ಮನೆ ಮುಂದೆ ಹೊಸ ಟ್ರಕ್ ನಿಂತಿತ್ತು. ತನ್ನ ಹೊಸ ಟ್ರಕ್‌ನ ಸೊಬಗು ನೋಡಲು ಹೊರಗೆ ಬಂದ ಆತ ತಬ್ಬಿಬ್ಬಾದ.
ಮೂರು ವರ್ಷದ ಅವನ ಮಗ ಖುಷಿಯಿಂದ ಸುತ್ತಿಗೆ ಹಿಡಿದು ಟ್ರಕ್‌ನ ಮೇಲೆ ಸವಾರಿ ನಡೆಸಿದ್ದ. ಅವನ ಕೈಯಲ್ಲಿದ್ದ ಮೊಳೆಗಳೆಲ್ಲಾ ಟ್ರಕ್‌ಗೆ ಅಲಂಕಾರಗೊಳ್ಳುತ್ತಿದ್ದವು. ಕ್ರೋಧಕ್ಕೊಳಗಾದ ಆತ ಮಗನನ್ನು ದೂರಕ್ಕೆಳೆದ. ಸಿಟ್ಟು ತಡೆಯಲಾಗಲಿಲ್ಲ. ಅದೇ ಸುತ್ತಿಗೆಯಿಂದ ಎರಡೂ ಕೈಗಳನ್ನು ಕುಟ್ಟಿ ಬಿಟ್ಟ.
ಅಪ್ಪ ಸಹಜ ಸ್ಥಿತಿಗೆ ಮರಳಿದಾಗ ತಪ್ಪಿನ ಅರಿವಾಯಿತು. ರಕ್ತ ಸೋರುತ್ತಿದ್ದ ಮಗನ ಕೈ ಕಂಡು ಕಂಗಾಲಾದ. ಕೂಡಲೇ ಆಸ್ಪತ್ರೆಯತ್ತ ಮಗನೊಂದಿಗೆ ಧಾವಿಸಿದ. ಡಾಕ್ಟರ್ ಮೂಳೆಯನ್ನು ಸರಿಪಡಿಸಲು ಯತ್ನಿಸಿದರು. ಆದರೆ ಕಷ್ಟ. ಎರಡೂ ಕೈಗಳನ್ನು ಬ್ಯಾಂಡೇಜಿನಿಂದ ಕಟ್ಟಿದರು.
ಸ್ವಲ್ಪ ಹೊತ್ತಿನ ಮೇಲೆ ಮಗುವಿಗೆ ಎಚ್ಚರವಾಯಿತು. ಬ್ಯಾಂಡೇಜಿನಿಂದ ಬಿಗಿದ ತನ್ನ ಕೈಯನ್ನು ಕಂಡು ವ್ಯಥೆ ಪಟ್ಟ. ಬಗ್ಗಿಸಲಾರದ ಬೆರಳುಗಳು. ತೀರದ ನೋವು. ಎದುರಿದ್ದ ಅಪ್ಪನಿಗೆ ಕೈ ಮುಗಿದು “ಅಪ್ಪ, ನಿನ್ನ ಟ್ರಕ್‌ನ್ನು ಹಾಳು ಮಾಡಿದ್ದಕ್ಕೆ ಕ್ಷಮಿಸು’ ಎಂದ. ಅಪ್ಪನ ಕ್ಷಮಿಸಿದ್ದೇನೆ ಎಂಬಂತೆ ಮುಗುಳ್ನಕ್ಕ.
“ನನ್ನ ಬೆರಳುಗಳು ಮೊದಲಿನಿಂತೆಯೇ ಆಗುವವೇ ಅಪ್ಪಾ?’ ಎಂದು ಮಗು ಮುಗ್ಧತೆಯಿಂದಲೇ ಪ್ರಶ್ನಿಸಿದ. ಅಪ್ಪ ಮನೆಗೆ ಹೋದವನೇ ನೇಣು ಹಾಕಿಕೊಂಡ.
ಇಂಗ್ಲಿಷ್ ಕಥೆಯೊಂದರ ಅನುವಾದ