ಕಟ್ಟಾ-ಮೀಠಾ

ಬ್ಲಾಗೆಂಬ ಆಕಾಶ ಉಳಿಯಲಿ, ತಾರೆಗಳು ಹೊಳೆಯಲಿ !

ಇದು ಮಳೆ ನಿಂತ ಮೇಲಿನ ಹನಿ.

ಕೆಲ ದಿನಗಳಿಂದ ಬ್ಲಾಗ್‌ಗಳಲ್ಲಿ ಒಂದೇ ಬಗೆಯ ಚರ್ಚೆ. ಬ್ಲಾಗ್‌ಗಳಲ್ಲಿ ಏನನ್ನು ಬರೆಯಬೇಕು ? ವಿಚಾರವೋ ? ಭಾವ ಲಹರಿಯೋ ? ಮಾಹಿತಿಯೋ ? ಹೊಸ ಬಗೆಯ “ವರದಿ’ಗಳೋ?- ಏನು ? ಯಾವುದು ಬ್ಲಾಗ್‌ಗಳಿಗೆ ಆಹಾರವಾಗಬೇಕು?
ಬೆಂಗಳೂರಿನಲ್ಲಿ ಇತ್ತೀಚೆಗೆ ಮಹಾತ್ವಾಕಾಂಕ್ಷೆಯಿಂದ ಪ್ರಣತಿ ಆಯೋಜಿಸಿದ್ದ ಬ್ಲಾಗಿಗರ ಭೇಟಿಯಲ್ಲಿ ಎದುರಾದ ಪ್ರಶ್ನೆಗಳೂ ಇವೇ. ದಟ್ಸ್ ಕನ್ನಡದ ಎಸ್. ಕೆ. ಶಾಮಸುಂದರ್ “ಹಿರಿಯ ಪ್ರಜೆಗಳಿಗೆ ಸರಕಾರದಿಂದ ಸಿಗುವ ಸೌಲಭ್ಯಗಳ ಬಗ್ಗೆ ಎಲ್ಲೂ ಮಾಹಿತಿಯಿಲ್ಲ’ ಎಂದು ಹೇಳುವ ಮೂಲಕ ಅಂಥದೊಂದು ಬ್ಲಾಗ್ ಮಾಡಿದರೆ ಸೂಕ್ತ ಎಂದರು. ಅಂದರೆ ಮಾಹಿತಿ ಧಾಮವಾಗಲಿ ಎಂಬುದು ಆಶಯ. ಜತೆಗೆ ಬರೀ ಕಥೆ, ಕವನ ಬರೆದ್ರೆ ಏನು ಪ್ರಯೋಜನ ? ಎಷ್ಟು ದಿನ ಬರೀತೀರಿ ? ಬ್ಲಾಗ್ ನಲ್ಲೂ ಸಾಹಿತ್ಯ ಓದಬೇಕಾ? ಎಂದು ಕೇಳುವ ಧಾಟಿಯೂ ವ್ಯಕ್ತವಾಯಿತು.
ಸುಶ್ರುತ ತಮ್ಮ ಇತ್ತೀಚಿನ ಬರಹದಲ್ಲಿ ಅದೇ ಗೊಂದಲವನ್ನು ತೋಡಿಕೊಂಡು, ಯುಗಾದಿ ಬಗ್ಗೆ ಶುಭಾಶಯ ಹೇಳಿದ್ದಾರೆ. ಅಲ್ಲೂ ಒಂದು ಭಾವದ ಎಳೆ ತಂದು ಬರಹವನ್ನೇ ಸೊಗಸುಗೊಳಿಸಿದ್ದಾರೆ. ನನ್ನೊಳಗೂ ಬರೆಯಬೇಕಾದದ್ದು ಏನು ? ಬ್ಲಾಗ್ ಆರಂಭವಾಗಿದ್ದು ಏಕೆ ? ಇಂಥ ಪ್ರಶ್ನೆಗಳು ದೊಂಬರಾಟ ನಡೆಸುತ್ತಲೇ ಇವೆ.
ಇದು ನನ್ನ ವೈಯಕ್ತಿಕ ಅಭಿಪ್ರಾಯ. ಎಲ್ಲರೂ ಓದುವುದನ್ನು ಬರೆದರೆ ಸಾಕು. ಅದು ಕವಿತೆ, ಕಥೆ ಎಂಬ ಭಾವವೇಕೆ? ಇಂದು ನಾವು ಕೊರತೆ ಅನುಭವಿಸುತ್ತಿರುವುದು ಅನುಭವದ ನೆಲೆಯ ಭಿನ್ನ ಭಿನ್ನ ಗ್ರಹಿಕೆಯನ್ನು. ನಮ್ಮ ಹಿರಿಯರ ದಿನಗಳಿಗೂ, ಈಗಕ್ಕೂ ಸಾಕಷ್ಟು ವ್ಯತ್ಯಾಸವಾಗಿದೆ
ನಾವೀಗ ಸಮಯವಿಲ್ಲವೆಂದು ತಿಳಿದುಕೊಂಡು “ಬ್ಯುಸಿ’ಯಾಗಿದ್ದೇವೆ.   ಮನುಷ್ಯರ ಮಧ್ಯೆ ಮುಖಾಮುಖಿ ಸಂಬಂಧ ಕ್ಷೀಣಿಸುತ್ತಾ, ಅದಕ್ಕಾಗಿ ನಾನಾ ಮಾಧ್ಯಮಗಳ ಸಾಧನಗಳನ್ನು ಆಶ್ರಯಿಸುತ್ತಾ ಬಂದಿದ್ದೇವೆ. ಇಂಥ ಸರಿಹೊತ್ತಿನಲ್ಲಿ ಕತ್ತಲೆಯ ಮಧ್ಯೆ ತೋರುವ ಮಿಣುಕು ಹುಳದಂತೆ ಕಂಡದ್ದು ಈ ಬ್ಲಾಗ್ ಸಹ. ಇದೂ ಅಂಥದೊಂದು ಸಂಬಂಧವನ್ನು ಹಸಿರಾಗಿಸಿಕೊಳ್ಳಲು ಹುಟ್ಟಿಕೊಂಡ ನೆಲೆಯೇ ಹೊರತು ಮತ್ತೇನೂ ಅಲ್ಲ.
ನಮ್ಮ ಬದುಕಿನ ಸಂಕೀರ್ಣತೆಯನ್ನು ಅನಾವರಣಗೊಳಿಸುತ್ತಾ, ಒಂಟಿತನದ ಬೇಗೆಯಿಂದ ಹೊರಬರಲು ರೂಪಿಸಿಕೊಂಡ ಮಾರ್ಗವೂ ಹೌದು. ೨೧ ನೇ ಶತಮಾನದ ತಲೆಮಾರಿನ ನಮಗೆ ಒಂಟಿತನ, ಏಕಾಂತ ಬಹು ಇಷ್ಟ. ಆದರೆ ಅದು ನಮ್ಮ ತಲೆ ಚಿಟ್ಟು ಹಿಡಿಸಲಾರದಷ್ಟಿರಲಿ ಎಂಬ ಆಶಯವೂ ಇದೆ. “ಫ್ರೀ ಸ್ಪೇಸ್’ ನಲ್ಲಿದ್ದ ಬಹಳಷ್ಟು ಮಂದಿ ಇಂದು ನಗರದಲ್ಲಿರುವುದರಿಂದ ಇಲ್ಲಿನ ಟ್ರಾಫಿಕ್ ಜಾಮ್, ಒತ್ತಡ ಎಲ್ಲವೂ ಹೊಸದೇ. ಅದಕ್ಕೇ ಆಗಾಗ್ಗೆ ನಮ್ಮ ಹಳ್ಳಿಗಳು, ನಮ್ಮೂರು ನೆನಪಾಗುತ್ತವೆ. ಅದನ್ನು ನೆಪ ಮಾಡಿಕೊಂಡು ಒಂದಷ್ಟು ನೆನಪುಗಳ ಜಾತ್ರೆಯನ್ನು ಹೊರಡಿಸುತ್ತೇವೆ. ಆ ಮೂಲಕ ನಮ್ಮೊಳಗೆ ಕಾಡತೊಡಗಿದ “ಹೋಮ್‌ಸಿಕ್‌ನೆಸ್’ ನ್ನು ಹಗುರ ಮಾಡಿಕೊಳ್ಳುತ್ತೇವೆ. ಇದು ನಮ್ಮ ಮಾಧ್ಯಮ ಸಹ.
ಆ ನೆಲೆ “ಹಳವಂಡ’ ವಾಗಿಯೂ ಬರಬಹುದು ಅಥವಾ ಕಥೆ, ಕವನಗಳ ಮೂಲಕ (ಸುಧನ್ವಾನ ಪೇಟೆ ಪಾಡ್ದನ ಇತ್ಯಾದಿ) ಹೊಸ ಬದುಕಿನ ನೆಲೆಗೆ ಮುಖಾಮುಖಿಯಾದಾಗಿನ ಅನುಭವ ಅನಾವರಣಗೊಳ್ಳಬಹುದು. ಅದು ಅವರವರ ಆಯ್ಕೆ. ಬರಿಯ ಪ್ರೀತಿ, ಪ್ರೇಮ, ಮರ ಸುತ್ತುವುದಕ್ಕೇ ಸೀಮಿತವಾಗದೇ ಹೊಸ ಬಗೆಯ ತಲ್ಲಣಗಳನ್ನು ದಾಖಲಿಸುವ ಮಾಧ್ಯಮವಾಗಿ ಬ್ಲಾಗ್ ಬರಬೇಕೆಂಬುದು ನನ್ನ ಆಶಯ ಸಹ.
ಇತ್ತೀಚೆಗೆ ನಮ್ಮ ಹಿರಿಯ ವಿದ್ವಾಂಸ ಪ್ರೊ. ಜಿ. ವೆಂಕಟಸುಬ್ಬಯ್ಯನವರೊಂದಿಗೆ ದೂರವಾಣಿಯಲ್ಲಿ ಮಾತನಾಡುತ್ತಿದ್ದಾಗ, ಇದೇ ಬ್ಲಾಗಿಗರ ಭೇಟಿ ಕುರಿತು ಪ್ರಸ್ತಾಪಿಸಿದರು. ಪ್ರಣತಿಯ ಮೊದಲ ಪುಸ್ತಕ ಬಿಡುಗಡೆಗೆ ಬಂದಿದ್ದ ಅವರು, ” ಈ ಭೇಟಿ ಬಗ್ಗೆ ನನಗೆ ಮಾಹಿತಿಯೇ ಲಭ್ಯವಾಗಲಿಲ್ಲ. ನನಗೂ ಬರಲು ಆಸೆಯಿತ್ತು’ ಎಂದರು. ಅವರು ಹೇಳಿದ ಮಾತಿದು. “ಮುಂದಿನ ಸಂದರ್ಭದಲ್ಲಿ ಇಲ್ಲಿನ ಬರಹಗಳೂ ಸಾಹಿತ್ಯದ ಮೌಲ್ಯವನ್ನು ಪಡೆಯಬಲ್ಲವು’.
ಹಾಗೆಂದು ನಾವೆಲ್ಲಾ ೨೦೪೦ ಕ್ಕೆ ಸಾಹಿತಿಗಳ ಪಟ್ಟ ಕಟ್ಟಿಕೊಳ್ಳುತ್ತೇವೆಂಬ ಅಭಿಪ್ರಾಯವಲ್ಲ. ಆದರೆ ಅವರ ವ್ಯಾಖ್ಯಾನ ಭಾಗಶಃ ಸತ್ಯವೂ ಹೌದು. ಒಂದೆಡೆ ಕುಳಿತು, ಬಿಡುವು ಮಾಡಿಕೊಂಡು ಮಹಾಕಾವ್ಯಬರೆಯುವವರು ತೋರುತ್ತಿಲ್ಲ. ಕುವೆಂಪು, ಕಾರಂತರು, ಅಡಿಗರು ಕಂಡ ವನ್ಯ ಪ್ರೇಮ ಇನ್ನು ಸಿಗಲಾರದು. ಪಶ್ಚಿಮ ಘಟ್ಟ, ಮಲೆ ಮಹದೇಶ್ವರ ಬೆಟ್ಟ -ಹೀಗೆ ಲ್ಲಾ ಕಾಡುಗಳು ಕರಗಿಹೋಗುತ್ತಿವೆ. ಕಾರಂತರ ಕಡಲಿದ್ದರೂ ಅಲ್ಲಿಯೂ ಏಕಾಂತವಿಲ್ಲ.  ನಮ್ಮ ತಲೆಮಾರು ಉದ್ಯೋಗದ ಅಗತ್ಯದೊಂದಿಗೇ ಅನುಭವವನ್ನು ದಾಖಲಿಸುವ ಅನಿವಾರ್ಯವನ್ನು ಸೃಷ್ಟಿಸಿಕೊಂಡದ್ದು.
ಈ ಎಲ್ಲಾ ಅಂಶಗಳ ಮೂಲಕ ನಾನು ಬ್ಲಾಗ್‌ಗಳು ಸಾಹಿತ್ಯಕ್ಕೆ, ಕಥೆ, ಕವಿತೆಗೆ ಮೀಸಲಾಗಿರಬೇಕೆಂದು ಪ್ರತಿಪಾದಿಸಲು ಹೊರಟಿಲ್ಲ. ಆದರೆ ಬ್ಲಾಗ್‌ನ ಅಗತ್ಯ ಹುಟ್ಟಿದ್ದು ಅಂಥದೊಂದು ವೈಯಕ್ತಿಕ ಅನುಭವಗಳನ್ನು ಹಂಚಿಕೊಳ್ಳುವ ಅಥವಾ ಹೇಳಿಕೊಳ್ಳುವ ತುಡಿತದಿಂದ ಎಂಬುದು ನನ್ನ ಅನಿಸಿಕೆ. 
ಪ್ರಸ್ತುತ ಇಂಥದೊಂದು ಬ್ಲಾಗ್ ಪ್ರಪಂಚದಲ್ಲಿ ಇರುವವರಲ್ಲಿ ಬಹುಪಾಲು ಮಂದಿ ತಂತ್ರಜ್ಞಾನ ಕ್ಷೇತ್ರದವರು, ತಂತ್ರಜ್ಞಾನವನ್ನು ನಿತ್ಯವೂ ಮುಖಾಮುಖಿಯಾಗುತ್ತಿರುವ ಕ್ಷೇತ್ರದವರು (ಮಾಧ್ಯಮ ಇತ್ಯಾದಿ). ಈ ಕ್ಷೇತ್ರ ನಮಗೆ ತೀರಾ ಹೊಸದು. ಹತ್ತು ವರ್ಷದಲ್ಲಿ ತಂತ್ರಜ್ಞಾನ ತಂದ ಬದಲಾವಣೆ ನಮ್ಮ ಜೀವನಶೈಲಿಯಿಂದ ಹಿಡಿದು ಎಲ್ಲ ಹಂತದಲ್ಲೂ ಪ್ರಭಾವ ಬೀರಿದೆ. ಅಷ್ಟೇ ಅಲ್ಲ, ಹಿರಿಯ ತಲೆಮಾರು ಕಂಗಾಲಾಗುವಂತೆ ಮಾಡಿದ್ದೂ ನಿಜ. ಮತ್ತೊಂದನ್ನು ಗಮನಿಸಬೇಕು. ಈ ಕ್ಷೇತ್ರದಲ್ಲಿರುವ ಬಹುತೇಕರೆಲ್ಲರೂ ಮಧ್ಯಮವರ್ಗದವರು. ಹಾಗಾಗಿ ನಾವು ಎದುರುಗೊಳ್ಳುತ್ತಿರುವ ಬದುಕಿನ ಹೊಸ ನೆಲೆಗೆ ಪ್ರತಿಕ್ರಿಯಿಸುವ ಬಗೆ ಬ್ಲಾಗ್‌ಗಳಲ್ಲಿ ಏಕೆ ಬರಬಾರದು ? ಹೊಸ ಅನುಭವದ ಗ್ರಹಿಕೆಯಲ್ಲಿ ಏರ್ಪಡುವ ಗೊಂದಲಗಳನ್ನು ಹೀಗೆ ಸಮಾನಾಸಕ್ತರ ಮಧ್ಯೆ ಬಗೆಹರಿಸಿಕೊಳ್ಳುವ ಸಂಕವೇಕಾಗಬಾರದು ? ಮತ್ತೆ ಹೇಳುತ್ತಿದ್ದೇನೆ. ಬ್ಲಾಗ್‌ಗಳಿಂದ ಕ್ರಾಂತಿ ಆಗಬೇಕೆಂದು ಏಕೆ ಬಯಸಬೇಕು ?
“ಆಕ್ಟಿವಿಸಂ’ ಬಗ್ಗೆಯೂ ಕೆಲವೆಡೆ ಚರ್ಚೆಯಾಗಿದೆ. ಅದರ ಬಗ್ಗೆ ನನ್ನ ತಕರಾರಿಲ್ಲ. ನಮ್ಮ ಹೊಸ ನೆಲೆಯ ಮಧ್ಯೆ   ಎದುರಾಗುವ ಸಮಸ್ಯೆಗಳಿಗೆ ಸಮಾನಾಸಕ್ತರು ಸೇರಿ ಚರ್ಚಿಸುವ, ಪರಿಹಾರ ಹುಡುಕಿಕೊಳ್ಳುವ ವೇದಿಕೆಯಾದರೆ ಚೆನ್ನ. ಅದನ್ನೇ ಗೊಂದಲಗಳ ಪರಿಹಾರದ ಸಂಕ ಎಂದದ್ದು. ಇದರೊಂದಿಗೆ ನಾಗರಿಕ ಪತ್ರಕರ್ತರಂತೆ ಕಾರ್ಯ ನಿರ್ವಹಿಸುವುದೂ ಸೂಕ್ತವೇ. ಬರಿಯ ಮಾಹಿತಿಯ ಖಜಾನೆ ಆಗಬೇಕೆಂಬ ವಾದ ನನಗೆ ರುಚಿಸದು.
ಹತ್ತು ವರ್ಷಗಳ ಹಿಂದೆ ಮಾಹಿತಿ ಕ್ರಾಂತಿಯಾಗಿರಲಿಲ್ಲ. ಆದರೆ ತಂತ್ರಜ್ಞಾನದ ನೆಲೆಯಲ್ಲಿ ಉಂಟಾದ ಕ್ರಾಂತಿ ಇಂದು ಏನೆಲ್ಲಾ ಉಂಟು ಮಾಡಿದೆ.  ನಮ್ಮ ಬೆರಳಿನ ತುದಿಯಲ್ಲಿ ಮಾಹಿತಿ ಖಜಾನೆ ಇಟ್ಟುಕೊಂಡಿದ್ದೇವೆ. ಒತ್ತಿದ್ದರೆ ತೆರೆಯುತ್ತದೆ, ಬೇಕಾದಾಗ ಸುರಿದುಕೊಳ್ಳಬಹುದು. ಇಂಥ ಸಂದರ್ಭದಲ್ಲಿ ನಮ್ಮ ಬ್ಲಾಗ್‌ಗಳಲ್ಲೂ ಇನ್ಪರ್ಮೇಷನ್ ಡೈಜೆಸ್ಟ್,ಸ್ಪರ್ಧಾತ್ಮಕ ಪರೀಕ್ಷಾ ಗೈಡ್, ಸರಕಾರಿ ಇಲಾಖೆಗಳ ವೆಬ್‌ಸೈಟ್‌ಗಳಾಗಬೇಕಾದ ಅಗತ್ಯವಿದೆಯೇ ? ಇದೇ ಸಂದರ್ಭದಲ್ಲಿ ಈ ಬ್ಲಾಗ್‌ಗಳನ್ನು ಕನ್ನಡವನ್ನು ಬೆಳೆಸುವ ನಿಟ್ಟಿನಲ್ಲಿ ಬಳಸಿಕೊಳ್ಳಬಹುದು. ಉದಾಹರಣೆಗೆ ತಂತ್ರಜ್ಞಾನ ಸೇರಿದಂತೆ ಹಲವು ಕ್ಷೇತ್ರದ ನಾವೆಲ್ಲರೂ ನಮ್ಮ ಭಾವ ಬರಹಗಳೊಂದಿಗೆ ಕ್ಷೇತ್ರದ ವಿಶೇಷತೆ, ಅಲ್ಲಿನ ಬೆಳವಣಿಗೆ, ಆಕರ ವಿಷಯವನ್ನು ಕನ್ನಡದಲ್ಲಿ ಕಟ್ಟಿಕೊಡಬಹುದು. ಆಗ ಕನ್ನಡವನ್ನು ವಿವಿಧ ನೆಲೆಗಳಲ್ಲಿ ಕಟ್ಟಿದಂತಾದೀತು.
ನಗರ ಕೇಂದ್ರಿತ ಅನುಭವಗಳನ್ನು ಬರಹಗಳಲ್ಲಿ ಕಟ್ಟಿ ಕೊಟ್ಟವರ ಪಟ್ಟಿಯಲ್ಲಿ ಯಶವಂತ ಚಿತ್ತಾಲರು, ಜಯಂತ ಕಾಯ್ಕಿಣಿ ಯಂಥ ಅನೇಕರಿದ್ದಾರೆ. ಇವರೆಲ್ಲರೂ ಇಂದಿನ ತಲೆಮಾರಿನವರಾಗಿದ್ದರೆ ತಮ್ಮ ಅಭಿವ್ಯಕ್ತಿಗೆ ಬ್ಲಾಗ್‌ಗಳನ್ನೇ ಬಳಸುತ್ತಿದ್ದರೇನೋ ? ಸಾಹಿತ್ಯದ ಹಣೆ ಪಟ್ಟಿ ಕಟ್ಟುವುದನ್ನು ಬಿಟ್ಟುಬಿಡೋಣ. ಅನುಭವದ ನೆಲೆಯಾಗಿಯಷ್ಟೇ ಅರ್ಥ ಮಾಡಿಕೊಳ್ಳುತ್ತಾ ಸಾಗೋಣ.
ಚಾರಣದ ಕುರಿತಾದ ಹಲವು ಬ್ಲಾಗ್‌ಗಳಿವೆ. ನಾನಂತೂ ನಿಜವಾಗಲೂ ಅವುಗಳನ್ನು ಮಾಹಿತಿಗೆ ಓದುವುದಿಲ್ಲ ; ಅದರ ಅನುಭವಕ್ಕಾಗಿ. ಕೊಡಚಾದ್ರಿ ಬೆಟ್ಟಕ್ಕೆ ಎಲ್ಲಿಂದ ಎಷ್ಟು ಕಿ. ಮೀ ಎಂಬ ಮಾಹಿತಿ ಅಲ್ಲಿ ಸ್ಥೂಲವಾಗಿರುತ್ತದೆಯೇ ಹೊರತು ಅದೇ ಬರಹದ ಸರ್ವಸ್ವವೂ ಅಲ್ಲ. ಹಾಗಾಗಿ ಕಥೆ, ಕವನ ಇತ್ಯಾದಿ ಶೀರ್ಷಿಕೆ ಕೈ ಬಿಟ್ಟು ಒಟ್ಟೂ ಅನುಭವಿಸುತ್ತಾ ಹೋಗೋಣ. ಇಲ್ಲವಾದರೆ ಮತ್ತೆ ಬ್ಲಾಗ್‌ಗಳೂ ಮಾಹಿತಿಯ ಹೊರೆಯಲ್ಲಿ  ಸೇರಿ ಹೋದೀತೆಂಬ ಭಯ ಸದಾ ನನ್ನನ್ನು ಕಾಡುವ ಅಂಶ . ನಾವೆಲ್ಲಾ ನಡೆಯುತ್ತಿರುವ ಭಿನ್ನ ಭಿನ್ನ ಹಾದಿಯಲ್ಲಿ ಈ ಬ್ಲಾಗ್ ಎಂಬ ಮಾಧ್ಯಮ ಒಂದು ಬೀದಿದೀಪವಿದ್ದಂತೆ. ಅದರ ಬೆಳಕು ಹರಿದಷ್ಟೂ ದೂರ ನಮ್ಮ ಹೆಜ್ಜೆ ಹಗುರಾದೀತಲ್ಲವೇ ? ಬ್ಲಾಗೆಂಬ ಆಕಾಶ ಉಳಿಯಲಿ, ನಮ್ಮೊಳಗಿನ ತಾರೆಗಳು ಹೊಳೆಯಲಿ !  

Advertisements

10 thoughts on “ಬ್ಲಾಗೆಂಬ ಆಕಾಶ ಉಳಿಯಲಿ, ತಾರೆಗಳು ಹೊಳೆಯಲಿ !

 1. ನಾವಡರೇ ನಮಸ್ತೇ.

  ಮೊದಲ ಸಾರ್ತಿ ಸುಮ್ಮನೆ ಕಣ್ಣಾಡಿಸಿ (ಉದ್ದವಾಗಿದ್ದರಿಂದ) ಎರಡನೇ ಸಾರ್ತಿ ಪುರುಸೊತ್ತಲ್ಲಿ ಓದಿಕೊಂಡೆ. ನಿಜಕ್ಕೂ ಬಹಳ ಗಂಭೀರವಾದ ಬರಹವಿದು. ನಾವು ಈ ನಿಟ್ಟಿನಲ್ಲಿ ಚಿಂತನೆ ನದೆಸುವ ಅಗತ್ಯ ಖಂಡಿತ ಇದೆ. ನನಗೂ ಬ್ಲಾಗ್ ಮಾಹಿತಿಮಯವಾಗಬೇಕೋ, ಭಾವಕಣಜವಾಗಬೇಕೋ, ಅಥವಾ ಎಲ್ಲದರ ಹದಮಿಶ್ರಣವಾಗಿ ಸೌತ್ ಇಂಡಿಯನ್ ಡಿಶ್ ಥರ ರುಚಿಕಟ್ಟಾಗಿರಬೇಕೋ ಅನ್ನುವ ಗೊಂದಲವಿತ್ತು. ಆಮೇಲಾಮೇಲೆ ಅದೊಂದು ಚೆಂದದ ಸಾಪ್ತಾಹಿಕದ ಹಾಗೆ ಇದ್ದರೆ ಒಳ್ಳೆಯದೆನಿಸಿತು. ಅಲ್ಲಿ ಮಾಹಿತಿ, ಕಥೆ, ಕವನ, ನುಡಿಚಿತ್ರ – ಹೀಗೆ ಸಾಕಷ್ಟು ವೈವಿಧ್ಯವಿರುತ್ತಲ್ಲ, ಅದಕ್ಕೆ. ಹಾಗನಿಸಿದ್ದೇನೋ ಸರಿ, ಆದರೆ ಅದನ್ನ ಸಾಕಾರಗೊಳಿಸಲು ಇನ್ನೂ ನನಗೆ ಸಾಧ್ಯವಾಗಿಲ್ಲ. ಮತ್ತು, ಬೇಕೆಂದೇ ಒಂದು ಶಿಸ್ತು ಕಟ್ಟಿಕೊಂಡು ಹಾಗೆ ಮಾದಹೊರಟರೆ ಬರಹಗಳು ಸಹಜವಾಗಿ ಹರಿದುಬರುವುದೂ ಇಲ್ಲ.

  ಇರಲಿ. ನಮ್ಮನಮ್ಮ ಖುಶಿಗೆಂದು ತೆರೆದುಕೊಂಡ ಬ್ಲಾಗ್ ಗಳನ್ನು ಬೇರೆಯವರ ಖುಶಿಗೂ ಒದಗಿಸೋದು ಹೇಗೆ ಅಂತ ನಾವು ಖಂಡಿತ ಯೋಚಿಸಬೇಕು. ಜನಪ್ರಿಯತೆಗಗಿ ಈ ಮಾತು ಹೇಳ್ತಿಲ್ಲ, ಇದು ನಮ್ಮ ಜವಾಬ್ದಾರಿ ಅಂದುಕೊಂಡು ಹೇಳುತ್ತಿರುವೆ.

  ಪ್ರಣತಿ ಆಯೋಜಿಸಿದ್ದ ಕಾರ್ಯಕ್ರಮಕ್ಕೆ ನಾನು ಬರಲಾಗಿರಲಿಲ್ಲ. ಅಲ್ಲಿ ತಾಂತ್ರಿಕ ಅಂಶಗಳು ಕೊಂಚ ಹೆಚ್ಚಾಗಿಯೇ ಇತ್ತು ಎಂದು ಕೇಳಿದೆ. ಬ್ಲಾಗಿಂಗ್ ಅನ್ನು ಟೆಕ್ನಾಲಜಿಯ ಭಾಗವಾಗಿ ನೋಡದೆ ಸಾಹಿತ್ಯದ (ಬರೆಯೋದೆಲ್ಲ ಸಾಹಿತ್ಯ ಎಂದುಕೊಳ್ಳುವ ಮೌಢ್ಯ ನನ್ನದು)ಭಾಗವಾಗಿ ನೋಡುವ ಬ್ಲಾಗಿಗರೇ ಹೆಚ್ಚಾದ್ದರಿಂದ ಅದು ಸಂಪೂರ್ಣ ತೃಪ್ತಿ ಕೊಟ್ಟಿತು ಎಂದು ಮನ ಬಿಚ್ಚಿ ಹೇಳಿದವರು ಕಡಿಮೆ.
  ನಾನೊಂದು ಯೋಚಿಸಿರುವೆ. ಟೀನಾ ಬ್ಲಾಗಲ್ಲಿ ‘ನಾವೇನು ಮಾಡಬಹುದು’ ಲೇಖನದಲ್ಲಿ ನಾವೆಲ್ಲ (ಬೇರೆಯೇ ಬಗೆಯ ಚರ್ಚೆಗಾಗಿ) ಸೇರುವ ಒಂದು ಯೋಜನೆ ಹಾಕಿದ್ದೆವು. ಅದನ್ನು ಮತ್ತೂ ವಿಸ್ತೃತಗೊಳಿಸಿ ನಾವೆಲ್ಲ ಯಾಕೆ ಒಮ್ಮೆ ಕೂತು ಮಾತಾಡಬಾರದು? ಅಲ್ಲಿ ಸ್ಟೇಜ್ ಇರುವುದಿಲ್ಲ, ಮುಖ್ಯ ಅತಿಥಿ- ಭಾಷಣ, ಸಲಹೆ- ಈ ಯಾವುದೂ ಇರುವುದಿಲ್ಲ. ನಾವು ನಾವೇ ಕುಳಿತು ನೀಟಾದ ಚರ್ಚೆ ಮಾಡಬಹುದು. (ಅದಕ್ಕೇನು? ಲಾಲ್ ಬಾಗೋ, ಕಬ್ಬನ್ ಪಾರ್ಕೋ ಆದೀತು ಅಲ್ಲವೇ?)ಎಲ್ಲರ ಒಪ್ಪಿಗೆಇದ್ದರೆ ಒಂದು ಸಂಘಟನೆಯ ರೀತಿಯಲ್ಲಿ ಬೆಳೆಸಬಹುದು. ಹೊಸ ಜವಾಬ್ದಾರಿ ಹೊತ್ತುಕೊಳ್ಳಬಹುದು.
  ಆದರೆ,
  ಆದರೆ, ಇದರಿಂದ ನಮಗೇನು ಪ್ರಯೋಜನ ಎಂದು ಕೇಳುವಂಥವರು ಅಲ್ಲಿ ಇರಬಾರದು ಅಷ್ಟೇ.
  ನೀವೇನಂತೀರಿ?

 2. ಚೇತನಾ ಅವರೇ ನಮಸ್ಕಾರ.
  ನನ್ನ ಲೇಖನಕ್ಕೆ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದ.ಎಷ್ಟು ಚಿಕ್ಕದಾಗಿ ಬರೆಯಬೇಕೆಂದು ಯೋಚಿಸಿದ್ದರೂ ಸಾಧ್ಯವಾಗಲಿಲ್ಲ.ಆದರೂ ಉದ್ದವಾದ ಲೇಖನವನ್ನೂ ಓದಿ ಅಭಿಪ್ರಾಯಿಸಿದ್ದಕ್ಕೆ ವಂದನೆ. ನನ್ನೊಳಗಿನ ಹಲವು ಗೊಂದಲಗಳೇ ಈ ಬರಹ ರೂಪ ಪಡೆದದ್ದು. ನಿಜವಾಗಲೂ, ಸಾಪ್ತಾಹಿಕ ಮಾದರಿಯಲ್ಲೇ ನಮ್ಮ ಬ್ಲಾಗ್ ಇರಬೇಕು. ಅಲ್ಲಿಯೂ ಬರೆಯುವ ಬರಹಗಳು ಅನುಭವದ ನೆಲೆಯನ್ನೇ ಪ್ರೊಜೆಕ್ಟ್ ಮಾಡುವಂತಿರಬೇಕು.
  ಹೌದು, ನಮಗೆಂದು ಬರೆದುಕೊಳ್ಳುವ ಬ್ಲಾಗ್ ಇನ್ನೊಬ್ಬರಿಗೆ ಖುಷಿ ನೀಡಬೇಕೆಂಬುದು ನಿಜ. ಜವಾಬ್ದಾರಿ ಸಹ. ಅದಕ್ಕೋಸ್ಕರ “ತಿಣುಕಾಡು’ ವುದು ಸರಿಯಲ್ಲ ಎಂಬುದು ನನ್ನ ಅನಿಸಿಕೆ. ಅವರನ್ನು ನಗಿಸಲೆಂದೇ ನಾನು ಕುಣಿಯುವುದು ನನಗೆ ರುಚಿಸದ್ದು. “ಎಲ್ಲ ಕೇಳಲಿ ಎಂದು ನಾನು ಹಾಡುವುದಿಲ್ಲ, ಹಾಡುವುದು ಅನಿವಾರ್ಯ, ಕರ್ಮ ಎನಗೆ’ ಎನ್ನುವುದು ಉದ್ಧಟತನವಂತೂ ಅಲ್ಲ. ಅದರೊಂದಿಗೆ “ಇಂದು ನಾ ಹಾಡಿದರೂ ಅಂದಿನಂತೆಯೇ ಕುಳಿತು, ಕೇಳುವಿರಿ ಸಾಕೆನಗೆ ಅದುವೆ ಬಹುಮಾನ’ಎನ್ನುವ ವಿನಯವೂ ಬ್ಲಾಗಿಗರಿಗೆ ಬೇಕು. ಆಗ ಬೇಜವಾಬ್ದಾರಿಯಾಗಿ ಬರೆಯಲಾರೆವು.
  ನಿಜ, ಟೀನಾ ಅವರ “ಬ್ಲಾಗಲ್ಲಿ’ ನಾವೇನು ಮಾಡಬಹುದು ಎಂಬುದು ಒಳ್ಳೆಯ ಆಲೋಚನೆ. ಅದಕ್ಕೆ ನಾನಂತೂ ರೆಡಿ. ಮೈಸೂರಿನಲ್ಲಿ ಎಲ್ಲರೂ ಸೇರುವುದಾದರೆ ಅದಕ್ಕೆ ತಕ್ಕಂತೆ ವ್ಯವಸ್ಥೆ (ಮನೆಯಲ್ಲಿ ಕುಳಿತು ಹರಟಲು ಬೇಕಾದ) ಯನ್ನು ಕೈಗೊಳ್ಳುತ್ತೇನೆ. ಇದೊಂದು ಸಂಘಟನೆಯ ರೀತಿಯಲ್ಲೇ ಬೆಳೆಯಬೇಕು. ಅದಕ್ಕೆ ಪದಾಧಿಕಾರಿಗಳ ಹೊರೆ ಇರಬಾರದು.ಎಲ್ಲದರಲ್ಲೂ ಲಾಭದ ನೆಲೆ ಹುಡುಕವವರನ್ನು ದೂರ ಇಡಬೇಕೆಂಬ ನಿಮ್ಮ ಅಭಿಪ್ರಾಯಕ್ಕೆ ನನ್ನ ಸಹಮತವಿದೆ.
  ನಾವಡ

 3. ನಾವಡರೆ,

  1. ಇದರಿಂದ ನಮಗೇನು ಪ್ರಯೋಜನ ಅಂತ ಕೇಳುವವರಿರಬಾರದು
  2. ಪದಾಧಿಕಾರಿಗಳ ಹೊರೆ ಇರಬಾರದು

  ಈ ಎರಡೂ ಸಲಹೆಗಳಿಗೆ ಹ್ಯಾಟ್ಸ್ ಆಫ್.

  ಯಾರಾದರೂ ನಮ್ಮ ಬರಹ ಮೆಚ್ಚಿ ನಾಲ್ಕು ಮಾತು ಬರೆದರೆ ಬರೆದವರಿಗೆ ತೃಪ್ತಿಯೂ ದೊರೆಯುತ್ತದೆ, ಈ ಪ್ರೋತ್ಸಾಹದೊಂದಿಗೆ ಮುಂದಿನ ಬರಹಕ್ಕೆ ಜವಾಬ್ದಾರಿಯೂ ಹೆಚ್ಚುತ್ತದೆ. ಲೇಖನವೊಂದು ಸಕಾರಾತ್ಮಕ ಚರ್ಚೆಗೆ ಕಾರಣವಾಗುತ್ತದೆ ಎಂದರೆ ಅದಕ್ಕಿಂತ ಮಿಗಿಲಾದ ಧನ್ಯತಾ ಭಾವವುಂಟೇ? ಉದಾಹರಣೆಗೆ, ಬ್ಲಾಗಿಗರು ಒಟ್ಟು ಸೇರಿದಾಗ ಏನನ್ನು ಚರ್ಚೆ ಮಾಡಬೇಕು ಎಂಬುದನ್ನೂ ಮೊದಲೇ ಎಲ್ಲ ಬ್ಲಾಗಿಗರ ಅಭಿಪ್ರಾಯ ಸಂಗ್ರಹಿಸಿ ತಿಳಿದಿಟ್ಟುಕೊಂಡರೆ ಶ್ರಮ ಸಾರ್ಥಕವಾದೀತು. ಏನಂತೀರಿ? ಅಂತ ಕೇಳಿ ಚರ್ಚೆ ಮುಂದುವರಿಸಲು ಅವಕಾಶ ಮಾಡಿಕೊಡುತ್ತಾ ಇದ್ದೇನೆ. 🙂

 4. ನಾವಡರೇ,

  ನಿಮ್ಮ ಚಿಂತನೆಗೆ ನನ್ನ ಸಹಮತವಿದೆ, ಆದರೆ ನಮ್ಮ ಅನುಭವಗಳ ದಾಖಲೆಯೂ ನಾಳೆ ಮಾಹೀತಿಯಾಗುವ ಸಾಧ್ಯತೆಯೂ ಇಲ್ಲದಿಲ್ಲ. ನೀವೇ ಕೊಟ್ಟ ಉದಾಹರಣೆಯಂತೆ ನಾಳೆ ಚಾರಣಕ್ಕೆ ಹೋಗುವವರು ಇದೆ ಮಾಹೀತಿಯನ್ನು ಬಳಸಿ ಎಲ್ಲಿಗೆ ಹೋಗಬಹುದೆಂಬ ತಿರ್ಮಾನಕ್ಕೆ ಬರಬಹುದಲ್ಲ?

  ಇನ್ನು ಚರ್ಚೆಗಳನ್ನು ನೀವು ಬ್ಲಾಗಗಳಲ್ಲಿ ದಾಖಲಿಸಿದರೆ ಮತ್ತು ಅವಿಯವರು ಹೇಳಿದಂತೆ ಮೊದಲೆ ಬ್ಲಾಗುಗಳಲ್ಲಿ ಚರ್ಚೆ ಮಾಡಿದರೆ (ಟೀನಾರವರು ಚರ್ಚಿಸಿದಂತೆ) ದೂರದ ಊರುಗಳಲ್ಲಿ ಕುಳಿತು, ಬ್ಲಾಗಗಳ ಮೂಲಕ ಊರನ್ನು ತಲುಪುವ ನಮ್ಮ ಯತ್ನಗಳಿಗೂ ಸಾರ್ಥಕತೆ.

  ಪ್ರೀತಿಯಿರಲಿ

  ಶೆಟ್ಟರು

 5. ಪ್ರೀತಿಯ ನಾವಡರವರಿಗೆ,

  ನಿಮ್ಮ ಮಾತು ನಿಜಕ್ಕೂ ಚಿಂತನೆಗೆ ಹಚ್ಚುತ್ತದೆ. ನಮ್ಮ ಬ್ಲಾಗುಗಳು ಅನುಭವ ಕಣಜವಾಗಬೇಕು ಎಂಬುದಕ್ಕೆ ಸಹಮತವಿದೆ. ಹಲವಾರು ಬ್ಲಾಗುಗಳನ್ನ ನೋಡಿದಾಗ ಅನ್ನಿಸುವ ಸಾಮಾನ್ಯ ಅಂಶವೆಂದರೆ ಬ್ಲಾಗ್ ಬರೀ ಸಾಹಿತಿಕ ಮಾಧ್ಯಮವಾಗಿ ಮಾತ್ರ ಉಳಿಯಬೇಕೇ..? ಕಥೆ, ಕವನ, ಪದ್ಯ ಇವಿಷ್ಟರಲ್ಲೇ ಕಳೆದುಹೋಗಬೇಕೆ? ಎಂಬ ಪ್ರಶ್ನೆಗಳು ಏಳುವುದು ಸಹಜ. ನಾನು ಎಲ್ಲವೂ ಇರಬೇಕೆಂದು ಬಯಸುತ್ತೇನೆ. ಆದರೆ interesting ಆಗಿರುವ ಬ್ಲಾಗುಗಳು ನಮ್ಮನ್ನು ಕೈ ಹಿಡಿದುಕೊಂಡು ನೆಡೆಸಿಕೊಂಡು ಹೋಗುತ್ತವೆ. ಕವನಗಳನ್ನೇ ತೆಗೆದುಕೊಳ್ಳಿ. ಇನ್ನೂ ನವೋದಯ,ನವ್ಯದ ಶೈಲಿಯನ್ನ ನಮ್ಮ ಕವನ ರಚನಾಕಾರರು ಬಿಟ್ಟಿಲ್ಲ. ನವ್ಯೋತ್ತರ ಎಂಬ ಪಂಥವನ್ನ ಯಾರೂ ಸರಿಯಾಗಿ define ಮಾಡಿಲ್ಲ. ಬ್ಲಾಗುಗಳಲ್ಲಿ ಅನುಭವ ಹೇಳಿಕೊಳ್ಳುವುದಕ್ಕೆ, ಕವನದ ಪ್ರಕಾರವಾಗಿ ಹೇಳಲಿಕ್ಕೆ ನನ್ನ ಯಾವ ತಕರಾರೂ ಇಲ್ಲ. ಇಲ್ಲಿ ಬರೋದು interesting ಆಗಿ ಬರಿಯೋದರ ಬಗ್ಗೆ. ಅನುಭವಗಳನ್ನ ಹೇಳುವಾಗ ಮಾಹಿತಿ ಕೂಡಾ ಜಾಸ್ತಿಯಾಗಬಾರದು. ಭಾಷಾ ಪಾಂಡಿತ್ಯ ಪ್ರದರ್ಶನವೂ ಹೆಚ್ಚಾಗಬಾರದು. ಇವೆರಡೂ ಸಮ್ಮಿಳಿತವಾದ ಹದವಾದ ಮಿಶ್ರಣ ಬ್ಲಾಗುಗಳಲ್ಲಿ ಬಂದರೆ ಅದಕ್ಕಿಂತ ಸೌಖ್ಯ ಮತ್ತೊಂದಿಲ್ಲ.

  ಒಂದೆರಡು ವರ್ಷಗಳ ಹಿಂದೆ ಅಪರಿಚಿತವಾಗಿದ್ದ ‘ಬ್ಲಾಗ್’ ಇಂದು ಸ್ವಾನುಭವ ನಿರೂಪಣೆಯ ಪ್ರಭಾವೀ ಮಾಧ್ಯಮವಾಗಿದೆ. Networking ಕಲ್ಪಿಸಿದೆ. ಇದಕ್ಕಿಂತ ಸಂತೋಷ ಮತ್ತೊಂದಿಲ್ಲ. ಮಧ್ಯಕರ್ನಾಟಕದ ದಾವಣಗೆರೆಯಂಥ ‘ಸಾಹಿತ್ಯ ಬಯಲುಸೀಮೆ’ಯಿಂದ ಬಂದ ನನ್ನಂಥವರಿಗೆ ಬ್ಲಾಗು ಯುವ ಬರಹಗಾರರ, ಹೊಸ ಚಿಂತಕರ ಪರಿಚಯ ಮಾಡಿಕೊಟ್ಟಿದೆ. ಬರಹಗಾರ ಮನಸ್ಸುಗಳ ನಡುವೆ ಸಂಪರ್ಕ ಸೇತುವಾಗಿದೆ. ಬ್ಲಾಗುಗಳು ನಿಜಕ್ಕೂ ಕ್ರಾಂತಿ ಮಾಡಿವೆ. ಅದೂ ಯಾವ ಕೆಂಪು ಬಾವುಟ ಹಿಡಿಯದೇ..! ಈ ಕಾವನ್ನ ಸರಿಯಾಗಿ, ಸಮರ್ಥವಾಗಿ ಸರಿದಿಕ್ಕಿನಲ್ಲಿ ಕರೆದೊಯ್ಯುವ ಜವಾಬ್ದಾರಿ ನಮ್ಮೆಲ್ಲರದು.

  ಬ್ಲಾಗು ಎಂದರೆ, ಬರೀ ಅನುಭವ ಕಥನ, ಮಾಹಿತಿ ಕಣಜ, ಪ್ರವಾಸ ಕಥನ, ಚರ್ಚಾ ವೇದಿಕೆ ಇಷ್ಟೇ ಆದರೆ ಸಾಲದು. ಜೊತೆಗೊಂದಿಷ್ಟು ಆಸಕ್ತಿಕರ ಅಂಶಗಳೂ ಮೈಗೂಡಬೇಕು. ಯಾರೂ ಕೈಯಾಡಿಸದ ವಿಷಯಗಳ ಬಗ್ಗೆ ಮಾಹಿತಿ, ಅನುಭವ ಹೊತ್ತು ತರುವ ಕೆಲಸವಾಗಬೇಕು. ಪ್ರತಿಯೊಬ್ಬರ ಆಸಕ್ತಿಗಳೂ ವಿಭಿನ್ನ. ಎಲ್ಲರನ್ನೂ ಕವನ, ಕಥೆ ಓದಿ ಎನ್ನಲಿಕ್ಕಾಗುವುದಿಲ್ಲ. ಅಥವಾ ಅರ್ಥಪೂರ್ಣ ಚರ್ಚೆ ಮಾಡಿ ಎನ್ನಲಾಗುವುದಿಲ್ಲ. ಇಲ್ಲವೇ ಗಂಭೀರವದನರನ್ನ ಕರೆತಂದು ಜೋಕುಮಾಡಿ ಎನ್ನಲಾಗುವುದಿಲ್ಲ. ಈ ಪ್ರತಿಕ್ರಿಯೆಯಲ್ಲಿ ನಾನು ಹಲವಾರು ಬಾರಿ ಬ್ಲಾಗು ‘ಆಸಕ್ತಿಕರ’ವಾಗಿರಬೇಕೆಂದು ಹೇಳಿದ್ದೇನೆ. ಅದರ ಜೊತೆಗೆ ಪ್ರತಿಯೊಬ್ಬರ ಆಸಕ್ತಿ ಕೂಡಾ ಪ್ರಮುಖ ಪಾತ್ರವಹಿಸುತ್ತದೆ. ಯಾವ ಸಂಗತಿ ಬಗ್ಗೆ ಆಸಕ್ತಿ ಹೊಂದಿದ್ದಾರೋ ಅದರ ಬಗ್ಗೆ ಆಸಕ್ತಿಕರವಾಗಿ ಬರೆಯಬಲ್ಲ ಅವಕಾಶ ಹೊಂದಿರುತ್ತಾರೆ. ಆ ಅವಕಾಶವನ್ನ ಸಮರ್ಥವಾಗಿ ಉಪಯೋಗಿಸಿಕೊಳ್ಳುವುದು ಅವರವರ ಕೈಯ್ಯಲಿದೆ.

  ಇನ್ನು ಮಾಹಿತಿ ಬಗ್ಗೆ ಹೇಳಿದಿರಿ. ಇಂಟರ್ನೆಟ್ ಮೊದಲು ಬಳಸಲ್ಪಡುವುದು ಮಾಹಿತಿ ಕಾರಣಗಳಿಗಾಗಿಯೇ. ಮನೆಯಲ್ಲಿ ಇಂಟರ್ನೆಟ್ ಕನೆಕ್ಷನ್ ಹೊಂದಿರುವವರು, ಕಾಲೇಜಿನಲ್ಲಿ, ಆಫೀಸುಗಳಲ್ಲಿ ನಿಃಶುಲ್ಕವಾಗಿ ಬ್ರೌಸ್ ಮಾಡುವವರು ಮಾತ್ರ ಬ್ಲಾಗುದಾಣಗಳಿಗೆ ಲಗ್ಗೆಯಿಡುತ್ತಾರೆ. ಇದರ ಹೊರತಾಗಿ ವಾರಕ್ಕೊಮ್ಮೆ, ಹದಿನೈದು ದಿನಗಳಿಗೊಮ್ಮೆಯೋ, ತಿಂಗಳಿಗೊಮ್ಮೆಯೋ ಈ-ಮೇಲ್ ಚೆಕ್ ಮಾಡಲು ಬರುವವರು ಮಾತ್ರ ಬ್ಲಾಗುಗಳ ಕಡೆ ತಲೆಹಾಕಬಹುದು(ಯಾವುದಾದರೂ ಬ್ಲಾಗ್ ಬಗ್ಗೆ ಪೇಪರ್ ನಲ್ಲಿ ಓದಿಯೋ, ಕೇಳಿಯೋ, ಈಮೇಲ್ ನಲ್ಲಿ ಬಂದ ಮಾಹಿತಿ ಆಧರಿಸಿಯೋ ನೋಡಬಹುದು). ಇನ್ನುಳಿದಂತೆ ಅದು ಅಪರಿಚಿತವೇ. ಹಾಗಾಗಿ, ಬರಹಗಾರರು ಅವರವರ ಕ್ಷೇತ್ರದ ಬಗ್ಗೆ ಅವರಿಗಿರುವ ನೈಪುಣ್ಯತೆಯನ್ನ, ತಮ್ಮ ಕ್ಷೇತ್ರದ ಪರಿಚಯವನ್ನ, ಅಲ್ಲಿರುವ ಅವಕಾಶಗಳನ್ನ ಬಿಚ್ಚಿಟ್ಟಾಗ ಮಾತ್ರ ಇನ್ನೊಂದಿಷ್ಟು ಜನರನ್ನ ಇದರತ್ತ ಸೆಳೆಯಲಿಕ್ಕೆ ಸಾಧ್ಯ. ಆದ್ದರಿಂದ ಭಾಷೆ ಅಂಥ ಪ್ರೊಫೆಷನಲಿಸಂ ಮೈಗೂಡಿಸಿಕೊಳ್ಲಬೇಕು. ಆಗ ಭಾಷೆಯ, ಭಾಷಿಕರ ಅಭಿವೃದ್ಧಿ ಸಾಧ್ಯ.

  ಒಮ್ಮೆ ಒಂದು ಕಡೆ ಸೇರುವ ಬಗ್ಗೆ ನಿರ್ಧಾರವಾಗಲಿ. ಲೋಕಾಭಿರಾಮ ಹರಟೆ, ಚಿಂತನೆ, ಅರ್ಥಪೂರ್ಣ ಚರ್ಚೆ ಎಲ್ಲವೂ ನೆಡೆಯಲಿ ಎಂದು ಆಶಿಸುತ್ತೇನೆ.
  ಗಣೇಶ್.ಕೆ

 6. ಮರುಕೋರಿಕೆ (Pingback): ಬ್ಲಾಗಂಗಣದ ಅಂಚಿನಿಂದ « ಮನಕ್ಕೆ ನೆನಹಾಗಿ…

 7. ಮರುಕೋರಿಕೆ (Pingback): ಚಕೋರನ ಅಂಗಳದಿಂದ…. « ಓ ನನ್ನ ಚೇತನಾ…

 8. ಬರಹಗಳಲ್ಲಿ ಅನುಭವ ಹಾಗು ಭಾವನೆ ಗಳ ಜೊತೆಗೆ, ಮಾಹಿತಿಯನ್ನು ಕೊಡುವುದರಿಂದ ಬರಹ ಪರಿಪೂರ್ಣ ವಾಗುವುದು ಎಂಬುದು ನನ್ನ ಅನಿಸಿಕೆ.
  ಉದಾಹರಣೆ ಗೆ ಹೇಳುವುದಾದರೆ, ಸ್ವಾಮಿ ಸೋಮನಾತಾನಂದ ರವರು ಬರೆದ “ಹೈಮಾಚಲ ಸಾನಿಧ್ಯದಲ್ಲಿ” (ಇದು ಸುಮಾರು ಎರಡು ದಶಕಗಳಿಗೂ ಹಿಂದೆ ಪ್ರಕಟವಾದ ಪುಸ್ತಕ. ಪ್ರಕಟಣೆ: ರಾಮಕೃಷ್ಣ ಆಶ್ರಮ) ಕಾಶಿ, ಬದರಿ, ಕೇದಾರ, ಅಮರನಾಥ, ಯಾತ್ರೆ ಯ ವಿವರವನ್ನು ಓದುಗನಿಗೆ ಯಾತ್ರೆ ಮಾಡಿದಷ್ಟ್ತು ಮಟ್ಟಿಗೆ ಅನುಭವವನ್ನು ಕೊಡುವುದರ ಜೊತೆಗೆ, ಸಂಪೂರ್ಣ ಮಾಹಿತಿಯನ್ನು (ದೂರ, ಮಾರ್ಗ, ಖರ್ಚು ಇತ್ಯಾದಿ) ಸಹ ಕೊಡುವುದರಲ್ಲಿ ಯಶಸ್ವಿ ಯಾಗಿದೆ.

  -ಪ್ರಸಾದ್.

 9. ಲೇಖನಕ್ಕೆ ಪ್ರತಿಕ್ರಿಯಿಸಿದ್ದಕ್ಕೆ ಆವಿ, ಶೆಟ್ಟರಿಗೆ ಧನ್ಯವಾದ.
  ಶೆಟ್ಟರೇ, ಮಾಹಿತಿಯ ಬಗ್ಗೆ ನನ್ನ ಟೀಕೆಯಿಲ್ಲ. ಆದರೆ ಮಾಹಿತಿಯಿಂದಲೇ ಭಾರ ವಾಗೋದಕ್ಕೆ ಬೇಸರವಿದೆ. ಅನುಭವಗಳು ಯಾವಾಗಲೂ ಮಾಹಿತಿಯೇ. ಚರಿತ್ರೆ ಮತ್ತೊಂದು ತಲೆಮಾರಿಗೆ ಮಾಹಿತಿಯಾಗುವುದಿಲ್ಲವೇ ಹಾಗೆ.
  ಗಣೇಶ್ ಕೆ. ಅವರೇ, ನಮಸ್ಕಾರ.
  ಲೇಖನಕ್ಕೆ ಪ್ರತಿಕ್ರಿಯಿಸಿದ್ದಕ್ಕೆ ವಂದನೆ. ಆಸಕ್ತಿಕರವಾಗಿರಬೇಕೆಂಬುದು ಸೂಕ್ತ. ಅದನ್ನು ನಾನೂ ಒಪ್ಪುತ್ತೇನೆ. ಅದು ಯಾವ ಅಂಶಗಳಿಂದ ಎನ್ನುವುದಕ್ಕೆ ಏನಾದರೂ ಸ್ಪಷ್ಟತೆ ಬೇಕು. ನಿಮ್ಮ ಅಭಿಪ್ರಾಯದಂತೆ ಆಯಾ ಕ್ಸೇತ್ರದವರು ತಮ್ಮ ಅನುಭವಗಳನ್ನು ದಾಖಲಿಸುವುದೊಳಿತು.
  ಪ್ರಸಾದರೇ, ಮಾಹಿತಿಯಿದ್ದರೆ ಲೇಖನ ಪರಿಪೂರ್ಣವೆನ್ನುವುದು ಸರಿ. ಈಗಿನ ಸಂದರ್ಭದಲ್ಲಿ ಎದ್ದಿರುವ ಸಮಸ್ಯೆಯೇ ಇದು. ಶಾಲೆಗಳಲ್ಲಿ ಮಕ್ಕಳಿಗೆ ನೇರವಾಗಿ ಮಾಹಿತಿಯನ್ನೇ ಕ್ಯಾಪ್ಸೂಲ್ ಮಾದರಿಯಲ್ಲಿ ನೀಡಬೇಕೋ? ಅಥವಾ ಕಥೆಯೊಂದಿಗೆ ನೀಡ್ಬೇಕೋ? ಎಂಬುದೇ ದೊಡ್ಡ ಚರ್ಚೆಯಾಗುತ್ತಿದೆ. ಇದರರ್ಥ ಮಾಹಿತಿಯಿಂದಲೇ ತೂಕ ಹೆಚ್ಚಿಸಿಕೊಂಡರೆ ಕಷ್ಟ ಎನ್ನೋದು ನನ್ನು ಅನಿಸಿಕೆ. ಧನ್ಯವಾದ.
  ನಾವಡ

 10. ನಾವಡರೆ ನಮಸ್ಕಾರ…
  ಎರಡು ಮೂರು ವರ್ಷದ ಹಿಂದೆ ಬ್ಲಾಗ್ ಮಾಡುತ್ತಿದ್ದವರನ್ನು ಇಂಥ ಸಂದಿಗ್ದಗಳು ಕಾಡಿರಲಿಲ್ಲ್ಲ. ಏನೋ ಒಂದು ಬರೆಯೋದಕ್ಕೆ ಜಾಗ ಸಿಕ್ಕಿದ್ದೇ ದೊಡ್ಡ ವಿಷ್ಯ ಅನ್ನುವಂತಿತ್ತು. ಆನ್‍ಲೈನ್‌ನಲ್ಲಿ ಸದ್ಯ ಏನೋ ಒಂದು ಕನ್ನಡ ಕಂಟೆಂಟ್ ಜಾಸ್ತಿಯಾದರೆ ಸಾಕು ಅನ್ನುವ ಮನೋಭಾವವಿತ್ತು. ಆದರೆ ಈಗ ಪರಿಸ್ಥಿತಿ ಸುಧಾರಿಸಿದೆ. ಸುಮಾರು ಆರುನೂರಕ್ಕೂ ಮಿಗಿಲಾಗಿ ಬ್ಲಾಗ್‌ಗಳಿವೆ. ಈಗಲಾದರೂ ಬ್ಲಾಗ್ ಅನ್ನೋದು ಎತ್ತ ಸಾಗಬೇಕು ಅನ್ನುವ ಬಗ್ಗೆ ಚಿಂತನೆಯಾಗಬೇಕು. ಬ್ಲಾಗ್‌ಗಳಲ್ಲಿ ಇರಬೇಕಾದ ಕಂಟೆಂಟ್ ಮಾಹಿತಿ ಪೂರ್ಣವಾಗಿರಬೇಕೇ, ಭಾವಲಹರಿಯಾಗಬೇಕೆ, ಸಾಂಪ್ರದಾಯಿಕ ಕಥೆ ಕವನಗಳಾಗಬೇಕೆ ಅನ್ನುವ ಬಗ್ಗೆ ನನ್ನಲ್ಲೂ ಸ್ಪಷ್ಟತೆ ಇಲ್ಲ. ಆದರೆ ಎಂದೋ ಒಂದು ದಿನ ಬರೀ ಕಮೆಂಟ್‌ಗಳನ್ನು ಓದಿಕೊಂಡು-ಪ್ರತಿಕ್ರಿಯಿಸುವ ಸಂವಹನ ಮುಗಿಯುತ್ತಾ ಹೋಗುತ್ತದೆ ಅನ್ಸುತ್ತೆ. ಮನೆ ಕಟ್ಟಿದ ಹೊಸದರಲ್ಲಿ ಹೇಗೋ ಮಾಡಿ ಒಳಗೆ ಸೇರಿಕೊಂಡರೆ ಸಾಕು ಅನ್ನುವಂತಿರುತ್ತದೆ. ಆದರೆ ನಿಧಾನಕ್ಕೆ ಮನೆಯೂ ಕೆಲವು ಅಗತ್ಯಗಳನ್ನು ಬೇಡುತ್ತೆ ಮತ್ತು ಅವುಗಳನ್ನು ನಾವು ಪೂರೈಸುತ್ತೇವೆ ಕೂಡಾ. ಅಂದರೆ ಮನೆಗೆ ನಾವು ಕಮಿಟ್ ಆಗ್ತಾ ಹೋಗ್ತೇವೆ. ಮನೆಯನ್ನು establish ಮಾಡ್ತಾ ಹೋಗ್ತೇವೆ. ಅದಕ್ಕೊಂದು ವ್ಯಕ್ತಿತ್ವ ನೀಡ್ತಾ ಹೋಗ್ತೀವಿ. ಇದು ಮನೆ ಮಾತ್ರ ಅಲ್ಲ; ಕಛೇರಿ, ನಮ್ಮದೇ ಬಿಸಿನೆಸ್ಸು, ಸಂಬಂಧ ಇತ್ಯಾದಿಗಳಿಗೆಲ್ಲಾ ಅನ್ವಯಿಸುತ್ತೆ.
  ಈಗಲೂ ನಾನು ಬ್ಲಾಗ್ ಮಾಡೋದು ಆತ್ಮತೃಪ್ತಿಗೆ ಕಣ್ರೀ ಅಂದರೆ ಒಂದೋ ಅವರಿಗೆ ಕನ್ನಡದ ಜೊತೆ relate ಆಗಬೇಕಾದ ಅಗತ್ಯ ತುಂಬಾ ಇದೆ ಮತ್ತು ಅವರು ಎನ್‌ಆರೈಗಳೇ ಆಗಿರ್ತಾರೆ. ಆದರೆ ಇಲ್ಲಿದ್ದು ಬರೆಯೋರಿಗೆ ಆ ತರದ relate ಆಗಬೇಕಾದ ಅಗತ್ಯಗಳೇನೂ ಇಲ್ಲ. ಏಕೆಂದರೆ ನಾವಿರೋದು ಕನ್ನಡಿಗರ ಮಧ್ಯೇನೆ. ನಮಗೆ ಇಲ್ಲಿನ ವಾಸ್ತವಗಳು ಗೊತ್ತು ಮತ್ತು ಕನ್ನಡದ ಜೊತೆಗೆ ನೇರ ಸಂವಹನವಿದೆ. ಹಾಗಿರುವಾಗ ಬರೆಯೋದು ಆತ್ಮತೃಪ್ತಿಗೆ ಕಣ್ರೀ ಅಂತ ಈಗಲೂ ಮೊಂಡು ಹೂಡಿದರೆ ಹೇಗೆ?

  ಇನ್ನೊಂದು ಬರೆಯೋದು, ಹಾಡೋದು ನನ್ನ ಆತ್ಮತೃಪ್ತಿಗೆ ಕಣ್ರೀ ಅಂತ ಹೇಳೋರಲ್ಲಿ ಬಹುತೇಕರು ಪ್ರಶಸ್ತಿ, ಸೈಟು, ಅಕ್ಯಾಡೆಮಿ ಇತ್ಯಾದಿಗಳಿಗೆ ಲಾಬಿ ಮಾಡೋದನ್ನು ನಿತ್ಯ ನೋಡುತ್ತೇವೆ. ಅವರಿಗೆ ಅತಿಆಸೆ ಅಂತ ಅಲ್ಲ. ಅದು ಆತನ ಸಾಮಾಜಿಕ ನೆಲೆಯೂರುವಿಕೆ. ಅದು ಅಗತ್ಯ ಕೂಡ. ಹೀಗಿರುವಾಗ ನಾವು ಬರೆಯೋದು ಒಂದು cause-ಉದ್ದೇಶಕ್ಕೆ ಅಂತಾ ಆದರೆ ಅದಕ್ಕೊಂದು ಅರ್ಥವಿರುತ್ತದೆ.

  ಏನೋ ಇದೆಲ್ಲಾ ಬರೆಯೋದರಲ್ಲೂ ಒಂದು ಅಸ್ಪಷ್ಟತೆ ಕಾಣಿಸಿದರೆ-ಎಲ್ಲರ ಚಿಂತನೆಯಲ್ಲಿ ಅದು ಸ್ಪಷ್ಟವಾಗುತ್ತಾ ಹೋದರೆ….ಅಂದುಕೊಳ್ಳುತ್ತಾ-

  ರವೀ…

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s