ಗೆಳೆಯರೇ,
ಪತ್ರಿಕೋದ್ಯಮ ನಮ್ಮ (ಮನುಷ್ಯನ) ಆವಿಷ್ಕಾರಗಳಲ್ಲಿ ಮಹತ್ವದ್ದು. ತನ್ನ ಸುತ್ತಲಿನ ಆಗುಹೋಗುಗಳನ್ನು ತಿಳಿದುಕೊಳ್ಳಬೇಕೆನ್ನುವ ಆಸಕ್ತಿಯೇ ನಮ್ಮ ಚಲನಶೀಲತೆಯನ್ನು ಪ್ರತಿನಿಧಿಸಬಲ್ಲದು. ಅಂಥದೊಂದು ಅಗತ್ಯತೆಯನ್ನು ಕಂಡುಕೊಂಡು ಆ ನೆಲೆಯಲ್ಲಿ ನಾವು ಹತ್ತು ಹಲವಾರು ಸುಧಾರಣೆಗಳನ್ನು ಮಾಡಿಕೊಳ್ಳುತ್ತಾ ಸಾಗಿದ್ದೇವೆ.

ಇಂದು ಮಾಧ್ಯಮ ಹತ್ತಾರು ದೃಷ್ಟಿಕೋನಗಳಲ್ಲಿ ರೂಪುಗೊಳ್ಳುತ್ತಾ ಬೆಳೆಯುತ್ತಿದೆ. ಪರಿಸರದಲ್ಲಾಗುವ ಬದಲಾವಣೆಗಳೆಲ್ಲಾ ಇದರ ಮೇಲೂ ಪರಿಣಾಮ ಬೀರಿದೆ. ಅದನ್ನೆಲ್ಲಾ ನೀಗಿಸಿಕೊಂಡು ಬಹಳ ವಿಸ್ತೃತವಾಗಿ ಮಾಧ್ಯಮ ಬೆಳೆಯುತ್ತಿದೆ. ಆದರೆ ಕಳೆದ ಹತ್ತು ವರ್ಷಗಳಲ್ಲಿ ತಂತ್ರಜ್ಞಾನ ಮಾಧ್ಯಮ ಕ್ಷೇತ್ರದಲ್ಲಿ ತಂದಿರುವ ಬದಲಾವಣೆ-ಸುಧಾರಣೆ ಅತೀವವಾದದ್ದು. ಹತ್ತು ವರ್ಷಗಳ ಹಿಂದಿನ ಸುದ್ದಿಮನೆಯ ಚಿತ್ರಣವೇ ಇಂದು ಬದಲಾಗಿ ಹೋಗಿದೆ.

ತಂತ್ರಜ್ಞರಂತೆಯೇ “ಸ್ಟಿಫ್’ ಆಗಿ ಕಾಣುವ ಸುದ್ದಿಯ ಮನೆಯೊಳಗಿನವರು ಬಹಳ ನಾಜೂಕುತನ ರೂಢಿಸಿಕೊಂಡಿದ್ದಾರೆ. ಕಾರ್‍ಯ ಶೈಲಿಯಲ್ಲೂ ಹೊಸತನ ಬಂದಿದೆ. ಪತ್ರಿಕೋದ್ಯಮ ನಿಂತ ನೀರಾಗದೇ ಹರಿಯುವ ನದಿಯಾಗುವತ್ತ ಸಾಗಿದೆ. ತಂತ್ರಜ್ಞಾನ ನಮ್ಮ ಜೀವನದ ಪ್ರತಿ ಹಂತದಲ್ಲಿಯೂ ತಂದಿರುವ ಬದಲಾವಣೆಗಳು ಅಪಾರ. ಆದರೆ ಅದು ಮಾಧ್ಯಮ ಕ್ಷೇತ್ರದಲ್ಲಿ ಲೆಕ್ಕವಿಲ್ಲದಷ್ಟು ಆಗಿದೆ. ಮಾಧ್ಯಮ ಬೆಳೆದಿರುವ ರೀತಿಯೂ ಅಗಾಧ. ಭಾರತೀಯ ಪತ್ರಿಕೋದ್ಯಮದಂತೆಯೇ ನಮ್ಮ ಕನ್ನಡ ಪತ್ರಿಕೋದ್ಯಮದಲ್ಲೂ ಒಂದಿಷ್ಟು ಬದಲಾವಣೆಗಳಾಗಿವೆ.

ಉದಾರೀಕರಣ, ಜಾಗತೀಕರಣದ ಗಾಳಿಯಿಂದ ಪಲ್ಲಟದ ಅಲೆಗಳು ಎದ್ದಿರುವುದು ನಿಜ. ಸಹಜವಾಗಿ ನಡೆದುಹೋಗುತ್ತಿದ್ದವ ಇದ್ದಕ್ಕಿದ್ದಂತೆ ಎದುರಾಗುವ ವೃತ್ತದಲ್ಲಿನ ಗೊಂದಲವನ್ನು ನಮ್ಮ ಮಾಧ್ಯಮ ಕ್ಷೇತ್ರವೂ ಎದುರಿಸುತ್ತಿದೆ ; ಪತ್ರಕರ್ತರೂ ಸಹ. ದೃಶ್ಯ ಮಾಧ್ಯಮ, ಮುದ್ರಣ ಮಾಧ್ಯಮದ ನಡುವಿನ ಪೈಪೋಟಿ ಸಹ ಹೆಚ್ಚಿದೆ. ಹಿಂದಿಗಿಂತಲೂ ಈಗ ಪತ್ರಕರ್ತರು ಹೆಚ್ಚು “ಬ್ಯುಸಿ’ಯಾಗಿದ್ದಾರೆ. ಬ್ರೇಕಿಂಗ್ ನ್ಯೂಸ್‌ನತ್ತ ಗಮನ ನೆಟ್ಟಿದ್ದಾರೆ.

ಸೆನ್ಸೇಷನ್ ಜರ್ನಲಿಸಂನಂಥ ಅಪವಾದ ಬರುತ್ತಿರುವುದೂ ನಿಜ. ಸುದ್ದಿಯ ನೆಲೆಯಲ್ಲಿ ಇದ್ದ ವ್ಯತ್ಯಾಸ ದೂರವಾಗುತ್ತಿದೆಯೇನೋ? ಮಾಧ್ಯಮಗಳು ನಮ್ಮ ಬದುಕಿಗೆ ಸಂವಾದವಾಗಿ ಪರಿಣಮಿಸುತ್ತಿಲ್ಲವೇನೋ? ಸುದ್ದಿಯ ವೈಭವೀಕರಣದತ್ತ ಮಾಧ್ಯಮಗಳು ಹೊರಟಿವೆಯೇ? ಇಂಥ ಹತ್ತು ಹಲವು ಪ್ರಶ್ನೆಗಳು ಉದ್ಭವಿಸಿವೆ.  ಇದೆಲ್ಲದರ ಮಧ್ಯೆ ಈ “ಸಂವಾದ’ ಆರಂಭಿಸಿದ್ದೇನೆ.

ನನ್ನ ಉದ್ದೇಶ ಯಾವುದೇ ವಿವಾದವನ್ನು ಹುಟ್ಟು ಹಾಕುವುದಲ್ಲ. ನಮ್ಮ ಕ್ಷೇತ್ರದ ಬಹಳಷ್ಟು ಬದಲಾವಣೆಗಳು, ಕ್ಷೇತ್ರದ ಒಳ-ಹೊರಗುಗಳು ಬಹಳಷ್ಟು ಮಂದಿಗೆ ತಿಳಿದೇ ಇರುವುದಿಲ್ಲ. ನಮ್ಮ ಕಾರ್‍ಯ ಕ್ಷೇತ್ರದಲ್ಲಿನ ಒತ್ತಡ, ಡೆಡ್‌ಲೈನ್ ಮುಟ್ಟಲು ಪಡುವ ಶ್ರಮ-ಎಲ್ಲವೂ ಅಪೂರ್ವ. ನಾನು ಈ ಕ್ಷೇತ್ರವನ್ನು ಬಯಸಿಯೇ ಬಂದಿದ್ದು. ನನ್ನ ಅನಿಸಿಕೆಯಲ್ಲಿ ಯಾವುದೇ ಕ್ಷೇತ್ರದಲ್ಲಿ ದುಡಿಯುವುದು ನಮಗೆ ಅನಿವಾರ್ಯವೆನಿಸಿದರೆ ಅದು ಜೀತವೆನಿಸದು. ಒಂದು ನಿರ್ದಿಷ್ಟ ನಿಯಮಗಳಡಿ ಸೀಮಿತತೆಯ ವ್ಯಾಪ್ತಿ ಅರಿತು ಕಾರ್‍ಯ ಮಾಡುವುದು ನನ್ನ ದೃಷ್ಟಿ. ಅದರೊಳಗೆ ನನಗೆ ಇಷ್ಟವಾಗುವ ಸೃಷ್ಟಿ ಸಾಧ್ಯವೇ ಎಂದು ಪ್ರಯತ್ನಿಸುತ್ತೇನೆ, ಅಷ್ಟೇ. ನಾನು ಸದಾ ಪ್ರಯತ್ನದಲ್ಲಿ ಮಾತ್ರ ವಿಶ್ವಾಸವಿಡುತ್ತೇನೆಯೇ ಹೊರತು ಪರಿಣಾಮದಲ್ಲಲ್ಲ. ಜಗತ್ತಿನಲ್ಲಿಯೂ ಸಹ. ಇದುವರೆಗೆ ಎಲ್ಲರ ಪ್ರಯತ್ನಗಳಿಗೆ ಬೆಲೆ ಕಟ್ಟಿದ್ದಾರೆಯೇ ಹೊರತು ಪರಿಣಾಮಕ್ಕಲ್ಲ.

ಮೊನ್ನೆ ಹತ್ತು ಉಪಗ್ರಹಗಳನ್ನು ಒಮ್ಮೆಲೆ ಗಗನಕ್ಕೆ ಚಿಮ್ಮಿಸಿದ ಇಸ್ರೋ ಸಾಧನೆ ಆ ಪ್ರಯತ್ನದಲ್ಲಿಯೇ ಹೊರತು ಹತ್ತು ಉಪಗ್ರಹದಲ್ಲಲ್ಲ.  ಈ “ಸಂ-ವಾದ’ ದಲ್ಲಿ ಪತ್ರಿಕೋದ್ಯಮ ಕ್ಷೇತ್ರದಲ್ಲಿನ ಕುತೂಹಲವನ್ನು ಕೇಳಬಹುದು. ಸಾಧ್ಯವಾದಷ್ಟು ಉತ್ತರಿಸಲು ಪ್ರಯತ್ನಿಸುತ್ತೇನೆ. ಅನಗತ್ಯ ವಿವಾದ ಹುಟ್ಟುಹಾಕಬೇಕೆಂದೇ ಸಂಶಯ ಬಂದರೆ ಉತ್ತರಿಸುವುದು ಕಷ್ಟ. ನಿರ್ದಿಷ್ಟ ಸಂಸ್ಥೆ, ವ್ಯಕ್ತಿ ಬಗೆಗಿನ ಕುತೂಹಲಕ್ಕಿಂತಲೂ ಕ್ಷೇತ್ರದ ಬಗೆಗಿನ ವಿಸ್ತೃತ ನೆಲೆಯಲ್ಲಿದ್ದರೆ ಚೆನ್ನ. ಸಂವಾದದ ಆಶಯದಲ್ಲೇ ಇದು ಸಾಗಬೇಕೆಂಬುದು ನನ್ನ ಬಯಕೆ.

ಕೆಲವು ಪತ್ರಿಕೋದ್ಯಮ ವಿದ್ಯಾರ್ಥಿಗಳೂ ಇಂಥದೊಂದು ಸಂವಾದ ಸೂಕ್ತ ಎಂದೂ ಹೇಳಿದರು. ಅದೂ ನನ್ನ ಪ್ರಯತ್ನಕ್ಕೆ ಆಶ್ರಯವಾಯಿತು. ಪ್ರಚಲಿತ ವಿದ್ಯಮಾನದಿಂದ ಹಿಡಿದು, ಸುದ್ದಿ ಮನೆಯೊಳಗಿನ ವಿನ್ಯಾಸ, ಕೌತುಕ ಬಗ್ಗೆ ನಾನು ಅಭಿಪ್ರಾಯವನ್ನು ಹಂಚಿಕೊಳ್ಳಬಲ್ಲೆ.

ಪ್ರೀತಿಯಿಂದ
ಚೆಂಡೆಮದ್ದಳೆ