ದೊಡ್ಡ ಕ್ಯಾನ್‌ವಾಸ್. ವಿಸ್ತರಿಸಿದಷ್ಟೂ ವಿಶಾಲ. ಬಿಡಿಸಿದಷ್ಟೂ ಪಾತ್ರ. ಹಚ್ಚಿದಷ್ಟೂ ಬಣ್ಣ. ನಾನಾ ಮೌನರಾಗಕ್ಕೆ ಹಲವು ಮೂಕತಾಳ. ಉಲ್ಲಾಸದ ಚರಣ. ಬದುಕೊಂದು ದೊಡ್ಡ ಕ್ಯಾನ್‌ವಾಸ್.

ನಾವು ಎಣಿಸಿಕೊಂಡ ಪಾತ್ರಗಳಿಗೆ ಜೀವ ತುಂಬುತ್ತಾ ಕುಳಿತುಬಿಟ್ಟರೆ ಬದುಕು ಕಳೆದದ್ದೆ ತಿಳಿಯುವುದಿಲ್ಲ. ಜತೆಗೆ ಬಣ್ಣ ಬಳೆದದ್ದು-ಚಿತ್ರ ಬಿಡಿಸಿದ್ದೂ ಸಹ. ಚಿತ್ರಕಂಡವರು ಮೆಚ್ಚಿಕೊಂಡದ್ದು, ಕೆಲವರು ಗೆರೆ ದಪ್ಪವಾಯಿತು.
ಆರಿಸಿಕೊಂಡ ಬಣ್ಣ ಸರಿಯಿಲ್ಲ, ಲ್ಯಾಂಡ್‌ಸ್ಕೇಪ್‌ನ ಬಣ್ಣ ಹಸಿರೇ ಏಕೆ? ಬೇರೇ ಯಾವುದಾದರೂ ನೀಡಬಹುದಿತ್ತಲ್ಲ.
ಆ ಚಿತ್ರದಲ್ಲಿನ ಮೀಸೆ ಸ್ವಲ್ಪ ದಪ್ಪ- ನಮ್ಮ ಮೀಸೆ ಮಾವನ ಹಾಗೆ. ತೊಟ್ಟ ಷರಟಿನ ಬಣ್ಣ ಚೆನ್ನಾಗಿದೆ. ಕಲ್ಪನೆಯಷ್ಟೇ. ಯಾವುದೇ ಬಜಾರಿನಲ್ಲಿ ಸಿಗಲಾರದೋ ಏನೋ? ಎಂದು ಟಿಪಿಕಲ್ ಮಧ್ಯಮ ದರ್ಜೆಯ ಹೆಂಡತಿಯೊಬ್ಬಳು ತನ್ನ ಗಂಡನ ತೋಳು ಹಿಡಿದುಕೊಳ್ಳುತ್ತಾಳೆ. ಇರಬಹುದು ಎನ್ನುವ ಪತಿಗೆ ಇನ್ನಷ್ಟು ಆ ಬಣ್ಣವನ್ನು ಕಣ್ಣಿನಲ್ಲಿ ತುಂಬಿಕೊಳ್ಳುವ ತವಕ.

ಅಷ್ಟರಲ್ಲಿ ಕ್ಯಾನ್‌ವಾಸ್‌ನಲ್ಲಿನ ಬಿಡಿ ಬಿಡಿ ಚಿತ್ರಗಳ ನೋಡಿ ಮುಗಿಸಿದ ಮಗಳು ಕೇಳುತ್ತಾಳೆ. ‘ಅಪ್ಪಾ, ಆ ಬಣ್ಣದ ಹೆಸರು ?’ ಹೌದು, ಆಕೆಯ ಅಮ್ಮ ಹೇಳಿದ ಬಟ್ಟೆಯ ಬಣ್ಣ, ಬಜಾರಿನಲ್ಲಿ ಸಿಗಲಾರದ್ದು, ಯೋಚನೆಯಲ್ಲಿ ಮುಳುಗುತ್ತಾನೇ. ಎಲ್ಲಾ ಬಣ್ಣಗಳೂ ಸಾಲುಗಟ್ಟಿ ನಿಲ್ಲುತ್ತವೆ ಅವನ ಕಣ್ಣಕನ್ನಡಿಯ ಮುಂದೆ. ಬಣ್ಣದ ಪ್ರತಿಫಲನ ಕಂಡು ಹೆಸರು ಹುಡುಕಬೇಕು.

ಯಾವುದಿರಬಹುದು? ಕೆಂಪಂತೂ ಅಲ್ಲವೇ ಅಲ್ಲ. ಯಾಕೆಂದರೇ ನನಗೆ ದೃಷ್ಟಿದೋಷವಿಲ್ಲ. ಹಳದಿ ಇದಕ್ಕೆ ಹೊಂದುವುದಿಲ್ಲ. ಹಸಿರು-ಲ್ಯಾಂಡ್‌ಸ್ಕೇಪ್‌ನ ಚಿತ್ರವಲ್ಲವಲ್ಲ. ಇನ್ನು ಹಸಿರು ಇಲ್ಲಿ ಏಕೆ ಬಂದೀತು? ನೇರಳೇಯೇ? ಇರಬಹುದು, ಆದರೆ ಕಡುನೇರಳೆಯಂತೂ ಅಲ್ಲ. ಕಾರಣಸ್ವಲ್ಪ ಡೈಲ್ಯೂಟ್ ಆಗಿದೆ. ಆಕಾಶ ನೀಲಿ ಎಂದರೆ ಹುಚ್ಚ ಅಂದಾರು. ಪಚ್ಚೆ ಹಸಿರಿಗೂ ಈ ಬಣ್ಣಕ್ಕೂ ಮಾರುದೂರ. ಹಲವಾರು ಬಣ್ಣ ಒಂದೇ ಕಡೆ.

ಬಣ್ಣಗಳ ತಾಕಲಾಟ ಆರಂಭವಾಗಿದೆ. ಗುರುತಿದ್ದ ಬಣ್ಣಗಳೆಲ್ಲಾ ಸರದಿ ಮುಗಿಸಿ ಬದಿಗೆ ಸರಿದವು. ಈಗ ಹೊಸ ಬಣ್ಣಕ್ಕೆ ಹೆಸರಿಡಬೇಕು. ಯಾವ ಹೆಸರು ಇಡುವುದು? ನಿನ್ನೆವರೆಗೂ ಕಾಣದ ಬಣ್ಣಗಳ ಹೆಸರು?’ ಕುತೂಹಲ ತಣಿಸಲು ಅಪ್ಪ ಚಿತ್ರಕಾರನ ಬಳಿ ಕರೆದೊಯ್ದ. ಮಗಳು ಚಿತ್ರಕಾರನಿಗೆ ಪುನಃ ಅದೇ ಪ್ರಶ್ನೆ ಕೇಳಿದಳು. ಆತ ಹೇಳಿದ. ಅದರ ಹೆಸರು ಬದುಕು.