ಆಕೆ, ಆತ, ಅವಳು, ಇವನು..ಹೀಗೆ ಎಷ್ಟೊಂದು ಮಂದಿ ವರ್ತಮಾನದ ವರ್ತುಲಕ್ಕೆ ಸಿಕ್ಕು ಕನಸು ಕಟ್ಟುವುದನ್ನೇ ನಿಲ್ಲಿಸಿಬಿಟ್ಟಿದ್ದಾರೆ.

ಕನಸು ಕಟ್ಟಲು ಅವರ ಮನಸ್ಸು ಸುತರಾಂ ಒಪ್ಪಲಾರದು. ಕನಸು ಕಾಣಲು ಏನುಂಟು ಅವರಲ್ಲಿ ? ಕಣ್ಣಿದ್ದರೇನಂತೆ. ಕಣ್ಣು ಮುಚ್ಚಿ ಕಲ್ಪಿಸಿಕೊಳ್ಳಲು ಅವರದ್ದೇ ಕ್ಷಣಗಳಿರಬೇಕಲ್ಲ. ಕಣ್ಣು ಮುಚ್ಚದೇ ಕನಸು ಹೇಗೆ ಹುಟ್ಟಿಯಾವು ? ಏನಿದ್ದರೂ “ಇಂದಿನ’ ಭರಾಟೆಯಲ್ಲೇ ಬದುಕು-ಬದುಕಬೇಕು.

ನಾಳೆ, ನಾಡಿದ್ದು, ಭವಿಷ್ಯವೆಲ್ಲಾ “ಇಂದಿ’ ನ ಭೂತ ನುಂಗಿ ಹಾಕುತ್ತಿದೆ. ಬಕಾಸುರನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆಯಂತೆ. ಮೊಗ್ಗು ನೋಡಲಿಕ್ಕೆ ಚೆನ್ನ. ಹೂವಾಗಿ ಅರಳಿದರೆ ಇನ್ನೂ ಚೆನ್ನಾಗಿ ತೋರಬಹುದು. ಆದರೆ ಅಲ್ಲಿವರೆಗೆ ಕಾಯಲಿಕ್ಕೆ ಕಾಲವೆಲ್ಲಿ ? ವರ್ತಮಾನದ ಒಲೆಗೆ ಉರಿಯಲಿಕ್ಕೆ ಏನಾದರೂ ಬೇಕು. ಚೂರು, ಪಾರು ಕಾಗದ, ಕಸ-ಕಡ್ಡಿ, ಏನಾದರೂ. ಒಲೆಯ ಹಸಿವನ್ನು ಇಂಗಿಸುವ ಹೊಣೆ ಅವರದ್ದು.

ಸದ್ಯಕ್ಕೆ ಕಮರಿಹೋದ ಕನಸುಗಳ ಅಸ್ಥಿ ಪಂಜರಗಳು! ಅವು ಕರಗಲಾರವು. ಎಂದಿಗಾದರೂ ಎಲುಬು ಕರಗಿದ್ದುಂಟೇ ? ಬದುಕಿನುದ್ದಕ್ಕೂ ಅಸ್ತಿತ್ವದ ಕುರುಹಾಗಿಯೇ ಕಾಡುವವು. ಕಹಿ ನೆನಪುಗಳ ಸಾಕ್ಷಿಗೆ ಇವು ಬದುಕಿವೆ. ದೂರದ ಬೆಟ್ಟ ನುಣ್ಣಗೆ ಎನ್ನುವ ಹಾಗೆಯೇ ಇವರ ಜೀವನ. ಹೊಸ ಹೊಸ ಕನಸು ಕಟ್ಟುವವರಂತೆ ತೋರುತ್ತಾರೆ. ಮೊಗ್ಗು ಅರಳುವ ಮೊದಲೇ ನೆಲವನ್ನಪ್ಪುತ್ತದೆ. ವಾಸ್ತವದ ಕುರ್ಚಿ ಮೇಲೆ ಕೂತು ಹೊಸ ಹೊಸ ಕನಸು ಕಟ್ಟಬಹುದೇನೋ ? ಆದರೆ ಸೀದು ಹೋದ ಬಾಣಲಿಯಲ್ಲಿ ಏನು ಹಾಕಿದರೂ ಸುಟ್ಟ ವಾಸನೆಯೇ…

ಬದುಕಬೇಕೇ? ಏಕೆ ? ಎಂಬ ಪ್ರಶ್ನೆಯನ್ನು ದಿನಕ್ಕೆ ಮೂವತ್ತೈದು ಬಾರಿ ಹಾಕಿಕೊಳ್ಳುತ್ತಾ ಬದುಕುತ್ತಾರೆ. ಉತ್ತರ ಸಿಗದು. ಹಾಗೆಂದು ಬದುಕುವುದನ್ನು ಬಿಟ್ಟಿಲ್ಲ. ಉತ್ತರವಿಲ್ಲದ ದಿಕ್ಕಿಗೆ, ಬದುಕಿಗೆ ಒಂದು “ಉತ್ತರ’ ವಾಗಿ ಬದುಕುತ್ತಿದ್ದಾರೆ. ಎಂದೂ ಇವರಿಗೆ ಬದುಕು ಉತ್ತರ ಮುಖಿಯಾಗಿಲ್ಲ ; ಸದಾ ಪ್ರಶ್ನಾಮುಖಿ. ನಿರೀಕ್ಷೆಗಳಿಗೆ ಪೂರ್ಣವಿರಾಮ ಹೆಳಿ ಅವರೀಗ ಕಾಲಚಕ್ರಕ್ಕೆ ಶರಣಾಗತ.

ಉದ್ದ ಲಂಗ ; ತಲೆಗೆ ಸ್ವಲ್ಪ ಎಣ್ಣೆ ; ಎರಡು ಜಡೆಯ ಅಲಂಕಾರ, ಹೆಗಲಿಗೊಂದು ಪಾಟೀಚೀಲ. ಹದಿನಾಲ್ಕರ ಮಗ್ಗಿ ಉರು ಹೊಡೆಯುವ ಮಕ್ಕಳಿಗೆ ಬೇರೊಂದು ಬದುಕಿದೆ. ಶಾಲೇಲಿ ಕಲಿಯುವುದಕ್ಕಿಂತ ಬದುಕ ಪಾಠ ಕಲೀಬೇಕಿದೆ.

ಅದಕ್ಕೆ ಒಬ್ಬ ಕುಲುಮೆಯಲ್ಲಿ ಗಾಳಿ ಊದುತ್ತಾ, ತನ್ನ ಬದುಕಿನ ಕನಸಿನ ಪುಗ್ಗೆಗೆ ಗಾಳಿ ತುಂಬುತ್ತಿದ್ದಾನೆ. ಮತ್ತೊಬ್ಬಳು ಬೆಂಕಿಪೆಟ್ಟಿಗೆ ಕಟ್ಟಲು ಹೋಗಿದ್ದಾಳೆ, ಅಲ್ಲಿಯೂ ಆತಳದ್ದು ಕನಸು ಹುಡುಕುವ ಕಾಯಕವೇ. ಮಗದೊಬ್ಬಳು ಕನಸು ಕೊಂಡು ಬರಲು ಊರ ಪಟೇಲರ ಮನೇಲಿ ಬಚ್ಚಲು ತೊಳೆಯುತ್ತಿದ್ದಾಳೆ. ಅರೆ ಕ್ಷಣದಲ್ಲಿ ಕನಸೆಂಬ ಇಬ್ಬನಿ ಕರಗಿ ಹನಿ. ಆ ಪುಟ್ಟ ಹನಿಯಲ್ಲೇ ಬೊಗಸೆಯ ಬದುಕನ್ನು ತುಂಬಿಕೊಳ್ಳಬೇಕು. ಮತ್ತದರೊಳಗೆ ಸೋರಿಹೋಗುವುದೆಷ್ಟೋ ?
ಸಿಕ್ಕಿದ್ದಷ್ಟಕ್ಕೇ ಸಮಾಧಾನ.  (ನನ್ನೊಂದಿಗೆ ಚಿಕ್ಕಂದಿನಲ್ಲಿ ದುಡಿಯುತ್ತಿದ್ದ ಹುಡುಗನೊಬ್ಬನ ಕುರಿತು)