ಕಳೆದು ಹೋಗುವುದು ಎಷ್ಟು ಸುಲಭ? ಅದೂ ಬೆಂಗಳೂರಿನಂತಹ ಮನುಷ್ಯರ ಸಂತೆಯಲ್ಲಿ. ಬಹಳ ಸುಲಭ. ನಿರಾಯಾಸ, ಕಂಗ್ಲಿಷ್ ಕಲ್ಚರ್ ನಲ್ಲಿ ಹೇಳೋದಾದರೆ ಬಹಳ ಈಸಿ. ಒಂದು ಥರಾ ಕಸಿವಿಸಿ. ಇಲ್ಲಿ ಕಳೆದು ಹೋಗುವುದಕ್ಕೂ ಒಂದು ವ್ಯವಸ್ಥೆ, ಒಂದು ಸ್ಟ್ರಕ್ಚರ್. ಎಲ್ಲಾ ವ್ಯವಸ್ಥಿತ, ಅದಕ್ಕೂ ಒಂದು ನಿರ್ದಿಷ್ಟತೆ.
ಸಾಲಿಗ್ರಾಮ ಜಾತ್ರೆಯಲ್ಲಿ ಕೇಶು ಕಾರಂತರ ಮಗ ಕಳೆದು ಹೋದ. ಕ್ಷಣದಲ್ಲಿಯೇ ದೊಡ್ಡ ಸುದ್ದಿ. ಎಲ್ಲೆಲ್ಲೂ ಅದೇ ಮಾತು. ‘ಕೇರಿ ಅಂಚಿನ ಗದ್ದೆ ಒಡೇರ ಮಗ ಕಾಣೆಯಂತೆ’ ವೆಂಕೂ ಐತಾಳರ ಮನೆ ಆಳು ರುಕ್ಕಿ ಕೇರಿಗೆಲ್ಲಾ ಪ್ರಸಾರ ಮಾಡಿದ್ಳು. ದೇವಸ್ಥಾನದ ಬದಿಯಲ್ಲಿದ್ದ ಕೊಂಕಣಿ ಹೋಟೆಲಿನಲ್ಲಿ ಚಹಾ ಕುಡಿಯುವವರ ಚರ್ಚೆಯ ಚಾವಡಿಯಲ್ಲಿ ಇದೇ ವಿಷಯ.
ಊರಲ್ಲಿದ್ದ ಎಲ್ಲಾ ಪೊಲೀಸರಿಗೂ ಮಗು ಹುಡುಕುವ ಕೆಲಸ. ಅವರಿಗಷ್ಟೇ ಅಲ್ಲ, ಮಗು ಪತ್ತೆ ಹಚ್ಚುವ ಹೊಣೆ ಎಲ್ಲರದ್ದೂ. ಅದೊಂದು ಊರಿನ ಕೆಲಸ. ಅದಕ್ಕೆ ಜಾತ್ರೆಯಲ್ಲಿ ಎಲ್ಲರೂ ಮಗು ಪತ್ತೆ ಹಚ್ಚಿದ್ದಾರೆ. ತಮಗೆ ತಿಳಿದ ಜಾಗಗಳಲ್ಲಿ, ಎಲ್ಲಾ ಹುಡುಕಿ ‘ಸಿಗಲಿಲ್ಲ’ ಎಂಬ ಉತ್ತರ ಬರುವಾಗ ಮೂಲೆಯಲ್ಲೆಲ್ಲೋ ಮಗುವಿನ ಸದ್ದು ಕೇಳಿ ಬರುತ್ತದೆ. ಮಗ ಸಿಗುತ್ತಾನೆ, ಅಪ್ಪನ ತೆಕ್ಕೆಗೆ ಜೋತು ಬೀಳುತ್ತಾನೆ.
ಬೆಂಗಳೂರಿನಲ್ಲಿ ಏನೂ ಮಾಡುವುದು ಬೇಡ. ನಿಂತಲ್ಲೇ ಕೆಲವು ಘಳಿಗೆ ನಿಂತುಕೊಳ್ಳಿ. ಅಲ್ಲಿಗೆ ಕಳೆದು ಹೋದಿರಿ. ಅವರು ಬಂದರು, ಇವರು ಹೋದರು, ಇನ್ಯಾರೋ ಹೊರಡುತ್ತಿದ್ದಾರೆ. ಮತ್ತ್ಯಾರೋ ಬರುತ್ತಿದ್ದಾರೆ. ಹಾಗಾದರೆ ಅಲ್ಲಿಯೇ ನಿಂತುಕೊಂಡವರು ಯಾರು. ನಮ್ಮೊಬ್ಬರನ್ನು ಬಿಟ್ಟು. ಕ್ಷಣಕ್ಷಣಕ್ಕೂ ಮುಖಗಳೇ ಬದಲಾಗುವ ಊರು. ಕಳೆದು ಹೋಗುವುದೆಂದರೆ ನಮಗೆ ನಾವೇ ಅಪರಿಚಿತರಾಗುವುದು, ಕಣ್ಣು ಪಿಳಿ ಪಿಳಿ ಬಿಟ್ಟು ಊರೇ ಹೊಸದೆನಿಸುವುದು.
ಮೊದಲಿಗೆ ರಾಜಧಾನಿಗೆ ಬಂದಾಗ ನನಗೆ ಅನ್ನಿಸಿದ್ದು ಇಷ್ಟೇ. ಮೆಜೆಸ್ಟಿಕ್‌ನ ಮೇಲು ಸೇತುಗೆ ಮೇಲೆ ಮಲ್ಲೇಶ್ವರ ಬಸ್ಸಿನ ಫ್ಲಾಟ್‌ಫಾರಂಗೆ ಇಳಿಯುವಾಗ ಯಾರೂ ಗೊತ್ತೇ ಇಲ್ಲ. ಸಮುದ್ರದ ಅಲೆಯೋಪಾದಿಯಲ್ಲಿ ನುಗ್ಗಿ ಬರುವ ಜನ, ಕ್ಷಣದಲ್ಲೇ ಕರಗಿ ಹೋಗುವ ಮಂದಿ. ಅದರೆ ನಡುವೆ ನನಗೆ ಪ್ರತಿ ಹೆಜ್ಜೆಯೂ ಭಾರ. ಕಳೆದು ಹೋಗುವುದೆಂದರೆ ನಮ್ಮ ಜನ ನಮಗೇ ಹೊರಗಿನವರೆನಿಸುವುದು, ಕಳೆಯುವುದಕ್ಕೂ ಒಂದು ರೀತಿ ನೀತಿ.
ದೊಡ್ಡ ಊರುಗಳಲ್ಲಿ ಕಾಲಿಟ್ಟ ಕ್ಷಣದಿಂದ ಮನುಷ್ಯ ತನ್ನ identityಯನ್ನೇ ಕಳೆದುಕೊಂಡು ಬಿಡುತ್ತಾನೆ.
“ಕಳೆದು ಹೋಗುವ ಸುಖವಿಲ್ಲಿ ಸರಾಗ…”
ಯುಗಾದಿ ಹಬ್ಬದ ಹಾರ್ಧಿಕ ಶುಭಾಶಯಗಳು..
ಪ್ರೀತಿಯಿರಲಿ
ಶೆಟ್ಟರು
ಯುಗಾದಿಗೆ ಊರಿಗೆ ಹೋಗಿದ್ದರಿಂದ ಬ್ಲಾಗ್ ನತ್ತ ಬಂದೇ ಇರಲಿಲ್ಲ. ಹೊಸ ಪೋಸ್ಟ್ ಸಹ ಹಾಕಿರಲಿಲ್ಲ.
ಕಳೆದು ಹೋಗುವುದಕ್ಕೂ ರೀತಿ ನೀತಿ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದ ಸುನಾಥರಿಗೂ, ಶೆಟ್ಟರಿಗೂ ಧನ್ಯವಾದ.
ಎಲ್ಲರಿಗೂ ಯುಗಾದಿ ಶುಭಾಶಯಗಳು.
ನಾವಡ
maggalu nota nimma plus point sir.