ವಿಯೆಟ್ನಾಂ ಯುದ್ಧದಲ್ಲಿ ಶತ್ರುಗಳೊಂದಿಗೆ ಧೀರತೆಯಿಂದ ಹೋರಾಡಿದ ಸೈನಿಕನೊಬ್ಬ ಸ್ಯಾನ್ ಫ್ರಾನಿಸ್ಕೋದಿಂದ ತನ್ನ ತಂದೆ ತಾಯಿಗೆ ಫೋನ್ ಮಾಡಿದ.
“ಅಮ್ಮ ಮತ್ತು ಅಪ್ಪ, ನಾನು ಮನೆಗೆ ವಾಪಸ್ಸಾಗುತ್ತಿದ್ದೇನೆ. ಆದರೆ ನನಗೆ ನಿಮ್ಮಿಂದ ಒಂದು ನೆರವು ಆಗಬೇಕಿದೆ. ನನ್ನೊಂದಿಗೆ ಒಬ್ಬ ಗೆಳೆಯನಿದ್ದಾನೆ. ಅವನನ್ನೂ ಜತೆಗೆ ಕರೆ ತರಬೇಕೆಂದಿದ್ದೇನೆ’.
“ಕರೆದು ತಾ, ಅದಕ್ಕೇಕೆ ಮೀನಮೇಷ. ನಮಗೂ ಅವನನ್ನು ಕಾಣಬೇಕೆಂದಿದೆ’ ಎಂದನು ಅಪ್ಪ.
“ಆದರೆ ಅವನ ಬಗ್ಗೆ ನಿಮಗೆ ಏನನ್ನೋ ತಿಳಿಸಬೇಕಿದೆ’ ಎಂದ ಮಗ.
“ಹ್ಞಾಂ…ಹೇಳು’.
“ಯುದ್ಧದಲ್ಲಿ ಅವನು ಬಹಳ ಪೆಟ್ಟು ತಿಂದಿದ್ದಾನೆ. ಒಂದು ಕೈ ಮತ್ತು ಒಂದು ಕಾಲನ್ನು ಕಳೆದುಕೊಂಡು ಅನಾಥನಾಗಿದ್ದಾನೆ. ಅವನಿಗೆ ಎಲ್ಲಿಗೂ ಹೋಗಲಿಕ್ಕೆ ಸಾಧ್ಯವಾಗದು. ಹಾಗಾಗಿ ನಾವಿಬ್ಬರೂ ಒಟ್ಟಿಗೇ ಇರುವುದೆಂದು ನಿರ್ಧರಿಸಿದ್ದೇವೆ’.
“ಹೀಗಾಗಬಾರದಿತ್ತು. ನಿಜವಾಗಲೂ ನನಗೆ ದುಃಖವಾಗಿದೆ. ಅವನಿಗೆ ಅಗತ್ಯವಾದ ನೆರವು ನೀಡಬಹುದು. ಜತೆಗೆ ಬೇರೆಲ್ಲಾದರೂ ಇರಲಿಕ್ಕೆ ವ್ಯವಸ್ಥೆ ಕಲ್ಪಿಸಬಹುದು’.
“ಇಲ್ಲ ಅಪ್ಪ, ನಾನು ಅವನೊಂದಿಗೇ ಇರಬೇಕೆಂದಿದ್ದೇನೆ’ ಎಂದು ಹಠ ಹಿಡಿದ ಮಗನ ಮಾತಿಗೆ ಸ್ವಲ್ಪ ಸಿಟ್ಟು ಬಂತು.
“ನೋಡು, ನೀನು ಏನನ್ನು ಕೇಳುತ್ತಿರುವೆ ಎಂಬುದೇ ನಿನಗೇ ಗೊತ್ತಿಲ್ಲ.   ಕಾಲು, ಕೈ ಇಲ್ಲದವನನ್ನು ಸುಧಾರಿಸುವುದು ಎಷ್ಟು ಕಷ್ಟ ಗೊತ್ತಿದೆಯೇ? ನಮಗೆ ನಮ್ಮದೇ ಸಾಕಷ್ಟು ಗಡಿಬಿಡಿಗಳಿವೆ.  ಅಂಥದ್ದರಲ್ಲಿ ನಮ್ಮ ಕುಟುಂಬದ ನಡುವೆ ಮತ್ತೊಬ್ಬನ ಪ್ರವೇಶ ಸರಿ ಎನಿಸುವುದಿಲ್ಲ. ಒಂದು ಕೆಲಸ ಮಾಡು, ನೀನು ಸುಮ್ಮನೆ ಬಂದುಬಿಡು. ಅವನು ತನ್ನ ವ್ಯವಸ್ಥೆಯನ್ನು ಹೇಗಾದರೂ ಮಾಡಿಕೊಳ್ಳಬಲ್ಲ’ ಎಂದರು. “ಆಯಿತು’ ಎಂದವನೇ ಮಗ ಫೋನ್ ಇಟ್ಟುಬಿಟ್ಟ.
ಸ್ವಲ್ಪ ದಿನ ಕಳೆಯಿತು. ಒಂದು ದಿನ ಸ್ಯಾನ್ ಫ್ರಾನಿಸ್ಕೋ ಪೊಲೀಸ್ ಠಾಣೆಯಿಂದ ದೂರವಾಣಿ ಕರೆ ಬಂತು. “ನಿಮ್ಮ ಮಗ ಕಟ್ಟಡದ ಮೇಲಿಂದ ಬಿದ್ದು ಸತ್ತಿದ್ದಾನೆ’ ಎಂದು ಪೊಲೀಸರು ಸುದ್ದಿ ತಿಳಿಸಿದರು.
ದಿಗ್ಭ್ರಮೆಗೊಳಗಾದ ತಂದೆ ತಾಯಿ ಸೀದ ಸ್ಯಾನ್‌ಫ್ರಾನಿಸ್ಕೋಗೆ ನಡೆದರು. ನಗರದ ಶವಾಗಾರದಲ್ಲಿ ಮಗನ ಶವ ಕಾಯುತ್ತಿತ್ತು. ದುಃಖಿತ ಸ್ಥಿತಿಯಲ್ಲೇ ಮಗನ ಶವವನ್ನು ಪತ್ತೆ ಹಚ್ಚಿದರು. “ಮಗನ ಒಂದು ಕೈ ಮತ್ತು ಒಂದು ಕಾಲು ಇರಲಿಲ್ಲ’ !