ಭಾಗ ೧
ಸಂವಾದ ಆರಂಭವಾಗಿದೆ. ನಮ್ಮ ಭಾಗದಲ್ಲಿ ಮೊದಲ ಹಂತದ ಚುನಾವಣೆ ಇದ್ದದ್ದರಿಂದ ಹಲವರ ಪ್ರಶ್ನೆಗಳಿಗೆ ಉತ್ತರಿಸಲು ತಡವಾಯಿತು. ಇನ್ನು ತಡವಾಗುವುದಿಲ್ಲ.

ಶೆಟ್ಟರ ಮೊದಲ ಪ್ರಶ್ನೆ
ಸುದ್ದಿ ಮೂಲ ಹೇಗೆ ಹುಡುಕುತ್ತೀರಿ ? ಮತ್ತು ಅದರ ಸತ್ಯಾಸತ್ಯತೆಗಳನ್ನು ಹೇಗೆ ಶೋಧಿಸುತ್ತೀರಿ ?
ಉತ್ತರ : ಪ್ರತಿ ವರದಿಗಾರನಿಗೂ ಬೀಟ್ ಎಂದು ಇರುವುದು ಸಾಮಾನ್ಯ ; ಪೊಲೀಸರಿಗೆ ಇದ್ದ ಹಾಗೆಯೇ. ದಿನ ಪತ್ರಿಕೆಯ ಕೆಲಸಕ್ಕೂ, ವಾರಪತ್ರಿಕೆ ಇತ್ಯಾದಿಗೂ ಬಹಳ ವ್ಯತ್ಯಾಸವಿದೆ. ಅದರಲ್ಲೂ ಇತ್ತೀಚೆಗೆ ಹೆಚ್ಚುತ್ತಿರುವ ಸುದ್ದಿ ಪೈಪೋಟಿಯ ಹಿನ್ನೆಲೆಯಲ್ಲಿ ವರದಿಗಾರರ ದಿನಚರಿಯೇ ಬದಲಾಗಿ ಹೋಗಿದೆ.
ಬಹಳ ಪ್ರಮುಖ ವಿಷಯಗಳನ್ನು ಆಧರಿಸಿ ಬೀಟ್ ಎಂದು ಹಂಚಲಾಗುತ್ತದೆ. ಉದಾಹರಣೆಗೆ ಅಪರಾಧ ವಿಭಾಗವನ್ನು ಒಬ್ಬ ನೋಡಿಕೊಂಡರೆ, ಮತ್ತೊಬ್ಬನಿಗೆ ರಾಜಕೀಯ ಬೆಳವಣಿಗೆಗಳ ನಿರ್ವಹಣೆ, ಶಿಕ್ಷಣ, ಆರೋಗ್ಯ- ಹೀಗೆ ಹಂಚಲಾಗುತ್ತದೆ. ಈ ಕ್ಷೇತ್ರಗಳಲ್ಲಿ ಆಗುವ ಬೆಳವಣಿಗೆಗಳ ಮೇಲೆ ನಿಗಾ ಇಟ್ಟು ವರದಿ ಮಾಡಬೇಕು. ಬೇರೆ ಪೇಪರ್‍ನಲ್ಲಿ ಸುದ್ದಿ ಬಂದರೆ ಅದು ನಮಗೆ ಮಿಸ್ ಆದಂತೆ. ಅದಕ್ಕೆ ನಾವು ಉತ್ತರಿಸಬೇಕು.
ಹೀಗೆ ಆಯಾ ವರದಿಗಾರರು ತಮಗೆ ಸಂಬಂಧಪಟ್ಟ ಕ್ಷೇತ್ರಗಳಲ್ಲಿ ಸುದ್ದಿ ಮೂಲಗಳನ್ನು ಹುಡುಕಿಕೊಳ್ಳುತ್ತಾರೆ. ಸಾಮಾನ್ಯವಾಗಿ ಪ್ರತಿ ವರದಿಗಾರರು ಹಲವು ವಲಯಗಳಲ್ಲಿ ಸುದ್ದಿ ಮೂಲಗಳನ್ನು ಸೃಷ್ಟಿಸಿಕೊಂಡಿರುತ್ತಾರೆ. ಇಲ್ಲಿ ಯಾರನ್ನೂ ಉಪೇಕ್ಷಿಸುವಂತಿಲ್ಲ. ಗುಮಾಸ್ತನಿಂದ ಹಿಡಿದು ಉನ್ನತ ಅಧಿಕಾರಿವರೆಗೂ ವಿವಿಧ ಹಂತಗಳ ಸುದ್ದಿಮೂಲಗಳು.
ಸುದ್ದಿಯ ವಾಸನೆ ಸಿಗುವುದು ಕೆಳ ಹಂತದ ಅಧಿಕಾರಿಗಳಿಂದ. ಅದು ಕನ್‌ಫರ್ಮ್ ಆಗುವುದು ಉನ್ನತ ಅಧಿಕಾರಿಗಳಿಂದ. ಆದ್ದರಿಂದ ನಮ್ಮ ಸುದ್ದಿ ಮೂಲಗಳನ್ನು ಚೆನ್ನಾಗಿ (ಅಂದರೆ ತಿಂಡಿ ಕೊಡಿಸಿ, ಹಣ ಕೊಡಿಸಿಯಲ್ಲ) ವಿಶ್ವಾಸದಿಂದ ಇಟ್ಟುಕೊಳ್ಳಬೇಕು. ಇದು ಬರಿಯ ಅಧಿಕಾರಿಗಳೆಂದೇ ಅಲ್ಲ. ಸುದ್ದಿ ಮೂಲಗಳು ಪ್ರತಿ ವಿಷಯಕ್ಕೂ ಸಂಬಂಧಿಸಿ ಬದಲಾಗುತ್ತಾ ಹೋಗುತ್ತದೆ.
ಎರಡನೆಯದಾಗಿ ನಮ್ಮ ಸುದ್ದಿ ಮೂಲಗಳ ಸತ್ಯಾಸತ್ಯತೆಗಳನ್ನು ಶೋಧಿಸುವ ಬಗೆ. ಇದು ಸಂಪೂರ್ಣ ವಿಶ್ವಾಸದ ನೆಲೆಯಲ್ಲಿ ನಡೆಯುವಂಥದ್ದು. ನಾವೂ ಸಹ ಕೊಟ್ಟದ್ದನ್ನೆಲ್ಲಾ ಸುದ್ದಿಗಳೆಂದು ಬರೆಯುವುದಿಲ್ಲ. ಅದನ್ನು ಬೆನ್ನು ಹತ್ತಿ ಅದರ ವಿವಿಧ ನೆಲೆಗಳನ್ನು ಶೋಧಿಸುತ್ತೇವೆ. ನಂತರ ನಮಗೆ ವಿಶ್ವಾಸ ಮೂಡಿದ್ದಲ್ಲಿ ಮಾತ್ರ ನಮ್ಮ ಮುಖ್ಯ ವರದಿಗಾರರಿಗೆ, ಸಂಪಾದಕರಿಗೆ ಇಂಥದೊಂದು ಸುದ್ದಿಯಿದೆ ಎಂಬ ಗುಟ್ಟು ಬಿಟ್ಟುಕೊಡುತ್ತೇವೆ. ಅಲ್ಲಿಯವರೆಗೆ ಆ ಕುರಿತು ಏನನ್ನೂ ಹೇಳುವುದಿಲ್ಲ. “ಕ್ರಾಸ್ ಚೆಕ್’ ಎಂಬುದು ನಮ್ಮ ಜನ್ಮ ಸಿದ್ಧ ಹಕ್ಕು ಎಂದರೆ ತಪ್ಪೇನೂ ಇಲ್ಲ. ಅದಿಲ್ಲದೇ ನಾವು ಮುಂದುವರಿಯುವುದಿಲ್ಲ. ಕೆಲವೊಮ್ಮೆ ಇಷ್ಟೆಲ್ಲಾ ಆದ ಮೇಲೂ ಎಡವಿದ್ದು ಇದೆ ; ಅದು ಸಾಮಾನ್ಯ.

ಗಣೇಶ್ ಹಲವು ಪ್ರಶ್ನೆಗಳನ್ನು ಕೇಳಿದ್ದಾರೆ. ಅದನ್ನು ಒಂದೊಂದಾಗಿಯೇ ಉತ್ತರಿಸುತ್ತೇನೆ
ಮೊದಲನೆಯದಾಗಿ ಪತ್ರಿಕೆಗೆ ಸುದ್ದಿ ಹೇಗೆ ಬರುತ್ತದೆ ?
ಪತ್ರಿಕೆಗೆ ಸುದ್ದಿ ಬರುವ ಮೂಲಗಳು ಹಲವಾರು. ಹಿಂದೆ ದಿಕ್ಕುಗಳೆಂದು ನಂಬಿಕೆಯಿತ್ತು. ಈಗ ಹಾಗಲ್ಲ. ಜತೆಗೆ ಸುದ್ದಿ ಏಜೆನ್ಸಿಗಳು, ಪತ್ರಿಕೆಗಳೇ ರೂಪಿಸಿಕೊಂಡ ಸಂಪರ್ಕ ಜಾಲಗಳೆಲ್ಲಾ ಸುದ್ದಿ ತಂದು ಸುದ್ದಿಮನೆಗೆ ಸುರಿಯುತ್ತವೆ. ಅದನ್ನು ಹೆಕ್ಕಿ ಒಪ್ಪ ಓರಣ ಮಾಡಿ ಬೆಳಗ್ಗೆ ಓದುವಂತೆ ಮಾಡುವ ಹೊಣೆ ಸಂಪಾದಕರು, ಉಪ ಸಂಪಾದಕರು, ಸುದ್ದಿ ಸಂಪಾದಕರು-ಹೀಗೆ ಹಲವು ಹಂತಗಳಲ್ಲಿ ನಡೆಯುತ್ತದೆ. ಒಮ್ಮೊಮ್ಮೆ ಅನ್ನಿಸುವುದಿದೆ. ಕಸದಂತೆಯೇ ಸುದ್ದಿ ಬಂದು ಸುರಿಯುತ್ತದಲ್ಲಾ ಎಂದು. ಆದರೆ ಕೆಲವೊಮ್ಮೆ ಹೆಕ್ಕುವ ಸಂದರ್ಭದಲ್ಲಿ ಅದಲು ಬದಲಾಗುವುದುಂಟು.

ಸುಪ್ರೀತ್ ಕೇಳಿದ ಪ್ರಶ್ನೆಯೂ ಇದೇ ತೆರನಾದದ್ದು
ಪತ್ರಿಕೆಗೆ ಸುದ್ದಿ ಮೂಲಗಳು ಹಲವಾರು. ಪ್ರಸ್ತುತ ಬಹುತೇಕ ಪತ್ರಿಕೆಗಳು ದೇಶ-ವಿದೇಶ ಸುದ್ದಿಗಳಿಗಾಗಿ ಯುಎನ್‌ಐ, ಪಿಟಿಐ ನ್ಯೂಸ್ ಏಜೆನ್ಸಿಯನ್ನು ಆಶ್ರಯಿಸಿದ್ದೇವೆ. ಇದಲ್ಲದೇ ರಾಯಿಟರ್ ಮುಂತಾದವೂ ಇವೆ. ಕನ್ನಡದಲ್ಲಿ ಕರ್ನಾಟಕ ನ್ಯೂಸ್ ನೆಟ್ ಸುದ್ದಿ ಜಾಲವಿದೆ. ಇದಲ್ಲದೇ ಪ್ರತಿ ಪತ್ರಿಕೆಯೂ ಜಿಲ್ಲಾ, ತಾಲೂಕು ಮಟ್ಟದಲ್ಲಿ ತಮ್ಮ ವರದಿಗಾರರನ್ನು ನೇಮಿಸಿಕೊಂಡಿರುತ್ತದೆ. ತಾಲೂಕು ಮಟ್ಟದಲ್ಲಿ ಇರುವವರನ್ನು ಬಿಡಿ ಸುದ್ದಿ ಸಂಗ್ರಾಹಕರು (ಸ್ಟ್ರಿಂಜರ್) ಎಂದು ಕರೆಯಲಾಗುವುದು. ಪ್ರತಿ ಊರಿನಲ್ಲೂ ಆಯಾ ಪತ್ರಿಕೆ ಇರುವ ಪ್ರಸಾರ ಸಂಖ್ಯೆ ಹಾಗೂ ಹುಟ್ಟುವ ಸುದ್ದಿಗಳ ಸಂಖ್ಯೆ ಆಧರಿಸಿ ಸುದ್ದಿ ಸಂಗ್ರಾಹಕರನ್ನು ನೇಮಿಸಿಕೊಳ್ಳಲಾಗುವುದು. ಉಳಿದಂತೆ ಜಿಲ್ಲಾ ವರದಿಗಾರರನ್ನು ಪತ್ರಿಕೆಯೇ ನೇಮಿಸಿಕೊಂಡಿರುತ್ತದೆ. ಇಷ್ಟೆಲ್ಲಾ ಆದ ಮೇಲೆ ಅನಧಿಕೃತ ಸುದ್ದಿ ಮೂಲಗಳೆಂದು ಇಲ್ಲ. ಸುದ್ದಿ ಮೂಲ ಹೆಚ್ಚು ಬಾರಿ ತೆರೆಯ ಹಿಂದೆಯೇ ಇರುತ್ತದೆ.
ಟ್ಯಾಬ್ಲಾಯ್ ಪತ್ರಿಕೆಗೂ ದಿನಪತ್ರಿಕೆಗೂ ಬಹಳ ವ್ಯತ್ಯಾಸವಿದೆ. ಕಾರ್‍ಯಶೈಲಿಯೇ ಸಂಪೂರ್ಣ ಭಿನ್ನ. ನಮ್ಮ ಸುದ್ದಿಯ ಆದ್ಯತೆಗೂ, ಅವರ ಸುದ್ದಿಯ ಆದ್ಯತೆಗೂ ವ್ಯತ್ಯಾಸವಿದೆ. ಟ್ಯಾಬ್ಲಾಯ್ಡ್ ಅವರಿಗೆ ಪ್ರತಿ ವಾರವೂ ತಮ್ಮ ಪತ್ರಿಕೆ ಖಾಲಿಯಾಗಲು “ಸುದ್ದಿ ಸ್ಫೋಟ’ (ಬ್ರೇಕಿಂಗ್ ನ್ಯೂಸ್) ಅನಿವಾರ್ಯವಾಗಿರುತ್ತದೆ. ಆದರೆ ಅಂಥದೊಂದು ಅನಿವಾರ್ಯ ದಿನಪತ್ರಿಕೆಗಳಿಗಿಲ್ಲ !