ಇವತ್ತು ನಿನ್ನ ಎಲ್ಲ ಷರತ್ತುಗಳಿಗೂ ನಾನು ಬದ್ಧ. ಬಂದು ಬಿಡು. ನೀನು ಹೇಳಿದಂತೆ ಕೇಳುತ್ತೇನೆ. ಎಲ್ಲವನ್ನೂ ಒಪ್ಪಿಕೊಳ್ಳುತ್ತೇನೆ, ಎದುರಾಡುವುದಿಲ್ಲ. ನಿನ್ನಂತೆಯೇ ನಾನೂ ಆಗಿ ಬಿಡುತ್ತೇನೆ ಅದಕ್ಕಾಗಿ ಮನಸ್ಸು-ಬುದ್ಧಿ ಎಲ್ಲವನ್ನೂ ಪಕ್ಕಾಗಿಸಿದ್ದೇನೆ. ಯಾವ ಪ್ರಶ್ನೆಯನ್ನೂ ಕೇಳುವುದಿಲ್ಲ ; ಉತ್ತರಕ್ಕಾಗಿಯೇ ನನ್ನ ಕಿವಿಗಳಿನ್ನು ಮೀಸಲು. ನನ್ನ ಕಣ್ಣುಗಳೂ ಎತ್ತಲೂ ಚಲಿಸುವುದಿಲ್ಲ ; ನಿನ್ನನ್ನು ಬಿಟ್ಟು. ಇದರ ಆಣೆ ಪಡೆಯಲಾದರೂ ಒಮ್ಮೆ ಬಂದು ಬಿಡು.
ಅಂದು…ನನ್ನ ಬಾಳದಿಕ್ಕು ಬದಲಾಗುವ ಲಕ್ಷಣ ಕಂಡಾಗ ಭವಿಷ್ಯವನ್ನು ಅರಿಯಬೇಕಿತ್ತು. ಅದಾಗಲಿಲ್ಲ. ಆಗ ನಾನು ಸೋತಿದ್ದು ನಿಜ, ಒಪ್ಪಿಕೊಳ್ಳುತ್ತೇನೆ. ಆದರೆ ಅದೇ ಅಪರಾಧ ? ನನ್ನ ಸಾಮಾನ್ಯ ಕಣ್ಣುಗಳಿಗೆ ಅಷ್ಟೊಂದು ದೂರದ ನೋಟ ನಿಲುಕುವುದಾದರೂ ಹೇಗೆ ? ಅದಕ್ಕೇ ನಡೆಯುವುದು ಅನಿವಾರ್ಯ. ನಡೆದೆ. ಏನೂ ಸಿಗಲಿಲ್ಲ. ವಾಪಸು ಹೋದಲ್ಲಿಗೇ ಬಂದೆ. ಅಲ್ಲೂ ಪಡೆಯಲಿಕ್ಕೆ ಏನೂ ಇರಲಿಲ್ಲ. ಆದರೂ ದಾರಿಗೆ ನಾನು ಅಪರಿಚಿತನಾಗಿ ಉಳಿಯಲಿಲ್ಲ.
ನಿನಗೆ ಎಲ್ಲಾ ಗೊತ್ತೇ ಇದೆ. ನೀನು ಹೇಳಿದಂತೆ ಕೇಳಬೇಕಾದ ಆಗ ನಾನು ನಾನಾಗಿರಲಿಲ್ಲ. ನಾನು ನಿಲ್ಲುವ ಕ್ಷಣಗಳೂ ನನ್ನದಾಗಿರಲಿಲ್ಲ. ಎಲ್ಲವೂ ಯಾರದೋ ಆಗಿರುತ್ತಿದ್ದವು. ಅಪ್ಪ…ಅಮ್ಮ…ಅಕ್ಕ…ಅಣ್ಣ… ಚಿಕ್ಕಮ್ಮ… ಚಿಕ್ಕಪ್ಪ… ಸಂಬಂಧಿಕರು…ನೆಂಟರಿಷ್ಟರು…ನೆರೆ ಹೊರೆಯವರು…ಹೀಗೆ ನನ್ನ ಗಳಿಗೆಗಳೆಲ್ಲಾ ಅವರ ಪ್ರಯೋಗಶೀಲತೆಗಿದ್ದ ಅವಕಾಶಗಳಾಗಿದ್ದವು. ಅಕ್ಷರಶಃ ನಾನೊಬ್ಬ ಮಾನವ ರೋಬೊಟ್. ಅದರಲ್ಲೂ ಮಾತು ಬರುವ, ಮೌನ ತಿಳಿದ ರೋಬೊಟ್. ಆ ಎರಡರ ಸ್ವಾತಂತ್ರ್ಯದ ಕಲ್ಪನೆಯನ್ನು ಉದ್ದೇಶಪೂರ್ವಕವಾಗಿ ಮರೆತಿದ್ದೆ. ಮರೆವು ನೋವಿನ ತೀವ್ರತೆಯನ್ನು ಕಡಿಮೆ ಮಾಡಬಹುದೆಂಬ ನಂಬಿಕೆ ನನ್ನದು. ಆ ಸುದ್ದಿಯನ್ನು ಈಗ ಎತ್ತುವುದು ಬೇಡ, ಬಿಡು. ಎಲ್ಲರ ಪ್ರಯೋಗ ಶಾಲೆಯಲ್ಲಿ ನನ್ನನ್ನೂ ಅರಳಿಸುತ್ತಿದ್ದರು. ಹಾಗೆ ರೂಪುಗೊಳ್ಳುವ ಸ್ಥಿತಿ ತೀರಾ ಕಷ್ಟದ್ದು.
ನನ್ನೊಳಗಿನವನು ಹೊರಬರಲು ಅಣಕುವಾಗಲೆಲ್ಲಾ ಒಳಕ್ಕೆ ತಳ್ಳಿ ಪ್ರಯೋಗಕ್ಕೊಳಗಾಗುತ್ತಿದ್ದ ಪರಿ ಇವತ್ತಿಗೂ ಅಚ್ಚರಿ ಎನಿಸುತ್ತಿದೆ. ಇಂದು ನಿಲ್ಲಲು ಕಲಿತಿದ್ದೇನೆ, ನನ್ನ ಕಾಲುಗಳ ಮೇಲೆ. ನಿನ್ನನ್ನು ಒಪ್ಪಿಕೊಳ್ಳಲು ತಯಾರಿಗಿದ್ದೇನೆ. ಅದಕ್ಕೆ ಯಾರ ಅನುಮತಿಯೂ ಬೇಕಾಗಿಲ್ಲ. ಹೀಗಿರುವಾಗ ಆಗ ಹಾಗಿದ್ದೇನೆಯೇ ಎನ್ನುವುದೇ ನಂಬುವುದು ಕಷ್ಟ ಎನಿಸುತ್ತದೆ. ನಿಜ, ಭವಿಷ್ಯದ ಮುಂದೆ ಭೂತ ಯಾವಾಗಲೂ ಅಮರಚಿತ್ರ ಕಥೆಯಂತೆ ತೋರುತ್ತದೆ. ಅದರಲ್ಲಿನ ಪಾತ್ರಗಳೂ ಸಹ ಅಸಹಜವೆನ್ನಿಸುವುದುಂಟು.
ಒಬ್ಬೊಬ್ಬರದ್ದು ಒಂದೊಂದು ಪ್ರಯತ್ನ ; ಪರಸ್ಪರ ಪೈಪೋಟಿ. ಎಲ್ಲರಿಗೂ “ಮಾರುಕಟ್ಟೆ’ಗೆ ನಮ್ಮದೊಂದು “ಮಾಡೆಲ್” ಬಿಡಬೇಕೆಬ ಹಪಹಪಿಕೆ. ಅಪ್ಪನಿಗೂ ಅಷ್ಟೇ, ನೆಂಟರಿಗೂ ಅಷ್ಟೇ.
ಕಾಲೇಜಿನಿಂದ ಬಂದು ಕುಳಿತಿದ್ದೇ ಅಷ್ಟೇ. ಸಾಗರದಿಂದ ಬಂದ ರಾಮಿ ಮಾವ, “ಎಂಥದೇ, ಇವನಿಗೆ ಎಂಥ ಕಲಿಸ್ತೀದ್ದೀ?’ ಎಂದು ಕೇಳಿದ್ದ. ಕೊಟ್ಟಿಗೆಯಲ್ಲಿದ್ದ ಅಮ್ಮ ಅಲ್ಲಿಂದಲೇ “ಎಂಥದೋ ಮಾರಾಯಾ, ಆರ್ಟ್ಸ್ ಅಂತೆ’ ಎಂದು ಉತ್ತರಿಸಿದ್ದಳು. ರಾಮಿ ಮಾಮಾಗೆ ಬಹಳ ಬೇಸರ ಬಂತು ಅಮ್ಮನ ಉತ್ತರ ಕೇಳಿ. “ಎಂಥದೇ, ನಿಂಗೆ ತಲೆ ಸರಿ ಇಲ್ವಾ? ಸೈನ್ಸ್‌ಗೆ ಕಳಿಸಬೇಕಿತ್ತು’ ಎಂದವನೇ ನನ್ನತ್ತ ತಿರುಗಿ, “ನಿನಗೂ ಬುದ್ಧಿ ಇಲ್ವನಾ, ಹೋಗಿ ಹೋಗಿ ಆರ್ಟ್ಸ್ ತಗೊಂಡು ಎಂಥಾ ಮಾಡ್ತೀ? ’ ಎಂದು ಕೇಳಿದ್ದ. ಆಗ ಉತ್ತರಿಸಲಿಕ್ಕೆ ನನ್ನಲ್ಲಿ ಏನೂ ಇರಲಿಲ್ಲ. ಸುಮ್ಮನೆ ಮನೆಯ ಕಂಬವನ್ನು ನೋಡುತ್ತಾ ನಿಂತೆ.
ಆರ್ಟ್ಸ್‌ನಲ್ಲಿ ಇದನ್ನೇ ಕಲಿಸೋದು, ಕಂಬ ನೋಡಲಿಕ್ಕೆ’ ಎಂದು ರಾಮಿ ಮಾಮಾ ಹಂಗಿಸಿ ಅಪ್ಪ ಬರೋದನ್ನೇ ಕಾಯುತ್ತಾ ಕುಂತ.
ಅಷ್ಟರಲ್ಲಿ ಅಂಗಳದಲ್ಲಿ ಚಪ್ಪಲಿ ಸದ್ದಾಯಿತು. ಅಪ್ಪ ಬಂದ ಎನ್ನುವುದಕ್ಕೆ ಎರಡನೇ ಸದ್ದು. ಒಂದು ಚಪ್ಪಲಿನ ಗೆರೆಸಿ ಗೆರೆಸಿ ಬರುವುದರ ಸದ್ದು, ಮತ್ತೊಂದು ಅಲ್ಲಿಂದಲೇ ಅಮ್ಮನನ್ನು “ಏಯ್…ಏಯ್’ ಎಂದು ಕೂಗುವ ಅಲಾರಾಂ. ಒಳ ಬರುತ್ತಲೇ ರಾಮಿ ಮಾಮಾನ ಆಗಮನವನ್ನು ಕಂಡು “ಎಂಥ ಮಾರಾಯಾ, ದೂರ ಬಂದಿದ್ದೀ?’ ಎಂದು ಕೇಳುತ್ತಿದ್ದಂತೆ ಅಡುಗೆ ಮನೆಯಿಂದ ಅಮ್ಮ ಕುತ್ತಂಬರಿ ಬಿಸಿನೀರು ತಂದಿಟ್ಟಿದ್ದಳು.
ರಾಮಿ ಮಾಮಾ ಮಾತನಾಡಲು ಶುರು ಮಾಡಿದ. ಅಪ್ಪನದು ಸುಮ್ಮನೇ ಕೇಳುವ ಸರದಿ. ತನ್ನ ಆಲೋಚನೆಗಳ ಸರಣಿಯನ್ನೆಲ್ಲಾ ಅಪ್ಪನ ತಲೆಗೆ ಹರಿಬಿಟ್ಟು ಹೊರಟು ನಿಂತ. ರಾತ್ರಿ ಇದ್ದು ಹೋಗು ಎಂದರೂ ಕುದುರೆ ಮೇಲೆ ಬಂದವನಂತೆ ಹೊರಟೇ ಬಿಟ್ಟ. ಮಾಮಾ ಹೋಗಿ ಎಷ್ಟು ಹೊತ್ತಾದರೂ ಅಪ್ಪನ ತಲೆಯೊಳಗೆ ಆಲೋಚನೆಗಳ ಹುಳು ಓಡಾಡುತ್ತಲೇ ಇದ್ದವು. ಯಾವುದೋ ಒಂದು ಕ್ಷಣ ಅಪ್ಪನಿಗೂ ಹೌದೆನಿಸಿತು. “ಹೌದೇ, ಇಂವ ಸೈನ್ಸ್‌ಗೆ ಹೋಗ್ಲಿ’ ಎಂದು ಫರ್ಮಾನು ಹೊರಡಿಸಿಯೇ ಬಿಟ್ಟ.
ನಾನು ಎರಡನೇ ಪ್ರಯೋಗಕ್ಕೆ ರೆಡಿಯಾಗಿ ನಿಲ್ಲುವ ಪರಿಸ್ಥಿತಿ ಎದುರಾಯಿತು. ಅಮ್ಮನಿಗೆ ಯಾವುದು ಕಲಿತರೂ ಸರಿ. ಮರುದಿನ ಎಂದಿನಂತೆ ಕಾಲೇಜಿಗೆ ಹೋದೆ. ನನಗಿಂತ ಮೊದಲೇ ಪೇಟೆ ಕಡೆಗೆ ಹೋದ ಅಪ್ಪ ಹಾಜರಿ ಹಾಕುವವನಂತೆ ಶಾಲೆ ಎದುರಿನಲ್ಲಿದ್ದ. ಮಾಸ್ತರು ಬಂದದ್ದೇ ತಡ, “ಸ್ವಾಮಿ, ಇವನ್ನ ಸೈನ್ಸ್‌ಗೆ ಸೇರಿಸ್ಕೊಳ್ಳಿ’ ಎಂದು ಕೇಳಿದವನೇ ಅವರ ಉತ್ತರ ಬರುವ ಮೊದಲೇ “ಫೀಜು ಜಾಸ್ತಿ ಆದ್ರೆ ಕೊಡ್ತೆ’ ಎಂದ.
ಆದದ್ದು ಅಷ್ಟೇ. ನಂತರದ ಕ್ಷಣದಿಂದಲೇ ನಾನು ವಿಜ್ಞಾನ ವಿದ್ಯಾರ್ಥಿ. ನೀನೇನೋ ನಿಮ್ಮಪ್ಪನಿಗೆ ಹೇಳಿ ನಿನಗಿಷ್ಟವಾದದ್ದನ್ನೇ ತೆಗೆದುಕೊಂಡೆ. ನನ್ನ ಪರಿಸ್ಥಿತಿ ಹಾಗಿರಲಿಲ್ಲ. ನಿಧಾನಕ್ಕೆ ನನ್ನೊಳಗಿನ “ರಸಾಯನ’ ಕ್ಕೆ ವಿಜ್ಞಾನದ ರಸಾಯನವೂ ಒಗ್ಗಿಕೊಳ್ಳುತ್ತಾ ಬಂತು. ಹೇಗೋ ಕಷ್ಟಪಟ್ಟು, ಗುರುನರಸಿಂಹನ ದಯೆ ಎನ್ನಬೇಕೇನೋ? ಪಿಯುಸಿಯನ್ನು ಸೆಕೆಂಡ್ ಕ್ಲಾಸ್‌ನಲ್ಲಿ ಪಾಸಾದೆ.
ಆಗಷ್ಟೇ ಬ್ಯುಸಿನೆಸ್ ಮ್ಯಾನೇಜ್‌ಮೆಂಟ್ ಬಂದ ಕಾಲ. ಅಲ್ಪಸ್ವಲ್ಪ ವಿದ್ಯೆ ಕಲಿತವರ ಮನೆಯಲ್ಲೂ ವೈದ್ಯಗಿರಿ, ಎಂಜಿನಿಯರ್‌ಗಿರಿ ಬಿಟ್ಟರೆ ಅತ್ತಲೂ ಮನಸ್ಸು ಹೊರಳುತ್ತಿದ್ದ ಸಮಯವದು. ಕಾಲೇಜುಗಳಿಗೂ ವಿದ್ಯಾರ್ಥಿಗಳೆಂಬ ಸಂಖ್ಯೆ ಬೇಕಿತ್ತು. ಅವರ ಪ್ರಯೋಗಕ್ಕೂ ನಾವು ಅಣಿಯಾದೆವು. ನಮ್ಮಪ್ಪನ ಎರಡನೇ ಕಂತಿನ ಪ್ರಯೋಗಕ್ಕೂ ವೇದಿಕೆ ಸಿದ್ಧವಾಗಿತ್ತು. ಪಕ್ಕದ್ಮನೆ ಆಚಾರಿ ಮಗ ಬೊಂಬಾಯಿಯಲ್ಲಿ ಅದನ್ನೇ ಮಾಡ್ತಾ ಇರೋದಂತೆ. ಒಳ್ಳೆ ಕೆಲಸ, ಒಳ್ಳೆ ಸಂಬಳ ಸಿಗುತ್ತಂತೆ. ನಿಮ್ಮ ಮಗನಿಗೂ ಸೇರಿಸಿ.
ಬಹುಶಃ ಮೊದಲ ಮಾತು ಅದೇ ಇರಬೇಕು ಅನ್ಸುತ್ತೆ. ಅಪ್ಪನೆದುರು  ಇದ್ದ ಧೈರ್ಯವನ್ನೆಲ್ಲಾ ಒಂದೆಡೆ ತಂದುಕೊಂಡು “ಬಹಳ ಕಷ್ಟವಾಗುತ್ತೆ’ ಎಂದುಬಿಟ್ಟಿದ್ದೆ. ಅಪ್ಪನ ಕೋಪ ನೆತ್ತಿಗೇರಿತ್ತು. ಶಾಂತವಾಗಿ ಹರಿಯುತ್ತಿದ್ದ ನದಿಯ ಮೇಲೊಂದು ಯಾರೋ ಕೇರಿ ಹುಡುಗ ಬೀಸಿದ ಕಲ್ಲು ಉಂಟು ಮಾಡುವ ತಲ್ಲಣದಂತೆ ಮನೆಯ ಪರಿಸರವೇ ತಲ್ಲಣಗೊಂಡಿತ್ತು. “ನಿನಗೇನೋ ಬೇರೆ ಕೆಲಸ ಇದೆ, ಓದೋದು ಬಿಟ್ಟು. ಈಗ ಕಷ್ಟ ಪಡದೇ ಮುದ್ಕ ಆದ್ಮೇಲೆ ಕಷ್ಟಪಡ್ತೀಯಾ? ಎಂದವನೇ ದುರು ದುರು ನೋಡುತ್ತಾ ಬಾಗಿಲಿಂದ ಹೊರಗೆ ಹೋಗಿ ನಿಂತ.
ತೆಂಗಿನ ಮರದಲ್ಲಿ ಕಾಯಿಗಳು ಹಣ್ಣಾಗಿದ್ದವು. ಕೊಯ್ಯುವವ ನಾಳೆ ಬರುವವನಿದ್ದ. ಸರಿ ಸುಮಾರು ೫೦೦ ರಿಂದ ೭೦೦ ರವರೆಗೆ ಕಾಯಿ ಸಿಗಬಹುದು. ಎಲ್ಲ ಗುಣಿಸಿ-ಭಾಗಿಸಿ, ಕೂಡು-ಕಳೆದು ಒಳ ಬಂದವನೇ ನಿರ್ಧಾರ ಪ್ರಕಟಿಸಿದ. ಶಿವಮೊಗ್ಗದಲ್ಲಿ ಈ ಕೋರ್ಸ್ ಕಲಿಸೋ ಕಾಲೇಜಿದೆಯಂತೆ. ಅಲ್ಲಿ ಇದೇ ಕೋಡಿ ಕಾರಂತರು ಇದ್ದಾರೆ. ಅವರಿಗೆ ಹೇಳ್ತೀನಿ. ಏನೋ ವ್ಯವಸ್ಥೆ ಮಾಡ್ತಾರೆ. ಹೋಗಿ ಕಲಿ ಎಂದು ಹೇಳಿದವನೇ ಪೇಟೆಗೆ ಹೊರಟ.
ನನಗೆ ಅಚ್ಚರಿಯಾದದ್ದು ಅಪ್ಪನ ಲೆಕ್ಕಾಚಾರವ ಕಂಡು. ಕೋರ್ಸ್ ಕಲಿಯೋ ಕಾಲೇಜಿಂದ ಹಿಡಿದು, ಅಲ್ಲಿನ ವ್ಯವಸ್ಥೆ ಬಗ್ಗೆ ಎಲ್ಲಾ ಅಂದಾಜು ಮಾಡಿಬಿಟ್ಟಿದ್ದಾನೆ. ಒಮ್ಮೆ ಅವನ ಕಾಳಜಿ ಬಗ್ಗೆ ಹೆಮ್ಮೆ ಎನಿಸಿದ್ದು ನಿಜ, ಆದರೆ ಹೆಚ್ಚು ಹೊತ್ತು ಇರಲಿಲ್ಲ. ನನ್ನಕ್ಕನಿಗೋ ಸಿಕ್ಕಾಪಟ್ಟೆ ಖುಷಿ. ತನ್ನ ತಮ್ಮ ಸೂಟು-ಬೂಟು ಹಾಕಿಕೊಂಡು, ಆಳು-ಕಾಳು ಇಟ್ಕೊಂಡು ಬರೋ ಠೀವಿ ನೋಡಬೇಕೆನ್ನುವ ಸಂಭ್ರಮ. ಅದನ್ನು ಕೇಳಿ ನನಗೂ ನಗು ಬಂದಿತ್ತು. ಪ್ರಯೋಗ ಮುಗಿಯುವವರೆಗೂ ಹುಮ್ಮಸ್ಸು ಯಾರಲ್ಲೂ ಸತ್ತಿರಲಿಲ್ಲ. ಆದರೆ ಕೊನೆ ಹಂತದಲ್ಲಿ ಪ್ರನಾಳವೇ ಒಡೆದು ಹೋದರೆ ಏನು ಗತಿ ?
ಬಿಬಿಎಂನಲ್ಲಿ ಅಂತಿಮ ವರ್ಷ, ಫೇಲಾಗಿಬಿಟ್ಟೆ. ಸತ್ಯವಾಗ್ಲೂ ಹೇಳ್ತೇನೆ, ಅವತ್ತು ನನ್ನೊಳಗಿನವ ಬಿದ್ದು ಬಿದ್ದು ನಕ್ಕಿದ್ದ. ಅದೂ ಅತ್ಯಂತ ಸಂತೋಷದಿಂದ. ಒಮ್ಮೆಲೆ ಕೇಕೆ ಹಾಕಿ ನಗತೊಡಗಿದ್ದ. ಅವನ ಕೇಕೆಗೆ ಅಂಗಳದ ಹೂವುಗಳ ದಳಗಳೂ ಸಾಥ್ ನೀಡಿದ್ದವು. ಜತೆಗೆ ಕೋರಸ್ ಸೇರಿಸುವಂತೆ ಎಲೆಗಳೂ ಸಹ.
ಸಪ್ಪೆ ಮೋರೆ ಹೊತ್ತುಕೊಂಡು ರೋಬೋಟ್ ಮನೆಗೆ ಬಂತು. ಅದರ ನಿಯಂತ್ರಕ ನಿಯಾಮಕನಿಗಿಂತ ಕಟುಕನಾಗಿ, ರುದ್ರ ಭೀಕರನಾಗಿದ್ದ. ಆ ಕಾಲೇಜಿಗೆ ಸೇರಿದ ಮೇಲೆ ಶಿವಮೊಗ್ಗೆಗೆ ಊರಿನ ಪೈಕಿ ರಾಮು ಮಧ್ಯಸ್ಥರ ಮಗಳ ಮದುವೆಗೆ ಬಂದವ ನನ್ನ ಕಾಲೇಜನ್ನೂ ಹುಡುಕಿಕೊಂಡು ಬಂದಿದ್ದ. ಆಗ ನಾನು ಅಂಗಡಿಯ ಬಳಿ ನಿಂತಿದ್ದೆ. ಅದೆಲ್ಲವೂ ಈಗ ಅವನಿಗೆ ನೆನಪಾಯಿತು ಅಂದುಕೊಂಡದ್ದಕ್ಕಿಂತ ನೆನಪಿಗೆ ತಂದುಕೊಂಡ. ಬಾಯಿಗೆ ಬಂದಂತೆ ಬೈದ, ಅದರಲ್ಲಿ ನಾನು ನಿಷ್ಪ್ರಯೋಜಕ, ಅಯೋಗ್ಯ ಎನ್ನುವುದೆಲ್ಲಾ ಪುಂಖಾನುಪುಂಖವಾಗಿ ಬಂದವು. ಮನೆಯ ಗದ್ದೆ ಕಳೆ ಕೀಳಲು ಬರುತ್ತಿದ್ದ ಅಚ್ಚಿ ಗಂಡನ ಮೇಲೆ ಒಮ್ಮೊಮ್ಮೆ ಪ್ರಯೋಗವಾಗುತ್ತಿದ್ದ ಪದಗಳು ಇವು ಎಂದು ನನ್ನಕ್ಕೆ ಹೇಳಿದ ನೆನಪು.
ಸುಮ್ಮನೆ ತಲೆ ತಗ್ಗಿಸಿಕೊಂಡು ನಿಂತಿದ್ದೆ. ಏನೂ ಮಾತನಾಡಲಿಲ್ಲ. ಅವನಿಗೆ ತನ್ನ “ಮಾಡೆಲ್’ ಯಶಸ್ವಿಯಾಗಲಿಲ್ಲ, ತಾನು ಸೋತೆ ಎಂಬ ಅಸಹನೆ, ಸಿಟ್ಟು ಇತ್ತು. ಜತೆಗೆ ಅಕ್ಕಪಕ್ಕದವರಿಂದ ಮೊದಲೇ ಬೀಸಿಕೊಂಡಿದ್ದ ಹೊಗಳಿಕೆಯ ಗಾಳಿ ಸಹ ಈಗ ಬಿಸಿಯ ಹವೆಯಾಗಿ ತಟ್ಟತೊಡಗಿತು. ಆಚಾರಿ ಬಿಟ್ಟಾನೆಯೇ, “ನಿಮ್ಮ ಹುಡುಗ ಪ್ರಯೋಜನ ಇಲ್ಲಾರೀ’ ಎಂದು ಬಿಟ್ಟಾನೆಂಬ ಭಯ ಅಪ್ಪನದು. ಅವನು ಬರೀ ಅಪ್ಪನಿಗಷ್ಟೇ ಹೇಳುವುದಿಲ್ಲ. ಊರಿಗೇ ಹೇಳುತ್ತಾರೆ ಎಂಬ ಅಳುಕೂ ಸಹ.
ಎಲ್ಲರ ಪ್ರಯೋಗ ಫೇಲಾಗಿತ್ತು ; ನನ್ನೊಳಗಿನವ ಪಾಸಾಗಿದ್ದ. ಅವೆರಲ್ಲರೂ ಸೋತಿದ್ದರು, ಅಂದು ಈಗಲೂ ನೆನಪಿದೆ. ನನ್ನೊಳಗಿನ ಹಣತೆ ಹಚ್ಚಿಕೊಳ್ಳುವ ಧೈರ್ಯ ಬಂತು. ಬೆಳಕಿನಲ್ಲಿ ಒಂದೊಂದೇ ಹೆಜ್ಜೆ ಇಡಲು ಅಭ್ಯಾಸ ಆರಂಭಿಸಿದೆ. ಅದಕ್ಕೆ ನೀನು ಬೇಕಾಗಿತ್ತು. ಆದರೆ…ನೀನಿರಲಿಲ್ಲ.
ಆ ಬೆಳಕಿನೂರಿನಲ್ಲಿ ಬಾಳಬೇಕೆಂಬ ಹಂಬಲ, ಬಾಳಬಹುದೆಂಬ ವಿಶ್ವಾಸ ಹುಟ್ಟಿಸಿದವಳು ನೀನು. ನನ್ನನ್ನು ನಾನು ಪ್ರಯೋಗಕ್ಕೆ ಒಡ್ಡಿಕೊಳ್ಳಲು ತೊಡಗಿದಾಗ ಮಾದರಿಗಳು ಬೇಕಿತ್ತು. ಆಗ ಕಂಡದ್ದು ನೀನು. ಅಲ್ಲಿಯವರೆಗೂ ನಾನು ನಿನ್ನನ್ನು ಕಂಡದ್ದು ಹೊರಗಿನಿಂದಲೇ ; ಒಳಗಣ್ಣಿನಿಂದಲ್ಲ.
ನಿನ್ನನ್ನೇ ಹಿಂಬಾಲಿಸಿದೆ ; ಅನುಕರಿಸಿದೆ ; ಅನುಸರಿಸಿದೆ. ಇದ್ಯಾವುದೂ ನಿನಗೆ ತೋರಲಿಲ್ಲ. ಏಕಲವ್ಯನಂತೆ ಬೆಳೆದೆ. ನಿನ್ನಂತೆ ನಾನಾಗಬೇಕೆಂಬ ಹಂಬಲ ಯಾವುದೂ ನಕಲಲ್ಲ ಎಂಬುದನ್ನೇ ನಂಬಿಸಿಬಿಟ್ಟಿತು. ನಿನ್ನ ನಗು, ದುಃಖ, ಹರಟೆ, ಸಿಟ್ಟು ಎಲ್ಲವೂ ನನಗೆ ಬೇಕೆನಿಸುತ್ತಿತ್ತು. ಅದಕ್ಕಾಗಿ ಹಂಬಲಿಸಿದ್ದೆ, ಹೇಳುವ ಧೈರ್ಯ ಸೋತು ಹೋಗಿತ್ತು. ಅದೆಲ್ಲ ನನ್ನಾಗಿಸಿಕೊಳ್ಳಲು ಯಾವುದರ ಭಯವೂ ಇರಲಿಲ್ಲ. “ನಾನಾಗ’ ಬೇಕೆಂಬ ಪ್ರಕ್ರಿಯೆಯಲ್ಲಿ ಬೇರಾವುದರ ಪರಿವೆಯೂ ಇರಲಿಲ್ಲ. ಹಾಗಾಗಿ ನಿನ್ನ ಬೇರಾವುದೂ ನನಗೆ ಅರ್ಥವಾಗಲೇ ಇಲ್ಲ.

(ಹೊಸ ಕಥೆ, ಸ್ವಲ್ಪ ದೊಡ್ಡದಾಗಿದ್ದಕ್ಕೆ ಪೂರ್ವಾರ್ಧವಿದು)