ಪುಟ್ಟ ಅಂಗಡಿ ಬಾಗಿಲಿಗೆ ಹೊಡೆದಿರುವ ಆಣಿಯಲ್ಲಿ ಚಪ್ಪಲಿ ಸರ ತೂಗುತ್ತಿದೆ. ಬಗೆ ಬಗೆಯ ಪಾದರಕ್ಷೆಗಳು. ರೂಪ, ಬಣ್ಣ ಎಲ್ಲವೂ ಆಕರ್ಷಕ. ಒಂದರ ಕೆಳಮೈ  ಸಂಪೂರ್ಣ ಪ್ಲಾಸ್ಟಿಕ್, ಮತ್ತೊಂದರದ್ದು ಚರ್ಮ. ಇನ್ನೂ ಒಂದರದ್ದು ಮತ್ತೂ ಏನೋ ? ಬಲಗಾಲಿನ ಉಂಗುಷ್ಟಕ್ಕಿದ್ದ ಅಲಂಕಾರ ಎಡಗಾಲಿನ ಉಂಗುಷ್ಟಕ್ಕೂ ಇದೆ. ಎಲ್ಲವೂ ಒಂದೇ ನಮೂನೆ, ಅವಳಿಗಳು.

ಮೋಚಿ ಈಜೀವಗಳ ಬ್ರಹ್ಮ. ಹಣೆ ಮೇಲೆ ಬರೆದರೂ ಅವನೇ. ಅವತಾರ ಕಲ್ಪಿಸಿದವನೂ ಅವನೇ. ದೇಹಕ್ಕೆ ಆತ್ಮ ಜೋಡಿಸಿ ಹೊಲೆದಿದ್ದಾನೆ ; ಸಂಬಂಧದ ನೂಲಿನಿಂದ. ಒಂದನ್ನೊಂದು ಬಿಡಲಾರದು. ನಂಟಿಗೆ ಅಂಟು ಬೇರೆ ಹಚ್ಚುತ್ತಾನೆ. ಅದಕ್ಕೆ ಚಪ್ಪಲಿಗೆ ದೇಹ ಬೇರೆಯಿದೆ ; ಆತ್ಮವೇ ಬೇರೆ. ಅದೇ ನಮ್ಮ ಬಾಯಲ್ಲಿ “ಸೋಲ್’ ಆದದ್ದು. ಸೋಲ್ ಎಂದರೆ ಆತ್ಮವೂ ತಾನೆ. ಚಪ್ಪಲಿಯ ಸೋಲ್ “ಮೆಟ್ಟಿ’ ನ ಆತ್ಮ. ಆ ಬ್ರಹ್ಮನ ಅಧೀನ ಈ ಮೋಚಿ ಸಹ ಬ್ರಹ್ಮ.

ಆಗಾಗ್ಗೆ ಸಂಬಂಧ ಬೇರಾದೀತು ಎಂದಾಗ ಮತ್ತೊಮ್ಮೆ ಅಂಟು ಹಚ್ಚಿ ಒಣಗಿಸುತ್ತಾನೆ. ಮತ್ತೆ ಸಂಬಂಧ ಹಸಿ ಹಸಿ. ಮತ್ತಷ್ಟು ಕಾಲ ಜೀವನ. ನಮ್ಮ ಹಾಗೆ ನಾವು ತುಳಿಯುವ ಅವೂ. ಥೇಟ್ ನಮ್ಮಂತೆಯೇ.

ಸಂಸಾರದಲ್ಲಿ ಸರಿಗಮ ಹಾಡುವ ಖಯ್ಯಾಲಿ. ಆ ಹಾಡಿನ ದುಡಿತಕ್ಕೆ ಅವು ಶರಣು. “ಆತ್ಮ’ ಇರುವವರೆಗೆ ಬದುಕು. ನಂತರ ಪ್ರಕೃತಿಯಲ್ಲಿ “ಲೀನ’. ಎಲ್ಲೆಂದರಲ್ಲಿ, ಹೇಗೆಂದರೆ ಹಾಗೆ.

ನೂಲು ಕಡಿದು ಹೋದರೂ ಪಡೆದ ಆಯಸ್ಸಿಗೆ ಖೋತಾ ಇಲ್ಲ. ಮೋಚಿ ಮತ್ತೊಮ್ಮೆ ಹೊಸ ದಾರದಲ್ಲಿ ಹೊಲೆದು ಕೊಡುತ್ತಾನೆ. ಅನುರೂಪವೋ, ಪ್ರತಿರೂಪವೋ ನಂತರದ ಮಾತು. ನಮ್ಮ ಸಂಬಂಧ ಹಳಸಿ ಹೋಗಿ ಮತ್ತೊಂದು ಸಂಬಂಧ ಹುಡುಕಿಕೊಂಡಂತೆ. ಮತ್ತಷ್ಟು ದೂರ ಸಾಗಲಿಕ್ಕೆ ಒಂದು ಜೊತೆಯಷ್ಟೇ. ಆಯಸ್ಸಿನ ಲೆಕ್ಕಾಚಾರದಲ್ಲಿ ಇದ್ದದ್ದಷ್ಟೇ. ಸವೆಯುವುದೆಂದರೆ ಆತ್ಮ-ದೇಹ ಒಂದಾದಂತೆ ; ಇದೊಂದು ಬಗೆಯ “ಅದ್ವೈತ’ !

ಎರಡು ಜೀವಕ್ಕೂ ಒಂದೇ ಹೆಸರು-ಚಪ್ಪಲಿ. ನಮ್ಮ “ದಂಪತಿ’ಯ ಹಾಗೆ. ಒಂದು ಬಿಟ್ಟು ಮತ್ತೊಂದಿಲ್ಲ. ಬೆಲೆಯೂ ಅಷ್ಟೇ. ಒಂದಿದ್ದರೆ ಮತ್ತೊಂದಕ್ಕೆ. ಇಬ್ಬರೂ ಇದ್ದರೆ ಬದುಕಿಗೂ ಬೆಲೆ. ಮೋಚಿ ಬಳಿ ಹಳವುಬಾರಿ ರೂಪುಗೊಂಡರೂ ಒಂದು ದಿನ ಪರ್ಯಟನ ವೀರನ ಪ್ರಯಾಣಕ್ಕೆ ಪೂರ್ಣ ವಿರಾಮ. ಮತ್ತೊಂದದ್ದೂ ಆಗ “ಜೀವ’ದಾನ. ಜೋಡಿ ಜೀವಗಳ ಕಥೆಯಲ್ಲಿ ಸಹಬಾಳ್ವೆ-ಸಮಾನತೆ-ಸಹ “ಗಮನ’ ಪದ್ಧತಿ.
(ಮೋಚಿ ನನಗೆ ಕುತೂಹಲಿ. ಚಪ್ಪಲಿಯ ಅಂಗಡಿಯಲ್ಲಿ ಕುಳಿತಾಗ ಅವನು, ಅವನ ಕೆಲಸ, ನಮ್ಮ ಚಪ್ಪಲಿ, ಬದುಕು ಎಲ್ಲದರ ಬಗೆಗಿನ ಸಂಬಂಧ ಕುರಿತು ಮೂಡಿಬಂದ ಲಹರಿಯಿದು)