ಚಿತ್ರಿಕೆ / ಸುಲಲಿತ

ಮಳೆಯ ಪಾತ್ರಗಳು

ಜೋರಾದ ಮಳೆ ಸುರಿದು ನಿಂತಿದೆ. ಗುಡುಗು, ಸಿಡಿಲೂ ಶಾಂತ. ಬಸ್ಸು ನಿಲ್ದಾಣದಲ್ಲಿ ಇಷ್ಟೂವರೆಗೆ ಮಳೆ ನಿಲ್ಲುವುದನ್ನೇ ಕಾಯುತ್ತಾ ಕುಳಿತ ಜನರೆಲ್ಲಾ ಹೊರಡಲು ಅನುವು. ಅರ್ಧ ನೆಂದ ಜನ, ಇನ್ನರ್ಧ ಉಳಿಸಿಕೊಂಡು ಉಸ್ಸಪ್ಪಾ ಎನ್ನುವ ಜನ, ದೊಡ್ಡ ಮಳೆಗೆ ತಂದ ಕೊಡೆ ಚಿಕ್ಕದು ಎಂಬುದನ್ನು ಅರ್ಥ ಮಾಡಿಕೊಂಡು ತಂಗುದಾಣದ ಮಾಡಿನ ಕೆಳಗೆ ಆಶ್ರಯ ಪಡೆದ ಜನ-ಎಲ್ಲರೂ ಈಗ ಕಾಲಿಗೆ ಬುದ್ಧಿ ಹೇಳಿದ್ದಾರೆ.
ಇದುವರೆಗೂ ಮಳೆ ನೀರು ರಸ್ತೆಯನ್ನು ಗುಡಿಸಿ ಸ್ವಚ್ಛ ಮಾಡಿತ್ತು. ಜನ ನೋಡುತ್ತಾ ನಿಂತಿದ್ದರು. ಏಕೋ ಏನೋ ಮಳೆಗೂ ಸುಮ್ಮನಿರಬೇಕೆನಿಸಿತು. ಸುಮ್ಮನಾಯಿತು. ಇಷ್ಟೂ ಹೊತ್ತು ಸುಮ್ಮನಿದ್ದು, ಚಿಂತೆಯಲ್ಲಿ ಮುಳುಗಿದ್ದ ಜನರೆಲ್ಲಾ ಮಳೆ ನಿಂತಿದ್ದೇ ತಡ ಇವರು ಬ್ಯುಸಿ. ಒಂದಷ್ಟು ಕಾಲ ನಮ್ಮನ್ನು ಹಿಡಿದು ನಿಲ್ಲಿಸಿಬಿಡುವ ಮಳೆಯೆಂದರೆ ನನಗೆ ಎಂದಿಗೂ ಖುಷಿಯೇ.
ಮಳೆ ಬಿದ್ದ ಕ್ಷಣದಲ್ಲಿ ಮನಸ್ಸಿನಿಂದ ಹಿಡಿದು ಎಲ್ಲವೂ ಒದ್ದೆ. ಸುತ್ತ ಮುತ್ತಲ ಮರ, ಗಿಡ, ಮಣ್ಣು ಎಲ್ಲವೂ ಮಿಂದು ಶುಭ್ರ. ಯಾವ ಮಾಲಿನ್ಯವೂ ಇಲ್ಲ. ಜಗತ್ತನ್ನೇ ಮೀಯಿಸಿ ಬಿಡುವ ಮಳೆಗಿಂತ ದೊಡ್ಡ ಪಾತ್ರವಿದೆಯೇ?
ನನಗೆ ಎಂದಿಗೂ ಮಳೆ ಬಗ್ಗೆ ಬೇಸರ ಬಂದಿದ್ದಿಲ್ಲ. ಕೆಲವೊಮ್ಮೆ ತರಬೇಕಾದ ಕೊಡೆ ಬಿಟ್ಟು ಬಂದು ಬಸ್ಸು ನಿಲ್ದಾಣದಲ್ಲಿ ಕಾದು ಮನೆಗೆ ತಡವಾಗಿ ಹೋಗಿದ್ದರೂ ಶಪಿಸಿಲ್ಲ. ಮಳೆ ಬೀಳುವುದು ಹೇಗೆ ಅಚ್ಚರಿಯೋ, ಹಾಗೆಯೇ ಮಳೆ ನೀರು ಹರಿದು ಹೋಗಿ ಸಮುದ್ರ ಸೇರಿ ಮತ್ತೆ ಸೂರ್ಯ ಕುಡಿದು ಮೋಡಗಳಾಗಿ ಮತ್ತೆ ಮಳೆ ಸುರಿಯುವುದು ಅಷ್ಟೆ ಕೌತುಕ.
ನನಗೆ ಹೀಗನ್ನಿಸುವುದಿದೆ. ಹೀಗೆ…ನೀರು ಹರಿದು ಕಡಲ ಒಡಲು ಸೇರಿ, ಸೂರ್ಯನ ಬಾಯಾರಿಕೆ ಇಂಗಿಸಿ ಮತ್ತೆ ಮುಗಿಲಾಗಿ ಧರೆಗುರುಳಲು ಎಂಟು ಮಾಸಗಳು ಬೇಕೇ?
ಸೃಷ್ಟಿ ಕ್ರಿಯೆಗೆ ಒಂಬತ್ತು ಮಾಸ ತಗುಲಿದಂತೆ ಈ ಸೃಷ್ಟಿಗೂ ಎಂಟು ತಿಂಗಳು. ಯಾರ ಒಡಲಲ್ಲಿ ಈ ಹನಿಗಳು ಜನ್ಮ ತಾಳುತ್ತವೆ ? ಮುಗಿಲು ಅಂದರೆ ಗರ್ಭವೇ? ಅಥವಾ ಮುಗಿಲೇ ಗರ್ಭಿಣಿಯೇ? ಎಂಟು ತಿಂಗಳ ನಂತರ ಮುಗಿಲಿನ ಹೆರಿಗೆಯೇ?
ಸರಿ, ಮುಗಿಲು ಹಡೆದ ಹನಿಗಳು ಭೂಮಿಗೆ ಬೀಳುವಾಗ ಆಯ ತಪ್ಪುವುದಿಲ್ಲವೇ? ಅವೆಲ್ಲಾ ಉದುರಿ, ಮೋಡ ಕರಗಿ ಆಕಾಶ ನೀಲಿ ಶುಭ್ರಗೊಂಡಾಗ ಏನನ್ನಬೇಕು? ಮುಗಿಲೇ ಇಲ್ಲದ ಆಕಾಶ ಬಂಜೆಯೇ? ಕೊನೆಗೂ ಮುಗಿಲೆಲ್ಲಾ ಅಂತರ್ಧಾನವಾಗಿದ್ದು ಎಲ್ಲಿಗೆ? ಹನಿಗಳೆಲ್ಲಾ ಯಾರನ್ನು ಸೇರಿಕೊಂಡವು ? ಅಮ್ಮನ ಅಕ್ಕರೆಯ ಸುಖ ಅವುಗಳಿಗೂ ಸಿಕ್ಕಿತೇ? ಇಂತಹ ಪ್ರಶ್ನೆಯ ಹುಚ್ಚು ಮಳೆ ಕಂಡಾಗಲೆಲ್ಲಾ ನನ್ನನ್ನು ಆವರಿಸಿಕೊಳ್ಳುತ್ತದೆ.
ಊರಿನ ಗುಡ್ಡೆ ಇಳಿದು ಹೋಗುತ್ತಿರುವಾಗ ಎಷ್ಟೋ ಬಾರಿ ಸಣ್ಣಗೆ ನಾಲ್ಕಾರು ಹನಿ ತೊಟ್ಟಿಕ್ಕಲು ಆರಂಭಿಸಿದಾಗ ಮುಗಿಲಿಗೆ ಹೆರಿಗೆ ಶುರುವಾಯಿತು’ ಅಂದುಕೊಂಡದ್ದಿದೆ. ಅಲ್ಲಿಗೆ ಈ ಮಕ್ಕಳೆಲ್ಲಾ ಬೆಳೆಯುವುದು ಎಲ್ಲಿ? ಹೇಗೆ?
ಪ್ರಶ್ನೆಗೆ ಉತ್ತರ ಕಾಣದೇ ನನ್ನದೇ ಆದ ತರ್ಕವನ್ನು ಮುಂದಿಟ್ಟುಕೊಂಡು ಸುಮ್ಮನಾಗುತ್ತೇನೆ. ಮನೆಯ ಉಪ್ಪರಿಗೆಯ ಕಿಟಕಿಯಲ್ಲಿ ನೋಡುತ್ತಾ ಅಂದುಕೊಳ್ಳುತ್ತೇನೆ. ಆ ಹನಿಗಳೆಲ್ಲಾ ನಮ್ಮೊಳಗೆ ಸೇರಿಕೊಂಡಿವೆ. ಅವು ಬೆಳೆಯುವುದೂ ನಮ್ಮಲ್ಲೇ, ನಮ್ಮೊಳಗೆ,ನಮ್ಮ ಹೊರಗೆ, ಹೊಸತಿಗೆ ಸದಾ ಸಿದ್ಧವಾಗಿ ನಿಂತ ಮಣ್ಣಿನಲ್ಲಿ ಹನಿಗಳು ಐಕ್ಯವಾಗುತ್ತವೆ.
ಇದು ಕ್ರಿಯೆಗೆ ನಾಂದಿ. ಮಣ್ಣಿನಲ್ಲಿ ಮುಚ್ಚಿಕೊಂಡಿದ್ದ ಬೀಜಕ್ಕೆ ಹನಿಗಳು ಸಂಕಲಿಸಿದವು. ಸೃಷ್ಟಿ ಶಕ್ತಿ ಸ್ಫೋಟಿಸಿತು. ಅದು ಕೆಲ ದಿನ ಕಂಪನದ ನೆಲೆ. ಅಲ್ಲೇ ಈಗ ಮತ್ತೊಂದು ಮೊಳಕೆ. ಮೊಳಕೆ ಬೆಳೆದು ಚಿಗುರು..ಮುಂದೆ ಹೀಗೆ, ನಮ್ಮ ಹಾಗೆ ; ಮಗು ಬೆಳೆದು ದೊಡ್ಡವನಾಗಿ ಮೀಸೆ ಹೊತ್ತವನಂತೆ, ಇಡೀ ಜಗತ್ತೂ.  ಇಂತಹ ಸೃಷ್ಟಿಶೀಲತೆ ಎಲ್ಲೆಲ್ಲೂ, ಎಲ್ಲರಲ್ಲೂ. ಹಾಗಾದರೆ ಹನಿಗಳು ಬೆಳೆದಿದ್ದು ಇಲ್ಲಿಯೇ.
ಮಳೆ ಒಂದು ಅನುಭವ. ಒಂದು ಸೊಗಸು. ಮಳೆ ಸುರಿದು ಸುಮ್ಮನಾದ ಮೇಲಿನ ಮೌನ, ನಿಸರ್ಗದ ನಂತರದ ಚಲನಶೀಲತೆ ಸೊಗಸಿನ ಸಂಭ್ರಮ. ಮಳೆಯ ಪಾತ್ರವೇ ನಾವೆಲ್ಲರೂ.
 

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s