ಅಮ್ಮ ಬಂದಿದ್ದಾಳೆ…ಉತ್ಸಾಹ ತಂದಿದ್ದಾಳೆ !

ಸುಮಾರು ಮೂರು ತಿಂಗಳ ಕಾಲ ಬೆಂಗಳೂರಿನ ನನ್ನಣ್ಣನ ಮನೆಯಲ್ಲಿದ್ದು ಈಗ ಮತ್ತೆ ಪುತ್ತೂರಿಗೆ ವಾಪಸಾಗಿದ್ದಾಳೆ ನನ್ನ ಅಮ್ಮ. ಬರುವಾಗ ಸುಮ್ಮನೆ ಬಂದಿಲ್ಲ, ಒಂದಿಷ್ಟು ಉತ್ಸಾಹವನ್ನೂ ತಂದಿದ್ದಾಳೆ. ಅವಳೀಗ ಮತ್ತೊಂದು ಸಂಭ್ರಮದಲ್ಲಿದ್ದಾಳೆ…ಅವಳ ಮಡಿಲಿಗೆ ಮತ್ತೊಬ್ಬಳು ಮೊಮ್ಮಗಳು ಬಂದಿದ್ದಾಳೆ.

ನನ್ನ ತಮ್ಮ ರಾಘವೇಂದ್ರ-ಮಂಜುಳಾ ದಂಪತಿಗೆ ಹೆಣ್ಣು ಮಗುವಾಗಿದೆ. ನಾಳೆ ಹನ್ನೊಂದನೇ ದಿನದಂದು ನಾಮಕರಣ. ಅದಕ್ಕೆ ಹೋಗುವ ಆತುರ ನನ್ನಮ್ಮನಿಗೆ, ಸಾಥ್ ನೀಡಲು ನನ್ನ ಪತ್ನಿ ಸುಧಾ, ಅಕ್ಕ ಗಾಯತ್ರಿ ಎಲ್ಲರೂ ಜತೆಗೂಡುತ್ತಿದ್ದಾರೆ.

ಅಮ್ಮ ಸೋತಿದ್ದಿಲ್ಲ. ಅತ್ಯಂತ ಕಷ್ಟ ಕಾಲದಲ್ಲೂ ಅಂಗಡಿ ನಡೆಸಿಕೊಂಡು, ಓಡಾಡಿ ಸಾಮಾನು ತರಿಸಿ ಮಾರಿಕೊಂಡು ನಮ್ಮನ್ನು ಸಾಕಿದವಳು. ಹಾಗೆ ನೋಡಿದರೆ, ಅಪ್ಪನದ್ದೇನಿದ್ದರೂ ಉಸ್ತುವಾರಿಯಷ್ಟೇ, ನಿರ್ವಹಣೆಯೆಲ್ಲಾ ಅಮ್ಮನದ್ದೇ. ನನ್ನಪ್ಪನ ತಲೆಮಾರಿನ ಎಲ್ಲರ ಮನೆಯಲ್ಲೂ ಇದೇ ಪರಿಸ್ಥಿತಿ. ಒಂದು ಮಾತಿದೆ…ಅಪ್ಪ ಕಳೆದುಹೋದ ಮೇಲೆ ಅಮ್ಮನ ಬೆಲೆ ಗೊತ್ತಾಗುತ್ತೆ. ಈ ಮಾತು ಅಕ್ಷರಶಃ ನಿಜವೆನಿಸಿದ್ದು ಇತ್ತೀಚಿನ ಮೂರು ತಿಂಗಳಲ್ಲಿ. ನನ್ನ ಮಗಳು ಮಿತ್ರವಿಂದಾಗೆ ಅಜ್ಜಿ ಇರಲೇಬೇಕು, ಆಕೆಗೂ ಬೇಸರ. ಅಮ್ಮನಿಗೂ ಅವಳಿಲ್ಲದ್ದು ಬೇಸರ. ನನಗಂತೂ ಅಮ್ಮನೊಂದಿಗೆ ಜಗಳವಾಡದೇ ಬೇಸರವಾಗಿ ಹೋಗಿದೆ. ಆಕೆ ಕೊಂಚ ಹಠವಾದಿ, ನಾನೂ ಅವಳ ಮಗನೇ. ಹಾಗಾಗಿ ನನ್ನದೂ ಸ್ವಲ್ಪ ಹಗ್ಗ ಹಿಡಿದೆಳೆಯುವ ಅಭ್ಯಾಸ. ಒಮ್ಮೊಮ್ಮೆ ಹಗ್ಗ ಜಗ್ಗಾಟ ನಡೆದೇ ಇರುತ್ತಿತ್ತು. ಬದುಕೆಂದರೆ ಅವೆಲ್ಲಾ ಇರಬೇಕೆಂದು ಎಣಿಸುವವನು ನಾನು. ಹಾಗಾಗಿ ಅದ್ಯಾವತ್ತೂ ಅಪಾಯದ ಮಟ್ಟ ಮೀರಿರಲಿಲ್ಲ. ಅಣೆಕಟ್ಟುಗಳಲ್ಲಿ ಅಪಾಯದ ಮಟ್ಟ ಮುಟ್ಟಿದಕೂಡಲೇ ಕ್ರೆಸ್ಟ್ ಗೇಟ್ ಗಳ ಮೂಲಕ ನದಿಗೆ ನೀರು ಬಿಡುವುದು ಪದ್ಧತಿ. ನಮ್ಮ ಮನೆಯಲ್ಲೂ ಅದೇ ಸಂಪ್ರದಾಯ…!

ಸಣ್ಣದೊಂದು ಕಾಯಿಲೆಯಿಂದ ಬೆಂಗಳೂರಿಗೆ ಚಿಕಿತ್ಸೆಗೆಂದು ತೆರಳಿದ ಅಮ್ಮ ಗುಣಮುಖರಾಗಲು ಮೂರು ತಿಂಗಳು ಬೇಕಾಯಿತು. ಇಬ್ಬರು ನನ್ನಣ್ಣ-ಅತ್ತಿಗೆಯಂದಿರು ಅವರನ್ನು ಚೆನ್ನಾಗಿ ನೋಡಿ ಆರೈಕೆ ಮಾಡಿ ಕಳುಹಿಸಿದ್ದಾರೆ. ಅವರಿಗೆ ಧನ್ಯವಾದಗಳನ್ನು ಹೇಳಲೇಬೇಕು. ಕಾರಣ,ನನಗೆ ಅಷ್ಟೊಂದು ದಿನ ರಜೆ ಹಾಕಿಕೊಂಡು ಅಲ್ಲಿ ಹೋಗಿರುವುದು ಕಷ್ಟ. ಅವೆಲ್ಲಾ ನಿರ್ವಹಣೆಯನ್ನು ನನ್ನಣ್ಣ ನರಸಿಂಹ ಮತ್ತು ವಿವೇಕಾನಂದ ಮುಗಿಸಿದ್ದಾರೆ. ಅವರಿಗೆ ಅತ್ತಿಗೆಯಂದಿರಾದ ವೇದಾವತಿ, ಸುಶೀಲ ಸಾಥ್ ನೀಡಿದ್ದಾರೆ. ಅಂದ ಹಾಗೆ ನನ್ನಣ್ಣನ ಮಗಳು ನಿವೇದಿತಾ ಈಗ 2 ನೇ ಪಿಯುಸಿ, ಮಗ ಆದಿತ್ಯ 9 ನೇ ತರಗತಿ. ಹಾಗಾಗಿ ಹೆಚ್ಚೂ ಕಡಿಮೆ ಮನೆಯಲ್ಲಿ ಕರ್ಫ್ಯೂ !

ನಾನೂ ಮಂಗಳೂರಿಗೆ ಬಂದ ಮೇಲೆ ಒಂದಿಷ್ಟು ಕೆಲಸಕ್ಕೆ ಅಡ್ಜಸ್ಟ್ ಆಗುವುದರಲ್ಲಿದ್ದೆ, ಈಗಿನ್ನೂ ಸಂಪೂರ್ಣವಾಗಿ ಆಗಿಲ್ಲ. ಜತೆಗೆ ಮನೆಯಲ್ಲೂ ಇಂಟರ್ ನೆಟ್ ಸಂಪರ್ಕ ಇರಲಿಲ್ಲ. ಮೊನ್ನೆಯಷ್ಟೇ ಬಂದಿತು. ಈ ಮಧ್ಯೆ ಒಂದಿಷ್ಟು ಸಿನಿಮಾ ನೋಡಿದೆ, ಕೆಲವು ಪುಸ್ತಕ ಓದಿದೆ. ಅದರಲ್ಲಿ ಕೆಲವು ಮರು ಓದು ಸಹ ಸೇರಿದೆ. ಇಷ್ಟೆಲ್ಲದರ ಮಧ್ಯೆ ಮತ್ತೊಂದು ಚಿತ್ರೋತ್ಸವಕ್ಕೆ ಮನಸ್ಸು ಸಿದ್ಧವಾಗುತ್ತಿದೆ. ಇನ್ನು ನಾನು ಆದಷ್ಟು ಬ್ಲಾಗ್ ನ್ನು ಅಪ್ ಟು ಡೇಟ್ ಮಾಡುವೆ.ನೀವು ಭೇಟಿ ಕೊಡಿ, ಓದಿ, ತಿದ್ದಿ.

ಬದುಕು ಬಣ್ಣ ಕಟ್ಟಿಕೊಳ್ಳುತ್ತಿದೆ !

ನನ್ನ ಮಗನಿಗೆ ಆರು ವರ್ಷ ತುಂಬಿತು. ದೂರದೂರಿನಲ್ಲಿ ಓದುತ್ತಿರುವ ಅವನ ನೆನಪಿನಲ್ಲಿ ಏನೇನೋ ಹಾದು ಹೋಯಿತು. ಅದನ್ನೆಲ್ಲಾ ಇಲ್ಲಿ ಬರೆದಿದ್ದೇನೆ. ಇದು ತೀರಾ ವೈಯಕ್ತಿಕ ನೆಲೆಯದ್ದು.

ಬದುಕೇ ಎಷ್ಟೊಂದು ಅಚ್ಚರಿ. ಪುಟ್ಟ ನವಿಲುಗರಿಯನ್ನು ಎಲ್ಲೆಲ್ಲಿಂದಲೋ ಪಡೆದು ಪುಸ್ತಕದ ಪುಟಗಳ ಮಧ್ಯೆ ಇಟ್ಟುಕೊಳ್ಳುತ್ತಿದ್ದ ಸಂಭ್ರಮ ನಮ್ಮೊಳಗೆ ತುಂಬಿ ಗರಿಯಾಗಿ ಬಿಚ್ಚಿಕೊಳ್ಳುವ ನಾನಾ ಸಂಗತಿ…ಎಲ್ಲ ಮೆಟ್ಟಿಲೇರಿ ನಿಂತಾಗ ಕೆಳಗಿದ್ದವರೆಲ್ಲಾ ಪುಟ್ಟದ್ದಾಗಿಯೇ ಕಾಣುತ್ತಾರೆ. ಅದು ಒಂದು ಬಗೆಯ ಖುಷಿಯೂ ಹೌದು, ದೊಡ್ಡವರಾಗಿದ್ದೇವೆಂಬ ಗಂಭೀರ ಮೊಹರನ್ನು ಒತ್ತಿಕೊಂಡ ಮುಖದಲ್ಲಿ ಕಾಣುವ ಸುಕ್ಕುಗಳೇ ನಮ್ಮನ್ನು ಪ್ರಪಾತಕ್ಕೆ ನೂಕಿ ಬಿಡುತ್ತವೆ. ಬೇಸರದ ಬಾವಿಯಲ್ಲಿ ಒಬ್ಬಂಟಿಗರಾಗುತ್ತೇವೆ. ಮೇಲೆ ಯಾರೋ ಬಂದು ನಮ್ಮನ್ನು ರಕ್ಷಿಸಬಹುದು ಎಂದು ಕಾತರಿಸುತ್ತೇವೆ. ನಿಜ…ಪುಟ್ಟ ಮಕ್ಕಳ ಬೆಳವಣಿಗೆ ಅಂಥದೊಂದು ಊರುಗೋಲಾಗಿ ಬಿಡುತ್ತದೆ. ನಮ್ಮೊಳಗೆ ಒಂದು ಖುಷಿ ತುಂಬುತ್ತದೆ.

ಋತುಪರ್ಣ ಮತ್ತು ಮಿತ್ರವಿಂದಾ


ನನ್ನ ಮಗನಿಗೆ ಆರು ವರ್ಷ ತುಂಬಿತು. ಮುಂದಿನ ಮೇ ನಲ್ಲಿ ಒಂದನೇ ಕ್ಲಾಸಿಗೆ ಸೇರಬೇಕು. ಒಂದಿಷ್ಟು ಹಸಿರಿರುವ, ಉಸಿರಿರುವ ನನ್ನೂರಿನಲ್ಲಿ ಶಾಲೆ ಕಲಿಯುತ್ತಿದ್ದಾನೆ. ಅವನಿಗೆ ಇಂದು ಆರು ವರ್ಷ ತುಂಬಿತು. ಋತುಪರ್ಣನೆಂಬ ಸಂಭ್ರಮದ ಹೆಸರನ್ನು ಹುಡುಕಿ ಇಟ್ಟಾಗ ಬಹಳ ಖುಷಿ ಆವರಿಸಿತ್ತು. ಬ್ರಹ್ಮಾವರದ ಹತ್ತಿರದ ಸಾಲಿಕೇರಿಯಲ್ಲಿ ಅವನ ಶಾಲೆ. ಬೆಳಗ್ಗೆ ೯ ಕ್ಕೆ ಅಮ್ಮಮ್ಮನ ಮನೆಯಿಂದ ಹೊರಟು ಸಂಜೆ ೪ ಕ್ಕೆ ಬರುತ್ತಾನೆ. ಅಲ್ಲಿಯವರೆಗೂ ಓದುವುದಿಲ್ಲ ಎನ್ನುವುದೇ ನನ್ನ ಪಾಲಿನ ಖುಷಿ.

ಒಂದಷ್ಟು ಹೊತ್ತು ಕಲಿಯುತ್ತಾನೆ, ಸ್ವಲ್ಪ ಮಲಗುತ್ತಾನೆ, ಹಾಲು ಕುಡಿದು ವಿರಾಮ ಪಡೆದು ಹೀಗೆ ಕಾಲ ಕಳೆಯುತ್ತಾನೆ. ಪರವಾಗಿಲ್ಲ, ಹಸಿರಿನ ಮಧ್ಯೆ ಅರಳುತ್ತಿದ್ದಾನೆ ಎಂಬುದೇ ಸಣ್ಣ ಖುಷಿ.

ನನ್ನ ಮಗ ಮೊನ್ನೆ ರಾತ್ರಿಯೆಲ್ಲಾ ಕುಳಿತು ಯಕ್ಷಗಾನ (ಆಟ) ನೋಡಿ ಮನೆಗೆ ಬಂದ ಅವನ ಅಜ್ಜನ ಜತೆಗೆ. ಕಣ್ಣು ಭಾರವಾಗಿತ್ತು, ಮಲಗಿಕೊಂಡ. ಮಾರನೆ ದಿನ ಬೆಳಗ್ಗೆ ಶಾಲೆಗೆ ಹೋಗಲಿಲ್ಲ. ನೀವು ಏನೇ ಹೇಳಿ, ನನಗೆ ಆ ಕ್ಷಣ ಖುಷಿಯಾಯಿತು. ನನ್ನ ಮಗನನ್ನು ಬೆಂಬಲಿಸಿದ್ದೂ ನಿಜ. ನಮ್ಮ ಹಾಗೆಯೇ ಅವನೂ ಬೆಳೆಯಬೇಕೆಂಬುದು ನನ್ನ ಹಂಬಲವೂ ಸಹ.

ಭದ್ರಾವತಿಯಲ್ಲಿ (ಆಗ ನಾನು ಐದನೇ ಕ್ಲಾಸು)ಓದುತ್ತಿದ್ದಾಗ ಗಣಪತಿ ಹಬ್ಬ ಬಂತೆಂದರೆ ಬೊಂಬಾಟ್. ಸಾರ್ವಜನಿಕ ಗಣಪತಿ ಪೆಂಡಾಲ್‌ಗಳಲ್ಲಿ ತೋರಿಸುತ್ತಿದ್ದ ಚಲನಚಿತ್ರಗಳನ್ನು ತಪ್ಪಿಸಲು ಮನಸ್ಸಿರುತ್ತಿರಲಿಲ್ಲ. ಚಲನಚಿತ್ರ ಆರಂಭವಾಗುತ್ತಿದ್ದುದೇ ರಾತ್ರಿ ೧೧ಗಂಟೆಗೆ. ಎಲ್ಲರೂ ಊಟ ಮುಗಿಸಿ ಬಂದ ಮೇಲೆ. ಶುರುವಾದ ಮೇಲೆ ಮೂರ‍್ನಾಲ್ಕು ಸಾರಿ ತಾಂತ್ರಿಕ ದೋಷ. ಎಲ್ಲವೂ ಸರಿಹೋಗಿ, ಲಯ ಹಿಡಿಯಿತು ಎನ್ನುವಾಗ ಬರೋಬ್ಬರೀ ಬೆಳಗಿನ ಜಾವ ೨. ೩೦. ನಂತರ ಮುಗಿಯುವಷ್ಟರಲ್ಲಿ ನಾಲ್ಕು ಸಹಜವೇ. ಹೀಗೇ ನಾನೂ ‘ಶಂಕರ್ ಗುರು’ ಚಿತ್ರ ನೋಡಿಕೊಂಡು ಬಂದು ಹೀಗೇ ಮಾಡಿದ್ದೆ. ಶಾಲೆ ತಪ್ಪಿಸಿಕೊಂಡು ನನ್ನ ದೊಡ್ಡಮ್ಮನ ಬಳಿ ಬೈಯಿಸಿಕೊಂಡಿದ್ದೆ. ಅಂದಿನಿಂದ ದೊಡ್ಡಮ್ಮನ ನಾಲ್ಕು ಕಣ್ಣುಗಳು ನನ್ನನ್ನು ಕಾಯುತ್ತಿದ್ದವು.

ಮತ್ತೆ ಅವರೇ...


ಮಾರನೆ ದಿನ ನನ್ನಮ್ಮ-ಪ್ಪನಿಗೂ ದೂರು ಹೋಗಿಯಾಗಿತ್ತು. ಬಿಡಿ, ಆ ಹೊತ್ತಿನಲ್ಲಿ ಸಿಟ್ಟು ಬಂದರವರ ಎದುರು ನಿಲ್ಲದಿರುವುದೊಂದೇ ಎಲ್ಲ ಸಮಸ್ಯೆಗೂ ಪರಿಹಾರ. ಅದನ್ನೇ ಮಾಡಿ ನಾನೂ ತಪ್ಪಿಸಿಕೊಂಡಿದ್ದೆ. ಹಾಗೆಂದು ನಂತರದ ದಿನಗಳಲ್ಲಿ ಪಿಕ್ಚರ್‌ಗಳನ್ನು ಮಿಸ್ ಮಾಡಿಕೊಳ್ಳಲಿಲ್ಲ, ರಾತ್ರಿ ಸಿನಿಮಾ ನೋಡಿ, ಬೆಳಗ್ಗೆಯೂ ನಿದ್ರೆ ಕಚಗುಡುವುದನ್ನು (ನಿದ್ರೆಗೆಡುವುದು) ಕಲಿತೆ. ನನ್ನ ಮಗ ಹೀಗೇ ಮಾಡಬೇಕೆಂದೇನೂ ಅಲ್ಲ. ಆದರೆ, ನಿದ್ರೆಗೆಟ್ಟು ಆಟವನ್ನು ನೋಡುವ ಮಜಾವೇ ಬೇರೆ. ಅದು ಅವನು ಪಡೆದುಕೊಂಡ ಎನ್ನುವ ಸಂಭ್ರಮ ನನ್ನನ್ನು ಆವರಿಸಿಕೊಂಡಿತ್ತು ಆ ಕ್ಷಣ.

ಸಿಕ್ಕಾಪಟ್ಟೆ ಮಾತನಾಡುತ್ತಾನೆ. ಅವನನ್ನು ನಮ್ಮಿಂದ ದೂರವಿಟ್ಟು ಓದಿಸುವಾಗ ನಮ್ಮಿಬ್ಬರೊಳಗೂ (ಪತ್ನಿ ಸುಧಾ) ಒಂದು ಬಗೆಯ ತಾಕಲಾಟ ಆಗಿದ್ದಿದೆ. ಅವನೊಬ್ಬನೇ ಕಷ್ಟವಾಗುವುದಿಲ್ಲವೇ ? ಬಿಟ್ಟಿರಲು ಸಾಧ್ಯವೇ ? ಇಂಥವೆಲ್ಲಾ ಪ್ರಶ್ನೆಗಳು ಬಂದಿದ್ದವು. ಬಹಳ ಜನರ ಸಲಹೆಯ ಮಧ್ಯೆಯೂ ಇದೇ ನಿರ್ಧಾರವನ್ನು ತೆಗೆದುಕೊಂಡೆವು. ಕೆಲಸದ ಒತ್ತಡದ ಅನಿವಾರ‍್ಯತೆಯೂ ಇತ್ತು. ಆದರೆ ಅದಕ್ಕಿಂತ ಇಂಥದೊಂದು ಯಕ್ಷಗಾನ, ಒಂದಿಷ್ಟು ನದಿ, ಹಸಿರು, ಸಮುದ್ರ…ಹೀಗೇ ನಾವಿರುವಲ್ಲಿ ಇರಲಾರದ್ದನ್ನು ಕಂಡೇ ಬೆಳೆಯುತ್ತಾನೆ ಎಂಬ ಸಮಾಧಾನವಿತ್ತು. ಅದರೊಂದಿಗೆ ನನ್ನ ಮೇಲಿದ್ದ ದೊಡ್ಡ ಹೊಣೆಯೆಂದರೆ ಅವನಿಗೊಂದು ‘ಊರು‘ ಕೊಡಬೇಕಿತ್ತು.

ಒಂದು ಊರಿನಿಂದ ಇನ್ನೊಂದು ಊರಿಗೆ ಹೋಗುವ ಖುಷಿಯೇ ಹೇಳತೀರದ್ದು. ನಾನು ಭದ್ರಾವತಿಯಲ್ಲಿದ್ದರೂ, ಕುಂದಾಪುರಕ್ಕೆ ಹೊರಡುವುದೆಂದರೆ ಅಂಥದ್ದೇ ಒಂದು ಉಮೇದು. ಈಗಲೂ ಅಷ್ಟೇ. ಮೈಸೂರು ಬಿಟ್ಟು ಕುಂದಾಪುರಕ್ಕೆ, ಸಾಲಿಗ್ರಾಮಕ್ಕೆ ಹೊರಡುವುದೆಂದರೆ ಎಲ್ಲಿಲ್ಲದ ಉತ್ಸಾಹ. ಅದೇ ನಮ್ಮನ್ನು ಎಷ್ಟೋ ಬಾರಿ ಉಲ್ಲಸಿತಗೊಳಿಸಿದ್ದಿದೆ. ಇದರರ್ಥ ಇರುವ ಊರಿನ ಬಗ್ಗೆ ಜಿಗುಪ್ಸೆಯಲ್ಲ. ಆದರೆ, ಈ ಸದಾ ಗಿಜಿಗುಡವ ಸಂತೆಯ ಮಧ್ಯೆ ದೂರದಲ್ಲೆಲ್ಲೋ ಕಾಣುವ ಬೆಟ್ಟವೂ ನಮ್ಮದೇ ಎನಿಸಿ, ಅಲ್ಲಿಯೂ ಒಂದಿಷ್ಟು ಹೊತ್ತು ಇರಬಹುದೆಂದು ಹುಟ್ಟಿಸುವ ವಿಶ್ವಾಸ ಹಲವು ಬಾರಿ ನಮ್ಮನ್ನು ದಾಟಿಸಿಬಿಡುತ್ತದೆ. ಅಂಥದೇ ಒಂದು ಉಮೇದಿನಲ್ಲಿ ಅವನನ್ನು ದೂರದ ಸಾಲಿಗ್ರಾಮದಲ್ಲಿ ಓದಲು ಸೇರಿಸಿದೆ.

ಆಗಲೇ ಹೇಳಿದೆನಲ್ಲ, ಸಿಕ್ಕಾಪಟ್ಟೆ ಮಾತನಾಡುತ್ತಾನೆ. ಅದು, ಇದು, ಏನೇನೋ. ತಲೆ ಗಿರ್ರನೆನಬೇಕು ಹಾಗೆ. ಸ್ವಲ್ಪ ಸಂಗೀತವೆಂದರೆ ಇಷ್ಟ. ಒಂದಿಷ್ಟು ಹೊತ್ತು ಕಾರ್ಟೂನ್ ನೋಡಿಕೊಂಡು, ಮನೆಯ ಅಂಗಳದಲ್ಲಿ ಸೈಕಲ್ ಆಡಿಕೊಂಡು, ಅಕ್ಕಪಕ್ಕದ ಮನೆಯಲ್ಲಿ ಸುತ್ತಿಕೊಂಡು, ಮನೆಗೆ ಬರುವವರಿಗೆಲ್ಲಾ ಒಂದಷ್ಟು ಜೋರು ಮಾಡಿಯೋ, ನಗಿಸಿಯೋ, ಅಮ್ಮಮ್ಮನೊಂದಿಗೆ ಗುದ್ದಾಡುತ್ತಲೇ ದೊಡ್ಡವನಾಗುತ್ತಿದ್ದಾನೆ. ಕೊರತೆಯ ಮಧ್ಯೆಯೂ ಹುಟ್ಟಿಕೊಳ್ಳುವ ಖುಷಿಯ ಒರತೆ ಎಂದರೆ ಇದೇ ಇರಬೇಕೇನೋ.

ಕಾಟ್ ಅಂದ್ರೆ ಕಾಟು !


ಮನೆಯಲ್ಲೂ ಒಬ್ಬಳಿದ್ದಾಳೆ ನಮ್ಮೂರಿನ ಮಳೆಯಂತೆಯೇ ಮಾತನಾಡುತ್ತಾಳೆ. ಅಜ್ಜಿಯನ್ನು ಪೀಡಿಸುತ್ತಾ, ಅಮ್ಮನೊಂದಿಗೆ ಮಲಗಲು ಸತಾಯಿಸುತ್ತಾ, ಅಪ್ಪ ಬರುವವರೆಗೆ ಕಣ್ಣಿಗೆ ಎಣ್ಣೆ ಹಾಕಿಕೊಂಡು ಕಾಯುತ್ತಾ, ಮಾತೆತಿದ್ದರೆ ‘ಬಾಬು ಇಲ್ಲ’ ಎನ್ನುತ್ತಲೇ ತೂಕಡಿಸುತ್ತಾ ಇರುವಾಕೆ. ಮಿತ್ರವಿಂದಾ ಎಂದು ಕರೆದರೆ, ತಣ್ಣಗೆ ‘ಮಂದ‘ ಎನ್ನುತ್ತಾ, ನಿನ್ನ ಹೆಸರೇನು ಎಂದು ಕೇಳಿದರೆ ‘ಮಂದ’ ಎಂದು ಉತ್ತರಿಸುತ್ತಾ ತಲೆ ತಿನ್ನುತ್ತಿರುವವಳು. ಅವಳ ಮಧ್ಯೆ ಕಳೆದುಹೋಗುತ್ತಿರುವ ನಮಗೆ ಎಲ್ಲರೂ ಒಟ್ಟಿಗಿದ್ದರೆ ಇನ್ನೂ ಚೆನ್ನಾಗಿರುತ್ತಿತ್ತು. ಆದರೆ, ಬದುಕೆಂದರೆ ಬರೀ ಪಡೆಯುವುದಲ್ಲ, ಕಳೆದುಕೊಳ್ಳುವುದೂ ಸಹ. ನಾನೀಗ ಆ ಎರಡಕ್ಕೂ ತಯಾರಾಗಿದ್ದೇನೆ.

ಬದುಕಿನ ಬಣ್ಣ ಅರಿತುಕೊಳ್ಳುವುದರಲ್ಲೇ ಬದುಕು ಮುಗಿಯುತ್ತದೆ. ಆದರೆ ಅರಿತುಕೊಳ್ಳುವ ಪ್ರಯತ್ನ ಬದುಕು ಮುಗಿಸಿದ ತೃಪ್ತಿಯನ್ನು ನೀಡುತ್ತದೆ. ಅದು ನನ್ನ ನಂಬಿಕೆಯೂ ಸಹ.

ಹೊಸ ಅನೌನ್ಸ್ ಮೆಂಟ್-ವಾರಕ್ಕೊಂದು ಪ್ರಬಂಧ !

ಇಂತದೊಂದು ಪ್ರಕಟಣೆ ಹಳೆಯದ್ದು ಅಂದುಕೊಳ್ಳಬೇಡಿ. ನನ್ನ ಬ್ಲಾಗ್ ಗೆ ಲೇಖನ ಹಾಕದೇ ಬಹಳಷ್ಟು ದಿನಗಳಾಗಿವೆ. ಏನೇನೋ ಹಾಕಲು ಇಷ್ಟವಿಲ್ಲ. ಅದಕ್ಕಾಗಿಯೇ ಒಂದು ನಿರ್ಧಾರ ಮಾಡಿದ್ದೇನೆ.

ನನ್ನ ಇಷ್ಟದ ಪ್ರಕಾರ ಲಲಿತಪ್ರಬಂಧ. ಒಂದಿಷ್ಟು ಪ್ರಬಂಧಗಳು ಬರೆದದ್ದು ಇವೆ. ಅವುಗಳನ್ನು ಒಂದಿಷ್ಟು ಫೈನ್ ಟ್ಯೂನ್ ಮಾಡಬೇಕೆಂದು ಅಂದುಕೊಂಡೇ ವರ್ಷವಾಗಿದೆ. ಹೊಸ ಪ್ರಬಂಧಗಳನ್ನೂ ಬರೆದಿರಲಿಲ್ಲ. ಇನ್ನು ಮುಂದೆ ಪ್ರಬಂಧಗಳ ಕೃಷಿಯತ್ತ ಗಮನಹರಿಸೋಣ ಎಂದೆನಿಸಿದೆ.

ವಾರಕ್ಕೊಂದು ಪ್ರಬಂಧ, ಲಹರಿಗಳನ್ನು ಇಲ್ಲಿ ಬರೆಯಲಿದ್ದೇನೆ. ಬ್ರಹ್ಮಚಾರಿಗಳ ಪುಟಗಳು ಧಾರಾವಾಹಿ ನಿಂತಂತಾಗಿದೆ. ಅದಕ್ಕೆ ನನ್ನೊಂದಿಗಿನ ಬ್ರಹ್ಮಚಾರಿಗಳು ಕೆಲವು ಪಾಯಿಂಟ್ಸ್ ಕೊಡಬೇಕು. ಅವರೂ ಬ್ಯುಸಿ. ಆದರೆ ಅದನ್ನೂ ಶುರು ಮಾಡಲಿದ್ದೇನೆ.

ಪ್ರತಿ ಗುರುವಾರ ನನ್ನ ಬ್ಲಾಗಿನಲ್ಲಿ ಇನ್ನು ಮುಂದೆ ಪ್ರಬಂಧ, ಲಹರಿ ಇಂಥ ಲೇಖನಗಳನ್ನು ಕಾಣಬಹುದು. ಬೇರೆ ಏನನ್ನೂ ಇಲ್ಲಿ ಪ್ರಕಟಿಸುವುದಿಲ್ಲ. ಕೆಲವೊಂದು ಹಳೆಯ ಬೇರೆ ಲೇಖಕರ ಪ್ರಬಂಧಗಳೂ ಇಲ್ಲಿ ಲಭ್ಯವಾಗಬಹುದು. ದಯವಿಟ್ಟು ಭೇಟಿ ಕೊಡಿ, ಪ್ರೋತ್ಸಾಹಿಸಿ.

ನೀವೂ ಕಳಿಸಿ…ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೂ ಹೇಳಿ

ಇದು ನಮ್ಮ ಹೊಸ ಪ್ರಯತ್ನ. ಅದುವೇಪತ್ರಿಕೋದ್ಯಮದ ಶಿಕ್ಷಣ ಕುರಿತಾದ ಬ್ಲಾಗ್.

ನಾವೇ ಪತ್ರಿಕೋದ್ಯಮದ ಗೆಳೆಯರು (ನಾನು ಮತ್ತು ವಿನಾಯಕ) ಕೂಡಿಕೊಂಡು ಆರಂಭಿಸಿರುವ ಗ್ರೂಪ್ ಬ್ಲಾಗ್. ಇಲ್ಲಿ ಪತ್ರಿಕೋದ್ಯಮದ ವಿದ್ಯಾರ್ಥಿಗಳಿಗೆ ಆದ್ಯತೆ.
ಜತೆಗೆ ಒಂದಿಷ್ಟು ಅಂಕಣಗಳಿರುತ್ತವೆ ಪತ್ರಕರ್ತರದ್ದು, ವಿದ್ಯಾರ್ಥಿಗಳದ್ದೂ ಸಹ. ರಾಜ್ಯದ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಇಲ್ಲಿ ಚರ್ಚಿಸಬೇಕೆಂಬುದು ನಮ್ಮ ಆಶಯವೂ ಸಹ.
ಈ ಸಮೂಹ ಬ್ಲಾಗಿನ ಪ್ರಮುಖ ಉದ್ದೇಶವೆಂದರೆ ಪತ್ರಿಕೋದ್ಯಮದ ವಿದ್ಯಾರ್ಥಿಗಳಿಗೆ ಒಂದು ಪ್ರಾಯೋಗಿಕ ಜ್ಞಾನ ಕಲ್ಪಿಸುವ ನೆಲೆಯಾಗಬೇಕೆಂಬುದಷ್ಟೇ. ಹಾಗಾಗಿ ವಿದ್ಯಾರ್ಥಿಗಳ ಬರಹಗಳಿಗೆ ಸದಾ ಸ್ವಾಗತ.
ನಾವು ಒಂದಿಷ್ಟು ಗೆಳೆಯರ ಗುಂಪಿದು. ವಿದ್ಯಾರ್ಥಿಗಳ ಲೇಖನಗಳನ್ನು ಸಂಪಾದಿಸಿ ಪ್ರಕಟಿಸಲಾಗುವುದು. ಆದ ಕಾರಣ ಸಂಬಂಧಪಟ್ಟ ಬರಹಗಾರರಿಗೆ ತಮ್ಮ ಬರಹಗಾರಿಕೆಯನ್ನು ನುರಿತಗೊಳಿಸಲು ಅವಕಾಶವಾಗಲಿದೆ.

ಏನೇನು ?
ಈ ಸಮೂಹ ಬ್ಲಾಗ್ ನಲ್ಲಿ ಎಲ್ಲವನ್ನೂ ಪ್ರಕಟಿಸಲಾಗುವುದು. ನಿಮ್ಮ ಶಾಲೆಯ ಕಾರ‍್ಯಕ್ರಮಗಳ ಸಂಕ್ಷಿಪ್ತ ವರದಿ, ಅಗ್ರ ಲೇಖನಗಳು, ಸಂದರ್ಶನಗಳು, ನುಡಿಚಿತ್ರಗಳು, ಸುದ್ದಿ ವಿಶ್ಲೇಷಣೆಗಳು, ಟೀಕೆ ಟಿಪ್ಪಣಿಗಳು…ಹೀಗೆ ಒಂದು ಪತ್ರಿಕೆ ಏನೆಲ್ಲಾ ಪ್ರಕಟಿಸಬಹುದೋ ಅದೆಲ್ಲವನ್ನೂ ಈ ಬ್ಲಾಗ್ ನಲ್ಲಿಯೂ ಪ್ರಕಟಿಸಬಹುದು.

ಛಾಯಾಚಿತ್ರ
ವಿದ್ಯಾರ್ಥಿಗಳಿಗೆ, ಪತ್ರಕರ್ತರಿಗೆಂದೇ ಗ್ಯಾಲರಿಗಳಿವೆ. ಅದರಲ್ಲಿ ತಾವು ತೆಗೆದ ಛಾಯಾಚಿತ್ರಗಳನ್ನು ಕಳುಹಿಸಿಕೊಟ್ಟರೆ ಪ್ರಕಟಿಸಲಾಗುವುದು. ವಾರಕ್ಕೊಮ್ಮೆ ಗ್ಯಾಲರಿಗಳು ಬದಲಾಗಲಿವೆ. ನೀವು ಕಳುಹಿಸಿದ ಚಿತ್ರ ವಾರಕ್ಕೊಮ್ಮೆ ಬದಲಾಗುತ್ತದೆ.

ಭಾಷೆ
ಭಾಷೆಯ ಸಮಸ್ಯೆ ಇದಕ್ಕಿಲ್ಲ. ಆರಂಭದಲ್ಲಿ ಇಂಗ್ಲಿಷ್, ಕನ್ನಡ ಲೇಖನಗಳನ್ನು ಪ್ರಕಟಿಸಲಾಗುವುದು. ನಂತರ ಇದರ ಬಳಕೆ ಮತ್ತು ಉಪಯೋಗವನ್ನು ಆಧರಿಸಿ ಇಂಗ್ಲಿಷ್ ಭಾಷೆಗೆ ಪ್ರತ್ಯೇಕ ಸಮೂಹ ಬ್ಲಾಗ್ ರೂಪಿಸಲು ನಿರ್ಧರಿಸಲಾಗುವುದು.

ಸಂವಾದ, ಚರ್ಚೆ
ಈ ವೇದಿಕೆ ಬರಿದೇ ಸುದ್ದಿಗಲ್ಲ, ಸಂವಾದ, ಚರ್ಚೆಗೂ ಸಹ ಮೀಸಲು. ಪತ್ರಿಕೋದ್ಯಮ, ಪ್ರಚಲಿತ ವಿದ್ಯಮಾನಗಳ ಬಗೆಗಿನ ಚರ್ಚೆ, ಪತ್ರಿಕೋದ್ಯಮ ಶಿಕ್ಷಣ, ಪ್ರಾಯೋಗಿಕ ಪತ್ರಿಕೋದ್ಯಮದ ಕುರಿತಾದ ಸಂವಾದ ಎಲ್ಲವೂ ಇಲ್ಲಿ ನಡೆಯುತ್ತದೆ. ಅದರಲ್ಲಿ ವಿದ್ಯಾರ್ಥಿ ಸಮುದಾಯ ಭಾಗವಹಿಸಬೇಕೆಂಬುದು ನಮ್ಮ ಕಾಳಜಿ.

ಬ್ರೇಕಿಂಗ್ ನ್ಯೂಸ್
ನಮ್ಮಲ್ಲೂ ಬ್ರೇಕಿಂಗ್ ನ್ಯೂಸ್ ಇದೆ. ನಿಮ್ಮ ಊರಿನ ಬ್ರೇಕಿಂಗ್ ನ್ಯೂಸ್ ತಿಳಿದ ಕೂಡಲೇ ನಮ್ಮಲ್ಲಿಗೆ ರವಾನಿಸಿದರೆ ಅದನ್ನೂ ಪ್ರಕಟಿಸಲಾಗುವುದು. ಇದಕ್ಕಾಗಿ ಟ್ವಿಟರ್ ಅನ್ನೂ ಬಳಸಲಾಗುವುದು.

ಪುಟವಿನ್ಯಾಸ
ಪತ್ರಿಕೆಯ ತಾಂತ್ರಿಕ ಸಂಗತಿಗಳ ಬಗ್ಗೆಯೂ ಗಮನಹರಿಸುವ ನಾವು, ಪುಟ ವಿನ್ಯಾಸದ ಬಗ್ಗೆಯೂ ಟಿಪ್ಸ್, ವಿಶೇಷ ಪುಟವಿನ್ಯಾಸಗಳ ಮಾದರಿ ಪ್ರಕಟಿಸಲಾಗುವುದು. ಹೀಗೆ ವಿದ್ಯಾರ್ಥಿಗಳು ತಾವು ರೂಪಿಸಿದ ಪುಟವಿನ್ಯಾಸಗಳನ್ನು ಕಳುಹಿಸಿದರೆ ಅದನ್ನೂ ಪ್ರಕಟಿಸಲಾಗುವುದು.

ಸಂಪಾದನೆ
ಇದು ಒಂದು ಬಗೆಯಲ್ಲಿ ಪ್ರಾಯೋಗಿಕ ತರಗತಿಗಳಂತಾಗಬೇಕೆಂಬುದು ನಮ್ಮ ಆಶಯ. ಹಾಗಾಗಿ ಇಲ್ಲಿ ಲೇಖನಗಳು ಅತ್ಯುತ್ತಮ ರೀತಿಯಲ್ಲಿ ಸಂಪಾದನೆ (ಎಡಿಟಿಂಗ್)ಗೊಳಗಾಗುತ್ತವೆ, ಆದರೆ ಸಂಭಾವನೆ ಸಿಗದು.

ಪ್ರಶ್ನಾಕೋಠಿ
ನುರಿತ ಪತ್ರಕರ್ತರೇ ಈ ಬ್ಲಾಗ್ ನಡೆಸುತ್ತಿರುವುದರಿಂದ ವಿದ್ಯಾರ್ಥಿಗಳ ಹಲವು ಸಂಶಯಗಳನ್ನು ಪ್ರಾಯೋಗಿಕ ನೆಲೆಯಲ್ಲಿ ನಿವಾರಿಸುವುದೂ ನಮ್ಮ ಉದ್ದೇಶವಾಗಿದೆ. ಪತ್ರಿಕೋದ್ಯಮಕ್ಕೆ ಸಂಬಂಧಿಸಿದಂತೆ ಪ್ರಶ್ನಾಕೋಠಿ ಎಂಬ ಅಂಕಣದಲ್ಲಿ ನಿಮ್ಮ ಅನುಮಾನಗಳನ್ನು ಕೇಳಬಹುದು. ನುರಿತರು ಅದಕ್ಕೆ ಉತ್ತರಿಸುತ್ತಾರೆ.

ನಿಷಿಧ್ಧ
ವೈಯಕ್ತಿಕ ಟೀಕೆ, ನಿರ್ದಿಷ್ಟ ಪತ್ರಿಕಾಮನೆಗಳ ಬಗೆಗಿನ ಅನಗತ್ಯ ಸುದ್ದಿ-ಗಾಸಿಪ್ ಗಳಿಗೆಲ್ಲಾ ಇಲ್ಲಿ ನಿಷಿದ್ಧ. ಯಾವುದೇ ಕಾರಣಕ್ಕೂ ಇಲ್ಲಿ ಅಂಥವುಗಳಿಗೆ ಅವಕಾಶವಿಲ್ಲ. ಒಂದು ಆರೋಗ್ಯಕರ ಸಂವಾದಕ್ಕಷ್ಟೇ ಈ ವೇದಿಕೆ, ನೆನಪಿರಲಿ. ನಿಮ್ಮ ಲೇಖನಗಳನ್ನು fivewoneh2009@ gmail.com ಗೆ ಕಳಿಸಿ. ಒಮ್ಮೆ ಭೇಟಿ ಕೊಡಿ www.5wonly1h.blogspot.com

ಸಾಂಗತ್ಯದಲ್ಲಿ ಸಿನಿಮಾ ಅಧ್ಯಯನ

‘ಸಾಂಗತ್ಯ’ ಬ್ಲಾಗ್, ಸಿನಿಮಾ ಅಭಿರುಚಿ ಬೆಳೆಸುವತ್ತ ಕಾರ್ಯೋನ್ಮುಖವಾಗಿದೆ. ಆ ನಿಟ್ಟಿನಲ್ಲಿ ಹೊಸ ಹೊಸತನ್ನು ಕೈಗೊಳ್ಳುತ್ತಿರುವ ಅದು, ತನ್ನ ಗರಿಗೆ ಮತ್ತೊಂದು ಹೊಸತನ್ನು ಸೇರಿಸಿಕೊಂಡಿದೆ. ಅದು ಸಿನಿಮಾ “ಸ್ಕೋಪ್”.

ಒಂದು ಸಿನಿಮಾದ ಕುರಿತ ಕೂಲಂಕಷ ಅಧ್ಯಯನದ ದೃಷ್ಟಿಯಿಂದ ಆರಂಭಿಸಿರುವ ಲೇಖನಮಾಲೆ ಇದು. ಪರಮೇಶ್ ಗುರುಸ್ವಾಮಿ ಸೇರಿದಂತೆ ಹಲವು ಮಂದಿ ಒಂದು ಚಿತ್ರವನ್ನು ವಿವಿಧ ಕೋನಗಳಲ್ಲಿ ಅಧ್ಯಯನ ಮಾಡುವರು. ಸಿನಿಮಾ ಕುರಿತು ತಿಳಿಯಲು ಬಯಸುವ ಮಂದಿಗೆ ಇದೊಂದು ಉತ್ತಮ ಅಂಕಣ.

ಸಿನಿಮಾವನ್ನು ನೋಡುವ ನೆಲೆಗಳು ಅರ್ಥವಾಗುವಂತೆ ಅಕಾಡೆಮಿಕ್ ರೀತಿಯಲ್ಲಿ ನೀಡಿರುವುದು ಉಲ್ಲೇಖನೀಯ. ಒಂದು ಚಿತ್ರದ ಕುರಿತು ಮೂರ್ನಾಲ್ಕು ಕಂತುಗಳಲ್ಲಿ ಬರಹ ಪ್ರಕಟವಾಗುತ್ತಿರುವುದೂ ಸಂತಸದ ಸಂಗತಿಯೇ. ಅಧ್ಯಯನ ದೃಷ್ಟಿಯಿಂದ ಇದು ಸೂಕ್ತ.

ಮೊದಲಿಗೆ ಪರಮೇಶ್ ಗುರುಸ್ವಾಮಿ ಅವರು, ಚೀನಿ ಚಿತ್ರ “ಪೋಸ್ಟ್ ಮ್ಯಾನ್ ಇನ್ ದಿ ಮೌಂಟೇನ್ಸ್” ಕುರಿತು ವಿವರವಾಗಿ ಬರೆದಿದ್ದಾರೆ. ಪರಮೇಶ್ ಅವರು ಒಂದು ಚಿತ್ರವನ್ನು ಭಿನ್ನ ನೆಲೆಗಳಿಂದ ನೋಡಬಲ್ಲ ಚಿತ್ರಜ್ಞರು. ಅದರು ವಿವಿಧ ಅಂಶಗಳನ್ನು ಚರ್ಚೆಗಿಡುವ ಪರಿಯೂ ಅನನ್ಯ. ಒಟ್ಟೂ, ಮತ್ತಷ್ಟು ಹೊಸತಿಗೆ ಸಾಂಗತ್ಯ ಮುಖಾಮುಖಿಯಾಗುತ್ತಿರುವುದು ಒಳ್ಳೆಯ ವಿಚಾರ. ಅಂಕಣದ ಓದಿಗೆ ಭೇಟಿ ಕೊಡಿ..ಸಾಂಗತ್ಯಕ್ಕೆ

ಶೂನ್ಯ ನಾವೆಯ ಕಥೆ

ಒಂದು ಪುಟ್ಟ ಕಥೆ.

ಯಾಕೋ ಓಶೋ ರಜನೀಶರು ನೆನಪಾದರು. ಅವರ ಹಲವು ಪುಸ್ತಕಗಳನ್ನು ಓದಿದ ನನಗೆ, ಅವರ ಹೇಳುವ ಪರಿ ಬಹಳ ಇಷ್ಟ. ವಿಷಯಕ್ಕೊಂದು ಚಿಕ್ಕದೊಂದು ಉದಾಹರಣೆ ಕೊಟ್ಟು ವಿವರಿಸುವುದು ಖುಷಿ. ಜೆ.ಕೆ ಕಷ್ಟ ಎನಿಸಿದರೆ, ರಜನೀಶ ಹಾಗೆ ಅನಿಸಿಲ್ಲ.

ಹೀಗೇ ಇಂದು ಯಾಕೋ ಹಲವು ಅನಪೇಕ್ಷಿತ ಪ್ರಸಂಗಗಳು ನಡೆದವು. ಅದಕ್ಕೆ ಒಂದಕ್ಕೊಂದು ಕಲ್ಪಿಸಿಕೊಳ್ಲುತ್ತಾ ಹೋದೆ. ರಜನೀಶರು ನೆನಪಿಗೆ ಬಂದರು. 

ಶಿವರಾಂ ಪೇಟೆಯಲ್ಲಿ ನಡೆದು ಹೋಗುತ್ತಿದ್ದಾಗ ಬೈಕ್ ಸಾಹಸಿಯೊಬ್ಬ ನುಗ್ಗಿ ಬಂದ.  ಅವನ ಮಧ್ಯೆ ಮತ್ತೊಬ್ಬ ಆಟೋದವ ನುಗ್ಗಿದ. ಇದ್ದಕ್ಕಿದ್ದಂತೆ ಸ್ಫೋಟವಾಯಿತು.

“ಏನಯ್ಯಾ ನಿನಗೆ, ಕಣ್ಣು ಕಾಣೋದಿಲ್ವೇ?’ ಎಂದು ಒಬ್ಬ ಸಾಹಸಿ. ಅದಕ್ಕೆ ಮತ್ತೊಬ್ಬ, “ನೀವು ಹಾಗೆ ಬಂದರೆ ಹೇಗೆ ಸಾರ್..?’ ಎಂದ. ಕಥೆ ಹಾಗೆಯೇ ಮುಂದುವರಿದಿತ್ತು. 

ಹೋಟೆಲ್ ನಲ್ಲಿ ಗೆಳೆಯನೊಂದಿಗೆ ಕುಳಿತು ಕಾಫಿ ಹೇಳಿದೆ. ರಸ್ತೆ  ಮೇಲಿನ ಘಟನೆ ನೆನಪಾಗಿ, ರಜನೀಶರ ಒಂದು ಪುಟ್ಟ ಕಥೆ ನೆನಪಾಯಿತು. 

ಹೀಗೇ ನದಿಯಲ್ಲಿ ಒಂದು ನಾವೆ ಹೋಗುತ್ತಿತ್ತಂತೆ. ಅದರ ಎದುರು ಮತ್ತೊಂದು ನಾವೆ ಬರುತ್ತಿತ್ತು. ಸ್ವಲ್ಪ ದೂರದಲ್ಲಿ ಎರಡೂ ಹತ್ತಿರವಾದ ಸಂದರ್ಭ. ಆ ನಾವೆ ಬಂದು ಇದಕ್ಕೆ ಡಿಕ್ಕಿ ಹೊಡೆಯಿತು. ತಕ್ಷಣವೇ ಇದರಲ್ಲಿದ್ದವ  ಆ ನಾವೆಯಲ್ಲಿ ಯಾರು ಇದ್ದಾರೆ ಎಂಬುದನ್ನು ಹುಡುಕಿದ. ಯಾರೂ ಇರಲಿಲ್ಲ. ಈ ನಾವೆಯವ ಮರು ಮಾತನಾಡದೇ ಮುಂದಕ್ಕೆ ಹೋದ. 

ನಿಜವಲ್ಲವೇ, ನಮ್ಮ ಅಹಂ ಎಷ್ಟೋ ಸಂದರ್ಭಗಳಲ್ಲಿ ಘಟನೆಗಳನ್ನು ಸೃಷ್ಟಿಸುತ್ತದೆ. ಒಂದುವೇಳೆ ಆ ನಾವೆಯಲ್ಲೂ ಮತ್ತೊಬ್ಬ ಇದ್ದಿದ್ದರೆ ಗಲಾಟೆ ಗ್ಯಾರಂಟಿ ; ನಮ್ಮರಸ್ತೆಯಲ್ಲಿ ನಡೆದಂತೆಯೇ. ಅಲ್ಲಿ ಯಾರೂ ಇರಲಿಲ್ಲ. ಮೌನ ಗೆದ್ದಿತು. 

ಯಾಕೋ ಈ ಕಥೆ ಹೇಳಬೇಕೆನಿಸಿತು. ಇಂಥದೊಂದು ಕಥೆ ಕೊಟ್ಟ ರಜನೀಶರಿಗೆ ಧನ್ಯವಾದ ಹೇಳಬೇಕು.