ರಸ್ತೆ ಬದಿ ದರ್ಶನಿಯಲ್ಲಿ ಸಾಲೋ ಸಾಲು. ಎಲ್ಲಾ ತಮಗೆ ಬೇಕಾದ್ದನ್ನು ಕೊಳ್ಳಲಿಕ್ಕೆ ನಿಂತವರು. ಒಬ್ಬನಿಗೆ ಬೇಕಾದದ್ದು ಮತ್ತೊಬ್ಬನಿಗೆ ಬೇಕಾಗದು. ಮಗದೊಬ್ಬ ಬರೀ ಚಹಾ ಕುಡಿಯಲಿಕ್ಕೆ ಇಷ್ಟಪಟ್ಟವನು. ಆದರೂ ಬಿಸಿ ವಡೆ ಕಂಡು ಮುಖವರಳಿದ್ದು ನಿಜ. ಇನ್ನಿಬ್ಬರು ಮೊನ್ನೆ ಮೊನ್ನೆ ಮದುವೆಯಾದ ದಂಪತಿ. ಮನೆಯ ಒಲೆಗೆ ಇಂದು ರಜಾ. ಗ್ಯಾಸ್ ಹಂಡೆಯೂ ಮೇಲ್ಮುಖವಾಗಿ ಉಗುಳುವುದನ್ನು ಬಿಟ್ಟು ಸುಮ್ಮಗಿದೆ.
ಕಿಷ್ಕಿಂಧೆಯ ಬೀದಿಯಲ್ಲೇ ಊರಿನವರಿಗೆ ಭೋಜನವಾಗಬೇಕು. ಒಳಗೆ ಕಾಲಿರಿಸಲಿಕ್ಕೆ ಸ್ಥಳವಿಲ್ಲ. ಜಿಗಿಜಿಗಿ ದಟ್ಟಣೆ ನಡುವೆ ರೊಟ್ಟಿ ಬೇಯಿಸುವ ಪರಿಮಳ ಕರಗಿ ಹೋಗುತ್ತದೆ. ಮಸಾಲೆ ದೋಸೆಗೆ ಮೆತ್ತಿದ ಮೇಲಿನ ಬೆಣ್ಣೆ ಕರಗಿ “ತುಪ್ಪ’ ವಾಗುವ ಸೊಬಗನ್ನು ದರ್ಶಿಸಲು ಬಿಡುತ್ತಿಲ್ಲ. ದೋಸೆಯ ಬಣ್ಣವೂ ಅಷ್ಟೇ. ತುಪ್ಪದ ಬಣ್ಣಕ್ಕೆ ಸಮಾನ. ತುಪ್ಪ ಧರೆಗಿಳಿದಂತೆ ಆಲೂಪಲ್ಲೆಯಲ್ಲಿ ಲೀನ. ದೋಸೆ ಪರಿಮಳದ್ದೇ ಸಾರ್ವಭೌಮತ್ವ.
ಮೌನಕ್ಕೆ ಪಾರ್ಶ್ವವಾಯು ಬಡಿದಿದೆ. ಏನಿದ್ದರೂ ಮಾತು. ಹೋಟೆಲ್ ಮಾಣಿಯರ ಮಾತು, ಗಿರಾಕಿಯರ ಮಾತು, ಅವರ ಮಧ್ಯೆ ಮತ್ತೊಂದಿಷ್ಟು ಮಾತು, ತಿಂಡಿ ಸವಿಯುವ ಸುಖದಲ್ಲಿ ಹೊರಟ ಸ್ವಗತ ಮಾತು. ಮಾತಿನ ಅಂಗಡಿಯಲ್ಲಿ ಎಲ್ಲ ಕಲಸು ಮೇಲೋಗರ. ಅಷ್ಟರಲ್ಲಿ ಗಲ್ಲದ ಮೇಲೆ ಕುಳಿತ ಮಹಾನುಭಾವನದ ಮತ್ತೊಂದು ಮಾತು “ಏನ್ ಮಾಡ್ತೀದ್ದೀಯಾ ಅಲ್ಲಿ, ಪಕ್ಕದ ಸ್ಟೀಲ್ ಅಂಗಡಿಗೆ ಬೈಟೂ ಚಹಾ, ಒಂದು ಮಿಕ್ಸರ್ ಕೊಟ್ಟು ಬಾ’.
ಮಾತಿನವರೆಲ್ಲಾ ಏಕ್‌ದಂ ಸುಮ್ಮನೆ. ಎಲ್ಲರ ಗಮನ ಗಲ್ಲದ ಮಹಾನುಭಾವನತ್ತ. ಮೌನ ಕೊಸರಿ ಏಳುವಷ್ಟರಲ್ಲಿ ತಿಂಡಿ ನೀಡುವವ ಕೂಗಿ ಕೊಂಡ, “ಮೂರು ಮಸಾಲೆ, ಎರಡು ಪ್ಲೇನ್’, ಮತ್ತೊಬ್ಬ “ಅವರದ್ದು ನಾಲ್ಕೂ ವರೆ ತಗೊಳ್ಳಿ’ ಎಂದ. ಬಿಲ್ಲು ಪಡೆದವನ ಮುಖದಲ್ಲಿ ಒಂದು ಮುಗುಳ್ನಗೆ. ಜನರ ರಾಶಿ ನಡುವೆ ನುಗ್ಗಿ ಬಂದ ಮಾಣಿಗೆ ಗದರಿಸಿದ – “ಎಷ್ಟೊತ್ತಾಯ್ತು ಆರ್‍ಡರ್ ಕೊಟ್ಟು ?’. ಮಾಣಿ ತಾಳ್ಮೆಯ ಪಾಠ ಹೇಳುತ್ತಾನೆ -’ಸ್ವಲ್ಪ ತಡೀರಿ, ಬಹಳ ಆರ್‍ಡರ್ ಇದೆ. ಎಲ್ಲರಿಗೂ ಮಸಾಲೆ ದೋಸೇನೇ ಬೇಕಲ್ವೇ?’ ಗೊಣಗುತ್ತಾ ಬದಿಗೆ ಸರಿದದ್ದು ಇಬ್ಬರೂ. ಅಷ್ಟರಲ್ಲಿ ಮತ್ತೊಬ್ಬನ ಪ್ರವರ ಆರಂಭ..
ಬಂದವರೆಷ್ಟು ? ಹೋದವರೆಷ್ಟು ? ತೃಪ್ತಿ ಸಿಕ್ಕಿದ್ದು ಯಾರಿಗೆ ? ತೃಪ್ತ ಎಂದುಕೊಂಡು ಹೊರಟವರು ಯಾರು ? ಯಾರ ಕಾಫಿ ಕೆಳಗೆ ಚೆಲ್ಲಿತು ? ಮತ್ತ್ಯಾರ ದೋಸೆ ಚಿಕ್ಕದಾಗಿತ್ತು ? ಮಿಕ್ಕೆಷ್ಟು ಜನ ಊರ ಬಾಣಸಿಗನಿಗೆ ಬೈದರು ? ಮನೆಗೆ ಹೋದ ಮೇಲೂ ಅತೃಪ್ತಿಯ ಬೆಂಕಿಯಲ್ಲಿ ಬೆಂದವರೆಷ್ಟು ? ಪುನಾ ಒಲೆ ಹಚ್ಚಿ ಅನ್ನಕ್ಕಿಟ್ಟವರ್‍ಯಾರು ? ಏನೂ ಗೊತ್ತಿಲ್ಲ.
ಕೆಲವರಿಗೆ ಕಳೆದುಕೊಂಡ ನೋಟಿನ ಬಣ್ಣ, ಮತ್ತೆ ಕೆಲವರಿಗೆ ದಕ್ಕಿಸಿಕೊಂಡ ರುಚಿಯ ಅಮೂರ್ತತೆ, ಗಲ್ಲದ ಮಹಾನುಭಾವನಿಗೆ ಬಣ್ಣ ಬಣ್ಣದ ಹಣ…
ಸದ್ಯಕ್ಕೆ ದಕ್ಕಿದ್ದಿಷ್ಟು, ಕತ್ತಲೆಯಲ್ಲಿ ಮೌನದ್ದೇ ಸಾರ್ವಭೌಮತ್ವ.