ಆಗಸದಲ್ಲಿ ಚಂದಿರ
ಬಂದಿದ್ದಾನೆ
ಅಂಗಳದಲ್ಲಿ ಮಲ್ಲಿಗೆ
ಅರಳಿದೆ
ಅವಳ ಕಾಯುವಿಕೆಯಲ್ಲಿ
ಕಣ್ಣುಗಳು
ಸೋತಿವೆ
ಇನ್ನು ಕಣ್ಣು ಮುಚ್ಚುತ್ತೇನೆ
ಕನಸಿನಲ್ಲಾದರೂ
ಆಕೆಯ ಹೆಜ್ಜೆ ತೋರಬಹುದು !
***
ಬೆಳಕು
ಪಡೆದವರೆಲ್ಲಾ
ಮೋಹಿಗಳಾದರು
ಅದ ನೀಡಿದವ ಮಾತ್ರ
ನಿರ್ಮೋಹಿಯಾಗಿಯೇ
ಉಳಿದ
***
ಗುಲಾಬಿ ತೋಟದ
ಹುಡುಗಿ
ಮುಳ್ಳನ್ನೇ
ಹೊದ್ದು ಬಂದಳು
ಅವಳಿಗಾಗಿ
ಆತ
ಮುಳ್ಳನ್ನೇ ಪ್ರೀತಿಸಿದ !
***
ನನ್ನ
ಬೊಗಸೆ ತುಂಬಾ
ನಿರೀಕ್ಷೆಗಳ
ಮೊಗ್ಗುಗಳಿವೆ
ಪರಿಮಳಿಸಲು
ಅವಳ ಒದ್ದೆ ಕಣ್ಣುಗಳ
ಪ್ರೀತಿ ಬೇಕು
***
ಹೆಜ್ಜೆಯ
ಜಾಡು
ಅರಿಯುವ ಹಂಬಲ
ಮೀನ ಪಾದಕ್ಕೂ
ಗೆಜ್ಜೆ ಕಟ್ಟುತ್ತೇನೆ
***
ಸೊಗಸಿಗೆ
ಉದಾಹರಣೆಯಾಗಿ
ನಿಂತವಳ
ಕಣ್ತುಂಬಿಕೊಳ್ಳುವೆ
ಮತ್ತೇನನ್ನೂ
ನೋಡುವುದಿಲ್ಲ !