ಬರೀ ಕತ್ತಲು
ಅಂಗಳದಲ್ಲಿ ಯಾವ ಕುರುಹೂ ಇಲ್ಲ
ಪುಟ್ಟ ಪುಟ್ಟ ಚಪ್ಪಲಿಗಳು,
ಕುಂಟೋಬಿಲ್ಲೆಗೆ ಕೊರೆದ ಗೆರೆಗಳು
ಗೋಲಿ ಆಡಲಿಕ್ಕೆ ತೋಡಿದ ಗುಂಡಿಗಳು
ಹೋಗಲಿ, ಗೋಡೆಗೆ ಒರಗಿದ ಪುಟ್ಟ ಸೈಕಲ್

ಸಂಜೆಯಾಗಲಿ, ಬೆಳಗ್ಗೆಯಾಗಲಿ
ಬಾಗಿಲಲ್ಲಿ ಬಂದು ಕಾಯುವುದು ಬಿಟ್ಟರೆ
ಇನ್ಯಾವ ಕುರುಹೂ ಇಲ್ಲ

ಒಂದು ದಿನ
ಆ ಮನೆಯಲ್ಲಿ ಬೆಳಕು ಹೊತ್ತಿತು
ಅಳುವಿನ ಸದ್ದು
ಬೆಳಕಿನದ್ದೇ ಸದ್ದಿರಬೇಕು
ಎಂದುಕೊಂಡರು ಸುತ್ತಲಿನವರು

ಬೆಳಕು ಹೊತ್ತಿಕೊಂಡೇ ಇತ್ತು
ಅಂಗಳದಲ್ಲಿ ಒಂದೊಂದೇ
ಕುರುಹುಗಳು ಮೂಡ ತೊಡಗಿದವು
ಕಟ್ಟಿಕೊಂಡ ಕನಸುಗಳಿಗೆಲ್ಲಾ
ಅದರದ್ದೇ ಛಾಯೆ

ಬೆಳಕು ಉರಿಯುತ್ತಲೇ ಇತ್ತು
ಅಪರಿಚಿತನೊಬ್ಬ
ಅದೇ ಹಾದಿಯಲ್ಲಿ ಬಂದ
ಕಣ್ಣು ಕುಕ್ಕಿತು ಬೆಳಕು
ಅರೆಕ್ಷಣ ಕಣ್ಣು ಮುಚ್ಚಿ ನಿಂತ
ಏನನಿಸಿತೋ, ಮುಂದಕ್ಕೆ ಹೆಜ್ಜೆ ಇಟ್ಟ

ಮತ್ತೆ ಅಲ್ಲೀಗ ಕತ್ತಲೆ
ಅಳುವಿನ ಸಾಮಗಾನ