ಪ್ರಜಾತಂತ್ರದ ತಮಾಷೆ ನೋಡುತ್ತಿದ್ದೀರಿ. ಅನುಕೂಲಸಿಂಧು ರಾಜಕಾರಣದ ಪರಾಕಾಷ್ಠೆಯೂ ಹೌದು. ಪ್ರತಿ ಪಕ್ಷಗಳಿಗೂ ಗೆಲ್ಲುವ ಅಭ್ಯರ್ಥಿಗಳೇ ಬೇಕು. ಅಂದರೆ ಗೆಲ್ಲುವ ಕುದುರೆಯ ಬಾಲಕ್ಕೆ ಹಣ ಕಟ್ಟುವವರೇ ಆಗಿದ್ದಾರೆ. ಇಷ್ಟೇ ಆಗಿದ್ದರೆ ತಮಾಷೆಯಲ್ಲ. ಜಾತ್ಯತೀತತೆ ಬಗ್ಗೆ ಗಂಟೆಗಟ್ಟಲೆ ಭಾಷಣ ಬಿಗಿಯುವವರೆಲ್ಲಾ ಜಾತಿ, ಒಳಜಾತಿಯನ್ನು ಹುಡುಕಿಕೊಂಡು ಆ-ಈ ಜನಾಂಗಗಳ ಪಟ್ಟಿ ಹಿಡಿದುಕೊಂಡು ಟಿಕೆಟ್ ಹಂಚುತ್ತಿದ್ದಾರೆ.

ಈ ಮಾತು ಆ ಪಕ್ಷ-ಈ ಪಕ್ಷಕ್ಕೆ ಅನ್ವಯಿಸುವುದಿಲ್ಲ . ಎಲ್ಲವುಗಳ ಕಥೆಯೂ ಅದೇ. ಹೀಗೆ ಆಯ್ಕೆಯಾಗಿ ಸೀಟು ಪಡೆದು ಗೆದ್ದ ನಮ್ಮ ಜನ ಪ್ರತಿನಿಧಿಗಳಲ್ಲಿ ‘ಎಲ್ಲರನ್ನೂ ಸಮಾನವಾಗಿ ಕಾಣಿರಿ’ ಎಂದು ಬೇಡಿಕೊಳ್ಳುವ ಸ್ಥಿತಿ ಎಲ್ಲರದ್ದು. ಜತೆಗೆ ಜಾತಿ ಕಾರಣದಿಂದಲೇ ಸೀಟು ಪಡೆದವರಿಗೆ ಎಲ್ಲ ಜಾತಿಯವರೂ ಓಟು ಹಾಕಿ ಗೆಲ್ಲಿಸಬೇಕು. ಇದೆಂಥಾ ವಿಪರ್ಯಾಸವಲ್ಲವೇ?

ಮೂರು ದಿನಗಳಿಂದ ಎಲ್ಲೆಲ್ಲೂ ಬಂಡಾಯದ ಮಾತು ಕೇಳಿ ಬರುತ್ತಿದೆ. ಎಲ್ಲರಿಗೂ ನಾಯಕರಾಗಬೇಕೆಂಬ ತುಡಿತ-ಹಂಬಲದ ತೀವ್ರತೆ ಎಷ್ಟಿದೆಯೆಂದರೆ ಎಲ್ಲರ ಬೆಂಬಲಿಗರು ಇಂಥ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುತ್ತಾರೆ. ಒಂದು ಕಥೆ ನೆನಪಾಗುತ್ತದೆ. ಒಂದೂರಿನಲ್ಲಿ ಆರು ಮಂದಿ ರುಡಾಲಿಗಳಿದ್ದರಂತೆ. ಅಂದರೆ ಯಾರಾದರೂ ಸತ್ತಾಗ ಬಾಡಿಗೆಗೆ ಅಳುವವರು. ಸತ್ತವರ ಮನೆ ಮುಂದೆ ಅಂಥದೊಂದು ದುಃಖದ ವಾತಾವರಣ ನಿರ್ಮಿಸುವುದು ಅವರ ಕೆಲಸ. ವಾಸ್ತವವಾಗಿ ವೃತ್ತಿಪರ ರೋದಕರು ಅವರು.

ಊರಿನಲ್ಲಿ ಯಾರೇ ಸತ್ತರೂ ಅವರೇ ಹೋಗಬೇಕು. ಆ ಊರಿನಲ್ಲಿ ಬೇರೆ ರುಡಾಲಿಗಳಿಲ್ಲ. ಪಕ್ಕದೂರಿನಲ್ಲಿ ಹೀಗೇ ಒಬ್ಬ ಶ್ರೀಮಂತ ಒಮ್ಮೆ ಸತ್ತ. ಆ ಊರಿನಲ್ಲಿ ರುಡಾಲಿಗಳಿರಲಿಲ್ಲ. ಈ ಊರಿನಿಂದ ಬಾಡಿಗೆಗೆ ಕರೆ ತರಬೇಕು. ಆದರೆ ಈ ಊರಿನ ರುಡಾಲಿಗಳಿಗೆ ಒಂದೇ ಚಿಂತೆ. ಒಂದುವೇಳೆ ಈ ಊರಿನಲ್ಲಿ ಯಾರಾದರೂ ಆಕಸ್ಮತ್ತಾಗಿ ಸತ್ತರೆ ಯಾರು ಅಳುತ್ತಾರೆ? ಅದೂ ನಿಜವೇ.

ಹೇಗೂ ಕಷ್ಟಪಟ್ಟು ಆ ಊರಿಗೆ ಹೋಗಿ ಶ್ರೀಮಂತನ ಮನೆ ಮುಂದೆ ಅಳುತ್ತಿದ್ದರಂತೆ. ಆಗ ಸುದ್ದಿ ಬಂತು. ತಮ್ಮ ಊರಿನಲ್ಲಿ ಯಾರೋ ಒಬ್ಬರು ಸತ್ತಿದ್ದಾರೆ ಎಂದು ತಿಳಿಯಿತು. ಆದರೆ ಹೊರಡುವಂತಿಲ್ಲ. ಇಲ್ಲಿ ಹಣ ಪಡೆದ ಋಣ ಅವರನ್ನು ಕಾಡುತ್ತಿತ್ತು. ಆಗ ಏನು ಮಾಡುವುದು ತಿಳಿಯದೇ ಮನೆಯವರಿಗೆ ಹೋಗಿ ಹೇಳಿದರಂತೆ- ‘ನಮ್ಮ ಪರಿಸ್ಥಿತಿ ಹೀಗಿದೆ. ಏನಾದರೂ ಉಪಾಯ ಹೇಳುತ್ತೀರಾ?’ ಎಂದು ಕೇಳಿದ್ದಕ್ಕೆ ‘ಅದ್ಹೇಗೆ ಸಾಧ್ಯ ?’ ಎಂದರಂತೆ ಮನೆಯವರು. ಅತ್ತ ಹೋಗಲೂ ಆಗಲಿಲ್ಲ. ಅಂದಿನಿಂದ ಬೇರೆ ಊರಿಗೆ ಹೋಗಿ ಅಳುವುದನ್ನೇ ರುಡಾಲಿಗಳು ನಿಲ್ಲಿಸಿದರಂತೆ.

ಇಂಥ ಕನಿಷ್ಠ ನಿಯತ್ತು ನಮ್ಮ ನಾಯಕರ ಬೆಂಬಲಿಗರಿಗಿಲ್ಲ, ಬಿಡಿ. ಇದು ಗಂಭೀರವಾದ ಲೇಖನ ಎಂದುಕೊಳ್ಳಬೇಡಿ. ಮೂರ್‍ನಾಲ್ಕು ದಿನಗಳಿಂದ ನಡೆಯುತ್ತಿರುವ ಬೆಳವಣಿಗೆಯನ್ನು ಕಂಡಾಗ ಅನಿಸಿದ್ದು. ಇಲ್ಲಿ ಈ ನಾಯಕರ ಪರವಾಗಿ ಪ್ರತಿಭಟಿಸಿದವರೇ ನಾಳೆ ನಡೆಯುವ ಅವರ ವಿರೋಧಿ ಪ್ರತಿಭಟನೆಯಲ್ಲೂ ಇರುತ್ತಾರೆ. ಅದರಲ್ಲೇನೂ ಅಚ್ಚರಿಯಿಲ್ಲ.

ನಮ್ಮ ನಾಯಕರೂ ಹಾಗೆಯೇ. ಬೆಳಗ್ಗೆ ಕಾಂಗ್ರೆಸ್ ಬಾಗಿಲಲ್ಲಿ ನಿಂತವರು, ಮಧ್ಯಾಹ್ನ ಬಿಜೆಪಿಯ ಪಡಸಾಲೆಯಲ್ಲಿರುತ್ತಾರೆ. ಸಂಜೆ ಎನ್ನುವಷ್ಟರ ಮಟ್ಟಿಗೆ ಜೆಡಿಎಸ್‌ನ ಉಪ್ಪರಿಗೆಯಲ್ಲಿ ಇರುತ್ತಾರೆ. ದುರಂತವೆಂದರೆ ಎಲ್ಲೆಲ್ಲೂ ಕಾಯುವುದೇ ನಮ್ಮವರ ಸರದಿ. ‘ಅಪಾಯಿಂಟ್‌ಮೆಂಟ್’ಗೆ ಕಾದುಕೊಂಡು ರಾಜಕೀಯ ಮಾಡಬೇಕು. ಸದಾ ಬೆಂಕಿಯಿಂದ ಬಾಣಲೆಗೆ ಬೀಳುತ್ತಾ, ಬಾಣಲೆಯಿಂದ ಬೆಂಕಿಗೆ ಬೀಳುತ್ತಾ ನಮ್ಮನ್ನು ಆಳುವಂಥ ಕಷ್ಟವನ್ನು ನಿಭಾಯಿಸಬೇಕು. ಅಯ್ಯೋ ಪಾಪ ಎನಿಸುವುದಿಲ್ಲವೇ? ನಮ್ಮ ಆಳುವವರ ಕಂಡು.

ಯಾರು ಹಿತವರು ಈ ಮೂವರೊಳಗೆ ಎಂದರು ಪುರಂದರದಾಸರು. ನಮ್ಮ ಹಿತ ಕಾಯುವವರು ಯಾರೂ ಇಲ್ಲವೆನ್ನಿ. ಜತೆಗೆ ಹಿತವಾಗುವವರೂ ಇಲ್ಲ.  ಇನ್ನೂ ಬೇಸರದ ಸಂಗತಿಯೆಂದರೆ ನಮ್ಮ ನಾಯಕರಿಗೆ ತಮ್ಮ ಹಿತವನ್ನೂ ಸ್ವಾಭಿಮಾನಿಯಾಗಿ, ಸಾತ್ವಿಕ ನೆಲೆಯಲ್ಲಿ ಕಾದುಕೊಳ್ಳಲು ಬರುವುದಿಲ್ಲ. ಅದಕ್ಕೆ ರಸ್ತೆ ತಡೆ ನಡೆಸಬೇಕು, ಟೈರ್‌ಗಳನ್ನು ಸುಡಬೇಕು. ಸಿಕ್ಕವರ ವಿರುದ್ಧ ಗಲಾಟೆ ನಡೆಸಿ ‘ಹೋ…ಹೋ…’ ಎನ್ನಬೇಕು.

ದೊಡ್ಡ ಚುನಾವಣೆ ನಡೆಯುವ ಮುನ್ನ ಘಟಿಸುವ ಟಿಕೆಟ್ ಮ್ಯಾರಥಾನ್ ನೋಡಿದರೆ ಅಯ್ಯೋ ಎನಿಸುತ್ತದೆ. ಒಬ್ಬರು ಟಿಕೆಟ್ ಸಿಗಲಿಲ್ಲ ಎಂದು ಅಳುತ್ತಾರೆ. ಮತ್ತೊಬ್ಬರು ತಮ್ಮ ಬೆಂಬಲಿಗರನ್ನು ಆತ್ಮಹತ್ಯೆ ಮಾಡಿಕೊಳ್ಳಲು ಹುರಿದುಂಬಿಸುತ್ತಾರೆ. ಮಗದೊಬ್ಬರು ಈ ಎಲ್ಲ ತಂತ್ರಗಳನ್ನು ಬಿಟ್ಟು ಮತ್ತೇನನ್ನೋ ಹುನ್ನಾರ ನಡೆಸುತ್ತಾರೆ. ಸ್ವಲ್ಪ  ಜಾತಿ ಬಲವಿದ್ದರೆ, ಹಣದ ಬಲವೂ ಇದ್ದರೆ ಬೇರೆ ಪಕ್ಷಗಳು ಗಾಳಕ್ಕೆ ಸಿಲುಕುತ್ತಾರೆ. ಇಲ್ಲದಿದ್ದರೆ ಅತೃಪ್ತ ಪ್ರೇತಾತ್ಮಗಳಂತೆ ಅಲ್ಲಿಯೂ ಇಲ್ಲಿಯೂ ಅಲೆದಾಡಬೇಕು.

ಅರವತ್ತು ವಯಸ್ಸಿನವರ ರಾಜಕಾರಣಕ್ಕೆ ಕೊನೆ ಹೇಳಬೇಕೆನ್ನುವುದು ನಿಜ. ಆದರೆ ಆ ನಿಟ್ಟಿನಲ್ಲಿ ಪ್ರಯತ್ನವೂ ನಡೆಯುತ್ತಿಲ್ಲ. ಮತ್ತೆ ಎಲ್ಲ ಪಕ್ಷಗಳಲ್ಲೂ ಐವತ್ತರ ನಂತರದವರೇ ಮಂತ್ರಿಯಾಗಬೇಕು, ಮುಖ್ಯಮಂತ್ರಿಯಾಗಬೇಕು ಎಂದು ಹಪಹಪಿಸುತ್ತಿದ್ದಾರೆ. ಹಾಗಾದರೆ ಯುವಜನರು ರಾಜಕೀಯ ಮಾಡೋದು ಹೇಗೆ ಎಂದು ಹಿರಿಯ ರಾಜಕಾರಣಿಯೊಬ್ಬರನ್ನು ಕೇಳಿದರೆ ಅತ್ಯಂತ ಉಲ್ಲಸಿತರಾಗಿ ‘ನಮ್ಮನ್ನು ನೋಡಿಕೊಂಡು ಕಲಿತುಕೊಳ್ಳಿ’ ಎನ್ನುತ್ತಾರೆ. ಇವರಿಂದ ಏನನ್ನು ಕಲಿಯಬೇಕೆಂದು ಮಾತ್ರ ಹೇಳುವುದಿಲ್ಲ.

ಇನ್ನೊಂದು ತಿಂಗಳ ಇಂಥದೊಂದು ಚುನಾವಣೆಯ ತಮಾಷೆ ನಡೆಯುತ್ತದೆ. ಈ ಮಾತನ್ನು ಅತ್ಯಂತ ಲಘುವಾಗಿ ಹೇಳುತ್ತಿಲ್ಲ. ಆದರೆ ಪ್ರತಿದಿನ ನಡೆಯುವ ರಾಜಕಾರಣ ಒಂದು ನಾಟಕಕ್ಕಿಂತ ಹೆಚ್ಚಿನದಾಗಿ ಏನೂ ಅನಿಸುವುದಿಲ್ಲ. ಸಿದ್ದರಾಮಯ್ಯನವರು ಜೆಡಿಎಸ್‌ನಲ್ಲಿ ಬೇಸರಗೊಂಡು ಕಾಂಗ್ರೆಸ್‌ಗೆ ಹೋದರು. ಹೋಗುವಾಗ ಬರಿಗೈಲಿ  ಹೋಗಲಿಲ್ಲ. ಪಟಾಲಾಂನೊಂದಿಗೆ ಹೋದರು. ಅವರಿಗೆಲ್ಲಾ ಟಿಕೆಟ್ ಕೊಡಿಸಲು ದಿಲ್ಲಿಯಲ್ಲಿ ಕಸರತ್ತು ನಡೆಸಿದ್ದೇ ನಡೆಸಿದ್ದು. ಪುಣ್ಯಕ್ಕೆ ಜಾತಿ ಬಲವಿತ್ತು. ಹೇಳಿದವರಿಗೆಲ್ಲಾ ಟಿಕೆಟ್ ಸಿಗಲಿಲ್ಲವೆಂದರೂ ಶೆ. ೯೦ ರಷ್ಟು ಟಿಕ್ ಮಾಡಿದವರಿಗೆ ಟಿಕೇಟು ಸಿಕ್ಕಿತು. ಹಾಗೆಂದು ಜೆಡಿಎಸ್ ನಲ್ಲಿ ತಮಗೆ ಕೇಳಿದಲ್ಲಿ ಟಿಕೆಟ್ ಸಿಗಲಿಲ್ಲವೆಂದು ಬೇಸತ್ತವರು ಬಿಜೆಪಿಗೆ ಸೇರಲು ಹೊರಟಿದ್ದಾರೆ. ಒಟ್ಟಿನಲ್ಲಿ ತಾವು ಭದ್ರ ಎಂದು ತಿಳಿದುಕೊಂಡಲ್ಲಿ ಸ್ಪರ್ಧಿಸಲು ಅವರಿಗೆ ಟಿಕೆಟ್ ಬೇಕು. ಪಕ್ಷವಾಗಲೀ, ನಿಷ್ಠೆಯಾಗಲೀ ಬೇಕಿಲ್ಲ. ಹಾಗೆಂದು ನೀವು ಕೇಳಿದರೆ ‘ಮಸ್ಕಿರಿ’ ಮಾಡ್ತಿರೇನು? ಎಂದು ಪ್ರಶ್ನಿಸಿ ಕಳಿಸಿಯಾರು. ಹೀಗೆ ಗಂಟೆಗೊಂದು ಪಕ್ಷ ಬದಲಿಸುವವರಿಗೆ ಮತ ಹಾಕಬೇಕೇನು ? ಎಂದೆನಿಸುವುದು ಸಹಜ.

ಆದರೆ ಪ್ರಜಾತಂತ್ರದಲ್ಲಿ ಪಾಲ್ಗೊಳ್ಳಬೇಕಾದ ಹೊಣೆ ಹೊತ್ತಿರುವ ನಾವೆಲ್ಲಾ ಯಾರಿಗಾದರೂ ಒಬ್ಬರಿಗೆ ಮತ ಹಾಕಬೇಕು. ಅಂದರೆ ಎಲ್ಲರೂ ಕಳ್ಳರು, ಸುಳ್ಳರೇ. ಅವರಲ್ಲಿ ಪ್ರಮಾಣ ಆಧರಿಸಿ ಆಯ್ಕೆ ಮಾಡಬೇಕು. ದೊಡ್ಡ ಕಳ್ಳನಿಗಿಂತ ಸಣ್ಣ ಕಳ್ಳ ಪರವಾಗಿಲ್ಲ. ಅದೂ ಅವನು ದೊಡ್ಡ ಕಳ್ಳನಾಗುವವರೆಗೆ. ಇದರರ್ಥ ಎಲ್ಲ ಜನಪ್ರತಿನಿಧಿಗಳನ್ನು ಒಂದೇ ತಕ್ಕಡಿಯಲ್ಲಿ ಇಡುತ್ತಿಲ್ಲ. ಅವರೇ ಕುಳಿತುಕೊಳ್ಳುತ್ತಿದ್ದಾರೆ. ಇಂಥದೊಂದು ತಮಾಷೆಗೆ ಸಾಕ್ಷಿಯಾಗುವ ಮುನ್ನ ಕೊಂಚ ಆಲೋಚಿಸುವುದೊಳಿತಲ್ಲವೇ?