ಬಿಸಿ ಬಿಸಿ ಮರಳಿನ ಮರಳುಗಾಡಿನಲ್ಲಿ ಇಬ್ಬರು ಗೆಳೆಯರು ನಡೆದು ಹೋಗುತ್ತಿದ್ದರು. ಬಹಳ ಆತ್ಮೀಯ ಗೆಳೆಯರು. ಒಬ್ಬರನ್ನು ಬಿಟ್ಟು ಮತ್ತೊಬ್ಬರು ಇರುತ್ತಿರಲಿಲ್ಲ. ಹೀಗೆ ಸಾಗುತ್ತಿದ್ದಾಗ ಯಾವುದೋ ವಿಷಯಕ್ಕೆ ಸಂಬಂಧಿಸಿ ಇಬ್ಬರ ನಡುವೆ ವಾಗ್ವಾದ ಶುರುವಾಯಿತು. ಒಬ್ಬ ಮತ್ತೊಬ್ಬನ ಕೆನ್ನೆಗೆ ಫಟಾರನೆ ಬಾರಿಸಿದ.
ಇದರಿಂದ ಬಹಳ ದುಃಖಕ್ಕೊಳಗಾದವ ಏನೂ ಹೇಳಲಿಲ್ಲ. ಬಹಳ ಬೇಸರದಿಂದ ಸ್ವಲ್ಪ ದೂರ ನಡೆದು ಮರಳಿನಲ್ಲಿ ಹೀಗೆ ಬರೆದ “ಇಂದು ನನ್ನ ಆತ್ಮೀಯ ಸ್ನೇಹಿತ ಕೆನ್ನೆಗೆ ಹೊಡೆದ’.
ಪ್ರಯಾಣ ಮುಂದುವರಿಯಿತು. ಎಲ್ಲಿಯವರೆಗೆ ಎಂದರೆ ಓಯಸಿಸ್ ಸಿಗುವವರೆಗೆ. ಅಲ್ಲಿ ಅವರು ಸ್ನಾನ ಮಾಡಲು ನಿರ್ಧರಿಸಿದ್ದರು. ಇಬ್ಬರೂ ಸ್ನಾನಕ್ಕೆ ಸಿದ್ಧರಾದರು. ಪೆಟ್ಟು ತಿಂದವ ಗುಂಡಿಗೆ ಇಳಿಯುತ್ತಿದ್ದಂತೆ ಕೆಸರಿನೊಳಗೆ ಹೂತುಹೋದ. ಅಷ್ಟೇ ಅಲ್ಲ ; ಕ್ಷಣ ಕ್ಷಣಕ್ಕೂ ಕುಸಿಯಲಾರಂಭಿಸಿದ.
ಇದನ್ನು ಕಂಡವನೇ ಹೊಡೆದವ ಕುಸಿಯುತ್ತಿದ್ದವನನ್ನು ಮೇಲಕ್ಕೆತ್ತ ರಕ್ಷಿಸಿದ. ತಕ್ಷಣವೇ ಹತ್ತಿರದ ಕಲ್ಲೊಂದರ ಮೇಲೆ “ಇಂದು ನನ್ನ ಗೆಳೆಯ ರಕ್ಷಿಸಿದ’ ಎಂದು ಬರೆದ.
ಇದರಿಂದ ಹೊಡೆದ ಗೆಳೆಯನಿಗೆ ನಿಜಕ್ಕೂ ಅಚ್ಚರಿಯೆನಿಸಿತು. “ನಿನಗೆ ನಾನು ಹೊಡೆದೆ. ನಿನಗೆ ನೋವಾಯಿತು. ಮರಳಿನ ಮೇಲೆ ನಿನ್ನ ದುಃಖವನ್ನು ತೋಡಿಕೊಂಡೆ. ಈಗ ನಿನ್ನನ್ನು ರಕ್ಷಿಸಿದೆ ನಿಜ. ಅದಕ್ಕೆ ಕಲ್ಲಿನ ಮೇಲೆ ಬರೆದದ್ದಕ್ಕೆ ಏನರ್ಥ’ ಎಂದು ಪ್ರಶ್ನಿಸಿದ.
ಅದಕ್ಕೆ ಸಾವಧಾನದಿಂದ ಪೆಟ್ಟು ತಿಂದವ ಉತ್ತರಿಸಿದ -“ಯಾರಾದರೂ ನಮಗೆ ನೋಯಿಸಿದಾಗ ಅದನ್ನು ಮರಳಿನಲ್ಲೇ ಬರೆಯಬೇಕು. ಕ್ಷಮೆ ಎನ್ನುವ ಗಾಳಿ ಬೀಸಿ ಬಂದು ಅದನ್ನು ಅಳಿಸಿ ಹಾಕುತ್ತದೆ. ಅದೇ ಯಾರಾದರೂ ನಮಗೆ ಒಳ್ಳೆಯದನ್ನು ಮಾಡಿದರೆ ಅದನ್ನು ಕಲ್ಲಿನ ಮೇಲೆ ಕೆತ್ತಬೇಕು. ಎಂದೂ ಯಾವ ಗಾಳಿಗೂ ಅದು ಅಳಿಸಿ ಹೋಗಬಾರದು’.
(ಮೇಲಿನ ಮೂರು ನನ್ನ ಹಳೆಯ ಅನುವಾದಗಳು)