ಬೆಳಕು ಮತ್ತು ಕತ್ತಲೆ

ಬೆಳಕಿನ ಕುಡಿಯೊಂದು ಕಾಡನ್ನು ಸೀಳಿಕೊಂಡು ಮುನ್ನಡೆಯುತ್ತಿತ್ತು. ದಟ್ಟವಾದ ಕಾಡು, ಎಲ್ಲೆಲ್ಲೂ ಹಸಿರು. ಬೇಸಗೆಯಾಗಿದ್ದರೂ ಹಸಿರಿಗೆ ಕೊರತೆಯಿರಲಿಲ್ಲ. ಕೆಲವೆಡೆಯಂತೂ ಸೂರ್‍ಯನ ಬೆಳಕೇ ಬೀಳದಷ್ಟು ಕತ್ತಲೆ.
ಈ ಬೆಳಕಿನ ಕುಡಿಗೆ ಕಾಡೇನೂ ಹೊಸದಲ್ಲ. ಸಂಜೆಯಾಗುತ್ತಿದ್ದ ಸಮಯ. ನಿಂತ ಮರವೂ ನಿಂತಲ್ಲೇ ವಿಶ್ರಮಿಸಿಕೊಳ್ಳುವಂಥ ಕಾಲ. ತನ್ನೊಳಗೆ ಕಟ್ಟಿದ ಗೂಡುಗಳಲ್ಲಿ ಕಲರವ ಕೇಳುವ ಸಂಭ್ರಮದಲ್ಲಿ ಮುಳುಗುತ್ತಿತ್ತು. ಈ ಕುಡಿ ನಡೆದು ನಡೆದು ದಣಿವಾದಂತೆನಿಸಿತು. ಅಷ್ಟರಲ್ಲಿ ಒಂದು ಮಿಣುಕು ಹುಳು ಎದುರಾಯಿತು. ಕುಡಿಗೆ ಅಚ್ಚರಿ. ನನ್ನ ಹಾಗೆಯೇ ಇದ್ದೀ. ಆಗಾಗ ಹೊಳೆಯುತ್ತೀ, ನೀನ್ಯಾರು ಎಂದಿತು.
ಅದಕ್ಕೆ ಮಿಣುಕು ಹುಳು ಮಾತನಾಡಲಿಲ್ಲ. ಪಕ್ಕದಲ್ಲಿದ್ದ ಮರವೊಂದು “ನೋಡು, ಅದು ನಮ್ಮ ಕಂದೀಲು’ ಎಂದಿತು. ಬೆಳಕಿನ ಕುಡಿಗೆ ಇನ್ನೂ ಆಶ್ಚರ್ಯ. “ನಿಮ್ಮ ಕಂದೀಲಾದರೆ ನಿರಂತರವೂ ಉರಿಯುವುದಿಲ್ಲವೇಕೆ?’ ಎಂದು ಪ್ರಶ್ನಿಸಿತು. ಅದಕ್ಕೆ ಮರವೂ ಸಹ “ನಮಗೆ ಸದಾ ಉರಿಯುವ ಕಂದೀಲಿನ ಅಗತ್ಯವಿಲ್ಲ. ನಮಗೆ ಕತ್ತಲೆ ಇಷ್ಟ. ನಮಗೆ ಒಂದು ಹಿಡಿ ಬೆಳಕು ಸಾಕು. ಅದು ಈ  ಹುಳು ನೀಡಬಲ್ಲದು’ ಎಂದಿತಂತೆ.
ಈ ಮಾತು ಕೇಳಿದ ಮೇಲಂತೂ ಬೆಳಕಿನ ಕುಡಿಗೆ ಇನ್ನೂ ದಣಿವು ಹೆಚ್ಚಾಯಿತು. ಅಲ್ಲೇ ಅದೇ ಮರದ ಬುಡದಲ್ಲಿ ಒರಗಿತಂತೆ. ಕೆಲವೇ ಕ್ಷಣದಲ್ಲಿ ಅದನ್ನೂ ಕತ್ತಲೆ ಬಿಡಲಿಲ್ಲ ; ವ್ಯಾಪಿಸಿಕೊಂಡು ಬಿಟ್ಟಿತು.

ಅವರ ಅಳು ತೋರದು
ಕಾಡಿನಲ್ಲೊಂದು ದೊಡ್ಡ ಮರ ದಿಟ್ಟವಾಗಿ ನಿಂತಿತ್ತು. ನೋಡಿದರೆ ದಢೂತಿ ಆಸಾಮಿ ನಿಂತ ಹಾಗೆ. ಯಾರು ಬಂದರೂ ಅದನ್ನು ಕಂಡು ಹೆದರದೇ ಇರುತ್ತಿರಲಿಲ್ಲ. ಆದರೆ ಆ ಸಂಜೆ ಮಾತ್ರ ಅದು ಅಳುತ್ತಿತ್ತು.
“ಏನು ? ಯಾರೋ ಅತ್ತ ಸದಲ್ಲವೇ? ’ ಎಂದು ಸುತ್ತಲೂ ಕಣ್ಣರಳಿಸಿ “ಯಾರು ಅಳುತ್ತಿರುವುದು?’ ಎಂದು ಪ್ರಶ್ನೆ ಹಾಕಿತಂತೆ ಸಣ್ಣ ಮರ. ಅದಕ್ಕೆ “ಬಹಳ ಬೇಸರವಾಗಿದೆ, ಅದಕ್ಕೇ ಅತ್ತು ಹಗರಾಗುತ್ತಿದ್ದೇನೆ?’ ಎಂದಿತಂತೆ ದೊಡ್ಡ ಮರ. “ನಾವೂ ಅಳಬಹುದೇ? ಅಳಲು ಬರುತ್ತದೆಯೇ?’ ಎಂಬುದು ಸಣ್ಣ ಮರದ ಮುಂದಿನ ಪ್ರಶ್ನೆ.
“ಯಾಕೆ ? ನಮಗೆ ದುಃಖವಾಗುವುದಿಲ್ಲವೇ? ಅತ್ತರೇನು ತಪ್ಪು?’ ಎಂದು ಹೇಳಿದ್ದು ದೊಡ್ಡಮರ. ಅದರಿಂದ ವಿಚಿತ್ರ ಗೊಂದಲಕ್ಕೀಡಾದ ಸಣ್ಣ ಮರ, “ಅವರು ಅಳುವಾಗ ಕಣ್ಣಲ್ಲಿ ದಳದಳನೆ ನೀರು ಹರಿಯುತ್ತದೆ. ನಮಗೇಕಾಗುವುದಿಲ್ಲ ? ಎಂದು ಕೇಳಿತಂತೆ. ದೊಡ್ಡ ಮರ ಒಂದು ನಿಟ್ಟುಸಿರು ಬಿಟ್ಟು, “ನಾವೂ ಅಳುತ್ತೇವೆ. ನಮ್ಮ ಕಣ್ಣಲ್ಲೂ ನೀರು ಬರುತ್ತದೆ. ಆದರೆ ಅವರಿಗದು ತೋರದು’ ಎಂದು ಹೇಳಿದಾಗ ಸಣ್ಣಮರದ ಕಣ್ಣಲ್ಲೂ ನೀರು ಬಂದು ನಿಂತಿತು ; ಹರಿಯಲಿಲ್ಲ !