ತಮಾಷೆಯ ಸಂಗತಿ ಹೀಗೆ ಆರಂಭವಾಗುತ್ತದೆ, ನೋಡಿ. ಹಲವು ವರ್ಷಗಳ ಆಲೋಚನೆ ಜಾರಿಯಾದದ್ದು  ಮೊನ್ನೆ (ಫೆ.2). ರಾಷ್ಟ್ರಪತಿಯವರಾದ ಪ್ರತಿಭಾ ಪಾಟೀಲ್ ಬೆಂಗಳೂರಿನಲ್ಲಿ ಈ ರಥಕ್ಕೆ (ಲಕ್ಸುರಿ ಟ್ರೈನ್) ಚಾಲನೆ ನೀಡಿದರು. ಅಲ್ಲಿಂದ ಮಧ್ಯಾಹ್ನ 1. 40 ರ ಸುಮಾರಿಗೆ ಹೊರಟ ರಥ (ರೈಲು) ಬಂದು ಮೈಸೂರಿಗೆ ತಲುಪಿದ್ದು ಸಂಜೆ 4. 4೦ ಕ್ಕೆ.

ಸಹಜವಾಗಿಯೇ ಸುದ್ದಿ ಮಾಡಲೆಂದು ಸುವರ್ಣ ರಥದ ನಿರೀಕ್ಷೆಯಲ್ಲಿದ್ದೆ ರೈಲ್ವೆ ಸ್ಟೇಷನ್‌ನಲ್ಲಿ. ತಿಳಿ ನೇರಳೆ ಬಣ್ಣಕ್ಕಿಂತ ಸ್ವಲ್ಪ ಕಡುವಾದ ಹಾಗೆಂದು ಕಡು ನೇರಳೆ ಬಣ್ಣ ಎಂದು ಹೇಳಲಾಗದ ಸುವರ್ಣ ರಥ (ಗೋಲ್ಡನ್ ಚಾರಿಯೇಟ್). ರಾಜಸ್ತಾನದ ಪ್ಯಾಲೇಸ್ ಆನ್ ವೀಲ್ಸ್, ಮಹಾರಾಷ್ಟ್ರದ ಡೆಕ್ಕನ್ ಒಡಿಸ್ಸಿಯಂಥ ಐಷಾರಾಮಿ ರೈಲುಗಳ ನಂತರ ನಮ್ಮ (ಕರ್ನಾಟಕ) ಸುವರ್ಣ ರಥ ಬಂದಿದೆ. ಹಿಂದೆಯೂ ಅದರ ಅದ್ಧೂರಿತನದ ಬಗ್ಗೆ ಸುದ್ದಿ ಬರೆದಿದ್ದೆವು.

ಜತೆಗೆ ‘ರಥ ಯಾಕೆ ಆಗಿಲ್ಲ? ’ ಎಂದು ಶಾಸನ ಸಭೆ ಸದಸ್ಯರಿಂದ ವಿಧಾನಮಂಡಲ ಕಲಾಪಗಳಲ್ಲಿ ಪ್ರಶ್ನೆ ಕೇಳಿಸಿ, ಸರಕಾರ ಕೊಟ್ಟ ಉತ್ತರ ಬರೆದೂ ಬರೆದೂ ಸಾಕಾಗಿತ್ತು. ಎಷ್ಟೋ ಬಾರಿ ನಮ್ಮ ಸೀನಿಯರ್‌ಗಳು ಪ್ರತಿ ಅಧಿವೇಶನದಲ್ಲೂ ಪ್ರಸ್ತಾಪವಾಗುತ್ತಿದ್ದ ಪ್ರಶ್ನೆಗೆ ‘ಹಳೇ ಫೈಲ್‌ಗೇ ಡೇಟ್ ಚೇಂಜ್ ಮಾಡಿದರಾಯಿತು’ ಎನ್ನುತ್ತಿದ್ದರು.

 ಇಂಥ ರೈಲನ್ನು ನೋಡಬೇಕು ಎಂಬ ಕುತೂಹಲದಿಂದಲೇ ಮೈಸೂರು ರೈಲು ನಿಲ್ದಾಣಕ್ಕೆ ಹೋದೆ. ಅದಕ್ಕಿಂತಲೂ ಮುಖ್ಯವಾಗಿ ಬೆಂಗಳೂರಿಗೆ ಹೊರಟಿದ್ದೆ. ತಿರುಪತಿ ಪ್ಯಾಸೆಂಜರ್‌ನಲ್ಲಿ ನನ್ನ ಮಿತ್ರರಾದ ವೆಂಕಟೇಶ್ ಭಟ್ ಮತ್ತು ಪಂ. ವೀರಭದ್ರಯ್ಯ ಹಿರೇಮಠ್ ಅವರು ಟಿಕೆಟ್ ಪಡೆದು ಸೀಟು ಹಿಡಿದಿದ್ದರು. ಐದಕ್ಕೆ ಹೊರಡಬೇಕಿತ್ತು. ಅದಕ್ಕೆಂದೇ ನಿಲ್ದಾಣಕ್ಕೆ ಹೋದವನ ಎದುರು ಸುವರ್ಣ ರಥ ಬಂದು ನಿಂತಿತು.

ನನಗೋ ಆಶ್ಚರ್ಯ. ತಿರುಪತಿ ಪ್ಯಾಸೆಂಜರ್ ಹೊರಡಲು ಇನ್ನೂ ಹದಿನೈದು ನಿಮಿಷವಿದ್ದದ್ದರಿಂದ ರಥವನ್ನು ಹೊಕ್ಕಲು ಹೋದೆ. ನನ್ನ ಆಂಗ್ಲ ಪತ್ರಕರ್ತೆ ಗೆಳತಿ ಪ್ರೀತಿ ನಾಗರಾಜ್ ಬಂದರು. ಒಳಗೆ ಇಣುಕುವಷ್ಟರಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ  ನಿಗಮದ ಸಾರ್ವಜನಿಕ ಸಂಪರ್ಕ ಅಧಿಕಾರಿಯೊಬ್ಬರು ನಮ್ಮನ್ನು ಗುರುತು ಹಚ್ಚಿ ‘ಬನ್ನಿ, ನೋಡಿ’ ಎಂದು ಒಳ ಕರೆದರು. ಒಳಗೆ ಹೋದಾಗ ಅನಿಸಿದ್ದು , ಹೊರಗಿನ ಡಬ್ಬವಷ್ಟೇ ರೈಲೆನ್ನಲು.

 ಒಳಗೆಲ್ಲಾ ಪಂಚತಾರಾ ಐಷಾರಾಮಿ ಕೋಣೆಗಳೇ.  ರೈಲು ಮತ್ತೆ ಬೆಂಗಳೂರಿನತ್ತ ಹೊರಡಲು ಅನುವಾಯಿತು. ನಾವೂ ಬರಬಹುದೇ ಎಂದು ತಮಾಷೆಗೆ ಕೇಳಿದ್ದಕ್ಕೆ ಕೆಎಸ್‌ಟಿಡಿಸಿ ಅಧಿಕಾರಿ ರತ್ನಾಕರ್ ‘ಒಪ್ಪಿಕೊಂಡು ಬಿಡಬೇಕೇ? ಎಂದಾದರೂ ಒಮ್ಮೆ ಹೋಗಬಹುದು.

ಆದರೆ ಉದ್ಘಾಟನೆಯಾದ ದಿನದಂದಿನ ಸಂಭ್ರಮವೇ ಬೇರೆ. ಅಲ್ಲದೇ ಸುದ್ದಿ ಮಾಡಲು ಸಿಕ್ಕ ಖುಷಿ. ನಮ್ಮ ನೆಚ್ಚಿನ ನಟನ ಹೊಸ ಫಿಲ್ಮ್‌ನ್ನು ಮೊದಲ ದಿನವೇ ರಶ್ಶ್‌ನಲ್ಲಿ ನುಗ್ಗಿ ಟಿಕೇಟು ಪಡೆದು ನೋಡಿದ ಸಂಭ್ರಮದಿಂದ ಉಳಿದವರಿಗೆ ಕಥೆ ಹೇಳುವುದಿದೆಯಲ್ಲಾ, ಬೊಂಬಾಟ್. ಅದೇ ಭಾವನೆಯೇ ನಮ್ಮನ್ನು ಆವರಿಸಿತು. ಹತ್ತು ನಿಮಿಷದ ನಂತರ ರಥ ಹೊರಟಿತು.

ಹೊರಗೆ ರೈಲಿನ ಶಬ್ದವೊಂದು ಬಿಟ್ಟರೆ (ಕೋಣೆಗಳಲ್ಲಿಲ್ಲ) ಮತ್ತೆ ಎಲ್ಲೂ ರೈಲು ಅನಿಸದು. 19 ಬೋಗಿಗಳಿಂದ ಅಲಂಕೃತವಾದ ರೈಲಿನಲ್ಲಿ 11 ಪ್ರಯಾಣಿಕರಿಗೆಂದೇ ಸೀಮಿತ. ಅದಕ್ಕೆ ಇಟ್ಟಿರುವ ಹೆಸರೂ ಶಾತವಾಹನ, ಗಂಗಾ, ಕದಂಬ, ಕಲಚೂರಿ, ವಿಜಯನಗರ, ಯದುಕುಲ, ರಾಷ್ಟ್ರಕೂಟ, ಹೊಯ್ಸಳ, ಆದಿಲ್‌ಶಾಹಿ, ಬಹಮನಿ, ಚಾಲುಕ್ಯ. ಉಳಿದ ೨ ಬೋಗಿಗಳು ಕ್ಯಾಂಟೀನ್ ಮತ್ತು ಅಡುಗೆಗೆ. ಒಂದು ರುಚಿ ಮತ್ತು ಮತ್ತೊಂದು ನಳಪಾಕ. ‘ಆರೋಗ್ಯ’ ಬೋಗಿಯಲ್ಲಿ ಜಿಮ್, ಮಸಾಜ್ ಪಾರ್ಲರ್. ಬಾರ್ ಮತ್ತು ಲಾಂಜ್‌ನ ಬೋಗಿಯಿದೆ. ಆ ಬೋಗಿಗೆ ಮದಿರೆ ಎಂದು ಹೆಸರಿಡಲು ಅಧಿಕಾರಿಗಳು ಮುಂದಾದಾಗ ಸಾರ್ವಜನಿಕರು ತರಾಟೆಗೆ ತೆಗೆದುಕೊಂಡಿದ್ದರು. ‘ನೀವು ಕುಡಿದು ಮಜಾ ಮಾಡುವುದಾದರೆ ಮಾಡಿ. ಅದಕ್ಕೆ ಮತ್ತೆ ಪ್ರಚಾರ ಅಗತ್ಯವಿಲ್ಲ’ ಎಂದು ತಿಳಿ ಹೇಳಿದರು.

ಯಾಕೋ? ಮದಿರೆ ಪದ ಬಂದಾಗಲೆಲ್ಲಾ ವಿವಾದದ ಕಿಡಿ ಹೊತ್ತದೇ ಬಿಡುವುದಿಲ್ಲ. ಹಿಂದೊಮ್ಮೆ ಮುಖ್ಯಮಂತ್ರಿಯಾಗಿದ್ದ ಜೆ. ಎಚ್. ಪಟೇಲರು ತಮ್ಮ ಸಂಗಾತಿಗಳನ್ನು ಹೆಸರಿಸುತ್ತಾ ‘ಮದಿರೆ ಮತ್ತು ಮಾನಿನಿ’ ಎಂದು ಹೇಳಿಬಿಟ್ಟಿದ್ದರು. ಬಂತು ನೋಡಿ, ಜನತೆಯಿಂದ ವಿರೋಧ. ಒಬ್ಬ ಮುಖ್ಯಮಂತ್ರಿಯಾಗಿ ಹೀಗೆ ಹೇಳಬಹುದೇ? ಎಂದು ಮುಗಿ ಬಿದ್ದಿದ್ದರು. ‘ಮುಖ್ಯಮಂತ್ರಿಯಾಗಿ ಹೀಗೆ ಹೇಳಿ ರಾಜ್ಯದ ಮಾನ ಹರಾಜು ಹಾಕುವುದು ಬೇಡ’ ಎಂದು ಬುದ್ಧಿ ಹೇಳಿದ್ದರು. ಅದು ಅವರಿಗೆ ಅರ್ಥವಾಯಿತೋ ಇಲ್ಲವೋ ? ಯಾಕಂದ್ರೆ ಅವರು ಅರ್ಥವಾಗಿ ಮಾತನಾಡೋದೇ ಹೆಚ್ಚು.

ಹಾಗಾಗಿ ಮದಿರೆ ಹೆಸರನ್ನು ಕೈ ಬಿಟ್ಟರು, ಮದಿರೆಯನ್ನು ಒಳಗೇ ಇಟ್ಟುಕೊಂಡರು. ಉಳಿದಂತೆ ಒಂದರಲ್ಲಿ ಸಭಾಂಗಣವಿದೆ. ಅಲ್ಲಿ ಪಾರ್ಟಿ ನಡೆಸಬಹುದು. ನಡುಗುತ್ತಾ ಸಾಗುವ ರಥದಲ್ಲಿ  ಮದಿರೆಯನ್ನೇರಿಸಿ ಮೆಲ್ಲನೆ ಹೆಜ್ಜೆ ಹಾಕಬಹುದು. ಇನ್ನೆರಡು ಬೋಗಿ ರಥಕ್ಕೆ ಇಂಧನ ಪೂರೈಸುವಂಥವು. ಮತ್ತೊಂದರಲ್ಲಿ ಸಿಬ್ಬಂದಿಗಳ ವಾಸಕ್ಕೆ.

ಬೆಂಗಳೂರಿನಿಂದ ಮೈಸೂರು,ಕಬಿನಿ,ಬೇಲೂರು,ಹಳೇಬೀಡು,ಶ್ರವಣಬೆಳಗೊಳ,ಹಂಪಿ,ಬದಾಮಿ,ಪಟ್ಟದಕಲ್ಲು,ಐಹೊಳೆ, ಗೋವಾ-ಒಟ್ಟು 7 ದಿನ. ದಿನವೊಂದಕ್ಕೆ ಸುಮಾರು 13 ಸಾವಿರ, ಒಟ್ಟು 7 ದಿನಕ್ಕೆ 1 ಲಕ್ಷ ರೂ., 88 ಮಂದಿಗೆ ಅವಕಾಶ.

ಬೇಲೂರು, ಹಳೇಬೀಡು, ಮೈಸೂರು ಶೈಲಿಯ ವಿನ್ಯಾಸ ಬೋಗಿಗಳಿಗೆ ಚೆಂದ ನೀಡಿದೆ. ಮೇಪಲ್ ಕಂಪನಿಗೆ ಉದರ ಉಪಚಾರದ ನಿರ್ವಹಣೆ. ಕಂಪನಿ ದಿಲ್ಲಿ ಮೂಲದ್ದು. ಆದರೂ ಪುಣ್ಯಕ್ಕೆ ಪರಿಚಾರಿಕೆಗೆ ಆಯ್ದುಕೊಂಡಿದ್ದು ಬಹುತೇಕ ಕನ್ನಡಿಗರು. ಕೊಡಗು-ಕರಾವಳಿಯವರಿದ್ದಾರೆ. ಕರ್ನಾಟಕದ ತಿನಿಸು ಪೂರೈಸುವ ಹೊಣೆ ಕುಂದಾಪುರದ ಅಣ್ಣಪ್ಪಶೆಟ್ಟರದು.

ಪರಿಚಾರಕರಿಗೆ ಕೊಡವರ ವೇಷ. ಇನ್ನೊಂದು ಮಹತ್ವದ ಸಂಗತಿ ಹೇಳಬೇಕು. ಈ ಮೂರೂ ರೈಲುಗಳ ಪೈಕಿ ನಮ್ಮ ರಥದಲ್ಲಿ ಮಾತ್ರ ಮೊದಲ ಬಾರಿಗೆ ಪರಿಚಾರಿಕೆಗೆ ನೇಪಾಳದ ಮೇರಿ, ಮಂಗಳೂರಿನ ರಶ್ಮಿ ಜೋಯಿಸ್, ತಮಿಳುನಾಡಿನ ಭಾರತಿ ಕೃಷ್ಣನ್ ನಾಯ್ದು, ಮಹಾರಾಷ್ಟ್ರದ ರುಚಿತಾ ಕರೆ ಹಾಗೂ ಗೋವಾದ ಸೀಮಾ ಸಿಕ್ವೇರಾ ಇದ್ದಾರೆ.

ನನಗೆ ಖುಷಿಯಾಗಿದ್ದು ಅವರ ಧೈರ್ಯ ಕಂಡು. ವಾರದ ಏಳೂ ದಿನ ರೈಲಿನಲ್ಲೇ ತಮ್ಮ ಕುಟುಂಬವನ್ನು ಬಿಟ್ಟಿರಬೇಕು. ಪ್ರವಾಸಿಗರ ಬೇಕು-ಬೇಡಗಳನ್ನು ಕೇಳಿಕೊಂಡು. ಜತೆಗೆ ಎದುರಾಗಬಹುದಾದ ಮುಜುಗುರದ ಸನ್ನಿವೇಶಗಳನ್ನು ಎದುರಿಸಲೂ ಮಾನಸಿಕವಾಗಿ ಸಿದ್ಧರಾಗಿ. ಅವರ ಕುಟುಂಬವೂ ಒಪ್ಪಿಗೆ ನೀಡಿದ್ದು ಅಭಿನಂದನೀಯ. ‘ಹೇಗೆ ? ಯಾವ ರೀತಿ ಸಿದ್ಧರಾಗಿದ್ದೀರಿ?’ ಎಂದು ನಾನು ಮತ್ತು ಪ್ರೀತಿ ಕೇಳಿದೆವು. ಅದಕ್ಕೆ ಉಲ್ಲಾಸದಿಂದಲೇ ಸ್ವಾತಿ, ‘ಇದನ್ನು ಸವಾಲಾಗಿ ಪರಿಗಣಿಸಿದ್ದೇವೆ. ಕುಟುಂಬದವರ ಬೆಂಬಲವಿಲ್ಲದಿದ್ದರೆ ಅಸಾಧ್ಯ’ ಎಂದಳು. ಆತ್ಮವಿಶ್ವಾಸ ತುಂಬಿ ತುಳುಕುತ್ತಿತ್ತು.

ಅಣ್ಣಪ್ಪ ಶೆಟ್ಟರು ತಾವು ನೀಡುವ ಕರಾವಳಿಯ ಕೋರಿಗಸ್ಸಿ, ನೀರುದೋಸೆ, ಚಿಕನ್ ಸುಕ್ಕಾ, ಬಂಗಡಾ ಫ್ರೈ ಬಗ್ಗೆ ಹೇಳಿದರು. ‘ಏನ್ ಸ್ವಾಮಿ, ಕರ್ನಾಟಕ ಸಸ್ಯಾಹಾರ ಇಲ್ವೇ?’ ಎಂದೆ. ನಗುತ್ತಾ ‘ನೀರು ದೋಸೆ, ಇಡ್ಲಿವಡಾ, ರವಾ ಇಡ್ಲಿ, ಬಿಸಿಬೇಳೆಬಾತ್  ಇದೆಯಲ್ಲಾ’ ಎಂದರು. ಕೊಂಚ ಸಮಾಧಾನವಾಯಿತು.

ಪ್ರತಿ ಬೋಗಿಯಲ್ಲೂ ಒಂದಷ್ಟು ಕಲಾಕೃತಿಗಳಿವೆ. ಬೇಲೂರ ಶಿಲಾಬಾಲಿಕೆ, ನಮ್ಮೂರಿನ ಸೀತಾಳ ದಂಡೆ ಹೂ, ಅಡಿಕೆ ಕತ್ತರಿ…ಹೀಗೆ ಸಣ್ಣ ಸಣ್ಣ ಸಂಗತಿಗಳು ತುಂಬಿವೆ. ಪ್ರವಾಸೋದ್ಯಮದಲ್ಲಿ ನಗದು ತಂದು ಕೊಡಬಹುದೋ ಅದೆಲ್ಲವೂ ಇವೆ. ಅಂದ ಹಾಗೆ ಮಾ. ೩ ರಂದು ಇದರ ನಿಜವಾದ ಪ್ರಯಾಣ ಶುರು.

ಲಕ್ಸುರಿ ಎಂದ ಮೇಲೆ ಎಲ್ಲರಿಗೂ ಅಲಭ್ಯ.ನನ್ನ ಗೆಳೆಯ ಅರವಿಂದ ಸಿಗದಾಳ್‌ಗೆ ಎಲ್ಲ ವಿವರಿಸಿದೆ. ‘ಎಷ್ಟು ಚಾರ್ಜ್?’ ಎಂದ. ದಿನಕ್ಕೆ 13 ಸಾವಿರ ರೂ. ಎಂದೆ. ತಕ್ಷಣವೇ ದಿನಕ್ಕಾ…? ಒಂದು ಪ್ಯಾಕೇಜ್‌ಗೆ ಆಗಿದ್ದರೆ ಕನಸಾದರೂ ಕಾಣಬಹುದಿತ್ತು. ಈಗ ಅದೂ ಆಗದೆಂದ. ಇದೇ ಪ್ರಶ್ನೆಯನ್ನು ನಾವು ಅಧಿಕಾರಿಗೂ ಕೇಳಿದ್ದೆವು. ಅದಕ್ಕೆ ಅವರು ‘ಲಕ್ಸುರಿಯ ಲ್ಲವೇ?’ ಎಂದಿದ್ದರು. ಡಾಲರ್ ಸೃಷ್ಟಿಸುತ್ತಿರುವ ಸಾಮಾಜಿಕ ಕಂದಕದ ತೀವ್ರತೆ ಮತ್ತೆ ಬಾಧಿಸಿತು.  ಏನೂ ಹೇಳದೇ ಸುಮ್ಮನಾದೆ.

ವಿಪರ್ಯಾಸ ನೋಡಿ. ಸುವರ್ಣ ರಥಕ್ಕೆ ಇತ್ತ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಚಾಲನೆ ನೀಡಿದರೆ, ಕೆಲ ಕ್ಷಣಗಳ ನಂತರ ಸಿಕಂದರಾಬಾದ್‌ಗೆ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಆರ್. ವೇಲು ‘ಗರೀಬ್ ರಥ’ ಕ್ಕೆ ಹಸಿರು ನಿಶಾನೆ ತೋರಿದರು.

ಹೀಗೆ ಯೋಚನೆ-ಕ್ರಿಯೆಯ ತಾಕಲಾಟ ಮುಗಿಸಿ ರವೀಂದ್ರ ಕಲಾಕ್ಷೇತ್ರದತ್ತ ಹೋಗುವಾಗ ‘ಅಹೋರಾತ್ರಿ ಸಂಗೀತೋತ್ಸವ’ ದಲ್ಲಿ ಹಿರಿಯ ಸಂಗೀತ ಕಲಾವಿದೆ ಡಾ. ಎನ್. ರಾಜಂ ಅವರ ಬಾಗೇಶ್ರೀ ರಾಗ ಆವರಿಸಿಕೊಳ್ಳುತ್ತಿತ್ತು, ನನ್ನನ್ನೂ ಬಿಡಲಿಲ್ಲ !