ತುಂಬಿದ ಕಡಲಿನ ಎದುರು
ನಿಂತವಳ ಕಣ್ಣಲ್ಲಿ ಬರಿ ನೀರೇ
ಕ್ಷಣದಲ್ಲೇ ಉಕ್ಕುಕ್ಕಿ ಬರುತ್ತಿವೆ
ಅಲೆಗಳಾಗಿ
ಅವೋ ಮೊದಲೇ ಉಪ್ಪು
ಈಗ ಮತ್ತಷ್ಟು ಉಪ್ಪು

ಜಗದ ಪರಿವೆಯೇ ಇಲ್ಲ
ಕಡಲಿನೊಂದಿಗೆ ಮಾತಿಗಿಳಿದಂತೆ
ತೋರುತ್ತಿದ್ದಾಳೆ
ಆದರೆ ಅದು ಮೌನದ
ಚೌಕಟ್ಟಿನ ಚಿತ್ರ,
ವಾಚ್ಯವೆನಿಸದ ಮಾತು
ಪಿಸುಮಾತೂ ಅಲ್ಲ,
ಉಸಿರಮಾತಿಗೆ
ಇನ್ನೂ ಹೆಸರಿಟ್ಟಿಲ್ಲ

ಅವಳಲ್ಲಿ
ಸೋತ ನಿರಾಶೆಯೂ ಕಾಣಲಿಲ್ಲ
ಬಹುಶಃ ಹೀಗಿರಬೇಕು
ಗೆದ್ದದ್ದನ್ನೆಲ್ಲಾ ಚೆಲ್ಲಿ
ನಿರುಮ್ಮಳವಾಗುತ್ತಿದ್ದಾಳೆ
ಸೋತಳೆಂದು
ಒಪ್ಪಿಕೊಳ್ಳುವ ಕ್ಷಣವಿರಬೇಕು
ಅದಕ್ಕೇ ಅಳುತ್ತಿದ್ದಾಳೆ !

ಅವಳ ಮೌನದ ಚಿಪ್ಪು
ಬಾಯ್ತೆರೆದು ಕುಳಿತಿದೆ
ಸ್ವಾತಿ ಮಳೆಯ
ಮೊದಲ ಹನಿಯಂತೆ
ಆ ಕಡಲಿನ
ಮೊದಲ ಮಾತನ್ನು
ಗಪ್ಪನೆ ಹಿಡಿದು ಮುತ್ತಾಗಿಸಲು

ನಿಷ್ಕರುಣಿ
ಕಡಲು ಸುಮ್ಮನೆ 
ಗೂ ಗುಟ್ಟುತ್ತಿದೆ,
ಕಿವಿ ಮುಚ್ಚಬೇಕೆನ್ನುವಷ್ಟು
ಅದಕ್ಕೇ ಅವಳು
ಹೀಗೇ ಅಳುತ್ತಿದ್ದಾಳೆ, ಬಿಕ್ಕಿ ಬಿಕ್ಕಿ
ಅಲೆಗಳು ಮತ್ತೆ ಮತ್ತೆ
ದಡಕ್ಕಪ್ಪಳಿಸುವ ಹಾಗೆ !