ಚಿತ್ರಿಕೆ

ಈ ಮಗುವಿಗೆ ಹೆಸರು?

ಸ್ಟ್ರೆಚರ್ ಮೇಲೆ ಮಲಗಿರುವ ಮಗುವಿಗೆ ೩೬೫ ವರ್ಷ! ಅಷ್ಟೊಂದು ವರ್ಷದಿಂದಲೂ ಅದರದ್ದು ಕೇವಲ ಮಲಗಾಟ. ಒಮ್ಮೊಮ್ಮೆ ಕಣ್ಣು ತೆರೆದು ಬಾಯಿ ಬಿಡುವ ಅಭ್ಯಾಸ. ಉಳಿದ ವೇಳೆ ಬಾಯಿಗೆ ಬೆರಳಿಟ್ಟ ಹಾಗೆ. ತಲೆ ಅಲ್ಲಾಡಿಸುವುದೂ ಇಲ್ಲ; ಕಾಲು ಬಡಿಯುವುದಿಲ್ಲ; ರೋದನ ರಾಗ ಹಾಡುವುದಿಲ್ಲ; ನಿಶ್ಚಲ ಬದುಕಿನ ಸಂಪೂರ್ಣ ಸಂಕೇತ.

ಅದರ ಬಣ್ಣ ಸಂಪೂರ್ಣ ಬಿಳಿ. ನೋಡಲು ತೆಳ್ಳಗೆ. ಸೋಮಾಲಿಯಾದ ಕಂದಮ್ಮಗಳ ಮಾದರಿ. ಕಾಲು ಸೊಟ್ಟಗೆ; ಕೈ ನೆಟ್ಟಗೆ; ಮುದುಡಿ ಮಲಗಿದ ಒಣಗಿದ ಎಲೆ. ಪ್ರತಿ ನರಗಳೂ ಪಾರದರ್ಶಕ. ಬಹುಶಃ ಕನಸು ಮುರುಟುವುದೆಂದರೆ ಹೀಗೇ ಇರಬೇಕು.

ಹೆತ್ತ ಅಮ್ಮಳದು ಸಮಯದ ಮುಳ್ಳಿನ ಓಟದ ಮುಂದೆ ಶರಣಾಗತಿ. ಆಗಾಗ್ಗೆ ನೆನಪಿನ ಮೂಲೆಯಲ್ಲಿ ಮೊದಲ ಹೆರಿಗೆ ನೋವ ಕ್ಷಣದ ಮಿಸುಕಾಟ. ಬೆನ್ನ ಹಿಂದೆಯೇ ಅಳುವಿನ ಹಾಡು. ಕಣ್ಣೆಲ್ಲಾ ಒದ್ದೆ-ಒದ್ದೆ. ದುಃಖ ಎಂದರೆ -ಕಣ್ಣಿನಿಂದ ನೀರು ಬರುವ ಹೊತ್ತೆ?

ಆ ಮಗು ಅನಾಮಧೇಯ. ಹೆಸರಿಡಲು ಕಸರತ್ತು ನಡೆಸಿಯೂ ವಿಫಲ. ಹೆತ್ತವರಿಗೆ ಹೆಸರೇನಿಡುವುದೆಂಬುದೇ ದೊಡ್ಡ ಜಿಜ್ಞಾಸೆ. ಯಾವ ವೇದಾಂತಿ, ಮೀಮಾಂಸಕರಿಗೂ ಬಾರದ್ದು. ಅದೂ ನಿಜ. ಹೆಸರೇನಿಡುವುದು?
‘ನಾರಾಯಣ’ ಎಂದು ಇಟ್ಟರೆ ದೇವರಿಗೇ ಅವಮಾನ. ಮಗುವ ಮುತ್ತಜ್ಜನ ಹೆಸರು ‘ಶೇಷಪ್ಪ’ ಎನ್ನಲು ಸ್ವಲ್ಪ ಹಿಂಜರಿಕೆ. ‘ಸುಂದರ’ ಎಂದು ಕರೆಯಲು ಯಾವುದು ಸೌಂದರ್ಯ. ಏನೂ ಸಿಗದೇ ರೋಸಿ ಹೋಗಿ ‘ನರಪೇತಲ’ ಎಂದು ಕರೆಯಲಿಕ್ಕೆ ಹೆತ್ತ ಕರುಳಿಗೇ ಮುಜುಗರ. ಸೌಂದರ್ಯ ಎಂದರೆ ಮಗು!

೩೬೫ ವರ್ಷ ದ್ವಿಗುಣ. ಬರಿದಾದ ತೊಟ್ಟಿಲಲ್ಲಿ ಮತ್ತೊಂದು ಮಗು. ಕಂಡವರಿಗೆಲ್ಲಾ ಸ್ಟ್ರೆಚರ್ ಮೇಲಿನ ಮಗುವೊಂದು ಕೌತುಕ. ಹೆತ್ತವರೇ ಹೇಳಬೇಕು-ಮಗುವಿಗೇನಾಗಿದೆ? ಹೊಸ ಮಗು ಮಡಿಲ ತುಂಬಿದ ಮೇಲೆ ಆಸ್ಪತ್ರೆಯ ದಾರಿ ಹಳತು. ದಿನಕ್ಕೆರಡು ಬಾರಿ ಸಣ್ಣ ಹುಗ್ಗದೊಂದಿಗೆ ಪಯಣ; ನಂತರ ತಿನ್ನಾಟ. ಕ್ಷಣ ಬಿಟ್ಟು ದಾದಿಗೆ ಹೇಳಿ ಹೊರಡುತ್ತಾಳೆ. ಮತ್ತೆ ಬಾನು ಕೆಂಪಾದಾಗ ವಾಪಸು. ಪುನಃ ತಂದ ಹುಗ್ಗದ ಊಟ. ಮತ್ತೆ ರಸ್ತೆ ಮೇಲೆ ಪಾದ. ಸಾಮಾಜಿಕ ಸಂಗೀತದ ಮೇಲುದನಿಗೆ ಆಕೆಯದೂ ಕೋರಸ್.

ಒಂದು ಶುಭದಿನ ವೈದ್ಯರ ಪ್ರಯೋಗ ಶಿಶು ಸಾವಿನ ದೋಣಿಯಲ್ಲಿ ಪಯಣ. ಮೂಲೆಯಲ್ಲಿ ಅಳುವಿನ ಸ್ವರ ಜೋರಾಗುತ್ತದೆ. ಕೆಲ ಕ್ಷಣ ಗಂಭೀರ ಮೌನ. ಮರು ಕ್ಷಣ ಮಗುವಿನ ಕಿಲಕಿಲ ನಗೆ. ಅದಕ್ಕೆ ತಾಗಿಕೊಂಡ ಇಬ್ಬರು ವಯಸ್ಕರ ನಗೆ. ಸಾಮಾಜಿಕ ಸಂಗೀತಕ್ಕೆ ಮತ್ತೆ ಕೋರಸ್.

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s