ಪ್ರವೀಣ್ ಬಣಗಿ (ಚಿತ್ರ: ಪ್ರವೀಣ್ ಬಣಗಿ)

ಸುಮ್ಮನೆ ವೈಭವೀಕರಿಸುವ ಅಗತ್ಯವಿಲ್ಲ. ಕೊಡಚಾದ್ರಿಗೊಂದು ಅಂಥ ಸೊಬಗಿದೆ. ಅದನ್ನು ಉತ್ಪ್ರೇಕ್ಷೆ ಮಾಡಿಕೊಂಡು ಹೇಳಬೇಕಾಗಿಲ್ಲ. ಕೆಲ ವರ್ಷಗಳ ಹಿಂದೆ ಕೊಡಚಾದ್ರಿಯನ್ನು ನೋಡಿದ್ದೆ. ಆದರೆ ಆಗ ಸೊಬಗನ್ನು ಅರ್ಥೈಸಿಕೊಳ್ಳುವ ವಯಸ್ಸಾಗಿರಲಿಲ್ಲ, ಅದನ್ನು ವ್ಯಾಖ್ಯಾನಿಸುವುದಾಗಲೀ, ವರ್ಣಿಸುವುದಕ್ಕಾಗಲೀ ಬರುತ್ತಿರಲಿಲ್ಲ. ಸುಮ್ಮನೆ ಹೋಗಿ ಬಂದೆ. ಒಂದರ್ಥದಲ್ಲಿ ಹೇಳುವುದಾದರೆ “ಹೋದ ಪುಟ್ಟ ಬಂದ ಪುಟ್ಟ’ ಎನ್ನುವ ಹಾಗೆಯೇ.

ಮಾ. ೬ ರಂದು ಕೊಡಚಾದ್ರಿಗೆ ಹೋದ ಪ್ರವಾಸ ಹಾಗಾಗಲಿಲ್ಲ. ಅತ್ಯಂತ ಖುಷಿ ನೀಡಿತು. “ಮಂಥನ’ದ ಗೆಳೆಯರು ಎಲ್ಲರಂತೆ ನನಗೂ ಕರೆದಿದ್ದರು. ಈ ಹಿಂದೆ ಎರಡು ಬಾರಿ ಅವರ ಸಾಹಿತ್ಯ-ಸಂಸ್ಕೃತಿಯ ಚರ್ಚೆಗೆ ನಾನಾ ಕಾರಣಗಳಿಂದ ಒಳಗೊಳ್ಳಲು ಆಗಿರಲಿಲ್ಲ (ಅಂದ ಹಾಗೆ ನಾನೇನೂ ಚರ್ಚಾಪಟುವೂ ಅಲ್ಲ. ಸುಮ್ಮನೆ ಎಲ್ಲರೊಡಗೂಡಿ ಒಂದಷ್ಟು ಹೊತ್ತು ಕಳೆಯುವುದಕ್ಕೆ ಖುಷಿಯಷ್ಟೇ). ತೀರ್ಥಹಳ್ಳಿ ಪುರುಷೋತ್ತಮರಾಯರ ಅಂಗಳಕ್ಕೂ ಬರಲಾಗಲಿಲ್ಲ.
ಆದರೆ ಕೊಡಚಾದ್ರಿ, ಅದರಲ್ಲೂ ರಾತ್ರಿ ಪೂರ್ತಿ ಹರಟುತ್ತಾ ನಿದ್ದೆ ಕಚಗುಡುವುದು ಎಂದರೆ ಕೊಂಚ ಖುಷಿ ನೀಡಿತು. ಅದಕ್ಕಾಗಿ ಹೇಗೋ ಹೊರಟೆ. ಜತೆಗೆ ಗೆಳೆಯ ಪ್ರವೀಣ ಬಂದಿದ್ದ. ಅವನ ಜತೆಗೆ ಕ್ಯಾಮೆರಾ ಸಹ ಇತ್ತು. ಅವನಿಗೆ ಫೋಟೋ ತೆಗೆಯುವುದು ಒಂದರೆ ಹುಚ್ಚು.

ಬೆಂಗಳೂರಿನಿಂದ ಗೆಳೆಯರಾದ ಜಿ. ಬಿ. ಹರೀಶ, ಚೈತನ್ಯ ಹೆಗಡೆಯವರೂ ಬಂದು ಶಿವಮೊಗ್ಗದಲ್ಲಿ ಸೇರಿಕೊಂಡರು. ಉಳಿದ ಗೆಳೆಯರೊಂದಿಗೆ ತಿಂಡಿ ಮುಗಿಸಿ ಸಂಪೇಕಟ್ಟೆಗೆ ಬಸ್ಸು ಹತ್ತಿದಾಗ ೮.೩೦. ಗಜಾನನ ಬಸ್ಸು. ರಸ್ತೆ ಪರವಾಗಿಲ್ಲ ಎನ್ನುವಂತಿತ್ತು. ಸುಮಾರು ೧೧. ೪೫ ರ ಹೊತ್ತಿಗೆ ಸಂಪೇಕಟ್ಟೆಗೆ ಇಳಿದು ನಂತರ ನಿಸರ್ಗಧಾಮದತ್ತ ಪ್ರಯಾಣ. ಅಲ್ಲಿ ಹಿನ್ನೀರಿನ ಸವಿಯುಂಡು, ನಿಸರ್ಗಧಾಮದಲ್ಲಿ ಊಟ ಮಾಡಿ ಹೊರಟೆವು.

ಕೊಡಚಾದ್ರಿಗೆ ಟ್ರಕ್‌ನಲ್ಲಿ ಏರಿದ್ದೂ ಸಹ ಒಂದು ಮಾದರಿಯ “ಟ್ರಕ್ಕಿಂಗ್’. ಮಂಗಳೂರಿನಿಂದ ಬಂದ ಗೆಳೆಯರು, ಶಿವಮೊಗ್ಗದಿಂದಲೂ ಬಂದಿರುವವರು ಎಲ್ಲಾ ಟ್ರಕ್ ಏರಿ ಕುಳಿತೆವು. ನಿಟ್ಟೂರಿನವರೆಗೂ ಏನೂ ಅನ್ನಿಸಲಿಲ್ಲ. ಕೊಡಚಾದ್ರಿಯ ಹೆಬ್ಬಾಗಿಲಿಗೆ ಬಂದವು ನೋಡಿ, ಜೀವ ಬಾಯಿಗೆ ಬರಲಿಲ್ಲವಷ್ಟೇ.
ಕೆಂಪು ಧೂಳು ಆವರಿಸಿಕೊಳ್ಳುತ್ತಿತ್ತು. ಅದರ ಮಧ್ಯೆ ಕೆಲವು ಗೆಳೆಯರು ಸಂಪೇಕಟ್ಟೆಯಲ್ಲಿ ಕೊಂಡ ಅಡಿಕೆ ಟೊಪ್ಪಿ ತಲೆಗೇರಿಸಿಕೊಂಡು ಕೂದಲು ಕೆಂಪಗಾಗದಂತೆ ರಕ್ಷಿಸಿಕೊಂಡರು. ಆದರೆ ದೇಹ ಕೆಂಪಗಾಗಿಸದೇ ಸೂರ್‍ಯನೂ ಸುಮ್ಮನಿರಲಿಲ್ಲ. ಧೂಳು ಸುತರಾಂ ಬಿಡಲಿಲ್ಲ. ಒಂದು ತಿರುವು ಬರುವಾಗಲೂ ಮಂಥನದ ವಾದಿರಾಜ್ “ಇನ್ನು ಎರಡೇ ಸುತ್ತು’ ಎನ್ನುತ್ತಿದ್ದರು. ಖುಷಿಯ ಸಂಗತಿಯೆಂದರೆ ಮತ್ತೆ ಅಷ್ಟೇ ಸುತ್ತು ಬರುತ್ತಿದ್ದವು !

ಪಕ್ಕದಲ್ಲಿ ಪ್ರಪಾತ, ಮತ್ತೊಂದು ಬದಿಯಲ್ಲಿ ಗುಂಡಿ. ಹಾಗೆಂದು ಮಧ್ಯದಲ್ಲಿ ರಸ್ತೆ ಸರಿಯಿತ್ತೆಂದೆಂದುಕೊಳ್ಳಬೇಡಿ. ಅಲ್ಲಿಯೂ ಗುಂಡಿಯೇ. ಟ್ರಕ್‌ನ ಗಾಲಿ ಚಲಿಸುವುದಿಲ್ಲ, ಕುಣಿದಾಡುತ್ತದೆ. ಅದಕ್ಕೆ ತಕ್ಕಂತೆ ನಾವೂ ದೇಹವನ್ನು ಕುಣಿಸುತ್ತಿದ್ದೆವು. ಮಧ್ಯೆ ಮಧ್ಯೆ ಮಂಗಳೂರಿನ ಪ್ರಶಾಂತ ಹುಡಿ ಹಾರಿಸುತ್ತಿದ್ದರು. ಕೆಂಪು ಧೂಳಿಗೆ ಆ ಹುಡಿಯೂ ಸೇರಿ ಹೋಗುತ್ತಿತ್ತು. ಯಾರಿಗೂ ಕಾಣಿಸುತ್ತಿರಲಿಲ್ಲ. ಕೆಲವರು ನಕ್ಕದ್ದಷ್ಟೇ ತೋರುತ್ತಿತ್ತು.

ಒಟ್ಟು ೧೩ಕ್ಕೂ ಹೆಚ್ಚು ತಿರುವು ಸುತ್ತಿ ಮೇಲಕ್ಕೇರಿ ಟ್ರಕ್ ನಿಂತಾಗ ಎಲ್ಲರಿಗೂ ಕೊಡಚಾದ್ರಿ ಸಾಕು ಬೇಕಾಗಿತ್ತು. ರಸ್ತೆಯ ಅವ್ಯವಸ್ಥೆ ಎಂದು ಹೀಗಳೆಯಬೇಕಿಲ್ಲ. ರಸ್ತೆ ಬಂದಿದ್ದರೆ ಬೆಂಗಳೂರಿನ ಯಾವುದಾದರೊಂದು ಏರನ್ನು ಹತ್ತಿ ಬಂದಂತಾಗುತ್ತಿತ್ತು. ಈ ಖುಷಿ ಇರುತ್ತಿರಲಿಲ್ಲ. ಕೊಡಚಾದ್ರಿಗೆ ಹೋಗುವುದೆಂದರೆ ಪಕ್ಕದ ಲೇಔಟ್‌ಗೆ ಹೋದಷ್ಟೇ ಸಲೀಸು ಎನ್ನಿಸುತ್ತಲೂ ಇತ್ತು. ಆಗಲೇ ಸಂಜೆ ಪಡುವಣದಲ್ಲಿ ಹೊರಟಿದ್ದ. ಸುಮಾರು ಎರಡು ಕಿ. ಮೀ ನಷ್ಟು ಎತ್ತರ ಏರಿ ಮುಳುಗಿ ಹೋಗುವ ಸೂರ್‍ಯನನ್ನು ನೋಡಬೇಕಿತ್ತು. ಕುಳಿತೇ ಹೈರಾಣಾಗಿದ್ದ ನಮಗೆ ಹತ್ತುವುದೂ ಕಷ್ಟವೆನಿಸಿತ್ತು.

ಆದರೆ ಒಂದೇ ದಿನ, ಅದರಲ್ಲೂ ಒಂದೇ ರಾತ್ರಿ ಅಲ್ಲಿ ತಂಗುವ ಯೋಚನೆ ಇದ್ದಿದ್ದರಿಂದ ಮತ್ತೊಂದು ಸಂಜೆ ಸಿಗಲು ಸಾಧ್ಯವೇ ಇರಲಿಲ್ಲ. ಹಾಗಾಗಿ ಸುಸ್ತನ್ನೆಲ್ಲಾ ಹೆಗಲ ಮೇಲೆ ಹೊತ್ತುಕೊಂಡು ಹೊರಟೆವು. ಕೊನೆಗೂ ಮೇಲೆರಿದಾಗ ಸೂರ್‍ಯ ಕೊನೇ ಮೆಟ್ಟಿಲಿನಲ್ಲಿದ್ದ. ಸುತ್ತಲೂ ಕೆಂಪನೆಯ ಬಣ್ಣ ಬಳಿದುಕೊಂಡಿದ್ದ. ಅಷ್ಟು ದೂರ ಕೆಂಪು ಧೂಳಿನಲ್ಲಿ ಒದ್ದಾಡಿ ಮೇಲೆಹೋದ ನಮ್ಮ ಮುಖದಲ್ಲೂ ಸೂರ್‍ಯನ ಬಣ್ಣವೇ ಪ್ರತಿಫಲಿಸುತ್ತಿತ್ತು.

ಅಲ್ಲೇ ಇದ್ದ ಬೆಟ್ಟದ ಮೇಲೆ ಕೊಂಚ ಕುಳಿತು ವಿಶ್ರಮಿಸಿದೆವು. ಕೊಂಚ ದಣಿವಾರಿತು. ವಾಪಸು ಬೆಟ್ಟ ಇಳಿಯಲು ಹೊರಟೆವು. ಹತ್ತಿರದ ಶಂಕಾರಾಚಾರ್‍ಯರನ್ನು ಕಂಡು ಇಳಿಯುವಾಗ ಬೆಟ್ಟದ ರಮಣೀಯತೆ ಕಂಡು ಅವಾಕ್ಕಾದೆವು. ಎಂಥ ಚೆಂದದ ಕೊಡಚಾದ್ರಿ ? ಎಂಥ ಸಂಭ್ರಮದ ಹಸಿರು ? ಇಳಿಜಾರಿನ ವೈಭವದ ಮಧ್ಯೆಯೇ ಕೊಂಚ ಯಾಮಾರಿದರೂ ಸೀದಾ ಪ್ರಪಾತದಂಥ ಕಣಿವೆಗೆ !

ಕತ್ತಲಾಗುವಷ್ಟರಲ್ಲಿ ಕೆಳಗೆ ಇಳಿದೆವು. ಒಂದಷ್ಟು ಹೊತ್ತು ಕುಳಿತುಕೊಳ್ಳುವಾಗ ಮಂಥನದ ಅರುಣ್ ಕುಮಾರ್, ವಾದಿರಾಜ್, ಸಂತೋಷ್ ಮತ್ತಿತರರು ಜಮಖಾನ ಹಾಸಿ ರಾತ್ರಿಯ ಜಾಗರಣೆಗೆ ಸಿದ್ಧತೆ ನಡೆಸಿದ್ದರು. ಸುಮಾರು ೧೦.೩೦ ಸುಮಾರಿಗೆ ಜಾಗರಣೆ ಆರಂಭವಾಯಿತು. ಮೊದಲು ಪರಿಚಯ. ಎಲ್ಲರೂ ಸ್ವ ವಿವರ ನೀಡಿದರು. ನಂತರ ಪುರೋಹಿತರಾದ ಪರಮೇಶ್ವರ ಭಟ್ಟರ ಬಂದು ಅಲ್ಲಿನ ಮಹಿಮೆ ವಿವರಿಸಿದರು. ಅದರ ಮಧ್ಯೆ ತಮ್ಮ ಕಷ್ಟ ಸುಖವನ್ನೂ ಉಲ್ಲೇಖಿಸಿದರು. ಕೊಡಚಾದ್ರಿಗೆ ರಸ್ತೆ ತರುವ ಲೋಕೋಪಯೋಗಿ ಇಲಾಖೆಯ ಆಲೋಚನೆ ಬಗ್ಗೆಯೂ ಪ್ರಶ್ನೆ ಬಂತು. ಭಟ್ಟರು ಏನೂ ಉತ್ತರಿಸಲಿಲ್ಲ. ಬಂದರೂ ಸೈ, ಬರದಿದ್ದರೂ ಸೈ, ಎಲ್ಲರಿಗೂ ಒಳ್ಳೆಯದಾಗೋ ಹಾಗೆ ಆಗಲಿ ಎಂದರು.
ಆಮೇಲೆ ಉಪ್ಪಿಟ್ಟಿನ ಸಮಾರಾಧನೆ. ಬೇಕಾದಷ್ಟು ತಿಂದು ಟೀ ಕುಡಿದು ಕುಳಿತ ಮೇಲೆ ಜಿ. ಬಿ. ಹರೀಶ್ “ಶಿವ’ ನ ಕುರಿತು ಮಾತನಾಡಿದರು. ಶಿವನ ಕುರಿತು ಬಹಳಷ್ಟು ಮಾಹಿತಿ ಒದಗಿಸಿದರು. ಶಿವ ಎಂದರೆ ಮಂಗಳಕರನೇ ಹೊರತು ಅಮಂಗಲಕರನಲ್ಲ ಎಂದರು. ಒಳ್ಳೆ ಚರ್ಚೆ ನಡೆಯಿತು. ಬಿ. ವಿ. ವಸಂತಕುಮಾರ್ ದನಿಗೂಡಿಸಿದರು.

ಅನಂತರ (ನಿರ್ದೇಶಕ : ಮಜಿದ್ ಮಜ್ದಿ) “ಚಿಲ್ಡ್ರನ್ ಆಫ್ ಹೆವನ್’ ಇರಾನಿ ಚಿತ್ರವನ್ನು ಪ್ರದರ್ಶಿಸಲಾಯಿತು. ಆ ಕುರಿತು ಆರೋಗ್ಯಕರವಾದ ಚರ್ಚೆ ನಡೆಯಿತು. ನಾನೂ, ಪ್ರವೀಣ ನಮಗೆ ಅರ್ಥವಾದದ್ದನ್ನು ಹೇಳಿದೆವು. ಮಹೇಂದ್ರ ಅವರು ಅಕಿರಾ ಕುರಸೋವಾನ “ಡ್ರೀಮ್ಸ್’ ಚಲನಚಿತ್ರವನ್ನು ತೋರಿಸುವ ಮೂಲಕ ಕಲಾ ಸೌಂದರ್ಯವನ್ನು ಸವಿಯುವ ಬಗ್ಗೆ ವಿವರಿಸಿದರು. ನಂತರ ಬಿ. ವಿ. ವಸಂತಕುಮಾರ್ ಅವರು ಕಾವ್ಯದಲ್ಲಿ ಶಿವನ ಕುರಿತು ಮಾತನಾಡಿದರು. ಒಟ್ಟೂ ಆ ಜಾಗರಣೆಯಲ್ಲಿ ಲೋಹಿಯಾರಿಂದ ಹಿಡಿದು ಕೆಎಸ್‌ನ ವರೆಗೂ ಬಂದಿದ್ದರು. ಹ್ಞಾಂ, ಮರೆತೇ ಹೋಗಿತ್ತು. ಈ ಮಧ್ಯೆಯೇ ಬಾಳೆಕಾಯಿ ಚಿಪ್ಸ್, ಕಡ್ಲೇಬೀಜ, ಬಿಸ್ಕತ್, ಟೀ ಎಲ್ಲವೂ ಸರಬರಾಜಾಗಿತ್ತು. ಮಧ್ಯೆ ಸಿಂಚನರ ಹಾಡು. ಭಾವ ತುಂಬುವ ಸಾಲುಗಳು. ಜತೆಗೆ “ಜೋಕುಮಾರ’ ಗಿರಿಧರ್ ಉದ್ಯಾವರರ “ಪ್ರೇಮ’ ಭರಿತ ಪ್ರಶ್ನೆಗಳು, ಜೋಕುಗಳು. ಒಟ್ಟು ಉಂಡು ಮಲಗುವಷ್ಟು ಸಂತಸ. ಆದ್ರೆ ಮಲಗುವಂತಿರ್ಲಿಲ್ಲ. ಜಾಗರಣೆಯಲ್ಲವೇ …?!

ಎಲ್ಲಾ ಮುಗಿಸಿ ಬೆಳಗ್ಗೆ ಆರರ ಸುಮಾರಿಗೆ ಇಳಿಯಲು ತೊಡಗಿದಾಗ ಹತ್ತುವುದೇ ಕಷ್ಟವೆಂದು ತಿಳಿದಿದ್ದ ನಮಗೆ ಇಳಿಯುವುದೂ ಅದಕ್ಕಿಂತ ಕಷ್ಟ. ಚೂರು ಬ್ರೇಕ್ ಫೇಲ್ ಆದರೂ ನಮ್ಮ ಲೈಫೇ ಫೇಲ್. ಪ್ರತಿಯೊಬ್ಬರೂ ಉಸಿರು ಬಿಗಿಹಿಡಿದೇ ಇದ್ದೆವು. ಆದರೆ ನಿಜಕ್ಕೂ ನಮ್ಮ ಟ್ರಕ್ ಅನ್ನು ಚಲಾಯಿಸಿದ ಮಹಾನುಭಾವರಿಗೆ ಥ್ಯಾಂಕ್ಸ್ ಹೇಳಲೇಬೇಕು. ಹೇಳಿದೆವು ಅನ್ನಿ.

ವಾಸಪು ಸಂಪೇಕಟ್ಟೆಗೆ ಬಂದು ಶಿವಮೊಗ್ಗದ ಬಸ್ಸು ಹತ್ತಿದಾಗ ನಿದ್ರೆ ಎಳೆದೊಯ್ದಿದ್ದು ಎಲ್ಲಿಗೋ, ಆಗಲೂ ಕೊಡಚಾದ್ರಿ ಕಣ್ತುಂಬಿಕೊಂಡಿತ್ತು.  ಹೊಸಬರು ಒಂದಿಷ್ಟು ಮಂದಿ ಗೆಳೆಯರಾದರು. ಇಮೇಲ್, ಫೋನ್ ನಂಬ್ರ ಪಡೆದುಕೊಂಡೆ. ಒಳ್ಳೆ ಅನುಭವ ಕೊಟ್ಟ ಮಂಥನದ ಗೆಳೆಯರಿಗೆ ಧನ್ಯವಾದ.   
 ಸಾಗುತ್ತಿರುವ ಬದುಕಿನ ಮೆರವಣಿಗೆಗೆ ಒಂದಷ್ಟು ಕಳೆ ಬರುವಂಥದ್ದೇ ಇಂಥ ಸೊಗಸುಗಳಿಂದ. ನನ್ನ ಬದುಕಿನ ಮೆರವಣಿಗೆಯಲ್ಲಂತೂ ಅಂದು ಮತ್ತಷ್ಟು ಮಂದಿ ಬಂದು ಸೇರಿದರು. ವೈಭವ ತುಂಬಿದರು. ಇನ್ನಷ್ಟು ದಿನಕ್ಕೆ ಬರವಿಲ್ಲ !