ಚಿತ್ರಿಕೆ

ನಾವು ಮತ್ತು ನಮ್ಮವರು

ಸುತ್ತಲೂ ಹಲವಾರು ತೆಂಗಿನ ಮರ. ಬಂಜೆಯಲ್ಲ ಎಂಬುದರ ಸಾಬೀತಿಗೆ ತೂಗಿ ನಿಂತ ಎಳನೀರಿನ ಗೊನೆ. ಪಚ್ಚೆ ಹಸಿರಿನ ಹುಲ್ಲಿನ ಚಾಪೆಯಲ್ಲಿ ಹರಡಿಕೊಂಡಿರುವ ಭೂಮಿ. ಕಾರ್ಮೋಡ ಕರಗಿ ಶುಭ್ರಾಕಾಶ. ನೀರು ಹನಿಸುವ ವರುಣ ದೂರದಲ್ಲೆಲ್ಲೊ ಇದ್ದಾನೆ. ಚಿಕ್ಕ ಚಿಕ್ಕ ಮನೆಯ ಮುಂದೆ ಕೆಲವು ‘ನ್ಯೂಕ್ಲಿಯರ್’ ಕುಟುಂಬ. ಅಪ್ಪ-ಅಮ್ಮನ ನಡುವೆ ಮಗನೊಬ್ಬನೇ. ಎಲ್ಲಾ ಮನೆಗಳ ಗೋಡೆ ಮೇಲೂ ಇಂಥದ್ದೇ ಒಂದು ತೂಗುಚಿತ್ರ. ಕುಟುಂಬ ವ್ಯವಸ್ಥೆಗೆ ಒಂದು ಜ್ವಲಂತ ಸಾಕ್ಷಿ.
ಇಷ್ಟೆಲ್ಲದರ ಎದುರು ದೊಡ್ಡ ಕ್ಯಾನ್‌ವಾಸ್. ಮುಂದೆ ಬೆತ್ತಲಾಗಿರುವ ಈ ಚಿತ್ರಕಾರ. ನಿಸರ್ಗ ಬಿಡಿಸಿದ ದೊಡ್ಡ ಕ್ಯಾನ್‌ವಾಸ್‌ನ ಚಿತ್ರದಲ್ಲಿ ಈತನದೂ ಪಾಲು. ಎಷ್ಟೊಂದು ಅಸಂಗತ! ಚಿತ್ರದ ಪಾಲಾದ ಚಿತ್ರಕಾರನಿಗೆ ಮತ್ತೊಂದು ಚಿತ್ರ ಬಿಡಿಸುವ ತವಕ.
ದೊಡ್ಡ ಕ್ಯಾನ್‌ವಾಸ್‌ನ ಮುಂದೆ ಬೆತ್ತಲಾಗಿ ಕುಳಿತಿದ್ದಾನೆ ಚಿತ್ರಗಾರ. ಅದು ಮಾನಸಿಕ ಬೆತ್ತಲೆ. ಕಲ್ಪನೆಗಳ ರೇಖಾವಳಿ ಒಳಗೆ ಚಿತ್ರ ಮೂಡಿಸುತ್ತಿರುವಾಗ ಅದಕ್ಕೊಂದು ಬಾಹ್ಯರೂಪ ನೀಡುವ ತವಕ ಈತನದು. ಬ್ರಹ್ಮರಾಕ್ಷಸನ ಮಾದರಿಯಲ್ಲಿ ಪ್ರತಿಕ್ಷಣದ ಬೆಳವಣಿಗೆ, ಕಲ್ಪನೆಯ ಭ್ರೂಣ ದೊಡ್ಡದಾಗುತ್ತಲೇ ಇದೆ. ಚಿತ್ರಕಾರನ ತಲೆ ಸಿಡಿದು ಹೊರಗೆ ಹರಿಯಬೇಕು. ಭಾವನೆಗಳ ಭ್ರೂಣಕ್ಕೆ ಒಂದು ಭೌತಿಕರೂಪ ಬೇಕು. ಅದಕ್ಕೆ ಆತ ಬ್ರಶ್ ಹಿಡಿದು ಕುಳಿತಿದ್ದಾನೆ. ಕ್ಯಾನ್‌ವಾಸ್ ಮೇಲೆ ಭ್ರೂಣ ಇನ್ನೇನು ಹರಿಯಬಹುದು!
ಶುಭ್ರ ಕ್ಯಾನ್‌ವಾಸ್‌ನಲ್ಲಿ ಒಂದೇ ಒಂದು ಕಲೆಯಿಲ್ಲ. ಎಲ್ಲಾ ತೊಳೆದು ಸ್ವಚ್ಛ ಮಾಡಿದ ಹಾಗೆ. ಸರಿ, ಚಿತ್ರಕಾರ ಆಲೋಚನಾರೂಢ. ಈ ಬದಿಯಲ್ಲಿ ನಾನಾ ಬಣ್ಣದ ಟ್ಯೂಬ್‌ಗಳು. ಕೆಂಪು, ಹಸಿರು, ಹಳದಿ, ಕಂದು ಇನ್ನೂ ಕೆಲವು ರಾಸಾಯನಿಕ ಮಿಶ್ರಣ. ಅವುಗಳೊಂದಿಗೆ ಕಂಗೊಳಿಸುವ ಚಿಕ್ಕ ಮಗ್‌ನಲ್ಲಿ ಶುಭ್ರ ನೀರು. ಎಷ್ಟೊಂದು ಅಸಂಗತ! ಬದುಕಲಿಕ್ಕಷ್ಟೇ ಅಲ್ಲ, ಬಣ್ಣ ಬಳಿಯಲಿಕ್ಕೂ ನೀರು!
ಒಂದು ರೇಖೆ ತಲೆಯೊಡೆದು ಹೊರಗೆ ಬಂತು. ಚಿತ್ರಕಾರ ಬ್ರಶ್ ತೆಗೆದುಕೊಂಡ. ಕ್ಯಾನ್‌ವಾಸ್‌ನ ಮೇಲೆ ಬಿಡಿಸಲ್ಹೋಗಬೇಕು. ಯಾಕೋ ರೇಖೆ ಮಂಗಮಾಯ. ವಿಚಿತ್ರ ಅನುಭವದ ಹೊತ್ತು. ಪಾರ್ಥನಿಗೆ ಕುರುಕ್ಷೇತ್ರದಲ್ಲಿ ಎದುರಾದ ಧರ್ಮ ಸಂಕಟದ ಕ್ಷಣ. ಚಿತ್ರಕಾರ ಪಾರ್ಥನ ಪಾತ್ರದಲ್ಲಿ. ಕ್ಷಣಕ್ಷಣಕ್ಕೆ ಧರ್ಮ ಜಿಜ್ಞಾಸೆಯ ಮರ ಬೆಳೆಯುತ್ತಲೇ ಇದೆ. ದಂಗಾಗಿ ನಿಂತು ಬಿಟ್ಟ. ಕೃಷ್ಣನ ನೆರಳು ತೋರಲೇ ಇಲ್ಲ.
ಪಕ್ಕದಲ್ಲಿದ್ದ ಬ್ರಶ್‌ಗಳಿಗೆ ಖುಷಿಯೋ ಖುಷಿ. ಎಲ್ಲದಕ್ಕೂ ಸಾಮಾಹಿಕ ರಜೆ. ಬಣ್ಣಗಳೆಲ್ಲಾ ಮಲಗೇ ಬಿಟ್ಟವು. ಚಿತ್ರಕಾರನ ಅಂತರಂಗದಲ್ಲಿ ಮತ್ತೊಂದು ಬಗೆಯ ಚಿತ್ರರೂಪ. ಅದು ಬಣ್ಣವಿಲ್ಲದ್ದು-ಕಪ್ಪು ಬಿಳುಪು.
ಶುಭ್ರ ಕ್ಯಾನ್‌ವಾಸ್‌ನಲ್ಲಿ ಏನು ಬಿಡಿಸಿದರೂ ತಪ್ಪು. ಬದುಕಿನ ಕ್ಯಾನ್‌ವಾಸ್‌ನಲ್ಲಿ ಎಷ್ಟೋ ಕಲೆ ನೂರೋ, ಸಾವಿರವೋ? ಕಪ್ಪು ಬಳೆದರೂ ಕಲೆ, ಕೆಂಪು ಬಳಿದರೂ ಅದೇ. ಹಸಿರು ಇನ್ನೂ ಕಷ್ಟ. ಶುಭ್ರಕ್ಕೆನ-ಪರ್ಯಾಯ. ಹಾಗಾದರೆ ಮುಂದೆ…
ಸುಮ್ಮನಿದ್ದರೆ ಚೆಂದ. ಕಲಾಕೃತಿಯ ಅಂದ ಇನ್ನೂ ಹೆಚ್ಚುಗೊಳ್ಳಬಹುದು. ಶುಭ್ರ ಕ್ಯಾನ್‌ವಾಸ್‌ನ ಜತೆ ನಿಂತುಬಿಟ್ಟ.
ಅಲ್ಲಿಗೊಬ್ಬ ಛಾಯಾಗ್ರಾಹಕ ಬಂದ. ನೆಳಲು ಬೆಳಕಿನ ಸಂಬಂಧಿ. ತೃಪ್ತಿಯ ನೆಲೆಯ ಹುಡುಕಾಟ. ಕ್ಯಾನ್‌ವಾಸ್‌ನ ಜತೆ ನಿಂತ ಚಿತ್ರಕಾರನ ಕಂಡು ಅಚ್ಚರಿ. ಕಣ್ಣು ಮಿಟುಕಿಸುವಷ್ಟರಲ್ಲಿ ಬೆಳಕು ಚಿಮ್ಮಿತು. ಆನಂದದ ನಗೆಯಲ್ಲಿ ಛಾಯಾಗ್ರಾಹಕ ನಡೆದು ಹೋದ. ಚಿತ್ರಕಾರ ಹಾಗೇ ನಿಂತಿದ್ದಾನೆ!
ಮಾರ್ಕೆಟ್‌ನಲ್ಲಿ ಹರವಿದ್ದಾರೆ ನೂರಾರು ನಿಸರ್ಗ ಚಿತ್ರಗಳ ರಾಶಿ. ತನ್ನ ಮನೆಗೆ ಒಪ್ಪುವ ವನ-ವಸತಿ ಕೊಳ್ಳಲು ಬಂದಿದೆ ಒಂದು ನ್ಯೂಕ್ಲಿಯರ್ ಕುಟುಂಬ. ರಾಶಿಯಲ್ಲಿ ಹೆಕ್ಕುತ್ತಿದ್ದಾರೆ. ಬರೇ ಪ್ರಕೃತಿ, ಬರೇ ಮೋಡ, ಖಾಲಿ ಬೆಟ್ಟ, ಗುಡ್ಡದ ಮೇಲೆ ಕೇವಲ ಕುರುಚಲು. ಯಾವುದೂ ಒಪ್ಪಲಿಲ್ಲ. ಕೊನೆ ಕೋಶಿಶ್. ‘ನಾಲ್ಕು ತೆಂಗಿನ ಮರ, ಎರಡು ಮನೆ, ಹಸಿರು ಹುಲ್ಲು, ಒಂದು ಕ್ಯಾನ್‌ವಾಸ್, ಬ್ರಶ್‌ಗಳ ರಾಶಿ-ಅದರೊಂದಿಗೆ ಒಬ್ಬ ಚಿತ್ರಕಾರ. ಅವನ ಕೈಲಿ ನಗುತ್ತಿರುವ ಒಂದು ಕುಂಚ!’ ಅಪ್ಪಾ ಇದು ಚೆನ್ನಾಗಿದೆ ಮಗ ಅಂದ.
ಅಪ್ಪ-ಅಮ್ಮನಿಗೂ ಹಿಡಿಸಿತು. ಕೊಂಡುಕೊಂಡರು ಹಣ ಕೊಟ್ಟು. ಚಿತ್ರ ಮಾರಾಟಗಾರ ಹೇಳಿದ-‘ಬಹಳಷ್ಟು ಮಾರಾಟವಾಗಿದೆ ಇದು. ‘ಅದಕ್ಕೆ ಮಗು ಉತ್ತರಿಸಿತು-‘ಅಪ್ಪಾ, ಈ ಕ್ಯಾನ್‌ವಾಸ್‌ನಲ್ಲಿ ನನ್ನ ಚಿತ್ರ? ಕುಂಚ ಮತ್ತೊಮ್ಮೆ ನಕ್ಕಿತು. ನ್ಯೂಕ್ಲಿಯರ್ ಕುಟುಂಬದ ಮೇಲೆ ಆ ನಗುವಿನ ಪ್ರತಿಫಲನ. ನಗು ಕುಟುಂಬ.

Advertisements

One thought on “ನಾವು ಮತ್ತು ನಮ್ಮವರು

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s