ತಂದೆ ಮತ್ತು ಮಗ ಪರ್ವತದ ತಪ್ಪಲಲ್ಲಿ ನಡೆದು ಹೋಗುತ್ತಿದ್ದರು. ಇದ್ದಕ್ಕಿದ್ದಂತೆ ಮಗ ಎಡವಿ ಬಿದ್ದ. ನೋವಾಗಿ ಜೋರಾಗಿ ಅರಚಿದ “ಆ…ಆ…ಆ’.
ಆಶ್ಚರ್ಯವೆಂದರೆ ಪರ್ವತದ ಯಾವುದೋ ಭಾಗದಿಂದ “ಆ….ಆ….ಆ’ ಧ್ವನಿ ಕೇಳಿ ಬಂತು. ಕುತೂಹಲದಿಂದ ಮಗ “ಯಾರು ನೀನು’ ಎಂದು ಪ್ರಶ್ನಿಸಿದ. ವಿಚಿತ್ರವೆಂಬಂತೆ ಅದೂ “ನೀನು ಯಾರು” ಎಂದು ಕೇಳಿತು. ಪುನಃ ಈತ ಪರ್ವತದ ಕಡೆಗೆ ದಿಟ್ಟಿಸುತ್ತಾ “ನಿನ್ನನ್ನು ಪ್ರೀತಿಸುತ್ತೇನೆ ಎಂದ’. “ನಾನೂ ಅಷ್ಟೇ’ ಎಂದಿತು ಪರ್ವತ. ಸಿಟ್ಟು ಬಂತು ಮಗನಿಗೆ.
“ನೀನೊಬ್ಬ ಹೆದರುಪುಕ್ಕಲ’ ಎಂದು ಬೈದ.
ಪ್ರತಿಯಾಗಿ “ನೀನೊಬ್ಬ ಹೆದರು ಪುಕ್ಕಲ’ ಎಂದು ಹೇಳಿತು.
ಅಪ್ಪನ ಕಡೆಗೆ ಮುಖ ಮಾಡಿ “ಇಲ್ಲಿ ಏನಾಗುತ್ತಿದೆ, ಅಪ್ಪ’ ಎಂದು ಕೇಳಿದ. ಅಪ್ಪನಿಗೆ ನಗು ಬಂತು. ಮುಗುಳ್ನಗುತ್ತಲೇ “ಮಗನೇ, ಗಮನವಿಟ್ಟು ಕೇಳು’ ಎಂದವನೇ “ನೀನೊಬ್ಬ ಚಾಂಪಿಯನ್’ ಎಂದು ಅರಚಿದ.
“ನೀನೊಬ್ಬ ಚಾಂಪಿಯನ್’ ಎಂದು ಪ್ರತಿಯಾಗಿ ಧ್ವನಿ ಕೇಳಿತು. ಮತ್ತಷ್ಟು ಆಶ್ವರ್ಯಕ್ಕೊಳಗಾದ ಹುಡುಗನಿಗೆ ಏನೂ ತಿಳಿಯದಾಯಿತು. ನಂತರ ಅಪ್ಪ ವಿವರಿಸಿದ.
“ಇದಕ್ಕೆ ಜನ ಪ್ರತಿಧ್ವನಿ ಎನ್ನುತ್ತಾರೆ. ಆದರೆ ನಿಜವಾಗಲೂ ಜೀವನವೆಂದರೆ ಇದೇ. ನೀನು ಕೊಟ್ಟಿದ್ದನ್ನು ಪ್ರತಿಯಾಗಿ ನಿನಗೇ ಇದು ವಾಪಸು ನೀಡುತ್ತದೆ. ನಮ್ಮ ಕ್ರಿಯೆಗಳ ಪ್ರತಿಬಿಂಬವೇ ಜೀವನ. ಜಗತ್ತಿನಿಂದ ಹೆಚ್ಚು ಪ್ರೀತಿ ಬಯಸುವುದಾದರೆ ನಮ್ಮ ಹೃದಯದಲ್ಲಿ ನಾವು ಹೆಚ್ಚು ಪ್ರೀತಿಯನ್ನು ಮೂಡಿಸಿಕೊಳ್ಳಬೇಕು. ಈ ಸಂಬಂಧ ಎಲ್ಲದಕ್ಕೂ, ಪ್ರತಿ ಸಂದರ್ಭಕ್ಕೂ ಅನ್ವಯವಾಗುತ್ತದೆ. ಜೀವನ ಆಕಸ್ಮಿಕವಲ್ಲ ; ಅದು ನಿನ್ನ ಪ್ರತಿಬಿಂಬ’.
(ಲೇಖಕನ ಹೆಸರು ತಿಳಿದಿಲ್ಲ)