ಮೊದಲೇ ಹೇಳಿದ್ದೇನೆ. ಇವು ಮಸುಕು ನೆನಪುಗಳೆಂದು. ಹಾಗಾಗಿ ಸರಿಯಾಗಿ ಉಜ್ಜಿ ತೊಳೆದರೆ ನೆನಪೇ ಅಳಿಸಿಹೋಗುವ ಭಯವಿದೆ, ನೆನೆದು ಹೋದ ಪುಸ್ತಕದ ಹಾಳೆ ಅಸ್ತಿತ್ವ ಕಳೆದುಕೊಳ್ಳುವ ಹಾಗೆ. ಇಲ್ಲಿನ ಪಾತ್ರದಲ್ಲಿ ಒಬ್ಬನಾದ ಅರವಿಂದ ಸಿಗದಾಳ್‌ಗೆ ಫೋನ್ ಮಾಡಿದ್ದೆ. ಅವನೂ ಕೆಲ ನೆನಪುಗಳನ್ನು ಸರಿಪಡಿಸಿದ.

ಅದರಂತೆ ಯೋಗೇಶ್ ಮೂಲನಿವಾಸಿಗಳಲ್ಲಿ ಒಬ್ಬರು. ಹಲಸೂರಿನ ಮನೆಯಲ್ಲಿ ಮೂಲನಿವಾಸಿಗಳೆಂದರೆ ಏಳು ಮಂದಿ. ನವೀನ್, ಹರ್ಷ, ಅರವಿಂದ ಸಿಗದಾಳ್, ನಾನು, ಅರುಣ್ ಕುಮಾರ್, ಯೋಗೀಶ್, ಚಂದ್ರಶೇಖರ ಕುಳಮರ್ವ. ಹಲಸೂರು ಮನೆ ಹೊಕ್ಕ ಮೇಲೆ ಕುಳಮರ್ವ ಬಂದು ಸೇರಿದರು. ಅವರನ್ನೂ ಮೂಲ ನಿವಾಸಿಗಳೆಂದು ತಿಳಿಯಬಹುದಂತೆ (ತಮಾಷೆಯಿಂದ). ನಂತರ ಉಳಿದವರೆಲ್ಲಾ ಬಂದು ಸೇರಿದರು.

ಉತ್ತರ ಕನ್ನಡ, ದಕ್ಷಿಣ ಕನ್ನಡ, ಮಲೆನಾಡಿನವರೆಲ್ಲಾ ಇದ್ದರು. ಅರವಿಂದ ಸಿಗದಾಳನ ಊರು ಶೃಂಗೇರಿ ಬಳಿಯ ಸಿಗದಾಳ್. ನನ್ನದು ಮೂಲ ಉಡುಪಿ, ಬೆಳೆದದ್ದು ಭದ್ರಾವತಿ. ನವೀನದ್ದು ಬಂಟ್ವಾಳ ಬಳಿಯ ಅಮ್ಮೆಂಬಳ. ಹರ್ಷನದ್ದು ಮೂಲ ಮಂಗಳೂರು ಹಾಗೂ ಕುದುರೆಮುಖ. ಚಂದ್ರಶೇಖರ ಕುಳಮರ್ವನವರದ್ದು ಮಂಜೇಶ್ವರ. ಯೋಗೀಶನದ್ದೂ ಕುದುರೆಮುಖವೇ. ರಮೇಶ್ ಕುಮಾರ್ ನಾಯಕರದ್ದು ಹೊನ್ನಾವರ ಬಳಿಯ ಮಂಕಿ. ಶ್ರೀನಿಧಿಯದ್ದು ಭದ್ರಾವತಿ. ಇದು ಈ ಪಾತ್ರಗಳ ಊರು ಪುರಾಣ.

ಹಲಸೂರು ಮನೆಯಲ್ಲಿ ನಾವೆಲ್ಲಾ ಒಟ್ಟಾದ ಬಗ್ಗೆ ನಮಗೂ ಕುತೂಹಲವಿದೆ. ಹೇಗೆ ಸಂಬಂಧಗಳು, ಸ್ನೇಹಗಳು ತನ್ನ ಹಸ್ತವನ್ನು ಚಾಚಿಕೊಂಡು ಬರಸೆಳೆದುಕೊಳ್ಳುತ್ತವೆ ಎನ್ನುವುದಕ್ಕೆ ನಮ್ಮದೂ ಉದಾಹರಣೆ. ಬೆಂಗಳೂರಿನಂಥ ಊರಿನಲ್ಲಿ ಒಬ್ಬೊಬ್ಬರೇ ಪ್ರತ್ಯೇಕ ರೂಮ್‌ಗಳನ್ನು ಮಾಡಿಕೊಂಡು ಬದುಕುವಷ್ಟು ಆರ್ಥಿಕವಾಗಿ ಶಕ್ತರಾಗಿರಲಿಲ್ಲ. ಈಗಲೂ ಇದ್ದಾರಲ್ಲಾ ಬಹಳಷ್ಟು ಮಂದಿ. ಜತೆಗೆ ಬ್ರಹ್ಮಚಾರಿಗಳೆಂದರೆ ಹಾಗೇ ತಾನೇ.

ಸಾಫ್ಟ್‌ವೇರ್ ಹಾಗೂ ಐಟಿ ವಲಯ ಬಲಗೊಂಡ ಮೇಲೆ ಬ್ರಹ್ಮಚಾರಿಗಳಿಗೆ ಬಲ ಬಂದಿದೆ. ಬ್ರಹ್ಮಚಾರಿಗಳೆಂದರೆ ಮದುವೆಗೆ ಸಿದ್ಧತೆ ನಡೆಸಿರುವವರು ಎನ್ನುವ ಅರ್ಥ ಬಂದಿದೆ. ನಮ್ಮದು ಬಿಡಿ, ಬಹಳಷ್ಟು ಮಂದಿ ಮದುವೆ ಎಂಬುದನ್ನೇ ಆಲೋಚಿಸುತ್ತಿರಲಿಲ್ಲ. ನಮ್ಮ ಕಾಲಿನ ಮೇಲೆ ನಿಂತದ್ದಕ್ಕಿಂತ ಮತ್ತೊಬ್ಬರ ಬೆನ್ನ ಮೇಲೆ ಕೂತದ್ದೇ ಹೆಚ್ಚು. ನನ್ನ ವಿಷಯದಲ್ಲಂತೂ ನೂರಕ್ಕೆ ನೂರರಷ್ಟು ಸತ್ಯ.

ಆದರೂ ಅನಿವಾರ್ಯತೆ ಮತ್ತು ಅಸಹಾಯಕತೆ ಬೆಸೆಯುವ ಸಂಬಂಧ ಅನನ್ಯವೇ. ಎರಡು ಮಾತಿಲ್ಲ. ಬಹುಶಃ ನನಗೆ ಅನ್ನಿಸುವುದೂ ಇದೇ. ಇಂಥದೊಂದು ಅನಿವಾರ್ಯತೆ ನಮ್ಮೆಲ್ಲರನ್ನೂ ಬೆಸೆದಿತ್ತು. ನಾನು ಹೊಸದಿಗಂತ ಪತ್ರಿಕೆಯಲ್ಲಿ, ನವೀನ್ ಉದಯವಾಣಿಯಲ್ಲಿ ಹಾಗೂ ಹರ್ಷ ಸಹ ಇಂಡಿಯನ್ ಎಕ್ಸ್‌ಪ್ರೆಸ್ ನಲ್ಲಿ ವರದಿಗಾರರಾಗಿ ಕೆಲಸ ಮಾಡುತ್ತಿದ್ದೆವು. ದಯವಿಟ್ಟು ಇಸವಿ, ತಿಂಗಳು, ವಾರಗಳನ್ನು ಕೇಳಬೇಡಿ. ಅವೆಲ್ಲಾ ಸಾಫ್ ಮಾಡಿ ನೋಡಲಾಗದಷ್ಟು ಮಸುಕಾಗಿವೆ. ಏನೂ ಕಾಣದು. ಎಲ್ಲೆಲ್ಲೋ ಇಸವಿಗಳು ಅಸ್ಪಷ್ಟವಾಗಿರಬಹುದು ಅಷ್ಟೇ.

ಮೂವರೂ ಅಪರಾಧ ವಿಷಯದ ವರದಿಗಾರರೇ (ಕ್ರೈಮ್ ರಿಪೋರ್ಟರ್‍ಸ್). ನಾನು ತ್ಯಾಗರಾಜ ನಗರದಲ್ಲಿ ಅರವಿಂದ ಸಿಗದಾಳ್‌ನೊಂದಿಗೆ ರೂಮ್ ಮಾಡಿಕೊಂಡಿದ್ದೆ. ಅವನು ಅವೆನ್ಯೂ ರಸ್ತೆಯ ಸಂಸ್ಥೆಯಲ್ಲಿ ಕೆಲಸ ಮಾಡಿದ್ದ. ನಿತ್ಯವೂ ನಾವೂ ಮೂವರು ಮಂದಿ ಅಪರಾಧ ಸುದ್ದಿಗಾಗಿ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಸಂಧಿಸುತ್ತಿದ್ದೆವು. ನಮ್ಮದು ಒಂದು ಸಿಂಡಿಕೇಟ್. ಸಾಮಾನ್ಯವಾಗಿ ಯಾರಾದರೂ ವಿಶೇಷ ಸುದ್ದಿಗೆಂದು ಹೋದರೆ ಅವರಿಗೆ (ರೋಟೀನ್ ಕ್ರೈಮ್ಸ್) ಎಂದಿನ ಅಪರಾಧ ಸುದ್ದಿಗಳನ್ನು ಕೊಡಬೇಕಿತ್ತು. ಇದು ವಿನಿಮಯದ ವಿಧಾನ.  ಎಂದಿಗೂ ನಿಯಮ ಮುರಿಯುವ ಪ್ರಯತ್ನ ನಡೆಯುತ್ತಿರಲಿಲ್ಲ.

ನನ್ನ ಕಚೇರಿ ಕ್ವೀನ್ಸ್ ರೋಡ್‌ನಲ್ಲಿತ್ತು. ಹರ್ಷನದ್ದೂ ಸಹ ಅಲ್ಲಿಯೇ ಹತ್ತಿರ. ನವೀನದ್ದು ಮಣಿಪಾಲ್ ಸೆಂಟರ್‌ನಲ್ಲಿ. ಹೀಗಿರುವಾಗ ನನಗೆ ಕೆಲಸ ಮುಗಿಸಿ ತ್ಯಾಗರಾಜ ನಗರಕ್ಕೆ ಹೋಗಿ ಬರುವುದು ಕೊಂಚ ತ್ರಾಸು ಎನಿಸುತ್ತಿತ್ತು. ಆದರೆ ಯಾರಾದರೂ ಜತೆಗೆ ಸೇರುವ ಅಥವಾ ಪ್ರತ್ಯೇಕವಾಗಿ ರೂಮ್ ಮಾಡುವಷ್ಟು ಆರ್ಥಿಕವಾಗಿ ಸಬಲನಾಗಿರಲಿಲ್ಲ. ಒಮ್ಮೊಮ್ಮೆ ನನಗೆ ಶಕ್ತಿ ತುಂಬುತ್ತಿದ್ದವ ಸಿಗದಾಳನೇ. ಹಾಗೆಂದೂ ಅವನ ಆರ್ಥಿಕ ಸ್ಥಿತಿಯೂ ಬಹಳ ಚೆನ್ನಾಗಿರಲಿಲ್ಲ, ಆದರೆ ನನಗಿಂತ ಕೊಂಚ ಪರವಾಗಿಲ್ಲ. ಅಂದರೆ ಒಂದೆಳೆಯಷ್ಟೇ.

ಈಗ ಕೋಣೆ ಗೋಡೆಯ ಪ್ರತಿ ಹದವೂ ನೆನಪಾಗುತ್ತಿದೆ. ಮನೆಯ ಉಪ್ಪರಿಗೆ ಮೇಲೆ ಕುಳಿತ ಮಗು ರಸ್ತೆಯಲ್ಲಿ ಹೋಗುತ್ತಿರುವ ಮೆರವಣಿಗೆಯನ್ನು ಕಣ್ತುಂಬಿಕೊಳ್ಳುವ, ಸಂಭ್ರಮಿಸುವಂತೆ ತೋರುತ್ತಿದೆ. ಆದರೆ ಮೆರವಣಿಗೆ ಬಹಳ ದೂರಕ್ಕೆ ಸಾಗಿ ಹೋಗಿದೆ                                                        (ಸಶೇಷ)