ಹರ್ಷ, ನವೀನ್, ಅರುಣ್ ಹಾಗೂ ಯೋಗಿಶ್ ಆಗಲೇ ಹಲಸೂರಿನ ಜೋಗುಪಾಳ್ಯದಲ್ಲಿ ಒಂದೇ ರೂಮಿನಲ್ಲಿದ್ದರು. ಜತೆಗೆ ಇವರೆಲ್ಲರ ಕಷ್ಟ ಸುಖಕ್ಕೆ ಜತೆಯಾಗಿ ನಾಗೂರಿನ ರಮೇಶ್ ಇದ್ದರು. ಜತೆಗೆ ಉದಯವಾಣಿಯ ಸತೀಶ್ ಸಾಲಿಯಾನ, ಲಕ್ಷ್ಮೀನಾರಾಯಣರೆಲ್ಲ ಇದ್ದರು. ಹೇಗೋ ನಡೆಯುತ್ತಿದ್ದಾಗ ಮನೆ ಬದಲಿಸುವ ಬಗ್ಗೆ ಚಿಂತಿಸುತ್ತಿದ್ದುದು ಉಂಟು. ಆಗ ರಮೇಶ್ ಇದ್ದಾರಲ್ಲ, ಹಲಸೂರಿನಲ್ಲೇ ಒಂಥರಾ ಪಂಟರ್ ! ಟೈಲರಿಂಗ್ ಅಂಗಡಿ ಇಟ್ಟುಕೊಂಡಿದ್ದರು. ಆದರೆ ಸದಾ ಉತ್ಸಾಹಿ. ಏನಾದರೂ ಮಾಡಬೇಕು ಎಂದು ತುಡಿಯುತ್ತಿರುವವರು. ತಮ್ಮ ಅಂಗಡಿಯ ಪಕ್ಕದಲ್ಲೇ ಇದ್ದ ಮನೆಯೊಂದನ್ನು ನೋಡಿದರು.

ಯಾವ ಕ್ಷಣದಲ್ಲಿ ಅವರ ತಲೆಯಲ್ಲಿ ಹೊಳೆಯಿತೋ ಏನೋ ಆ ಆಲೋಚನೆ. ಅದಕ್ಕೆ ಈ ನಾಲ್ಕೂ ಮಂದಿಯನ್ನೂ ಒಗ್ಗಿಸಲು ನೋಡಿದರು. ಮೂರು ಸಾವಿರ ರೂ. ಬಾಡಿಗೆ, ೫೦ ಸಾವಿರ ರೂ. ಅಡ್ವಾನ್ಸ್. ಇಷ್ಟೊಂದು ಹಣವನ್ನು ಒಮ್ಮೆಲೆ ಭರಿಸುವ ಶಕ್ತಿ ಯಾರಿಗೂ ಇರಲಿಲ್ಲ. ಈ ಮನೆಯ ಸದಸ್ಯರಲ್ಲಿ ಯಾರೂ ಊರಿನಲ್ಲಿ ಬಂಡವಾಳದ ಖಜಾನೆ ಇಟ್ಟುಕೊಂಡು ಬಂದವರಲ್ಲ ; ಊರಿನಿಂದ ಬರುವ ಹಣವನ್ನು ಖರ್ಚು ಮಾಡುವ ಸ್ಥಿತಿಯೂ ಯಾರದ್ದೂ ಅಲ್ಲ.

ಹುಡುಕಿಕೊಂಡ ಕೆಲಸದಲ್ಲೇ ದುಡಿದು ಬಂದ ಹಣದಲ್ಲಿ ಎಲ್ಲರ ಯೋಗಕ್ಷೇಮ ನೋಡಿಕೊಳ್ಳಬೇಕಿತ್ತು. ಊರಿನಲ್ಲಿ ಎಲ್ಲರಿಗೂ ಹಲವು ಹೊಣೆ ಇದ್ದೇ ಇತ್ತು. ಅಲ್ಲಿಗೆ ಕಳುಹಿಸುವುದು ನಮ್ಮ ಜವಾಬ್ದಾರಿಯ ನಿರ್ವಹಣೆಯೇ ಹೊರತು ಎಂದಿಗೂ ಹೊರೆ ಎನಿಸಿರಲಿಲ್ಲ. ಇನ್ನೊಂದು ಮಾತು ಸತ್ಯ ಹೇಳುತ್ತೇನೆ. ಬೆಂಗಳೂರಿನಲ್ಲಿ ಚೆನ್ನಾಗಿ ಇರಬೇಕೆಂದರೆ ಮತ್ತೊಂದು ಊರು ಇರಬಾರದು. ಕಾರಣವಿಷ್ಟೇ. ಅಲ್ಲಿನ ಖರ್ಚಿಗೆ ಸರಿದೂಗಿಸಲು ದುಡಿದದ್ದೆಲ್ಲಾ ಬೇಕು. ಅಂಥದ್ದರಲ್ಲಿ ನಮ್ಮದೇ ಒಂದು ಎಂದು ಮತ್ತೊಂದು ಊರಿದ್ದರೆ ಅಲ್ಲಿಗೆ ಹೋಗಿ ಬರುವ ಖರ್ಚು ಮತ್ತಷ್ಟು ಹೊರೆ ಎನಿಸುತ್ತದೆ.

ಆದರೆ ಎಂದಿಗೂ ನಮಗೆ ಹಾಗೆನಿಸಲಿಲ್ಲ. ಊರಿಗೆ ಹೋಗುವುದು, ಅಲ್ಲಿನ ಮಣ್ಣಿನ ರಸ್ತೆಯ ಮೇಲೆ ಇಟ್ಟ ಹೆಜ್ಜೆಯನ್ನು ಹಿಂತಿರುಗಿ ನೋಡಿಕೊಳ್ಳುತ್ತಲೇ ನಗರ ಬದಲಾಯಿಸಿದ ಬಗೆಯನ್ನು ಅರ್ಥೈಸಿಕೊಳ್ಳುತ್ತಾ ಹೋಗುವುದು ಹೊಸ ಅನುಭವವೇ. ಮಾಮೂಲಿ ಚಪ್ಪಲಿನ ಗುರುತಿಗೂ ನಗರದ ಬ್ರಾಂಡ್‌ಗಳ, ಗಟ್ಟಿ ಸೋಲ್‌ಗಳ (ಚಪ್ಪಲಿ, ಶೂಗಳ ತಳಬದಿ) ಹೆಜ್ಜೆ ಕೊಂಚ ಢಿಪರೆಂಟ್ ಅನಿಸಿದ್ದೂ ಅದೇ. ನಮ್ಮೊಳಗಿನ ಊರು ಕಲಿಸಿಕೊಟ್ಟ ಬಾಂಧವ್ಯ, ಸ್ನೇಹ, ಸಂಭ್ರಮ ಪಡುವ ಬಗೆ ಎಲ್ಲವೂ ನಮ್ಮನ್ನು ಬಂಧಿಸಿತ್ತು. ಇಲ್ಲದಿದ್ದರೆ ನಾವ್ಯಾರೂ ಒಟ್ಟುಗೂಡುತ್ತಿರಲಿಲ್ಲ !

ಹೀಗೇ ಇರುವಾಗ ಟೈಲರ್ ರಮೇಶ್ ಹುಡುಕಿದ ರೂಮಿಗೆ ಹರ್ಷ ಮತ್ತು ನವೀನ್ ಬರಲು ತಾತ್ವಿಕವಾಗಿಯೇನೋ ಒಪ್ಪಿದರು. ಆದರೆ ಮುಂಗಡ ಹಣದ ಚಿಂತೆ ಕಾಡತೊಡಗಿತು. ಎಲ್ಲೆಲ್ಲೋ ಹೊಂದಿಸಲು ನೋಡಿದರೂ ಕಷ್ಟವಾಯಿತು. ೧೯೯೮ ರ ಮಾತಿದು. ಆಗ ನಮಗೆಲ್ಲಾ ಬರುತ್ತಿದ್ದುದು ಕೇವಲ ೨, ೫೦೦ ರಿಂದ ೩ ಸಾವಿರ ರೂ. ಸಂಬಳ. ಅದರಲ್ಲಿ ಊರು, ಮನೆಯತ್ತ ಸ್ವಲ್ಪ ಗಮನಹರಿಸಿ, ತಿಂಗಳೆಂಬುದನ್ನು ದೂಡಿಕೊಂಡು ಬದುಕಬೇಕಿತ್ತು. ಪ್ರತಿ ತಿಂಗಳೂ ಮುಗಿಯುವ ಹೊತ್ತಿಗೆ ಮುಂದಿನ ತಿಂಗಳು ಬಂದು ತಲೆ ಮೇಲೆ ಕುಳಿತುಕೊಳ್ಳುತ್ತಿದ್ದರಿಂದ ದೊಡ್ಡ ಸಮಸ್ಯೆ. ಆದರೆ ಆ ತಿಂಗಳ ಆರಂಭದಲ್ಲೇ ವರದಿಗಾರರಿಗೆ ಕೊಡುತ್ತಿದ್ದ ೫೦೦ ರೂ. ಅಲೋಯೆನ್ಸ್ ಸಂಬಳ ಬರುವವರೆಗಿನ ಆತಂಕವನ್ನು ಕೊಂಚ ನಿವಾರಿಸುತ್ತಿತ್ತು. ಕೆಲವೊಮ್ಮೆ ಅದೂ ಕೈ ಕೊಡುತ್ತಿದ್ದುದುಂಟು. ಇರಲಿ, ಬದುಕಿಗೆ ಹೆದರುವಂತೆ ಎಂದೂ ಮಾಡಿರಲಿಲ್ಲ.

ಮೂರೂ ಮಂದಿಯೇನು? ನಾವೆಲ್ಲರೂ (ನೀವೂ) ಬೆಂಗಳೂರಿಗೆ ಬಂದದ್ದು ಕನಸು ಕಟ್ಟಿಕೊಳ್ಳಲು ಹಾಗೂ ಕನಸು ಕಟ್ಟಿಕೊಂಡು. ಅದನ್ನು ಸುಳ್ಳಾಗಿಸಿಕೊಳ್ಳಲು ಯಾರ ಮನಸೂ ಇರಲಿಲ್ಲ. ಹಾಗಾಗಿ ಕಷ್ಟ ಪಡಲು ಸಿದ್ಧವಿದ್ದೆವು. ಪಾಪ, ಹರ್ಷ ಮತ್ತು ನವೀನ್ ಹೇಗಾದರೂ ಮಾಡಿ ಮನೆಯನ್ನು ಬಾಡಿಗೆಗೆ ಪಡೆಯಲು ನಿರ್ಧರಿಸಿಯೇ ಬಿಟ್ಟರು. ಯಾಕೆಂದರೆ ಆ ಮನೆಯಲ್ಲಿ ಅಂಥದೊಂದು ಸೆಳೆತವಿತ್ತು !

ಹಳೇ ಕಾಲದ ಮನೆ. ಸುಣ್ಣ ಬಳಿದುಕೊಂಡ ಮೈ. ಮಳೆಯಿಂದ ನೆನೆಯಬಾರದೆಂದು ಮಲೆನಾಡಿನಲ್ಲಿ ಗೋಣಿಗೊಪ್ಪೆಯಂತೆ ಉಪ್ಪರಿಗೆಯನ್ನು ಮುಸುಕು ಹಾಕಿಕೊಂಡ ಮನೆ. ಒಳಗೆ ಹೋಗುತ್ತಲೇ ಎಡ ಬದಿಗೆ ಚಿಕ್ಕದೊಂದು ರೂಮು. ಅದಕ್ಕೊಂದು ಕಿಟಕಿ. ಒಳಗಿದ್ದು ಬೇಸರಾದರೆ ಅಲ್ಲಿ ಕುಳಿತು ಕಿಟಕಿಯಲ್ಲಿ ರಸ್ತೆಯ ದರ್ಶನವನ್ನು ನೋಡಬಹುದಿತ್ತು. ಒಂದರ್ಥದಲ್ಲಿ “ವೇಯ್ಟಿಂಗ್ ರೂಂ’ ಎಂದರೂ ತಪ್ಪಿಲ್ಲ. ಅದನ್ನು ದಾಟಿ ಒಳಗೆ ಕಾಲಿಡುವ ಮೊದಲು ಬಲ ಬದಿಗೆ ಮೆಟ್ಟಿಲು ಹಾದು ಹೋಗುತ್ತದೆ, ಮರದ್ದು. ಅಲ್ಲಿ ಮೇಲೆ ಎರಡು ಕೋಣೆ. ಅದರಲ್ಲಿ ಒಂದು ನನ್ನದಾಗಿತ್ತು.

ಓದಲು, ಬರೆಯಲು ಅದು. ಮಲಗಿಕೊಳ್ಳಲು ಮತ್ತೊಂದು, ಅದೇ ಹಿಂದೆ ಹೇಳಿದೆನಲ್ಲ, ಕತ್ತಲ ಕೋಣೆ. ಮತ್ತೊಂದರಲ್ಲಿ ನವೀನ, ಹರ್ಷ ಮಲಗುತ್ತಿದ್ದರು. ಹಾಗೆಯೇ ಮೇಲಿಂದ ವಾಪಸು ಬನ್ನಿ. ಒಳಗೆ ಕಾಲಿಡಿ, ಅಲ್ಲಿ ದೊಡ್ಡದೊಂದು ಹಜಾರ. ಅಲ್ಲಿ ಬಲಕ್ಕೆ ಕತ್ತಲ ಕೋಣೆಗೆ ದಾರಿ. ಎಡಕ್ಕೆ ಕತ್ತು ಹೊರಳಿಸಿ ಸ್ವಲ್ಪ ಹಿಂದೆ ತಿರುಗಿದರೆ ಅಡುಗೆಮನೆ. ಇನ್ನು ಕತ್ತಲ ಕೋಣೆಯ ಎಡಕ್ಕೆ ಬಚ್ಚಲು, ಪಾಯಖಾನೆ ಎಲ್ಲವೂ. ಆ ಮನೆಗೆ ಎರಡೆರಡು ಬಚ್ಚಲು.

ಬ್ರಹ್ಮಚಾರಿಗಳಲ್ಲವೇ? ಶಿಸ್ತಿಲ್ಲ ಎಂದು ಕೊಳ್ಳಬೇಡಿ. ಒಮ್ಮೊಮ್ಮೆ ಶಿಸ್ತನ್ನು ಬೇಕೆಂದೇ ಗಾಳಿಗೆ ತೂರಿ ಬಿಟ್ಟು, ಅಸೈನ್‌ಮೆಂಟ್‌ಗೆ ಹೊರಡಲು ಐದು ನಿಮಿಷವಿದೆ ಎಂದಾಗ ಮೂರ್‍ನಾಲ್ಕು ಮಂದಿ ಪಟ ಪಟ ಅಂತ ಎದ್ದು ಒಮ್ಮೆಲೆ ಸ್ನಾನಕ್ಕೆ ಇಳಿದುಬಿಡುತ್ತಿದ್ದೆವು. ಎಷ್ಟೋ ಬಾರಿ ಎರಡೂ ಬಚ್ಚಲು ಬ್ಯುಸಿ ಇರುತ್ತಿತ್ತು !              (ಸಶೇಷ)