ಒಂದು ಮುಂಜಾನೆ…ಒಂದು ಕುನ್ನಕುಡಿ…

ಒಂದು ಮುಂಜಾನೆ, ಒಂದು ಕುನ್ನಕುಡಿ, ಒಂದು ಗಂಟೆಯ ಆಟ ಹಾಗೂ….

ಆರು ತಿಂಗಳಿಂದ ನನಗೆ ಭಾನುವಾರದ ಬೆಳಗ್ಗೆಯಾಗುವುದು ಸಂಪಾಜೆ ದಾಟಿದ ಮೇಲೋ, ಸಕಲೇಶಪುರ ದಾಟಿ ಚಾರ್ಮಾಡಿ ಮುಟ್ಟಿದಾಗಲೋ. ಸಾಮಾನ್ಯವಾಗಿ ಪ್ರತಿ ಶನಿವಾರ ರಾತ್ರಿ ಊರಿಗೆ ಹೊರಡುತ್ತೇನೆ. ಅಲ್ಲಿ ನನ್ನ ಹೆಂಡತಿ ಮತ್ತು ಮಕ್ಕಳು ಹಾಗೂ ಅಮ್ಮ. ರಾತ್ರಿ ಹನ್ನೊಂದುವರೆ ಬಸ್ಸಿಗೆ ಹತ್ತಿದರೆ ಬೆಳಗ್ಗೆ ಆರರ ಹೊತ್ತಿಗೆ, ಕಂಡಕ್ಟರ್ “ಸಾರ್, ಮಾಣಿ ಬಂತು’ ಎನ್ನುತ್ತಾರೆ. ಇಳಿದು, 6.15 ಬಸ್ಸಿಗೆ ಕಾಯಬೇಕು, ಎಲ್ಲ ಮುಗಿದು ಮನೆಗೆ ಮುಟ್ಟುವಾಗ 7.30. ಮಗಳು ಒಂದು ಮಗ್ಗಲು ಬದಲಾಯಿಸಿರುತ್ತಾಳೆ (ಅಂಥ ಮಗ್ಗುಲು ಎಷ್ಟೋ ಬದಲಾಯಿಸುತ್ತಾಳೆ ರಾತ್ರಿ, ನೀವಿಲ್ಲದಿದ್ದರೆ ನಮಗೆ ನಿದ್ದೆ ಮಾಡಲು ಬಿಡುವುದಿಲ್ಲ ಎಂದು ನನ್ನ ಹೆಂಡತಿ ಮತ್ತು ಅಮ್ಮ ದೂರುತ್ತಲೇ ಇರುತ್ತಾರೆ). ‘ಅಪ್ಪನ ಎದುರೇ ಬೇರೆ ವೇಷ, ನಮ್ಮ ಎದುರೇ ಇನ್ನೊಂದು ವೇಷ’ ಎಂಬ ಆರೋಪವೂ ನನ್ನ ಮಗಳ ಮೇಲಿದೆ. ನನ್ನ ಬಳಿ ಬಾಲಗೋಪಾಲದ ಬಾಲೆಯರು, ಅವರ ಬಳಿ ರಾಕ್ಷಸ ವೇಷ..ಹ್ಹ..ಹ್ಹ..ಹ್ಹ

ನಿನ್ನೆಯ ಭಾನುವಾರಕ್ಕೆ ಬೇರೆಯದೇ ಖದರಿತ್ತು. ಮೈಸೂರಿಗೆ ಬಂದು ನಾಲ್ಕು ವರ್ಷಗಳಾದವು. ಚಾಮುಂಡಿ ಬೆಟ್ಟಕ್ಕೂ ಹಲವು ಬಾರಿ ಭೇಟಿ ನೀಡಿದ್ದೇನೆ. ಆದರೆ ಚಾಮುಂಡಿ ಬೆಟ್ಟದ ಮೆಟ್ಟಿಲುಗಳನ್ನು ಹತ್ತಿ ಹೋಗಿರಲಿಲ್ಲ. ಸುರೇಶಣ್ಣರಿಗೆ ಪ್ರತಿ ಭಾನುವಾರ ಚಾಮುಂಡಿ ಬೆಟ್ಟ ಹತ್ತುವ ಹುಚ್ಚು. ಜತೆಗೆ ಮಾಳವಿಕಾ ಅಕ್ಕ, ಸಂತೋಷಣ್ಣ ಮತ್ತು ಅವರ ಪತ್ನಿಯರದ್ದೂ ಸಾಥ್. ಅದರಂತೆ “ನೀವು ಬರುವುದಿದ್ದರೆ ಬನ್ನಿ’ ಎಂದು ಆಹ್ವಾನ ಕೊಟ್ಟರು. ಸರಿ, ಯಾವುದಕ್ಕೂ ಇರಲಿ ಎಂದು ಬೆಳಗ್ಗೆ 4.30 ಕ್ಕೆ ಎದ್ದು, ಸ್ನಾನ ಮುಗಿಸಿ 5. 15 ಕ್ಕೆ ತಪ್ಪಲಲ್ಲಿದ್ದೆವು. 1, 200 ಮೆಟ್ಟಿಲುಗಳು. ಇಡೀ ರಸ್ತೆಗೆ ಇರುವುದು ಎರಡೇ ಟ್ಯೂಬ್ ಲೈಟ್ ಗಳು. ನಾವೇ ಬೇಗ ಎಂದು ಹೋದ ನನಗೆ, ಅಲ್ಲಿ ಹತ್ತುತ್ತಿದ್ದ ಮಂದಿ ಕಂಡು ಅಚ್ಚರಿಯೂ ಆಗಿತ್ತು. Continue reading

ಕೊಳಲಗೀತ

ಯಾಕೋ ಕೃಷ್ಣ ಇದ್ದಕ್ಕಿದ್ದಂತೆ ನೆನಪಾದ. ಹಂಗಾಮದಲ್ಲಿ ಹೀಗೇ ಬರೆದ ಒಂದು “ಲಲಿತ” ಸಿಕ್ಕಿತು. ಅದನ್ನು ಇಲ್ಲಿ ಹಾಕಿದ್ದೇನೆ. ಓದಿ ಹೇಳಿ.

ನನ್ನನ್ನು ಯಾವಾಗಲೂ ಕಾಡುವುದು ಕೊಳಲು. ಅದಕ್ಕಿರುವ ಭವ್ಯತೆ ಹಾಗೂ ಭಾವ ತೀವ್ರತೆ ಯಾವುದಕ್ಕೂ ಇಲ್ಲವೆ೦ದೇ ತೋರುತ್ತದೆ. ಅದರ ನಾದವೇ ಅದ್ಭುತ. ಮನಸ್ಸನ್ನೇ ಸೆಳೆದುಕೊಳ್ಳಬಲ್ಲ ಶಕ್ತಿ ಸ೦ಗೀತಕ್ಕಿದೆ ಎ೦ಬುದು ನಿಜ. ಅದಕ್ಕಿ೦ತಲೂ ಕೊಳಲಿನಲ್ಲಿ ಮತ್ತೇನೋ ಮಾರ್ದವತೆ ಇದೆ ಎನಿಸುತ್ತದೆ. ನಾನು ಪ್ರತಿ ಬಾರಿ ಕೊಳಲು ಗಾನವನ್ನು ಕೇಳಿದಾಗ ಆರ್ದ್ರಗೊ೦ಡಿದ್ದೇನೆ. ಮನಸ್ಸು ತೇವಗೊ೦ಡಿದೆ ಎನಿಸುತ್ತದೆ.

ರಸ್ತೆಯ ಮೇಲೆ ಕೊಳಲು ಮಾರುತ್ತಾ ಬರುವ ಕುಶಲಕರ್ಮಿಗೆ ನಮಸ್ಕರಿಸಬೇಕು. ವಾಸ್ತವವಾಗಿ ಅವನೇ ಈ ಹುಚ್ಚು ಹಿಡಿಸಿದವನು. ಈತ ಬರೀ ಕೊಳಲು ಮಾರುವುದಿಲ್ಲ. ಅದಕ್ಕೆ ಪ್ರತಿಯಾಗಿ ಕೊರಳನ್ನು ಅವನ ಉಸಿರನ್ನು ಉಚಿತವಾಗಿ ಕೊಡುತ್ತಾನೆ. ಅವನ ನುಡಿಸುವಿಕೆಯಲ್ಲಿ ಹೊರಹೊಮ್ಮುವ ಪ್ರತಿ ನಾದದಲ್ಲೂ ಆರ್ದ್ರತೆ ಇದೆ.
krishna
ಅವನ ಹೆಸರು ಗೊತ್ತಿಲ್ಲ.

ಭದ್ರಾವತಿಯಲ್ಲಿ ನನ್ನ ದೊಡ್ಡಪ್ಪನ ಮನೆಯ ಮು೦ದೆ ವಾರಕ್ಕೊಮ್ಮೆ ಈ ಕುಶಲಕರ್ಮಿ ಬರುತ್ತಿದ್ದ. ಅವನಿಗೆ ವ್ಯಾಪಾರ ಆಗುತ್ತಿತ್ತೋ ಇಲ್ಲವೋ ಗೊತ್ತಿಲ್ಲ. ಆದರೆ ಅವನು ಎ೦ದಿಗೂ ತಪ್ಪಿಸುತ್ತಿರಲಿಲ್ಲ. ಬರುವಾಗ “ತನು ಡೋಲೇ ಮನು ಡೋಲೇ” ಯನ್ನೋ, “ಬೋಲೋರೆ ಪಪಿಹರಾ” ವನ್ನೋ ಅಥವಾ ಯಾವುದೋ ಅರ್ಥವಾಗದ ಮೀರಾ ಭಜನವನ್ನು ನುಡಿಸಿಕೊ೦ಡು ಬರುತ್ತಿದ್ದ. ನಮಗೆ ಮೀರಾ ಭಜನ್ಸ್ ಸಾಹಿತ್ಯವಾಗಲೀ ಅರ್ಥವಾಗಲೀ ಗೊತ್ತಿರಲಿಲ್ಲ. ಆದರೆ ಆ ನಾದ ಇಷ್ಟವಾಗುತ್ತಿತ್ತು. ಮನಸ್ಸೆಲ್ಲಾ ಅದೇ ತು೦ಬಿಕೊಳ್ಳುತ್ತಿತ್ತು.

“ಗಾಯಿಯೇ ಗಣಪತಿ, ಜಗವ೦ದನಾ” ಇ೦ಥಾ ಗೀತೆಗಳು ನನಗೆ ದೊರೆತಿದ್ದು ಆಗಲೇ. ನನ್ನ ಅಕ್ಕ ಗಾಯತ್ರಿ, ಸಾವಿತ್ರಿ ಇಬ್ಬರೂ ಈ ಗೀತೆಗಳನ್ನು ಗುನುಗುತ್ತಿದ್ದುದರಿ೦ದ ಅವನು ನುಡಿಸುವ ಗೀತೆಯೂ ಇದೇ ಎ೦ದು ತಿಳಿದಿತ್ತು. ಆದರೆ ಜೇಬು ತು೦ಬಾ ಕೊಳಲುಗಳನ್ನು ತು೦ಬಿಕೊ೦ಡು ಹತ್ತು ರೂಪಾಯಿಗೆ ಒ೦ದು ಎನ್ನುತ್ತಾ ಮಾರಿ ಬರುವವನ ಮು೦ದೆ ಚೌಕಾಶಿಗೆ ಏಳು ರೂಪಾಯಿಗೆ ಒ೦ದು ಕೊಳಲನ್ನು ಕೊ೦ಡು ಹಾಳು ಮಾಡಿದ ನೆನಪು ನನಗಿದೆ.

ಆತ ಯಾವುದೇ ಹೊಸ ಗೀತೆಯಿ೦ದ ಹಿಡಿದು ಹಳೆಯ ಗೀತೆಯ ಮಾಧುರ್ಯವನ್ನು ತು೦ಬಿ ಕೊಡಬಲ್ಲ. ಆತ ಹಿಡಿಸಿದ ಹುಚ್ಚು ಈಗ ದೊಡ್ಡ ಮಟ್ಟಕ್ಕೇರಿದೆ. ನಾನು ಹಿ೦ದೂಸ್ಥಾನಿ ಶೈಲಿಯ ಕೊಳಲು ನುಡಿಸುವಿಕೆ ಕಲಿಯಲು ಹೋಗಿ ವಿಫಲನಾದೆ. ಆದರೂ ಹುಚ್ಚು ಬಿಟ್ಟಿಲ್ಲ. ರವಿಪ್ರಸಾದ್ ಚೌರಾಸಿಯಾರಿ೦ದ ಹಿಡಿದು ಕೊಳಲು ನುಡಿಸುವ ಪ್ರತಿಯೊಬ್ಬನೂ ನನಗೆ ಇಷ್ಟವಾಗುತ್ತಾನೆ. ಇವರಲ್ಲಿ ನನಗೆ ನಾದವನ್ನು ಬಿಟ್ಟರೆ ಬೇರೇನೂ ಕಾಣಿಸುವುದಿಲ್ಲ.

ಒ೦ದು ಬಿದಿರ ಕೋಲಿನೊಳಗೆ ಉಸಿರು ತು೦ಬಿದರೆ ಹೊಮ್ಮುವಾಗ ರಾಗವಾಗಿ ಮಾರ್ಪಡುವುದೇ ಅದ್ಭುತ ಸೃಷ್ಟಿಗೆ ಸಮಾನ. ಸೃಜನಶೀಲತೆಯ ಪದಕ್ಕೆ ಅರ್ಥ ಸಿಗುವುದೇ ಇಲ್ಲಿ ಎ೦ದು ತೋರುತ್ತದೆ. ಎಷ್ಟೋ ಬಾರಿ ನನಗೆ ನಾನೇ ಸೋತದ್ದು ಈ ನಾದವನ್ನು ಆಲಿಸುವಾಗ. ಅದಕ್ಕೆ ಬೃ೦ದಾವನದ ಸುತ್ತ ಭಕ್ತ ಮೀರೆ ಕೊಳಲುಗಾನ ಕೇಳುತ್ತಾ ಕುಳಿತು ಬಿಟ್ಟಳು. ಜಗತ್ತೇ ಅವಳನ್ನು ನೋಡುತ್ತಿದ್ದರೂ ಅವಳಿಗೆ ಕೊಳಲ ಗಾನ, ಮುರಳಿ ಲೋಲ ಬಿಟ್ಟರೆ ಏನೂ ಕಾಣಲಿಲ್ಲ. ಹಾಗೆಯೇ ಗೋಪಿಯರೆಲ್ಲಾ ಕೊಳಲಿನ ಹಿ೦ದೆ, ಅದರ ನಾದದ ಹಿ೦ದೆ ನಡೆದದ್ದು ಎಲ್ಲಿಯವರೆಗೆ ಎ೦ದರೆ ಆತ್ಮತೃಪ್ತಿ ಸಿಕ್ಕುವವರೆಗೆ. ವಾಸ್ತವವಾಗಿ ಗೋಪಿಯರೆಲ್ಲಾ ಮನ ಸೋತಿದ್ದು ಕೃಷ್ಣನಿಗಲ್ಲ, ಅವನ ಮುರಳೀಗಾನಕ್ಕೆ!

ಮುರಳಿ ಕೃಷ್ಣನ ಶ್ರೇಷ್ಠತೆಯನ್ನು ಹೆಚ್ಚಿಸಿತು.

ಒ೦ದು ವೇಳೆ ತಾನು ಊದಿದ ಉಸಿರನ್ನು ವೇಣುನಾದವಾಗಿ ಹೊರಹೊಮ್ಮಿಸದಿದ್ದರೆ ಕೃಷ್ಣ ಏನು ಮಾಡುತ್ತಿದ್ದ?
ಚಿತ್ರಕೃಪೆ :http://indianartnews.ning.com/

ಅವನು ಮಗುವಾಗಿಯೇ ಇದ್ದ, ನಾನು ದೊಡ್ಡವನಾಗಿದ್ದೆ !

ಹೌದು, ನೀವು ಹೇಳಿದಂತೆಯೇ ಆಯಿತು. ಕಣ್ಣು ತುಂಬಿ ಬಂದಿತು. ಹೃದಯ ಭಾರವಾಯಿತು. ಆದರೂ ಹೊರಟು ಬಂದೆ. ನನ್ನ ಮಗ ಋತುಪರ್ಣ ಶಾಲೆಗೆ ಹೋದನೆಂಬ ಸಂಭ್ರಮದ ಹೆಗ್ಗಳಿಕೆಯೆಲ್ಲಾ ಈ ಮಧ್ಯೆ ಮಸುಕು ಮಸುಕಾಗಿ ತೋರಿತು. ಮಕ್ಕಳನ್ನು ಅನಿವಾರ್ಯವಾಗಿ ಶಾಲೆಗೆ ಕಳುಹಿಸಬೇಕಾದ ಸಂಕಷ್ಟ ಸಹಿಸಿಕೊಳ್ಳುವುದೇ ದೊಡ್ಡ ಕಷ್ಟವೆನಿಸಿದ್ದು ಆಗಲೇ.
ಜೂ. ೧೧ ರಂದು ನನ್ನ ಮಗ ಮೊದಲ ದಿನ ಶಾಲೆಗೆ ಹೋದ. ಅವನ ಹಿಂದೆಯೇ ನಾನೂ ಮತ್ತು ನನ್ನ ಮಾವ ಅವನ ಶಾಲೆಯನ್ನು ನೋಡಿ ಬಂದೆವು. ಬಹಳ ಚೆನ್ನಾಗಿದೆ ಶಾಲೆ. ಎಷ್ಟೋ ಬಾರಿ ಇಂದಿನ ಒತ್ತಡದ, ಅಂಕ ಗಳಿಕೆಯಷ್ಟೇ ಮಾನದಂಡವಾಗಿಸಿದ ಶಿಕ್ಷಣದ ಬಗ್ಗೆ ಸಿಟ್ಟು ಬಂದದ್ದಿದೆ. ನಮ್ಮ ಮಕ್ಕಳಲ್ಲಿನ ನೈಜ ಪ್ರತಿಭೆಗೆ ಅವಕಾಶ ನೀಡದೇ ಯಾರೋ ನಿರ್ಧರಿಸಿದ “ಕಾಮನ್’ ಅಂಶಗಳನ್ನೇ ಎಲ್ಲಾ ಮಕ್ಕಳಿಗೂ ತುಂಬಿ ಕಳುಹಿಸುವ ಶಿಕ್ಷಣ ಒಂದು ಹೊರೆ ಎನಿಸಿದ್ದೂ ಇದೆ. ಅಷ್ಟೇ ಅಲ್ಲ. ನಮ್ಮ ಮಕ್ಕಳು ಒಮ್ಮೆ ಶಾಲೆಯ ಮೆಟ್ಟಿಲು ಹತ್ತಿದರೆಂದರೆ “ಕಟುಕರ ಮನೆಗೆ’ ಕಳುಹಿಸಿದಂತೆಯೇ ಎಂದೂ ಅತ್ಯಂತ ಕಟುವಾಗಿ ಅಂದುಕೊಂಡದ್ದಿದೆ.
ಅದಕ್ಕೆ ಕಾರಣ ಹತ್ತು ಹಲವು. ಅವುಗಳನ್ನೆಲ್ಲಾ ವಿವರಿಸುತ್ತಾ ಕುಳಿತರೆ ದೊಡ್ಡ ಪ್ರಬಂಧವಾಗಿ ಬಿಡುತ್ತದೆ. ಆಡುವ ವಯಸ್ಸಿಗೆ ಆಡುವಂತಿಲ್ಲ, ಒಂದು ಸುಂದರ ಮಳೆ ಬಿದ್ದು ಶುಭ್ರವಾದ ಆಗಸದಲ್ಲಿ ಒಂದು ಚೆಂದಾದ ಮಳೆಬಿಲ್ಲು ಮೂಡಿದರೆ ನೋಡಲಿಕ್ಕೆ ಪುರಸೊತ್ತಿಲ್ಲ. ಹೊರಗೆಲ್ಲೋ ಆಕಾಶದಲ್ಲಿ ವಿಮಾನ ಹಾರಿದ ಸದ್ದು ಕೇಳಿ ಪಟ್ಟನೆ ಹೊರಬಂದು ಇಣುಕಿ ನೋಡುವಂತಿಲ್ಲ. ಅಡುಗೆ ಮನೆಯಲ್ಲಿರುವ ಅಮ್ಮ ಒಮ್ಮೆಲೆ ಗದರಿಸುತ್ತಾಳೆ…”ಮತ್ತೆ ಹೊರಗೆ ಹೋದೆಯಾ…ಕಲಿಯೋದು ಯಾವಾಗ?’.
ಹೀಗೆ ಕಲಿಕೆಯಲ್ಲೇ ಕಲಿಯುವುದನ್ನು ಬಿಟ್ಟು ಉಳಿದೆಲ್ಲವನ್ನೂ ಕಲಿಯುವ ರಭಸ ನೋಡಿಯೇ ರೋಸಿ ಹೋದವನು ನಾನು. ಅದಕ್ಕೇ ನನ್ನ ಹೆಂಡತಿಗೇ ಅವನ ಪ್ರವೇಶ ಇತ್ಯಾದಿ ಕೆಲಸವನ್ನು ಮುಗಿಸಿಬಿಡು ಎಂದು ನಾನು ದೂರವಿದ್ದೆ. ವಾಸ್ತವವಾಗಿ ಮೊನ್ನೆ ಊರಿಗೆ ಹೋದಾಗ ಅವನ ಶಾಲೆ ನೋಡಿದ್ದೂ ನನ್ನ ಹೆಂಡತಿಯ ಬಲವಂತದಿಂದಲೇ.
ಊರಲ್ಲಿ ರಾತ್ರಿ ಶುರುವಾದ ಮಳೆ ಬೆಳಗ್ಗೆಯಿರಲಿ, ಮಾರನೆ ದಿನ ಸಂಜೆವರೆಗೂ ಬಿಟ್ಟಿರಲಿಲ್ಲ. ಅದರಲ್ಲೂ ನನ್ನ ಮಗ ಶಾಲೆಗೆ ಕೊಡೆ ಕೊಂಡೊಯ್ಯುವಂತಿಲ್ಲವಂತೆ. ಮೊದಲಿಗೆ ಗಾಬರಿಯಾದದ್ದು ನಿಜ. ಆದರೆ ಈ ಶಾಲೆಯಲ್ಲಿ ಅದೇ ಸಂಪ್ರದಾಯ. ಮಕ್ಕಳನ್ನು ಬಸ್ಸಿನಲ್ಲಿ ಕರೆದೊಯ್ಯುತ್ತಾರೆ. ಅವರಿರುವ (ಮಳೆ ಬರುತ್ತಿದ್ದರೆ) ಶಾಲಾ ಅಂಗಳಕ್ಕೇ ಶಾಲೆಯ ಶಿಕ್ಷಕಿಯರು, ಕೆಲಸಗಾರರು ಕೊಡೆ ಹಿಡಿದು ಮಕ್ಕಳನ್ನು ಕರೆದೊಯುತ್ತಾರಂತೆ. ನಮ್ಮೂರಿನಲ್ಲಿ ಕೊಡೆ ಇಲ್ಲದವರು ಸಂಕದಲ್ಲಿ ಕೊಡೆ ಇರುವವರು ದಾಟಿಸಿದಂತೆಯೇ. ಚೆನ್ನಾಗಿದೆ ಎನಿಸಿತು.
ಅಂದಹಾಗೆ ಶಾಲೆ ಚೆನ್ನಾಗಿದೆ, ನೋಡಲಿಕ್ಕೆ, ಕಲಿಯಲಿಕ್ಕೂ ಸಹ ಎನ್ನಬಹುದು. ಅದನ್ನು ನನ್ನ ಮಗ ದೊಡ್ಡವನಾಗಿ ದೃಢೀಕರಿಸಬೇಕು. ದೊಡ್ಡದಾದ ಊಟದ ಮನೆಯಿದೆ. ಅದನ್ನು ಕಂಡೇ ಅರ್ಧ ಖುಷಿಯಾಯಿತೆನಗೆ. ನಾನು ಮೂಲಭೂತವಾಗಿ ಆಹಾರಪ್ರಿಯ. ಶಾಲೆಗೆ ಹೋಗುವ ಮೊದಲು ಹೆಚ್ಚು ಊಟ ಮಾಡಬೇಡ, ನಿದ್ದೆ ಬರುತ್ತೆ ಎಂದು ನನ್ನ ದೊಡ್ಡಮ್ಮ ಎಚ್ಚರಿಸಿದರೂ ಪ್ರತಿ ಬಾರಿಯೂ ಉಲ್ಲಂಘಿಸುತ್ತಿದ್ದೆ. ಆಗ ನನ್ನ ಪ್ರಕಾರ “ನಿದ್ದೆ ಬಂದರೆ ತಪ್ಪಿಸಬಹುದು’, ಆದರೆ ಸಿಗುವ ಊಟ ತಪ್ಪಿದರೆ ಮತ್ತೆ ಸಿಗುವುದೇ ಎಂಬುದು ನನ್ನ ಲೆಕ್ಕಾಚಾರ.
ಮಾರ್ಬಲ್ ಶಿಲೆಯಿಂದ ಕೊಯ್ದು ಮಾಡಿಸಿದ ಊಟದ ಬೆಂಚುಗಳು (ಡೆಸ್ಕ್‌ಗಳ ಹಾಗೆ) ಮಕ್ಕಳಿಗೆ ಎಟುಕುವ ಹಾಗಿವೆ. ನಿತ್ಯವೂ ಮಧ್ಯಾಹ್ನ ಸೊಗಸಾದ ಊಟ ಹಾಕುತ್ತಾರೆ. ಅದಕ್ಕೆ ಪ್ರತ್ಯೇಕ ವ್ಯವಸ್ಥೆಯಿದೆ. ಸ್ವಚ್ಛತೆಗೆ ಆದ್ಯತೆಯಿದೆ. ನಾನು ಹೋದಾಗ ಹೊಸದಾಗಿ ಈ ವರ್ಷ ಅಡ್ಮಿಷನ್ ಆದ ಮಕ್ಕಳಿಗೆ ಹೊಸ ತಟ್ಟೆಗಳ ಬಂಡಲ್ ಬಂದು ಬಿದ್ದಿತ್ತು. ಅದನ್ನು ಲೆಕ್ಕ ಮಾಡಿ ತೆಗೆದುಕೊಳ್ಳುವುದರಲ್ಲಿ ಶಾಲೆಯ ಸಿಬ್ಬಂದಿಗಳು ಸುಸ್ತಾಗಿದ್ದರು. ಆ ತಟ್ಟೆಯಲ್ಲಿ ನನ್ನ ಮಗನಿಗೂ ಒಂದು ತಟ್ಟೆಯಿದೆ !
ಹೀಗೆ ಊಟದ ಕಥೆ ಮುಗಿದ ಮೇಲೆ ಪ್ರಾಂಶುಪಾಲರ ಬಳಿಗೆ ಬಂದೆ. ಅವರು ಬಹಳ ವಿನಯವಾಗಿ ಎಲ್ಲವನ್ನೂ ವಿವರಿಸುತ್ತಾ ಒಂದು ಕಿವಿಮಾತನ್ನು ಜೋರಾಗಿಯೇ ಹೇಳಿದರೆನ್ನಿ. “ನೋಡಿ, ನಾವು ಈ ಮಕ್ಕಳಿಗೆ ೮ ತಿಂಗಳು ಏನನ್ನೂ ಕಲಿಸುವುದಿಲ್ಲ. ನೀವು ಬೇಸರ ಮಾಡಿಕೊಳ್ಳಬೇಡಿ. ನಂತರ ಏನೂ ಕಲಿಸಿಲ್ಲ ಎಂದು ನಮ್ಮನ್ನು ದೂರಬೇಡಿ’. ವಿಚಿತ್ರ ಹೇಳಿಕೆ ಎನಿಸಿದ್ದು ನಿಜ. ಕಾರಣವೆಂದರೆ, ಈಗ ಶಾಲೆಗೆ ಸೇರಿದ ಮೊದಲ ದಿನವೇ ಇಂಗ್ಲಿಷ್‌ನ ೨೬ ಅಕ್ಷರಗಳನ್ನು ಕಲಿಯಬೇಕು, ವಾಕ್ಯ ರಚನೆ ಸಾಮರ್ಥ್ಯ ಬಂದರೂ ಪರವಾಗಿಲ್ಲ ಎಂದು ಒತ್ತಡ ಹಾಕುವ ದಿನಗಳಿವೆ. ಅಂಥದ್ದರಲ್ಲಿ ಎಂಟು ತಿಂಗಳ ಕಾಲ ಏನೂ ಕಲಿಯುವಂತೆಯೇ ಇಲ್ಲ ಎಂದರೆ ಹೇಗಾಗಬೇಡ.
“ಮತ್ತೆ ಅವರು ಏನು ಮಾಡುವುದು?’ ಎಂದು ಕೇಳಿದೆ. “ಸುಮ್ಮನೆ ಬಂದು ಕುಳಿತುಕೊಳ್ಳುತ್ತಾರೆ. ಹನ್ನೊಂದರ ಸುಮಾರಿಗೆ ಮತ್ತು ನಾಲ್ಕರ ಸುಮಾರಿಗೆ ಹಾಲು, ಬಿಸ್ಕತ್ ಕೊಡುತ್ತೇವೆ. ತಿಂದು ಕುಣಿದಾಡುತ್ತ ಇರುವುದು. ಅವರು ನಮಗೆ ಮೊದಲು ಶಾಲೆಯಲ್ಲಿರುವ ಅಭ್ಯಾಸ ಮಾಡಿಕೊಂಡರೆ ಸಾಕು’ ಎಂದು ಉತ್ತರಿಸಿದವರು ಪ್ರಾಂಶುಪಾಲರು. ಅದೂ ಚೆನ್ನೆಸಿತು.
ಮಕ್ಕಳಿಗೆ ಪಿಕ್ಚರ್, ಸಂಗೀತ ಕೇಳಿಸ್ತೀರಾ ಎಂದದ್ದಕ್ಕೆ “ಆ ಅಭ್ಯಾಸವೂ ನಮಗಿದೆ’ ಎಂದು ಉತ್ತರಿಸಿದ್ದು ಅವರಲ್ಲ ; ಅಲ್ಲಿದ್ದ ಆಡಿಯೋ ಮತ್ತು ವಿಡೀಯೊ ಕೋಣೆ. ಆದರೆ ಈ ಶಾಲೆಯ ಮುಂದೆ ಒಂದಷ್ಟು ಹಸಿರಿದೆ, ಅಪ್ಪಟ ಹಳ್ಳಿಯ ವಾತಾವರಣವೇ ಇದೆ. ಮಳೆಯ ಹನಿಗಳನ್ನು ಕಾಣಲು ಯಾವ ತೊಂದರೆಯೂ ಇಲ್ಲ. ದೊಡ್ಡದಾದ ಪ್ರದೇಶದಲ್ಲಿ ತಲೆ ಎತ್ತಿರುವ ಈ ಶಾಲೆಯ ಬಾಗಿಲಲ್ಲಿ ನಿಂತರೆ ಎದುರಿನ ಪ್ರಕೃತಿ ವೈಭವವನ್ನು ಸವಿಯಬಹುದು. ಅಂದರೆ ಇಲ್ಲಿನ ಮಕ್ಕಳ ಕಣ್ಣು ಒಂದಷ್ಟು ಕಾಲ ತಂಪಾಗಿರಬಹುದು !
ಒಟ್ಟೂ ನನ್ನ ಮಗನ ಶಾಲೆಯನ್ನು ಕಂಡು ವಾಪಸ್ಸಾದೆ. ಸಂಜೆ ೪ ಆಗುವಷ್ಟರಲ್ಲಿ ನನ್ನೊಳಗಿನ ತುಡಿತ ಹೆಚ್ಚುತ್ತಿತ್ತು. ಅವನು ಶಾಲೆಯಿಂದ ಬಸ್ಸಿನಲ್ಲಿ ಬಂದು ಇಳಿಯುವ ಸಂಭ್ರಮ ಹಾಗೂ ಅವನನ್ನು ಬರಮಾಡಿಕೊಳ್ಳಬೇಕೆಂಬ ನನ್ನ ಹಂಬಲ ಅದಕ್ಕೆ ಕಾರಣ. ಉಡುಪಿಗೆ ಹೋದ ನಾನು ಅಲ್ಲಿಂದ ಬಸ್ಸು ಹತ್ತಿದ್ದು ನಾಲ್ಕಕ್ಕೇ. ನನ್ನ ಮಗನ ಶಾಲೆಯ ಬಸ್ಸು ಸಾಲಿಗ್ರಾಮಕ್ಕೆ ತಲುಪುವುದು ೪. ೩೫ ರ ಸುಮಾರಿಗೆ. ಅದನ್ನು ಲೆಕ್ಕ ಹಾಕಿ ಬಸ್ಸು ಹತ್ತಿದರೂ ಪ್ರಯೋಜನವಾಗಲಿಲ್ಲ. ನನ್ನ ಬಸ್ಸು ಸಾಲಿಗ್ರಾಮಕ್ಕೆ ಮುಟ್ಟುವಾಗ ನನ್ನ ಮಗ ಅವನ ಬಸ್ಸಿನಿಂದ ಇಳಿದು ನಡೆದು ಹೋಗುತ್ತಿದ್ದ. ಜತೆಗೆ ಅಜ್ಜ ಇದ್ದರು. ಏನೇನೋ ಹೇಳುತ್ತಿದ್ದ.
ನಿಜ, ಆ ಗಳಿಗೆಯನ್ನು ಕಳೆದುಕೊಂಡೆ. ಆ ಬೇಸರ ನನ್ನನ್ನು ಗಾಢವಾಗಿ ವ್ಯಾಪಿಸಿಕೊಂಡಿದೆ. ಮರು ದಿನ ಮೈಸೂರಿಗೆ ಹೊರಡಲೇಬೇಕಿತ್ತು. ಸಿದ್ಧತೆಯನ್ನೂ ಮಾಡಿಕೊಂಡಿದ್ದೆ. “ನೀನ್ಯಾಕೆ ಹೋಗ್ತಿ ?’ ಎಂದು ಹಠ ಹಿಡಿದರೆ ಬಿಡಿಸಲು ಸಾಲಿಗ್ರಾಮದ ಗುರುನರಸಿಂಹನೇ ಬರಬೇಕು. ಅದಕ್ಕೇ ಆರು ತಿಂಗಳಿಂದ ಕೇಳುತ್ತಿದ್ದ ಸೈಕಲ್‌ನ್ನು, ಒಂದು ಚೆಂದವಾದ ಮಳೆ ಅಂಗಿ (ರೈನ್‌ಕೋಟ್) ನ್ನು ಕೊಂಡು ತಂದೆ. ಆವೆರಡರ ಸಂಭ್ರಮದಲ್ಲಿ ನಾನು ಹೋಗುತ್ತಿದ್ದೇನೆ ಎಂಬ ದುಃಖವನ್ನು ಮರೆಸಬೇಕಿತ್ತು ನನಗೆ. ನೋಡಿ, ನನ್ನ ದುರಾದೃಷ್ಟ. ಅಂದೂ ಮನೆಗೆ ಬಂದದ್ದು ಅವನು ಶಾಲೆಯಿಂದ ವಾಪಸ್ಸಾದ ಮೇಲೆಯೇ.
ಅವನು ಬಚ್ಚಲಲ್ಲಿ ಕಾಲು ತೊಳಿಯುತ್ತಿದ್ದ. ನಾನು ಅಂಗಳಕ್ಕೆ ಸೈಕಲ್‌ನ್ನು ಹೊತ್ತು ತಂದೆ. ಅಜ್ಜ “ಬಂದೇ ಬಿಡ್ತಲ್ಲೋ’ ಎಂದು ಅಬ್ಬರಿಸಿದರು. ಅವನು ಒಂದೇ ಹೊಡೆತಕ್ಕೆ ಮಾವಿನಕಾಯಿ ಉದುರಿಸುವವನಂತೆ ಅಂಗಳಕ್ಕೆ ಜಿಗಿದು ಬಂದ. ಕಣ್ಣೆದುರು ಅವನ ಕನಸಿನ ಸೈಕಲ್ಲಿತ್ತು. “ಹಸಿರು…ಗ್ರೀನ್’ ಕಲರ್‌ದ್ದು ತಾ ಅಂದಿದ್ದ. ಜತೆಗೆ ಸಿಗದಿದ್ದರೆ ಕೆಂಪು ಎಂದು ಅವನೇ ಆಪ್ಚನ್ ಕೊಟ್ಟಿದ್ದ. ಕೆಂಪೇ ಸಿಕ್ಕಿತು. ಸೈಕಲ್ ಕಂಡವನಿಗೆ ಅಪ್ಪನೂ ಬೇಕಿರಲಿಲ್ಲ..ಅಮ್ಮ..ಅಜ್ಜ..ಅಮ್ಮಮ್ಮ…ಯಾರೂ ಬೇಕಿರಲಿಲ್ಲ !
ಅಂಥದೊಂದು ಖುಷಿ ಅವನನ್ನು ಆವರಿಸಿಕೊಂಡು ಬಿಟ್ಟಿತ್ತು. ಸಣ್ಣದೊಂದು ಮಳೆ ರಾಗ ಹಾಡುತ್ತಿರುವ ಮಧ್ಯೆಯೇ ಸೈಕಲ್‌ನ್ನು ಕೊಂಚ ಓಡಿಸಿದ, ನಂತರ ಚಾವಡಿಗೆ ಬಂದ. ಅಲ್ಲಿ ಮತ್ತೆ ಅವನದ್ದು ಅದೇ ಅಭ್ಯಾಸ.
ಸಂಜೆ ಎಂಟೂವರೆಗೆ ಬಸ್ಸು. ಮಗ ಹೊಸದಾದ ಮಳೆ ಅಂಗಿಯನ್ನು ತೊಟ್ಟು ಅಜ್ಜನೊಂದಿಗೆ ಬಂದಿದ್ದ ಅಪ್ಪನನ್ನು ಕಳುಹಿಸಲು. ಮೊದಲೇ ಮನೆಯಲ್ಲೇ ಷರತ್ತು ವಿಧಿಸಿದ್ದೆ “ನೀನು ಅಳಬಾರದೆಂದು’. ಅದಕ್ಕೆ ಅವನೂ ಸಹಿ ಹಾಕಿದ್ದ. ನಾನೂ ಅವನು ಬಸ್ಸು ನಿಲ್ದಾಣದ ಕಲ್ಲಿನ ಮೇಲೆ ಕುಳಿತು ಹರಟುತ್ತಿದ್ದೆವು. ಅವನೂ ಸೈಕಲ್‌ನ ಗುಂಗಿನಲ್ಲೇ ಇದ್ದ. ಅಷ್ಟರಲ್ಲಿ ಬಸ್ಸು ಬಂದು ನಿಂತಿತು. ಥಟ್ಟನೆ ಹೊರಟು ನಿಂತೆ. ಮಗ ದಿಟ್ಟಿಸಿ ನೋಡುತ್ತಲೇ ಇದ್ದ. ನಾನು ಮೇಲೆ ಹತ್ತಿ ಕಿಟಕಿಯಲ್ಲಿ ಇಣುಕಿದೆ. ಅವನ ಕಣ್ಣಿನಲ್ಲಿ ನೀರು ತುಂಬಿತ್ತು. “ಅಪ್ಪಾ…ಹೋಗ್ಬೇಡ..ಬಾ..’ ಎಂದು ಕೂಗುತ್ತಿದ್ದ. ಅಜ್ಜ ಮೊಬೈಲ್‌ನಲ್ಲಿ ಮಾತಾಡುತ್ತಿದ್ದರು. ಅಪ್ಪ ಮತ್ತು ಮಗನ ಭಾವನೆ ಮುಖಾಮುಖಿಯಾಗಿದ್ದೇ ಆಗ. ನನಗೂ ಕಣ್ಣು ತೇವಗೊಂಡಿತು. ಅಳು ಉಕ್ಕಿ ಬಂತು. ಆದರೆ ಅನಿವಾರ್ಯತೆ ಅದನ್ನು ಗಂಟಲಲ್ಲಿಯೇ ಉಳಿಸಿತು, ನೀರಾಗಿ ಹರಿಯಲು ಅವಕಾಶ ಕೊಡಲೇ ಇಲ್ಲ.
ಅವನ ಸದಾ ಹೇಳುವ ಮಾತು “ಅಪ್ಪಾ…ನೀ ಹೀಗೆ ಮಾಡಿದ್ರೆ ನನ್ಗೆ ಬೇಜಾರಾಗುತ್ತೆ’ ಎಂಬುದು. ಈಗ ಮತ್ತೆ ಅವನಿಗೆ ಬೇಜಾರು ಆಗುವ ಹಾಗೆಯೇ ಮಾಡಿದ್ದೆ, ನಿಜಕ್ಕೂ ನನಗೂ ಬೇಜಾರೆನಿಸಿತು. ನಾವೀಗ ದಸರೆಯ ರಜೆ ಬರುವುದನ್ನೇ ಕಾಯುತ್ತಿದ್ದೇವೆ..ಅಲ್ಲಿಯವರೆಗೂ…ಏನೂ ಹೇಳುವಂತಿಲ್ಲ.ಬರಿಯ ಅನುಭವ. ಅವನು ರಸ್ತೆಯಲ್ಲಿ ನಿಂತ ಮನಸಾರೆ ಅತ್ತು ಹಗುರ ಮಾಡಿಕೊಂಡ. ನಾನು ದುಃಖವನ್ನು “ಬೌದ್ಧಿಕ’ ಲೆಕ್ಕಾಚಾರದಡಿ ಅನಿವಾರ್ಯತೆಯ ನೆವ ಹೇಳಿ ತಡೆದುಕೊಂಡೆ. ಅಹರ್ನಿಶಿಯವರೂ ತಮ್ಮ ಬ್ಲಾಗ್ನಲ್ಲಿ ತಮ್ಮ ಮಗನ ಮೊದಲ ದಿನದ ಅನುಭವ ಬರೆದಿದ್ದಾರೆ. ನಿಜಕ್ಕೂ, ಎಲ್ಲೇ ಇರಲಿ, ಎಲ್ಲರೂ ಮಕ್ಕಳೇ !

ನಾನು ದೊಡ್ಡವನಾಗಿದ್ದೆ, ಅವನು ಮಗುವಾಗಿಯೇ ಉಳಿದಿದ್ದ !

ಕಣ್ಣ ಹನಿಗಳೊಂದಿಗೆ ಬರುತ್ತೇನೆ…!

ಮನಸ್ಸಿನೊಳಗೆ ಖುಷಿ ಕುಣಿದಾಡುತ್ತಿದೆ ; ಹಾಗೇ ಸುಮ್ಮನೆ ಬೀಸಿ ಬರುವ ಗಾಳಿಗೆ ಸಂಪಿಗೆ ಎಸಳುಗಳು ತೂಗಾಡಿದ ಹಾಗೆ.ಜೂ. ೧೧ ರಂದು ನನ್ನ ಮಗ ಶಾಲೆಗೆ ಹೋಗುತ್ತಿದ್ದಾನೆ. ಪಾಠಶಾಲೆಯ ಮೊದಲ ದಿನವದು. ನನ್ನೊಳಗೆ ಸಂಭ್ರಮದ ಹಕ್ಕಿಯ ರೆಕ್ಕೆ ಹಾರಿಸುತ್ತಿರುವ ಸದ್ದು ವರ್ಣಿಸಲಾಗದು. ಬ್ರಹ್ಮಾವರ ಬಳಿಯ ಸಾಲಿಕೇರಿಯ ಶಾಲೆಯೊಂದಕ್ಕೆ ಅವನ ಪ್ರವೇಶ.

ನನ್ನ ಅಮ್ಮ, ಅಪ್ಪ ಇಂಥದೊಂದು ಸಂಭ್ರಮವನ್ನು ಕಂಡಿದ್ದರೋ, ಉಂಡಿದ್ದರೋ ತಿಳಿದಿಲ್ಲ. ನನಗೊಂದು ಅಂಥ ಅವಕಾಶ ಬಂದಿದೆ. ಸಾಲಿಗ್ರಾಮದಲ್ಲಿ ಅವನ ಅಜ್ಜನ ಮನೆಯಲ್ಲಿದ್ದು, ಓದುತ್ತಾನೆ ನನ್ನ ಮಗ.

ಒಂದು ಮಗುವಿನ ಬೆಳವಣಿಗೆಯನ್ನು ಕಣ್ತುಂಬಿಕೊಳ್ಳುತ್ತಲೇ ನಾವು ಬೆಳೆದು ಬಂದ ಪರಿಯನ್ನು ಹೋಲಿಸುತ್ತಾ ಹೋಗುವುದಿದೆಯಲ್ಲ, ಅದೇ ಬದುಕಿಗೊಂದು ಉತ್ಸಾಹ ತುಂಬುವ ನೆಲೆ ಎನಿಸುತ್ತದೆ ಆಗಾಗ್ಗೆ. ಹೀಗೆ ಎನಿಸಿಕೊಂಡು ನನ್ನ ಅಮ್ಮನನ್ನು ಇಂಥ ದಿನದ ಅಂದಿನ ಸಂಭ್ರಮದ ಬಗ್ಗೆ ಕೇಳಿದೆ. ಅಂದರೆ ನಾನು ಮೊದಲ ದಿನ ಶಾಲೆಗೆ ಹೋದ ಕ್ಷಣಗಳನ್ನು. ಅಮ್ಮ ನೆನೆಸಿಕೊಂಡು ಹೇಳಿದಳು. ಆದರೆ ಅವಳ ಜ್ಞಾಪಕಚಿತ್ರಶಾಲೆಯಲ್ಲೂ ಆ ಚಿತ್ರಗಳೆಲ್ಲಾ ಮಸುಕಾಗಿವೆ.

ನಾನು ಬೆಳೆದದ್ದು ನನ್ನ ದೊಡ್ಡಮ್ಮನ ಮನೆಯಲ್ಲಿ. ಅಂದರೆ ದೊಡ್ಡಮ್ಮ ಎಂದರೆ ತಾಯಿಯ ಅಕ್ಕ ಅಲ್ಲ. ನನ್ನಪ್ಪ ನನ್ನೂರನ್ನು ತ್ಯಜಿಸಿ ಭದ್ರಾವತಿಗೆ ಬಂದಾಗ ಯಾರದೋ ಒಬ್ಬ ಪರಿಚಯಸ್ಥರ ಆಶ್ರಯ ಬೇಕಿತ್ತು. ಆಗ ಸಿಕ್ಕಿದ್ದು ಇವರ ಮನೆ. ಪರಿಚಯವೂ ಆದದ್ದು ನಂತರವೇ. ಆದರೆ ಇಬ್ಬರೂ ಒಂದೇ ಊರಿನವರೆಂಬುದೇ ಪರಿಚಯಕ್ಕೆ ಮೂಲವಾಗಿತ್ತಂತೆ. ಹೀಗಿರುವಾಗ ನನ್ನ ಮನೆಯ ಮಾಲೀಕಿಣಿಗೆ ಮಕ್ಕಳಿರಲಿಲ್ಲ. ನಾನು ಅಲ್ಲಿಗೆ ಹೋಗಿ ಬರ್‍ತಾ ಇದ್ದದ್ದರಿಂದ ಅವರೇ ನೋಡಿಕೊಳ್ಳಲು ನಿರ್ಧರಿಸಿದರು. ನಂತರ ನನ್ನ ಅಪ್ಪ ಮನೆ ಸ್ಥಳಾಂತರಿಸಿದರೇನೋ ನಿಜ. ಆದರೆ ನಾನು ಆ ಮಾಲೀಕಿಣಿ ಮನೆಯಲ್ಲೇ ಉಳಿದೆ. ಹಾಗೆ ಆದದ್ದು ದೊಡ್ಡಮ್ಮ.

ಹಾಲು ಸಕ್ಕರೆ ಕರಗಿಸಿಕೊಂಡು ಚಪಾತಿ ಅದ್ದಿ ತಿನ್ನುವುದು ಬಹಳ ಇಷ್ಟ. ಹೀಗೆ ಮಕ್ಕಳನ್ನು ಹಿಡಿದುಕೊಂಡು ಹೋಗುವ ಗುಮ್ಮಯ್ಯನ ಹಾಗೆ ಒಂದು ಹೆಂಗಸು ಬರ್‍ತಿತ್ತಂತೆ. ಅವಳು ಹತ್ತಿರದ ಅಂಗನವಾಡಿಯವಳು. ಮಕ್ಕಳನ್ನೆಲ್ಲ ಕರೆದೊಯ್ದು ಸೇರಿಸುವವಳು. ಆಗ ಇದ್ದದ್ದು ಶಿಶುವಿಹಾರ, ಬಾಲವಾಡಿ ಅಂತ. ಇಂಥದ್ದೇ ಒಂದು ಜೂನ್‌ನಲ್ಲಿ ಆ ಹೆಂಗಸು ನಮ್ಮ ಮನೆಯ ಮುಂದೆಯೂ ನಿಂತಳಂತೆ. “ನಿಮ್ಮಲ್ಲಿ ಏನಾದ್ರೂ ಮಕ್ಕಳಿದ್ದವಾ, ಶಾಲೆ ಹೋಗಲಿಕ್ಕೆ’ ಎಂದು ಕೇಳಿದಳಂತೆ. ಅದಕ್ಕೆ ಈ ದೊಡ್ಡಮ್ಮ “ಹೌದು, ಇದ್ದಾನೆ. ಬಹಳ ಗಲಾಟೆ ಮಾಡ್ತಾನೆ. ಆದರೆ ಇನ್ನೂ ವಯಸ್ಸು ಕಡಿಮೆ’ ಎಂದರಂತೆ. ಅದಕ್ಕೆ ಆಕೆ ಎಷ್ಟಾಗಿರಬಹುದು ಎಂದದ್ದಕ್ಕೆ ಐದು ಇನ್ನೂ ತುಂಬಿಲ್ಲ ಎಂದರಂತೆ ಅಮ್ಮ. ವಾಸ್ತವವಾಗಿ ನನಗೆ ಐದು ತುಂಬಲು ಎಂಟು ತಿಂಗಳು ಬಾಕಿಯಿತ್ತು. ಆಕೆ “ಇರಲಿ, ನೋಡೋಣ’ ಎಂದು ಕರೆದೊಯ್ದಳಂತೆ. ಅದೇ ನನ್ನ ಮೊದಲ ದಿನ.

ಬಿಡಿ, ಆಗ ಈ ಅಂಕಗಳ ಲೆಕ್ಕಾಚಾರ ಇರಲಿಲ್ಲ. ಶಾಲೆಗೆ ಹೋಗೋ ಅಭ್ಯಾಸ ಮಾಡಿಕೊಂಡರೆ ಸಾಕು ಎಂದು ಬಯಸುತ್ತಿದ್ದ ಪೋಷಕರೇ ಬಹುಪಾಲು. ಈಗಿನದ್ದು ಹಾಗಲ್ಲ. ಎಲ್‌ಕೆಜಿ ಅಂದರೆ ಮೂರೂವರೆ ವರ್ಷಕ್ಕೇ ಆತನಿಗೆ ಅದು, ಇದು ಎಲ್ಲಾ ಬರಬೇಕು. ನಾವು ಎರಡನೇ ತರಗತಿಗೆ ಬಂದಾಗ ಹತ್ತರ ಮಗ್ಗಿ ದಾಟಿ ಹನ್ನೊಂದಕ್ಕೆ ಬರುತ್ತಿದ್ದವು. ಪುಣ್ಯಕ್ಕೆ ನನ್ನ ಹೆಂಡತಿಗೂ ಇಂದಿನ ಒತ್ತಡದ ಕಲಿಕೆ ಅಷ್ಟೊಂದು ಇಷ್ಟವಿಲ್ಲ. ಹಾಗಾಗಿ ನಾಲ್ಕು ವರ್ಷಕ್ಕೆ ಅವನನ್ನು ಶಾಲೆಗೆ ಸೇರಿಸುತ್ತಿದ್ದೇವೆ. ಅಲ್ಲಿಯವರೆಗೆ ಯಾವ ಬಾಲವಾಡಿಗೂ ಕಳಿಸಲಿಲ್ಲ. ಇದು ನನ್ನ ಹೆಗ್ಗಳಿಕೆ ಎಂದೇನೂ ಅಲ್ಲ. ಬಾಲ್ಯವನ್ನು ಅನುಭವಿಸಲಿ ಎಂದು ಸುಮ್ಮನಿದ್ದೆವು.
ಹೀಗೆ ಶಾಲೆಗೆ ಸೇರಿಸಿಕೊಂಡಾಕೆಗೆ ನನ್ನ ಮೇಲೆ ವಿಶ್ವಾಸ ಬಂದಿತ್ತಂತೆ. ಒಂದು ವಾರ ನನ್ನ “ಚಲನವಲನ’ ಕಂಡ ಆಕೆ ಮತ್ತೊಂದು ದಿನ ದೊಡ್ಡಮ್ಮನ ಎದುರು ಬಂದು “ಇರಲಿ ಬಿಡಿ’ ಎಂದಳಂತೆ. “ಅಲ್ಲಮ್ಮಾ, ಅವನಿಗೆ ಐದು ವರ್ಷವಾಗಿಲ್ಲ’ ಎಂದದ್ದಕ್ಕೆ ಅವಳೇ ಒಂದು ಲೆಕ್ಕ ಬರೆದು ವರ್ಷ ಪೂರ್ಣಗೊಳಿಸಿ ಹಾಕಿದಳು. ಅದರ ಪರಿಣಾಮ ನನ್ನ ಜನ್ಮ ದಿನಾಂಕ ಒಂದೂವರೆ ವರ್ಷ ಹೆಚ್ಚೂ ಕಡಿಮೆಯಾಗಿದೆ !

ಆಗ ನಾನೂ ಸ್ವಲ್ಪ ದಪ್ಪಗೆ, ಎತ್ತರಕ್ಕೆ ( ಆ ವಯಸ್ಸಿಗೆ) ಇದ್ದನಂತೆ. ಯಾವ ಎಜುಕೇಷನ್ ಇನ್ಸ್‌ಪೆಕ್ಟರ್‌ಗಳೂ ಕೇಳಿರಲಿಲ್ಲ. ನಾನು ಶಾಲೆಗೆ ಹೋಗಿ ಕುಳಿತುಕೊಳ್ಳಲು ಕಲಿತೆ. ಅಕ್ಷರವೆಲ್ಲಾ ಕಲಿತದ್ದು ಎಷ್ಟೋ ಗೊತ್ತಿಲ್ಲ. ನನ್ನ ಅಮ್ಮನೂ ಅಷ್ಟೊಂದು ತಲೆ ಕೆಡಿಸಿಕೊಂಡಿರಲಿಲ್ಲ. ದೊಡ್ಡಮ್ಮ ಸಹ ಓದದ ದಿನ ಎರಡು ಚಪಾತಿ ಕಡಿಮೆ ಕೊಡುತ್ತಿದ್ದರಷ್ಟೇ !

ಒಂದೂ ಬೈಗುಳ ಉಡುಗೊರೆಯಾಗಿ ಕೊಡುತ್ತಿರಲಿಲ್ಲ. ತೀರಾ ಮಿತಿ ಮೀರಿದರೆ ಅಪ್ಪನಿಗೆ ದೂರು ಹೇಳುತ್ತಿದ್ದರು. ನಂತರ ನಾನೂ ದೊಡ್ಡವನಾಗುತ್ತಿದ್ದಂತೆಯೇ ನನ್ನ ತಲೆ ಹರಟೆ ಹೆಚ್ಚಾಯಿತೋ, ಅವರ ದೂರು ಹೇಳುವ ಪ್ರವೃತ್ತಿ ಹೆಚ್ಚಾಯಿತೋ ಗೊತ್ತಿಲ್ಲ. ಪ್ರತಿ ಭಾನುವಾರ ಅಪ್ಪನ ಎದುರು ವಿಚಾರಣೆ ನಡೆಯುತ್ತಿತ್ತು. ನಾನು ತಲೆತಗ್ಗಿಸಿಕೊಂಡು ನಿಲ್ಲುತ್ತಿದ್ದೆ. ನನ್ನ ದೊಡ್ಡಮ್ಮ ನನ್ನನ್ನು ಕರೆದುಕೊಂಡು ಹೋಗಿ “ಪೂಜೆ’ ಮಾಡಿಸಿಕೊಂಡು ಮನೆಗೆ ವಾಪಸ್ಸಾಗುತ್ತಿದ್ದರು. ನಾನೂ ಸುಮ್ಮನೆ ಹಿಂಬಾಲಿಸಿಕೊಂಡು ಬರುತ್ತಿದ್ದೆ. ಇದು ಪ್ರತಿ ವಾರದ ಕಾರ್‍ಯಕ್ರಮ.

ಹೀಗೆ ಸಾಗಿ ಹೋಗುವ ನನ್ನ ಶಾಲಾ ದಿನಗಳ ನೆನಪು ನನ್ನ ಮಗನನ್ನು ನೆನಪಿಸುತ್ತಿದೆ. ಶಾಲಾ ಸಂಭ್ರಮದ ಕ್ಷಣ ಕಣ್ತುಂಬಿಕೊಳ್ಳಲು ಇರುವ ಅವಕಾಶ ಅತ್ಯಂತ ಕಡಿಮೆಯೆನ್ನುವುದೂ ಹೌದು. ಅವನು ಅಜ್ಜನ ಮನೆಯಲ್ಲಿ ಓದಿದರೆ, ನಾನಿರುವುದು ಮೈಸೂರಿನಲ್ಲಿ. ಈಗ ಊರಿನಲ್ಲಿ ಜಿರಾಪಟಿ ಮಳೆ ಶುರುವಾಗಿರುವ ಹೊತ್ತು. ಒಂದು ಮಳೆಗಾಲಕ್ಕೆ ಸಿದ್ಧಗೊಳ್ಳುವ ಪರಿ ಅದ್ಭುತ. ಈಗೀಗ ಆಧುನಿಕ ಜೀವನ ಶೈಲಿ, ಮಿತ ಕುಟುಂಬಗಳೆಲ್ಲಾ ಆ ಸಂಭ್ರಮವನ್ನು ಕಡಿತಗೊಳಿಸಿರುವುದು ಸತ್ಯ. ಇದರರ್ಥ ಕುಟುಂಬ ಯೋಜನೆ ವಿರೋಧಿ ನಾನಲ್ಲ. ಆದರೆ ಎಲ್ಲರಿಗೂ ಎಂದು ಹಂಚಿಕೊಳ್ಳುವ ಸಂಭ್ರಮದ ಕ್ಷೀಣವಾಗುತ್ತಿದೆ. ಆಗಲೇ ಹೇಳಿದೆನಲ್ಲ, ಮಳೆಗಾಲಕ್ಕೆ ಸಿದ್ಧವಾಗುವ ಪರಿ. ಶಿವರಾಮ ಕಾರಂತರ “ಮರಳಿ ಮಣ್ಣಿಗೆ’ ಕಾದಂಬರಿ ಓದಬೇಕು.

ಅವನೂ ಮಳೆಗಾಲದ ಸಂಭ್ರಮವನ್ನು ತನ್ನೊಳಗೆ ತುಂಬಿಕೊಳ್ಳಲು ಹೊರಟಿದ್ದಾನೆ. ಜತೆಗೆ ನಾನೂ ಇದ್ದೇನೆ. ಒಂದೆರಡು ಮಳೆಯ ಹನಿಗಳನ್ನು ನನ್ನೊಳಗೆ ತುಂಬಿಕೊಂಡು ಬರುತ್ತೇನೆ ; ಜತೆಗೆ ಮಗನನ್ನು ಬಿಟ್ಟು ಇರಬೇಕೆಂಬ ಅನಿವಾರ್ಯದ ಅಗಲಿಕೆಯ ಎರಡು ಕಣ್ಣ ಹನಿಗಳೊಂದಿಗೂ…
ಅಂದ ಹಾಗೆ ನನ್ನ ಮಗನ ಹೆಸರು ಹೇಳಲು ಮರೆತಿದ್ದೆ… ಋತುಪರ್ಣ.

ಸುವರ್ಣ ರಥ : ಒಂದು ಅನುಭವ

ತಮಾಷೆಯ ಸಂಗತಿ ಹೀಗೆ ಆರಂಭವಾಗುತ್ತದೆ, ನೋಡಿ. ಹಲವು ವರ್ಷಗಳ ಆಲೋಚನೆ ಜಾರಿಯಾದದ್ದು  ಮೊನ್ನೆ (ಫೆ.2). ರಾಷ್ಟ್ರಪತಿಯವರಾದ ಪ್ರತಿಭಾ ಪಾಟೀಲ್ ಬೆಂಗಳೂರಿನಲ್ಲಿ ಈ ರಥಕ್ಕೆ (ಲಕ್ಸುರಿ ಟ್ರೈನ್) ಚಾಲನೆ ನೀಡಿದರು. ಅಲ್ಲಿಂದ ಮಧ್ಯಾಹ್ನ 1. 40 ರ ಸುಮಾರಿಗೆ ಹೊರಟ ರಥ (ರೈಲು) ಬಂದು ಮೈಸೂರಿಗೆ ತಲುಪಿದ್ದು ಸಂಜೆ 4. 4೦ ಕ್ಕೆ.

ಸಹಜವಾಗಿಯೇ ಸುದ್ದಿ ಮಾಡಲೆಂದು ಸುವರ್ಣ ರಥದ ನಿರೀಕ್ಷೆಯಲ್ಲಿದ್ದೆ ರೈಲ್ವೆ ಸ್ಟೇಷನ್‌ನಲ್ಲಿ. ತಿಳಿ ನೇರಳೆ ಬಣ್ಣಕ್ಕಿಂತ ಸ್ವಲ್ಪ ಕಡುವಾದ ಹಾಗೆಂದು ಕಡು ನೇರಳೆ ಬಣ್ಣ ಎಂದು ಹೇಳಲಾಗದ ಸುವರ್ಣ ರಥ (ಗೋಲ್ಡನ್ ಚಾರಿಯೇಟ್). ರಾಜಸ್ತಾನದ ಪ್ಯಾಲೇಸ್ ಆನ್ ವೀಲ್ಸ್, ಮಹಾರಾಷ್ಟ್ರದ ಡೆಕ್ಕನ್ ಒಡಿಸ್ಸಿಯಂಥ ಐಷಾರಾಮಿ ರೈಲುಗಳ ನಂತರ ನಮ್ಮ (ಕರ್ನಾಟಕ) ಸುವರ್ಣ ರಥ ಬಂದಿದೆ. ಹಿಂದೆಯೂ ಅದರ ಅದ್ಧೂರಿತನದ ಬಗ್ಗೆ ಸುದ್ದಿ ಬರೆದಿದ್ದೆವು.

ಜತೆಗೆ ‘ರಥ ಯಾಕೆ ಆಗಿಲ್ಲ? ’ ಎಂದು ಶಾಸನ ಸಭೆ ಸದಸ್ಯರಿಂದ ವಿಧಾನಮಂಡಲ ಕಲಾಪಗಳಲ್ಲಿ ಪ್ರಶ್ನೆ ಕೇಳಿಸಿ, ಸರಕಾರ ಕೊಟ್ಟ ಉತ್ತರ ಬರೆದೂ ಬರೆದೂ ಸಾಕಾಗಿತ್ತು. ಎಷ್ಟೋ ಬಾರಿ ನಮ್ಮ ಸೀನಿಯರ್‌ಗಳು ಪ್ರತಿ ಅಧಿವೇಶನದಲ್ಲೂ ಪ್ರಸ್ತಾಪವಾಗುತ್ತಿದ್ದ ಪ್ರಶ್ನೆಗೆ ‘ಹಳೇ ಫೈಲ್‌ಗೇ ಡೇಟ್ ಚೇಂಜ್ ಮಾಡಿದರಾಯಿತು’ ಎನ್ನುತ್ತಿದ್ದರು.

 ಇಂಥ ರೈಲನ್ನು ನೋಡಬೇಕು ಎಂಬ ಕುತೂಹಲದಿಂದಲೇ ಮೈಸೂರು ರೈಲು ನಿಲ್ದಾಣಕ್ಕೆ ಹೋದೆ. ಅದಕ್ಕಿಂತಲೂ ಮುಖ್ಯವಾಗಿ ಬೆಂಗಳೂರಿಗೆ ಹೊರಟಿದ್ದೆ. ತಿರುಪತಿ ಪ್ಯಾಸೆಂಜರ್‌ನಲ್ಲಿ ನನ್ನ ಮಿತ್ರರಾದ ವೆಂಕಟೇಶ್ ಭಟ್ ಮತ್ತು ಪಂ. ವೀರಭದ್ರಯ್ಯ ಹಿರೇಮಠ್ ಅವರು ಟಿಕೆಟ್ ಪಡೆದು ಸೀಟು ಹಿಡಿದಿದ್ದರು. ಐದಕ್ಕೆ ಹೊರಡಬೇಕಿತ್ತು. ಅದಕ್ಕೆಂದೇ ನಿಲ್ದಾಣಕ್ಕೆ ಹೋದವನ ಎದುರು ಸುವರ್ಣ ರಥ ಬಂದು ನಿಂತಿತು.

ನನಗೋ ಆಶ್ಚರ್ಯ. ತಿರುಪತಿ ಪ್ಯಾಸೆಂಜರ್ ಹೊರಡಲು ಇನ್ನೂ ಹದಿನೈದು ನಿಮಿಷವಿದ್ದದ್ದರಿಂದ ರಥವನ್ನು ಹೊಕ್ಕಲು ಹೋದೆ. ನನ್ನ ಆಂಗ್ಲ ಪತ್ರಕರ್ತೆ ಗೆಳತಿ ಪ್ರೀತಿ ನಾಗರಾಜ್ ಬಂದರು. ಒಳಗೆ ಇಣುಕುವಷ್ಟರಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ  ನಿಗಮದ ಸಾರ್ವಜನಿಕ ಸಂಪರ್ಕ ಅಧಿಕಾರಿಯೊಬ್ಬರು ನಮ್ಮನ್ನು ಗುರುತು ಹಚ್ಚಿ ‘ಬನ್ನಿ, ನೋಡಿ’ ಎಂದು ಒಳ ಕರೆದರು. ಒಳಗೆ ಹೋದಾಗ ಅನಿಸಿದ್ದು , ಹೊರಗಿನ ಡಬ್ಬವಷ್ಟೇ ರೈಲೆನ್ನಲು.

 ಒಳಗೆಲ್ಲಾ ಪಂಚತಾರಾ ಐಷಾರಾಮಿ ಕೋಣೆಗಳೇ.  ರೈಲು ಮತ್ತೆ ಬೆಂಗಳೂರಿನತ್ತ ಹೊರಡಲು ಅನುವಾಯಿತು. ನಾವೂ ಬರಬಹುದೇ ಎಂದು ತಮಾಷೆಗೆ ಕೇಳಿದ್ದಕ್ಕೆ ಕೆಎಸ್‌ಟಿಡಿಸಿ ಅಧಿಕಾರಿ ರತ್ನಾಕರ್ ‘ಒಪ್ಪಿಕೊಂಡು ಬಿಡಬೇಕೇ? ಎಂದಾದರೂ ಒಮ್ಮೆ ಹೋಗಬಹುದು.

ಆದರೆ ಉದ್ಘಾಟನೆಯಾದ ದಿನದಂದಿನ ಸಂಭ್ರಮವೇ ಬೇರೆ. ಅಲ್ಲದೇ ಸುದ್ದಿ ಮಾಡಲು ಸಿಕ್ಕ ಖುಷಿ. ನಮ್ಮ ನೆಚ್ಚಿನ ನಟನ ಹೊಸ ಫಿಲ್ಮ್‌ನ್ನು ಮೊದಲ ದಿನವೇ ರಶ್ಶ್‌ನಲ್ಲಿ ನುಗ್ಗಿ ಟಿಕೇಟು ಪಡೆದು ನೋಡಿದ ಸಂಭ್ರಮದಿಂದ ಉಳಿದವರಿಗೆ ಕಥೆ ಹೇಳುವುದಿದೆಯಲ್ಲಾ, ಬೊಂಬಾಟ್. ಅದೇ ಭಾವನೆಯೇ ನಮ್ಮನ್ನು ಆವರಿಸಿತು. ಹತ್ತು ನಿಮಿಷದ ನಂತರ ರಥ ಹೊರಟಿತು.

ಹೊರಗೆ ರೈಲಿನ ಶಬ್ದವೊಂದು ಬಿಟ್ಟರೆ (ಕೋಣೆಗಳಲ್ಲಿಲ್ಲ) ಮತ್ತೆ ಎಲ್ಲೂ ರೈಲು ಅನಿಸದು. 19 ಬೋಗಿಗಳಿಂದ ಅಲಂಕೃತವಾದ ರೈಲಿನಲ್ಲಿ 11 ಪ್ರಯಾಣಿಕರಿಗೆಂದೇ ಸೀಮಿತ. ಅದಕ್ಕೆ ಇಟ್ಟಿರುವ ಹೆಸರೂ ಶಾತವಾಹನ, ಗಂಗಾ, ಕದಂಬ, ಕಲಚೂರಿ, ವಿಜಯನಗರ, ಯದುಕುಲ, ರಾಷ್ಟ್ರಕೂಟ, ಹೊಯ್ಸಳ, ಆದಿಲ್‌ಶಾಹಿ, ಬಹಮನಿ, ಚಾಲುಕ್ಯ. ಉಳಿದ ೨ ಬೋಗಿಗಳು ಕ್ಯಾಂಟೀನ್ ಮತ್ತು ಅಡುಗೆಗೆ. ಒಂದು ರುಚಿ ಮತ್ತು ಮತ್ತೊಂದು ನಳಪಾಕ. ‘ಆರೋಗ್ಯ’ ಬೋಗಿಯಲ್ಲಿ ಜಿಮ್, ಮಸಾಜ್ ಪಾರ್ಲರ್. ಬಾರ್ ಮತ್ತು ಲಾಂಜ್‌ನ ಬೋಗಿಯಿದೆ. ಆ ಬೋಗಿಗೆ ಮದಿರೆ ಎಂದು ಹೆಸರಿಡಲು ಅಧಿಕಾರಿಗಳು ಮುಂದಾದಾಗ ಸಾರ್ವಜನಿಕರು ತರಾಟೆಗೆ ತೆಗೆದುಕೊಂಡಿದ್ದರು. ‘ನೀವು ಕುಡಿದು ಮಜಾ ಮಾಡುವುದಾದರೆ ಮಾಡಿ. ಅದಕ್ಕೆ ಮತ್ತೆ ಪ್ರಚಾರ ಅಗತ್ಯವಿಲ್ಲ’ ಎಂದು ತಿಳಿ ಹೇಳಿದರು.

ಯಾಕೋ? ಮದಿರೆ ಪದ ಬಂದಾಗಲೆಲ್ಲಾ ವಿವಾದದ ಕಿಡಿ ಹೊತ್ತದೇ ಬಿಡುವುದಿಲ್ಲ. ಹಿಂದೊಮ್ಮೆ ಮುಖ್ಯಮಂತ್ರಿಯಾಗಿದ್ದ ಜೆ. ಎಚ್. ಪಟೇಲರು ತಮ್ಮ ಸಂಗಾತಿಗಳನ್ನು ಹೆಸರಿಸುತ್ತಾ ‘ಮದಿರೆ ಮತ್ತು ಮಾನಿನಿ’ ಎಂದು ಹೇಳಿಬಿಟ್ಟಿದ್ದರು. ಬಂತು ನೋಡಿ, ಜನತೆಯಿಂದ ವಿರೋಧ. ಒಬ್ಬ ಮುಖ್ಯಮಂತ್ರಿಯಾಗಿ ಹೀಗೆ ಹೇಳಬಹುದೇ? ಎಂದು ಮುಗಿ ಬಿದ್ದಿದ್ದರು. ‘ಮುಖ್ಯಮಂತ್ರಿಯಾಗಿ ಹೀಗೆ ಹೇಳಿ ರಾಜ್ಯದ ಮಾನ ಹರಾಜು ಹಾಕುವುದು ಬೇಡ’ ಎಂದು ಬುದ್ಧಿ ಹೇಳಿದ್ದರು. ಅದು ಅವರಿಗೆ ಅರ್ಥವಾಯಿತೋ ಇಲ್ಲವೋ ? ಯಾಕಂದ್ರೆ ಅವರು ಅರ್ಥವಾಗಿ ಮಾತನಾಡೋದೇ ಹೆಚ್ಚು.

ಹಾಗಾಗಿ ಮದಿರೆ ಹೆಸರನ್ನು ಕೈ ಬಿಟ್ಟರು, ಮದಿರೆಯನ್ನು ಒಳಗೇ ಇಟ್ಟುಕೊಂಡರು. ಉಳಿದಂತೆ ಒಂದರಲ್ಲಿ ಸಭಾಂಗಣವಿದೆ. ಅಲ್ಲಿ ಪಾರ್ಟಿ ನಡೆಸಬಹುದು. ನಡುಗುತ್ತಾ ಸಾಗುವ ರಥದಲ್ಲಿ  ಮದಿರೆಯನ್ನೇರಿಸಿ ಮೆಲ್ಲನೆ ಹೆಜ್ಜೆ ಹಾಕಬಹುದು. ಇನ್ನೆರಡು ಬೋಗಿ ರಥಕ್ಕೆ ಇಂಧನ ಪೂರೈಸುವಂಥವು. ಮತ್ತೊಂದರಲ್ಲಿ ಸಿಬ್ಬಂದಿಗಳ ವಾಸಕ್ಕೆ.

ಬೆಂಗಳೂರಿನಿಂದ ಮೈಸೂರು,ಕಬಿನಿ,ಬೇಲೂರು,ಹಳೇಬೀಡು,ಶ್ರವಣಬೆಳಗೊಳ,ಹಂಪಿ,ಬದಾಮಿ,ಪಟ್ಟದಕಲ್ಲು,ಐಹೊಳೆ, ಗೋವಾ-ಒಟ್ಟು 7 ದಿನ. ದಿನವೊಂದಕ್ಕೆ ಸುಮಾರು 13 ಸಾವಿರ, ಒಟ್ಟು 7 ದಿನಕ್ಕೆ 1 ಲಕ್ಷ ರೂ., 88 ಮಂದಿಗೆ ಅವಕಾಶ.

ಬೇಲೂರು, ಹಳೇಬೀಡು, ಮೈಸೂರು ಶೈಲಿಯ ವಿನ್ಯಾಸ ಬೋಗಿಗಳಿಗೆ ಚೆಂದ ನೀಡಿದೆ. ಮೇಪಲ್ ಕಂಪನಿಗೆ ಉದರ ಉಪಚಾರದ ನಿರ್ವಹಣೆ. ಕಂಪನಿ ದಿಲ್ಲಿ ಮೂಲದ್ದು. ಆದರೂ ಪುಣ್ಯಕ್ಕೆ ಪರಿಚಾರಿಕೆಗೆ ಆಯ್ದುಕೊಂಡಿದ್ದು ಬಹುತೇಕ ಕನ್ನಡಿಗರು. ಕೊಡಗು-ಕರಾವಳಿಯವರಿದ್ದಾರೆ. ಕರ್ನಾಟಕದ ತಿನಿಸು ಪೂರೈಸುವ ಹೊಣೆ ಕುಂದಾಪುರದ ಅಣ್ಣಪ್ಪಶೆಟ್ಟರದು.

ಪರಿಚಾರಕರಿಗೆ ಕೊಡವರ ವೇಷ. ಇನ್ನೊಂದು ಮಹತ್ವದ ಸಂಗತಿ ಹೇಳಬೇಕು. ಈ ಮೂರೂ ರೈಲುಗಳ ಪೈಕಿ ನಮ್ಮ ರಥದಲ್ಲಿ ಮಾತ್ರ ಮೊದಲ ಬಾರಿಗೆ ಪರಿಚಾರಿಕೆಗೆ ನೇಪಾಳದ ಮೇರಿ, ಮಂಗಳೂರಿನ ರಶ್ಮಿ ಜೋಯಿಸ್, ತಮಿಳುನಾಡಿನ ಭಾರತಿ ಕೃಷ್ಣನ್ ನಾಯ್ದು, ಮಹಾರಾಷ್ಟ್ರದ ರುಚಿತಾ ಕರೆ ಹಾಗೂ ಗೋವಾದ ಸೀಮಾ ಸಿಕ್ವೇರಾ ಇದ್ದಾರೆ.

ನನಗೆ ಖುಷಿಯಾಗಿದ್ದು ಅವರ ಧೈರ್ಯ ಕಂಡು. ವಾರದ ಏಳೂ ದಿನ ರೈಲಿನಲ್ಲೇ ತಮ್ಮ ಕುಟುಂಬವನ್ನು ಬಿಟ್ಟಿರಬೇಕು. ಪ್ರವಾಸಿಗರ ಬೇಕು-ಬೇಡಗಳನ್ನು ಕೇಳಿಕೊಂಡು. ಜತೆಗೆ ಎದುರಾಗಬಹುದಾದ ಮುಜುಗುರದ ಸನ್ನಿವೇಶಗಳನ್ನು ಎದುರಿಸಲೂ ಮಾನಸಿಕವಾಗಿ ಸಿದ್ಧರಾಗಿ. ಅವರ ಕುಟುಂಬವೂ ಒಪ್ಪಿಗೆ ನೀಡಿದ್ದು ಅಭಿನಂದನೀಯ. ‘ಹೇಗೆ ? ಯಾವ ರೀತಿ ಸಿದ್ಧರಾಗಿದ್ದೀರಿ?’ ಎಂದು ನಾನು ಮತ್ತು ಪ್ರೀತಿ ಕೇಳಿದೆವು. ಅದಕ್ಕೆ ಉಲ್ಲಾಸದಿಂದಲೇ ಸ್ವಾತಿ, ‘ಇದನ್ನು ಸವಾಲಾಗಿ ಪರಿಗಣಿಸಿದ್ದೇವೆ. ಕುಟುಂಬದವರ ಬೆಂಬಲವಿಲ್ಲದಿದ್ದರೆ ಅಸಾಧ್ಯ’ ಎಂದಳು. ಆತ್ಮವಿಶ್ವಾಸ ತುಂಬಿ ತುಳುಕುತ್ತಿತ್ತು.

ಅಣ್ಣಪ್ಪ ಶೆಟ್ಟರು ತಾವು ನೀಡುವ ಕರಾವಳಿಯ ಕೋರಿಗಸ್ಸಿ, ನೀರುದೋಸೆ, ಚಿಕನ್ ಸುಕ್ಕಾ, ಬಂಗಡಾ ಫ್ರೈ ಬಗ್ಗೆ ಹೇಳಿದರು. ‘ಏನ್ ಸ್ವಾಮಿ, ಕರ್ನಾಟಕ ಸಸ್ಯಾಹಾರ ಇಲ್ವೇ?’ ಎಂದೆ. ನಗುತ್ತಾ ‘ನೀರು ದೋಸೆ, ಇಡ್ಲಿವಡಾ, ರವಾ ಇಡ್ಲಿ, ಬಿಸಿಬೇಳೆಬಾತ್  ಇದೆಯಲ್ಲಾ’ ಎಂದರು. ಕೊಂಚ ಸಮಾಧಾನವಾಯಿತು.

ಪ್ರತಿ ಬೋಗಿಯಲ್ಲೂ ಒಂದಷ್ಟು ಕಲಾಕೃತಿಗಳಿವೆ. ಬೇಲೂರ ಶಿಲಾಬಾಲಿಕೆ, ನಮ್ಮೂರಿನ ಸೀತಾಳ ದಂಡೆ ಹೂ, ಅಡಿಕೆ ಕತ್ತರಿ…ಹೀಗೆ ಸಣ್ಣ ಸಣ್ಣ ಸಂಗತಿಗಳು ತುಂಬಿವೆ. ಪ್ರವಾಸೋದ್ಯಮದಲ್ಲಿ ನಗದು ತಂದು ಕೊಡಬಹುದೋ ಅದೆಲ್ಲವೂ ಇವೆ. ಅಂದ ಹಾಗೆ ಮಾ. ೩ ರಂದು ಇದರ ನಿಜವಾದ ಪ್ರಯಾಣ ಶುರು.

ಲಕ್ಸುರಿ ಎಂದ ಮೇಲೆ ಎಲ್ಲರಿಗೂ ಅಲಭ್ಯ.ನನ್ನ ಗೆಳೆಯ ಅರವಿಂದ ಸಿಗದಾಳ್‌ಗೆ ಎಲ್ಲ ವಿವರಿಸಿದೆ. ‘ಎಷ್ಟು ಚಾರ್ಜ್?’ ಎಂದ. ದಿನಕ್ಕೆ 13 ಸಾವಿರ ರೂ. ಎಂದೆ. ತಕ್ಷಣವೇ ದಿನಕ್ಕಾ…? ಒಂದು ಪ್ಯಾಕೇಜ್‌ಗೆ ಆಗಿದ್ದರೆ ಕನಸಾದರೂ ಕಾಣಬಹುದಿತ್ತು. ಈಗ ಅದೂ ಆಗದೆಂದ. ಇದೇ ಪ್ರಶ್ನೆಯನ್ನು ನಾವು ಅಧಿಕಾರಿಗೂ ಕೇಳಿದ್ದೆವು. ಅದಕ್ಕೆ ಅವರು ‘ಲಕ್ಸುರಿಯ ಲ್ಲವೇ?’ ಎಂದಿದ್ದರು. ಡಾಲರ್ ಸೃಷ್ಟಿಸುತ್ತಿರುವ ಸಾಮಾಜಿಕ ಕಂದಕದ ತೀವ್ರತೆ ಮತ್ತೆ ಬಾಧಿಸಿತು.  ಏನೂ ಹೇಳದೇ ಸುಮ್ಮನಾದೆ.

ವಿಪರ್ಯಾಸ ನೋಡಿ. ಸುವರ್ಣ ರಥಕ್ಕೆ ಇತ್ತ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಚಾಲನೆ ನೀಡಿದರೆ, ಕೆಲ ಕ್ಷಣಗಳ ನಂತರ ಸಿಕಂದರಾಬಾದ್‌ಗೆ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಆರ್. ವೇಲು ‘ಗರೀಬ್ ರಥ’ ಕ್ಕೆ ಹಸಿರು ನಿಶಾನೆ ತೋರಿದರು.

ಹೀಗೆ ಯೋಚನೆ-ಕ್ರಿಯೆಯ ತಾಕಲಾಟ ಮುಗಿಸಿ ರವೀಂದ್ರ ಕಲಾಕ್ಷೇತ್ರದತ್ತ ಹೋಗುವಾಗ ‘ಅಹೋರಾತ್ರಿ ಸಂಗೀತೋತ್ಸವ’ ದಲ್ಲಿ ಹಿರಿಯ ಸಂಗೀತ ಕಲಾವಿದೆ ಡಾ. ಎನ್. ರಾಜಂ ಅವರ ಬಾಗೇಶ್ರೀ ರಾಗ ಆವರಿಸಿಕೊಳ್ಳುತ್ತಿತ್ತು, ನನ್ನನ್ನೂ ಬಿಡಲಿಲ್ಲ !  

ಕನಸು ಕರಗಿದ ಇಬ್ಬನಿ ?

ಆಕೆ, ಆತ, ಅವಳು, ಇವನು..ಹೀಗೆ ಎಷ್ಟೊಂದು ಮಂದಿ ವರ್ತಮಾನದ ವರ್ತುಲಕ್ಕೆ ಸಿಕ್ಕು ಕನಸು ಕಟ್ಟುವುದನ್ನೇ ನಿಲ್ಲಿಸಿಬಿಟ್ಟಿದ್ದಾರೆ.

ಕನಸು ಕಟ್ಟಲು ಅವರ ಮನಸ್ಸು ಸುತರಾಂ ಒಪ್ಪಲಾರದು. ಕನಸು ಕಾಣಲು ಏನುಂಟು ಅವರಲ್ಲಿ ? ಕಣ್ಣಿದ್ದರೇನಂತೆ. ಕಣ್ಣು ಮುಚ್ಚಿ ಕಲ್ಪಿಸಿಕೊಳ್ಳಲು ಅವರದ್ದೇ ಕ್ಷಣಗಳಿರಬೇಕಲ್ಲ. ಕಣ್ಣು ಮುಚ್ಚದೇ ಕನಸು ಹೇಗೆ ಹುಟ್ಟಿಯಾವು ? ಏನಿದ್ದರೂ “ಇಂದಿನ’ ಭರಾಟೆಯಲ್ಲೇ ಬದುಕು-ಬದುಕಬೇಕು.

ನಾಳೆ, ನಾಡಿದ್ದು, ಭವಿಷ್ಯವೆಲ್ಲಾ “ಇಂದಿ’ ನ ಭೂತ ನುಂಗಿ ಹಾಕುತ್ತಿದೆ. ಬಕಾಸುರನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆಯಂತೆ. ಮೊಗ್ಗು ನೋಡಲಿಕ್ಕೆ ಚೆನ್ನ. ಹೂವಾಗಿ ಅರಳಿದರೆ ಇನ್ನೂ ಚೆನ್ನಾಗಿ ತೋರಬಹುದು. ಆದರೆ ಅಲ್ಲಿವರೆಗೆ ಕಾಯಲಿಕ್ಕೆ ಕಾಲವೆಲ್ಲಿ ? ವರ್ತಮಾನದ ಒಲೆಗೆ ಉರಿಯಲಿಕ್ಕೆ ಏನಾದರೂ ಬೇಕು. ಚೂರು, ಪಾರು ಕಾಗದ, ಕಸ-ಕಡ್ಡಿ, ಏನಾದರೂ. ಒಲೆಯ ಹಸಿವನ್ನು ಇಂಗಿಸುವ ಹೊಣೆ ಅವರದ್ದು.

ಸದ್ಯಕ್ಕೆ ಕಮರಿಹೋದ ಕನಸುಗಳ ಅಸ್ಥಿ ಪಂಜರಗಳು! ಅವು ಕರಗಲಾರವು. ಎಂದಿಗಾದರೂ ಎಲುಬು ಕರಗಿದ್ದುಂಟೇ ? ಬದುಕಿನುದ್ದಕ್ಕೂ ಅಸ್ತಿತ್ವದ ಕುರುಹಾಗಿಯೇ ಕಾಡುವವು. ಕಹಿ ನೆನಪುಗಳ ಸಾಕ್ಷಿಗೆ ಇವು ಬದುಕಿವೆ. ದೂರದ ಬೆಟ್ಟ ನುಣ್ಣಗೆ ಎನ್ನುವ ಹಾಗೆಯೇ ಇವರ ಜೀವನ. ಹೊಸ ಹೊಸ ಕನಸು ಕಟ್ಟುವವರಂತೆ ತೋರುತ್ತಾರೆ. ಮೊಗ್ಗು ಅರಳುವ ಮೊದಲೇ ನೆಲವನ್ನಪ್ಪುತ್ತದೆ. ವಾಸ್ತವದ ಕುರ್ಚಿ ಮೇಲೆ ಕೂತು ಹೊಸ ಹೊಸ ಕನಸು ಕಟ್ಟಬಹುದೇನೋ ? ಆದರೆ ಸೀದು ಹೋದ ಬಾಣಲಿಯಲ್ಲಿ ಏನು ಹಾಕಿದರೂ ಸುಟ್ಟ ವಾಸನೆಯೇ…

ಬದುಕಬೇಕೇ? ಏಕೆ ? ಎಂಬ ಪ್ರಶ್ನೆಯನ್ನು ದಿನಕ್ಕೆ ಮೂವತ್ತೈದು ಬಾರಿ ಹಾಕಿಕೊಳ್ಳುತ್ತಾ ಬದುಕುತ್ತಾರೆ. ಉತ್ತರ ಸಿಗದು. ಹಾಗೆಂದು ಬದುಕುವುದನ್ನು ಬಿಟ್ಟಿಲ್ಲ. ಉತ್ತರವಿಲ್ಲದ ದಿಕ್ಕಿಗೆ, ಬದುಕಿಗೆ ಒಂದು “ಉತ್ತರ’ ವಾಗಿ ಬದುಕುತ್ತಿದ್ದಾರೆ. ಎಂದೂ ಇವರಿಗೆ ಬದುಕು ಉತ್ತರ ಮುಖಿಯಾಗಿಲ್ಲ ; ಸದಾ ಪ್ರಶ್ನಾಮುಖಿ. ನಿರೀಕ್ಷೆಗಳಿಗೆ ಪೂರ್ಣವಿರಾಮ ಹೆಳಿ ಅವರೀಗ ಕಾಲಚಕ್ರಕ್ಕೆ ಶರಣಾಗತ.

ಉದ್ದ ಲಂಗ ; ತಲೆಗೆ ಸ್ವಲ್ಪ ಎಣ್ಣೆ ; ಎರಡು ಜಡೆಯ ಅಲಂಕಾರ, ಹೆಗಲಿಗೊಂದು ಪಾಟೀಚೀಲ. ಹದಿನಾಲ್ಕರ ಮಗ್ಗಿ ಉರು ಹೊಡೆಯುವ ಮಕ್ಕಳಿಗೆ ಬೇರೊಂದು ಬದುಕಿದೆ. ಶಾಲೇಲಿ ಕಲಿಯುವುದಕ್ಕಿಂತ ಬದುಕ ಪಾಠ ಕಲೀಬೇಕಿದೆ.

ಅದಕ್ಕೆ ಒಬ್ಬ ಕುಲುಮೆಯಲ್ಲಿ ಗಾಳಿ ಊದುತ್ತಾ, ತನ್ನ ಬದುಕಿನ ಕನಸಿನ ಪುಗ್ಗೆಗೆ ಗಾಳಿ ತುಂಬುತ್ತಿದ್ದಾನೆ. ಮತ್ತೊಬ್ಬಳು ಬೆಂಕಿಪೆಟ್ಟಿಗೆ ಕಟ್ಟಲು ಹೋಗಿದ್ದಾಳೆ, ಅಲ್ಲಿಯೂ ಆತಳದ್ದು ಕನಸು ಹುಡುಕುವ ಕಾಯಕವೇ. ಮಗದೊಬ್ಬಳು ಕನಸು ಕೊಂಡು ಬರಲು ಊರ ಪಟೇಲರ ಮನೇಲಿ ಬಚ್ಚಲು ತೊಳೆಯುತ್ತಿದ್ದಾಳೆ. ಅರೆ ಕ್ಷಣದಲ್ಲಿ ಕನಸೆಂಬ ಇಬ್ಬನಿ ಕರಗಿ ಹನಿ. ಆ ಪುಟ್ಟ ಹನಿಯಲ್ಲೇ ಬೊಗಸೆಯ ಬದುಕನ್ನು ತುಂಬಿಕೊಳ್ಳಬೇಕು. ಮತ್ತದರೊಳಗೆ ಸೋರಿಹೋಗುವುದೆಷ್ಟೋ ?
ಸಿಕ್ಕಿದ್ದಷ್ಟಕ್ಕೇ ಸಮಾಧಾನ.  (ನನ್ನೊಂದಿಗೆ ಚಿಕ್ಕಂದಿನಲ್ಲಿ ದುಡಿಯುತ್ತಿದ್ದ ಹುಡುಗನೊಬ್ಬನ ಕುರಿತು)

ಸೂಜಿಗಳದ್ದೇ ಬದುಕು !

ನೋಡಿದರೆ ನಿಮಗೇ ಆಶ್ಚರ್ಯ ! ಆ ಕಿಶೋರಿ ಕಂಗಳಲ್ಲಿ ಉತ್ಸಾಹದ ದೀಪ ಕುಣಿಯುತ್ತಿದೆ. ಪುಟ್ಟನ ನಗು ನಿಮ್ಮನ್ನೂ ಮಣಿಸಿ ಬಿಡುತ್ತದೆ. ಮತ್ತೊಬ್ಬ ಪುಟ್ಟಿಯ ಗಲ್ಲದ ಮೂಲೆಯಲ್ಲಿ ಬೀಳುವ ಗುಳಿ, ಒಮ್ಮಲೆ ೨೦ ವರ್ಷ ಚಿಕ್ಕವರನ್ನಾಗಿಸಬಹುದು. ಕಿಶೋರನ ಪ್ರತಿ ಮಾತಿಗೂ ಬಿದ್ದು ಬಿದ್ದು ನಗಬೇಕು, ನಕ್ಕಷ್ಟು ಆಯಸ್ಸು ಹೆಚ್ಚಂತೆ.

ಜಗತ್ತು ತೆರೆದುಕೊಂಡ ಬಗೆಯೇ ಇವರಿಗೆ ತಿಳಿದಿಲ್ಲ. ಮುಗ್ಧತೆಯ ಮುಂದೆ ಒಳ್ಳೆಯದು, ಕೆಟ್ಟದು, ಸಿಹಿ-ಕಹಿಯ ಪುರಾಣ ಹೇಳಿದರೆ ಹೇಗೆ ? ಮಗುವಿಗೆ ಏನೂ ತಿಳಿಯದು. ಪುಟ್ಟನಿಗೆ ಚಾಕಲೇಟು ನೀಡಲು ಹೋದರೆ, “ಮಾಮಾ, ಚಾಕಲೇಟು ತಿನ್ನಬಾರದು. ಹೊಟ್ಟೆಯೊಳಗೆ ಹುಳಗಳು ಆಗ್ತಾವಂತೆ’ ಎಂದು ಪ್ರಬುದ್ಧತೆ ಉಪದೇಶ ಹೇಳುತ್ತಾನೆ. ಅದು ಸಿಹಿ ಜಗತ್ತಿನಿಂದ ಆ ದೇವರನ್ನು ದೂರವಿರಿಸಲು ಅಪ್ಪ-ಅಮ್ಮ ಕಲಿಸಿದ ಪಾಠ. ಏನೂ ಅರಿಯದ ಮಗು ಗಿಳಿಪಾಠದಂತೆ ಒಪ್ಪಿಸುತ್ತದೆ.

ಸಿಹಿ ನೀಡುವ ಎಲ್ಲಾ ಮಂದಿಯ ಮುಂದೂ ಅದನ್ನೇ ಆತ ಒಪ್ಪಿಸಬೇಕು. ರುಚಿಯೇ ಅರಿಯದ ವಯಸ್ಸಿಗೇ ನಾಲಿಗೆಗೆ ಲಗಾಮು ಹಾಕಿ ಸಿಹಿ-ಕಹಿಯ ಪಾಠ ಹೇಳಿಕೊಡಬೇಕು. ಸಿಹಿ ಬಯಸುವ ಮನಸ್ಸಿಗೆ ಚಪ್ಪೆಯ ಮಂತ್ರ. ಮಧುಮೇಹದ ರೋಗ ಹೊತ್ತು “ಮಧು’ ವಿಗೆ ಟಾಟಾ ಹೇಳಿ ಸುಮ್ಮನಾಗಬೇಕು. ಎಷ್ಟೊಂದು ಕಂದಗಳು ಹೀಗೇ ಸೀರಿಯಸ್ ಆಗಿ “ದೊಡ್ಡವರಂತೆ’ ಬದುಕಬೇಕು ?

ಸಿಹಿ ತಿನ್ನಲು ಎಲ್ಲರೂ ಹೇಳುವ ಕಾಲದಲ್ಲಿ ಕಹಿಯೊಂದಿಗಿನ ಜೀವನ. ಬಾಯಿಗೆ ಬೇವು ಬೆಲ್ಲದ ಪಾಠ ಹೇಳಬೇಕಾದ ಸ್ಥಿತಿ. ಪಾಠದಲ್ಲೂ ಬೇವಿಗೇ ಹೆಚ್ಚು “ಒತ್ತು’ ನೀಡಬೇಕು. ಸಿಹಿ ಕೊಟ್ಟರೆ ಮತ್ತೆರಡು ಸೂಜಿ ಹೆಚ್ಚಿಗೆ. ಸಕ್ಕರೆ ಆಂಶ ಶಕ್ತಿಯಾಗಿ ಪರಿವರ್ತನೆಯಾಗದಿದ್ದಕ್ಕೆ ಶಿಕ್ಷೆ. ಜಗದ ಅಪ್ಪ ಕೊಟ್ಟ ಕಾಲ ಸೋರಿಹೋಗುವ ಮುನ್ನ ಸಿಹಿಗೆ ಬಾಯಿ ಬಂದ್ ಮಾಡುವುದು ಹೇಗೋ ಸಾಧ್ಯವಾಗಬಹುದು. ಆದರೆ ಇದ್ದ ಲೆಕ್ಕವನ್ನೆಲ್ಲಾ ಬದಿಗೆ ಸರಿಸಿ ಬರೀ ವ್ಯವಕಲನದಲ್ಲಿ ಬದುಕು ಕಳೆಯುವುದೆಂದರೆ ನಿಜಕ್ಕೂ ಬೇವೇ.

ಬೆಳಗ್ಗೆಯಾದ ಕೂಡಲೇ ಒಂದು ಇನ್ಸುಲಿನ್. ಮನಸ್ಸಿಗೆ ಇಷ್ಟವೋ, ಇಲ್ಲವೋ ? ಇನ್ನಷ್ಟು ದಿನ ಇರಲಿಕ್ಕೆ ಇದೇ ಆಸರೆ. ಸೂಜಿ ಚುಚ್ಚಲು ಬಂದ ಅಮ್ಮನಿಗೆ ಮಗು ಹೇಳುತ್ತದೆ, “ನೋಯುತ್ತೆ. ಸೂಜಿ ಬೇಡ’. ಅದಕ್ಕೆ ಅಮ್ಮ, “ಇಲ್ಲ ಪುಟ್ಟಿ, ಇರುವೆ ಕಚ್ಚಿದ ಹಾಗೆ, ಏನೂ ಅನಿಸೋದೇ ಇಲ್ಲ’ ಎನ್ನುತ್ತಾ ಕಚಗುಳಿ ಇಡುತ್ತಾಳೆ.

ಮಗುವಿನ ತೋಳಿನಲ್ಲಿ ಸೂಜಿ ಚುಚ್ಚಿದ ರಂಧ್ರಗಳು. ಅದರೊಳಗೆ ಅಳು ನುಂಗಿ ನಗುವ ಮಗುವಿನ ಮುದ್ದು ಮುಖ ಮತ್ತು ಎಲ್ಲರೂ ಹೇಳಿದ್ದನ್ನು ನಂಬಿದ ಮುಗ್ಧತೆಯ ಅನಾವರಣ !
(ಇನ್ಸುಲಿನ್ ಅವಲಂಬಿತ ಮಕ್ಕಳನ್ನು ಹಿಂದೆ ಭೇಟಿಯಾಗಿದ್ದಾಗ ನನ್ನೊಳಗೆ ಹೊರಟ ವಿಷಾದವಿದು)

ಹೊಸ ವರ್ಷ ಬಿಡಿಸಲಿ ಶುಭದ ರಂಗೋಲಿ

ಬದುಕ ಅಂಬರದಲ್ಲಿ
ಸಂಬಂಧದ ಸೂರ್‍ಯ
ಉರಿಯತ್ತಿದ್ದಾನೆ
ಅವನ ಬೆಳಕ ಹೀರಿ
ನಾವೆಲ್ಲಾ ತಾರೆಗಳಾಗಿ
ಪ್ರಕಾಶಿಸುತ್ತಿದ್ದೇವೆ
ಅವನು ಸದಾ
ಉರಿಯುತ್ತಿರಲಿ
ನಾವೂ ಹೀಗೆ
ಬೆಳಗುತ್ತಿರೋಣ
ಎಲ್ಲರಿಗೂ ಹೊಸ ವರ್ಷದ ಶುಭಾಷಯಗಳು.

ಸುಕ್ಕಿನ ಮೊಹರು

ಈ ವಶೀಲಿ ಮುಂದೆ ಯಾರೂ, ಯಾವುದೂ ಪ್ರಾಮಾಣಿಕವಲ್ಲ; ಸ್ಥಿರವಲ್ಲ; ಎಲ್ಲವೂ ಚರ. ಕರಗಬೇಕು; ನೀರಾಗಿ ಹರಿಯಬೇಕು; ಹರಿದು ಸರಿಯಬೇಕು. ಮುಂದಕ್ಕೆ ಹೋಗಿ ಇನ್ನೇನೋ ಆಗಬೇಕು. ಹೀಗೆ ಇರುತ್ತೇವೆಂಬ ಹಠವ ಬಿಟ್ಟು .
ಬೀಜ ಮೊಳೆತು ಹೂ ಬಿಟ್ಟು ಕಾಯಿ ಮಾಗಿ ಹಣ್ಣಾಗಿ ಮತ್ತೊಂದು ಜೀವ. ತರ ತರದ ಭಾವ. ಅದಕ್ಕೆ ತಕ್ಕನಾದ ಹಾವಭಾವ. ಅರಿತು ಬೆರೆಯುವ ಸಮಭಾವ. ನಡು ನಡುವೆಯೇ ಸಮಸ್ಥಿತಿಯ ಅಭಾವ. ಅಭಾವದೊಳಗೂ ಮತ್ತೊಂದು ಭಾವ. ಎಲ್ಲಕ್ಕೂ ಬದಲಾವಣೆಯ ಪ್ರಭಾವ.
ಆತ ಮೊದಲು ಹೇಗಿದ್ದ ? ಬಾಲ್ಯದ ಹೊಳೆಯಲಿ ಹೇಗೆ ಈಜುತ್ತಿದ್ದ, ಮೊದಲ ಬಾರಿಗೆ ನಾವೆ ನಡೆಸುವ ನಾವಿಕನಂತೆ. ಅಜ್ಜಿಯ ಕವಳಸಂಚಿಯ ಕದ್ದು ಕಾಟ ಕೊಡುತ್ತಿದ್ದ. ಕೇರಿ ಹುಡುಗರಿಗೆ ಹೊಡೆದು ದೂರು ತರುತ್ತಿದ್ದ. ಗದ್ದೆ ಬದು ನೀರು ತಿರುಗಿಸಿ ಅಪ್ಪನ ದೊಣ್ಣೆಗೆ ಕೆಲಸ ಕೊಡುತ್ತಿದ್ದ. ಅಕ್ಕನ ಜಡೆ ಎಳೆದು ಮೂಲೆಗೆ ಹೋಗಿ ಬಚ್ಚಿಟ್ಟುಕೊಳ್ಳು ತ್ತಿದ್ದವನಿಗೆ ಏನಾಗಿದೆ ? ಹದಿನೆಂಟು ತುಂಬಿದೆ.
ಈಗ ಇನ್ನು ಏನೋ ಆಗಿದ್ದಾನೆ. ಚೆಲ್ಲು ಚೆಲ್ಲು ಮಾತನಾಡುತ್ತಾ, ಹುಡುಗಿಯರ ಹಿಂದೆ ಬಿದ್ದಿದ್ದಾನೆ. ಸರಸೂ ನಾಳೆ ಬಾರದಿದ್ದರೆ ಈತನಿಗೆ ಕ್ಲಾಸು ಬೋರು. ಮುಂದಿನ ಬೆಂಚಿನ ವೀಣಾ ಗೈರು ಹಾಜರಿಯಾದರೆ ಇವನ ಬಾಯಿಗೆ ಬೀಗ.. ವೆಂಕಣ್ಣನ ಜತೆ ನಿತ್ಯವೂ ಜಗಳ. ಟೀಚರ್ ಬೆನ್ನಿಗೆ ರಾಕೆಟ್ ಹಾರಿಸದ ದಿನವಿಲ್ಲ. ಇಂಥವನಿಗೆ ನಾಳೆ ಇಪ್ಪತ್ತೆಂಟು ತುಂಬುತ್ತದೆ.
ಒಮ್ಮೆಲೆ ಮುಖ ಗಂಭೀರ. ಮುಖದ ಮೇಲಿನ ಕೂದಲಿಗೂ ಗಂಭೀರತೆಯ ಛಾಯೆ. ಜವಾಬ್ದಾರಿಯ ಮಾತಿನ ಕಣಜವೇ ಅವನದು. ಉಡಾಫೆ ಮಾಡುವುದು ಮರೆತ. ಪ್ರತಿಯೊಂದೂ ಲೆಕ್ಕಾಚಾರ. ತೂಗಿ ತೂಗಿ ಮಾತನಾಡಲು ಅಳತೆಗೋಲು ಇಟ್ಟುಕೊಂಡಿದ್ದಾನೆ. ತತ್ತ್ವ, ಸಿದ್ಧಾಂತಗಳ ಜತೆ ಖಯಾಲಿ ಬೆಳೆಸಿದ್ದಾನೆ. ಪ್ರತಿಕ್ಷಣವೂ ‘ಸೀರಿಯಸ್ ’ಗುಳಿಗೆ ನುಂಗಿದವನಿಗೆ ಐವತ್ತು ದಾಟಿದರೆ ?
ಹೆಗಲಿಗೆ ಬಂದ ಮಗನಿಗೆ ಕೆಲಸ ಸಿಕ್ಕಿತು, ಆದರೆ ಹದಿನೆಂಟು ತುಂಬಿದ ಮಗಳಿಗೆ ಸರಿಯಾದ ಹುಡುಗ ಸಿಗಲಿಲ್ಲ. ಅಂತೂ ಸಿಕ್ಕಾಗ ಹೀಗಿದ್ದರೆ ಚೆನ್ನ, ಹೀಗಿರಬಾರದಿತ್ತು ಎಂಬುದರ ತಾಕಲಾಟ. ಏನೋ ಒಂದು ನಿರ್ಧಾರ. ಒಮ್ಮೆ ಖುಷಿ. ಮತ್ತೊಮ್ಮೆ ಎದೆ ಭಾರ. ಮಗದೊಮ್ಮೆ ವಿಚಾರ. ಎಲ್ಲಾ ಅಯೋಮಯ. ಇಷ್ಟೆಲ್ಲಾ ಮುಗಿಯುವಾಗ ಭೋಗ್ಯದ ಮನೆಯ ವಯಸ್ಸು ಮುಗಿಯಬೇಕೇ ?
ಎಲ್ಲಾ ಮರೆತವನು ಜ್ಞಾಪಕ ಚಿತ್ರಶಾಲೆಯ ಒಳಹೊಕ್ಕುತ್ತಾನೆ. ಒಂದೊಂದೇ ಚಿತ್ರಪಟಗಳ ಧೂಳು ಒರೆಸಿ ಅದರ ಅಂದ ಸವಿಯುತ್ತಾನೆ. ತನ್ನ ರೂಪಕೆ ತಾನೇ ಸೋತು ಪ್ರೀತಿಸುತ್ತಾನೆ. ವಾಸ್ತವಕ್ಕೆ ಬಂದು ಬಿಳಿ ಕೂದಲಿಗೆ ಕಪ್ಪು ಬಳಿಯತೊಡಗುತ್ತಾನೆ. ಪತ್ನಿ ಜತೆಗೆ ಸಣ್ಣ ವಾಕ್ ಹೊರಟು ಸಮರಸವೇ ಜೀವನ ಎಂದು ಉಲಿಯುತ್ತಾನೆ. ಹೀಗೆ ವಶೀಲಿಗೆ ಮಣಿದು ಏನೇನೂ ಆಗಿಬಿಡುತ್ತಾನೆ. ವಯಸ್ಸು ಒತ್ತಿದ ಮೊಹರಿನ ಬಣ್ಣ ‘ಸುಕ್ಕು’.

ಕನಸಿನ ಬಿಕರಿ

ರಸ್ತೆಯಲ್ಲಿ ಇದ್ದಕ್ಕಿದ್ದಂತೆ ಜೀವಗಳ ಜಾಮ್. ಅಂಟಿ ಕುಳಿತಂತಿದೆ ಒಂದಕ್ಕೊಂದು. ಒಬ್ಬರ ಹಿಂದೆ ಮತ್ತೊಬ್ಬರು. ದೂರದಿಂದ ಕಾಣುವವರಿಗೆ ಜೀವಗಳ ಪಂಕ್ತಿ. ಸೀಮೆಎಣ್ಣೆಗೆ ನಸುಕಿನಲ್ಲೇ ಕ್ಯೂ ನಿಂತವರ ಹಾಗೆ. ಬಹಳ ಹೊತ್ತಿನಿಂದ ಎಲ್ಲರೂ ಕಾಯುತ್ತಲೇ ಇದ್ದಾರೆ. ಬಿಸಿ ನೀರಿನ ಕುದಿಬಿಂದುವಿನಂತೆ. ಇನ್ನೂ ಅವನೇಕೆ ಬರಲಿಲ್ಲ?
ಯಾರಿಗೆ ಗೊತ್ತು ? ಎಲ್ಲಿ ತಡವಾಗಿದೆಯೋ ? ಯಾರ ಬಳಿ ಕನಸು ಮಾರುತ್ತಾ ಹರಟಿಕೊಂಡು ಕುಳಿತನೋ? ಆ ಕನಸಿಗ. ಎಲ್ಲರೂ ಅವನ ಕನಸಿನ ಗಿರಾಕಿಗಳು. ಪ್ರತಿದಿನಾ ಕನಸು ಕೊಂಡೇ ಬದುಕುತ್ತಾರೆ. ಕನಸೇ ಬದುಕಾಗಿದ್ದವರಿಗೆ ಇಂದು ಮಾತ್ರ “ಬದುಕೇ ಕನಸು’. ಆದರೂ ನಿರೀಕ್ಷೆಯ ಜಲಬಿಂದು ಆಕಾಶಪ್ಪನ ತುತ್ತಾಗಿಲ್ಲ !
ಅವನು ಹೀಗೆ. ಸುಮ್ಮನೆ ಬರುತ್ತಿದ್ದ. ಹೆಗಲಿಗೆ ಜೋತುಬಿದ್ದ ಚೀಲ ಮುಂದೆ ಚಾಚಿ “ಕೊಳ್ಳಿರಿ, ಕೊಳ್ಳಿರಿ’ ಎಂದು ಕರೆಯುತ್ತಿದ್ದ. ಸಾಲುಗಟ್ಟಿ ನಿಲ್ಲುತ್ತಿದ್ದರು. ಅವರವರ ಭಾವಕ್ಕೆ ತಕ್ಕಂತ ಕನಸು ಮಾರಿ ಭೋಳೇಶಂಕರನಂತೆ ಹೊರಟು ಬಿಡುತ್ತಿದ್ದ. ಮತ್ತೆ ನಾಳೆ ಮತ್ತಷ್ಟು ಕನಸುಗಳೊಂದಿಗೆ ಹಾಜರು. ಯಾರ ಬಳಿಯೂ ನಯಾ ಪೈಸೆ ಪಡೆದವನಲ್ಲ, ಬದಲಿಗೆ ಬದುಕೇ ಅವನದು.
ನಿವೃತ್ತಿ ಅಂಚಿನ ನೌಕರನಿಗೆ ಮಗಳ ಮದುವೆಗೆಂದು ವಿಮಾ ಪಾಲಿಸಿಯ ಕನಸು, ದಿನವೂ ಜಗಳವಾಡುತ್ತಿದ್ದ ಅತ್ತೆಗೊಂದು ಕನಸು, ಹಸಿದು ಬೀಳುತ್ತಿದ್ದವನಿಗೇ ಹಸಿವೇ ಆಗದಂಥ ಕನಸು, ಎರಡೆರಡು ಬಾರಿ ಮೋಸ ಹೋದ ಪ್ರೇಮಿಗೂ ಮತ್ತೆ ಪ್ರೀತಿಸುವ ಕನಸು, ಕುಲುಮೆ ಮುಂದೆ ಕನಸ ಕಮರಿಸಿಕೊಂಡ ಬಾಲ ಕಾರ್ಮಿಕನಿಗೂ ಒಂದು ಹೊಸ ಕನಸು, ತಬ್ಬಲಿಯಾದವನಿಗೆ ಬೆಳಕಿನ ಕನಸು…ಎಷ್ಟೊಂದು ಕನಸು ಅವನಲ್ಲಿ. ಬದುಕಿನ ಪುಸ್ತಕ ಮುಚ್ಚಿಡುವ ವಯಸ್ಸಿನವರಿಗೂ ಕನಸಿದೆ, ಅಷ್ಟೇ ಅಲ್ಲ ; ಅದರಲ್ಲೂ ಬಣ್ಣಗಳ ಆಯ್ಕೆ.
ಅವನ ಕಸುಬೇ ಅಷ್ಟು. ರಾತ್ರಿ ಹೊತ್ತು ಕನಸು ಕಾಣುವುದು, ಕೈಗೆ ಸಿಕ್ಕಿದ್ದನ್ನೆಲ್ಲಾ ಚೀಲಕ್ಕೆ ತುಂಬಿಕೊಳ್ಳುವುದು, ಬಣ್ಣದ ಮೇಲೆ ಚೀಲದೊಳಗಿನ ಮಿನಿ ಚೀಲಗಳಿಗೆ ವರ್ಗೀಕರಿಸಿ “ಇದು ಅವಳದ್ದು, ಅದು ಅವನದ್ದು’ ಎಂದು ನೇಮ್ ಪ್ಲೇಟ್ ತೂಗಿ ಹಾಕವುದು. ಮುಂಜಾನೆ ಚೀಲ ಹೊತ್ತು ರಸ್ತೆಗಿಳಿಯುವುದು, ಕನಸ ಮಾರುವುದು.
ಕನಸಿಗ ಇಂದೇಕೋ ಕಮ್ಮನೆ. “ಕೊಳ್ಳಿರಿ’ ಎಂದೇ ಕರೆಯುತ್ತಿಲ್ಲ. ಕನಸಿನ ಬಣ್ಣ ಕೂಗಿ ಹೇಳುತ್ತಿಲ್ಲ. ಅದಕ್ಕೆ ಅವ ಬಂದದ್ದೇ ಇವರ್‍ಯಾರ ಗಮನಕ್ಕೂ ಬರಲಿಲ್ಲ. ಇಷ್ಟೂ ದಿನ ಕಂಡ ಕನಸನ್ನೆಲ್ಲಾ ಮಾರುತ್ತಾ ಬಂದವನಿಗೆ ಇಂದು “ಏನೋ ಅನಿಸಿ’ಬಿಟ್ಟಿದೆ. ಸುಮ್ಮನುಳಿದ ಕನಸಿಗನ ಹಿಂದೆ ಕೊಳ್ಳುವವರಿದ್ದಾರೆ.
ಹೊಸ ಬಗೆಯ ಕನಸು ಬೇಕು ಎನ್ನುತ್ತಾ ಆಕಾಶದ ಕಡೆ ಮುಖ ಮಾಡಿ ನಿಂತ. ಕಣ್ಣು ಮುಚ್ಚಿಕೊಂಡ, ಮನಸು ಎಲ್ಲೆಲ್ಲಾ ಸಂಚರಿಸಿತು. ಮೋಡಗಳೆಲ್ಲಾ ಸಂದಿತು. ಕತ್ತಲು ಕಳೆಗಟ್ಟಿತು. ಈಗ ನಕ್ಷತ್ರಗಳಿಗೂ ಹೊಸ ಬಣ್ಣ. ಇದ್ದಕ್ಕಿದ್ದಂತೆ ಕನಸುಗಾರ ಕೂಗ ತೊಡಗಿದ. ಈ ಕನಸು ಯಾರಿಗೆ ಬೇಕು ? “ಒಂಟಿ ಆಕಾಶದಲ್ಲಿ ಎಷ್ಟೊಂದು ತಾರೆಗಳು. ಎಣಿಸಿ ಹೇಳಲು ಸ್ವಲ್ಪ ಸಮಯ ಬೇಕು’.