ಸುಲಲಿತ

ಹೆಡ್ಡಿಂಗ್ ಇಲ್ಲದ್ದು…

ಗಡಿಯಾರದ ಮುಳ್ಳು ನಿಲ್ಲುವುದಿಲ್ಲ ; ನಾನು-ನೀನು ಎಲ್ಲರೂ ನಿಂತರೂ. ನಮಗೂ ಸಾಗುತ್ತಿದ್ದೇವೆ ಎಂಬ ಭ್ರಮೆ ಹಚ್ಚಿಸುವಷ್ಟು ವೇಗದಲ್ಲಿ ಒಮ್ಮೊಮ್ಮೆ ಮುಳ್ಳು ನಡೆದು ಬಿಡುತ್ತದೆ. ನಮ್ಮನ್ನೆಲ್ಲಾ ಇಲ್ಲೇ ಬಿಟ್ಟು. ಆಗ ಮಾತ್ರ ನಾವು ನಿಂತಲ್ಲೇ.

ಮೊನ್ನೆ ಮೊನ್ನೆ ಹುಟ್ಟಿದ ರಾಘು ಇದ್ದಕ್ಕಿದ್ದಂತೆ ಕಣ್ಮುಚ್ಚಿ ತೆಗೆಯುವಷ್ಟರಲ್ಲಿ ಮದುವೆ ಮಾಡಿಕೊಳ್ಳುವಷ್ಟು ದೊಡ್ಡವನಾದನೇ ? ಹಾಗಾದರೆ ಅವನು ಗೋಲಿಯಾಡಿದ್ದು, ಪೇರಲೆ ಮರದ ಕಾಯಿ ಕೀಳಲು ಹೋಗಿ ಕೆಳ ಬಿದ್ದು ಮೂಳೆ ಮುರಿದುಕೊಂಡಿದ್ದು, ಅದ್ಯಾವುದೋ ಊರಿನ ನೋವಿನೆಣ್ಣೆ ಒರೆಸಿಕೊಂಡು ದೊಡ್ಡವನಾದದ್ದು, ಎಸ್‌ಎಸ್‌ಎಲ್‌ಸಿಯಲ್ಲಿ ಉಳಿದವರಿಗಿಂತ ಹೆಚ್ಚು ಅಂಕ ಪಡೆಯಲು ಹೋಗಿ ನಗೆಪಾಟಲೀಗೀಡಾದದ್ದು-ಎಲ್ಲವೂ ಇಂದಿನಂತೆ ತೋರುವುದಿಲ್ಲ. ಅವೆಲ್ಲಾ ಸಾಗಿದ್ದು ಯಾರಿಗೆ ನೆನಪಿದೆ ?
ಬಸ್‌ಸ್ಟ್ಯಾಂಡ್‌ನಲ್ಲಿ ಲೋಟ ತೊಳೆಯಲು ಮೊನ್ನೆ ತಾನೇ ಮನೆಯಿಂದ ಓಡಿಬಂದ ಹುಡುಗನಿಗೆ ಇನ್ನೂ ಎಳೆ ವಯಸು. ಮೀಸೆ ಬಂದಿರುವುದರಿರಲಿ, ಹಲ್ಲೂ ಕೂಡ ಇನ್ನೂ ಎಳೆಯದು. ಬರೀ ಬಣ್ಣ ಬಣ್ಣದ ಚಾಕ್‌ಲೇಟ್ ಕವರುಗಳನ್ನು ಕಂಡೇ ಹೊಟ್ಟೆ ತುಂಬಿಸಿಕೊಂಡಾಂತ. ಅದಕ್ಕೇ ಅವನ ಹಲ್ಲುಗಳು ಹುಳುಕು ಆಗಿಲ್ಲ ! ಹೆಚ್ಚೆಂದರೆ ಹನ್ನೆರಡಿರಬಹುದೆನ್ನಿ.
ನೋಡಲು ಉದ್ದುದ್ದ ಬೆಂಡೆಕಾಯಿಯಂತಿದ್ದಾನೆ. ಅದಕ್ಕೇ ಕೆಲಸ ಕೇಳಿಕೊಂಡು ಬಂದಾಗ ಮಾಲೀಕ “ಎಷ್ಟು ವಯಸ್ಸು’ ಎಂದು ಕೇಳಿದ್ದ. ಅದಕ್ಕೆ “ಹದಿನಾಲ್ಕು’ ಎಂದು ಹೇಳಿದಾಗ ಪಕ್ಕದ ಗೋಡೆಗಳೆಲ್ಲಾ ಬಿದ್ದು ಬಿದ್ದು ನಕ್ಕಿದ್ದವು. ಸದ್ದು ಕೇಳಿಸರಲಿಲ್ಲವಷ್ಟೇ, ಯಾರಿಗೂ.
ಮಾಲೀಕ ಷರತ್ತು ವಿಧಿಸಿ ಒಳಗೆ ಕರೆದುಕೊಂಡಿದ್ದಾನೆ. ಬೆಳಗ್ಗೆ ಎದ್ದು ಲೋಟ ತೊಳೆಯಲು ಶುರು ಮಾಡಿದರೆ ಮುಗಿಯುವುದಕ್ಕೆ ಬಸ್ಸಿನ ಜನರೆಲ್ಲಾ ಮನೆ ಮುಟ್ಟಬೇಕು. ಅಲ್ಲಿಯವರೆಗೂ ಇವನಿಗೂ, ಸಬೀನಾಕ್ಕೂ, ಕಾಯಿಗುಂಜಿಗೂ ಗೆಳೆತನ. ಇಷ್ಟಕ್ಕೂ ತನ್ನ ವಯಸ್ಸನ್ನು ಹೆಚ್ಚಿಗೆ ಹೇಳುವಷ್ಟು ಜಾಣನಾದದ್ದು ಯಾವಾಗ ?
ಕತ್ತಲೆಯಲ್ಲೇ ಓದುತ್ತಾ ಕುಳಿತವಳಿಗೂ ಆಯಾಸವಾಗಿದೆ. ಕಣ್ಣುಗಳಿಗೂ ಸುಸ್ತು. ಊರಿಗೆಲ್ಲಾ ಬೆಳಕು ಬಂದರೂ ಈ ಮನೆಯೊಳಗೆ ಇನ್ನೂ ಬಂದಿಲ್ಲ. ಯಾಕೋ, ಅಪ್ಪನಿಗೆ ಕೇಳಿದರೆ ಏನೋ ಕಾರಣ ಹೇಳುತ್ತಾನೆ. ಕಾನೂನು ಉಪದ್ವ್ಯಾಪ ವಿವರಿಸುತ್ತಾನೆ. ಅದೆಲ್ಲಾ ಕೇಳಿಕೊಳ್ಳುವುದಕ್ಕಿಂತ ಕತ್ತಲೆಯೇ ಸಾಕೆಂದೆನಿಸಿದೆ ಈಕೆಗೆ. ಅದಕ್ಕೆ ಬೆಳಕು ಕುರಿತು ಮಾತನಾಡುವುದಿಲ್ಲ. ಅಲ್ಲಿಗೆ ಅವಳಿನ್ನೂ ಬೆಳೆದಿಲ್ಲ !
ಅಬ್ಬಬ್ಬಾ, ಆ ರಾಘು ಇನ್ನಷ್ಟು ದೊಡ್ಡವನಾಗಿ ಬಿಟ್ಟನೆ ? ಮದುವೆಯಾಗಿ, ಅವನ ಮೊದಲನೇ ಮಗಳು ಎಂಜಿನಿಯರ್ ಅಂತೆ. ಎರಡನೇ ಮಗಳೂ ಸಹ ವೈದ್ಯ ವಿದ್ಯಾರ್ಥಿನಿ. ಮೂರು ವರ್ಷ ಕಳೆದರೆ ಅಪ್ಪನ ಆರೋಗ್ಯ ವಿಚಾರಿಸಲು ಮಗಳೇ ಬರುತ್ತಾಳೆ. ಆರೋಗ್ಯ ಕಾಳಜಿಗೆ ಉದ್ದುದ್ದ ಪಟ್ಟಿ ನೀಡುತ್ತಾಳೆ. ಉಪನ್ಯಾಸ ಕೊಡುತ್ತಾಳೆ. ಕೆಮ್ಮಿದ್ದಕ್ಕೆ ಎರಡು ಗುಳಿಗೆ, ತಲೆನೋವಿಗೆ ಮತ್ತೂ ಎರಡು-ಹೀಗೆ ಕಾಳಜಿಯ ಪಟ್ಟಿ ಬೆಳೆಯುತ್ತದೆ.
ಎಷ್ಟೆಲ್ಲಾ ಮಾತ್ರೆ ತೆಗೆದುಕೊಂಡ ಅವನೂ ಒಮ್ಮೆ ಧಡಕ್ಕನೆ ನಿಂತು ಬಿಡುತ್ತಾನೆ. ಸುತ್ತಲಿನ ಜಗತ್ತು ಓಡುತ್ತಲೇ ಇರುತ್ತದೆ. ಕಾಲದ ಹಿಂದೆ. ಏನನ್ನೋ ಬೆನ್ನಟ್ಟಿದಂತೆ. ಆ ಬಸ್‌ಸ್ಟ್ಯಾಂಡ್‌ನ ಹುಡುಗ, ಕತ್ತಲೆಯಲ್ಲಿ ಓದಿದ ಹುಡುಗಿ, ಎಂಜಿನಿಯರೂ, ವೈದ್ಯೆ ಎಲ್ಲರೂ ಬೆನ್ನಟ್ಟಿದವರ ಹಿಂದೆ ಮತ್ತೇನನ್ನೋ ಬೆನ್ನಟ್ಟಿಕೊಂಡು. ಈ ಮ್ಯಾರಥಾನ್‌ನಲ್ಲಿ ಯಾರದ್ದು ಯಾವ ಸ್ಥಾನ ಯಾರು ಹೇಳಬೇಕು ? ಪ್ರಥಮ, ದ್ವಿತೀಯ, ತೃತೀಯ, ಯೋಗ್ಯತೆಗನುಸಾರ ಹಾಕಿಕೊಳ್ಳಬಹುದು.
ಮತ್ತೆ ಗಡಿಯಾರದ ಮುಳ್ಳಿನದ್ದೇ ಮುನ್ನಡೆ. ಅಲ್ಲಿಗೂ ಗಡಿಯಾರ ದಣಿಯದು : ಕಾಲವೂ ಸಹ. ಹಾಗಾದರೆ ನಾವು ನಿಂತದ್ದು ಎಲ್ಲಿ ? ಯಾವ ಕೊನೆಯಲ್ಲಿ ?

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s