ಅವನ ಬೊಗಸೆಯಲ್ಲಿ ಅವಳು, ತಂದ ಪ್ರೀತಿಯೆಲ್ಲಾ ಸುರಿದಳು. ಅವನು ಒಂದೂ ಹನಿ ಸೋರದಂತೆ ಜತನದಿಂದ ಕಾಯ್ದ. ಬದುಕು ಸುಂದರವಾಗಿ ಹರವಿಕೊಂಡಿತು. ಸಂತಸದ ಬಳ್ಳಿ ಚಿಗುರಿ ಹೂವಾಗಿ ಅರಳಿದಳು ಅವಳು. ಅವನು ಚಿಟ್ಟೆಯಾಗಿ ಬಂದ ; ಮಧು ಹೀರತೊಡಗಿದ ; ಸಂಭ್ರಮಿಸಿದ. ಜಾಣ ಹೂ, ಚಿಟ್ಟೆ ಹಾರಿ ಹೋಗುವ ಮುನ್ನ ಕಣ್ಣ ಮುಚ್ಚಿಕೊಂಡಿತು. ಈಗ ಒಳಗೆ ಅವರಿಬ್ಬರೇ…
***
ಅವಳಿಗೆ ಬೇಕಾಗಿದ್ದು ಬರಿಯ ಪುರುಷನಲ್ಲ ; ಕನಸ ಕಾಯುವವ. ಅದರಲ್ಲೂ ಅವಳ ಕನಸಿನ ಕಾವಲುಗಾರ. ತನ್ನ ಕಂಗಳೊಳಗೆ ಇರುವ ಪುಟ್ಟ ಪುಟ್ಟ ಕನಸುಗಳನ್ನು ಹಗೂರ ಹೊರ ತೆಗೆದು ನನಸಿನ ಸಾಧ್ಯತೆಯನ್ನು ತುಂಬಬೇಕು. ಮತ್ತೆ ಜೀವ ಕೊಟ್ಥು ತನ್ನದೆಂಬಂತೆ ಕಾಯಬೇಕು. ಕನಸು ಬೆಳೆದು ಬೆಳಕಿನಂಥ ಹೂವು ಬಿಟ್ಟಾಗ ಅದರ ಪರಿಮಳದಲ್ಲಿ ಲೀನವಾಗಬೇಕು. ಸುತ್ತಲ ಕತ್ತಲೆಗೆ ಅ ಹೂವುಗಳು ಬೆಳಕಾಗಬೇಕೆಂಬುದು ಅವಳ ಆಶಯವೂ ಹೌದು. ಅವಳಿನ್ನೂ ಹುಡುಕುತ್ತಿದ್ದಾಳೆ.
***
ಅವನು ಉದ್ದಕ್ಕೂ ಕನಸಿನ ಬೀಜಗಳನ್ನು ಬಿತ್ತುತ್ತಾ ಹೋದ. ಅದಕ್ಕೆ ನೀರೆಯುತ್ತಾ ಆಕೆ ಹಿಂದೆ ನಡೆದಳು. ಅವರ ಹಿಂದೆ ದೊಡ್ಡ ಕನಸಿನ ತಲೆಮಾರೇ ಬಂತು. ಮೊಳಕೆಯೊಡೆದ ಕನಸುಗಳೆಲ್ಲಾ ಪೈರಿನಂತೆ ಹಸಿರು ಬಣ್ಣ ಮೆತ್ತಿಕೊಂಡು ನಿಂತವು. ಅದರ ಮಧ್ಯೆ ಇವರು ನಿಂತು ಸಂಭ್ರಮಿಸಿದರು. ಆ ಬಣ್ಣ ಇವರನ್ನೂ ವ್ಯಾಪಿಸಿತು. ಅವನು ನಕ್ಕ, ಅವಳ ಕೆನ್ನೆ ಕೆಂಪೇರಿತು. ಇವಳ ನಾಚಿಕೆ ಅವನೊಳಗೆ ರಿಂಗಣಿಸಿತು. ಇಬ್ಬರೂ ಮೋಹಿಸಿದರು, ಪ್ರೀತಿಸಿದರು, ಸೊಗಸು ತುಂಬಿಕೊಂಡು ಮೆರೆದರು. ಕೊನೆಗೆ ಬದುಕೆಂದು ಹೆಸರಿಟ್ಟರು !
***
ಬದುಕು ಲೆಕ್ಕಾಚಾರ. ಸಂಕಲನ, ವ್ಯವಕಲನ, ಗುಣಾಕಾರ, ಭಾಗಾಕಾರ ಎಲ್ಲವೂ ಇದ್ದದ್ದೇ. ಒಮ್ಮೊಮ್ಮೆ ಪೈಥಾಗಾರಸ್ ನ ಪ್ರಮೇಯವೂ ನುಸುಳುವುದುಂಟು. ಹಾಗೆ ನೋಡಲು ಗಣಿತದ ಕೋನ ಇರಬೇಕು. ಒಟ್ಟು ಪ್ರೀತಿಯೆಂದರೂ ಕೊಡುವುದು, ಪಡೆಯುವುದು ಮತ್ತು ಕಳೆದುಕೊಳ್ಳುವುದು.
(ಪ್ರೇಮಿಗಳ ದಿನ ನಿತ್ಯವೂ. ಆದರೂ ಅದಕ್ಕೊಂದು ದಿನವೆಂದಾಗಿದೆ. ಈ ಹಿನ್ನೆಲೆಯಲ್ಲಿ ಸುಮ್ಮನೆ ಹೊರಟ ಸಾಲುಗಳ ಮೆರವಣಿಗೆ)