ಮೌನದೊಳಗೆ
ಮಧುರ ಸ್ವರ
ಕುಳಿತು
ಮಾತನಾಡಿಸುವ ಹೊತ್ತು
ಅಂಗಳದಲ್ಲಿ ಮಲ್ಲಿಗೆಯೊಂದು
ಅರಳಿತು ; ಸದ್ದಾಗಲೇ ಇಲ್ಲ !

ಸೂರ್ಯ ಕಂತಿ
ಕೆಂಪು ಹರಡಿ
ತಿಳಿಯಾಗುವಾಗ ಬಾನಿನಲ್ಲಿ
ಚಂದಿರ ನಗುತ್ತಾ ಬಂದ ;
ಆಗಲೂ ಸದ್ದಾಗಲಿಲ್ಲ !

ಮಧುರ ಸ್ಮೃತಿಯ
ಮೆರವಣಿಗೆಯಲ್ಲಿ
ಆನೆ ಅಂಬಾರಿಯ ಮೇಲೆ
ಅವಳು
ಧರಿಸಿದ್ದ ಮೌನದ
ನತ್ತು ಫಳಫಳಿಸುತ್ತಿತ್ತು
ಆಗಲೂ ಅಷ್ಟೇ, ಸದ್ದಾಗಲಿಲ್ಲ !

ಅವನು ಬಂದ
ಅವಳೊಡನೆ ಕುಳಿತ-ಕಲೆತ
ಮೆರವಣಿಗೆ ಅಷ್ಟು ದೂರ
ಸಾಗಿತು
ಜನರ ಸಂತೆ ಹೆಚ್ಚಾಯಿತು
ಬಹುಪರಾಕುಗಳ ಅಬ್ಬರ
ಮುಗಿಲಿಗೆ ಮುಟ್ಟಿತು
ಚಂದಿರ ಗಹಗಹಿಸಿ ನಕ್ಕ
ಜನರೂ ಸುಮ್ಮನಿರಲಿಲ್ಲ
ದನಿಗೂಡಿಸಿದರು
ಕನಸು ಮುರಿದು ಹೋಗುವಾಗ
ಸದ್ದಾಯಿತು ; ಕೇಳಿಸಲೇ ಇಲ್ಲ !