ರವೀಂದ್ರನಾಥ ಠಾಗೋರರು ಒಳ್ಳೆಯ ಕಥೆಗಾರರು. ಅವರು ಕಟ್ಟುತ್ತಿದ್ದ ಗದ್ಯದ ಬಗೆಯೇ ಸೊಗಸು. ಅದನ್ನು ಹಾಗೆಯೇ ಗೊಂಚಲು ಗೊಂಚಲಾಗಿ ಕನ್ನಡಕ್ಕೆ ತಂದವರು ಅಹೋಬಲ ಶಂಕರರು, ಹಾಗೆಯೇ ಎಚ್. ವಿ. ಸಾವಿತ್ರಮ್ಮ. ಈ ಮೂರು ವಾಕ್ಯವೃಂದಗಳು ಅಹೋಬಲ ಶಂಕರರ ‘ರವೀಂದ್ರ ಕಥಾ ಮಂಜರಿ’ಯ ಭಾಗಗಳಿಂದ ಆಯ್ದದ್ದು. ಅವರು ನೆನಪಾಗಿದ್ದಕ್ಕೆ ನಿಮಗೆ ಈ ಸಾಲುಗಳು.

ಅರಬ್ಬಿಯ ಸಾವಿರದೊಂದು ರಾತ್ರಿಗಳ ಕಥೆಗಳಲ್ಲೊಂದು ರಾತ್ರಿ. ಇಂದು ಕಥಾ ಪ್ರಪಂಚದಿಂದ ಹಾರಿ ನನ್ನ ಮುಂದೆ ಬಂದಿರುವಂತೆ ತೋರಿತು, ನನ್ನ ಮನಸ್ಸಿಗೆ. ನಾನು ಈ ನಡುರಾತ್ರಿಯ ಮಬ್ಬಿನಲ್ಲಿ ನಿದ್ರಾ ಭಗ್ನವಾದ ಬಾಗ್ದಾದ್ ನಗರದ ದ್ವೀಪ ರಹಿತವಾದ ಇಕ್ಕಟ್ಟಿನ ಕೋಣೆಯೊಂದರಲ್ಲಿ ಯಾವುದೇ ವಿಪತ್ತಿನಿಂದ ಕೂಡಿದ ಅಭಿಸಾರದ ಗುರಿಯಲ್ಲಿ ಹೊರಟಿದ್ದೇನೆಂದು ಮನಸ್ಸಿಗೆ ಅನ್ನಿಸಿತು.
-‘ಹಸಿದ ಕಲ್ಲುಗಳು’ ಕಥೆಯಿಂದ

ತಾರಾಪದನು ಜಿಂಕೆ  ಮರಿಯಂತೆ ಬಂಧನಕ್ಕೆ ಹೆದರುತ್ತಿದ್ದ. ಮತ್ತೆ ಜಿಂಕೆಯಂತೆಯೇ ಗಾನಪ್ರಿಯ. ನಾಟಕ ದಳದವರ ಗಾನವೇ ಅವನನ್ನು ಮೊದಲ ಬಾರಿ ಮನೆಯನ್ನು ಬಿಟ್ಟು ಓಡಿ ಬರುವಂತೆ ಮಾಡಿತ್ತು. ಗಾನದ ಸ್ವರದಿಂದ ಅವನ ನಾಡಿಗಳಲ್ಲೆಲ್ಲಾ ಅನುಕಂಪನವಾಗುತ್ತಿತ್ತು. ಹಾಡಿನ ತಾಳದಿಂದ ಅವನ ಅಂಗಾಂಗಗಳಲ್ಲೆಲ್ಲಾ ಆಂದೋಲನವುಂಟಾಗುತ್ತಿತ್ತು. ಅವನಿನ್ನೂ ಎಳೆಯ ಹುಡುಗನಾಗಿದ್ದಾಗಲೇ ಸಂಗೀತ ಸಭೆಗಳಲ್ಲಿ ಅತಿ ಗಂಭೀರವಾಗಿ ಕುಳಿತು ವಯಸ್ಸಾದವರಂತೆ ಗಾನದಲ್ಲಿ ಮೈ ಮರೆತು ತಲೆದೂಗುತ್ತಿದ್ದುದನ್ನು ನೋಡಿ ದೊಡ್ಡವರು ನಗೆಯನ್ನು ತಾಳಲಾರದೇ ಹೋಗುತ್ತಿದ್ದರು. ಕೇವಲ ಸಂಗೀತವೇ ಏಕೆ, ಮರಗಳ ಒತ್ತಾದ ಎಲೆಗಳ ಮೇಲೆ ಶ್ರಾವಣ ಮಾಸದ ಸುರಿಮಳೆ ಬೀಳುವಾಗ, ಆಕಾಶದ ಮೋಡಗಳು ಆರ್ಭಟ ಮಾಡುತ್ತಾ ಕೂಗುವಾಗ, ಅರಣ್ಯದೊಳಗಡೆಯಿಂದ  ತಾಯಿಲ್ಲದ ದೈತ್ಯ ಶಿಶುವಿನಂತೆ ಗಾಳಿಯು ಭೋಳಿಡುವಾಗ-ಇಂಥ ಸಮಯದಲ್ಲಿ ಅವನ ಚಿತ್ತವು ಸಂಕೋಲೆಗಳನ್ನು ಕಿತ್ತು ಹಾಕಿ ಹೊರಗೆ ಹೋಗಲು ತವಕಿಸುತ್ತಿತ್ತು. ನಿಶ್ಶಬ್ದವಾದ ಮಧ್ಯಾಹ್ನ ಕಾಲದಲ್ಲಿ ಬಹುದೂರದ ಆಕಾಶಪ್ರಾಂತದಿಂದ ಬರುವ ಗಿಡುಗನ ಕೂಗು, ಮಳೆಗಾಲದ ಸಂಜೆಯಲ್ಲಿ ಕೇಳುವ ಕಪ್ಪೆಗಳ ಕಲರವ, ಗಭೀರ ರಾತ್ರಿಯಲ್ಲಿ ಕೇಳಿಬರುವ ನರಿಗಳ ಚೀತ್ಕಾರ, ಇವುಗಳೆಲ್ಲಾ ಅವನ ಮನಸ್ಸನ್ನು ಕದಡಿ ಬಿಡುತ್ತಿದ್ದವು.
-‘ಅತಿಥಿ’ ಕಥೆಯಿಂದ

ಶ್ರಾವಣ ಮಾಸದ ಕತ್ತಲ ರಾತ್ರಿ ಆಕಾಶವೆಲ್ಲ ಮೋಡಗಳಿಂದ ತುಂಬಿ ಹೋಗಿದೆ. ನಕ್ಷತ್ರವೊಂದೂ ಕಾಣಿಸದು. ಕತ್ತಲ ಕುಟೀರದಲ್ಲಿ ಇಬ್ಬರೇ ಮಾತಿಲ್ಲದೇ ಕೂತಿದ್ದಾರೆ. ಒಬ್ಬನ ಚಾದರದಲ್ಲಿ ಬೆಂಕಿಪೆಟ್ಟಿಗೆ ಮತ್ತು ದೀಪದ ಬತ್ತಿಯ ಕಟ್ಟು ಇದ್ದವು. ಮಳೆಗಾಲದ ಬೆಂಕಿಪೆಟ್ಟಿಗೆ ಎಷ್ಟು ಪ್ರಯತ್ನಪಟ್ಟರೂ ಹೊತ್ತಲೊಲ್ಲದು. ಜತೆಯಲ್ಲಿದ್ದ ಲಾಂದ್ರವೋ, ಎಣ್ಣೆ ಇಲ್ಲದ್ದರಿಂದಲೋ ಏನೋ ಆರಿ ಹೋಗಿತ್ತು. ಬಹಳ ಹೊತ್ತು ಸುಮ್ಮನೆ ಕುಳಿತಿದ್ದ ಒಬ್ಬನು, “ಲೋ ತಮ್ಮ, ಒಂದು ಕೊಳವೆ ಹೊಗೆಸೊಪ್ಪಿದ್ದಿದ್ದರೆ ಬದುಕಿ ಹೋಗುತ್ತಿದ್ದೆ. ಈ ಹಾಳು ಅವಸರದಲ್ಲಿ ತರುವುದು ಮರೆತೇ ಹೋಯಿತು”.
– ‘ಬದುಕಿರುವ ಪ್ರೇತ’ ಕಥೆಯಿಂದ

ಟಿಪ್ಪಣಿ :ಗೆಳೆಯರು, ವಿಮರ್ಶಕರಾದ ಡಾ. ಜಿ. ಬಿ. ಹರೀಶ್ ರೊಂದಿಗೆ ಫೋನ್‌ನಲ್ಲಿ ಮಾತನಾಡುತ್ತಿದ್ದಾಗ ಏಕೋ ರವೀಂದ್ರನಾಥ ಠಾಗೋರರು ನೆನಪಾದರು. ಅವರ ಹಲವು ಕಥೆಗಳನ್ನು, ಕಾದಂಬರಿಗಳನ್ನು ಕನ್ನಡಕ್ಕೆ ೧೯೬೦ ರ ಸುಮಾರಿನಲ್ಲಿ ತಂದವರು ಅಹೋಬಲ ಶಂಕರ ಮತ್ತು ಎಚ್.ವಿ. ಸಾವಿತ್ರಮ್ಮ. ಅಹೋಬಲ ಶಂಕರರು (ಕೆಲವೊಮ್ಮೆ ಎ. ಶಂಕರ ಎಂದೂ ಬರೆದದ್ದುಂಟು) ರವೀಂದ್ರ ಕಥಾ ಮಂಜರಿ ಒಂದು-ಎರಡು-ಮೂರು ಭಾಗಗಳನ್ನು ಅನುವಾದಿಸಿದ್ದರು. ಮೈಸೂರಿನ ಕಾವ್ಯಾಲಯ ಪ್ರಕಾಶನ ಪ್ರಕಟಿಸಿದ್ದರು (ಈಗ ಸಿಗುವುದೇ ಕಷ್ಟ). ಒಳ್ಳೆಯ ಅನುವಾದ.
 
ಜಿ. ಬಿ. ಹರೀಶರು ಹಾಸನದವರು. ಅವರು ಆರನೇ ತರಗತಿ ಓದುತ್ತಿದ್ದಾಗಲೇ ರವೀಂದ್ರ ಕಥಾ ಮಂಜರಿ ಮೂರನೇ ಭಾಗ ಓದಿದ್ದರಂತೆ. ಆ ಕಥೆ ಕೇಳಿ. ಅವರ ಮನೆ ಹತ್ತಿರವಿದ್ದ ಕಾಫಿ ಅಂಗಡಿ (ಜ್ಯೋತಿ ಕಾಫಿ ವರ್ಕ್ಸ್)ಗೆ ಇವರು ಹೋಗುತ್ತಿದ್ದರು. ಅಂಗಡಿಯ ಸೀತಾರಾಮಯ್ಯ ಎಂಬವರು ರವೀಂದ್ರರ ಅಭಿಮಾನಿಯಂತೆ. ಅವರು ಕೊಟ್ಟ ಪುಸ್ತಕ ಓದಿದ್ದರು. ಮೊನ್ನೆ ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ನಡೆಯುವ ಪುಸ್ತಕ ಸಂತೆಯಲ್ಲಿ ಮತ್ತೆ ಈ ಎಲ್ಲಾ ಭಾಗಗಳು, ಕೆಲ ಕಾದಂಬರಿಗಳೂ ಸಿಕ್ಕವಂತೆ.