ಬ್ರಹ್ಮಚಾರಿಯ ಪುಟಗಳು ಆರು 

ಅಂದು ಭಾನುವಾರ. ಇದು ಮಾತ್ರ ಸರಿಯಾಗಿ ನೆನಪಿದೆ. ಸಾಮಾನ್ಯವಾಗಿ ಶನಿವಾರ ರಾತ್ರಿ ಕೆಲಸ ಮುಗಿಸಿಕೊಂಡು ಹರ್ಷ ಮತ್ತು ನವೀನ್ ನಮ್ಮ ಎನ್. ಆರ್. ಕಾಲೋನಿ ಮನೆಗೆ ಬರುತ್ತಿದ್ದರು. ಈ ಹಿಂದೆಯೇ ಹೇಳಿದಂತೆ ಅಂದು ಚೆಂದವಾದ ಊಟ. ರಾತ್ರಿ ಅಡುಗೆ ಗೆಳೆಯ ಸಿಗದಾಳ್ ಮುಗಿಸಿಡುತ್ತಿದ್ದ. ಬೆಳಗ್ಗೆ ಅವನಿಗೆ ನಾನು ತಿಂಡಿ ಮಾಡಿಕೊಡುತ್ತಿದ್ದೆ. ಒಮ್ಮೊಮ್ಮೆ ಸೋಮಾರಿ ಎನಿಸಿ ತಡವಾಗಿ ಎದ್ದು, ಏಳಲು ಮನಸ್ಸಾಗದಿದ್ದಾಗ ಸುಳ್ಳನೊಂದು ಕಾಯಿಲೆ (ತಲೆನೋವು, ಯಾಕೋ ಸುಸ್ತು) ಹೇಳಿ ಸಾಗ ಹಾಕುತ್ತಿದ್ದ ದಿನಗಳೂ ಇದ್ದವು.

ಅದರಲ್ಲಿ ಸಿಗದಾಳ್ ಒಳ್ಳೆ ಮನುಷ್ಯ. ರಾತ್ರಿ ಅಡುಗೆ ಮಾಡಿಡುತ್ತಿದ್ದ. ಕೈಲಾಗದ ದಿನ ಮೊದಲೇ ಹೇಳುತ್ತಿದ್ದ. ಎಲ್ಲೋ ಬೇಕರಿಯಲ್ಲಿ ತಿಂದು ದಿನ ದೂಡುತ್ತಿದ್ದೆವು. ಆದರೆ ಶನಿವಾರ ಸ್ವಲ್ಪ ಸ್ಪೆಷಲ್ಲು. ಅಂಥದ್ದೇ ಒಂದು ಶನಿವಾರದ ರಾತ್ರಿ ಸುಮಾರು ೧೧. ೩೦ ಗೆ ಹರ್ಷ, ನವೀನ್ ಇಬ್ಬರೂ ಮನೆಗೆ ಬಂದರು. ಅವತ್ತು ಬದನೆಕಾಯಿ ಹುಳಿ ಮಾಡಿದ್ದ ಸಿಗದಾಳ್. ಸೆಂಡಿಗೆ ಬೇಕಿತ್ತು, ಆದರೆ ಇರಲಿಲ್ಲ. ನಾನು ಕಚೇರಿಯಿಂದ ಬರುವ ಹಾದಿಯಲ್ಲಿ ಸ್ವಲ್ಪ ಕಡ್ಲೇಬೇಳೆ ವಡೆ (ಚಟ್ಟಂಬಡಿ) ತಂದಿದ್ದೆ.

ಎಲ್ಲರೂ ಹಂಚಿಕೊಂಡು ತಿಂದೆವು. ಒಂದಷ್ಟು ಹೊತ್ತು ಹರಟಿದೆವು. ಎರಡು ದಿನದ ಹಿಂದೆಯಷ್ಟೇ ನಮ್ಮ ಎದುರಿನ ಗುಂಪಿಗೊಂದು ಶಾಕ್ ಕೊಟ್ಟಿದ್ದೆವು. ಪೊಲೀಸ್ ಅಧಿಕಾರಿಯೊಬ್ಬರ ಎತ್ತಂಗಡಿ ಸುದ್ದಿ ಬರೆದು ಗಪ್‌ಚುಪ್ ಎನ್ನುವಂತೆ ಮಾಡಿದ್ದೆವು. ಅದೇ ಝೂಮ್‌ನಲ್ಲಿದ್ದ ನಾವೆಲ್ಲಾ ಮತ್ತೊಂದು ಸ್ಕೂಪ್‌ನ ಅನ್ವೇಷಣೆಯಲ್ಲಿದ್ದೆವು. ಈ ಮಧ್ಯೆ ಸಿಗದಾಳ್ ಲೆಕ್ಕಾಚಾರ (ಅಕೌಂಟೆಂಟ್) ದ ವ್ಯಕ್ತಿ. ಅವನಿಗೆ ನಮ್ಮ ಕ್ಷೇತ್ರವೂ ಹೊಸತು.

ಹಾಗಾಗಿ, ಮಧ್ಯೆ ಮಧ್ಯೆ ಡಿಕ್ಟೇಷನ್ ನಡುವೆ “ಏನಂದ್ರಿ?’ ಎಂದು ಕೇಳುವ ಹಾಗೆ ಆಗಾಗ್ಗೆ “ಹಂಗಂದ್ರೆ’ ಎಂದು ಕೇಳುತ್ತಿದ್ದ. ಅತ್ಯಂತ ಕುತೂಹಲದ ಜೀವಿ. ಪುಸ್ತಕ ಅವನ ಚಟ. ಭೈರಪ್ಪನನ್ನು ಅರೆದು ಕುಡಿದಿದ್ದ. ಹಾಗೆ ಹೇಳುವುದಾದರೆ ಭೈರಪ್ಪನಿಂದಲೇ ಅವನು ನನಗೆ ಸಿಕ್ಕಿದ್ದು ಗೆಳೆಯನಾಗಿ. ಇಂದಿಗೂ ಜೀವದ-ಜೀವನದ ಗೆಳೆಯನಾಗಿದ್ದಾನೆ ಕೂಡ. ಅವನು ಗೆಳೆಯನಾದ ಪರಿ ಮತ್ತೊಮ್ಮೆ ಹೇಗಾದರೂ ಉಲ್ಲೇಖಿಸುತ್ತೇನೆ. ಇಂಥ ಸಿಗದಾಳನಿಗೆ ಇದೇನೂ ಕಷ್ಟಕರವಾದ ವಿಷಯವಾಗಿರಲಿಲ್ಲ.

ಆದರೆ ಮಾತಿನ ಮಧ್ಯೆ ಕೋಡ್ ವರ್ಡ್‌ಗಳು, ವ್ಯಕ್ತಿಗಳು ಬಂದಾಗ ಸ್ವಲ್ಪ ವಿಚಲಿತನಾಗುತ್ತಿದ್ದ. ಎಂದಿಗೂ “ನೀವೇನು ಬೇಕಾದ್ರೂ ಮಾಡ್ಕೊಳ್ರೋ’ ಎಂದು ರಗ್ಗು ಹೊದ್ದು ಮಲಗಿಕೊಂಡವನಲ್ಲ. ಅಂದೂ ರಾತ್ರಿ ಎರಡೂವರೆವರೆಗೆ ಚರ್ಚಿಸಿದೆವು. ನಾವು ಇದ್ದದ್ದು ಮೊದಲ ಅಂತಸ್ತಿನಲ್ಲಿ (ಆ ಮನೆಗೆ ಇದ್ದದ್ದು ಒಂದೇ ಅಂತಸ್ತು ಬಿಡಿ). ಅಂತೂ ಮಲಗಲೇ ಬೇಕೆಂದು ನಿರ್ಧರಿಸಿ ತಾರಸಿಯ ಬಯಲಿನಲ್ಲಿ ನಾಲ್ಕೂ ಮಂದಿ ಮಲಗಿಕೊಂಡೆವು.

ಬೆಳಗ್ಗೆ ಎದ್ದಾಗ ಎಂಟೂವರೆ. ಅಂದು ಬಿಸಿಬೇಳೇಬಾತ್ ನಮ್ಮ ಮೆನು. ಜತೆಗೆ ಪಕೋಡವಿರಲಿಲ್ಲ. ಬೆಳಗ್ಗೆ ಎದ್ದವನೇ ಸಿಗದಾಳ್ ಹೋಗಿ ಬೀನ್ಸ್, ಕ್ಯಾರೆಟ್ ತಂದ. ಅಷ್ಟರಲ್ಲಿ ಈರುಳ್ಳಿ ಬಿಡಿಸಲು ಹರ್ಷ ಎದ್ದು ಬಂದ. ಬಿಸಿಬೇಳೆ ಭಾತ್ ಮುಗಿಯುವಷ್ಟರಲ್ಲಿ ನವೀನ, ಎರಡು ಬಾರಿ ಬಂದ ಪತ್ರಿಕೆಗಳನ್ನೆಲ್ಲಾ ತಿರುವಿ ಹಾಕಿ ಮಿಸ್ ಆದದ್ದು ಎಷ್ಟು ? ಮಿಸ್ ಮಾಡಿದ್ದು ಎಷ್ಟು ? ಎಂದು ಪಟ್ಟಿ ಮಾಡಿದ್ದ. ನಮಗೆ ಒಂದು ಯುಡಿಆರ್ (ಅಪರಿಚಿತನ ಆತ್ಮಹತ್ಯೆ ಎಂದು ಹೇಳಲು ಪೊಲೀಸರು ಬಳಸುವ ಕೋಡ್) ಮಿಸ್ ಆಗಿತ್ತು. ಅಂಥದ್ದೇ ಚಿಕ್ಕಪುಟ್ಟ ಎರಡು ಕಳ್ಳತನಗಳು ನಮ್ಮಲ್ಲೂ ಬಂದಿದ್ದವು.

ಆದರೆ ಯುಡಿಆರ್ ತಲೆ ಕೆಡಿಸಿದ್ದು ನಿಜ. ಅದೂ ನನ್ನ ಎದುರಿನ ಗುಂಪಿನವರ ಪತ್ರಿಕೆಗಳಲ್ಲಿ ಪ್ರಕಟವಾಗಿದ್ದು ತಲೆ ಕೆಡಿಸಿಕೊಳ್ಳಲು ಮೂಲ ಕಾರಣ.  ಬಿಸಿಬೇಳೆಭಾತ್ ನ ತರಕಾರಿಗಳು ಗಂಟಲಿನಿಂದ ಕೆಳಗಿಳಿಯಲಿಲ್ಲ. ನವೀನ ಆಗಲೇ ಲೆಕ್ಕ ಶುರು ಮಾಡಿದ್ದ. ಹರ್ಷನೂ ಸುಮ್ಮನಿರಲಿಲ್ಲ. ನಾನು ಭಾತ್ ಬಡಿಸೋದರಲ್ಲಿ ನಿರತನಾಗಿದ್ದೆ.

ಕೊನೆಗೆ ಒಂದು ನಿರ್ಧಾರಕ್ಕೆ ಬಂದೆವು. ಅಷ್ಟರಲ್ಲಿ ನವೀನನ ಫೋನ್ ಬೊಬ್ಬೆ ಹಾಕತೊಡಗಿತು. ಬಹಳ ಬೇಸರದಿಂದ ತೆಗೆದುಕೊಂಡವನೇ …ಹೌದಾ…ಎಲ್ಲಿ…? ನಿನ್ನೆಯೇ…? ಕಾರಣವೇನು…?’ ಹೀಗೆ ಪ್ರಶ್ನೆಗಳ ಸುರಿಮಳೆಯನ್ನು ಹಾಕಿದ. ನಮಗೆಲ್ಲರಿಗೂ ತುದಿಗಾಲಲ್ಲಿ ನಿಲ್ಲುವಂತೆ ಮಾಡಿತು. ಎಲ್ಲಾ ಮುಗಿದ ಮೇಲೆ ಫೋನ್ ಇಟ್ಟವನೇ ಬಟ್ಟಲಿನತ್ತ ಬಂದ.

ಏನಯ್ಯಾ…? ಎಂದು ಕೇಳಿದೆ. ಒಂದು ಮರ್ಡರ್ ಆಗಿದೆಯಂತೆ ಎಂದ. ಎಲ್ಲಿ? ಎಂದು ಕೇಳಿದ್ದಕ್ಕೆ ಬಸವನಗುಡಿ ಪೊಲೀಸ್ ಸ್ಟೇಷನ್ ಲಿಮಿಟ್ಸ್ ಎಂದು ಉತ್ತರಿಸಿದ. ಏನಾದ್ರೂ ಕ್ಲೂ ? ಎಂದು ಕೇಳಿದ್ದಕ್ಕೆ ಹೊಸತೊಂದು ಸ್ಕೂಪ್ ಸಿಕ್ಕಿದ ಸಂಭ್ರಮದಲ್ಲಿ ನವೀನ, “ಅದೇನೂ ಗೊತ್ತಿಲ್ಲ. ಹುಡುಕಬೇಕು, ಈಗಲೇ ಹೊರಡೋಣ’ ಎಂದು ಅಪ್ಪಣೆ ಹೊರಡಿಸಿದ. ನಾವೂ ತಿರುಗೇಟು ನೀಡಲು ಕಾಯುತ್ತಿದ್ದಕ್ಕೆ ಸಿಕ್ಕಿದ್ದೇ ಸೀರುಂಡೆ ಎನ್ನುತ್ತಾ ಹೊರಟೆವು.

ಪಾಪ, ಸಿಗದಾಳನೊಂದಿಗೆ ಕಳೆಯಬೇಕಾದ ಭಾನುವಾರಕ್ಕೆ ಖೋತಾ ಆಯಿತು. ಮನೆಯಿಂದ ನಡೆದು ಹೊರಟ ನಾವು ಯಡಿಯೂರು ಸರ್ಕಲ್‌ನ ಬಳಿ ಮತ್ತೊಂದು ಕೆಲಸ ಮುಗಿಸಿಕೊಂಡು ಅಲ್ಲಿನ ಕೆನರಾ ಬ್ಯಾಂಕ್ ಕಚೇರಿ ಎದುರು ನಿಂತೆವು. ನಮಗೆ ಬಂದ ಮಾಹಿತಿ ಪ್ರಕಾರ ಅದರ ಮಹಡಿ ಮೇಲೆ ಕೊಲೆಯಾಗಿ ಬಿದ್ದ ಹೆಣವಿತ್ತು. ಹೆಂಗಸೋ, ಗಂಡಸೋ ಗೊತ್ತಿಲ್ಲ. ಯಾವಾಗ ಕೊಲೆಯಾದದ್ದು ಎಂಬುದೂ ಸ್ಪಷ್ಟವಾಗಿ ತಿಳಿದಿರಲಿಲ್ಲ.

ಅಂದು ಭಾನುವಾರವಲ್ಲವೇ? ಬ್ಯಾಂಕ್‌ಗೆ ರಜ. ಅವರೋ ಬರೀ ಬ್ಯಾಂಕ್ ಬಾಗಿಲಿಗೆ ಬೀಗ ಜಡಿದಿರಲಿಲ್ಲ. ಅದರ ಗೇಟಿಗೂ ಬೀಗ ಜಡಿದಿದ್ದರು. ಜತೆಗೆ ಹಳೆ ಕಟ್ಟಡ. ಮೇಲೆ ಹತ್ತುವುದು ಹೇಗೆ? ಹೆಣವನ್ನು ಪತ್ತೆ ಹಚ್ಚುವುದು ಹೇಗೆ ? ಎಂದೆಲ್ಲಾ ಪ್ರಶ್ನೆಗಳೊಡನೆ ನಮ್ಮ “ಚಾರಣ’ದ ಮಾರ್ಗ ಗುರುತಿಸಿಕೊಂಡೆವು. ನವೀನ ಹತ್ತಲು ಸಿದ್ಧನಾದ. ನಾವು ಮೇಲಿಂದ ಅವನು ಕೊಡೋ ಡೀಟೇಲ್ಸ್ ನ್ನ ಸ್ಟೋರ್ ಮಾಡಿಕೊಳ್ಳೋಕೆ ಸಿದ್ಧವಾದೆವು.

ಕೊನೆಗೂ ಮೇಲೆ ಹತ್ತಿ ನೋಡಿದರೆ….ಇಡೀ ಮಹಡಿ ಖಾಲಿ ಖಾಲಿ. ಅಲ್ಲಿ ಹೆಣವಿರಲಿ, ಅದರ ಬಟ್ಟೆಯೂ ಇರಲಿಲ್ಲ ! ಬೇಸ್ತು ಬಿದ್ದದ್ದು ನಾವು…ಬೇಸರದಿಂದ ಕಟ್ಟಡದ ಹಿಂದೆ ಇಣುಕಿದರೆ ಅಲ್ಲೊಂದು ಹೆಣವಿತ್ತು..ಅದೂ ಅಪರಿಚಿತವೇ… ನಮಗೆ ಆಶ್ಚರ್ಯ. ಕೊನೆಗೂ ಹೆಣ ನಮ್ಮ ಕೈ ಬಿಟ್ಟಿರಲಿಲ್ಲ….!’