ರೈತನೊಬ್ಬ ಹಾಲು ಕರೆಯುತ್ತಿದ್ದ. ಅದೇ ಹೊತ್ತಿಗೆ ಹಲ್ಲಿಯೊಂದು ಬಂದು ಅದನ್ನೇ ನೋಡತೊಡಗಿತು. ಹಾಲು ಕುಡಿಯಬೇಕೆಂದೆನಿಸಿ,”ಕೊಂಚ ಹಾಲು ಕೊಡುತ್ತೀಯಾ ಕುಡಿಯಲಿಕ್ಕೆ?’ ಎಂದು ರೈತನನ್ನು ಕೇಳಿತು. ಸರಿ, ಎಂದ ರೈತ ನೇರವಾಗಿ ಹಸುವಿನ ಕೆಚ್ಚಲಿನಿಂದಲೇ ಅದಕ್ಕೆ ಹಾಲು ಹರಿಸಿದ. “ಹಾಲು ಬಹಳ ರುಚಿಯಾಗಿದೆ’ ಎಂದು ಹೇಳಿದ ಹಲ್ಲಿ, ಪಕ್ಕದಲ್ಲಿದ್ದ ಕರುವನ್ನು ನೋಡಿತು.

“ಎಂಥಾ ಅದೃಷ್ಟ ಅದಕ್ಕೆ ? ದಿನವೂ ಇಂಥ ಹಾಲು ಕುಡಿಯೋ ಅದೇ ಪರಮ ಸುಖಿ. ಮುಂದಿನ ಜನ್ಮದಲ್ಲಿ ಕರುವಾದರೆ ಚೆನ್ನ’ ಎಂದುಕೊಂಡಿತು. ಅದರಂತೆ ಕರುವಾಗಿ ಹುಟ್ಟಿತು. ಇನ್ನು ನಾನು ಧನ್ಯ ಎಂದುಕೊಂಡಿತು ಮನದಲ್ಲಿ. ಕೆಲ ದಿನಗಳ ತರುವಾಯ ಕರುವಿಗೆ ಹಾಲು ಕುಡಿಯಲು ಬಿಡುವುದನ್ನ್ನು  ರೈತ ನಿಲ್ಲಿಸಿದ. ಜತೆಗೆ ಸಾಕಷ್ಟು ಹುಲ್ಲೂ ನೀಡುತ್ತಿರಲಿಲ್ಲ. ಹಸಿವು ಕಿತ್ತು ತಿನ್ನುತ್ತಿತ್ತು. ಅದರ ಕಣ್ಣಲ್ಲಿ ನೀರು ಬರತೊಡಗಿತು. “ಸದಾ ಹಾಲನ್ನು ಬಳಸುವ ರೈತನೇ ಸುಖಿ’ ಎಂದುಕೊಂಡ ಅದು, ರೈತನಾಗುವುದೇ ಲೇಸೆಂದಿತು.

ಆ ಆಸೆಯೂ ಈಡೇರಿತು. ರೈತನಾಗಿ ಹುಟ್ಟಿತು ಹಲ್ಲಿ. ದಿನವೂ ಹಾಲನ್ನು ಸಂಗ್ರಹಿಸಿ ಖುಷಿ ಪಡುತ್ತಿತ್ತು. ಎಲ್ಲ ಹಾಲನ್ನು ತನ್ನ ಮಾಲೀಕನಿಗೆ ಕೊಡಬೇಕಿತ್ತು. ಬೆವರು ಸುರಿಸಿ ದುಡಿಯಬೇಕಿತ್ತು. ಬಹಳ ದೂರದ ಕಾಡಿನಿಂದ ಕಟ್ಟಿಗೆ ಮತ್ತು ಹುಲ್ಲನ್ನು ತರಬೇಕಿತ್ತು. ದನದ ಕೊಟ್ಟಿಗೆ ಸ್ವಚ್ಛ ಮಾಡಬೇಕಿತ್ತು. ವರ್ಷಪೂರ್ತಿ ಕಷ್ಟಪಡಬೇಕಿತ್ತು. ಬಹಳ ಬೇಸರವೆನಿಸಿತು ಬದುಕು.

“ನಾನು ಹಾಲು ಕರೆದು, ಮೊಸರು ಮಾಡಿದರೆ ತಿನ್ನುವವನು ಮಾಲೀಕ. ಇದೆಂಥಾ ಬದುಕು’ ಎನಿಸಿತು ರೈತನಿಗೆ. ಮುಂದಿನ ಜನ್ಮದಲ್ಲಿ ಮಾಲೀಕನಾಗುವುದೇ ಸೂಕ್ತ ಎಂದು ಮಾಲೀಕನಾಗಿ ಹುಟ್ಟಿತು.

ಆದರೂ ಅದು ಸುಖದಿಂದ ಇರಲಾಗಲಿಲ್ಲ. ಹಲವು ಸಮಸ್ಯೆಗಳನ್ನು ಎದುರಿಸಬೇಕಿತ್ತು. ಹಲವು ಜನರೊಂದಿಗೆ ವ್ಯವಹರಿಸಬೇಕಿತ್ತು. ಕೆಲವರೊಂದಿಗೆ ಜಗಳಕ್ಕಿಳಿಯಬೇಕಿತ್ತು. ಇನ್ನೂ ಕೆಲವರು ಸಾಲ ಬೇಡಿ ಬರುತ್ತಿದ್ದರು. ಮತ್ತಷ್ಟು ಮಂದಿ ಸಮಸ್ಯೆಗೆ ಪರಿಹಾರ ಕೋರುತ್ತಿದ್ದರು. ಇಪ್ಪತ್ತನಾಲ್ಕೂ ಗಂಟೆಯೂ ಯೋಚನೆ, ನಿದ್ರೆ ಎಂಬುದು ಇರಲಿಲ್ಲ. ಆ ಒತ್ತಡದ ಜೀವನವೂ ಬೇಸರ ತಂದಿತು.

ಒಬ್ಬರ ಬದುಕಿನಿಂದ ಮತ್ತೊಬ್ಬರ ಬದುಕು ಹೋಲಿಸಿದರೆ ಉತ್ತಮವೇ. ಆದರೆ ಅವರವರ ಕಷ್ಟ ಅವರವರಿಗೆ ಎಂದುಕೊಂಡ ಹಲ್ಲಿ, ಮತ್ತೆ ಹಲ್ಲಿಯಾಗಿಯೇ ಹುಟ್ಟಲು ನಿರ್ಧರಿಸಿತು. ತಮ್ಮ ತಮ್ಮ ಜೀವನ ತಮಗೇ ಸುಖ.
( ಇದು ನೇಪಾಳದ ಜಾನಪದ ಕಥೆ. ಅಂತರ್ಜಾಲದಲ್ಲಿ ಹುಡುಕುತ್ತಿದ್ದಾಗ ಸಿಕ್ಕದ್ದು. ಶಾಶ್ವತ್ ಪರಜುಲಿ ಎಂಬವರು ಬರೆದದ್ದಂತೆ.)