‘ಸ್ಟ್ಯಾಚೂ’ ಆಟದ ಬಗ್ಗೆ ಗೊತ್ತಾ ? ಅದೇ ‘ಮೂರ್ತಿ’ಯಾಟ. ಇದು ಲಗೋರಿ, ಚಿph-1.jpgನ್ನಿದಾಂಡು, ಗೋಲಿ ಆಟದಂತಲ್ಲ. ಸ್ವಲ್ಪ ಆಧುನಿಕತೆಯ ಆಟ. ನನಗೂ ಮುಂಚೆ  ಗೊತ್ತಿರಲಿಲ್ಲ. ಇದ್ದಕ್ಕಿದ್ದಂತೆ ಶಾಲೆಯ ದಿನಗಳಲ್ಲಿ ಒಂದು ದಿನ ನನ್ನೆದುರು ಕುಳಿತುಕೊಳ್ಳುವ ಗೆಳೆಯನೊಬ್ಬ ಇದನ್ನು ಪರಿಚಯಿಸಿದ್ದ. ಅದರಲ್ಲೂ ಬೆಂಗಳೂರಿನಂಥ ಮಾಯಾನಗರಿಗೆ ಕಾಲಿಟ್ಟ ಮೇಲೆ ಇನ್ನಷ್ಟು ಪರಿಚಯವಾದದ್ದು. ಸುಮ್ಮನೆ ಮೋಜಿನಾಟ ; ಮಕ್ಕಳಾಟ ; ನಿಂತೇ ಬಿಡುವ ಆಟ.

ಪುಸ್ತಕಗಳ ಕಪಾಟನ್ನು ಸರಿ ಮಾಡುತ್ತಿದ್ದ ಅಜ್ಜನ ಮುಖದಲ್ಲಿ ಇದ್ದಕ್ಕಿದ್ದಂತೆ ೬೦ ಮೋಂಬತ್ತಿ ಹತ್ತಿದ ಹಾಗೆ ಬೆಳಕು. ತನ್ನಷ್ಟಕ್ಕೇ ನಗುತ್ತಾನೆ. ದೂರದಿಂದಲೇ ನೋಡುತ್ತಿದ್ದ ಪುಟ್ಟಿ ಮೊಮ್ಮಗಳಿಗೆ ಅಚ್ಚರಿ. ಅಜ್ಜ ಏಕೆ ನಗುತ್ತಿದ್ದಾನೆ ? ಪುಸ್ತಕ ರಾಶಿ ಮಧ್ಯೆ ನಗಲಿಕ್ಕೆ ಏನಿದೆ ? ಅಲ್ಲೇನಾದರೂ ನಗುವಂಥ ಫೋಜು ಇತ್ತೇ? ಎಂದೆಲ್ಲಾ ತಲೆ ಕೆರೆದುಕೊಂಡಳು.

ಅಜ್ಜ, ಅಜ್ಜಿ ಕಳುಹಿಸಿದ್ದ ಬರ್ತ್‌ಡೇ ಗ್ರೀಟಿಂಗ್ ಕಾರ್ಡ್ (ಮದುವೆಗೆ ಮುನ್ನ) ಸಿಕ್ಕಾಗ ನಗುವಿನ ಹೂವು ಅರಳಿಸಿದ್ದು ಮುಖದಲ್ಲಿ. ಈ ಸತ್ಯ ಮೊಮ್ಮಗಳಿಗೆ ತಿಳಿಯುವುದಾದರೂ ಎಂತು ? ಹತ್ತಿರ ಬಂದ ಮೊಮ್ಮಗಳು ತನ್ನ ಹೆಬ್ಬೆರಳು ಸ್ವಲ್ಪ ಹಿಂದಕ್ಕೆ ಬಾಗಿಸಿ, ತೋರು, ಮಧ್ಯಮ ಬೆರಳನ್ನೇ ಬಂದೂಕು ಮಾಡಿ ಅಜ್ಜಾ, ‘ಸ್ಟ್ಯಾಚೂ’ ಎಂದಳು. ಮೊಮ್ಮಗನ ಆಟ ಅರಿತಿದ್ದ ಅಜ್ಜ ಕ್ಷಣದಲ್ಲೇ ‘ಸ್ಟ್ಯಾಚೂ’ ಆದ. ನಗುತ್ತಿದ್ದ ಹಲ್ಲುಗಳೆಲ್ಲಾ ಹಾಗೇ. ತುಟಿ ಮೇಲಕ್ಕೆ. ಮುಖದಲ್ಲಿ ಮೂಡಿದ ನೆರಿಗೆಯೂ ‘ಸ್ಟ್ಯಾಚೂ’.

‘ಅಜ್ಜಾ, ನಾನು ಹೇಳುವವರೆಗೆ ನೀನು ಹೀಗೆ ಇರಬೇಕು’  ಎಂದ ಪುಟ್ಟಿ ಅಮ್ಮ ಕರೆದಲ್ಲಿಗೆ ಓಡಿದಳು. ಅಜ್ಜ ಹೆಚ್ಚು ಹೊತ್ತು ‘ಸ್ಟ್ಯಾಚೂ’ ಆಗಿರಲಾರ ; ಬದುಕಬೇಕೆಂದು ಬಯಸಿದವನು. ಪುನಾ ಅದೇ ಬರ್ತ್‌ಡೇ ಕಾರ್ಡ್ ತೆಗೆದುಕೊಂಡ. ಮನಸಾರೆ ನಕ್ಕ. ಬರ್ತ್‌ಡೇ ವಿಷಸ್, ಕ್ಯಾಂಡಲ್, ಕೇಕ್ ಎಲ್ಲಾ ಎದುರಿಗೆ ಮೆರವಣಿಗೆ ನಡೆಸಿದವು.  ಅದರಲ್ಲಿ ಸೇರಿ ಹೋಗುವಾಗ ಮೊಮ್ಮಗಳೂ ಅಲ್ಲಿಗೆ ಹಾಜರು.

ತಾತ, ನಾನು ಇನ್ನೂ ‘ಸ್ಟ್ಯಾಚೂ’ ತೆಗೆದೇ ಇಲ್ಲ, ನೀನು ಸೋತಿದ್ದೀಯಾ ಎಂದಳು ಪುಟ್ಟಿ. ‘ಅದು ಹಾಗಲ್ಲ…ಅಪ್ಪಿ…’ ಎಂದ ಅಜ್ಜನ ಮಾತಿಗೆ ಪುಟ್ಟಿ ಕಿವಿ ಕೊಡಲೇ ಇಲ್ಲ. ಅವಳ ಮನಸ್ಸಿನಲ್ಲಿ ಅಜ್ಜ ತಪ್ಪು ಮಾಡಿದ್ದಾನೆ. ನಾನು ಹೇಳದೇ ‘ಮೂರ್ತಿ’ ಭಂಗಿ ಬದಲಿಸಿದ್ದಾನೆ. ಅಜ್ಜ, ನಿನ್ನತ್ರ ಮಾತಾಡೋಲ್ಲ…ಠೂ…ಠೂ…ಠೂ… ಎಂದು ಟೂ ಬಿಟ್ಟು ಹೊರ ನಡೆದೇ ಬಿಟ್ಟಳು. ಅಜ್ಜ ಈಗ ನಿಜವಾದ ‘ಸ್ಟ್ಯಾಚೂ’. (ಚಿತ್ರ : ಪ್ರವೀಣ್ ಬಣಗಿ)