ಈ ವಶೀಲಿ ಮುಂದೆ ಯಾರೂ, ಯಾವುದೂ ಪ್ರಾಮಾಣಿಕವಲ್ಲ; ಸ್ಥಿರವಲ್ಲ; ಎಲ್ಲವೂ ಚರ. ಕರಗಬೇಕು; ನೀರಾಗಿ ಹರಿಯಬೇಕು; ಹರಿದು ಸರಿಯಬೇಕು. ಮುಂದಕ್ಕೆ ಹೋಗಿ ಇನ್ನೇನೋ ಆಗಬೇಕು. ಹೀಗೆ ಇರುತ್ತೇವೆಂಬ ಹಠವ ಬಿಟ್ಟು .
ಬೀಜ ಮೊಳೆತು ಹೂ ಬಿಟ್ಟು ಕಾಯಿ ಮಾಗಿ ಹಣ್ಣಾಗಿ ಮತ್ತೊಂದು ಜೀವ. ತರ ತರದ ಭಾವ. ಅದಕ್ಕೆ ತಕ್ಕನಾದ ಹಾವಭಾವ. ಅರಿತು ಬೆರೆಯುವ ಸಮಭಾವ. ನಡು ನಡುವೆಯೇ ಸಮಸ್ಥಿತಿಯ ಅಭಾವ. ಅಭಾವದೊಳಗೂ ಮತ್ತೊಂದು ಭಾವ. ಎಲ್ಲಕ್ಕೂ ಬದಲಾವಣೆಯ ಪ್ರಭಾವ.
ಆತ ಮೊದಲು ಹೇಗಿದ್ದ ? ಬಾಲ್ಯದ ಹೊಳೆಯಲಿ ಹೇಗೆ ಈಜುತ್ತಿದ್ದ, ಮೊದಲ ಬಾರಿಗೆ ನಾವೆ ನಡೆಸುವ ನಾವಿಕನಂತೆ. ಅಜ್ಜಿಯ ಕವಳಸಂಚಿಯ ಕದ್ದು ಕಾಟ ಕೊಡುತ್ತಿದ್ದ. ಕೇರಿ ಹುಡುಗರಿಗೆ ಹೊಡೆದು ದೂರು ತರುತ್ತಿದ್ದ. ಗದ್ದೆ ಬದು ನೀರು ತಿರುಗಿಸಿ ಅಪ್ಪನ ದೊಣ್ಣೆಗೆ ಕೆಲಸ ಕೊಡುತ್ತಿದ್ದ. ಅಕ್ಕನ ಜಡೆ ಎಳೆದು ಮೂಲೆಗೆ ಹೋಗಿ ಬಚ್ಚಿಟ್ಟುಕೊಳ್ಳು ತ್ತಿದ್ದವನಿಗೆ ಏನಾಗಿದೆ ? ಹದಿನೆಂಟು ತುಂಬಿದೆ.
ಈಗ ಇನ್ನು ಏನೋ ಆಗಿದ್ದಾನೆ. ಚೆಲ್ಲು ಚೆಲ್ಲು ಮಾತನಾಡುತ್ತಾ, ಹುಡುಗಿಯರ ಹಿಂದೆ ಬಿದ್ದಿದ್ದಾನೆ. ಸರಸೂ ನಾಳೆ ಬಾರದಿದ್ದರೆ ಈತನಿಗೆ ಕ್ಲಾಸು ಬೋರು. ಮುಂದಿನ ಬೆಂಚಿನ ವೀಣಾ ಗೈರು ಹಾಜರಿಯಾದರೆ ಇವನ ಬಾಯಿಗೆ ಬೀಗ.. ವೆಂಕಣ್ಣನ ಜತೆ ನಿತ್ಯವೂ ಜಗಳ. ಟೀಚರ್ ಬೆನ್ನಿಗೆ ರಾಕೆಟ್ ಹಾರಿಸದ ದಿನವಿಲ್ಲ. ಇಂಥವನಿಗೆ ನಾಳೆ ಇಪ್ಪತ್ತೆಂಟು ತುಂಬುತ್ತದೆ.
ಒಮ್ಮೆಲೆ ಮುಖ ಗಂಭೀರ. ಮುಖದ ಮೇಲಿನ ಕೂದಲಿಗೂ ಗಂಭೀರತೆಯ ಛಾಯೆ. ಜವಾಬ್ದಾರಿಯ ಮಾತಿನ ಕಣಜವೇ ಅವನದು. ಉಡಾಫೆ ಮಾಡುವುದು ಮರೆತ. ಪ್ರತಿಯೊಂದೂ ಲೆಕ್ಕಾಚಾರ. ತೂಗಿ ತೂಗಿ ಮಾತನಾಡಲು ಅಳತೆಗೋಲು ಇಟ್ಟುಕೊಂಡಿದ್ದಾನೆ. ತತ್ತ್ವ, ಸಿದ್ಧಾಂತಗಳ ಜತೆ ಖಯಾಲಿ ಬೆಳೆಸಿದ್ದಾನೆ. ಪ್ರತಿಕ್ಷಣವೂ ‘ಸೀರಿಯಸ್ ’ಗುಳಿಗೆ ನುಂಗಿದವನಿಗೆ ಐವತ್ತು ದಾಟಿದರೆ ?
ಹೆಗಲಿಗೆ ಬಂದ ಮಗನಿಗೆ ಕೆಲಸ ಸಿಕ್ಕಿತು, ಆದರೆ ಹದಿನೆಂಟು ತುಂಬಿದ ಮಗಳಿಗೆ ಸರಿಯಾದ ಹುಡುಗ ಸಿಗಲಿಲ್ಲ. ಅಂತೂ ಸಿಕ್ಕಾಗ ಹೀಗಿದ್ದರೆ ಚೆನ್ನ, ಹೀಗಿರಬಾರದಿತ್ತು ಎಂಬುದರ ತಾಕಲಾಟ. ಏನೋ ಒಂದು ನಿರ್ಧಾರ. ಒಮ್ಮೆ ಖುಷಿ. ಮತ್ತೊಮ್ಮೆ ಎದೆ ಭಾರ. ಮಗದೊಮ್ಮೆ ವಿಚಾರ. ಎಲ್ಲಾ ಅಯೋಮಯ. ಇಷ್ಟೆಲ್ಲಾ ಮುಗಿಯುವಾಗ ಭೋಗ್ಯದ ಮನೆಯ ವಯಸ್ಸು ಮುಗಿಯಬೇಕೇ ?
ಎಲ್ಲಾ ಮರೆತವನು ಜ್ಞಾಪಕ ಚಿತ್ರಶಾಲೆಯ ಒಳಹೊಕ್ಕುತ್ತಾನೆ. ಒಂದೊಂದೇ ಚಿತ್ರಪಟಗಳ ಧೂಳು ಒರೆಸಿ ಅದರ ಅಂದ ಸವಿಯುತ್ತಾನೆ. ತನ್ನ ರೂಪಕೆ ತಾನೇ ಸೋತು ಪ್ರೀತಿಸುತ್ತಾನೆ. ವಾಸ್ತವಕ್ಕೆ ಬಂದು ಬಿಳಿ ಕೂದಲಿಗೆ ಕಪ್ಪು ಬಳಿಯತೊಡಗುತ್ತಾನೆ. ಪತ್ನಿ ಜತೆಗೆ ಸಣ್ಣ ವಾಕ್ ಹೊರಟು ಸಮರಸವೇ ಜೀವನ ಎಂದು ಉಲಿಯುತ್ತಾನೆ. ಹೀಗೆ ವಶೀಲಿಗೆ ಮಣಿದು ಏನೇನೂ ಆಗಿಬಿಡುತ್ತಾನೆ. ವಯಸ್ಸು ಒತ್ತಿದ ಮೊಹರಿನ ಬಣ್ಣ ‘ಸುಕ್ಕು’.