ್ಯಾಂಶಗಳನ್ನು ಮತ್ತೊಮ್ಮೆ ಹೇಳುತ್ತೇನೆ. ಸುದ್ದಿ ಯಾವುದು ಎನ್ನುವ ಬಗ್ಗೆಯೇ ಕಲ್ಪನೆ ಬದಲಾಗಿರುವುದರಿಂದ ಪ್ರತ್ಯೇಕವಾಗಿ ಹೇಳುತ್ತೇನೆ.
ಇನ್ನು ವಿನಾಯಕ ಕೇಳಿದ ಪ್ರಶ್ನೆ- ರಾಜಕಾರಣಿಯ ಸ್ವಭಾವದ ಕುರಿತು.
ಒಂದೇ ದಿನದಲ್ಲಿ ರಾಜಕಾರಣಿ ಒಳ್ಳೆಯನಾಗುವುದಿಲ್ಲ. ಅಂಥದೊಂದು ಆಶಯ ಹುಟ್ಟಿಕೊಳ್ಳಬಹುದು. ಆದರೆ ಸನ್ನಿವೇಶ ಮತ್ತು ಸಂದರ್ಭ ಆಧರಿಸಿ ನಿಮ್ಮ ಪ್ರಶ್ನೆಗೆ ಉತ್ತರಿಸಬೇಕಾದೀತು.