ಹಲವು

ಗರಿಮುರಿ ಈರುಳ್ಳಿ ಪಕೋಡ

ಹೋಟೆಲ್‌ನಲ್ಲಿ ಇರೋ ಈರುಳ್ಳಿ ಪಕೋಡಕ್ಕೆ ಏಕೆ ಅಷ್ಟೊಂದು ರುಚಿ ? – ಈ ಪ್ರಶ್ನೆಯನ್ನು ಹಲವರಿಂದ ಕೇಳಿದ್ದೇನೆ. ನನ್ನ ಮನೆಗೆ ಬರುವ ಅತಿಥಿಗಳಿಂದಲೂ ಸಹ. ಸುಮ್ಮನೆ ಇದನ್ನು ಯೋಚಿಸ್ತಿದ್ದಾಗ ಗರಂ ಗರಿಮುರಿ ಪಕೋಡ ಮಾಡೋಣ ಅನ್ನಿಸ್ತು. ಅದಕ್ಕೇ ಈ ರೆಸಿಪಿ ಹಾಕ್ತೀದ್ದೀನಿ. ಮಾಡಿದ್ಮೇಲೆ ಪ್ರತಿಕ್ರಿಯಿಸಿ.

ಈರುಳ್ಳಿ ಪಕೋಡಕ್ಕೆ ಬಳಸುವ ಸಾಮಾನು : ಈರುಳ್ಳಿ, ಕರಿಬೇವಿನಸೊಪ್ಪು, ಹಸಿಮೆಣಸು, ಹತ್ತು ಕಾಲು ಕೊತ್ತಂಬರಿ ಬೀಜ, ಕಡಲೆಹಿಟ್ಟು, ಸ್ವಲ್ಪ ಎಣ್ಣೆ, ಕರಿಯಲು ಅಗತ್ಯವಿರುವ ಎಣ್ಣೆ, ಉಪ್ಪು ಹಾಕಬೇಕಾದದ್ದು ಗೊತ್ತೇ ಇದೆಯಲ್ಲ.

ಮನೆಯಲ್ಲಿ ಮೂವರಿದ್ದರೆ ದೊಡ್ಡ ಗಾತ್ರದ ನಾಲ್ಕೈದು ಈರುಳ್ಳಿಗಳು ಸಾಕು. ಅದನ್ನು ಎರಡು ಭಾಗ ಮಾಡಿಕೊಂಡು, ಉದ್ದುದ್ದ ಕತ್ತರಿಸಬೇಕು. ಅದು ತೆಳ್ಳಗಿದ್ದಷ್ಟೂ ಪಕೋಡ ಚೆನ್ನಾಗಿ ಬರುತ್ತದೆ. ಕೂದಲಿನಷ್ಟು ತೆಳ್ಳಗಿದ್ದರೆ ಪಕೋಡದ ನಾಜೂಕುತನ ಅರಿವಾಗಬಹುದು. ಹಸಿಮೆಣಸೂ ಚಿಕ್ಕದ್ದಾಗಿ ಕತ್ತರಿಸಿಕೊಳ್ಳಿ. ಚಿಕ್ಕದಾದಷ್ಟೂ ತಿನ್ನುವಾಗ ಖಾರದ ಕಿರಿಕಿರಿಯಾಗದು.  ಹುಷಾರ್, ಕೈ ಕೊಯ್ಯಿಕೊಂಡಿದ್ದೀರಿ !

ಹಾಗೆ ಕತ್ತರಿಸಿದ ಈರುಳ್ಳಿ, ಹಸಿಮೆಣಸನ್ನು ಹಿಟ್ಟು ಕಲೆಸುವ ಪಾತ್ರಕ್ಕೆ ಸುರಿದುಕೊಂಡು, ಕಾಯಲು ಒಲೆಯ ಮೇಲಿಟ್ಟ ಎಣ್ಣೆಯನ್ನು ಸ್ವಲ್ಪ ಎಂದರೆ ಐದಾರು ಚಮಚ ಹಾಕಿಕೊಂಡು ನಾದಬೇಕು. ಬರೀ ಈರುಳ್ಳಿಯನ್ನು ನಾದಿದಾಗ ಅದರೊಳಗಿನ ವಲಯವೆಲ್ಲಾ ಬಿಟ್ಟುಕೊಂಡು ಈರುಳ್ಳಿಯ ಪ್ರತಿ ಬಿಲ್ಲೆಗಳೂ ನೂಲಿನ ಎಳೆಯಂತೆ ಬೇರೆ ಬೇರೆಯಾಗುತ್ತವೆ. ಆಗ ಕೊತ್ತಂಬರಿ ಕಾಳನ್ನು ಕೈಯಲ್ಲೇ ಚೆನ್ನಾಗಿ ತಿಕ್ಕಿ ಹಾಕಿಕೊಳ್ಳಿ. ಉಪ್ಪು ಮಿಶ್ರಣ ಮಾಡಿಕೊಳ್ಳಿ. ನಂತರ ಸಣ್ಣ ಸಣ್ಣ ಗುಂಪನ್ನು ಮಾಡಿಕೊಳ್ಳಿ ಅಥವಾ ಒಂದು ಭಾಗವನ್ನು ಪ್ರತ್ಯೇಕವಾಗಿರಿಸಿಕೊಳ್ಳಿ.

ಎಣ್ಣೆ ಕಾವು ಬಂದಿದೆಯೇ ನೋಡಿಕೊಂಡು (ತೀರಾ ಹೆಚ್ಚಿನ ಕಾವಿದ್ದರೆ ಕಷ್ಟ) ಪ್ರತ್ಯೇಕವಾಗಿರಿಸಿಕೊಂಡ ಭಾಗದ ಮೇಲೆ ಕಡಲೆಹಿಟ್ಟನ್ನು ಸಿಂಪಡಿಸುವಂತೆ ಹಾಕಬೇಕು. ಐದು ಈರುಳ್ಳಿಗಳ ಪಕೋಡಕ್ಕೆ ಸುಮಾರು ೧೫೦ ರಿಂದ ೧೭೫ ಗ್ರಾಂ ಕಡಲೆ ಹಿಟ್ಟು ಸಾಕು. ಒಮ್ಮೆಲೆ ಸುರಿದು ಕಲೆಸಲು ಹೋಗಬಾರದು. ಜತೆಗೆ ಹಿಟ್ಟು ಹಾಕಿದ ಮೇಲೆ ನಾದಲೂ ಹೋಗಬಾರದು. ಹಿಟ್ಟು ಸಿಂಪಡಿಸಿ ಮೆಲ್ಲಗೆ ನಾಜೂಕಿನಿಂದ ಎಣ್ಣೆಗೆ ಬಿಡುತ್ತಾ ಬರಬೇಕು. ಉಳಿದ ಈರುಳ್ಳಿಗೂ ಹಾಗೆಯೇ ಮಾಡಬೇಕು. ಕೆಂಪನೆಯ ಬಣ್ಣಕ್ಕೆ ಬಂದ ಮೇಲೆ ತೆಗೆಯಬಹುದು. ಕೊನೆಗೆ ಬರೀ ಕರಿಬೇವುಗಳನ್ನು ಕರೆದು ಅದರ ಮೇಲೆ ಅಲಂಕರಿಸಿದರೆ ಈರುಳ್ಳಿ ಪಕೋಡ ರೆಡಿ.
ಇದು ಸಲ್ಲದು :
ಸಾಮಾನ್ಯವಾಗಿ ಎಲ್ಲರೂ ಮಾಡುವುದೆಂದರೆ ಈರುಳ್ಳಿಯೊಂದಿಗೆ ಕಡಲೆಹಿಟ್ಟು ಎಲ್ಲದರಂತೆ ಕಲೆಸಿಬಿಡುತ್ತಾರೆ. ಇನ್ನು ಕೆಲವರು ಅದಕ್ಕೆ ನೀರು ಬೆರೆಸಿ ಕಲೆಸುತ್ತಾರೆ. ಅದೂ ಸಲ್ಲದು. ಇದರಿಂದ ಪಕೋಡ ಗಟ್ಟಿಯಾಗುತ್ತದೆ. ಗರಿಮುರಿ ಬರದು.

Advertisements

30 thoughts on “ಗರಿಮುರಿ ಈರುಳ್ಳಿ ಪಕೋಡ

 1. ಅಬ್ಬಾ….

  ಎಲ್ಲಾ ಕಲೆಸಿಕೊಂಡ ಮೇಲೆ ಅದನ್ನು ಬಿಸಿ ಬಿಸಿ ಎಣ್ಣೆಯಲ್ಲಿ ಬಿಡಲು ಹೇಳಿದ್ದೀರಿ. ಆದರೆ ಕೈಯನ್ನು ಎಣ್ಣೆಯಿಂದ ತೆಗೆಯಿರಿ ಅಂತ ಹೇಳಲೇ ಇಲ್ಲ… ಹಾಗಾಗಿ ಕೈಯೇ ಪಕೋಡದಂತಾಗಿಬಿಟ್ಟಿದೆ.

  ಅಂತೂ ಹೋಟೆಲಿಗರ ಕಮಾಯಿಗೆ ಕತ್ತರಿ ಹಾಕಿದ್ದೀರಿ. ತುಂಬಾ ರುಚಿಗಟ್ಟಾದ ಪಕೋಡವಿದು. ಜೈ!

 2. ನೀವು ಚುರ್ರ್ ಎಂದು ಕೈ ಎಳ್ಕೊಂಡಿದ್ದು ಗೊತ್ತಾಯ್ತು. ಜತೆಗೆ ತಿನ್ನಲಿಕ್ಕೆ ಕೈ ಬೇಕಲ್ಲಾ, ಹೇಳದೇ ಇದ್ರೂನೂ ತೆಗೀತಾರೆ ಅಂತ ಗೊತ್ತು. ಅದ್ಕೇ ಅದ್ನ ಹೇಳಿಲ್ಲ. ಅನ್ವೇಷಿಯವರಿಗೆ ಧನ್ಯವಾದ.ಹೀಗೇ ಬರ್ತಾ ಇರಿ.
  ನಾವಡ

 3. ವಿಕಾಸರೇ,
  ಹೋಟೆಲಿನಲ್ಲಿ ಎಲ್ಲದಕ್ಕೂ ಸೋಡಾ ಹಾಕ್ತಾರೆ ಅಂತ ಅಭಿಪ್ರಾಯವಿದೆ. ಅದು ಸುಳ್ಳು. ಹಾಂಗೆ ಹಾಕಿದರೆ ಅವರು ಮಕ್ಮ್ಲಲ್ ಟೋಪಿ ಹಾಕ್ಕೊಳ್ಬೇಕಾಗುತ್ತೆ. ಅದರಲ್ಲೂ ಪಕೋಡಕ್ಕೆ ಸೋಡಾ ಹಾಕಿದರೆ ಕೈಯಲ್ಲಿ ಹಿಂಡಿ ಎಣ್ಣೆ ಅಂಗಡಿ ನಡೆಸಬಹುದು. ಸೋಡಾ ಹಾಕೋದ್ರಿಂದ ಗರಿಮುರಿ ಆಗೋದಿಲ್ಲ ; ಬದಲಿಗೆ ಕೆಲವೇ ಕ್ಷಣಗಳಲ್ಲಿ ನೈಕಟಿ ಆಗುತ್ತೆ.
  ನಾವಡ

 4. ನಾವಡರೆ,
  ಇನ್ನೂ ಹೆಚ್ಚಿನ ರುಚಿಗಳನ್ನು ಪರಿಚಯಿಸುವ ಇರಾದೆ ಇದೆಯೋ? ಪಾಕಶಾಸ್ತ್ರಕ್ಕೆ ಸಂಬಂಧಿಸಿದ ಲೇಖನ ಇಲ್ಲಿ ಓದಿ ಖುಷಿಯಾಯಿತು. ವಿವರವಾಗಿ ಬರೆದಿದ್ದೀರಿ. ಮೊದಲು ನೀವೆಲ್ಲ ಗೆಳೆಯರು ಒಟ್ಟಿಗೆ ಇದ್ದಾಗ ಪಕೋಡ ಮಾಡಿದ ನೆನಪೋ..?

 5. ಹೌದು. ಹೀಗೇ ನೆನೆಸಿಕೊಂಡೆ. ಬರೆದೆ. ಅಂದಹಾಗೆ ಪಾಕಶಾಸ್ತ್ರವೂ ನನ್ನ ಇಷ್ಟದ ವಿಷಯ. ಆಗಾಗ್ಗೆ ಸ್ವಲ್ಪ ಬರೆಯೋಣ ಅನ್ನಿಸಿದೆ. ನಿಮ್ಮಂಥವರು ಬೇಡ ಅಂದ್ರೆ ಬಿಟ್ಟು ಬಿಡ್ತೀನಿ. ಅಭಿಪ್ರಾಯಿಸಿದ್ದಕ್ಕೆ ಧನ್ಯವಾದ.
  ನಾವಡ

 6. ನಿಮ್ ರೆಸಿಪಿ ಓದಿ ನಾನೂ ಪಕೋಡ ಮಾಡೋಣ ಅಂದ್ಕೊಂಡೆ.. ಆದ್ರೆ ತೇಜಸ್ವಿಯವರ ‘ಪಾಕಕ್ರಾಂತಿ’ ಓದಿದ್ಮೇಲೆ ಈ ಸಾಹಸಕ್ಕೆ ಕೈ ಹಾಕೋದೇ ಬೇಡ ಅಂತ ಸುಮ್ನಾಗ್ಬಿಟ್ಟೆ! ಹೋಟ್ಲಲ್ಲೇ ತಿಂದ್ಕೊಂಡು ಹಾಯಾಗಿರೋಣ ಅಂತ. 🙂

 7. nAvaDarE,
  naLa, Bheema ivara sAlalli nilbahudEnO neevu!?
  Officenalli hasidkondu kUtiddAga pakODa nODi siT bantu.
  innu ELu janma heNNAgi huTTi bandrU nange chenda pakODa mADlikke barOlvEnO 😦
  sAkashTu sArti adanna mADlikke hOgi bEstu biddideeni. nimma recipe try mADteeni ee Sunday.
  ( heege easy recipegaLAnnu parichayistiri)
  – Chetana

 8. ‘ಪಕೋಡಶಾಸ್ತ್ರ’ ಪ್ರವೀಣ ನಾವಡರವರಿಗೆ,
  ಈರುಳ್ಳಿ ಪಕೋಡ ತಯಾರಾಗಿದೆ. ಆದರೆ, ತಿನ್ನಲಿಕ್ಕೆ ಬರೋದಿಲ್ಲ ಅನ್ನೋ ಕೊರಗು ಸದಾ ಇದೆ..! ಪಕೋಡ ಮಾತು ಎತ್ತಿದ್ದರಿಂದ, ನಮ್ಮ್ ದಾವಣಗೆರೆಯ ಮಂಡಕ್ಕಿ ಮೆಣಸಿನಕಾಯಿ, ಆಂಬೊಡೆ, ಉದ್ದಿನವಡೆ ಎಲ್ಲ ನೆನಪಾದವು..!
  ನಿಮಗೆ ಧನ್ಯವಾದಗಳು..
  ಗಣೇಶ್.ಕೆ

 9. ನಾವಡರೆ: ನೀವು ಹಾಕಿದ ಫೋಟೊ ನೀವು ಮಾಡಿದ ಪಕೋಡಾಗಳದ್ದೇಯೋ? ಯಾಕೆ ಕೇಳ್ತೀನಿ ಅಂದ್ರೆ ನಮ್ಮ ದರ್ಶಿನಿಗಳಲ್ಲಿ ಹಾಕಿದ ಫೋಟೋಗಳಂತೆ ಅವರು ಕೊಡುವ ತಿಂಡಿಗಳು ಇರೋದೇ ಇಲ್ಲ!

 10. ಪಕೋಡದ ಫೋಟೋ, ರೆಸಿಪಿ, ಅದನ್ನ ಬರೆದ ಶೈಲಿ ಎಲ್ಲ ತುಂಬ ಇಷ್ಟ ಆಯ್ತು . ಈ ವೀಕೆಂಡ್ ‘ನಾವಡರಿಗೆ ಜೈ’ ಅನ್ನುತ್ತಾ ಮೊದಲ ಬಾರಿಗೆ ಪಕೋಡ ಟ್ರೈ ಮಾಡ್ಬೇಕು ಅನ್ಕೊಂಡಿದ್ದೇನೆ. ಹರಸಿ ಬಿಡಿ 🙂

 11. ಸುಶ್ರುತ,
  ಅದ್ಕೇ ಹೇಳೋದು. ಕ್ರಾಂತಿ,ಗೀಂತಿ ಅಂತ ಬೆನ್ನು ಹತ್ತದೇ ಸುಮ್ಮನೆ ಮಾಡಿ ತಿನ್ಬೇಕು. ಇಲ್ಲ ಅಂದ್ರೇ ಹೋಟೆಲ್ ಇದ್ದೇ ಇದೆಯಲ್ಲ..ಹ್ಹ..ಹ್ಹ..
  ಶ್ರೀದೇವಿ,
  ಪಕೋಡ ಅಂದ್ರೆ ಹಂಗೇನೇ, ಬಿಸಿಲಾದರೇನು? ಮಳೆಯಾದರೇನು ?ಜತೆಯಾಗಿ ಪಕೋಡ ಇಲ್ಲವೇನು?
  ಚೇತನಾರೇ, ನಳನೋ, ಭೀಮನೋ…ನಾನಂತೂ ಅವರಿಬ್ಬರಂತೆಯೂ ಇಲ್ಲ. ಪಕೋಡ ನೆನಪಾಯಿತು. ಬರೆದೆ. ನೀವು ಟ್ರೈ ಮಾಡಿದ್ಮೇಲೆ ರಿಸಲ್ಟ್ ಹೇಳಿ. ಮರೆಯಬೇಡಿ. ಸದ್ಯದಲ್ಲೇ ಗೋಳಿ ಬಜೆ ಬರೀತೀನಿ, ಕಾಯ್ತಾ ಇರಿ.
  ಮನಸ್ವಿನಿಯವರ ಅಭಿಪ್ರಾಯಕ್ಕೆ ಧನ್ಯವಾದ. ನಾವಡರು ರೆಸಿಪಿ ಬರೆದ್ರಲ್ಲಾ, ಅಂತಾ ತಮಾಷೆ ಅನ್ನಿಸಿಲಿಲ್ವಾ?
  ಗಣೇಶ್ .ಕೆ., ನಿಮ್ಮ ಪಂಚ್ಲೈನ್ ಗೊತ್ತೇ ಆಗೋದಿಲ್ಲ. ಈರುಳ್ಳಿ ಪಕೋಡ ರೆಡಿಇದೆ. ತಿನ್ನಲಿಕ್ಕೆ ಬರೋದಿಲ್ಲ ಅನ್ನೋ ಕೊರಗಿದೆ ಎಂದ್ರೆ ಏನು? ಸ್ವಾಮಿ.
  ಚಕೋರರೇ, ನಿಮ್ಮಂಥವರ ನಂಬಿಕೆಗೆ ಪಾತ್ರನಾಗಲು ನಾನು ನನ್ನ ಪಕೋಡದ ಚಿತ್ರ ಹಾಕಿಲ್ಲ. ಈ ಪಕೋಡದ ಚಿತ್ರ ಬೇರೆ ಕಡೆದ್ದು.
  ನನಗೆ ಜೈ ಕಾರ ಹಾಕಿದ ಶುಭದಾರಿಗೆ ಜೈ. ಎಲ್ಲರಿಗೂ ಮತ್ತೊಮ್ಮೆ ಧನ್ಯವಾದ
  ನಾವಡ

 12. ನಿನ್ನೆ ರಾತ್ರಿ ನಿಮ್ಮ ರೆಸಿಪಿ ನೋಡಿ ಪಕೋಡ ಮಾಡಿದ್ವಿ… ಸಖತ್ತಾಗಿತ್ತು… ಇಂಥ ಇನ್ನೂ ಕೆಲವು ಸುಲಭದ ತಿಂಡಿ ತಿನಿಸುಗಳನ್ನ ಮಾಡೋದನ್ನ ಬರೀತಾ ಇರಿ.. ಕಲೀತಿರೋ ನಮ್ಮಂಥೋರಿಗೆ ಹೆಲ್ಪ್ ಆಗುತ್ತೆ..

 13. ನಾವಡರೇ ‘ಪಾಕಶಾಸ್ತ್ರಪೂರಕ ಸಲಕರಣೆಗಳು’ ಬೆಂಗಳೂರಿನಲ್ಲಿ ಇರದೇ ಇರುವುದರಿಂದ ಪಾಕಶಾಸ್ತ್ರದ ಪ್ರಯೋಗ ಸಧ್ಯಕ್ಕಿಲ್ಲ ಅಂದೆ. ಹಾಗಾಗಿ ನಿಮ್ಮ್ ಬ್ಲಾಗಿನಲ್ಲಷ್ಟೇ ತಯಾರಾಗಿದೆ. ನಮ್ಮ ಮನೆಯಲ್ಲೋ ರೂಮಿನಲ್ಲೋ ಅಲ್ಲವಲ್ಲ. ಹಾಗಾಗಿ ಕೊರಗು ಸದಾ ಕಾಡುತ್ತಿದೆ. ಆದರೆ, ಇಲ್ಲೊಂದು ಕಡೆ ಸರ್ಕಲ್ಲಿನಲ್ಲಿ ಈರುಳ್ಳಿ ಪಕೋಡ ಮಾಡುವವನಿದ್ದಾನೆ. ಹಾಗಾಗಿ ಅಷ್ಟೊಂದು ಬೇಸರಿಸಿಕೊಳ್ಳಬೇಕಾದ ಪ್ರಮೇಯವಿಲ್ಲ…
  🙂

 14. ನನಗೂ ಪಕೋಡ ಇಷ್ಟ. ಬೆ೦ಗಳೂರಿನಲ್ಲಿ ತಯಾರಿಸೋ ಅವಕಾಶ ಇಲ್ಲ. ಈ ಸರ್ತಿ ಮನೆಗೆ ಹೋದಾಗ, ನಾನು ಮತ್ತು ನನ್ನ ತ೦ಗಿ ನಿಮ್ಮ ರೆಸಿಪಿಯನ್ನು ಟ್ರೈ ಮಾಡ್ತೀವಿ. ನಮಗೆ ಶುಭ ಹಾರೈಸಿ.

 15. hellooo…. ನಾನು ನಿಮ್ಮನ್ನ ಕೊಡಚಾದ್ರಿಲಿ ಭೇಟಿ ಮಾಡಿದಿನಿ ಅಲ್ವ? ಆಗ ನೀವೇ ಅದು ಅಂತ ಗೊತ್ತಿರ್ಲಿಲ್ಲ ಆಮೇಲೆ ತುಂಬ ಪೇಚಾಡ್ಕೊಂಡೆ. ಗೊತ್ತಿದ್ದಿದ್ರೆ ತುಂಬ ತಲೆ ತಿಂತಿದ್ದೆ. ಅಂದ ಹಾಗೆ ಪಕೋಡ ಚೆನ್ನಾಗಿದೆ….;-)

 16. ಗಣೇಶ್ .ಕೆ., ಒಳ್ಳೆಯದಾಗಲಿ. ಚೆನ್ನಾಗಿ ಎಂಜಾಯ್ ಮಾಡಿ.

  ಸುಧೇಶ್, ನಿಮಗೆ ಶುಭವಾಗಲಿ. ನನ್ನ ರೆಸಿಪಿ ನೋಡಿ ನೀವು ಟ್ರ್ಯೆ ಮಾಡಿ. ಏನೂ ಆಗದೇ ಇರಲಿ ಅಂತ ದೇವರಲ್ಲಿ ಕೇಳಿಕೊಳ್ತೇನೆ.
  ಪರವಾಗಿಲ್ಲಾರೀ, ನೀವು ಟ್ರ್ಯೆ ಮಾಡಿ ಸಕ್ಸೆಸ್ ಆಗಿದ್ದಕ್ಕೆ ಹರೀಶ್ ರಿಗೆ ಅಭಿನಂದನೆಗಳು.

  ಮಲ್ನಾಡ್ ಹುಡ್ಗಿಗೆ,
  ಹೌದು. ನೀವು ಕೊಡಚಾದ್ರೀಲಿ ಸಿಕ್ಕಿದ್ರಿ. ಚೈತನ್ಯ, ನೀವೇ “ಮಲ್ನಾಡ್ ಹುಡ್ಗಿ’ ಅಂತ ಹೇಳ್ದ. ಆದರೆ ನೀವು ಬಹಳ ಮೂಡಿ ಅನ್ನಿಸ್ತು. ಅದ್ಕೇ ಮಾತನಾಡಿಸೋದಿಕ್ಕೆ ಟ್ರ್ಯೆ ಮಾಡ್ಲಿಲ್ಲ. ಅಂದ ಹಾಗೆ ಚಿಲ್ವ್ರನ್ ಆಫ್ ಹೆವನ್ ಫಿಲ್ಮ್ ಬಗೆಗಿನ ನಿಮ್ಮ ಪ್ರಶ್ನೆಗೂ ಉತ್ತರಿಸಿದ್ದೆ. ಮತ್ತೊಮ್ಮೆ ಸಿಗೋಣ. ಹೀಗೇ…ಚಿತ್ರೋತ್ಸವದ ಪ್ರೊಪೋಸಲ್ ಇದೆ. ಜಾರಿಯಾದ್ರೆ ಕರೀತೀವಿ. ಬನ್ನಿ.
  ನಮ್ಮ ಪಕೋಡ ಮಾಡಿದ್ದಕ್ಕೆ, ಬ್ಲಾಗ್ ಗೆ ಭೇಟಿ ನೀಡಿದ್ದಕ್ಕೆ ಧನ್ಯವಾದ. ಆಗಾಗ್ಗೆ ಬರ್ತಾ ಇರಿ.
  ನಾವಡ

 17. ನೀರು ಹಾಕದೆ ಹಿಟ್ಟು ಕಲೆಸಿಕೊಳ್ಳುವ ಟಿಪ್ಸ್ ಕೊಟ್ಟಿದ್ದಕ್ಕೆ ಥ್ಯಾಂಕ್ಸ್. ಪಕೋಡ ಹೇಗಿತ್ತು ಅಂತ ಆಮೇಲೆ….

 18. ನಾವಡ, ಪಕೋಡ ರೆಸಿಪಿಗೆ ಧನ್ಯವಾದ ಕಣೋ. ಈರುಳ್ಳಿ ಪಕೋಡ, ಆಲೂ ಪಕೋಡ, ದೊಡ್ಡಮೆಣ್ಸು ಪಕೋಡ, ಸೀಮೆಬದ್ನೆ ಪಕೋಡ– ಎಲ್ಲವನ್ನೂ ಒಂದೇ ಥರ ಮಾಡ್ತಿದ್ದೆ,ಈಥರಾ ಈರುಳ್ಳಿ ಗರಿಗರಿ ಪಕೋಡಾ “ನಂಗೆ ಕೊಡಾ, ನಿಂಗೆ ಕೊಡೇ” ಅಂತ ತಿನ್ನಿಸಿಕೊಳ್ತು.

 19. ತ್ರಿವೇಣಿ ಮೇಡಂ ಮತ್ತು ಸುಪ್ತದೀಪ್ತಿಯವರಿಗೆ
  ಧನ್ಯವಾದ, ನನ್ನ ಪಕೋಡ ರೆಸಿಪಿ ಟ್ರೈ ಮಾಡಿದ್ದಕ್ಕೆ. ಪಕೋಡ ಚೆನ್ನಾಗಿ ಆಗಿದ್ದರೆ ಹೇಳಿ. ನಾನು ಇನ್ನಷ್ತು ರೆಸಿಪಿ ಕೊಡಬಹುದು.
  ಈಗಾಗಲೇ ಕೆಲವರು ಟ್ರೈ ಮಾಡಲಿಕ್ಕೆ (ಚೇತನಾ, ಸುಧೇಶ್ ಮತ್ತಿತರರು) ಹೋದೋರು ಎಲ್ಲಿ ಹೋದ್ರು ಅಂತಾನೇ ತಿಳೀತಿಲ್ಲ..ನಿಮಗೆಲ್ಲಾದರೂ ಸಿಕ್ಕರೆ ಹೇಳಿ..!
  ನಾವಡ

 20. ನಾವಡರೆ, ನಿನ್ನೆ ನಮ್ಮನೆಯಲ್ಲಿ ನೀವು ಕೊಟ್ಟ ರೆಸಿಪಿ ಆಧರಿಸಿದ ಪಕೋಡ ಮಾಡಿದ್ದೆ. ತುಂಬಾ ಗರಿಗರಿ, ತುಂಬಾ ರುಚಿ ಇತ್ತು. ಮುಂದಿನ ರೆಸಿಪಿ ದಯಪಾಲಿಸಿ.

 21. ಇದನ್ನೇ ಅಲ್ವಾ ಮಂಗಳೂರು ಹೋಟೆಲ್ಲುಗಳಲ್ಲಿ “ನೀರುಳ್ಳಿ ಬಜೆ” ಅಂತ ಕರಿಯೋದು?

  ನಾನು ಇದನ್ನು ಮಾಡಿ, ತಿಂದು, ಶಿಫಾರಸ್ಸು ಮಾಡಿದ ಮಾಡಿದ ಮೇಲೆಯೇ ತ್ರಿವೇಣಿ ಮಾಡಿದ್ದು. ಹಾಗೇನೇ, ಮೊನ್ನೆ ಮಾಲಾ ಜೊತೆ ಕ್ಯಾಂಪಿಂಗ್ ಹೋಗಿ, ಅಲ್ಲೂ ಇದನ್ನೇ ಮಾಡಿ ತಿಂದೆವು. ಅಲ್ಲಿ ಬೀಸುತ್ತಿದ್ದ ರುಮು-ರುಮು ಚಳಿಗಾಳಿಗೆ ಇದು ಇನ್ನೂ ರುಚಿಯೆನಿಸಿತು.

  ಈರುಳ್ಳಿ ಜೊತೆಗೆನೇ ಒಂದಿಷ್ಟು ಖಾರದ ಪುಡಿಯೂ ಸೇರಿಸಿದ್ದೆವು (ಉಳಿದೆಲ್ಲವೂ ಇಲ್ಲಿ ಕೊಟ್ಟ ಹಾಗೆಯೇ). ಗರಂ ಆಗಿತ್ತು.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s