ಚಿತ್ರಿಕೆ / ಸುಲಲಿತ

ಅವನೇ ಅವನು…

ಉದ್ದದ ಕೋಣೆ. ಮೈ ಚಾಚಿ ಕುಳಿತ ಹೆಂಚುಗಳಿಗೆ ಪೂರ್ಣ ಒಂದು ಶತಮಾನ. ಆ ಪೈಕಿ ದೋಣಿ ಹೆಂಚುಗಳ ಭಂಗಿ ಕಮಾನು ಕೋನದ ಥರ. ಮನೆಯ ಆಕಾರದ ಪ್ರತಿನಿಧಿ ಈ ಕೋನಾಕಾರ. ಆ ಬದಿ ರಕ್ಷಕ ; ಈ ಬದಿ ರಕ್ಷಕ ; ಮಧ್ಯೆ ಜೀವ ರಕ್ಷಕ. ಹೆಂಚಿನ ಬಣ್ಣ ಬದಲಾಗಿರಬಹುದು. ಸವೆದೂ ಹೋಗಿರಬಹುದು : ಬರಿಗಣ್ಣಿಗೆ ತೋರಲಾರದಷ್ಟು. ಹೆಂಚಿಗಿರುವ ಈಗಿನ ಬಣ್ಣವೂ ಬಣ್ಣವೇ.
ಭವ್ಯ ಮಾಡಿಗೆ ಇಂದು ಚೆಂದದ ಹೊದೆಟು. ಮನೆಗೊಂದು ಚೆಂದದ ತಲೆ. ಇದರ ಕ್ರಾಪೂ ಸದಾ ಒಂದೇ ಮಾದರಿ. ಸುರಿಯುವಷ್ಟು ಎಣ್ಣೆ ಹಾಕಿ ಹಣಿಗೆಯಿಂದ ನೀವಿ ಬಾಚಿಕೊಂಡಂತೆ. ಗಾಳಿಗೆ ಕೂದಲು ಕಣ್ಣ ಮುಂದೆ ಬಂದು ನಿಲ್ಲದು. ಬೆಳೆಯುವುದೂ ಇಲ್ಲ. ಕಂಡವರ ಲೆಕ್ಕಾಚಾರದಲ್ಲಿ ಇದರದ್ದು ಬೊಕ್ಕ ತಲೆ. ಆದರೆ ತಲೆ ಇದ್ದೇ ಇದೆ. ಕಾರಣ ಮಧ್ಯದಲ್ಲಿ ಫಳ ಫಳನೆ ಹೊಳೆಯುವ ಗೀರಿದೆ. ಪ್ರತ್ಯೇಕತೆಯ ಲಕ್ಷ್ಮಣರೇಖೆ ; ಬೈ ತಲೆ.
ದೋ ಎಂದು ಸುರಿಯುವ ಮಳೆ ಹನಿಗೆ ಜರಜರನೆ ಜಾರುವ ಜಾರುಗುಪ್ಪೆ. ದೇವಲೋಕದಿಂದ ಧರ ಧರನೆ ಭೂ ಲೋಕಕ್ಕೆ ಬೀಳುವ ಗಂಗೆಗೆ ಶಿವನ ಜಟೆ, ನಂತರ ಭೂ ಲೋಕ. ಆಯತಪ್ಪಿ ಕೆಳಕ್ಕೆ ಬೀಳುವ ಹನಿಗೆ ಮಿನಿ ಕ್ಷಣಗಳಷ್ಟು ವಿರಾಮ ಧಡ ಧಡ ಉರುಳುವ ಮುನ್ನ. ಹೆಂಚಿನ ಮೇಲೊಂದು ಕ್ಷಣಿಕ ಸುಖ. ಮರುಕ್ಷಣವೇ ಧರೆಗೆ. ಧರೆಗೆ ಚಿಮ್ಮುವ ಹನಿಗೆ ಇದು ಜಾರು ಹಲಗೆ. ಅಹಂಕಾರ ಭಂಗಗೊಳಿಸಿದ ಶಿವರೂಪಿ ವರ್ಷಧಾರೆಗೆ. 
ಅಧೋಮುಖಿಯಾಗಿ ಕುಳಿತ ಹೆಂಚುಗಳು ಏನೆಲ್ಲಾ ನೋಡಿವೆ. ಸೂರಿನ ಕೆಳಗೆ ನಡೆದದ್ದು, ಹೊರೆ ನಡೆದು ಒಳಗೆ ಚರ್ಚೆಯಾಗಿದ್ದು, ಹಿಂದೆ ಆಡಿದ್ದು, ಎದುರಿನಿಂದ ಮಾತಾಡಿದ್ದು, ಯಾರೋ ಉರಿದು ಹೋದದ್ದು, ಮತ್ತ್ಯಾರೋ ಅರಳಿದ್ದು. ಇದೇ ಛಾವಣಿ ಕೆಳಗೆ ಫಕ ಫಕನೆ ನಕ್ಕು ಧೋ ಎಂದು ಅತ್ತು ಸುರಿಸಿದ್ದು, ಇನ್ಯಾರಿಗೋ ಬಡಿದದ್ದು, ಬಡಿತ ತಿಂದವ ನರಳಿದ್ದು, ಮತ್ತೊಂದು ಗಳಿಗೆಯಲ್ಲಿ ಬಡಿದವ ನೆಲಕ್ಕೆ ಉರುಳಿದ್ದು…ಈ ಹೆಂಚುಗಳ ದಾಖಲೆಗಳಲ್ಲಿ ಎಲ್ಲವೂ ಚರಿತ್ರೆ.
ಅಗಣಿತ ವರ್ಷಗಳ ಹಿಂದೆ ಹುಟ್ಟಿದ ಸೂರ್‍ಯ ಇನ್ನೂ ಉರಿಯುತ್ತಲೇ ಇದ್ದಾನೆ. ಅದೇ ಕಾವಿನಲ್ಲಿ, ಯಾವುದೇ ಠೀವಿಯಿಲ್ಲದೇ. ಚಂದ್ರನ ತಂಪೂ ಕುಂದಾಗಿಲ್ಲ. ಇಬ್ಬನಿ ರೂಪು ಪಡೆಯುವುದೂ ನಿಂತಿಲ್ಲ. ಹೂವು ಅರಳಿ ಕೆಳಗುರುಳಿ ಧರಾಶಾಹಿಯಾಗುವ ಪ್ರಕ್ರಿಯೆ ಬದಲಾಗಿಲ್ಲ. ಮಳೆ ಹನಿ ಅಧೋಮುಖಿಯಾಗಿಯೇ ಇದೆ. ರವಿಯ ಬಾಯಾರಿಕೆಗೆ ಕಡಲಿನ ಒಡಲಿನಿಂದ ನೀರು ಕಳುಹಿಸುತ್ತಲೇ ಇದ್ದೇವೆ. ಅದೂ ಹಾಗೇ ಇದೆ. ಆದರೆ ಹೆಂಚುಗಳ ಕೆಳಗೆ ಆಗಾಗ್ಗೆ ವೇಷಗಳು ಬದಲಾಗಿವೆ. ಅವುಗಳ “ಒಳಗಿನವ’ ಬೇರಾಗಿಲ್ಲ ; ಅವನೇ ಆಗಿದ್ದಾನೆ.

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s