ಬ್ರಹ್ಮಚಾರಿಯ ದಿನಗಳು…

ಈ ಧಾರಾವಾಹಿ ಆರಂಭವಾಗುವುದೇ ಹೀಗೆ. ಬೆಂಗಳೂರಿನ ಒಂದು ಬಡಾವಣೆ. ಅದರಲ್ಲಿ ಒಂದು ದೊಡ್ಡದೆನ್ನಬಹುದಾದ ಮನೆ. ಅಲ್ಲಿ ವಾಸಿಸುತ್ತಿದ್ದವರು ಎಂಟು ಮಂದಿ ಬ್ರಹ್ಮಚಾರಿಗಳು. ಹತ್ತು ವರ್ಷಗಳ ಹಿಂದಿನ ಮಾತು. ಬಹುತೇಕ ಮಂದಿ ಮಾಧ್ಯಮಗಳಲ್ಲೇ ಇದ್ದವರು. ಮಲೆನಾಡು, ಕರಾವಳಿ ಎಂಬ  ಭೇದವಿರಲಿಲ್ಲ. ಎಲ್ಲ ಊರಿನವರೂ ಇಲ್ಲಿದ್ದವರೇ.

ನನಗೆ ಖುಷಿಯಾಗುವುದು ನಮ್ಮ ಗೆಳೆಯರ ಬಗ್ಗೆ ಬರೆಯುವುದಕ್ಕೆ. ಇಲ್ಲಿನ ಎಂಟೂ ಪಾತ್ರಗಳೂ ಬದುಕಿನ ಒಂದಲ್ಲಾ ಒಂದು ಭಾಗಕ್ಕೆ ಪಾತ್ರಗಳಾಗಿ ಜೀವ ತುಂಬುವವರೇ. ಸದಾ ಹರಟುತ್ತಾ, ಬೇಸರವಾದರೆ ಅದನ್ನು ದಾಖಲಿಸುತ್ತಾ, ಒಳ್ಳೆಯದೇನಾದರೂ ಕಂಡರೆ ಹಂಚಿಕೊಳ್ಳಲು ಮುಂದಾಗುತ್ತಾ- ಒಟ್ಟೂ ಪ್ರಜಾಪ್ರಭುತ್ವದ ನೆಲೆ ನಮ್ಮ ಕೋಣೆಗಳಲ್ಲಿತ್ತೇನೋ ಅನಿಸುತ್ತದೆ.

ಎಲ್ಲೂ ವೈಭವೀಕರಿಸುವ ಗೋಜಿಗೆ ಹೋಗುತ್ತಿಲ್ಲ. ಆದರೆ ಸುಮಾರು ಮೂರರಿಂದ-ನಾಲ್ಕು ವರ್ಷ ಈ ಕೋಣೆಗಳು ಕೊಟ್ಟ ಅನುಭವ ಅಪಾರ. ಬದುಕಿನ ಬೊಗಸೆಯಲ್ಲಿ ಸಿಕ್ಕದ್ದನ್ನೆಲ್ಲಾ ಹೆಕ್ಕಿಕೊಳ್ಳುವ ತುಡಿತವೂ ಅಂದು ನಮಗಿತ್ತು. ಜೀವನದ ಭವಿಷ್ಯದ ನೆಲೆಯನ್ನು ಹುಡುಕಿಕೊಳ್ಳಬೇಕಾದ, ಭದ್ರಗೊಳಿಸಿಕೊಳ್ಳಬೇಕಾದ ಹಾಗೂ ಲೈಫ್ ಸೆಕ್ಯುರಿಟಿ (ಜೀವನ ಭದ್ರತೆ) – ಬಹುತೇಕರಲ್ಲಿ ಯಾರೂ ಎಲ್‌ಐಸಿ ಮಾಡಿಸಿರಲಿಲ್ಲ-ಯ ಪ್ರಶ್ನೆಯೂ ಇತ್ತು. ಅದಕ್ಕೂ ಉತ್ತರ ಹುಡುಕಿಕೊಳ್ಳಬೇಕಿತ್ತು. ಕಾರಣವಿಷ್ಟೇ. ಎಲ್ಲರೂ ನಂತರದ ಮೂರ್‍ನಾಲ್ಕು ವರ್ಷಗಳಲ್ಲಿ ಸಂಸಾರಿಗಳಾಗಲು ಯೋಜನೆ ರೂಪಿಸಿಕೊಂಡಿದ್ದರು.

ಆದದ್ದೂ ಅದೇ. ಎರಡೇ ವರ್ಷಗಳಲ್ಲಿ ಎಲ್ಲರೂ ತಮ್ಮ ಯೋಜನೆಯ ಯಶಸ್ವಿ ಅನುಷ್ಠಾನಕ್ಕೆ ಮುಂದಾದರು. ಇಂದು ಎಲ್ಲರೂ ಸಂಸಾರಿಗಳು. ಬ್ರಹ್ಮಚಾರಿಯ ಪರ್ವದಿಂದ ಸಂಸಾರದ ಪರ್ವಕ್ಕೆ ಜಿಗಿದು ನಡೆಯುತ್ತಿದ್ದೇವೆ. ಕೆಲವರು ತಮ್ಮ ಕ್ಷೇತ್ರವನ್ನು ಬದಲಿಸಿದ್ದಾರೆ. ಇನ್ನು ಕೆಲವರು ಅದರಲ್ಲೇ ಮುಂದುವರಿದಿದ್ದಾರೆ. ಆದರೆ ಸಂಬಂಧದ ನೂಲು ಕಡಿದಿಲ್ಲ.

ನಮ್ಮ ದಿನಗಳ ಕೆಲವು ಘಟನೆಗಳನ್ನು ಹೇಳುತ್ತಾ ಧಾರಾವಾಹಿ ಮುಂದುವರಿಸುತ್ತೇನೆ. ಇದನ್ನು ಇಂತಿಷ್ಟೇ ಭಾಗಗಳಲ್ಲಿ ಬರೆಯಬೇಕೆಂಬ ಹಠವಾಗಲೀ ನನಗಿಲ್ಲ. ಮಸುಕು ನೆನಪಿನ ಮಳೆಯಲ್ಲಿ ಒಂದೇ ಸಮನೆ ತೋಯ್ದ ಮನಸನ್ನು ಅನಾವರಣಗೊಳಿಸುವುದು ಕೊಂಚ ಕಷ್ಟ.

ಒದ್ದೆಯಾದ ನೆನಪುಗಳು ಪುಸ್ತಕದ ಹಾಳೆಗಳಂತೆ ಒಂದಕ್ಕೊಂದು ಅಂಟಿಕೊಂಡಿರುತ್ತವೆ. ನಾಜೂಕಾಗಿ, ಆಸ್ಥೆಯಿಂದ ಹಾಳೆ ಹರಿದು ಹೋಗದ ಹಾಗೆ, ನೆನಪೆಂಬ ಶಾಯಿ ಬಣ್ಣ ಕಳೆದುಕೊಳ್ಳದ ಹಾಗೆ ಮುತುವರ್ಜಿ ವಹಿಸುವುದೂ ಕಷ್ಟ. ಈ ಬರಹದ ಮಧ್ಯೆ ಮಧ್ಯೆ ನನ್ನ ಗೆಳೆಯರೂ ಇದಕ್ಕೆ ಪ್ರತಿಕ್ರಿಯಿಸಬಹುದು. ಧಾರಾವಾಹಿಯನ್ನು ಮುಂದುವರಿಸಬಹುದು. ಇಲ್ಲಿನ ಲಘು ಧಾಟಿ ವ್ಯಂಗ್ಯದ ನೆಲೆಯಿಂದ ಹೊರಟದ್ದಲ್ಲ.

ಅಧ್ಯಾಯ ೧

ಬೆಂಗಳೂರೆಂಬುದು ಜನರ ಸಂತೆ. ಅದರೊಳಗಿದ್ದ ಬಡಾವಣೆಗಳೇನೂ ಈ ಅಪವಾದಕ್ಕೆ ಹೊರತಾಗಿರಲಿಲ್ಲ. ಬೆಂಗಳೂರಿನ ಪೂರ್ವ ಭಾಗದ ಕನ್ನಡೇತರರ ಬಡಾವಣೆ ಎಂದೇ ಹೆಸರಾಗಿದ್ದ ಹಲಸೂರಿನಲ್ಲಿ ನಮ್ಮ ಬಿಡಾರ. ನಾವಿದ್ದ ಕೇರಿ ಒಂದು ರೀತಿಯಲ್ಲಿ ಸಾಂಸ್ಕೃತಿಕವಾಗಿ ಶ್ರೀಮಂತವಾದದ್ದು.

ಗಾಂಧಿ ಬಜಾರಿನಂತೆ ಹಬ್ಬದ ದಿನ ರಂಗು ತುಂಬಿಕೊಳ್ಳುತ್ತದೆ. ಹತ್ತಿರದಲ್ಲೇ ಇದ್ದ ಇತಿಹಾಸ ಪ್ರಸಿದ್ಧ ಶ್ರೀ ಸೋಮೇಶ್ವರ ದೇವಸ್ಥಾನದ ರಥೋತ್ಸವದ ದಿನವಂತೂ ನೀವು ಕೇಳುವಂತಿಲ್ಲ. ಅಲ್ಲಿಗೆ ಬಂದರೆ ಕಳೆದೇ ಹೋಗುತ್ತೀರಿ. ಸುತ್ತಲೂ ಬೆಂಡು ಬತ್ತಾಸುಗಳನ್ನು ತುಂಬಿಕೊಂಡ ಅಂಗಡಿಗರು, ಮಧ್ಯೆ ಬಾಣ ಬಿರುಸುಗಳ ರಂಗೋಲಿ, ರಥೋತ್ಸವ, ಜನರ ಹರ್ಷೋದ್ಘಾರ- ಎಲ್ಲವೂ ಊರಿನ ಜಾತ್ರೆಯನ್ನು ನೆನಪಿಸುತ್ತಿದ್ದವು.

ಅತ್ಯಂತ ಖುಷಿಯ ಸಂಗತಿಯೆಂದರೆ ಅದೇ. ನಮ್ಮ ವಿಳಾಸ- ಕೇರಾಫ್ “ಜಿ’ ೩ ನೇ ಅಡ್ಡ ರಸ್ತೆ, ಜೋಗುಪಾಳ್ಯ. ಹಲಸೂರು. ಹಳ್ಳಿಗೆ ಹಳ್ಳಿ, ಪಟ್ಟಣಕ್ಕೆ ಪಟ್ಟಣ. ಕನ್ನಡಿಗರು ಇದ್ದಾರೆ, ಅವರಲ್ಲಿ ಕೆಲವರು ತಮಿಳರೊಂದಿಗೆ ಸೇರಿ ಹೋಗಿದ್ದಾರೆ, ಇನ್ನು ಕೆಲವರು ಮಲಯಾಳಿಗಳೊಂದಿಗೆ, ಕನ್ನಡಿಗರಾಗಿಯೇ ಇದ್ದವರೂ ಇದ್ದರು. ತಮ್ಮ ಅನಾಥ ಪ್ರಜ್ಞೆಯನ್ನು ಹೋಗಲಾಡಿಸಿಕೊಳ್ಳಲು ಪಡುತ್ತಿದ್ದ ಪ್ರಯತ್ನಗಳು ಹಲವು. ನಮಗೂ ಆ ಪ್ರಜ್ಞೆ ಕಾಡಿದ್ದಿದೆ. ಯಾರಾದರೂ ಗೆಳೆಯರಿಗೆ ನಮ್ಮ ಬಿಡಾರದ ಅಡ್ರೆಸ್ ಹೇಳಿದಾಗ, “ಏನ್ರಯ್ಯಾ, ಅಲ್ಲಿ ತಮಿಳರೇ ಹೆಚ್ಚಲ್ವಾ?’ ಎನ್ನುತ್ತಿದ್ದರು. ಆಗ ನಾವು ಅದಕ್ಕೇನಂತೆ, ನಮ್ಮ ಏರಿಯಾ ಎಂದು ಬೀಗಿಕೊಳ್ಳುತ್ತಿದ್ದುಂಟು. ಆದರೆ ಎಂದಿಗೂ ಅದೊಂದು ಸಮಸ್ಯೆಯಾಗಿ ನಮ್ಮನ್ನು ಕಾಡಲಿಲ್ಲ.

ಬೆಂಗಳೂರಿನ ಬೇರೆಲ್ಲಾದರೂ ಕನ್ನಡ- ತಮಿಳು ಸಂಬಂಧ ಗಲಾಟೆ ನಡೆದರೆ ನಾವು ಸ್ವಲ್ಪ (ದೈನಂದಿಕಕ್ಕಿಂತ ಮೊದಲು) ಬೇಗ ಮನೆಗೆ ಹೋಗುತ್ತಿದ್ದಿದೆ. ಅದು ನಾವು ತೆಗೆದುಕೊಳ್ಳುತ್ತಿದ್ದ ಮುಂಜಾಗ್ರತೆಯಷ್ಟೇ.

ನಮ್ಮ ಮನೆ ನಿದ್ರಿಸುವುದೆಂದರೆ ಮಧ್ಯರಾತ್ರಿ ಒಂದರ ನಂತರವೇ. ಅಲ್ಲಿಯವರೆಗೂ ರೈಲ್ವೆ ನಿಲ್ದಾಣದಂತೆ ಯಾವುದಾದರೊಂದು ಎಕ್ಸ್‌ಪ್ರೆಸ್‌ಗಳು ಬಂದು ಲಂಗರು ಹಾಕುತ್ತಲೇ ಇರುತ್ತಿದ್ದವು. ಪಾಳಿ ಮುಗಿಸಿಕೊಂಡು ಬಂದವರೆಲ್ಲಾ ಬಾಗಿಲು ತೆಗೆಯುವುದೇ ದೊಡ್ಡ ಹರಸಾಹಸವಾಗುತ್ತಿದ್ದುದೂ ನಿಜ. ಅದು ಕೆಲವೊಮ್ಮೆ ಕೆಲವರಿಗೆ ವಿಧಿಸುವ ಶಿಕ್ಷೆಯೂ (ತಮಾಷೆಯಿಂದ) ಆಗುತ್ತಿತ್ತು.

ಹಲಸೂರು ಮನೆಯ ಸದಸ್ಯರ ಪಟ್ಟಿಯಿದು. ನಾನು ನಾವಡ, ಅರವಿಂದ ಸಿಗದಾಳ್, ನವೀನ್ ಅಮ್ಮೆಂಬಳ, ಹರ್ಷ, ರಮೇಶ್ ಕುಮಾರ್ ನಾಯಕ್, ಚಂದ್ರಶೇಖರ ಕುಳಮರ್ವ, ಅರವಿಂದ ಶೆಟ್ಟಿ, ಅರುಣ್ ಕುಮಾರ್ ಶಾಶ್ವತ ಸದಸ್ಯರು.  ನಂತರ ಸೇರ್ಪಡೆಯಾಗಿದ್ದು ಯೋಗೇಶ್ ಮತ್ತು ಶ್ರೀನಿಧಿ.

ಅರವಿಂದ ಸಿಗದಾಳ್ ಬೆಂಗಳೂರಿನಲ್ಲೇ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾನೆ. ನವೀನ್ ಅಮ್ಮೆಂಬಳ, ರಮೇಶ್ ಕುಮಾರ್ ನಾಯಕ್, ಅರವಿಂದ ಶೆಟ್ಟಿ ಬೆಂಗಳೂರಿನಲ್ಲೇ ಪತ್ರಕರ್ತರು. ಹರ್ಷ ರಾವ್ ಹಾಗೂ ಚಂದ್ರಶೇಖರ ಕುಳಮರ್ವ  ಮಂಗಳೂರಿನಲ್ಲಿ ಪತ್ರಕರ್ತರು. ಅರುಣ್ ಕುಮಾರ್ ಸಹ ಮಂಗಳೂರಿನಲ್ಲೇ ಖಾಸಗಿ ಕಂಪನಿಯಲ್ಲಿದ್ದಾನೆ. ಯೋಗೇಶ್ ಈಗ ಲಂಡನ್ ವಾಸಿ, ಶ್ರೀನಿಧಿ ಬೆಂಗಳೂರಿನಲ್ಲಿ ಇನ್ನೂ ಬ್ರಹ್ಮಚಾರಿ. ಇವರಿಬ್ಬರೂ ತಂತ್ರಜ್ಞರು.   ಇನ್ನೊಬ್ಬ ಸದಸ್ಯನಾದ ನಾನು ಬ್ಲಾಗ್ ನಲ್ಲಿ ಅಪ್ ಲೋಡ್ ಮಾಡುತ್ತಿದ್ದೇನೆ !

ಇಂತಿರ್ಪ ಹಲಸೂರು ಮನೆಗಿದ್ದ ಕೋಣೆ ಏಳು. ಅದರಲ್ಲೊಂದು ಕತ್ತಲೆ ಕೋಣೆ, ಅದಕ್ಕಾಗಿ ನಿತ್ಯವೂ ಪೈಪೋಟಿ !                                                                                                   (ಸಶೇಷ)