ಕಾಲೇಜಿನಲ್ಲಿ ನಿನ್ನ ಮಾತು ಕೇಳಲಿಕ್ಕೆಂದೇ ಬರುವವರಿದ್ದರು, ಆ ಮೊದಲು ನನಗಂತೂ ಮಾತೇ ಬರುತ್ತಿರಲಿಲ್ಲ. ಅದನ್ನೂ ನಾನು ಕಲಿತದ್ದು ನಿನ್ನಿಂದಲೇ. ಕಲಿಯುತ್ತಾ ಹೋದೆ, ಕಲಿತೆ, ಮಾತೇ ಆಗಿ ಹೋದೆ. ನೀನು ಮಾತಿನ ಮಧ್ಯೆ ಮಧ್ಯೆ ನೀನು ತುಂಬುತ್ತಿದ್ದ ಮೌನದ ಲಯವನ್ನು ಕಲಿಯುವುದು ಮರೆತೇ ಹೋಯಿತು. ನಿನ್ನ ಮೌನದ ಕಸೂತಿಯ ಪಾಠ ಆಗಲೇ ಇಲ್ಲ ನನಗೆ.
ಅದಕ್ಕೇ ಇರಬೇಕು, ನನ್ನದು ಬರಿಯ ಮಾತಾಗತೊಡಗಿತು, ಅರ್ಧ ತುಂಬಿದ ಬಿಂದಿಗೆಗಳ ಸದ್ದಿನಂತೆ. ನನ್ನ ಗೆಳೆಯರು ವಾಚಾಳಿ ಎನ್ನತೊಡಗಿದ್ದರು. ಆದರೂ ಮಾತನಾಡುವುದನ್ನು ನಿಲ್ಲಿಸಿರಲಿಲ್ಲ, ಕಾರಣವಿಷ್ಟೇ. ನನಗೆ ಬರುತ್ತಿದ್ದುದು ಅದೊಂದೇ. ಮಾತಾಡಿ, ಮಾತಾಡಿ ನಾನು ಸೋತೆ. ಆದರೆ ಈಗ ಮೌನದ ಪಾಠ ಹೇಳಿಕೊಡುವವಳು ಬೇಕೆನ್ನಿಸುತ್ತಿದೆ.
ನಿನ್ನ ಹುಡುಕಿಕೊಂಡು ಬಂದೆ. ಕತ್ತಲ ಕಾನುವಿನ ನಡುವೆ ಬೆಳಕು ಹುಡುಕುತ್ತಾ ಹೊರಟೆ. ಸುತ್ತಲೂ ಬೆಳಕಿನ ಅಬ್ಬರದಲ್ಲಿ ವೃತ್ತಕ್ಕೆ ಬಂದು ನಿಂತೆ. ಎಲ್ಲೆಲ್ಲೂ ದಾರಿಗಳು, ಎಲ್ಲೆಲ್ಲೂ ಬೆಳಕು.  ಕವಲು ದಾರಿಯಲ್ಲಿ ಮನಸ್ಸೂ ಕವಲು ಕವಲಾಗಿ ಹೋಯಿತು. ಎತ್ತ ಚಲಿಸುವುದಕ್ಕೂ ಗೊತ್ತಾಗಲಿಲ್ಲ. ಸುಮ್ಮನೆ ನಿಂತು ಬಿಟ್ಟೆ.
ಮತ್ತೆ ತಪ್ಪು ಮಾಡಿದ್ದು ಅಲ್ಲೇ. ಬೆಳಕು ಹುಡುಕುವ ಹಠದಲ್ಲಿ  ವೃತ್ತದ ಅಷ್ಟೊಂದು ಬೆಳಕಿನ ಮಧ್ಯೆ ನಿನ್ನ ಹಣತೆಯ  ಕುಡಿಯನ್ನು ಗುರುತಿಸಲಾರದೇ ಹೋದೆ. ಹೋಗಲಿ, ಅದರಿಂದ ಚಿಮ್ಮುತ್ತಿದ್ದ ಬೆಳಕಿನ ಕಿಡಿಯ ಪರಿಚಯವೂ ಸಿಗಲಿಲ್ಲ. ಬಹುಶಃ ಬೆಳಕಿನೂರಿಗೆ ಬಂದವರದ್ದೆಲ್ಲಾ ನನ್ನ ಹಾಗೆಯೇ ಇರಬೇಕು. ಪ್ರಯಾಣ ಆರಂಭವಾಗಿದ್ದು, ನಿನ್ನ ಹಣತೆಯ ಬೆಳಕನ್ನು ಹುಡುಕಿಕೊಂಡೇ, ಆದರೆ ತಲುಪಿದ್ದು ಮಾತ್ರ ಬೆಳಕಿನೂರಿನ ವೃತ್ತದಲ್ಲಿ.
ಅಷ್ಟು ದೂರ ಹೋದ ಮೇಲೂ ನಿನ್ನ ಹಣತೆಯ ಮೆಲುದನಿ ಕೇಳಿಸಬಹುದೇನೋ ಎಂದು ಕಿವಿಗಳನ್ನು ತೆರೆದಿದ್ದೆ. ಆದರೂ ಕೇಳಲೇ ಇಲ್ಲ, ಹೀಗೂ ಇರಬಹುದು. ಆ ದನಿ ನನಗೆ ಕೇಳಲೂ ಇಲ್ಲವೇನೋ ? ಅಷ್ಟರಲ್ಲಿ ಬೀಸಿ ಬಂದ ಗಾಳಿಯಲ್ಲಿ ಬತ್ತಿ ಸುಟ್ಟು ಹೋದ ವಾಸನೆ ಮೂಗಿಗೆ ಬಡಿಯಿತು. ಆ ಎಣ್ಣೆಯ ಕಮಟು ವಾಸನೆ ಹಣತೆಯ ಸಾಧ್ಯತೆಯನ್ನು ಒತ್ತಿ ಹೇಳಿತು. ಮತ್ತೆ ವಾಪಸು ಬಂದೆ ನಡೆದು ಹೋದ ದಾರಿಯಲ್ಲೇ.
ಆದರೇನು, ನೀನು ಕತ್ತಲೆಯಲ್ಲಿ ಒಂದಾಗಿ ಬಿಟ್ಟಿದ್ದೆ. ಹಣತೆಯೂ ಅಷ್ಟೇ. ಯಾವುದರ ಗುರುತೂ ಸಿಗಲಿಲ್ಲ. ಬೇಸರದಿಂದ ಮತ್ತೆ ಬೆಳಕಿನೂರಿನ ವೃತ್ತದಲ್ಲೇ ಕಾಯುತ್ತಿದ್ದೇನೆ, ಮತ್ತೆ ಎಂದಾದರೂ ನೀನು ಹಣತೆ ಹಚ್ಚಿ ಬೆಳಕ ಬೀರಿ ನನ್ನನ್ನು ಒಳಗೆ ಕರೆದುಕೊಳ್ಳಬಹುದೆಂದು.
ಆದರೂ ವೃತ್ತದ ಸೀಳುದಾರಿಗಳನ್ನು ಕಂಡು ಭ್ರಮ ನಿರಸನವಾಗಿದೆ. ನನ್ನ ತಪ್ಪನ್ನು ಹೌದೆಂದು ತೀರ್ಪು ಕೊಡಲಿಕ್ಕಾಗದರೂ ಬಾ ಸಾಕು. ತಪ್ಪಿತಸ್ಥನೆಂಬ ಭಾವದಿಂದ ನೆಮ್ಮದಿಯಿಂದಲೇ ಬೆಳಕಿನೂರಿನಲ್ಲಿ ಕಳೆದುಹೋಗುತ್ತೇನೆ, ಕರಗಿಯೂ.
**********
ನೀನು ನಿನ್ನ ನಿರ್ಧಾರ ಪ್ರಕಟಿಸಿ ಹೊರಟು ಹೋದದ್ದಕ್ಕೆ ಇಂದಿಗೆ ಸರಿಯಾಗಿ ಮೂರು ವರ್ಷ. ಕ್ರಿಸ್‌ಮಸ್‌ನ ಮುನ್ನ ದಿನ ಬಂದರೆ ಅದೇ ನೆನಪು. ನನಗನ್ನಿಸಿದ್ದು ಇದೇ. ಅಲ್ಲಿಯವರೆಗೆ ನಿನ್ನ ಅಪ್ಪ ನಿನ್ನ ಮಾತನ್ನು ಕೇಳುತ್ತಿದ್ದವನು ಅದ್ಯಾಕೆ ಅದೊಂದು ದಿನ ಮಾತ್ರ ವಿರುದ್ಧ ನಿಂತ ? ನನಗೂ ಅರ್ಥವಾಗುತ್ತಿಲ್ಲ. ಬೇರೆಯವನನ್ನು ಮದುವೆಯಾಗುವುದಿರಲಿ, ಮದುವೆಯನ್ನೇ ಆಗುವುದಿಲ್ಲವೆಂದು ಹೇಳಿದೆ. ಆ ಹೊತ್ತಿನಲ್ಲಿ ಅದನ್ನು ಸಹಿಸಬಹುದಿತ್ತು. ಆದರೂ ಅಪ್ಪ ಯಾಕೆ ಕಠೋರನಾದ. ಅವನೊಳಗೆ ಯಾವ ದೈವ ಆವಾಹಿತವಾಗಿತ್ತೋ? ಒಂದೂ ತಿಳಿಯದಾಗಿದೆ.
ಪೇಟೆಗೆ ಹೋದವಳು ಕಾಣೆಯಾದವರ ಪಟ್ಟಿಗೆ ಸೇರಿಬಿಟ್ಟೆ. ಪೊಲೀಸ್ ಠಾಣೆಗೆ ದೂರು ನೀಡಿ, ಊರೆಲ್ಲಾ ದೊಡ್ಡ ಸುದ್ದಿಯಾಗಿ ಎಷ್ಟೆಲ್ಲಾ ಅವಾಂತರ. ಕೈಯಲ್ಲಿ ಓದಿದ ಸರ್ಟಿಫಿಕೇಟು ಬಿಟ್ಟು ಬೇರೇನೂ ಒಯ್ದಿರಲಿಲ್ಲ. ಆರು ತಿಂಗಳಾದರೂ ನಿನ್ನ ಪತ್ತೆಯಾಗಲಿಲ್ಲ. ಮನೆಗೆ ಒಂದು ಕಾಗದವಿಲ್ಲ, ದೂರವಾಣಿಯಂತೂ ದೂರದ ಮಾತು. ನಿನ್ನ ತಂಗಿಯ ಓದು ಅರ್ಧಕ್ಕೆ ನಿಂತಿತು.
ಊರಿನವರೆಲ್ಲಾ ಬಾಯಿಗೆ ಬಂದಂತೆ ಮಾತನಾಡತೊಡಗಿದರು. ಸಂಜೆಯಾದರೆ ಊರಿನ ಪಟ್ಟಾಂಗದ ಕಟ್ಟೆಗಳಲ್ಲಿ ಇದೇ ಮಾತು. ಅಷ್ಟೊಂದು ಓದಿಸಿದ ನಿನ್ನಪ್ಪನಿಗೆ ಬುದ್ಧಿ ಇಲ್ಲ ಎಂದು ಕೆಲವರು ಅಂದರು. ಇನ್ನು ಕೆಲವರು ಕೊಂಚ ಉದಾರವಾದಿಗಳಂತೆ, “ಓದಿಸಬಾರದೆಂದಲ್ಲ, ಅಪ್ಪನಾದವರು ಮಕ್ಕಳ ಮೇಲಿನ ಹಿಡಿತ ಬಿಡಬಾರದು’ ಅಂತ ಅಂದರು. ಒಟ್ಟೂ ನೀನು ಕಾಣೆಯಾದದ್ದಕ್ಕೆ ಇಲ್ಲಿ ನೂರೆಂಟು ಕಥೆ.
ವರ್ಷವಾದರೂ ನೀನು ವಾಪಸ್ಸಾಗದಿದ್ದಕ್ಕೆ ಊರಿನವರೆಲ್ಲಾ ಒಂದು ತೀರ್ಮಾನಕ್ಕೆ ಬಂದು ಬಿಟ್ಟಿದ್ದಾರೆ. ನೀನು ಸತ್ತಿದ್ದೀಯೆಂದು ನಿರ್ಧರಿಸಿದ್ದಾರೆ. ಅವರು ತಮ್ಮ ತೀರ್ಮಾನಕ್ಕೆ ಕೊಟ್ಟುಕೊಂಡ ಆಧಾರ “ಎಂಥದೇ ಮಕ್ಕಳಾದರೂ, ಅಪ್ಪ-ಅಮ್ಮನನ್ನು ತಿಂಗಳುಗಟ್ಟಲೇ ನೋಡ್ದೆ ಇರ್‍ತವಾ?’ ಎಂಬುದು. ಹೆಚ್ಚೂ ಕಡಿಮೆ ನಿನ್ನಪ್ಪ-ಅಮ್ಮನೂ ಅದೇ ನಿರ್ಧಾರಕ್ಕೆ ಬಂದವರಂತೆ ತೋರುತ್ತಾರೆ. ಇಬ್ಬರಲ್ಲೂ ಉತ್ಸಾಹ ಕರಗಿದೆ, ತಂಗಿ ಮನೆಯಲ್ಲಿ ಅಮ್ಮನಿಗೆ ನೆರವಾಗುತ್ತಿದ್ದಾಳೆ. ಅಪ್ಪ  ಸಂಜೆಯಾಗುವಾಗ ಮೆಲ್ಲಗೆ ತೋಟದಲ್ಲೇ ಸುತ್ತು ಹಾಕಿ ಬರುತ್ತಾನೆ.
ಪೇಟೆಗೆ ಹೋಗುವ ಅಭ್ಯಾಸ ಬಿಟ್ಟಿದ್ದಾನೆ. ಅಪರೂಪಕ್ಕೊಮ್ಮೆ ಹೋದರೂ ಯಾರನ್ನೂ ಮಾತನಾಡಿಸುವುದಿಲ್ಲ. ಯಾರಾದರೂ ಉದ್ದೇಶಪೂರ್ವಕವಾಗಿ ಮಾತನಾಡಿಸಲು “ವ್ಹಾಯ್…’ ಎಂದರೆ ತನಗೆ ಕೇಳೇ ಇಲ್ಲ ಎಂಬವನಂತೆ ಹೋಗುತ್ತಾನೆ. ತಡೆದು ನಿಲ್ಲಿಸಿದರಂತೂ ದುರುಗುಟ್ಟಿ ನೋಡಿ “ನಿಮ್ಮತ್ರ ಮಾತನಾಡಲಿಕ್ಕೆ ಎಂಥ ಉಂಟು ಅಂತಾ? ಎಂದು ಪ್ರಶ್ನೆ ಇಟ್ಟು ದುರುದುರು ನಡೆದು ಬಿಡುತ್ತಾನೆ.
ಅಂಗಳದಲ್ಲಿ ಹೂವು ಅರಳುತ್ತಿವೆ. ಅವುಗಳಲ್ಲಿ ಕಂಪಿಲ್ಲ. ಬಣ್ಣಗಳಲ್ಲೂ ಸೊಬಗಿಲ್ಲ. ತೆಂಗಿನ ಗಿಡಕ್ಕೆಲ್ಲಾ ರೋಗ ಬಂದಂತಿದೆ. ನಿನ್ನಪ್ಪ ಗಮನಿಸುತ್ತಿಲ್ಲ. ಒಟ್ಟೂ ಲಕಲಕ ಹೊಳೆಯಬೇಕಿದ್ದ ಬಾಳ ಬಾನು ಖಾಲಿ ಖಾಲಿ. ಕೊಟ್ಟಿಗೆಯಲ್ಲಿ ದನ ಹತ್ತು ಬಾರಿ ಕೂಗಿದರೆ ಅಮ್ಮ ಒಮ್ಮೆ ಗದರಿಸುತ್ತಾಳೆ. ತಂಗಿ ಹತ್ತಿರದಲ್ಲೇ ಇದ್ದ ಹುಲ್ಲನ್ನೂ ಹಾಕಲಿಕ್ಕೂ ಉದಾಸೀನ ತೋರುತ್ತಾಳೆ. ಒಟ್ಟು ನಿನ್ನ ಕಾಣೆ ಇವರೆಲ್ಲರಲ್ಲಿ ಶೂನ್ಯ ತುಂಬಿದೆ.
ಮನೆಯತ್ತಿರ ಹೋದ ನನ್ನ ಬಳಿ “ಅವಳು ಏನಾಗಿರಬಹುದು?’ ಎಂದು ನಿನ್ನಪ್ಪ ಪ್ರಶ್ನಿಸಿದ. ಆದರೆ ನನ್ನಲ್ಲಿ ಉತ್ತರವಿರಲಿಲ್ಲ. ಸುಮ್ಮನೆ “ಎಲ್ಲೋ ಚೆನ್ನಾಗಿ ಇರಬಹುದು’ ಎಂದೆ. ಆಗ ಒಂದು ಸಣ್ಣಗಿನ ಆಶಯದ ಮಿಂಚು ಹಾದು ಹೋಯಿತು. ಆದರೆ ಅದು ಮಳೆಯಾಗುವ ಲಕ್ಷಣಗಳು ಕಾಣಲಿಲ್ಲ. “ಎಂಥದೋ ಮಾರಾಯ, ನನಗೆ ನಂಬಿಕೆಯಿಲ್ಲ’ ಎಂದ ಅಪ್ಪ ಎದ್ದು ತೋಟಕ್ಕೆ ಹೋದ. ಅಮ್ಮ ಬಾಗಿಲ ಮರೆಯಲ್ಲಿ ಕುಳಿತು ಕಣ್ಣೊರೆಸಿಕೊಳ್ಳುತ್ತಿದ್ದಳು. ತಂಗಿ ಪಡಸಾಲೆಯಲ್ಲಿ ಓದುತ್ತಿದ್ದವಳು ಒಂದು ಕ್ಷಣ ನಿಲ್ಲಿಸಿ ನನ್ನ ಉತ್ತರಕ್ಕಾಗಿ ಕಾದು ಕುಳಿತಿದ್ದರು. ನಾನು ಹೆಚ್ಚು ಹೊತ್ತು ಇರಲಿಲ್ಲ.
********
ಈ ಹಿಂದೆ ಕತ್ತಲೆ ತುಂಬಿಕೊಂಡರೆ ನಕ್ಷತ್ರಗಳು ಕಾಣಬಹುದೆಂಬ ಆಸೆಯಾದರೂ ಇತ್ತು.  ಆದರೆ ಬಾನೇ ಖಾಲಿಯಾದರೆ ಕಾಣುವುದೇನು? ಆದರೂ ಪ್ರತಿ ದಿನ ರಾತ್ರಿ ಅಂಗಳಕ್ಕೆ ಬಂದು ಆಕಾಶದತ್ತ ಮುಖ ಮಾಡಿ ನಾನು ನೋಡುತ್ತೇನೆ. ಏನೂ ಕಾಣುವುದಿಲ್ಲ, ಹಾಗೆಂದು ಹತಾಶನಾಗುವುದಿಲ್ಲ.
ನನಗೆ ಬಣ್ಣ ಬಣ್ಣದ ಕಾಮನಬಿಲ್ಲು ಬೇಕಿಲ್ಲ, ಆದರೆ ಖಾಲಿ ಆಕಾಶವನ್ನು ಸಹಿಸಿಕೊಳ್ಳಲಾರೆ. ಅಲ್ಲಿ ಒಂದಾದರೂ ತಾರೆ ಹೊಳೆಯುತ್ತಿರಲಿ. ಆಗ ಕತ್ತಲಿಗೂ ಒಂದು ಕಳೆ, ಆ ಒಂದೇ ನಕ್ಷತ್ರ ನೀನೇ ಆಗಿರಲಿ ಎನ್ನುವುದು ನನ್ನೊಳಗಿನ ತುಡಿತ.
ನೀನು ಎಲ್ಲಿಯಾದರೂ ಇರು, ಒಮ್ಮೆ ಬಂದು ಕ್ಷಮಿಸಿ ಬಿಡು, ನನ್ನ ತಪ್ಪಿಗೆ ಮೊಹರು ಒತ್ತು. ತಪ್ಪೆಂಬುದು ಸಾಬೀತಾಗಿ ಬಿಡಲಿ, ಬೇಸರವಿಲ್ಲ. ವಿಚಾರಣಾ ಕೈದಿಯಂತೆ ಎಷ್ಟು ದಿನ ಬದುಕುವುದು ? ಶಿಕ್ಷೆ ವಿಧಿಸಿಬಿಡು. ತಪ್ಪು-ಸರಿಯ ಸಂಭವನೀಯತೆ ಮಧ್ಯೆ ಬದುಕುವುದು ಸಾಧ್ಯವೇ ಇಲ್ಲ.

ನೀನು ಹೊಳೆದೇ ಹೊಳೆಯುತ್ತೀಯಾ, ನನಗಂತೂ ನಂಬಿಕೆ ಇದ್ದೇ ಇದೆ. ಅಲ್ಲಿಯವರೆಗೆ ನಾನು ಕಾಯಲಾರೆ. ಕಾಯುವಿಕೆ ಮುಗಿದು ಬಿಡಲಿ, ನಿರಾಳವಾಗಲಿ ಆಗಸ. ಆದದ್ದೆಲ್ಲಾ ಆಗಲಿ, ನಾಳೆ ರಾತ್ರಿ ನೀನು ಆ ಖಾಲಿ ಆಕಾಶಕ್ಕೆ ಕಳೆ ತುಂಬು. ನನ್ನೊಳಗಿನ ಹಣತೆಗೆ ಜೀವ ತುಂಬು.