ನೋಡಿದರೆ ನಿಮಗೇ ಆಶ್ಚರ್ಯ ! ಆ ಕಿಶೋರಿ ಕಂಗಳಲ್ಲಿ ಉತ್ಸಾಹದ ದೀಪ ಕುಣಿಯುತ್ತಿದೆ. ಪುಟ್ಟನ ನಗು ನಿಮ್ಮನ್ನೂ ಮಣಿಸಿ ಬಿಡುತ್ತದೆ. ಮತ್ತೊಬ್ಬ ಪುಟ್ಟಿಯ ಗಲ್ಲದ ಮೂಲೆಯಲ್ಲಿ ಬೀಳುವ ಗುಳಿ, ಒಮ್ಮಲೆ ೨೦ ವರ್ಷ ಚಿಕ್ಕವರನ್ನಾಗಿಸಬಹುದು. ಕಿಶೋರನ ಪ್ರತಿ ಮಾತಿಗೂ ಬಿದ್ದು ಬಿದ್ದು ನಗಬೇಕು, ನಕ್ಕಷ್ಟು ಆಯಸ್ಸು ಹೆಚ್ಚಂತೆ.

ಜಗತ್ತು ತೆರೆದುಕೊಂಡ ಬಗೆಯೇ ಇವರಿಗೆ ತಿಳಿದಿಲ್ಲ. ಮುಗ್ಧತೆಯ ಮುಂದೆ ಒಳ್ಳೆಯದು, ಕೆಟ್ಟದು, ಸಿಹಿ-ಕಹಿಯ ಪುರಾಣ ಹೇಳಿದರೆ ಹೇಗೆ ? ಮಗುವಿಗೆ ಏನೂ ತಿಳಿಯದು. ಪುಟ್ಟನಿಗೆ ಚಾಕಲೇಟು ನೀಡಲು ಹೋದರೆ, “ಮಾಮಾ, ಚಾಕಲೇಟು ತಿನ್ನಬಾರದು. ಹೊಟ್ಟೆಯೊಳಗೆ ಹುಳಗಳು ಆಗ್ತಾವಂತೆ’ ಎಂದು ಪ್ರಬುದ್ಧತೆ ಉಪದೇಶ ಹೇಳುತ್ತಾನೆ. ಅದು ಸಿಹಿ ಜಗತ್ತಿನಿಂದ ಆ ದೇವರನ್ನು ದೂರವಿರಿಸಲು ಅಪ್ಪ-ಅಮ್ಮ ಕಲಿಸಿದ ಪಾಠ. ಏನೂ ಅರಿಯದ ಮಗು ಗಿಳಿಪಾಠದಂತೆ ಒಪ್ಪಿಸುತ್ತದೆ.

ಸಿಹಿ ನೀಡುವ ಎಲ್ಲಾ ಮಂದಿಯ ಮುಂದೂ ಅದನ್ನೇ ಆತ ಒಪ್ಪಿಸಬೇಕು. ರುಚಿಯೇ ಅರಿಯದ ವಯಸ್ಸಿಗೇ ನಾಲಿಗೆಗೆ ಲಗಾಮು ಹಾಕಿ ಸಿಹಿ-ಕಹಿಯ ಪಾಠ ಹೇಳಿಕೊಡಬೇಕು. ಸಿಹಿ ಬಯಸುವ ಮನಸ್ಸಿಗೆ ಚಪ್ಪೆಯ ಮಂತ್ರ. ಮಧುಮೇಹದ ರೋಗ ಹೊತ್ತು “ಮಧು’ ವಿಗೆ ಟಾಟಾ ಹೇಳಿ ಸುಮ್ಮನಾಗಬೇಕು. ಎಷ್ಟೊಂದು ಕಂದಗಳು ಹೀಗೇ ಸೀರಿಯಸ್ ಆಗಿ “ದೊಡ್ಡವರಂತೆ’ ಬದುಕಬೇಕು ?

ಸಿಹಿ ತಿನ್ನಲು ಎಲ್ಲರೂ ಹೇಳುವ ಕಾಲದಲ್ಲಿ ಕಹಿಯೊಂದಿಗಿನ ಜೀವನ. ಬಾಯಿಗೆ ಬೇವು ಬೆಲ್ಲದ ಪಾಠ ಹೇಳಬೇಕಾದ ಸ್ಥಿತಿ. ಪಾಠದಲ್ಲೂ ಬೇವಿಗೇ ಹೆಚ್ಚು “ಒತ್ತು’ ನೀಡಬೇಕು. ಸಿಹಿ ಕೊಟ್ಟರೆ ಮತ್ತೆರಡು ಸೂಜಿ ಹೆಚ್ಚಿಗೆ. ಸಕ್ಕರೆ ಆಂಶ ಶಕ್ತಿಯಾಗಿ ಪರಿವರ್ತನೆಯಾಗದಿದ್ದಕ್ಕೆ ಶಿಕ್ಷೆ. ಜಗದ ಅಪ್ಪ ಕೊಟ್ಟ ಕಾಲ ಸೋರಿಹೋಗುವ ಮುನ್ನ ಸಿಹಿಗೆ ಬಾಯಿ ಬಂದ್ ಮಾಡುವುದು ಹೇಗೋ ಸಾಧ್ಯವಾಗಬಹುದು. ಆದರೆ ಇದ್ದ ಲೆಕ್ಕವನ್ನೆಲ್ಲಾ ಬದಿಗೆ ಸರಿಸಿ ಬರೀ ವ್ಯವಕಲನದಲ್ಲಿ ಬದುಕು ಕಳೆಯುವುದೆಂದರೆ ನಿಜಕ್ಕೂ ಬೇವೇ.

ಬೆಳಗ್ಗೆಯಾದ ಕೂಡಲೇ ಒಂದು ಇನ್ಸುಲಿನ್. ಮನಸ್ಸಿಗೆ ಇಷ್ಟವೋ, ಇಲ್ಲವೋ ? ಇನ್ನಷ್ಟು ದಿನ ಇರಲಿಕ್ಕೆ ಇದೇ ಆಸರೆ. ಸೂಜಿ ಚುಚ್ಚಲು ಬಂದ ಅಮ್ಮನಿಗೆ ಮಗು ಹೇಳುತ್ತದೆ, “ನೋಯುತ್ತೆ. ಸೂಜಿ ಬೇಡ’. ಅದಕ್ಕೆ ಅಮ್ಮ, “ಇಲ್ಲ ಪುಟ್ಟಿ, ಇರುವೆ ಕಚ್ಚಿದ ಹಾಗೆ, ಏನೂ ಅನಿಸೋದೇ ಇಲ್ಲ’ ಎನ್ನುತ್ತಾ ಕಚಗುಳಿ ಇಡುತ್ತಾಳೆ.

ಮಗುವಿನ ತೋಳಿನಲ್ಲಿ ಸೂಜಿ ಚುಚ್ಚಿದ ರಂಧ್ರಗಳು. ಅದರೊಳಗೆ ಅಳು ನುಂಗಿ ನಗುವ ಮಗುವಿನ ಮುದ್ದು ಮುಖ ಮತ್ತು ಎಲ್ಲರೂ ಹೇಳಿದ್ದನ್ನು ನಂಬಿದ ಮುಗ್ಧತೆಯ ಅನಾವರಣ !
(ಇನ್ಸುಲಿನ್ ಅವಲಂಬಿತ ಮಕ್ಕಳನ್ನು ಹಿಂದೆ ಭೇಟಿಯಾಗಿದ್ದಾಗ ನನ್ನೊಳಗೆ ಹೊರಟ ವಿಷಾದವಿದು)