ಹೊಸ ಲೋಕಾಯುಕ್ತರಿಗೆ ನಮ್ಮ ಬೆಂಬಲವಿರಲಿ

ರಾಜಕಾರಣಿಗಳನ್ನು ಹತಾಶ ಸ್ಥಿತಿಗೆ ತಲುಪಿಸಿ ಖೆಡ್ಡಾಕ್ಕೆ ಬೀಳಿಸಬೇಕು. ಲೋಕಾಯುಕ್ತರು ಖೆಡ್ಡಾವನ್ನು ತೋಡಬಹುದು, ಆದರೆ “ಆನೆ”ಯನ್ನು ಓಡಿಸಿಕೊಂಡು ಬಂದು ಗುಂಡಿಗೆ ಬೀಳಿಸಲು ನಾವೇ ಅಂದರೆ ಜನರೇ ಸಿದ್ಧರಾಗಬೇಕು.

ಹೊಸ ಲೋಕಾಯುಕ್ತರು ಬಂದಿದ್ದಾರೆ…ಮೊದಲಿಗೇ “ನಾನು ಬಿಜೆಪಿ ಲೋಕಾಯುಕ್ತ ಅಲ್ಲ, ಕರ್ನಾಟಕದ ಲೋಕಾಯುಕ್ತ” ಎಂದು ಸ್ಪಷ್ಟಪಡಿಸಿದ್ದಾರೆ. ನನ್ನ ಲೆಕ್ಕಾಚಾರದಲ್ಲಿ ಅಂತಹದೊಂದು ಉನ್ನತ ಹುದ್ದೆಯಲ್ಲಿರುವವರಿಗೆ ಹೀಗೆ “ಸ್ಪಷ್ಟೀಕರಣ” ಕೊಡುವಂತಹ ಪರಿಸ್ಥಿತಿ ಬರಬಾರದು. ಆದರೆ ಏನೂ ಮಾಡುವಂತಿಲ್ಲ, ಸನ್ನಿವೇಶ ಮತ್ತು ಸಂದರ್ಭಗಳು ಆ ಪರಿಸ್ಥಿತಿಯನ್ನೂ ಸೃಷ್ಟಿಸುತ್ತವೆ.

ಮಾನ್ಯ ಶಿವರಾಜ್ ಪಾಟೀಲರಿಗೂ ಆದದ್ದು ಅದೇ. ಯಡಿಯೂರಪ್ಪನವರು ಹಿಂದಿನ ಲೋಕಾಯುಕ್ತರಿಂದ ತೀರಾ ಇಕ್ಕಟ್ಟಿನಲ್ಲಿ ಸಿಲುಕಿದ್ದರು. ಗಣಿ ವರದಿಯನ್ನು ಸೋರಿಕೆ ಮಾಡಿ, ತಾಂತ್ರಿಕ ನೆಲೆಯಿಂದ ತಪ್ಪಿಸಿಕೊಳ್ಳಬಹುದೆಂದು ಯಡಿಯೂರಪ್ಪನವರು ಅಂದುಕೊಂಡಿದ್ದರು. ಅದಕ್ಕೆ ತಮ್ಮದೆ ಸಮುದಾಯದ ಒಬ್ಬ ಉತ್ತರಾಧಿಕಾರಿಯನ್ನು ಲೋಕಾಯುಕ್ತಕ್ಕೆ ಸೇರಿಸಿದರೆ, ನಮ್ಮನ್ನು ಕಾಯಬಹುದೆಂಬುದು ರಾಜಕೀಯ ಲೆಕ್ಕಾಚಾರವಾಗಿತ್ತು. ಈ ಮಾತಿನ ಅರ್ಥ ಶಿವರಾಜ ಪಾಟೀಲರಿಗೆ ಅರ್ಹತೆ ಇರಲಿಲ್ಲವೆಂದಲ್ಲ, ಅವರಿಗೆ ಅರ್ಹತೆ ಇದ್ದೇ ಇದೆ. ಹತ್ತು ಹಲವು ಆಯೋಗಗಳಲ್ಲೂ ಚೆನ್ನಾಗಿ ಕೆಲಸ ಮಾಡಿದವರು. ಸುಭಾಷಿತದ ಒಂದು ಮಾತು ಇಲ್ಲಿ ನೆನಪಿಸಿಕೊಳ್ಳುವುದು ಸೂಕ್ತ.

ಗೌರವ, ಕೊಡುವ ವ್ಯಕ್ತಿ ಮತ್ತು ಅವನ ಸ್ಥಾನದಿಂದ ನಿರ್ಧಾರವಾಗುತ್ತದೆ. ಈ ಮಾತು ಇಲ್ಲಿ ಎಷ್ಟು ಸೂಕ್ತವೆಂದರೆ, ಹಲವು ಹಗರಣಗಳ ಆರೋಪ ಹೊತ್ತ ಸರಕಾರದ ಪ್ರಮುಖ ಪ್ರತಿನಿಧಿ ಇಂತಹದೊಂದು ಹುದ್ದೆ ಕೊಟ್ಟದ್ದು ಮತ್ತು ಆ ಸಂದರ್ಭ ಶಿವರಾಜಪಾಟೀಲರಿಗೆ ಸ್ಪಷ್ಟೀಕರಣ ಕೊಡುವಂತಹ ಪರಿಸ್ಥಿತಿ ನಿರ್ಮಿಸಿತು. ಈ ಸ್ಪಷ್ಟೀಕರಣದ ನಂತರವೂ ಜನ ಕೊಂಚ ಅನುಮಾನದಿಂದಲೇ ಇರುತ್ತಾರೆ. ಪ್ರಸ್ತುತ ಜನ ಒಂದುಕಡೆ, ಶಿವರಾಜ ಪಾಟೀಲರು ಒಂದು ಕಡೆ ಇದ್ದಾರೆ. ಪಾಟೀಲರ ಪ್ರತಿ ನಡೆಯೂ ಭ್ರಷ್ಟಾಚಾರ ವಿರುದ್ಧದ ಸಮರವನ್ನು ಒಂದು ತಾರ್ಕಿಕ ಅಂತ್ಯಕ್ಕೆ ಮುಟ್ಟಿಸುವುದಕ್ಕೆ ಪೂರಕವಾಗಿರಬೇಕು. ಲೋಕಾಯುಕ್ತ ಸಂಸ್ಥೆಯನ್ನು ಬಲಗೊಳಿಸುವತ್ತ ನಡೆಯಬೇಕು. ಆಗ ಜನ ನಿಧಾನವಾಗಿ ಅವರ ಕಡೆಯೆ ವಾಲತೊಡಗುತ್ತಾರೆ.ಅವಧಿ ಮುಗಿಸುವಷ್ಟೊತ್ತಿಗೆ ಜನ ಅವರ ಹಿಂದೆ ನಿಲ್ಲುತ್ತಾರೆ. ಆಗ ಭ್ರಷ್ಟಾಚಾರದ ವಿರುದ್ಧದ ಸಮರಕ್ಕೆ ಪಾಟೀಲರು ನಾಯಕರಂತಾಗುತ್ತಾರೆ. ಇದನ್ನು ನೆನಪಿನಲ್ಲಿಟ್ಟುಕೊಳ್ಳಲೇಬೇಕಾದ ಸಂಗತಿ. Continue reading

ಲೋಕಾಯುಕ್ತರಿಗೆ ಧನ್ಯವಾದಗಳು

ಪ್ರಜಾತಂತ್ರ ಪ್ರೀತಿಸುವ ಪ್ರತಿಯೊಬ್ಬರೂ ಲೋಕಾಯುಕ್ತರಾಗಿ ಮೊನ್ನೆಯಷ್ಟೇ ನಿವೃತ್ತರಾದ ಎನ್. ಸಂತೋಷ್ ಹೆಗ್ಡೆಯವರಿಗೆ ಧನ್ಯವಾದ ಹೇಳಬೇಕು. ಯಾಕೆಂದರೆ, ಕಾನೂನಿಗೆ ಇರಬಹುದಾದ ಸಾಧ್ಯತೆಯನ್ನು ತೋರಿಸುತ್ತಲೇ, ಕಾನೂನನ್ನು ನಮ್ಮನ್ನಾಳುವ ಮಂದಿ ಹೇಗೆ ದುರುಪಯೋಗ ಪಡಿಸಿಕೊಳ್ಳಬಲ್ಲರು ಹಾಗೂ ಊನಗೊಳಿಸಬಲ್ಲರೆಂಬುದನ್ನು ತೋರಿಸಿದ್ದಾರೆ.

ಲೋಕಾಯುಕ್ತ ನ್ಯಾಯಮೂರ್ತಿ ಎನ್. ಸಂತೋಷ್ ಹೆಗ್ಡೆಯವರ ಪರ್ವ ಮುಗಿದಿದೆ. ಐದು ವರ್ಷಗಳ ಹಿಂದೆ ಹುದ್ದೆಗೇರಿದಾಗ ಸದ್ದು ಮಾಡಿರಲಿಲ್ಲ. ತಣ್ಣಗೆ ಬಂದು ಕುಳಿತಿದ್ದರು. ಆದರೆ, ಅವಧಿ ಪೂರೈಸಿ ಹೊರಡುವಾಗ ಬಹಳಷ್ಟು ಮಂದಿಯ ಬುಡಕ್ಕೆ ಬಿಸಿನೀರು ಸುರಿದು ಹೊರಟಿದ್ದಾರೆ. ಅದರಲ್ಲೂ ನಮ್ಮನ್ನಾಳುವ ಮಂದಿಗೆ ಪಾಠ ಕಲಿಸಿದ್ದಕ್ಕೆ ನಾವೆಲ್ಲರೂ ಧನ್ಯವಾದಗಳನ್ನು ಹೇಳಲೇಬೇಕು.
ಇಂದು ಹೆಗ್ಡೆ ರಾಜಕಾರಣಿಗಳ ಕಣ್ಣಿನಲ್ಲಿ ತೀರಾ ಟೀಕೆಗೊಳಗಾದವರು. ಆದರೆ, ಪ್ರಜಾತಂತ್ರವನ್ನು ಪ್ರೀತಿಸುವ ಪ್ರತಿಯೊಬ್ಬರೂ ಅವರಿಗೆ ‘ಹ್ಯಾಟ್ಸಾಫ್’ ಹೇಳಬೇಕು. ಅಣ್ಣಾ ಹಜಾರೆಯಂತಹವರು ನಮ್ಮೊಳಗೆ ಹೊಸ ಕನಸನ್ನು ಸೃಷ್ಟಿಸಿದವರು. ಹೊಸ ತಲೆಮಾರು ಭ್ರಷ್ಟಾಚಾರದಿಂದ ಬೇಸತ್ತು ದೇಶವೇ ಸಾಯುತ್ತದೆಂದುಕೊಂಡಾಗ ಅಣ್ಣಾ ಹಜಾರೆ ‘ಹಾಗೆ ಭಯಪಡಬೇಕಿಲ್ಲ. ಕೈ ಜೋಡಿಸಬೇಕಷ್ಟೇ’ ಎಂದರು. ಹಾಗಾಗಿ ಜನ್ ಲೋಕಪಾಲ್ ಮಸೂದೆ ಸಂಬಂಧ ದೇಶಾದ್ಯಂತ ಅಣ್ಣಾರ ಹೋರಾಟಕ್ಕೆ ಸಾಥ್ ದೊರೆತದ್ದು ಹೆಚ್ಚಾಗಿ ಯುವ ತಲೆಮಾರುಗಳಿಂದ.

ಈ ದಿಸೆಯಲ್ಲೇ ನಮ್ಮ ರಾಜಕಾರಣಿ, ಅಧಿಕಾರಿಗಳಿಗೂ ಒಂದಿಷ್ಟು ಭಯ ಮೂಡಬೇಕಿತ್ತು. ‘ನಾವು ಏನು ಮಾಡಿದರೂ ಸೈ’ ಎಂದುಕೊಂಡವರಿಗೆ ಸಣ್ಣದೊಂದು ಬರೆ ಕೊಟ್ಟು ‘ಬಿಸಿ’ ಅನುಭವ ಕೊಡಬೇಕಿತ್ತು. ಅದನ್ನು ಸಂತೋಷ್ ಹೆಗ್ಡೆಯವರು ಚೆನ್ನಾಗಿಯೇ ಮಾಡಿದ್ದಾರೆ. ಕೊಟ್ಟ ಬರೆ ಹೇಗಿದೆಯೆಂದರೆ, ಬೇರೆಯವರೂ ತಮ್ಮ ತಮ್ಮ ತೊಡೆಗಳನ್ನು ಮುಟ್ಟಿನೋಡಿಕೊಳ್ಳುತ್ತಿರಬೇಕು.

ಎನ್. ವೆಂಕಟಾಚಲ ಇದೇ ಹುದ್ದೆಯಲ್ಲಿದ್ದಾಗ ಬರೀ ಪ್ರಚಾರಕ್ಕೆ ದಾಳಿ ಮಾಡುತ್ತಿದ್ದರೆಂದು ಒಂದಿಷ್ಟು ಮಂದಿ ಆರೋಪಿಸಿದ್ದರು. ಇದ್ದರೂ ಇರಬಹುದು. ಆದರೆ ವೆಂಕಟಾಚಲ ಅವರು ಬರುವ ಮೊದಲು ‘ಲೋಕಾಯುಕ್ತ’ ವೆಂಬುದೊಂದಿದೆ ಎಂದೇ ಗೊತ್ತಿರಲಿಲ್ಲ. ಕೊನೇಪಕ್ಷ ‘ಲೋಕಾಯುಕ್ತಕ್ಕೆ ನೀವು ದೂರು ಕೊಡಬಹುದು’ ಎಂದು ಹೇಳಿದವರೇ ವೆಂಕಟಾಚಲರು. ಆ ದಾಳಿ ಸಂದರ್ಭದಲ್ಲೆಲ್ಲಾ ಮಾಧ್ಯಮಗಳೆದರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದಾಗ ಜನ ನಿಜಕ್ಕೂ ಸಮಾಧಾನ ಪಟ್ಟುಕೊಂಡಿದ್ದರು. ಅದಕ್ಕಿಂತ ಮೊದಲು ಏನೇ ಮಾಡಿದರೂ ಈ ಅಧಿಕಾರಿಗಳಿಗೆ ಲಂಚ ಕೊಟ್ಟೇ ಬದುಕಬೇಕೆಂದಿದ್ದ ಜನ, ನಿಧಾನವಾಗಿ ಬುದ್ಧಿವಂತರಾದರು. ‘ನನ್ನ ಕೈಲಾದುದ್ದನ್ನು ಕೊಡಬಲ್ಲೆ. ಅದಕ್ಕಿಂತ ಹೆಚ್ಚಿನದಾದರೆ ಲೋಕಾಯುಕ್ತಕ್ಕೆ ದೂರು ಕೊಡುವುದೊಂದೇ ಬಾಕಿ’ ಎಂಬ ಲೆಕ್ಕಾಚಾರಕ್ಕೆ ಇಳಿದರು. ಅದರ ಪರಿಣಾಮ ಬೇಕಾದಷ್ಟಿದೆ. Continue reading

ವಿಶ್ವ ಕನ್ನಡ ಸಮ್ಮೇಳನ-ಹೊಸ ವ್ಯಾಖ್ಯೆ

ಐದು ವರ್ಷದಿಂದ ನಿರೀಕ್ಷಿಸುತ್ತಿದ್ದ ಘಳಿಗೆ ಇತಿಹಾಸದ ಅಧ್ಯಾಯಕ್ಕೆ ಸೇರಿದೆ. ನಾಡಿನ ಜನ ಅಭೂತಪೂರ್ವ ಯಶಸ್ಸಿಗೆ ಕಾರಣರಾಗಿದ್ದಾರೆ. ಬಿಜೆಪಿ ನೇತೃತ್ವದ ಸರಕಾರ ಹೊಸ ಸಾಹಸ ಪೂರ್ತಿಗೊಳಿಸಿದ ಕೀರ್ತಿಗೆ ‘ಜನವಾಗಿದೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ‘ಕನ್ನಡದ ಗಂಗೆಯಲ್ಲಿ ತಮ್ಮ ಸರ್ವ ಪಾಪವನ್ನೂ ತೊಳೆದುಕೊಂಡು ಪಾವನರಾಗಿದ್ದಾರೆ’.

ಮೂರು ದಿನಗಳ ಕಾಲ ನಡೆದ ಎರಡನೇ ವಿಶ್ವ ಕನ್ನಡ ಸಮ್ಮೇಳನ ಕನ್ನಡಿಗರ ಬಲ ಪ್ರದರ್ಶನಕ್ಕೆ ವೇದಿಕೆಯಾಗಿದ್ದು ನಿಜ. ಸುಮಾರು ೨ ರಿಂದ ೩ ಲಕ್ಷ ಮಂದಿ ಸೇರಿ ಹಬ್ಬಕ್ಕೆ ಕಳೆಗಟ್ಟಿಸಿದ್ದೂ ಇತ್ತೀಚಿನ ವರ್ಷಗಳಲ್ಲಿ ಹೊಸತು. ಸಾಕಷ್ಟು ಲೋಪದೋಷಗಳಿದ್ದರೂ ಸಮ್ಮೇಳನ ಯಶಸ್ವಿಯಾಗಲು ಸರಕಾರ ಹಾಗೂ ಆಡಳಿತಶಾಹಿಗಿಂತ ದುಡಿದವರು ಸ್ವತಃ ಜನರೇ.

ಬೆಳಗಾವಿ ಹೊರತುಪಡಿಸಿ ಬೇರೆಲ್ಲಿ ನಡೆದಿದ್ದರೂ ಸರಕಾರಕ್ಕೆ ಕೀರ್ತಿ ಬದಲು ಅಪಕೀರ್ತಿಯೇ ಪ್ರಾಪ್ತವಾಗುತ್ತಿತ್ತು. ಈ ಮಾತಿಗೆ ಮೂಲವೆಂದರೆ ‘ಎಲ್ಲವು ವ್ಯವಸ್ಥಿತವಾಗಿರಲಿಲ್ಲ’. ಆದರೆ, ಗಡಿಭಾಗವೆಂಬ ಪ್ರೀತಿ, ಬೆಳಗಾವಿಯಲ್ಲಿದ್ದ ಮರಾಠಿಗರ ಕನ್ನಡ ವಿರೋಧಿ ಧೋರಣೆ ಎಲ್ಲವೂ ಕನ್ನಡಿಗರನ್ನು ಏಕಸೂತ್ರದಲ್ಲಿ ಬೆಸೆಯುವಂತೆ ಮಾಡಿತು. ಕನ್ನಡ ಮತ್ತು ಕರ್ನಾಟಕದ ಮೇಲಿನ ಪ್ರೀತಿ-ಭಕ್ತಿಯ ಎದುರು ಯಾವ ಕೊರತೆಯೂ ಬಾಧಿಸಲಿಲ್ಲ. ಮರಾಠಿಗರೂ ಅಷ್ಟೇ ಸಹಕರಿಸಿದರು. 50 ವರ್ಷದ ಇತಿಹಾಸದಲ್ಲಿ ಯಾವುದೇ ಸಮ್ಮೇಳನ ಗದ್ದಲವಿಲ್ಲದೇ ಮುಗಿದಿದ್ದಿಲ್ಲ. ಈ ಸಮ್ಮೇಳನಕ್ಕೆ ಅಂಥ ಅಪಕೀರ್ತಿ ಬಂದಿಲ್ಲವೆಂಬುದೇ ಸಮಾಧಾನ. Continue reading

ಹಲವು ಅಪಸವ್ಯಗಳ ಮಧ್ಯೆಯೂ ಸಮ್ಮೇಳನ ಯಶಸ್ವಿಯಾಗಲಿ

ವಿಶ್ವಕನ್ನಡ ಸಮ್ಮೇಳನಕ್ಕೆ ಮೂರು ದಿನ ಇರುವಾಗ ಆ ವ್ಯವಸ್ಥೆಯೊಳಗಿನ ಅಪಸವ್ಯಗಳನ್ನು ಪಟ್ಟಿ ಮಾಡುತ್ತಲೇ ಯಾವ ಕಾರಣಕ್ಕೆ ಸಮ್ಮೇಳನ ಯಶಸ್ವಿಯಾಗಬೇಕೆಂಬುದನ್ನು ಇಲ್ಲಿ ವಿವರಿಸಿದ್ದೇನೆ. ಓದಿ, ಅಭಿಪ್ರಾಯಿಸಿ.

ವಿಶ್ವಕನ್ನಡ ಸಮ್ಮೇಳನಕ್ಕಿರುವುದು ಇನ್ನು ಮೂರೇ ದಿನ. ಮಾರ್ಚ್ ೧೧ ರಂದು ಬೆಳಗಾವಿಯಲ್ಲಿ ಕನ್ನಡದ ಧ್ವಜ ಅರಳಬೇಕು. ಮೂರು ದಿನದ ಸಮ್ಮೇಳನದಲ್ಲಿ ಲಕ್ಷಾಂತರ ಮಂದಿ ಕನ್ನಡಿಗರು ಪಾಲ್ಗೊಳ್ಳುವ ನಿರೀಕ್ಷೆ ಸರಕಾರದ್ದು. ಆದರೆ ಅಂಥ ಸಂಭ್ರಮವೇನೂ ಎಲ್ಲೂ ತೋರಿ ಬರುತ್ತಿಲ್ಲವೆನ್ನುವುದು ವಿಷಾದನೀಯ.

೭೫ ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಬೆಂಗಳೂರಿನಲ್ಲಿ ನಡೆದದ್ದು, ಅದಕ್ಕೆ ಸಿಕ್ಕ ಯಶಸ್ಸು, ಹರಿದು ಬಂದು ಜನಸಾಗರ…ಎಲ್ಲವನ್ನೂ ಕಂಡ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರಿಗೆ ‘ವಿಶ್ವ ಕನ್ನಡ ಸಮ್ಮೇಳನ’ ನಡೆಸಿಯೇ ತೀರಬೇಕೆಂಬ ಹಠ ಶುರುವಾಯಿತು. ಆ ಮೂಲಕ ಒಂದಿಷ್ಟು ರಾಜಕಾರಣದ ಲಾಭ ಎಂದರೆ ಕೀರ್ತಿ ಪಡೆಯುವ ಆಸೆ. ಅದಕ್ಕಾಗಿ ಇದುವರೆಗಿನ ಸಿದ್ಧತೆಯ ಬಗ್ಗೆ ಚೂರೂ ಮಾಹಿತಿ ಪಡೆಯದೇ ಎರಡು ದಿನದ ನಂತರ ಏಕಾಏಕಿ ಶಿಸ್ತಾಗಿ ಅಧಿಕಾರಿಗಳ ಸಭೆ ಕರೆದು (ಸಮ್ಮೇಳನಕ್ಕೆ ಸಂಬಂಧಪಟ್ಟ ಹಾಗೂ ಬೆಳಗಾವಿಯ ಸ್ಥಳೀಯ)‘ನೀವು ಏನಾದರೂ ಮಾಡಿ. ಮಾರ್ಚಿಯಲ್ಲಿ ಸಮ್ಮೇಳನ ನಡೆಯಲೇಬೇಕು’ ಎಂದು ಫರ್ಮಾನು ಹೊರಡಿಸಿದರು. ಅದಕ್ಕಾಗಿ ವಿಶೇಷಾಧಿಕಾರಿಯನ್ನು ಕರೆತಂದರು. ವಿಚಿತ್ರವೆಂದರೆ ಅದುವರೆಗೆ ಹೊಣೆ ಹೊತ್ತ ಇಲಾಖೆಯ ಮಂದಿ ಮಾಡಿದ್ದೇನೆಂದು ಕೇಳುವ ಗೋಜಿಗೆ ಹೋಗಲಿಲ್ಲ.

ನಮ್ಮ ಮುಖ್ಯಮಂತ್ರಿಯವರಿಗೆ ‘ತಮ್ಮ ಮಂದಿ’ಯವರೇ ಇರಬೇಕು. ನಂಬಿಕೊಂಡು ಸುಮ್ಮನಿದ್ದುಬಿಡ್ತಾರೆ. ಇಲ್ಲೂ ಆದದ್ದು ಅದೇ. ಇಲಾಖೆಯ ಮಂದಿ ಮುಖ್ಯಮಂತ್ರಿಯವರನ್ನೂ ತಮ್ಮವರೇ ಎಂದು ತಿಳಿದರು. ಮುಖ್ಯಮಂತ್ರಿಯವರೂ ಹಾಗೇ ನಿದ್ದೆ ಮಾಡಿದರು. ನಯಾಪೈಸೆ ಸಿದ್ಧತೆ ಆಗಲಿಲ್ಲ. ಕೊನೆಗೆ ಮಾನ ಉಳಿಸಿಕೊಳ್ಳಲು ಇಪ್ಪತ್ತು ದಿನದೊಳಗೆ ಇಡೀ ಸಿದ್ಧತೆ ಮುಗಿಸುವ ಹೊಣೆ ವಿಶೇಷಾಧಿಕಾರಿಗೆ ಕೊಟ್ಟರು. ಅವರೋ ಈಗ ಪುನರ್ ಸೃಷ್ಟಿಯ ಹೊಣೆ ಹೊತ್ತ ‘ಪರಶುರಾಮ’ನಂತೆ ಓಡಾಡುತ್ತಿದ್ದಾರೆ. ಆದರೆ ಅವರಿಗೂ ಗೊತ್ತಿದೆ ‘ಇದು ತೇಪೆ ಹಾಕುವ ಕೆಲಸ’. ಲೆಕ್ಕ ಹಾಕಿಕೊಳ್ಳಿ, ಇಪ್ಪತ್ತೈದು ವರ್ಷಗಳ ನಂತರ ನಡೆಯುತ್ತಿರುವಂಥ ಬೃಹತ್ ಕಾರ‍್ಯಕ್ರಮಕ್ಕೆ ವರ್ಷದಿಂದ ಸಿದ್ಧತೆ ನಡೆಯಬೇಕಿತ್ತು. ಇಲ್ಲವಾದರೂ ಕನಿಷ್ಠ ಆರು ತಿಂಗಳ ಮೊದಲಾದರೂ ಶುರುವಾಗಿ ಈ ಹೊತ್ತಿಗೆ ಅಂತಿಮ ಸ್ಪರ್ಶ (ಫೈನಲ್ ಟಚ್) ನೀಡಬೇಕಿತ್ತು. ಆದರೆ ಈಗಿನ್ನೂ ಸಿದ್ಧತೆಯ ಓಟ ಶುರು. ಈ ಓಟವೂ ಶುರುವಾಗಿರುವುದು ಮುಖ್ಯ ಕಾರ‍್ಯದರ್ಶಿ, ಸಿಎಂ ನವರ ಕಾರ‍್ಯದರ್ಶಿಗಳ ಸಮಯ ಪ್ರಜ್ಞೆಯಿಂದಲೇ ಹೊರತು ಸಂಸ್ಕೃತಿ ಇಲಾಖೆಯ ಅಧಿಕಾರಿಗಳಿಂದಲ್ಲ. Continue reading

ಕನ್ನಡ ಜಾತ್ರೆಗೆ ಬನ್ನಿ…ಮರೆಯಬೇಡಿ

ಬೆಂಗಳೂರಿನಲ್ಲಿ ಫೆ. 4 ರಿಂದ 6 ರವರೆಗೆ ನುಡಿಜಾತ್ರೆ. 40 ವರ್ಷಗಳ ನಂತರ ಬೆಂಗಳೂರಿಗೆ ಬಂದಿದೆ ನುಡಿತೇರು. ನ್ಯಾಷನಲ್ ಕಾಲೇಜು ಮೈದಾನದಲ್ಲಿ ತೇರನೆಳೆಯಲು ಸರ್ವ ಸಿದ್ಧತೆಯೂ ನಡೆದಿದೆ.

ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನಲ್ಲೂರು ಪ್ರಸಾದ್ ಮತ್ತು ಪದಾಧಿಕಾರಿಗಳ ತಂಡ ಸಿದ್ಧತೆಯ ಬೆನ್ನಿಗಿದೆ ಎಂದರೆ ಮಾತು ಮುಗಿಯುವುದಿಲ್ಲ. ಸಂಪ್ರದಾಯದಂತೆ ಸ್ವಾಗತ ಸಮಿತಿಯ ಅಧ್ಯಕ್ಷರೂ ಆದ ಜಿಲ್ಲಾ ಉಸ್ತುವಾರಿ ಸಚಿವ ಆರ್. ಅಶೋಕ್, ಬೆಂಗಳೂರು ನಗರ ಜಿಲ್ಲಾಧಿಕಾರಿಗಳು…ಹೀಗೆ ಅಸಂಖ್ಯಾತ ಅಧಿಕಾರಿಗಳ ತಂಡವೂ ಊರನ್ನು ಸಜ್ಜಾಗಿಸಲು ತೊಡಗಿದೆ. ಇವರ ಮಧ್ಯೆಯೇ ಅಲ್ಲಲ್ಲಿ ತೋಳಗಳೂ ಸೇರಿಕೊಂಡಿವೆ, ದೊಡ್ಡ ಸಮಾರಾಧನೆ, ಸಿಕ್ಕಷ್ಟು ಸಿಗಲಿ, ಜೋಳಿಗೆ ತುಂಬಿಕೊಳ್ಳೋಣ ಎಂಬ ಮನೋಧರ್ಮದ ಕೆಲ ಅಧಿಕಾರಿಗಳು, ಕೆಲ ಸಾಹಿತ್ಯಾಸಕ್ತ ಸ್ವಯಂ ಸೇವಕರಂತೆ ಸೋಗು ಹಾಕಿಕೊಂಡವರೂ ಇದ್ದಾರೆ. ಇವರೆಲ್ಲಾ ಶೇ. 10 ರೊಳಗೆ ಬರುವವರು. ನಮ್ಮ ಸಮಾಜದಲ್ಲಿ ಇಂಥವರಿಲ್ಲದೇ ಏನೂ ನಡೆಯದು. ದೃಷ್ಟಿಬೊಟ್ಟಿನಂತೆ ಎಲ್ಲೆಲ್ಲೂ ರಾರಾಜಿಸುತ್ತಿರುತ್ತಾರೆ, ಹೆಚ್ಚು ಶೋಭಾಯಮಾನವಾಗದಂತೆ ಉಳಿದವರೆಲ್ಲರೂ ಎಚ್ಚರದಿಂದಿರಬೇಕಷ್ಟೇ.

40 ವರ್ಷಗಳ ಹಿಂದೆ ಚಾಮರಾಜಪೇಟೆ ಹೈಸ್ಕೂಲ್ ನ ಕೋಟೆ ಹೈಸ್ಕೂಲ್ ಮೈದಾನದಲ್ಲಿ ನಡೆದ ಸಮ್ಮೇಳನಕ್ಕೆ ದೇ.ಜವರೇಗೌಡರು ಅಧ್ಯಕ್ಷತೆ ವಹಿಸಿದ್ದರು. ಸುಮಾರು 5 ಸಾವಿರ ಮಂದಿ ಭಾಗವಹಿಸಿರಬಹುದೆಂಬುದು ಒಂದು ಅಂದಾಜು. ಈಗ ಹತ್ತರಷ್ಟೋ, ಇಪ್ಪತ್ತರಷ್ಟೋ ಮಂದಿ ಭಾಗವಹಿಸಬಹುದು.

ಬೆಂಗಳೂರೆಂದರೆ ಒಂದಿಷ್ಟು ಆಕರ್ಷಣೆ ಬೇರೆ. ಹಾಗಾಗಿ ಬರುವವರಿಗೆ ಕೊರತೆಯಿಲ್ಲ, ಗೋಷ್ಠಿಗಳಲ್ಲಿ, ಕಾರ್ಯಕ್ರಮಗಳಲ್ಲಿ ಜನರಿರುತ್ತಾರೋ ಇಲ್ಲವೋ ನಂತರದ ಮಾತು. ಪುಸ್ತಕ ಮಳಿಗೆಗಳಲ್ಲಿ ಜನರೊಂದಿಷ್ಟು ತೋರಬಹುದು, ತೋರದೆಯೂ ಇರಬಹುದು. ಆದರೆ ಬಸ್ಸುಗಳಲ್ಲಿ ಜನ ಖಂಡಿತಾ ತೋರುತ್ತಾರೆ, ಅದಕ್ಕೆ ಅಚ್ಚರಿ ಪಡಲೂ ಬೇಕಿಲ್ಲ.

ಸಮ್ಮೇಳನಕ್ಕೆ ಸಿದ್ಧತೆ ನಡೆಸುವವರಲ್ಲಿ ಹೀಗೇ ಮಾತನಾಡುತ್ತಿದ್ದಾಗ, “ನೋಡಿ, ಮೊದಲ ದಿನದ ಉದ್ಘಾಟನೆ, ಊಟ ಮತ್ತು ವಸತಿ ಸರಿ ಹೋದರೆ ಸಮ್ಮೇಳನ ಯಶಸ್ವಿಯಾದಂತೆಯೇ. ಎರಡನೇ ದಿನಕ್ಕೆ ಜಾಸ್ತಿ ತಲೆ ಕೆಡಿಸಿಕೊಳ್ಳಬೇಕಿಲ್ಲ’ ಎಂದರು. ಅದೂ ನಿಜವೆ, ವಿಮಾನ ಒಮ್ಮೆ ಟೇಕಾಫ್ ಆದರೆ ಮುಗಿಯಿತು, ಮತ್ತಿರುವ ಅಪಾಯ ಆಕಸ್ಮಿಕದ್ದು. ಮೊದಲನೆ ದಿನ ಮಾಧ್ಯಮದವರೂ ಬರೆದು ಮುಗಿಸುವ ಸಂಭ್ರಮದಲ್ಲಿರುತ್ತಾರೆ. ಅಂದು ಏನೇ ನಡೆದರೂ ಸುದ್ಧಿ ಹಾಗೂ ಮಿಸ್ ಆಗಬಾರದೆನ್ನುವ ಧಾವಂತ. ಬರೆದದ್ದೆಲ್ಲವೂ ಅಚ್ಚಾಗುತ್ತದೆ, ಅದೂ ಸಮಸ್ಯೆಯಲ್ಲ. ಆದರೆ, ಎರಡನೇ ದಿನ ಮಾಧ್ಯಮದವರ ಉತ್ಸಾಹವೇನೂ ಕುಂದುವುದಿಲ್ಲ, ಆದರೆ ಅವರು ಬರೆದರೂ ಜನ ತಲೆ ಕೆಡಿಸಿಕೊಳ್ಳುವುದಿಲ್ಲ. ಕಾರಣವಿಷ್ಟೇ, ಅಲ್ಲಿರಬೇಕಾದ ಬಹುತೇಕ ಜನರೆಲ್ಲಾ ಬೇರೆಲ್ಲೋ ತಿರುಗುತ್ತಿರುತ್ತಾರೆ !

ಇವೆಲ್ಲದರ ಮಧ್ಯೆ ನಾವು ಬೆಂಗಳೂರಿನಲ್ಲಿ ನಡೆಯುತ್ತಿರುವ ಅಕ್ಷರ ಜಾತ್ರೆಯನ್ನು ಕಂಡು ಸಂಭ್ರಮಿಸಬೇಕಾದದ್ದಕ್ಕೆ ಹಲವು ಕಾರಣಗಳಿವೆ. ಬೆಂಗಳೂರು-ಪರಭಾಷಿಗರದ್ದೇ ಊರು ಎಂಬ ಅಪವಾದಕ್ಕೆ ಗುರಿಯಾಗಿರುವ ಹೊತ್ತು. ಈ ಸಂದರ್ಭದಲ್ಲಿ ಆ ಜನ ಸಮುದಾಯಕ್ಕೆ ಉತ್ತರ ಕೊಡುವ ರೀತಿಯಲ್ಲಲ್ಲ, ನಮ್ಮ ಮನೆಯ ಹಿರಿಮೆಯನ್ನು ಹಿಡಿದು ಸಾರಲಿಕ್ಕಾದರೂ ಸಮ್ಮೇಳನಕ್ಕೆ ಬರಬೇಕು. ನಿಮ್ಮ ಜತೆಗೆ ಒಂದಿಷ್ಟು ನಿಮ್ಮ ಗೆಳೆಯರಾದ ಒಂದಿಷ್ಟು ತಮಿಳರನ್ನು, ತೆಲುಗಿರನ್ನು, ಮಲಯಾಳಿಗಳನ್ನು ಕರೆದುಕೊಂಡು ಬನ್ನಿ. ಸಾಹಿತ್ಯ ಪರಿಷತ್ತಿನವರು ಬೆಂಗಳೂರಿನಲ್ಲೇ ಇರುವ ಒಂದಿಷ್ಟು ಪರಭಾಷಿಗ ಸಾಹಿತಿಗಳನ್ನು ಆಹ್ವಾನಿಸಬೇಕಿತ್ತು. ಆ ಲೆಕ್ಕದಲ್ಲಿ ಒಂದು ಬಗೆಯ ಸೌಹಾರ್ದ ಸಮ್ಮೇಳನ ಎನಿಸಬಹುದಿತ್ತು.

ನಮ್ಮೂರಿನಲ್ಲಿ ಕನ್ನಡದ ಜಾತ್ರೆ ನಡೆಯುತ್ತಿರಬೇಕಾದರೆ, ಅದು ಹೇಗಿರುತ್ತದೆ ಎಂಬ ಕುತೂಹಲಕ್ಕಾದರೂ ನೋಡಬೇಕು. ಅದಕ್ಕಾದರೂ ಬನ್ನಿ, ಒಂದಿಷ್ಟು ಪುಸ್ತಕಗಳನ್ನು ಕೊಂಡು ಹೋಗಿ. ಪುರಸೊತ್ತಾದರೆ ಓದಿ, ಇಲ್ಲವಾದರೆ ಮುಂದಿನ 25 ವರ್ಷಗಳಲ್ಲಿ ಅದು ಆಂಟಿಕ್ ಪೀಸ್ ಆಗುತ್ತೆ.

ಫೆ. 4 ರಂದು ಸಮ್ಮೇಳನದ ಮೆರವಣಿಗೆ ಹೊರಡುತ್ತೆ. ಅದರಲ್ಲಿ ಹಿರಿಯಜೀವಿ ಜಿ. ವೆಂಕಟಸುಬ್ಬಯ್ಯನವರು ರಾರಾಜಿಸುತ್ತಿರುತ್ತಾರೆ. ಅವರ ಮೇಲೆ ರಾಜರಾಜೇಶ್ವರಿ. ಎಲ್ಲರನ್ನೂ ನೋಡೋಣ. ವಾಸ್ತವವಾಗಿ ಈ ಸಮ್ಮೇಳನ ಎಂಬುದು ನಮ್ಮೊಳಗಿನ ಔದಾರ್ಯದ ಸೆಲೆಯನ್ನು ಪುನರುಜ್ಜೀವಗೊಳಿಸಿಕೊಳ್ಳುವ ನೆಲೆಯೂ ಹೌದು. ನಮ್ಮೊಳಗಿನ ವ್ಯಕ್ತಿಯೊಬ್ಬನನ್ನೇ ಅವನ ಪ್ರತಿಭೆಗೆ, ಶ್ರಮಕ್ಕೆ ಗೌರವ ಕೊಟ್ಟು ಅತ್ಯುನ್ನತ ಸ್ಥಾನದಲ್ಲಿಟ್ಟು ಸಂಭ್ರಮಿಸುವುದಿದೆಯಲ್ಲ, ಅದು ಬಹಳ ದೊಡ್ಡದು. ಹಾಗಾಗಿ ತಪ್ಪದೇ ಬನ್ನಿ.

ಗುಲ್ವಾಡಿಯವರ ನೆನಪಿನಲ್ಲಿ ಎರಡೇ ಮಾತು…

ಗುಲ್ವಾಡಿಯವರು ನಿಧನರಾಗಿದ್ದಾರೆ.

ಕನ್ನಡ ಪತ್ರಿಕೋದ್ಯಮ ಗುಲ್ವಾಡಿಯವರನ್ನು ನೆನಪಿಸಿಕೊಳ್ಳಲು ಹಲವು ಕಾರಣಗಳಿವೆ. ಹತ್ತು ಹಲವು ಹೊಸ ನೆಲೆಗಳನ್ನು ಶೋಧಿಸಿದ ಅವರಿಗೆ ಹೊಸತನದ ಬಗೆಗಿದ್ದ ಆಪ್ತತೆಯೇ ಅವರನ್ನು ಪತ್ರಿಕೋದ್ಯಮದಲ್ಲಿದ್ದಷ್ಟೂ ಕಾಲ ಹಸಿರಾಗಿರಿಸಿತ್ತು.

ನನಗೂ ತರಂಗ ಆಪ್ತವಾಗುವುದಕ್ಕೆ ಬಹಳಮುಖ್ಯವಾದ ಕಾರಣವೆಂದರೆ, ಅವರ ಅಂತರಂಗ-ಬಹಿರಂಗ. ಸಂಪಾದಕೀಯ ಬರಹಗಳು ಹೊಸ ಬಗೆಯಲ್ಲಿ ಆಲೋಚಿಸುವಂತೆಯೂ ಮಾಡಿದ್ದವು. ಅಷ್ಟೇ ಅಲ್ಲದೇ, ನಮ್ಮ ಕ್ರಿಯಾಶೀಲತೆಯ ಕೊರತೆಯನ್ನು ಎತ್ತಿ ಹೇಳುತ್ತಿದ್ದವು.

ನನ್ನ ಅರಿವಿಗೆ ಬಂದಂತೆ (ನನ್ನ ವಿದ್ಯಾರ್ಥಿಯ ದೆಸೆಯಲ್ಲಿದ್ದಾಗ) ಗುಲ್ವಾಡಿಯವರೊಬ್ಬರೇ ವಾರಪತ್ರಿಕೆಯಂಥ ಕಡೆಯೂ ತೀಕ್ಷ್ಣವಾಗಿ ಸಮಕಾಲೀನ ಬೆಳವಣಿಗೆಗಳಿಗೆ ಸ್ಪಂದಿಸುತ್ತಿದ್ದುದು ಅನಿಸುತ್ತದೆ. ದಿನಪತ್ರಿಕೆಗಳ ಉಸಾಬರಿಗೆ ನಾನು ಹೋಗುವುದಿಲ್ಲ.

ಒಂದು ವಾರಪತ್ರಿಕೆಗೆ ಉತ್ಪನ್ನದ ಮೌಲ್ಯವನ್ನೂ ನೀಡಿದವರು ಬಹುಶಃ ಅವರೇ. ಉತ್ಪನ್ನದ ಮೌಲ್ಯ ಎಂದ ಕೂಡಲೇ ನಕಾರಾತ್ಮಕ ನೆಲೆಯಲ್ಲಿ ಅರ್ಥೈಸಲು ಹಲವು ಸಂಗತಿಗಳಿವೆ. ಪತ್ರಿಕೋದ್ಯಮವನ್ನೇ ಲಾಭವೆನ್ನುವಂತೆ ಮಾಡಿದರೆಂಬ ಆರೋಪಕ್ಕೂ ಗುರಿಯಾಗಬೇಕಾದೀತೇನೋ. ಆದರೆ ಅದ್ಯಾವುದೂ ಅಲ್ಲ. ಬಹಳ ಪ್ರಮುಖವಾಗಿ ಪತ್ರಿಕೆಯೂ ಉತ್ಪನ್ನದ ಮಾದರಿಯಾಗಬೇಕೆಂಬುದರ ಹಿಂದೆ ಇರಬಹುದಾದ ಒಂದು ಸಕಾರಾತ್ಮಕ ನೆಲೆಯೆಂದರೆ ವೃತ್ತಿಪರತೆ.

ವೃತ್ತಿಪರತೆ ಇಲ್ಲದೇ ಯಾವ ಕೆಲಸವನ್ನೂ ಮಾಡಬಾರದು. ಹಾಗೆ ಪತ್ರಿಕೋದ್ಯಮದಲ್ಲಿ ಅದರಲ್ಲೂ ಕನ್ನಡ ಪತ್ರಿಕೋದ್ಯಮಕ್ಕೆ ವೃತ್ತಿಪರತೆಯನ್ನು ಆ ಮೂಲಕವೇ ಪರಿಚಯಿಸಿದವರಲ್ಲಿ ಗುಲ್ವಾಡಿಯವರೂ ಒಬ್ಬರೆಂದರೆ ತಪ್ಪೇನೂ ಅಲ್ಲ.

ಪ್ರತಿ ವಾರದ ಸಂಚಿಕೆಯನ್ನೂ ಅತ್ಯಾಕರ್ಷಕವಾಗಿ ಮಾಡಬೇಕೆನ್ನುವ ಹಠವೇ ಅವರನ್ನು ಎಷ್ಟೋ ಬಾರಿ ಗೆಲ್ಲಿಸಿತ್ತು. ವಾಸ್ತವವಾಗಿ ವಾರಕ್ಕೊಂದು ವಿಷಯವನ್ನು ಹುಡುಕುವುದು ಹಾಗೂ ಅದಕ್ಕೆ ಹತ್ತಾರು ಪುಟಗಳ ಸಾಮಗ್ರಿಗಳನ್ನು ಹೊಂದಿಸುವುದು ಅತ್ಯಂತ ಕಷ್ಟದ ವಿಷಯ. ಯಾವುದಾದರೂ ಸಮಕಾಲೀನ ಬೆಳವಣಿಗೆಗಳನ್ನು ಘಟಿಸುತ್ತಿದ್ದರೆ, ಅದರ ಹಿನ್ನೆಲೆಯನ್ನು ಕೆದಕುವುದೋ, ಭವಿಷ್ಯವನ್ನು ಹುಡುಕುವುದೋ ಒಂದಿಷ್ಟು ಗ್ರಹಿಕೆಯ ಸಾಧ್ಯತೆಗೆ ನಿಲುಕಿ ಮುಗಿದು ಹೋಗುತ್ತದೆ.

ಆದರೆ ಏನೂ ಘಟಿಸದಿದ್ದರೂ, ಏನಾದರೂ ಓದುವಂಥ ಸಾಮಗ್ರಿ ಕೊಡುವುದು ಸ್ವಲ್ಪ ಕಷ್ಟವೇ. ಅದರಲ್ಲೂ ಆ ಕಾಲದಲ್ಲಿ (90ರ ದಶಕ) ಹೀಗೆಲ್ಲಾ, ಇಷ್ಟೆಲ್ಲಾ ರಾಡಿಯೂ ಇರಲಿಲ್ಲ, ಘಟನೆಗಳೂ ಇರಲಿಲ್ಲ. ಜತೆಗೆ ಪ್ರತಿ ಓದುಗನಿಗೆ ಪತ್ರಿಕೆಯ ತರಿಸುವುದು ಕೇವಲ ಪ್ರತಿಷ್ಠೆಯ ಸಂಗತಿಯಾಗಿಯಷ್ಟೇ ಉಳಿದಿರಲಿಲ್ಲ. ವಾರಕ್ಕೆ ಓದುವಷ್ಟು, ನಾವು ತಿಳಿದುಕೊಳ್ಳುವಷ್ಟು ಅದರಲ್ಲಿ ಸಿಗುತ್ತದೆ ಎಂದಿದ್ದರೆ ಮಾತ್ರ ಖರೀದಿಸುವ ರಿಸ್ಕ್. ಅದರಲ್ಲೂ ನಾನು ಅಕ್ಕಪಕ್ಕದ ಮನೆಯಲ್ಲೋ ಓದಿ ಮುಗಿಸಿದವನು.

ಆಗ ಪ್ರತಿ ಸಂಚಿಕೆಯ ಲೀಡ್ ಅನ್ನು ಓದಿ ಅರ್ಥೈಸಿಕೊಳ್ಳುವಷ್ಟು ಬೆಳೆದಿರಲಿಲ್ಲ. ನಮಗೆ ಬಾಲವನದಲ್ಲಿ ಕಾರಂತಜ್ಞ ಬಹಳ ಇಷ್ಟವಾಗುತ್ತಿದ್ದ ಕಾಲಂ. ಯಾವುದೋ ಮಕ್ಕಳು ಕೇಳುತ್ತಿದ್ದ ಪ್ರಶ್ನೆಗೆ ಹಿರಿಯ ಸಾಹಿತಿ ಶಿವರಾಮ ಕಾರಂತರು ಉತ್ತರಿಸುತ್ತಿದ್ದ ಪರಿ ನಿಜಕ್ಕೂ ಅಚ್ಚರಿ ಮೂಡಿಸುತ್ತಿತ್ತು. ಮತ್ತೊಂದು ಸಂಗತಿಯೆಂದರೆ ಕಾರಂತರ ಬಗೆಗಿನ ಗೌರವ ಇಮ್ಮಡಿಸಲೂ ತರಂಗವೇ ಕಾರಣ. ಅಷ್ಟು ದೊಡ್ಡ ಸಾಹಿತಿ ಇಷ್ಟು ಚಿಕ್ಕ ಮಕ್ಕಳ ಪ್ರಶ್ನೆಗಳಿಗೂ ಉತ್ತರಿಸುತ್ತಾರೆ ಎಂಬುದೇ ಸೋಜಿಗ ಮೂಡಿಸಿತ್ತು. ನಾನೂ ಹಲವು ಬಾರಿ ಪೋಸ್ಟ್ ಕಾರ್ಡಿನಲ್ಲಿ ಪ್ರಶ್ನೆ ಬರೆದು ತರಂಗ ವಾರಪತ್ರಿಕೆ, ಮಣಿಪಾಲ, ಉಡುಪಿ ಎಂದು ವಿಳಾಸ ಬರೆದು ಕಳಿಸಿದ್ದು ಬೇಕಾದಷ್ಟಿತ್ತು. ನನ್ನ ದುರಾದೃಷ್ಟ ಒಂದು ಪ್ರಶ್ನೆಯೂ ಆಯ್ಕೆಯಾಗಲಿಲ್ಲ, ಕಾರಂತಜ್ಜ ಉತ್ತರಿಸಲಿಲ್ಲ.

ಹೀಗೇ ಹಪ್ಪಳ-ಸಂಡಿಗೆಯಿಂದ ಹಿಡಿದು ಹತ್ತು ಹಲವು ವೈವಿಧ್ಯಗಳನ್ನು ನೀಡಿದ ತರಂಗದ ಬೆನ್ನೆಲುಬಾಗಿ ದುಡಿದವರು. ಆಗ ಬರಿದೇ ಹಪ್ಪಳ ಸಂಡಿಗೆ ಬರುತ್ತೆ ಎಂದು ಹೀಗಳೆದವರೂ ಇದ್ದರು. ಆದರೆ, ಲೈಫ್ ಸ್ಟೈಲ್ ನಲ್ಲಿ ಬದಲಾಗುತ್ತಿದ್ದ ಪರಿಯನ್ನು ಗ್ರಹಿಸಿ ಇಂಥವೆಲ್ಲವೂ (ಹೊಸರುಚಿ, ಹಪ್ಪಳಸಂಡಿಗೆ, ಪರ್ಸನಾಲಿಟಿ ಡೆವಲಪ್ ಮೆಂಟ್ ಇತ್ಯಾದಿ) ಮುಂದಿನ ದಿನಗಳಲ್ಲಿನ ಸುದ್ದಿಯ ಜಾಗವನ್ನು ಆಕ್ರಮಿಸುತ್ತವೆ ಎಂದು ಆಗಲೇ ಗ್ರಹಿಸಿದ್ದು ಇದೆಯಲ್ಲ, ಅದು ಒಬ್ಬ ಪತ್ರಕರ್ತನ ಗ್ರಹಿಕೆ. ದುರಂತವೆಂದರೆ ದಿನಪತ್ರಿಕೆಯೂ ಸೇರಿದಂತೆ ಇಂದು ಹಲವೆಡೆ ಪ್ರಕಟವಾಗುತ್ತಿರುವ ಹಲವು ಅಂಕಣ ಬರಹಗಳಲ್ಲಿ ಇಂಥದೊಂದು ದೂರದ ನೆಲೆಯೇ ಗೋಚರಿಸುವುದಿಲ್ಲ. ಎಲ್ಲವೂ ಅಂದಂದು ಮಾಡಿದ ಅಡುಗೆ, ಹಳಸುವ ಮುನ್ನ ಬಳಸಿದರಷ್ಟೇ ಭಾಗ್ಯ ಎನ್ನುವಂತಾಗಿದೆ. ಈ ಮಧ್ಯೆ ಕೆಲವೇ ಮಂದಿ ಇದ್ದಾರೆ, ಒಂದಿಷ್ಟು ದೂರಕೇಂದ್ರವನ್ನಿಟ್ಟುಕೊಂಡು ಗ್ರಹಿಸುವವರು ಇದ್ದಾರೆ.

ಹೀಗೆ ನಾನಾ ನೆಲೆಗಳಲ್ಲಿ ಕನ್ನಡ ಪತ್ರಿಕೋದ್ಯಮದಲ್ಲಿ ತನ್ನದೇ ಆದ ಜಾಗವನ್ನು ಗುರುತಿಸಿಕೊಳ್ಳುತ್ತಾ ಹೋದ ಗುಲ್ವಾಡಿಯವರು “ನೂತನ” ಪತ್ರಿಕೆಯ ಸಂಪಾದಕರಾಗಿದ್ದಾಗ ಭೇಟಿಯಾಗುವ ಅವಕಾಶ ಸಿಕ್ಕಿತ್ತು. ಆಗ ನಾನು ವಿಜಯ ಕರ್ನಾಟಕದ ನೌಕರ. ವಿಜಯ ಕರ್ನಾಟಕ ಪತ್ರಿಕೆಯಲ್ಲೂ ನನ್ನ ಕೆಲವು ವರದಿಗಳು ಪ್ರಕಟವಾಗುತ್ತಿದ್ದವು. ನಾನು ನನ್ನ ಹೆಸರನ್ನು ಹೇಳಿ ಅವರ ನೂತನ ಕಚೇರಿಯಲ್ಲೇ ಪರಿಚಯಿಸಿಕೊಂಡೆ. “ಹೌದು, ನೋಡ್ತೀನ್ರೀ ನಿಮ್ಮ ವರದಿಗಳನ್ನು, ಸಾಂಸ್ಕತಿಕ, ಸಾಹಿತ್ಯಕ್ಕೆ ಸಂಬಂಧಿಸಿದಂತೆ ಬರೆಯುತ್ತೀರಿ’ ಎಂದು ಹೇಳಿ ಊರು-ಕೇರಿಯನ್ನೆಲ್ಲಾ ವಿಚಾರಿಸಿ ಬೆನ್ನುತಟ್ಟಿ ಕಳುಹಿಸಿದರು. ನಂತರ ಸಿಗಲು ಸಾಧ್ಯವಾಗಲೇ ಇಲ್ಲ.

ನನಗೆ ಎಷ್ಟೋ ಬಾರಿ ಅನಿಸಿದ್ದಿದೆ. ಪ್ರತಿ ಕಾಲಘಟ್ಟದಲ್ಲೂ ಸಮಾಜದೊಳಗೆ ಆಗುವ ಬದಲಾವಣೆಯನ್ನು ಸೂಕ್ಷ್ಮ ನೆಲೆಯಲ್ಲಿ ಗ್ರಹಿಸುತ್ತಲೇ ಅದಕ್ಕೆ ನಮ್ಮೊಳಗೂ ಬದಲಾವಣೆಯ ಗಾಳಿಯನ್ನು ಬಿಟ್ಟುಕೊಂಡು ತಯಾರಾಗಬೇಕಾದವನು ಪತ್ರಕರ್ತ. ಒಂದು ಸಂಸ್ಥೆ, ಒಂದು ವ್ಯವಸ್ಥೆಯೊಳಗೆ ಇರುವವರೆಗೂ ಅಂಥದೊಂದು ಪ್ರಕ್ರಿಯೆಯಲ್ಲಿ ಅನಿವಾರ್ಯವಾಗಿ ಬದುಕಿರುತ್ತೇವೆ (ಹಾಗೆ ಬದುಕದವರು ಈಗ ಬೇಕಾದಷ್ಟು ಮಂದಿ ಇದ್ದಾರೆ, ಬಿಡಿ), ಬದುಕುವ ಪ್ರಯತ್ನ ನಡೆಸುತ್ತಿರುತ್ತೇವೆ. ಅಂಥದೊಂದು ವ್ಯವಸ್ಥೆಯಿಂದ ಹೊರಬಂದು ಬಿಟ್ಟರೆ, ಬಾಧಿಸುವ ದೊಡ್ಡ ಸಮಸ್ಯೆಯೆಂದರೆ ಆ ನಮ್ಮನ್ನು ನಾವು ಪರಿಷ್ಕೃತಗೊಳಿಸಿಕೊಳ್ಳುವ ಪ್ರಕ್ರಿಯೆಯಿಂದ ದೂರ ಉಳಿದು ಬಿಡುವುದೇ ಹೆಚ್ಚು.

ಈ ಮಾತಿನ ಮಧ್ಯೆಯಲ್ಲೂ “ನೂತನ” ಬಂದ ಹೊತ್ತು ಕನ್ನಡ ಪತ್ರಿಕೋದ್ಯಮವಷ್ಟೇ ಅಲ್ಲ, ಭಾರತೀಯ ಪತ್ರಿಕೋದ್ಯಮದಲ್ಲೇ ತಂತ್ರಜ್ಞಾನ ಹುಟ್ಟುಹಾಕಿದ ಹತ್ತು ಹಲವು ಸವಾಲುಗಳಿದ್ದವು. ಅದನ್ನು ಗ್ರಹಿಸುವಾಗ ಸ್ವಲ್ಪ ಕಷ್ಟವಾಯಿತೇನೋ ? ನೂತನ ನಿಲ್ಲಲಿಲ್ಲ. ಮೂರ್ನಾಲ್ಕು ವರ್ಷಗಳಲ್ಲಿ ತಂತ್ರಜ್ಞಾನ ನಮ್ಮ ಓದಿನ ವೈವಿಧ್ಯ, ಬಯಸುವ ಮಾದರಿ, ಮಾಹಿತಿಯ ರೀತಿ ಎಲ್ಲವನ್ನೂ ಬದಲಿಸಿತು. ಇಂಥ ಬೆಳವಣಿಗೆಯ ನೆಲೆಗೆ ಹೊಸತನ್ನು ತರುವ ಪ್ರಯತ್ನ ಗುಲ್ವಾಡಿಯವರದ್ದಾಗಿತ್ತಾದರೂ, ಅದೇಕೋ ಹೊಸ ತಲೆಮಾರಿಗೆ ರುಚಿಸಲಿಲ್ಲ. ಹಾಗಾಗಿ ಪ್ರಯತ್ನ ವಿಫಲವಾಯಿತು. ಇಂಥದೊಂದು ಗಳಿಗೆಯಲ್ಲಿ ಗುಲ್ವಾಡಿಯವರು ನೂತನದಿಂದ ಹೊರ ಹೊರಟಾಗ ನನಗೆ ಅನಿಸಿದ್ದ ಮಾತು…ಇಂದಿಗೂ ಅದೇ ನನ್ನ ವೇದವಾಕ್ಯವೂ ಹೌದು ಹಾಗೂ ನನ್ನ ಆತ್ಮ ವಿಶ್ವಾಸ ವೃದ್ಧಿಸಿದ ವಾಕ್ಯವೂ ಹೌದು. ನಾನು ನನ್ನ ಹೊಸ ಹುದ್ದೆಯನ್ನು ಸ್ವೀಕರಿಸುವ ಸಂದರ್ಭದಲ್ಲೂ ನನ್ನ ನೆರವಿಗೆ ಬಂದಿರುವ ವಾಕ್ಯ…”ಪ್ರಯತ್ನಕ್ಕೆ ಒಂದೇ ಕಾರಣ, ಫಲಿತಾಂಶಕ್ಕೆ ನಾನಾ ಕಾರಣ’. ಪ್ರಯತ್ನ ಪ್ರಾಮಾಣಿಕವಾಗಿರಬೇಕಷ್ಟೆ.

ಇಂದೂ ಗುಲ್ವಾಡಿಯವರು ತಮ್ಮ ಎರಡನೇ ಇನ್ನಿಂಗ್ಸ್ ನಲ್ಲಿ ಸೋತಿದ್ದರೆ ಅದಕ್ಕೆ ಅವರ ಪ್ರಯತ್ನವಲ್ಲ, ಫಲಿತಾಂಶದ ನೆಲೆಯಲ್ಲಿ ಕೇಂದ್ರೀಕೃತವಾದ ನಾನಾ ಅಂಶಗಳೆಂದೇ ಅನಿಸುತ್ತದೆ. ಯಾವುದಕ್ಕೂ ಗುಲ್ವಾಡಿಯವರ ಶ್ರಮ, ಸಜ್ಜನಿಕೆಗೆ ನಮಸ್ಕಾರ.

‘ನನಗೇನೂ ನಾಚಿಕೆಯಿಲ್ಲ, ನನಗೂ ಮಂತ್ರಿ ಸ್ಥಾನ ಬೇಕು !’

ಇದು ನನ್ನ ತಲೆಮಾರಿನ ದುರ್ದೈವ. ಚುನಾವಣೆಯಿಂದ ಚುನಾವಣೆಗೆ ನಮ್ಮನ್ನು ಆಳುವ ನಾಯಕರ ಬೌದ್ಧಿಕ ಹಾಗೂ ನೈತಿಕ ದಾರ್ರಿದ್ರ್ಯವನ್ನು ಕಂಡು ನಿಜಕ್ಕೂ ಖೇದ ಎನಿಸುತ್ತದೆ. ನಾವು ಇವರ ಆಡಳಿತದ ಅವಧಿಯಲ್ಲಿ ಬದುಕಿದ್ದೇವೆ ಎಂಬುದೂ ಒಂದು ನಾಚಿಕೆಗೇಡಿತನದ ಸಂಗತಿಯಾಗಿ ಪರಿಣಮಿಸುತ್ತಿದೆ.

ಈ ಮಾತನ್ನು ಸುಮ್ಮನೆ ಟೀಕೆಗೆಂದು ಹೇಳುತ್ತಿಲ್ಲ. ಮೂರು ದಿನಗಳಿಂದ ನಾವು ಸಮೂಹ ಮಾಧ್ಯಮಗಳಲ್ಲಿ, ಪತ್ರಿಕೆಗಳಲ್ಲಿ ನೋಡುತ್ತಿದ್ದೇವೆ. ಮಂತ್ರಿ ಸ್ಥಾನಕ್ಕೆ ನಾಚಿಕೆ ಬಿಟ್ಟು ಪಡುತ್ತಿರುವ ಪಡಿಪಾಟಲು ಕಂಡರೆ ಬೇಸರವಷ್ಟೇ ಆಗದು ; ಹೇಸಿಗೆ ಹುಟ್ಟುತ್ತದೆ. ಜನಸೇವೆ ಮಾಡಲು ಶಾಸಕರಾದರಷ್ಟೇ ಸಾಕು ಎಂದು ಚುನಾವಣೆಗೆ ಮುನ್ನ ಹಲುಬುವ ಮಂದಿಗೀಗ ಮಂತ್ರಿಯಾಗಲೇಬೇಕಾದ ಅನಿವಾರ‍್ಯ. ಇಲ್ಲದಿದ್ದರೆ ಹುಟ್ಟಿದ್ದೇ ವ್ಯರ್ಥ (ವೇಸ್ಟು ಎನ್ನುವ ಹಾಗೆ). ಒಂದರ್ಥದಲ್ಲಿ ಯಾರನ್ನ ಸಚಿವರನ್ನಾಗಿಸಿದರೂ ‘ವೇಸ್ಟ್’ ಎನ್ನುವಂತೆಯೇ ಬಹುತೇಕರಿದ್ದಾರೆ. ಅವರಲ್ಲೇ ಪೈಪೋಟಿ ನಡೆದಿರುವುದು ವ್ಯಂಗ್ಯ.

ಎರಡು ತಲೆಮಾರುಗಳ ಹಿಂದೆ ಅಥವಾ 1960-70 ರ ದಶಕದಲ್ಲಿ ಆಡಳಿತ ಮಾಡುವವರು ಹೇಗಿದ್ದರು ? ಎಂಥವರು ಮಂತ್ರಿಯಾಗುತ್ತಿದ್ದರು ? ಎಂಥವರು ನಮ್ಮನ್ನು ಪ್ರತಿನಿಧಿಸುತ್ತಿದ್ದರು ? ಎಂಬಂಥ ಹಲವು ಸಂಗತಿಗಳನ್ನು ಈಗ ಪ್ರಸ್ತಾಪಿಸುವುದು ಬೇಡ. ಕಾರಣವಿಷ್ಟೇ. ಈಗಿನವರಿಗೆ ಹಿಂದಿನದೆಲ್ಲಾ ಪ್ರಯೋಜನಕ್ಕೆ ಬಾರದಂಥವು. ಆದರೆ ಮೂರು ದಿನಗಳಿಂದ ಅತ್ಯಂತ ಉಚ್ಛ್ರಾಯ ಮಟ್ಟಕ್ಕೆ ತಲುಪಿರುವ ಮಂತ್ರಿಗಿರಿ ಪಡೆಯುವ ಪ್ರಹಸನ ಕಂಡಾಗ ನೂರು ದಿನದ ನಾಟಕದಂತಿದೆ.

ಮಂತ್ರಿಯಾಗಲು ನಿಮಗಿರುವ ಅರ್ಹತೆ ಏನು ? ಎಂದು ಪ್ರಶ್ನೆ ಕೇಳಿದರೆ, ಈ ಪ್ರಹಸನದಲ್ಲಿ ತೊಡಗಿರುವ ಪ್ರತಿಯೊಬ್ಬರೂ ಮತ್ತೊಬ್ಬನ ಅರ್ಹತೆಯನ್ನು ಪ್ರಶ್ನಿಸುತ್ತಾರೆ. ವಾಸ್ತವವಾಗಿ ಅದು ಆ ಪ್ರಶ್ನೆಗೆ ಉತ್ತರವಲ್ಲ. ಜತೆಗೆ ಉತ್ತರ ಅವರಲ್ಲೂ ಇಲ್ಲ. ಬೇಳೂರು ಗೋಪಾಲಕೃಷ್ಣರೇ, ನಿಮಗೆ ಯಾವ ಸೊಬಗಿಗೆ ಮಂತ್ರಿ ಸ್ಥಾನ ಕೊಡಬೇಕು ಎಂದರೆ, ‘ನಮ್ಮ ಬಗ್ಗೆ ಕೇಳ್ತೀರಲ್ಲಾ. ಅವರಿಗೆ ಏನಂತ ಕೊಟ್ಟಿದ್ದೀರಿ. ನಾನು ಒಂದು ಜನಾಂಗದ ಮುಖಂಡ. ನಮ್ಮವರೆಲ್ಲಾ ಇದೇ ಪಕ್ಷವನ್ನು ಬೆಂಬಲಿಸಿದ್ದಾರೆ. ಅಂದ ಮೇಲೆ ನನಗೆ ಮಂತ್ರಿ ಸ್ಥಾನ ಬೇಡವೇ? ಅವರು ನನ್ನ ಬಗ್ಗೆ ಆಡಿದ ಮಾತು ಇಡೀ ಜನಾಂಗಕ್ಕೆ ಮಾಡಿದ ಅವಮಾನ.ಅದಕ್ಕೆ ಸುಮ್ಮನಿರಬೇಕಾ’ ಎಂದು ಪ್ರಶ್ನಿಸುತ್ತಾರೆ. ಹಾಗಾದರೆ ಇಡೀ ಜನಾಂಗ ನಿಮ್ಮ ಗುತ್ತಿಗೆಯೇ? ನಿಮಗೆ ಮಂತ್ರಿ ಸ್ಥಾನ ಕೊಟ್ಟ ಕೂಡಲೇ ಜನಾಂಗಕ್ಕಾದ ಅವಮಾನ ಸರಿಯಾಗುತ್ತದಾ?’ ಎಂದು ಪ್ರಶ್ನಿಸಿದರೆ, ‘ಹಾಗೆಲ್ಲಾ ಕೇಳಬೇಡಿ. ನಮ್ಮ ಜನಾಂಗಕ್ಕೆ ಅವಕಾಶವೇ ಸಿಕ್ಕಿಲ್ಲ. ಅವಕಾಶ ವಂಚಿತರಿಗೆ ಅವಕಾಶ ಕೇಳೋದು ತಪ್ಪಾ?’ ಎಂಬ ಧಾಟಿಯಲ್ಲಿ ಮಾತನಾಡುತ್ತಾರೆ. ಪ್ರಶ್ನೆಗೆ ಮತ್ತೊಂದು ಪ್ರಶ್ನೆಯನ್ನು ಹುಟ್ಟು ಹಾಕುವುದು ಈಗಿನವರ ಜಾಣ್ಮೆ. Continue reading

‘ಕವಿತೆ’ ಆರಿತು, ಬೆಳಕಾಯಿತು !

ಕಿರಂ ತೀವ್ರ ಕಾವ್ಯ ಮೋಹಿ. ಅವರಿಗೆ ಕಾವ್ಯ ಎಂದರೆ ಬದುಕು.

ಬೇಂದ್ರೆ ಮತ್ತು ಅಲ್ಲಮನ ಕಾವ್ಯಗಳೆಂದರೆ ಇಷ್ಟ. ತೀರಾ ಸಾಹಿತ್ಯಕ ಭಾಷೆಯಲ್ಲಿ ಹೇಳುವುದಾದರೆ, ಒಬ್ಬ ಸ್ನಿಗ್ಘ ಸೌಂದರ್ಯದ ವಿಮರ್ಶಕ. ಕಾವ್ಯವನ್ನು ಅರ್ಥೈಸಬೇಕು ಅನ್ನುವ ವೇಗ ಇರಲಿಲ್ಲ. ಆದರೆ ಕಾವ್ಯವನ್ನು ಅನುಭವಿಸುವುದಕ್ಕೆ ಬೇಕಾದಂತ ತುಡಿತ , ನಿಧಾನತೆ ಅವರಲ್ಲಿತ್ತು. ಅದೇ ಕಾವ್ಯವನ್ನು ಹತ್ತಿರವಾಗಿಸಿದ್ದು.

ಕಿರಂ ಎಲ್ಲಿರುತ್ತಾರೋ ಅಲ್ಲಿ ಎರಡಕ್ಕೇ ಸ್ಥಾನ. ಒಂದು ಪ್ರೀತಿ ಮತ್ತು ಕಾವ್ಯ. ಪ್ರತಿಯೊಬ್ಬರನ್ನು ಅತ್ಯಂತ ಆಪ್ತವಾಗಿ ಮಾತನಾಡಿಸುತ್ತಿದ್ದ ಅವರು, ಮೊದಲು ಏನ್ರೀ ಚೆನ್ನಾಗಿದ್ದೀರ ಎಂದು ಪ್ರಶ್ನಿಸಿದ ನಂತರ ಕಾವ್ಯದ ಬಗ್ಗೆ ನೇರವಾಗಿ ಮಾತಿಗಿಳಿಯುತ್ತಿದ್ದರು. ಅವರ ಅಖಂಡ ಕಾವ್ಯ ಮೋಹ ಬೇರೆ ಏನನ್ನೂ ಮಾತನಾಡಲು ಬಿಡುತ್ತಿರಲಿಲ್ಲ. ತಾನು ಯಾರೊಂದಿಗೆ ಮಾತನಾಡುತ್ತಿದ್ದೇನೆ ಎಂಬ ಜಾಣ್ಮೆಯ ಎಚ್ಚರ ಕಾವ್ಯದ ಬಗ್ಗೆ ಮಾತನಾಡುತ್ತಿರುವಾಗ ಅವರನ್ನು ತಡೆಯತ್ತಿರಲಿಲ್ಲ.

ಕಾವ್ಯಮಂಡಲ ಎಂಬ ಸಂಸ್ಥೆ ಕಟ್ಟಿ ಯಾವ ನಿರ್ಭಿಡೆ ಇಲ್ಲದೆ ಯಾವುದೇ ಊರಿನ ಜನ ಅವರನ್ನು ಕರೆದು ಕಾವ್ಯದ ಬಗ್ಗೆ ಮಾತನಾಡಿ ಎಂದಾಗ ಅಲ್ಲಿ ಬಂದು ಪ್ರೀತಿ ಗಳಿಸುತ್ತಿದ್ದರು. ರನ್ನ, ಪಂಪನಿಂದ ಹಿಡಿದು ಬೇಂದ್ರೆಯವರಿಗಿನ ಎಲ್ಲ ಕಾವ್ಯಗಳ ಬಗ್ಗೆ ಹೊಸ ಹೊಳಹನ್ನು, ನೋಟವನ್ನು ನೀಡುತ್ತಿದ್ದ ಕಿರಂ, ಅವರ ಆಪ್ತತೆಯ ಪ್ರೀತಿ ಕಾವ್ಯದ ಬಗ್ಗೆ ಆಸೆ ಹುಟ್ಟುವಂತೆ ಮಾಡುತ್ತಿತ್ತು. ರನ್ನ ಪಂಪನಿಂದ ಹಿಡಿದು ಬೇಂದ್ರೆಯವರಿಗಿನ ಎಲ್ಲ ಕಾವ್ಯಗಳ ಬಗ್ಗೆ ಹೊಸ ನೋಟವನ್ನು ನೀಡುತ್ತಿದ್ದರು.

ಆಷಾಢ ಮುಗಿದು ಶ್ರಾವಣ ಮಾಸ ಪ್ರಾರಂಭವಾಗುವ ದಿನಗಳಲ್ಲಿ ಶ್ರಾವಣ ಬರುವ ಮುನ್ನವೇ ಶ್ರಾವಣ ಕವಿಯ ಬಳಿ ಹೊರಟರು. ಬೇಂದ್ರೆಯ ‘ಜೋಗಿ’ ಪದ್ಯದ ಬಗ್ಗೆ ಮಾತು ಪ್ರಾರಂಭಿಸಿ, ಕೊನೆಯಲ್ಲಿ ಅಲ್ಲಮನ ಬಗ್ಗೆಯೂ ಉಲ್ಲೇಖಿಸಿದ್ದು, ಬಹುಶಃ ತನ್ನ ಆತ್ಮದ ಕವಿಗಳಿಬ್ಬರಿಗೆ ಸಲ್ಲಿಸಿದ ಕೊನೆಯ ನಮಸ್ಕಾರವೂ ಇದ್ದಿರಬಹುದು.

ಇಂಗ್ಲಿಷಿನ ‘ಡೆಡ್ ಪೊಯೆಟ್ಸ್ ಸೊಸೈಟಿ’ ಚಿತ್ರದ ನಾಯಕ ಪಾತ್ರವಾದ ಮೇಷ್ಟ್ರು, ತನ್ನ ವಿದ್ಯಾರ್ಥಿಗಳಲ್ಲಿ ಕಾವ್ಯದ ಬಗ್ಗೆ ಹುಚ್ಚು ಹತ್ತಿಸುತ್ತಾನೆ. ಕಾವ್ಯದ ಪ್ರೀತಿ ಬೆಳೆಸಿಕೊಂಡರೆ ಜೀವನ ಎಷ್ಟು ಚೆನ್ನಾಗಿರುತ್ತದೆ ಎಂಬ ಬಗ್ಗೆ ಹೇಳಿಕೊಡುತ್ತಾನೆ. ಆ ಚಿತ್ರದ ನಾಯಕನಂತೆ ಕಿರಂ ಇದ್ದರು ಎಂದರೆ ತಪ್ಪಾಗಲಾರದೇನೋ.

ಅವರು ಬರೆದು ಸಾಧಿಸಬೇಕೆಂಬ ಬಗ್ಗೆ ಆಸಕ್ತಿ ಇಟ್ಟುಕೊಂಡವರಲ್ಲ. ಸ್ವತಃ ಬರೆದವರಲ್ಲ. ಬಹಳಷ್ಟು ಸಾಹಿತ್ಯವನ್ನು ತಿದ್ದಿದ್ದಾರೆ. ಸಲಹೆ ನೀಡದ್ದಾರೆ. ಇಡೀ ಕನ್ನಡ ಕಾವ್ಯದ ಬಗ್ಗೆ ದಾಖಲೆಯಾಗ ಬಹುದಾದ ಒಳನೋಟಗಳು, ಒಳವುಗಳು ಅವರೊಂದಿಗೆ ಕಳೆದುಹೋಗಿವೆ. ಕೀರಂ ಅವರನ್ನು ಕಳೆದುಕೊಂಡಿದ್ದೇವೆ , ಅವರ ಒಳನೋಟವನ್ನು ಕಳೆದುಕೊಂಡಿದ್ದೇವೆ. ಅದನ್ನು ಉಳಿಸಿಕೊಳ್ಳುವ ಎಚ್ಚರ ನಮ್ಮಲ್ಲಿರಿದ್ದುದೆ ವಿಷಾದ.

ಬೇಂದ್ರೆ ಅತ್ಯಂತ ಆಪ್ತ ಕವಿ, ಒಮ್ಮೊಮ್ಮೆಯೂ ಪದ್ಯವನ್ನು ಭಿನ್ನ ಕೋನದಿಂದ ನೋಡಿ, ವ್ಯಾಖ್ಯಾನಿಸುತ್ತಿದ್ದರು. ತೀರಾ ಸರಳವಾಗಿ ಹೇಳುವುದಾದರೆ ಪ್ರತಿ ಬಾರಿಯೂ ಅದೇ ಪದ್ಯದ ಸಾಲುಗಳಿಗೆ ಹೊಸ ಅರ್ಥ. ಒಂದೇ ನೆಲೆಯ ವ್ಯಾಖ್ಯಾನ ಮಾಡಿ ಮುಗಿಸುವ ಸಂಗತಿಯೂ ಆಗಿರಲಿಲ್ಲ, ಇಷ್ಟವೂ ಇರಲಿಲ್ಲ. ಅವರಿಗೆ ಬದುಕಿನ ಶೋಧದ ನೆಲೆಯೂ ಕಾವ್ಯವಾಗಿತ್ತು. ಹಾಗಾಗಿಯೇ ಅವರು ಪ್ರತಿಬಾರಿಯೂ ಹೊಸದಾಗಿ ನೋಡುತ್ತಿದ್ದರು.

ಕವಿತೆ, ಕವಿತೆ ಅಷ್ಟೇ, ಅದಕ್ಕೆ ಬೇರೇನೂ ಮಾಡಬೇಡಿ, ಅದರ ಪಾಡಿಗೆ ಅದನ್ನು ಬಿಡಿ ಎಂದು ಹೇಳುತ್ತಿದ್ದರು.
ಕವಿತೆ ಘೋಷಣೆ ಯಾಗಬಾರದು, ಭಾಷಣವಾಗವಾರದು, ಕವಿತೆ ಕವಿತೆಯಾಗಿರಬೇಕು. ಕಾವ್ಯದ ಬಗ್ಗೆ ಅಖಂಡ ಪ್ರೀತಿಯೇ ಇಂಥ ಮಾತುಗಳನ್ನು ಹೇಳಿಸುತ್ತಿತ್ತು.

ಕವಿ ತನ್ನ ಕಾವ್ಯದಲ್ಲಿ ಇಟ್ಟಿರುವ ಅರ್ಥದ ಸಾಧ್ಯತೆ ಮತ್ತು ರಹಸ್ಯವನ್ನು ಅರಿಯುವ ಪ್ರಯತ್ನದ ವಿನಯಶೀಲ ವಿದ್ಯಾರ್ಥಿಯಂತೆಯೇ ತರಗತಿ ಮುಗಿಸಿದರೇ ಹೊರತು ಅರಿತಿದ್ದೇನೆ ಎಂಬ ಭ್ರಮೆಯಲ್ಲಲ್ಲ. ಅದೇ ಕಿರಂ ವಿಶೇಷ ಗುಣ.

ಕಿರಂ ಅವರನ್ನು, ಅವರ ಒಳನೋಟವನ್ನು ಕಳೆದುಕೊಂಡಿದ್ದೇವೆ. ಅವರಿಗೇಕೋ ಬರೆಯುವುದರಲ್ಲಿ ಅಷ್ಟು ನಂಬಿಕೆ ಇರಲಿಲ್ಲ, ಮಾತನಾಡಿಕೊಂಡೇ ಇದ್ದರು. ಒಂದಿಷ್ಟು ಯಾರೋ ಒತ್ತಾಯಕ್ಕೆ ಎಂಬಂತೆ ಬರೆದರು. ಆದರೆ ಒಂದಷ್ಟು ಮಂದಿಯಿಂದ ಬರೆಸಿದ್ದು, ತಿದ್ದಿದ್ದು, ಬರೆಯಲು ಮಾರ್ಗದರ್ಶನ ನೀಡಿದ್ದು ಎಷ್ಟೋ ಇದೆ. ಇಡೀ ಕನ್ನಡ ಕಾವ್ಯದ ಬಗ್ಗೆ ದಾಖಲೆಯಾಗಬಹುದಾದ ಒಳನೋಟಗಳು, ಹೊಳಹುಗಳು ಕಳೆದುಹೋದವು. ಅದನ್ನು ಉಳಿಸಿಕೊಳ್ಳುವ ವಿಚಾರವನ್ನು ಯಾರೂ ಮಾಡಲಿಲ್ಲ ಎಂಬುದು ವಿಷಾದ.

ಪ್ರತಿಯೊಬ್ಬರೂ ಕತ್ತಲೆಯಲ್ಲೇ ಬದುಕುತ್ತಾರೆ, ಆದರೆ ಯಾವುದೋ ಒಂದು ಬೆಳಕು ಮುನ್ನಡೆಸುತ್ತಿರುತ್ತದೆ. ಕಿರಂ ಅವರನ್ನು ಮುನ್ನಡೆಸುತ್ತಿದ್ದುದು ಕಾವ್ಯದ ಬೆಳಕು. ಈಗ ಕಾವ್ಯವೇ ಕಿರಂ ಅವರನ್ನು ನೀಗಿಕೊಂಡಿದೆ, ಇಬ್ಬರೂ ಬೆಳಕಾಗಿದ್ದಾರೆ !

ಕನ್ನಡದ ಪರಿಚಾರಕ ಹರಿಹರೇಶ್ವರ

ಶಿಕಾರಿಪುರ ಹರಿಹರೇಶ್ವರ ಅವರು ಗುರುವಾರ (ಜು.22) ದಂದು ಮೈಸೂರಿನಲ್ಲಿ ನಿಧನರಾಗಿದ್ದಾರೆ.

ತಣ್ಣಗಿನ ಸ್ವರ, ಅಷ್ಟೇನೂ ಉದ್ದವಲ್ಲದ ಆಕೃತಿ, ಖಾದಿ ರೇಷ್ಮೆಯ ಜುಬ್ಬಾ ಹಾಕಿಕೊಂಡು ತಣ್ಣಗೆ ಪಕ್ಕದಲ್ಲಿ ಬಂದು ನಿಂತ ಆಕೃತಿ ಮಾತನಾಡುವುದೇ ಹೀಗೆ-’ನಮಸ್ಕಾರ’.

ನಾನು ಎಸ್. ಕೆ. ಹರಿಹರೇಶ್ವರ’ ಎಂದು ಪರಿಚಯಿಸಿಕೊಳ್ಳುತ್ತಿದ್ದ ಶಿಕಾರಿಪುರ ಹರಿಹರೇಶ್ವರ ಅವರು ಸಾಹಿತ್ಯ ಸಾಧಕರಲ್ಲದಿರಬಹುದು, ಆದರೆ ಪರಿಚಾರಕರು. ಅದರಲ್ಲೂ ಕನ್ನಡದ ಸೇವಕರೆಂದರೆ ಯಾವುದೇ ಅತಿಶಯೋಕ್ತಿಯಲ್ಲ. ಸೌಜನ್ಯದ ವ್ಯಕ್ತಿತ್ವ, ಸ್ವಲ್ಪ ಕೋಪವಿದ್ದರೂ ಯಾರನ್ನೂ ಸುಡದಂಥದ್ದು, ಏರು ದನಿಯವರಲ್ಲ, ಸೌಮ್ಯದಿಂದಲೇ ಸಣ್ಣಗೆ ಮಾತನಾಡುವವರು.

ಮತ್ತೊಂದು ಸಂಗತಿಯನ್ನು ಸದಾ ನೆನಪಿನಲ್ಲಿಟ್ಟುಕೊಳ್ಳಬೇಕಾದ್ದದಿದೆ. ಕನ್ನಡದ್ದೇ ನಾಡಿನಲ್ಲಿ ಕನ್ನಡ ಉಳಿಸಲು, ಕನ್ನಡದ ಬಗ್ಗೆ ಪ್ರಚಾರ ನಡೆಸಲು, ಕನ್ನಡಕ್ಕೆ ಫರಾಕು ಹಾಕಲು ಬೇಕಾದಷ್ಟು ಮಂದಿ ಇದ್ದಾರೆ, ಸರಕಾರಗಳಿವೆ, ಪ್ರಾಧಿಕಾರಗಳಿವೆ, ಅಕಾಡೆಮಿಗಳಿವೆ, ನಿತ್ಯವೂ ಕನ್ನಡದ ಜಪವನ್ನೇ ಮಾಡುತ್ತವೆ. ಆದರೆ ಆಗಲೇ ಸುಮಾರು ಇಪ್ಪತ್ತು ವರ್ಷಗಳ ಹಿಂದೆಯೇ ಅಮೆರಿಕದಲ್ಲಿ ಭಾರತೀಯರೆನ್ನುವರೇ ಅಲ್ಪಸ್ವಲ್ಪ ಎನ್ನಿಸುವ ಸಂಖ್ಯೆಯಲ್ಲಿದ್ದಾಗ ಆ ಪೈಕಿ ಇರುವ ಅಲ್ಪಿಗರಾದ ಕನ್ನಡಿಗರನ್ನು ಒಟ್ಟು ಹಾಕಿ ಕನ್ನಡದ ತೇರನ್ನೆಳೆಯುವಲ್ಲಿ ಎಲ್ಲ ಆಸಕ್ತ, ಪ್ರೀತಿಯ ಅನಿವಾಸಿ ಕನ್ನಡಿಗರ ಕೊಡುಗೆ ಅನನ್ಯ. ಆ ಪೈಕಿ ಎಸ್. ಕೆ. ಹರಿಹರೇಶ್ವರ ಅವರು ಮುಂಚೂಣಿಯಲ್ಲಿದ್ದರು.

ಇಂದು ಅಕ್ಕ, ನಾವಿಕದಂಥ ಸಂಸ್ಥೆಗಳು ಅಮೆರಿಕದಲ್ಲಿ ಕನ್ನಡದ ಕಂಪನ್ನು ಸೂಸುತ್ತಿದ್ದರೆ, ಹರಿಹರೇಶ್ವರಂಥವರು ಗಂಧದಂತೆ ತೇಯ್ದುಕೊಂಡಿದ್ದಾರೆ. ಇದನ್ನು ಮರೆಯುವಂತಿಲ್ಲ. ಹತ್ತು ಹಲವರನ್ನು ಒಟ್ಟಿಗೆ ಕರೆದುಕೊಂಡು ಕನ್ನಡಿಗರಾಗಿ’ ವಿಜೃಂಭಿಸಿದವರು. ಆದ್ದರಿಂದಲೇ ಇಂದು ಅಮೆರಿಕದಲ್ಲಿ ಕನ್ನಡದ ರಥದ ’ದನಿ’ ಎಲ್ಲರ ಕಿವಿಗೂ ಕೇಳುತ್ತಿರುವುದು. ಒಂದು ದೊಡ್ಡ ಕೆಲಸ ಒಬ್ಬರಿಂದಲೇ ಆಗದು ಎನ್ನುವ ಮಾತು ಅಕ್ಷರಶಃ ಸತ್ಯ. ಆದರೆ, ಅಂಥದೊಂದು ದೊಡ್ಡ ಕೆಲಸಕ್ಕೆ ಸಣ್ಣ-ಸಣ್ಣವರೇ ನೂರಾರು ಮಂದಿ ಸೇರಿರುತ್ತಾರೆ. ಅಂಥ ಸಣ್ಣವರಲ್ಲಿ ಹರಿಹರೇಶ್ವರರೂ ಒಬ್ಬರು. ಇದೇ ಸಂದರ್ಭದಲ್ಲಿ ನೆನಪಿನಲ್ಲಿಟ್ಟುಕೊಳ್ಳಬೇಕಾದದ್ದೆಂದರೆ ಹೀಗೆ ಸಣ್ಣವರಾದವರು ಸಂಘ ಸುಖದಲ್ಲಿ ದೊಡ್ಡದನ್ನು ಸಾಧಿಸಿ ಆತ್ಮತೃಪ್ತಿ ಪಡೆದದ್ದೇ ಅತೀವ ದೊಡ್ಡದು. ಹಾಗಾಗಿಯೇ ಅನಿವಾಸಿ ಕನ್ನಡ ಅಭಿವೃದ್ಧಿಗೆ ಸಂಬಂಧಿಸಿದಂತೆ ಹರಿಹರೇಶ್ವರ ಅವರನ್ನು ಬಿಟ್ಟು ಏನನ್ನೂ ನೆನಪಿಸಿಕೊಳ್ಳಲಾಗದು.

ಮೊದಲೇ ಹೇಳಿದಂತೆ ಬಹಳ ತಣ್ಣಗಿನ ಸ್ವರ. ಅವರನ್ನು ನಾನು ಕಂಡದ್ದು ಕೆಲವೇ ಬಾರಿ. ಬೆಂಗಳೂರಿನಲ್ಲಿ ಹಾಗೂ ಮೈಸೂರಿನಲ್ಲಿ. ಎಷ್ಟೋ ಬಾರಿ ಹೀಗೇ ಅಮೆರಿಕದಲ್ಲಿನ ಕನ್ನಡಿಗರ ಬಗೆಗಿನ ಕುತೂಹಲವೇ ಅವರನ್ನು ಮುಖಾಮುಖಿ ಮಾಡಿಸಿತ್ತು. ಚೆಂದದ ಕನ್ನಡ ನಾಡಿನಲ್ಲಿರುವ ನಮಗೆ ಅನಿವಾಸಿ ಕನ್ನಡಿಗರ ಬಗೆಗಿನ ಆತಂಕ ಇದ್ದದ್ದು ಒಂದೇ. ಅಲ್ಲಿನ ಮಕ್ಕಳೆಲ್ಲಾ ಬರೀ ಇಂಗ್ಲಿಷ್ ಕಲಿಯುತ್ತಿದ್ದಾರೆ, ಕನ್ನಡವನ್ನಲ್ಲ’ ಎಂಬುದು. ಅದೇ ಪ್ರಶ್ನೆ ಅವರಿಗೆ ಬಂದಾಗಲೆಲ್ಲಾ ಕೇಳುತ್ತಿದ್ದೆವು. ಆಗಲೂ ಅವರು ತಣ್ಣಗೆ, ನೀವಂದು ಕೊಂಡಂತಿಲ್ಲ. ಅಲ್ಲಿ ನಾವೆಲ್ಲಾ ಕನ್ನಡ ಉಳಿಸುತ್ತಿದ್ದೇವೆ’ ಎನ್ನುತ್ತಿದ್ದರು. ಮಕ್ಕಳಿಗೆಲ್ಲಾ ಕನ್ನಡ ಕಲಿಸುವಂತೆ ಕನ್ನಡ ಸಂಘಗಳಲ್ಲಿ ಕಾರ‍್ಯಕ್ರಮ ಹಮ್ಮಿಕೊಳ್ಳುತ್ತಿದ್ದೇವೆ. ಮನೆಯಲ್ಲಿ ಆದಷ್ಟು ಕನ್ನಡ ಮಾತನಾಡುತ್ತೇವೆ. ಒಟ್ಟೂ ಕನ್ನಡ ಪರಿಸರ ಸ್ವಲ್ಪವಾದರೂ ಕಾಣಲೆಂಬುದು ನಮ್ಮ ಪ್ರಯತ್ನ’ ಹೀಗೆ ಕೈಗೊಂಡ ಪ್ರಾಮಾಣಿಕ ಪ್ರಯತ್ನಗಳನ್ನೆಲ್ಲಾ ವಿವರಿಸುತ್ತಿದ್ದರು. ಆಗ ನಿಜವಾಗಲೂ ನನಗೆ ನಾಚಿಕೆಯಾಗುತ್ತಿತ್ತು, ನಮ್ಮಲ್ಲೇ ಕನ್ನಡ ಉಳಿಸಿಕೊಳ್ಳಲು ಬಹಳ ಕಷ್ಟಪಡುತ್ತಿದ್ದೇವೆ’. ಈ ಸತ್ಯ ಸಂಗತಿಯಿಂದ ಮತ್ತೆ ಆ ಬಗೆಗಿನ ಪ್ರಶ್ನೆ ಕೇಳಲು ಹೋಗುತ್ತಿರಲಿಲ್ಲ. ನಾನೂ ಅವರಂತೆಯೇ ತಣ್ಣಗೆ ಕೇಳಿಕೊಂಡು ಇಳಿದು ಹೋಗಿಬಿಡುತ್ತಿದ್ದೆ.

ಕೆಲವೇ ವರ್ಷಗಳ ಹಿಂದೆ ಕರ್ನಾಟಕಕ್ಕೆ ವಾಪಸಾಗಿದ್ದ ಹರಿಹರೇಶ್ವರ ದಂಪತಿಗಳು ನೆಲೆಸಿದ್ದು ಮೈಸೂರಿನಲ್ಲಿ. ನಿತ್ಯವೂ ಎಸ್. ಕೆ. ಹರಿಹರೇಶ್ವರ ಕನ್ನಡ ನಾಡು, ನುಡಿ, ಸಂಸ್ಕೃತಿಯ ಕುರಿತೇ ಕೆಲಸ ಮಾಡುತ್ತಿದ್ದರು. ಸ್ಥಳೀಯ ಹಲವು ಸಂಸ್ಥೆಗಳಲ್ಲಿ ಗುರುತಿಸಿಕೊಂಡಿದ್ದ ಅವರು, ಇಲ್ಲಿದ್ದುಕೊಂಡೇ ಅಮೆರಿಕ, ಯುರೋಪು ಖಂಡಗಳಲ್ಲಿರುವ ಕನ್ನಡ ಸಂಸ್ಥೆಗಳಿಗೆ, ಕನ್ನಡಿಗರಿಗೆ ಕೊಂಡಿಯಾಗಿದ್ದರು.

ಒಂದೇ ಮಾತಿನಲ್ಲಿ ಹೇಳುವುದಾದರೆ, ಅವರು ಅಮೆರಿಕದಲ್ಲಿದ್ದಾಗಲೂ ಕನ್ನಡವನ್ನು, ಕರ್ನಾಟಕವನ್ನು ಮರೆತಿರಲಿಲ್ಲ. ಸಂತೋಷದ ಸಂಗತಿಯೆಂದರೆ, ಕರ್ನಾಟಕಕ್ಕೆ ವಾಪಸ್ಸಾಗಿ ನೆಲೆಗೊಂಡಾಗಲೂ ಅಮೆರಿಕವನ್ನು, ಅಮೆರಿಕದಲ್ಲಿಹ ಕನ್ನಡಿಗರನ್ನು ಹಾಗೂ ಅಲ್ಲಿನ ಕನ್ನಡಿಗರ ಹೊಸ ತಲೆಮಾರಿನ ಬವಣೆಯನ್ನು ಮರೆತಿರಲಿಲ್ಲ. ಹಾಗಾಗಿಯೇ ಸಿಕ್ಕಾಗಲೆಲ್ಲಾ ಹೇಳುತ್ತಿದ್ದ ಒಂದೇ ಮಾತೆಂದರೆ, ಹೊಸ ತಲೆಮಾರಿಗೆ ಕನ್ನಡ ಕಲಿಸಬೇಕು.

ಇದು ಅವರ ಅತ್ಯಂತ ಕಾಳಜಿಯ ಮಾತು. ಈ ಮಾತನ್ನು ಆಡಲು ಅವರು ಹಿಂದೆ ಮುಂದೆ ನೋಡುತ್ತಿರಲಿಲ್ಲ. ಅಮೆರಿಕದಲ್ಲಿ ಕನ್ನಡಿಗರನ್ನು ಒಟ್ಟು ಗೂಡಿಸಲು, ಕನ್ನಡಿಗರ ಮಧ್ಯೆ ಸೌಹಾರ್ದಯುತ ವಾತಾವರಣ ನಿರ್ಮಿಸಲು ಪತ್ರಕರ್ತ’ರೂ ಆದರು. ಅಮೆರಿಕನ್ನಡಿಗ’ ಪತ್ರಿಕೆಯ ಸಂಪಾದಕರಾಗಿಯೂ ಕೆಲಸ ಮಾಡಿದರು. ಈ ಮೂಲಕ ಕರ್ನಾಟಕಕ್ಕೂ, ಅಮೆರಿಕದಲ್ಲಿರುವ ಕನ್ನಡಿಗರಿಗೂ ಸಂಪರ್ಕ ಸೇತುವಾಗಿ ಕೆಲಸ ಮಾಡಿದರು. ಇಂದಿನ ಅತ್ಯಂತ ದುಃಖದ ಸಂಗತಿಯೆಂದರೆ ಅಂಥ ಸೇತು ಕುಸಿದು ಬಿದ್ದಿದೆ. ಅವರೊಂದಿಗಿನ ನೆನಪಿನ ನೂಲಿನಲ್ಲಿ ಸಂಬಂಧವನ್ನು ಹಸಿಗೊಳಿಸಿಕೊಳ್ಳುವುದನ್ನು ಬಿಟ್ಟರೆ ಬೇರೇನೂ ಇಲ್ಲ.

ಅವರ ನಂಬಿಕೆ ಹುಸಿಯಾಗದಿರಲಿ

ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ತಮ್ಮ ರಾಜೀನಾಮೆಯನ್ನು ವಾಪಸು ತೆಗೆದುಕೊಳ್ಳಲು ನಿರ್ಧರಿಸಿರುವುದು, ಅಂಥದೊಂದು ಮನವೊಲಿಸುವಿಕೆಯತ್ತ ರಾಜ್ಯ ಸರಕಾರ ಮುಖ ಮಾಡಿದ್ದು-ಎರಡೂ ಒಳ್ಳೆಯದೇ.

ಇಡೀ ಪ್ರಕರಣದಲ್ಲಿ ಯಾರು ಗೆದ್ದರು, ಯಾರು ಸೋತರು ಎನ್ನುವುದಕ್ಕಿಂತಲೂ ಇಡೀ ಬೆಳವಣಿಗೆ ಒಂದು ಆರೋಗ್ಯದಾಯಕವಾಗಿ ನಡೆದಿದೆ. ಆ ನೆಲೆಯಲ್ಲೇ ಇದನ್ನು ಗಮನಿಸಬೇಕು ಮತ್ತು ಸ್ವಾಗತಿಸಬೇಕು.
ಲೋಕಾಯುಕ್ತ ನ್ಯಾ. ಸಂತೋಷ ಹೆಗ್ಡೆಯವರ ರಾಜೀನಾಮೆ ವಾಪಸ್ ನಿರ್ಧಾರದ ಔಚಿತ್ಯದ ಪ್ರಶ್ನೆ ಇಲ್ಲಿ ಎತ್ತುವುದಕ್ಕಿಂತಲೂ, ಆ ನಿರ್ಧಾರವನ್ನು ಸ್ವಾಗತಿಸಬೇಕಾದ ತುರ್ತೊಂದು ಇದೆ. ಅದೆಂದರೆ ಒಂದು ವ್ಯವಸ್ಥೆಯ ಬಗ್ಗೆ ಆಗಬಹುದಾದ ಇನ್ನಷ್ಟು ಕುಸಿತವನ್ನು ಇಬ್ಬರೂ ಸೇರಿ ತಡೆ ಹಿಡಿದಿದ್ದಾರೆ ಎನ್ನಬಹುದು.

ಈ ಮಾತು ಹೇಳಲಿಕ್ಕೆ ಇರುವ ನೆಲೆಗಳಿಷ್ಟೇ. ಸಂತೋಷ್ ಹೆಗ್ಡೆಯವರು ರಾಜೀನಾಮೆ ವಾಪಸ್ ಪಡೆಯದೇ ಇದ್ದಿದ್ದರೆ ಬೇರೇನೂ ಆಗುತ್ತಿರಲಿಲ್ಲ. ಒಬ್ಬ ಸ್ವಾಭಿಮಾನಿ ಮನುಷ್ಯ ಆ ಹುದ್ದೆಗೆ ಬರುವುದು ಕಷ್ಟವಿರುತ್ತಿತ್ತು. ಅಂದರೆ ಆಯ್ಕೆಯೇ ದೊಡ್ಡ ಸಮಸ್ಯೆಯಾಗಿ ಸರಕಾರಕ್ಕೆ ಆಗುತ್ತಿತ್ತೇನೋ ಹೇಳಲಾರೆ. ಆದರೆ ವ್ಯಕ್ತಿಯಾಗಿ ಪ್ರತಿಯೊಬ್ಬ ಸ್ವಾಭಿಮಾನಿಗೂ ಆ ಹುದ್ದೆಯನ್ನು ಆಯ್ಕೆ ಮಾಡುವುದು ಕಷ್ಟವಾಗುತ್ತಿತ್ತು. ಇದು ಅಕ್ಷರಶಃ ನಿಜ.
ಇದೇ ಸಂದರ್ಭದಲ್ಲಿ ಉದ್ಭವಿಸಬಹುದಾದ ಸಮಸ್ಯೆಯ ಮತ್ತೊಂದು ಕೋನದ ಬಗ್ಗೆ ಆಲೋಚಿಸುವುದಾದರೆ, ಸರಕಾರ ಎಂಬ ವ್ಯವಸ್ಥೆ ತನ್ನ ತಾಳಕ್ಕೆ ಕುಣಿಯುವ ಮನುಷ್ಯನನ್ನೇ ಈ ಹುದ್ದೆಗೆ ಆರಿಸುತ್ತಿತ್ತೇನೋ? ಗೊತ್ತಿರಲಿಲ್ಲ. ಆದರೆ, ಇಡೀ ಪ್ರಕರಣದಲ್ಲಿ ಮೊದಲ ಹತ್ತೂ ದಿನ ಸರಕಾರ ನಡೆದುಕೊಂಡ ರೀತಿ ಇಂಥದೇ ಒಂದು ಅನುಮಾನಕ್ಕೆ ಪುಷ್ಠಿ ನೀಡುವಂತಿತ್ತು. ಮೈಮೇಲೆ ವಿವಾದವನ್ನು ಎಳೆದುಕೊಳ್ಳದ ಹಾಗೆ, ಇದ್ದಕ್ಕಿದ್ದಂತೆ ಸರಕಾರದ ಮೇಲೆ ದಾಳಿ (ಮುಗಿಬೀಳುವ) ಮಾಡುವವರನ್ನು ದೂರವಿಟ್ಟು ನೋಡುವ ದೃಷ್ಟಿ ಬೆಳೆಸಿಕೊಳ್ಳುವ ಸಾಧ್ಯತೆಯೇ ಜಾಸ್ತಿ ಇತ್ತು. Continue reading