ಇಂಥದೊಂದು ಮನೆಯ ಕತ್ತಲ ಕೋಣೆಯ ಮೇಲೆ ಮತ್ತೊಂದು ಅಟ್ಟವಿತ್ತು. ಅದರಲ್ಲಿ ಮತ್ತೆರಡು ಕೋಣೆಯಿತ್ತು. ಅದರಲ್ಲೊಂದರಲ್ಲಿ ದೆವ್ವವಿದೆ ಎಂದು ಭಯ ಹುಟ್ಟಿಸಲಾಗಿತ್ತು. ಯಾರೂ ಹೋಗಲು ಸಿದ್ಧರಿರಲಿಲ್ಲ. ಅಲ್ಲಿಗೆ ಏಳು ಕೋಣೆಗಳ ಕಥೆ ಮುಗಿಯಿತು. ಇಂಥ ಸುಂದರವಾದ ಮನೆಯನ್ನು ಕೊಳ್ಳಲು ನಮಗೆ ಸಹಕರಿಸಿದವರೆಷ್ಟು ಮಂದಿ ? ಅವರಿಗೆಲ್ಲಾ ನಮಸ್ಕಾರ.

ಮತ್ತೆ ಟ್ರ್ಯಾಕ್‌ಗೆ ಬರುತ್ತೇನೆ. ಈಗಾಗಲೇ ಸ್ಥೂಲವಾಗಿ ಹೇಳಿದ್ದೇನೆ. ಈ ಮನೆಯ ಮುಂಗಡ ಹಣಕ್ಕೆ ನವೀನ್ ಮತ್ತು ಹರ್ಷ ಕಷ್ಟಪಟ್ಟ ಬಗೆಯನ್ನು. ಆಗ ಎಂದರೆ ೧೯೯೮ ರಲ್ಲಿ, ಕೇವಲ ಹತ್ತು ವರ್ಷಗಳ ಅಂತರದ ಮಾತು. ದೊಡ್ಡ ವ್ಯತ್ಯಾಸವಲ್ಲ ಎನಿಸುತ್ತೆ. ನಮ್ಮಪ್ಪನ ಕಾಲದ ಮಾತನ್ನು ಕೇಳಿದವರಿಗೆ ಈ ಕಾಲ ದೊಡ್ಡ ಅಂತರವಲ್ಲ. ಆದರೆ ಈ ಹತ್ತು ವರ್ಷಗಳಲ್ಲೇ ಜೀವನ ಮಟ್ಟದಲ್ಲಿ ಸಾಕಷ್ಟು ಬದಲಾವಣೆಯಾಗಿದೆ.

ಇದೆಲ್ಲಾ ಒತ್ತಟ್ಟಿಗಿರಲಿ. ಮನೆಯ ಮೇಲೆ ಮೋಹಿತರಾದ ನವೀನ್ ಮತ್ತು ಹರ್ಷ ಕುಳಿತು ಮುಂಗಡ ಹಣ ಹೊಂದಿಸಲು ಆಲೋಚಿಸತೊಡಗಿದರು. ಸಿಕ್ಕ ಮಾರ್ಗಗಳು ಕೆಲವೇ ಕೆಲವು. ಟೈಲರ್ ರಮೇಶ್ ಮತ್ತೆ ಸಹಾಯಕ್ಕೆ ಬಂದರು, ಒಂದಷ್ಟು ಹಣ ಕೊಟ್ಟರು. ನವೀನ್ ಒಂದಿಷ್ಟು ಹಣ ತಂದ. ಹರ್ಷನೂ ಹಣ ಹೊಂದಿಸಲು ಶತ ಪ್ರಯತ್ನ ಮಾಡಿದ. ಅವನ ಗೆಳತಿ ಪತ್ರಕರ್ತೆ ನೀಳಾ ತನ್ನ ಮಹತ್ವದ ಕೆಲಸಕ್ಕೆಂದು ಇಟ್ಟುಕೊಂಡ ಹತ್ತು ಸಾವಿರ ರೂ. ಗಳನ್ನು ಸಹಾಯವಾಗಿ ಕೊಟ್ಟಳು. ನವೀನ್ ಮತ್ತೆ ಬ್ಯಾಂಕ್‌ಗೆ ಲೋನ್‌ಗೆ ಅರ್ಜಿ ಹಾಕಿದ. ಇನ್ನೂ ಹೀಗೇ…ಯಾರ್ ಯಾರೋ ಸಹಾಯ ಮಾಡಿದರು ;ಸಂಬಂಧಿಕರನ್ನು ಬಿಟ್ಟು. 

ಜತೆಗೆ ಎಲ್ಲವೂ ಸುಖಾಂತಗೊಳ್ಳುತ್ತದೆ ಎನ್ನುವಾಗ ನಾವು ಪ್ರವೇಶವಾಗಿದ್ದು. ಪೊಲೀಸ್ ಕಮೀಷನರ್ ಕಚೇರಿಯಲ್ಲಿ ಒಮ್ಮೆ ಕುಳಿತು ಚರ್ಚಿಸುತ್ತಿದ್ದಾಗ ಹೀಗೆ ಲೋಕಾಭಿರಾಮಕ್ಕೆ ನಾವ್ಯಾಕೆ ಒಟ್ಟಿಗೆ ಇರಬಾರದೆಂದೆನಿಸಿತು. ಆ ಕುರಿತು ಪ್ರಸ್ತಾಪವೂ ಆಯಿತು. ನಾನಾಗ “ಅರವಿಂದ ಸಿಗದಾಳ್‌ನೊಂದಿಗೆ ಚರ್ಚಿಸಿ ತಿಳಿಸುವೆ’ ಎಂದು ಹೇಳಿದ್ದೆ. ಅವನಿಗೆ ಕಚೇರಿಗೆ ಕೊಂಚ ದೂರವಾಗುತ್ತಿತ್ತೇನೋ ? ನನಗೆ ಇವರೊಂದಿಗೆ ಸೇರಿದ್ದರೆ ನನ್ನ ಕೆಲಸಕ್ಕೆ ಹತ್ತಿರವಾಗುವುದಂತೂ ಖಚಿತವಾಗಿತ್ತು.

ನನಗೆ ಊಟವೆಂದರೆ ಕೊಂಚ ಇಷ್ಟ. ಬೇಕಾದ್ರೆ ತಿಂಡಿಪೋತ ಎಂದುಕೊಳ್ಳಿ, ಬೇಸರವಿಲ್ಲ. ನಾನು ನನ್ನ ದೊಡ್ಡಮ್ಮ (ನನ್ನನ್ನು ಸಾಕಿದವರು)ನ ಆಶ್ರಯದಲ್ಲಿ ಬೆಳೆದೆ. ಅವರು ಎಂದಿಗೂ ನನಗೆ ತಿಂಡಿಗೆ ಕಡಿಮೆ ಮಾಡಲಿಲ್ಲ. ನಮ್ಮ ಮನೆಯಲ್ಲಿ ಉಳಿದ ಅಕ್ಕ, ಅಣ್ಣ-ತಮ್ಮನಿಗೆ ಹಸಿವು ಇಂಗಿಸುವುದು ಕಷ್ಟವೆನಿಸಿದ್ದರೂ ನನಗೆ ಕೊರತೆಯಿರಲಿಲ್ಲ. ಕಾಫಿ-ಟೀ ಕುಡಿಯುವ ಅಭ್ಯಾಸಕ್ಕೆ ಗುಡ್‌ಬೈ ಹೇಳಿ ಅದರ ಬದಲೆಲ್ಲಾ ಹೊಟ್ಟೆಯಲ್ಲಿ ತಿಂಡಿ-ಊಟಕ್ಕೇ ಜಾಗ ಮಾಡಿಕೊಂಡೆ. ಹಾಗಾಗಿ ತಿಂಡಿಪೋತ !

ಊಟ ಇಷ್ಟವಾದ ಮೇಲೆ ಅಡುಗೆಯ ಬಗ್ಗೆಯೂ ಒಲವು. ಕೊಂಚ ಅಡುಗೆ ಮಾಡಲು ಕಲಿತಿದ್ದೆ. ಹಾಗಾಗಿ ನಮ್ಮ ಮನೆಯಲ್ಲಿ ಆಗಾಗ್ಗೆ ಪ್ರಯೋಗಗಳು ನಡೆಯುತ್ತಿದ್ದವು. ಭಾನುವಾರದಂದು ಫಲಾವು, ಬಿಸಿಬೇಳೆಬಾತ್ ನಮ್ಮನೆ ಒಳಗೆ ಕಾಲಿಡುತ್ತಿದ್ದವು. ಅದು ಹೇಗಿರುತ್ತಿತ್ತೋ ? ತಿಂದ ನವೀನ್, ಸಿಗದಾಳ್, ಹರ್ಷನಿಗೆ ಕೇಳಬೇಕು. ಈ ಹಿನ್ನೆಲೆಯಲ್ಲಿ ಗೆಳೆಯರನ್ನೂ ಕರೆದು ಹರಟುತ್ತಾ ಊಟ ಮಾಡುತ್ತಿದ್ದೆವು.

ಆದೂ ರಾತ್ರಿಯೇ. ನವೀನ್ ಮತ್ತು ಹರ್ಷ ನನ್ನೊಡನೆ ಮನೆಗೆ ಬಂದರು. ಮಾಡಿದ್ದುಣ್ಣೋ ಮಾರಾಯಗಳಾ ಎಂದು ಎಲ್ಲರೂ ಊಟ ಮಾಡಿದೆವು. ಆಮೇಲೆ ನವೀನ್ ಮತ್ತು ಹರ್ಷ ಇಬ್ಬರೂ ನಮಗೆ ಅಹ್ವಾನವಿತ್ತರು. ಸಿಗದಾಳ್ ತಿಳಿಸುವುದಾಗಿ ಹೇಳಿದ. ಮತ್ತೊಂದು ದಿನ ನಾವು ಎನ್. ಆರ್. ಕಾಲೋನಿ ಬೇಕರಿ ಬಳಿ ನಿಂತು ಚರ್ಚಿಸಿದೆವು. ಸಿಗದಾಳ್ ಒಪ್ಪಿಕೊಂಡ. “ಎಲ್ಲರೊಟ್ಟಿಗೆ ಇರೋಣ. ಬದುಕಿನ ಅನುಭವ ಡಿಫರೆಂಟಾಗಿರುತ್ತೆ’ ಎಂದ. ಆಗಲೂ ಮುಂಗಡ ಹಣದ ಸಮಸ್ಯೆ ಎದುರಾಯಿತು. ನನ್ನಲ್ಲಿರಲಿಲ್ಲ. ನನ್ನ ಪಾಲಿನದೂ ಅವನೇ ಕೊಡುವುದಾಗಿ ಹೇಳಿದ. ನಾನು ಒಪ್ಪಿಗೆ ಸೂಚಿಸಿದೆ.

ಇನ್ನು ಮನೆ ನೋಡುವ ಕೆಲಸ. ಬಾಳ ಸಂಗಾತಿಯನ್ನು ಆಯ್ಕೆ ಮಾಡುವಷ್ಟೇ ಸಂಭ್ರಮ ನಮ್ಮದಾಗಿತ್ತು. ಅದಕ್ಕೆ ಕಾರಣವಿಷ್ಟೇ. ಅವರಿಬ್ಬರೂ ಮನೆಯ ಬಗ್ಗೆ ಬಹಳ ಹೊಗಳಿದ್ದರು. ಪ್ರತಿ ಅಂಗುಲ ಅಂಗುಲವನ್ನೂ ಹರ್ಷ ವಿವರಿಸಿದ್ದ. ಒಂದು ಭಾನುವಾರ (ನೆನಪಿನ ಲೆಕ್ಕಾಚಾರ) ಬೆಳಗ್ಗೆ ನಮ್ಮ ಸವಾರಿ ಮನೆಯತ್ತ ಧಾವಿಸಿತು. ಟೈಲರ್ ರಮೇಶ್ ಅವರು, ಮನೆ ಮಾಲೀಕರಿಂದ ಬೀಗ ಪಡೆದು ಬಂದು ಮನೆ ತೋರಿಸಿದರು. ಒಳಗೆಲ್ಲಾ ಸುತ್ತಿ ನೋಡಿದಾಗ ಖುಷಿಯಾಯಿತು. ಹರ್ಷ ಸುಳ್ಳು ಹೇಳಿರಲಿಲ್ಲ. ಮನೆ ನಮ್ಮೊಳಗೆ ಹೊಸದೊಂದು ಕನಸನ್ನು ಕಟ್ಟಿ ಬಿಟ್ಟಿತು.

ಇದಕ್ಕೆಲ್ಲಾ ಬೆಸುಗೆ ಹಾಕುವಂಥ ಘಟನೆ ಒಂದು ನಡೆಯಿತು. ನಾವೋ ಪತ್ರಕರ್ತರು. ಸಿಗದಾಳನಿಗೆ ಇಷ್ಟೊಂದು ಮಂದಿ ಪತ್ರಕರ್ತರೊಡನೆ ಕುತೂಹಲದಿಂದ ಜೀವನ ಸಾಗಿಸುವ ತವಕ. ಇದಕ್ಕೆ ಶೃಂಗವೆನ್ನುವಂತೆ ನಡೆದ ಘಟನೆಯಲ್ಲಿ ಇಂಗ್ಲೆಂಡ್‌ನ ಹುಡುಗನೊಬ್ಬ ಕೇಂದ್ರ ಪಾತ್ರವಾಗಿದ್ದ. ಮುಂದಿನ ಕಂತಿನಲ್ಲಿ ಅದೇ ಪ್ರಧಾನ ಭಾಗ.