ಅಂದು ತತ್ವ ಶಾಸ್ತ್ರಜ್ಞ, ಚಿಂತಕ ಜೆ. ಕೃಷ್ಣಮೂರ್ತಿಯವರ ಆಹ್ವಾನದ ಮೇರೆಗೆ ಋಷಿ ವ್ಯಾಲಿಯಲ್ಲಿ ಸಂಗೀತ ಕಛೇರಿ ನೀಡಲು ಹೋಗಿದ್ದೆ. “ಸಂಗೀತ ಕಛೇರಿ ಆರಂಭವಾಗಿ ಒಂದು ಗಂಟೆಯ ನಂತರವೂ ನನ್ನ ಆತಿಥ್ಯ ಇಲ್ಲದಿದ್ದರೆ ಬೇಸರ ಪಟ್ಟುಕೊಳ್ಳಬೇಡ’ ಎಂದು ಎಚ್ಚರಿಸಿದ್ದರು.

ನಾನು ೪೫ ನಿಮಿಷ ಹಾಡಿದೆ. ಈಗ ಕೃಷ್ಣಮೂರ್ತಿಯವರು ಎದ್ದು ಹೋಗಬಹುದು ಎಂದುಕೊಂಡಿದ್ದೆ. ಇನ್ನೂ ೪೫ ನಿಮಿಷ ಕುಳಿತು ಎದ್ದು ಹೋದರು. ಮಧ್ಯಂತರದ ನಂತರ ನಾನು ಮತ್ತೆ ಕಛೇರಿ ಮುಂದುವರಿಸಿದೆ. ಹಾರ್‍ಮೋನಿಯಂನಲ್ಲಿ ಸಾಥ್ ನೀಡುತ್ತಿದ್ದ ಅಪ್ಪ ಜಳಗಾಂವಕರ್ ಏಕೋ ವಿಚಲಿತಗೊಂಡಂತೆ ಬಂತು. ಇವರಿಗೆ ಜಾಗ ಸಾಕಾಗುತ್ತಿಲ್ಲ ಎಂದು ಸ್ವಲ್ಪ ಪಕ್ಕಕ್ಕೆ ಸರಿದೆ. ಆದರೆ ಹತ್ತಿರದ ಕಂಬದ ಬಳಿ ನಿಂತು ಆಲಿಸುತ್ತಿದ್ದ ಕೃಷ್ಣಮೂರ್ತಿಯವರತ್ತ ನನ್ನ ಗಮನ ಸೆಳೆಯುವುದು “ಅಪ್ಪ’ರ ಉದ್ದೇಶವಾಗಿತ್ತು. ಅತ್ತ ಗಮನಿಸಿದೆ, ಕ್ಷಣದಲ್ಲೇ ಅಲ್ಲೇ ಕೆಳಗೆ ಕೃಷ್ಣಮೂರ್ತಿಯವರು ಕುಳಿತರು. ಕೊನೆಗೆ ಸ್ವಸ್ಥಾನಕ್ಕೆ ಮರಳಿದರು. ನಾನು ಮುಗಿಸಲು ಹೊರಟಾಗ “ಮತ್ತಷ್ಟು ಹಾಡು’ ಎಂದರು. ಹಾಡಿದೆ. ನನಗದೇ ಅಚ್ಚರಿ. ಕೇವಲ ಕೃಷ್ಣಮೂರ್ತಿಯವರಿಗಾಗಿ ನಾಲ್ಕು ಗಂಟೆ ಹಾಡಿದ್ದೆ. ಅಂತಿಮವಾಗಿ ನಮಸ್ಕರಿಸಲು ಹೋದಾಗ ಆಲಿಂಗಿಸಿಕೊಂಡು “ನಿಮಗೆ ಇಲ್ಲಿದೆ ಸ್ಥಾನ’ ಎಂದು ತಮ್ಮ ಹೃದಯವನ್ನು ತೋರಿದರು. “ಹಿಂದೆ ಯಾವಾಗಲೋ ಭೇಟಿಯಾಗಿರಬೇಕು’ ಎಂದರು.

೧೯೬೮. ಒಂದು ದಿನ ಹೀಗೆ ಸುಮ್ಮನೆ ಗಂಗೆಯ ತಟದ ಋಷಿಕೇಶದಲ್ಲಿ ಕುಳಿತು ಹರಿಯುವ ನದಿಯನ್ನು ನೋಡುತ್ತಿದ್ದೆ. ಹಾಗೇ ಗಮನಹರಿಸತೊಡಗಿದಾಗ ನದಿಯ ಜುಳು ಜುಳು ನಾದದಲ್ಲೂ ಒಂದು ಲಯವಿತ್ತು. ಅದು ನಿಸರ್ಗದ ಗಮಕವಾಗಿತ್ತು. ಅಂದಿನಿಂದ ನನ್ನ ಗಾಯನಶೈಲಿಯಲ್ಲಿ ಅದನ್ನು ರೂಢಿಸಿಕೊಂಡೆ, ನದಿ ಹರಿಯುವ ತೆರದಿ. (ಪಂ. ಜಸ್ ರಾಜ್ ಅವರ ಜೀವನದಿಂದ ಆಯ್ದದ್ದು)