ಚಿತ್ರಿಕೆ

ಬದುಕೆಂಬ ಕೌದಿಗೆ ಬಂಧದ ಚಿತ್ರ

ಪುಗ್ಗೆ ಮಾರುವವನ ಕೈಯಲ್ಲಿ ನಾನಾ ನಮೂನೆಯ ಪುಗ್ಗೆ. ಅದರ ತುದಿಗೊಂದು ಸೂಕ್ಷ್ಮ ಹಗ್ಗ. ಬರೀ ಕಣ್ಣಿಗೆ ತೋರಲಾರದಂಥ ರೂಪ. ಸೂಕ್ಷ್ಮದರ್ಶಕ ಬೇಕಿಲ್ಲ. ತಲ್ಲೀನತೆಯ ‘ಭೂತ’ ಕನ್ನಡಿ ಬೇಕು. ಪುಗ್ಗೆಯಲ್ಲಿ ಅದರ ಬಣ್ಣದಲ್ಲಿ ಒಂದಾಗಬೇಕು. ಕಣ್ಣಿಗೆ ದೃಷ್ಟಿ ಕೂಡಿದಾಗ ನಲಿನ ರೂಪ ದೃಷ್ಟ್ಯ. ಇದೂ ಒಂದು ಅನ್ವೇಷಣೆ – ಗೊತ್ತಿರುವ ರೂಪದ್ದು, ತಿಳಿದಿರುವಂಥದ್ದು.
ನೂಲಿಗೂ – ಪುಗ್ಗೆಗೂ ಅನುರೂಪ ಸಂಬಂಧ. ರಾಗಕ್ಕೆ ತಕ್ಕ ತಾಳ. ಹಗ್ಗಕ್ಕೆ – ಪುಗ್ಗೆಬೇಕು. ಪುಗ್ಗದ ಬದುಕಿಗೆ ಹಗ್ಗಬೇಕು. ಇವೆರಡೂ ಈ ಪುಗ್ಗೆ ಮಾರುವ ಹುಡುಗನಿಗೆ ಬೇಕು. ಇವನ ಬದುಕು ಕಟ್ಟುವ ಮಾದರಿಗೆ ಮೂಲಾಧಾರ. ಮರಳು, ಇಟ್ಟಿಗೆ, ಸಿಮೆಂಟ್ ಎಲ್ಲಾ ಇದೇ. ಮೇಸ್ತಿ ಈತ.
ಈ ಹುಡುಗ ಎಲ್ಲೆಂದರಲ್ಲಿ ತಿರುಗುತ್ತಾನೆ. ಸ್ಮಶಾನದ ಬಾಗಿಲಿನಿಂದ ಹಿಡಿದು ಹುಟ್ಟಿನ ಸೂತಕದ ಮನೆಯವರೆಗೆ. ಊರಿಂದ ಊರಿಗೆ ಅಲೆಮಾರಿ. ಸೀಮೆಗಳೆಲ್ಲಾ ದಾಟಿ. ಜಾತಿ – ಮಿತಿ ಎಲ್ಲಾ ಮೀರಿ. ವಯಸ್ಸು – ಮನಸ್ಸು – ಕನಸುಗಳೆಲ್ಲದರ ಆಚೆಗೆ. ಈತನದ್ದು ಒಂದಂಶದ ಕಾರ್ಯಕ್ರಮ. ಇದ್ದ ಪುಗ್ಗೆಯೆಲ್ಲವಾ ಮಾರಲೇಬೇಕು. ಮತ್ತೆ ತಂದು ಗಾಳಿ ತುಂಬಬೇಕು. ಸಿಕ್ಕ ‘ಪೈಸೆ’ಯ ನೂಲಿನಲ್ಲಿ ತನ್ನ ಬದುಕ ಚೀಲವ ಹೊಲೆದುಕೊಳ್ಳಬೇಕು. ‘ಹಸಿವ’ ಒತ್ತಡದಿಂದ ಮುಕ್ತಿಗಾಣಬೇಕು. ಪುಗ್ಗೆ ತುಂಬಿದ ಜೋಳಿಗೆಯಲ್ಲಿ ಮುಗ್ಧ ಪ್ರಪಂಚವಿದೆ. ಬಣ್ಣಬಣ್ನದ ಪ್ರಪಂಚದಲ್ಲೂ ಆತನ ಕಪ್ಪು – ಬಿಳುಪಿನ ಕನಸು. ಈ ಕನಸಿಗೆ ಬಣ್ಣ ತುಂಬುವ ಪ್ರತಿ ಯತ್ನಕ್ಕೂ ಏನಾದರೊಂದು ಭಂಗ. ಗಾಳಿ ತುಂಬಿಕೊಳ್ಳುತ್ತಿದ್ದ ಬಲೂನು ಒಮ್ಮೆಲೆ ಟಪ್. ಅದರ ಅವಶೇಷಗಳೆಲ್ಲಾ ರಸ್ತೆ ಮೇಲೆ. ಈತ ನಿಟ್ಟುಸಿರುಬಿಟ್ಟು ಪಕ್ಕದ ಗಲ್ಲಿಗೆ ತಿರುಗುತ್ತಾರೆ.
ಎಲ್ಲಾ ಗಲ್ಲಿಯಲ್ಲೂ ಕೂಗಿ ಹೇಳುತ್ತಾನೆ. ‘ಐದು ರೂಪಾಯಿಗೆ ಮೂರು’ ಚಿಕ್ಕಮಕ್ಕಳಿದ್ದರೆ ‘ಮೂರಕ್ಕೆ ಒಂದು ಫ್ರೀ’ ಮನೆಯಲ್ಲಿರುವವರಿಗಲ್ಲ. ನನ್ನೆದುರು ನಗಬೇಕು. ಈ ಉಚಿತ ಸೇವೆ ಪುಗ್ಗ ಕೊಂಡದ್ದಕ್ಕಲ್ಲ. ಮಕ್ಕಳು ನಕ್ಕಿದ್ದಕ್ಕೆ. ಇದೊಂದು ಬಗೆಯ ಮಾರ್ಕೆಟ್ ಸ್ಟ್ರಾಟೆಜಿ. ಹೆಂಡತಿಯ ತೆಕ್ಕೆಯಲ್ಲಿದ್ದ ಪ್ರತಿ ಒಮ್ಮೆಲೆ ಗೊಳ್ಳನೆ ನಗುತ್ತಾನೆ, ತೊಟ್ಟಿಲಲ್ಲಿನ ಕದಲುವಿಕೆಗೆ ನಗುವ ಅಮ್ಮನಿಗೆ ಮಗು ಪ್ರತಿಕ್ರಿಯಿಸುತ್ತದೆ. ಗಲ್ಲಿಯ ಕೊನೆಯಲ್ಲಿರುವ ಅನಾಥಾಶ್ರಮದ ತಬ್ಬಲಿಗಳ ಕಿವಿ ನಿಮಿರುತ್ತದೆ. ಅವರಲ್ಲೊಬ್ಬಳು ಪುಟ್ಟಪೋರಿ, ‘ಪುಗ್ಗಣ್ಣ ಬಂದ, ಪುಗ್ಗಣ್ಣ ಬಂದ !’ ಕೂಗುತ್ತಾಳೆ.
ಇದಾವುದೂ ಅವನ ಪರಿವೆಗೆ ಬರಲಿಲ್ಲ. ಅವನು ಮತ್ತೆ ಕೂಗುತ್ತಾನೆ. ‘ಐದು ರೂಪಾಯಿಗೆ ಮೂರು, ಮಕ್ಕಳಿಗೆ ಒಂದು ಫ್ರೀ’ ಅಷ್ಟರಲ್ಲಿ ಮನೆಯೊಳಗಿನಿಂದ ಒಂದು ಕರೆ, ‘ಬಾರೋ ಪುಗ್ಗ ಮಾರುವವನೇ’. ನೇರವಾಗಿ ನಡೆದ ಬಾಲಕನಿಗೆ ಅತ್ಯಾಶ್ಚರ್ಯ. ಎಲ್ಲಾ ಚಿಕ್ಕ ಮಕ್ಕಳೇ. ದೊಡ್ಡವರು ಯಾರೂ ಇಲ್ಲ. ನೂರರ ಸಮೀಪದ ಅಜ್ಜಿಯೊಬ್ಬಳ ಬಿಟ್ಟು. ಆ ಅಜ್ಜಿಯೂ ಮಕ್ಕಳ ಹಾಗೆ, ಬೊಚ್ಚುಬಾಯಿ ತೆರೆದು ಗೊಳ್ಳನೆ ನಗುತ್ತಾಳೆ ಪುಗ್ಗದ ಹುಡುಗನನ್ನು ಕಂಡು. ಅಜ್ಜಿನಕ್ಕಿದ್ದಕ್ಕೆ ಮಕ್ಕಳೂ ನಗುತ್ತಾರೆ, ಈತನೂ ನಕ್ಕ. ಪುಗ್ಗೆಯ ಜೋಳಿಗೆ ತೆಗೆದು ಗಾಳಿ ಊದಿದ . ಪುಗ್ಗ ಉದ್ದವಾಗುತ್ತಾ ಬಂತು, ಕೆಲವೊಂದು ಅಗಲಕ್ಕೆ, ಶ್ರೀಮಂತರ ಮನೆಯ ಸೋಫಾ ಸೀಟಿನ ಹಾಗೆ. ಇನ್ನು ಕೆಲವು ದುಂಡಗೆ. ಮುದ್ದು ಮಕ್ಕಳ ಗಲ್ಲದ ಹಾಗೆ ಅರಳಿ ನಿಂತವು ಕ್ಷಣಾರ್ಧದಲ್ಲಿ.
ನಕ್ಕ ಮಕ್ಕಳಲ್ಲಿಯೇ ಈಗ ಗಲಾಟೆ. ನನಗೆ ಅದು ಬೇಕು, ಉದ್ದದ್ದು, ಅಗಲದ್ದು, ನನಗೆ ಸೇಬು… ಎಲ್ಲಾ ಪುಗ್ಗೆಗಳನ್ನು ಮಕ್ಕಳ ಮುಂದೆ ಸುರಿದುಬಿಟ್ಟ. ಮಕ್ಕಳೆಲ್ಲಾ ಹೆಕ್ಕಿಕೊಂಡರು. ಈಗ ಅವುಗಳಿಗೆ ಜೀವ ತುಂಬಬೇಕು. ಪುಗ್ಗೆ ಹಿಡಿದೆಳೆದು ಗಾಳಿ ತುಂಬಿ ನೂಲು ಬಿಗಿದು – ಬಿಗಿದುಕೊಟ್ಟ. ಮಕ್ಕಳಿಗೆ ಖುಷಿಯಾಯಿತು. ಗಾಳಿ ಮಾರುವಾಟ ಆತನದ್ದು.
ಅಜ್ಜಿ ಮಕ್ಕಳನ್ನು ಸರಿಸುತ್ತಾ ಮುಂದೆ ಬಂದಳು. ‘ಏನಯ್ಯಾ, ಹುಡುಗ ನನಗೊಂದು ಪುಗ್ಗೆ ಕೊಡು. ಯಾವುದಾದರೂ ಸರಿ’. ಈತನಿಗೆ ನಗು ಬಂತು. ಕೊಟ್ಟ ಪುಗ್ಗ ಹಿಡಿದು ಅಜ್ಜಿ ಗಾಳಿ ಊದುತ್ತಿದ್ದಾಳೆ. ಮೆಲ್ಲನೆ ಅರಳಿಕೊಳ್ಳುವ ಪುಗ್ಗ ಮತ್ತೆ ಸಮ್ಮನಾಗಿ ಬಿಡುತ್ತದೆ. ಆದರೂ ಅಜ್ಜಿ ಸುಮ್ಮನಾಗಲಿಲ್ಲ. ಪುನಃ ಗಾಳಿ ಊದುತ್ತಾಳೆ. ಗಾಳಿ ಹೂವಾಗಿ ಅರಳುತ್ತದೆ. ಮಕ್ಕಳ ಮುಖದಲ್ಲಿ ನಗುವ ಹೂವು ಮಿಣಿ ಮಿಣಿ. ಪುಗ್ಗೆ ಮಾರುವ ಹುಡುಗ ನಿಂತು ಬಿಟ್ಟಿದ್ದಾನೆ ಸುಮ್ಮನೆ ನೋಡುತ್ತಾ. ಗಾಳಿ ತುಂಬುವವ ಈಗ ಸ್ತಬ್ಧ. (ಚಿತ್ರ : ಪ್ರವೀಣ್ ಬಣಗಿ)

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s