ಒಂದು ವಾರದಿಂದ ನಮ್ಮ ಐದನೇ ಕಂತನ್ನು ಬರೆಯಬೇಕೆಂದುಕೊಂಡಿದ್ದೆ. ಸಮಯದ ಕೊರತೆ ಮುಂದೂಡುತ್ತಿತ್ತು. ಇವುಗಳನ್ನು ಬರೆದದ್ದು ಸುಮ್ಮನೆಂದು. ಆದರೆ ಬರುತ್ತಿರುವ ಪ್ರತಿಕ್ರಿಯೆ ಚೆನ್ನಾಗಿದೆ. ಪ್ರಾಮಾಣಿಕತೆಯೋ, ಇಲ್ಲವೋ ನನಗೆ ಗೊತ್ತಿಲ್ಲ. ಸುಮ್ಮನೆ ಎದುರಿನ ಪಾತ್ರಗಳನ್ನು ಅನಾವರಣಗೊಳಿಸುತ್ತಾ ಹೋಗುತ್ತಿದ್ದೇನೆ. ಅದು ಮೈದುಂಬಿಕೊಂಡು ಬರುತ್ತದೋ ಇಲ್ಲವೋ ನನಗೆ ಗೊತ್ತಿಲ್ಲ.

ನಾನು, ಹರ್ಷ, ನವೀನ್ ಅಪರಾಧ ವರದಿಗಾರರಾಗಿದ್ದೆವು ಎಂದು ಮೊದಲೇ ಹೇಳಿದ್ದೆ. ಆಗಿನ ಪರಿಸ್ಥಿತಿಯನ್ನು ಉಲ್ಲೇಖಿಸಬೇಕು. ರೌಡಿಗಳ ಗ್ಯಾಂಗ್‌ವಾರ್‌ನಂತೆಯೇ ನಮ್ಮಲ್ಲೂ ಸುದ್ದಿಗಾಗಿ “ಬೌದ್ಧಿಕ ವಾರ್’ ನಡೆಯುತ್ತಿತ್ತು. ನಾವೂ ಮೂರು ಮಂದಿ ಒಂದು ಗುಂಪು. ನಮ್ಮ ವಿರುದ್ಧವಾಗಿ ಇಂಗ್ಲಿಷ್ ಪೇಪರ್‌ವೊಂದರ ವರದಿಗಾರನ ನೇತೃತ್ವದಲ್ಲಿ ಮತ್ತೊಂದು ಗುಂಪಿತ್ತು. ಅವರೆಲ್ಲೂ ಬೆಂಗಳೂರಿನ ಮೂಲ ನಿವಾಸಿಗಳು. ನಾವು ಹೊರಗಿನಿಂದ ಬಂದವರೆಂಬ ಭಾವವೂ ಇದಕ್ಕೆ ಕಾರಣವಾಗಿತ್ತು. ಅಂಥದೊಂದು ಸ್ಥಿತಿಯನ್ನು ಆ ವರದಿಗಾರರು ನಿರ್ಮಿಸಿದ್ದರು.

ಈ ಜಿದ್ದಾಜಿದ್ದಿ ಕಾಳಗ ರೊಟೀನ್ ಸುದ್ದಿಗಳಿಗೆ ಅನ್ವಯಿಸುತ್ತಿರಲಿಲ್ಲ. ಬೆಳಗ್ಗೆ ೧೧ ರ ಸುಮಾರಿಗೆ ಆಯುಕ್ತರ ಕಚೇರಿಯ ಮಾಧ್ಯಮ ಕೋಣೆಯಲ್ಲಿ ಕುಳಿತು ಗೀಚಿಕೊಳ್ಳುವುದು ಸಾಮಾನ್ಯವಾದದ್ದು. ಈ ಸಂಜೆಯ ರಾಮಸ್ವಾಮಿಯವರು ಬೆಳಗ್ಗೆ ೧೦ ಕ್ಕೇ ಬಂದು ಎಲ್ಲ ಸುದ್ದಿಗಳನ್ನು ಪಟ್ಟಿ ಮಾಡಿಕೊಂಡು ಮಧ್ಯಾಹ್ನ ೧ ಕ್ಕೆ ಎಲ್ಲರಿಗೂ ಡಿಕ್ಟೇಷನ್ ಕೊಡುತ್ತಿದ್ದರು. ಸಾಮಾನ್ಯವಾಗಿ ಒಂದು ಆತ್ಮಹತ್ಯೆ, ಎರಡು ಕಳ್ಳತನ, ಒಂದೆರಡು ಬಂಧನ ಇರುತ್ತಿತ್ತು. ಒಂದೊಂದು ದಿನ ಏನೂ ಇಲ್ಲ.

ಕೆಲವೊಮ್ಮೆ ಮಹತ್ವದ ಆತ್ಮಹತ್ಯೆಯೇನಾದರೂ ನಡೆದಿದ್ದರೆ ಬೆಳಗ್ಗೆಯೇ ಗೊತ್ತಾಗುತ್ತಿತ್ತು. ಆಗ ಮೂರು ಮಂದಿಯಲ್ಲಿ ಯಾರಾದರೊಬ್ಬರು ಶವ ಬರೋ ಆಸ್ಪತ್ರೆಗೆ ಹೋಗಿ ಶವಾಗಾರದ ಮುಂದೆ ನಿಲ್ಲುತ್ತಿದ್ದೆವು. ಅಲ್ಲೆಲ್ಲಾ ಒಂದೊಂದು ಸುದ್ದಿ ಮೂಲಗಳು ಇದ್ದುದ್ದರಿಂದ ಶವಾಗಾರಕ್ಕೆ ಬರೋ ಹೆಣಗಳ ಬಗ್ಗೆ ಡೀಟೇಲ್ಸ್ ಸಿಗುತ್ತಿತ್ತು. ಓಡಿ ಹೋಗುತ್ತಿದ್ದೆವು. ಶವ ಕೊಯ್ದು ವಿವರ ಗೊತ್ತಾಗೋದು ಒಂದು ಕಥೆ. ಆದರೆ ಅಲ್ಲಿಗೆ ಬಂದ ಸತ್ತವರ ಬಂಧುಗಳನ್ನು ಮಾತನಾಡಿಸಿ “ಆತ್ಮಹತ್ಯೆಗೆ ಆಂಗಲ್’ ಹುಡುಕಿಕೊಳ್ಳುತ್ತಿದ್ದೆವು.
 
ನಾವೇ ಬುದ್ಧಿವಂತರೆಂದಲ್ಲ. ನಾವು ಹೋದ ಸುದ್ದಿ ಬೇರೆಯವರಿಗೂ ತಿಳಿಯುತ್ತಿತ್ತು. ನಾವು ಹೋಗಿ ಪಟ್ಟ ಪರಿಶ್ರಮಕ್ಕೆ ಫಲ (ಹೊಸ ಆಯಾಮ) ಸಿಕ್ಕರೆ ಮತ್ತೆ ಕಮೀಷನರ್ ಕಚೇರಿಗೇ ಬರುತ್ತಿರಲಿಲ್ಲ. ಊಟ ಮುಗಿಸಿ ನೇರವಾಗಿ ಕಚೇರಿಗೆ ಬರುತ್ತಿದ್ದೆವು. ಬಹಳ ಸ್ಕೂಪ್ ಎನ್ನೋದೇನಾದರೂ ಸಿಕ್ಕರೆ “ಗ್ರೂಪ್ ಕಾಲ್ಸ್’ ಬಿಟ್ಟರೆ (ನಮ್ಮ ಗುಂಪಿನವರಿಗೆ) ಇನ್ನಾರಿಗೂ ಸಿಕ್ಕುತ್ತಿರಲೇ ಇಲ್ಲ. ಬಹಳ ಗೌಪ್ಯವಾಗಿಯೇ ಕಾರ್‍ಯಾಚರಣೆ ಮುಗಿಸುತ್ತಿದ್ದೆವು.

ನಾನು ಆಗ ತಾನೇ ಪತ್ರಿಕೋದ್ಯಮಕ್ಕೆ ಆಗಮಿಸಿದವನು. ಮೊದಲು (ನನ್ನದೇ ಚರಿತ್ರೆ ಜಾಸ್ತಿಯಾಗುತ್ತೆ ಅಂತ ಅಂದುಕೊಳ್ಳಬೇಡಿ) ಹೊಸದಿಗಂತ ಪತ್ರಿಕೆಯಲ್ಲಿ ಅಪರಾಧ ವರದಿಗಾರನಾಗಿ ಸೇರಿಕೊಂಡೆ. ಇದು ದಿನಪತ್ರಿಕೆಯ ಇತಿಹಾಸ. ಅದಕ್ಕಿಂತ ಮೊದಲು ಮಾಸ ಪತ್ರಿಕೆಯಲ್ಲಿದ್ದೆ. ಆಕಾಶವಾಣಿಯ ಯುವವಾಣಿಯಲ್ಲಿ ಒಂದಷ್ಟು ಕಾರ್‍ಯಕ್ರಮ ನೀಡುತ್ತಿದ್ದೆ. ಆಕಾಶವಾಣಿ ಗೆಳೆಯರು ಬೆಳೆಸಿದ ಬಗೆ ನಿಜಕ್ಕೂ ಖುಷಿಯಾಗುವಂಥದ್ದು. ಇದನ್ನೆಲ್ಲಾ ಉಲ್ಲೇಖಿಸುತ್ತಿರುವುದಕ್ಕೆ ಪ್ರಮುಖ ಕಾರಣವಿಷ್ಟೇ.

ನಾವೂ ಮೂರು ಮಂದಿಯಷ್ಟೇ ಅಲ್ಲ ; ಬ್ರಹ್ಮಚಾರಿಗಳಾಗಿ ಇದ್ದ ಎಂಟೂ ಮಂದಿ ಯಾವುದೋ ಊರಿನಿಂದ ಬದುಕನ್ನು ಹುಡುಕಿಕೊಂಡು ಬಂದವರು. ಹುಲ್ಲುಕಡ್ಡಿಯಷ್ಟು ಸಿಕ್ಕ ಅವಕಾಶಗಳನ್ನೆಲ್ಲಾ ತಮ್ಮದಾಗಿಸಿಕೊಳ್ಳುವಲ್ಲಿ ಶಕ್ತಿ ಮೀರಿ ಪ್ರಯತ್ನಿಸಿದವರು. ಹಾಗಾಗಿ ಹಾಗೆ ಹುಲ್ಲುಕಡ್ಡಿಯನ್ನು ತೋರಿಸಿದ ಬಹಳಷ್ಟು ಮಂದಿಯಿದ್ದಾರೆ. ಅವರೆಲ್ಲರಿಗೂ ನಿಜಕ್ಕೂ ಋಣಿಯಾಗಿರಲೇಬೇಕು.

ಹೀಗೆ ಮೊದಲ ದಿನ ಕಮೀಷನರ್ ಕಚೇರಿಗೆ ಹೋದೆ. ಅಲ್ಲಿದ್ದ ಪಂಟರ್ (ಹಿರಿಯ ವರದಿಗಾರರು)ಗಳೆಲ್ಲಾ ನನ್ನನ್ನು ಮಿಕಿಮಿಕಿ ನೋಡತೊಡಗಿದರು. ಯಾರೊಡನೆ ಮಾತು ಆರಂಭಿಸುವುದೆಂದು ಯೋಚಿಸತೊಡಗಿದೆ. ಪಕ್ಕದಲ್ಲೇ ಕುಳಿತ ಒಬ್ಬರೊಡನೆ ಮೆಲ್ಲಗೆ ರಾಗ ತೆಗೆದೆ. ನಂತರ ಅವರು ನನ್ನನ್ನು ಎಲ್ಲರಿಗೂ ಪರಿಚಯಿಸಿದರು. ಅಷ್ಟರಲ್ಲಿ ನವೀನ್, ಹರ್ಷ ಸಿಕ್ಕರು. ಪರಿಚಯಿಸಿಕೊಂಡೆ. ಇವರಿಬ್ಬರೂ ಆಗಲೇ ಪಂಟರ್ ಗಳಾಗಿದ್ದರು.

ನನಗೂ ಅಂಥವರ ಆಶ್ರಯ ಬೇಕಿತ್ತು. ನನಗೆ ಯಾವುದೇ ಸುದ್ದಿಮೂಲಗಳಿರಲಿಲ್ಲ. ಇವರೇ ನನ್ನ ಸುದ್ದಿದಾತರು. ಹಾಗಾಗಿ ನಿತ್ಯವೂ ಸಂಜೆಯೊಮ್ಮೆ, ರಾತ್ರಿಯೊಮ್ಮೆ ಫೋನ್ ಮಾಡಿ ಸುದ್ದಿ ಪಡೆಯುತ್ತಿದ್ದೆ. ಹೇಗೋ ಸುದ್ದಿ ಹೊಂದಿಸಿಕೊಳ್ಳುವುದನ್ನು ಕಲಿತುಕೊಂಡೆ. ಕೆಲವೇ ದಿನಗಳಲ್ಲಿ ಅವರ ಸುದ್ದಿ ವಾರ್‌ನ ಗುಂಪಿನ ಸದಸ್ಯನಾದೆ.

ನಮ್ಮ ಎದುರಿನ ಗುಂಪಿಗೆ ನಿತ್ಯವೂ ಯಾವುದಾದರೊಂದು ಸುದ್ದಿ ಮಿಸ್ ಮಾಡಬೇಕೆಂಬುದೇ ನಮ್ಮ ಪ್ರತಿಜ್ಞೆ. ಅದಕ್ಕಾಗಿ ಲೇಟೆಸ್ಟ್ ಅಪರಾಧಕ್ಕಾಗಿ ಹದ್ದಿನಂತೆ ಕಾಯುತ್ತಿದ್ದೆವು. ನನ್ನ ಪತ್ರಿಕೆಯ ಡೆಡ್ ಲೈನ್ ಬೇಗ ಇತ್ತು. ಜತೆಗೆ ಮನೆ ದೂರ. ಹಾಗಾಗಿ ೧೦ ರಷ್ಟೊತ್ತಿಗೆ ಕಾರ್ಪೋರೇಷನ್ ತಲುಪಿಕೊಳ್ಳುತ್ತಿದ್ದೆ. ಇವರಿಬ್ಬರಿಗೆ ಹಕ್ಕ-ಬುಕ್ಕರೆನ್ನುತ್ತಿದ್ದರು. ಇಂಥ ಹರ್ಷ ಮತ್ತು ನವೀನ್ ಇಬ್ಬರೂ ನಿಧಾನವಾಗಿ ನಡೆದುಕೊಂಡು ಮನೆ ತಲುಪುವಾಗ ಮಧ್ಯರಾತ್ರಿ ಒಂದನ್ನು ಮೀರುತ್ತಿತ್ತು. ಆದರೂ ಮುಖದಲ್ಲೊಂದು ಗೆದ್ದ ನಗೆ, ಉತ್ಸಾಹ ಇತ್ತು.

ನವೀನ್ ಯಾವಾಗಲೂ ಹೇಳುತ್ತಿದ್ದ “ನಾಳೆ ಒಂದು ಸುದ್ದಿ ಮಿಸ್ಸಲ್ಲಾ…’. ಬೆಳಗ್ಗೆ ಎದ್ದ ಕೂಡಲೇ ಮೊದಲು ನೋಡುತ್ತಿದ್ದುದು ಪತ್ರಿಕೆಯ ಅಪರಾಧ ಸುದ್ದಿಗಳನ್ನು. ಯಾರಿಗೆ ಯಾರು ಚಕ್ ಕೊಟ್ಟೆವು ಎಂಬುದು ಎಸ್‌ಎಸ್‌ಎಲ್‌ಸಿ ಫಲಿತಾಂಶದಂತೆ ಪ್ರಕಟವಾಗುತ್ತಿತ್ತು. ನಮ್ಮದು ಮಿಸ್ ಆಗಿದ್ದರೆ ಕೈ ಕೈ ಹಿಸುಕಿಕೊಳ್ಳುತ್ತಿದ್ದೆವು. ನಮ್ಮ ಎದುರಿನ ಗುಂಪಿಗೆ ಮಿಸ್ ಆಗಿದ್ದರೆ ವಿಜಯೋತ್ಸವ. ಅಂದು ಕಮೀಷನರ್ ಕಚೇರಿಗೆ ಎಂದಿಗಿಂತ ಅರ್ಧಗಂಟೆ ಮೊದಲೇ ಬರುತ್ತಿದ್ದೆವು, ಎದುರಿನ ಗುಂಪಿನವರ ಪ್ರತಿಕ್ರಿಯೆಯ ವೀಕ್ಷಿಸಲು.

ಹೀಗೆ ಸ್ಕೂಪ್‌ಗೆ ಹಾತೊರೆಯುತ್ತಿದ್ದವರಿಗೆ ಸಿಕ್ಕ ದೊಡ್ಡ ಸ್ಕೂಪ್‌ನ್ನು ದಕ್ಕಿಸಿಕೊಂಡ ಬಗೆ ನಿಜಕ್ಕೂ ರೋಚಕ. ಎಲ್ಲೋ ಹೆಣ ಬಿದ್ದಿದೆ ಎಂದು ಹುಡುಕಲು ಹೋದವರಿಗೆ, ಜೀವಂತ ಶವದಂತಾಗಿದ್ದವ ಸಿಕ್ಕಿದ. ಅದೇ ಸ್ಕೂಪ್…!