ಪಕ್ಕದ ಮನೆಯ ಪುಟ್ಟಿ ಬೆಳಗ್ಗೆಯಾದ ಕೂಡಲೇ ಎದ್ದು ಕಣ್ಣುಜ್ಜುವಾಗ ಅಮ್ಮ ಸೀರೆ ಉಟ್ಟುಕೊಳ್ಳುತ್ತಿರುತ್ತಾಳೆ. ಅಪ್ಪ ಸ್ನಾನ ಮಾಡುತ್ತಿರುವ ಸದ್ದು ಸ್ಪಷ್ಟವಾಗುವಷ್ಟರಲ್ಲಿ ನೀರಿನ ಶಬ್ದ ನಿಲ್ಲುತ್ತದೆ. ಅಷ್ಟರಲ್ಲಿ ಟೇಬಲ್ ಮೇಲಿದ್ದ ರೇಡಿಯೋದ ಧ್ವನಿಯನ್ನು ಹೆಚ್ಚು ಮಾಡುತ್ತಾಳೆ ಅಮ್ಮ. ಹಾಡನ್ನು ಕೇಳುತ್ತಾ ಮಧ್ಯಾಹ್ನದ ಬುತ್ತಿಯನ್ನು ಕಟ್ಟಿಕೊಳ್ಳುವುದು ಆಕೆಗೆ ಅಭ್ಯಾಸ.

ದೇವರಗೂಡಿನಲ್ಲಿ ಬೆಂಕಿಕಡ್ಡಿ ಗೀರಿದ ಸದ್ದು ಕೇಳಿದರ್ಥ, “ಅಪ್ಪ ದೇವರಿಗೆ ದೀಪ ಹಚ್ಚುತ್ತಿದ್ದಾನೆ’ ಎಂದೇ.
ಮಕ್ಕಳಿಗೆ ಟಿವಿ ನೋಡೋಕೆ ಟೈಮಿದೆಯೇ? ಹಲ್ಲುಜ್ಜಿ ಬಂದ ಪುಟ್ಟಿ ಟಿವಿ ಹಾಕಿದಳು. ಅದರಲ್ಲೇನೋ ಮಕ್ಕಳನ್ನು ನಿರ್ವಹಿಸುವ ಬಗ್ಗೆ ಉಪದೇಶ. ಎಲ್ಲೂ ಕಾರ್ಟೂನ್ ನೆಟ್ ವರ್ಕ್ ಸಿಗಲಿಲ್ಲ. “ಅಮ್ಮ, ಕಾರ್ಟೂನ್ ಸಿಗ್ತಾನೇ ಇಲ್ಲ’ ಎಂದು ಪುಟ್ಟಿ ಕೂಗಿದ್ದಕ್ಕೆ ಕೋಣೆಯಿಂದಲೇ ಅಮ್ಮ “ಚಾನೆಲ್ ಬದಲಾಯಿಸು, ಬಂದೇ ಬರುತ್ತೆ’ ಎಂದು ಉತ್ತರಿಸಿದಳು.

ದೇವರಿಗೆ ಕೈ ಮುಗಿದು ಬಂದ ಅಪ್ಪನಿಗೆ ಈಗ ಮಗಳ ಮುದ್ದು ಮಾಡುವ ಸರದಿ. “ನನ್ನ ಕಂದ, ಹೇಗಿದ್ದೀಯಾ?’ ಎಂದಾಗ ಮಗಳು ಅಪ್ಪನ ಮಾತಿಗೆ ಕರಗಿದ ಬೆಣ್ಣೆ.

ಗಡಿಯಾರಕ್ಕೆ ಕೆಲಸವಿಲ್ಲ, ಬರೀ ಓಡೋದು ಬಿಟ್ಟರೆ. ಗಂಟೆ ಎಂಟೂವರೆ. ಪುಟ್ಟಿ ಸ್ನಾನಕ್ಕೆ ಸಿದ್ಧವಾಗುವಷ್ಟರಲ್ಲಿ ಅಪ್ಪ ರಸ್ತೆಯಲ್ಲಿದಾನೆ ತನ್ನ ಸವಾರಿಯ ಮೇಲೆ. ಅಲ್ಲಿ ಕುಳಿತೇ ಮಣ ಮಣ ಮಂತ್ರ. ಎರಡೇ ಮಿನಿಟ್-ಟಿವಿ ಯಲ್ಲಿ ಜಾಹೀರಾತು ಬರುವ ಹಾಗೆ ಅಮ್ಮ ಪುಟ್ಟಿಗೆ ಸ್ನಾನ ಮಾಡಿಸಿ ಬಂದಳು. ಟೇಬಲ್ ಮೇಲೆ ಇಟ್ಟ ತಿಂಡಿ ನಿಧಾನವಾಗಿ ಟಿವಿ ನೋಡುತ್ತಿದೆ. “ಪುಟ್ಟಿ, ನೀನು ನಿಧಾನ ತಿನ್ನು’ ಎನ್ನುತ್ತಾ ಅಮ್ಮ ಮೊದಲ ಹೆಜ್ಜೆ ಹೊರಗಿಟ್ಟಳು. “ಫ್ರಿಜ್‌ನಲ್ಲಿ ಎಲ್ಲಾ ಇದೆ. ಜಾಮ್, ಜ್ಯೂಸ್, ಚಾಕೋಲೇಟ್…ಎಲ್ಲವೂ’ ಇವತ್ತು ಬೇಗ ಬಂದು ಬಿಡ್ತೀನಿ ಪುಟ್ಟಿ, ಅರ್ಧಗಂಟೆ ಬೇಗ…ಹ್ಲೂಂ. ಕಾಲದ ಚಕ್ರ ಚಲಿಸಿತು.

ಟಿ.ವಿ ಯಲ್ಲಿ ಡೊನಾಲ್ಡ್ ಕುಣಿದು ಕುಪ್ಪಳಿಸುತ್ತಿದೆ. ಪುಟ್ಟಿ ತಿಂಡಿ ತಟ್ಟೆ ಹಿಡಿದು ಡೊನಾಲ್ಡ್, ಮಿಕ್ಕಿ ಮೌಸ್‌ಳೊಂದಿಗೆ ಮಾತಿಗಿಳಿದಳು. ಅವು ಮಾತನಾಡಿದ ಹಾಗೆ ಇವಳೂ ಮಾತನಾಡುತ್ತಾಳೆ. ಡೊನಾಲ್ಡ್ ಅಪಾಯದಿಂದ ತಪ್ಪಿಸಿಕೊಂಡಾಗ ಎದ್ದು ಹೋಗಿ ಮೂರ್ಖಪೆಟ್ಟಿಗೆಯೊಳಗೆ ಕುಣಿಯುತ್ತಿರುವ ಡೊನಾಲ್ಡ್‌ಗೆ “ಕಂಗ್ರಾಟ್ಸ್’ ಹೇಳಿ ಬರುತ್ತಾಳೆ. ಅಷ್ಟರಲ್ಲಿ ತೂಕಡಿಕೆ. ಅಲ್ಲೇ ಒರಗುತ್ತಾಳೆ. ಒಂದಷ್ಟು ಹೊತ್ತು, ನಂತರ ಮತ್ತೆ ಎದ್ದಳು.

ಅರ್ಧ ತಿಂದಿದ್ದ ತಿಂಡಿಯನ್ನೇ ಪೂರ್ತಿ ಮಾಡಿದಳು. ಮತ್ತೆ ಟಿ. ವಿ ಯಲ್ಲಿ ಬಂದ ಚಿತ್ರ ನೋಡುತ್ತಾ ಮೈ ಮರೆತಳು. ಪುನಾ ತೂಕಡಿಕೆ, ನಿದ್ರೆ. ಎದ್ದೇಳುವ ವೇಳೆಗೆ ಕಾಲಿಂಗ್ ಬೆಲ್‌ನ ಶಬ್ದ. ಅಮ್ಮ ಅರ್ಧ ಗಂಟೆ ತಡವಾಗಿ ಬಂದಾಗಲೂ ಮಗಳಿಗೆ ಖುಷಿ.

ಮೊದ ಮೊದಲು ಪುಟ್ಟಿ ಮಧ್ಯಾಹ್ನ ಬಂದರೆ ಇನ್ನೂ ಸಂಜೆಯಾಗಿಲ್ಲ ಎಂದು ಅಳುತ್ತಿದ್ದವಳು. ಈಗ ತೂಕಡಿಕೆ ಕಾಲದ ವೇಗವನ್ನು ಹೆಚ್ಚಿಸಿದೆ. ಅದಕ್ಕೆ ಅವಳಿಗೆ ಎರಡು ಹೊತ್ತು ಮಾತ್ರ ಗೊತ್ತು. ಬೆಳಗ್ಗೆ ಮತ್ತು ಸಂಜೆ. ಅದಕ್ಕೆ ಅವಳ ಪ್ರಾಸ ಬೇರೆ. “ಬೆಳಗ್ಗೆ ಅಮ್ಮ ಹೊರಗೆ, ಸಂಜೆ ಅಮ್ಮ ಒಳಗೆ’, ರಾತ್ರಿ ಅಪ್ಪ-ಅಮ್ಮ-ನಾನು ಒಟ್ಟಿಗೆ.
ಕಾಲಕ್ಕೂ ಮಕ್ಕಳನ್ನು ಕಂಡರೆ ಕರುಣೆ ; ಬೆಳಗ್ಗೆಗಿಂತ ಸಂಜೆಯ ವೇಗ ದುಪ್ಪಟ್ಟು !
(ಟ್ರಾಫಿಕ್, ಬ್ಯುಸಿಯ ನಡುವೆ ಕಳೆದುಕೊಳ್ಳುತ್ತಿರುವ ನಮ್ಮ ಬದುಕಿನ ಬಗ್ಗೆಯೇ ಇತ್ತೀಚೆಗೆ ಅನಿಸಿದ್ದು)