ಚಿತ್ರಿಕೆ

ಕತ್ತಲೆಯ ಗುರುತು ಹೇಳಿ

ಕಣ್ಣಾಮುಚ್ಚೇ ಗಾಡೇಗೂಡೇ, ಉದ್ದಿನ ಮೂಟೆ ಉರುಳೇ ಹೋಯ್ತು, ನಮ್ಮಯ ಹಕ್ಕಿ ಬಿಟ್ಟೇ ಬಿಟ್ಟೆ, ನಿಮ್ಮಯ ಹಕ್ಕಿ ಮುಚ್ಚಿಕೊಳ್ಳಿರಿ…ರೆಡೀನಾ…ಕೂ…ಕ್ ಎಂದು ಕೂಗಿ ಅನ್ವೇಷಣೆಯಲ್ಲಿ ತೊಡಗಿದ ಪುಟ್ಟಿಗೆ ಗೆಳೆಯರನ್ನು ಹುಡುಕಿ ಔಟ್ ಮಾಡುವ ಉತ್ಸಾಹ. ಸಂದಿಗೊಂದಿಗಳಲ್ಲಿ ತಡಕಾಟ. ಎಲ್ಲೂ ತೋರುವುದಿಲ್ಲ ; ಬೆಕ್ಕು ಹೆಜ್ಜೆ ಇಟ್ಟಂತೆ ಮೆಲ್ಲಗಿನ ನಡಿಗೆ. ಸದ್ದಾಗದಂತೆ ಎಚ್ಚರಿಕೆ. ಪಾದಕ್ಕೊಂದು ಸೈಲೆನ್ಸರ್ ಜೋಡಿಸಿಕೊಂಡುಬಿಟ್ಟಿದ್ದಾಳೆ.

ಸೋಫಾದ ಕೆಳಗೆ, ಮಹಡಿ ಮನೆಯಲ್ಲಿ, ಅಮ್ಮನ ಕೋಣೆಯ ಮಂಚದ ಕೆಳಗೆ, ಆ ಅಲ್ಮೇರಾದೊಳಗೆ, ಎಲ್ಲೂ ಇರದಿದ್ದರೆ ಅಡುಗೆ ಮನೆಯ ಮೂಲೆಯಲ್ಲಿ…ಅಲ್ಲೂ ಇಲ್ಲ. ಹಾಗಾದರೆ ಎಲ್ಲಾ ಎಲ್ಲಿ ? ಬಚ್ಚಿಟ್ಟುಕೊಂಡಿರುವುದು ಒಳಗೋ ಅಥವಾ ಹೊರಗೋ ? ಯೋಚನೆಯಲ್ಲಿ ಪುಟ್ಟಿ ಮಗ್ನ. ಆಗುವ ಪ್ರತಿ ಶಬ್ದಕ್ಕೂ ಅವಳ ಕಿವಿ ಚುರುಕು. ಸಿಕ್ಕೇಬಿಟ್ಟಾರೆಂಬ ಖುಷಿ. ಶಬ್ದ ಬಂದತ್ತ ಕಣ್ಣು. ಏನೂ ಕಾಣುವುದಿಲ್ಲ ಕತ್ತಲೆಯೊಂದನ್ನು ಬಿಟ್ಟು.

ಈಗ ಅವಳದ್ದು ಮನೆಯ ಹೊರಗಿನ ಹುಡುಕಾಟ. ಕಾರಿನ ಹಿಂಬದಿಯಲ್ಲಿ, ಕಾರಿನ ಗ್ಯಾರೇಜ್‌ನಲ್ಲಿ, ಅಡಿಕೆ ತೋಪಿನಲ್ಲಿ, ಹುಲ್ಲಿನ ರಾಶಿ ಮಧ್ಯೆ, ವರಾಂಡದಲ್ಲಿನ ಭತ್ತದ ಕೋಣೆಯಲ್ಲಿ, ದನದ ಕೊಟ್ಟಿಗೆಯಲ್ಲಿ ಹಾಲು ಕರೆಯುತ್ತಿರುವ ಅಮ್ಮನ ಹಿಂದೆ..ಊಹ್ಲೂಂ.. ತೋರುವುದಿಲ್ಲ. ದನದ ಮೊಲೆ ಕರೆಯುವ ಶಬ್ದ ಮಾತ್ರ ಸ್ಪಷ್ಟ. ಹಾಲು ಪಾತ್ರೆಗೆ ಬೀಳುವುದೂ ಸಹ..ಸೊರ್…ಸೊರ್ !

ಪುಟ್ಟಿ ವಾಪಸು ಬರುತ್ತಾಳೆ. ಕಂಬಕ್ಕೆ ಮುಖವನ್ನೊತ್ತಿ, ಎರಡೂ ಕೈಗಳನ್ನು ಒತ್ತಿಹಿಡಿದು ಕಣ್ಣು ಮುಚ್ಚಿ ಕಣ್ಣಾಮುಚ್ಚೇ ಗಾಡೇ..ಎಂದು ಕೂಗಿದ್ದಲ್ಲಿಗೆ ನಿಂತುಕೊಳ್ಳುತ್ತಾಳೆ ಸುಮ್ಮನೆ. ಏನೂ ತೋಚುವುದಿಲ್ಲ. ಐಸ್‌ಪೆಸ್ ಯಾರಿಗೆಂದು ಕೂಗುವುದು ? ಯಾರೂ ಔಟಾಗಲೇ ಇಲ್ಲ. ಅಲ್ಲೇ ಕಂಬಕ್ಕೊರಗಿ ಕುಳಿತಳು. ಪಾಪ, ಪುಟ್ಟಿ ಕಣ್ಣು ತೆರೆದೂ ಕಣ್ಣು ಮುಚ್ಚಿ ಕುಳಿತಿದ್ದಾಳೆ. ಉತ್ಸಾಹದ ಬೆಳಕೆಲ್ಲೋ ಬಚ್ಚಿಟ್ಟುಕೊಂಡಿದೆ.

ಸರಿ, ಹಾಗಾದರೆ ಅವರೆಲ್ಲಾ ಎಲ್ಲಿ ಹೋದರು ? ಮಾವಿನ ಮರದ ಬಳಿ ಬಚ್ಚಿಟ್ಟುಕೊಂಡ ಅಮ್ಮಿಯನ್ನು ಮರವೇ ಮುಚ್ಚಿಟ್ಟುಕೊಂಡಿತೇ? ಅಮ್ಮನ ಕೋಣೆಗೆ ಹೋದ ರಘು ಏನಾದ ? ಭತ್ತದ ಕೋಣೆಯಲ್ಲಿನ ಬಾಬುವನ್ನು ಮೂಟೆಗಳೇ ನುಂಗಿದವೇ ? ಪಾಯಖಾನೆಯ ಹಿಂದೆ ಹೋದ ಯಶು ಕತ್ತಲಲ್ಲಿ ಕರಗಿದನೇ ? ಮಹಡಿ ಮೇಲೆ ಹೋದ ಗಾಯತ್ರಿ ಬಹುಶಃ ಮತ್ತೆ ಬರಲೇ ಇಲ್ಲ…ಇವರೆಲ್ಲಾ ಹೋದದ್ದು ಎಲ್ಲಿಗೆ ?

ಈಗ ಪ್ರತಿ ಬೇಸಿಗೆ ರಜೆ ಬಂದಾಗಲೂ ಪುಟ್ಟಿಗೆ ಅದೇ ಕೆಲಸ. ಸಂಜೆಯ ಹೊತ್ತಿಗೆ ಬಚ್ಚಿಟ್ಟುಕೊಂಡವರನ್ನು ಹುಡುಕುವುದು. ಮಂಚ, ಅಡಿಕೆತೋಪು, ಅಮ್ಮನಕೋಣೆ, ಪಾಯಖಾನೆಯ ಹಿಂದೆ, ನಿಂತ ಲಡಕಾಸಿ ಕಾರಿನೊಳಗೆ…ಮತ್ತೆ ಕಂಬಕ್ಕೊರಗಿ ಕುಳಿತುಕೊಳ್ಳುವುದು.

ಒಂದು ಸಂಜೆ. ಪುಟ್ಟಿ ಪುನಾ ಐಸ್‌ಪೆಸ್ ಆಟ ಶುರು ಮಾಡಿದಳು. ಕೂಕ್ ಕೂಗಿ ಹುಡುಕಲು ಅನುವು. ಅಡುಗೆ ಮನೆಯಿಂದ ಅಮ್ಮ ಕೂಗಿ ಹೇಳುತ್ತಾಳೆ-“ಬಾ ಮಗೂ…ಗಂಜಿ ಬಿಸಿಯಿದೆ’. “ಇಲ್ಲಮ್ಮಾ, ಔಟ್ ಮಾಡಿ ಬರುತ್ತೇನೆ’ ಪುಟ್ಟಿಯ ಉತ್ತರ. “ಅವರು ಈಗಲೇ ಬರುವುದಿಲ್ಲ. ಬೆಳಕಿನೊಳಗೆ ಕಳೆದುಹೋಗಿದ್ದಾರೆ. ಕತ್ತಲೆಯ ಗುರುತು ಹಿಡಿದೇ ದಾರಿ ತಿಳಿಯಬೇಕು’.

Advertisements

5 thoughts on “ಕತ್ತಲೆಯ ಗುರುತು ಹೇಳಿ

 1. ನಾನು ಬರೀಬೇಕು ಅಂದ್ಕೊಂಡಿದ್ನೆಲ್ಲ ನೀವು ಬರೀತಿದೀರಾ ನಾವಡರೇ..! ಮೋಸ ಇದು.. 😉

  ನಿಜ, ಎಲ್ಲಾ ಎಲ್ಲೆಲ್ಲೋ ಕಳೆದುಹೋಗಿದಾರೆ.. ನಾನೂ ಹುಡುಕುತ್ತಿದ್ದೇನೆ ದಿನಾಲೂ.. ಸಿಗ್ತಾನೇ ಇಲ್ಲ.. ಅವರು ಗೂಗಲ್ಲಿನಲ್ಲಿ ಹುಡುಕಿದರೆ ಸಿಗುವಂಥವರಲ್ಲ.. ಬ್ಯಾಟರಿ ಬಿಟ್ಟುಕೊಂಡು ಹುಡುಕಿದರೂ ಸಿಗುವುದಿಲ್ಲ.. ಏಕೆಂದರೆ, ಅವರು ಕಳೆದುಹೋಗಿರುವುದು ಕತ್ತಲೆಯಲ್ಲಲ್ಲ; ಬೆಳಕಿನಲ್ಲಿ .. 😦

 2. ಓದಿ ವಿಚಿತ್ರ ನೋವು. ಅದು ಏನೊ ಏಕೊ ತಿಳಿಯದು. ನಾವೆಲ್ಲ ಒಂದು ರೀತಿಯ ಪುಟ್ಟಿಯರೆ ಅಲ್ವೆ ಅನ್ನಿಸಿಬಿಡ್ತು. ಬೆಳಕಿನೊಳಗೆ ಕಳೆದುಹೋದವರು ಕತ್ತಲೆಯ ಗುರುತು ಹಿಡಿದು ದಾರಿ ತಿಳಿದುಕೊಳ್ಳಬೇಕೆಂಬೋದು ಭಾಳ ಸೊಗಸಾಗಿದೆ. ಈಕ್ವೇಶನ್ನೇ ಉಲ್ಟಾ ಮಾಡಿ ಅದನ್ನ ಇನ್ನಷ್ಟು ಮಿಸ್ಟೀರಿಯಸ್ ಆಗಿ ಕಾಣುವ ಹಾಗೆ ಮಾಡಿದೆ ನಿಮ್ಮ ಬರಹ. ಧನ್ಯವಾದ!

 3. ಸುಶ್ರತ ಅವರೇ,
  ನನ್ನ ಬರಹ ಮೆಚ್ಚಿದ್ದಕ್ಕೆ ಧನ್ಯವಾದ. ಬೆಳಕಿನ ಮಾಯೆಯೇ ಅಂಥಾದ್ದು, ನಮ್ಮ ಗುರುತನ್ನೇ ಕಳೆಯುವಂಥದ್ದು.

  ಟೀನಾ ಅವರೇ,

  ನಿಜವಲ್ಲವೇ ? ನಮ್ಮ ಕಳೆದು ಹೋದ ಸಂಬಂಧಗಳನ್ನು ಹುಡುಕಿಕೊಳ್ಳೋದು ಹಾಗೆಯೇ ತಾನೇ? ಕತ್ತಲೆಯಲ್ಲಿ ದಾರಿ ಹುಡುಕುವಾಗ ಗೊಂದಲಗಳಿಲ್ಲ, ಗೊಂದಲ ಇರುವುದು ಬೆಳಕಿನಲ್ಲೇ.
  ಬರಹ ಮೆಚ್ಚಿದ್ದಕ್ಕೆ ಧನ್ಯವಾದ.
  ವಿನಾಯಕ,
  ಅಂದಿನ ಎಷ್ಟೋ ಆಟಗಳನ್ನು ಕಳೆದುಕೊಂಡಿದ್ದೇವೆ. ನಮ್ಮನ್ನು ನಾವೂ ಸಹ ?

  ಸುಪ್ತದೀಪ್ತಿಯವರೇ.
  ನನ್ನ ಬ್ಲಾಗ್ ಗೆ ಭೇಟಿ ನೀಡಿದ್ದಕ್ಕೆ ಧನ್ಯವಾದ. ಮೆಚ್ಚುಗೆಗೆ ಥ್ಯಾಂಕ್ಸ್.
  ನಾವಡ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s