ಚಲನಚಿತ್ರ ಅಕಾಡೆಮಿಗೆ ಹೊಸಬರು ಬೇಕಾಗಿದ್ದಾರೆ

ಕರ್ನಾಟಕ ಚಲನಚಿತ್ರ ಅಕಾಡೆಮಿಗೆ ಹೊಸ ಮುಖ ಬೇಕಾಗಿದೆ. ಮೂರು ವರ್ಷಗಳ ಹಿಂದೆ ರಾಜ್ಯದಲ್ಲಿ ಗುಪ್ತಗಾಮಿನಿಯಂತೆ ಇದ್ದ ಸಿನಿಮಾ ಚಳವಳಿಗೆ ಒಂದು ವೇಗ ಕೊಡಲು ರಾಜ್ಯ ಸರಕಾರ ಅಕಾಡೆಮಿಯನ್ನು ರಚಿಸಿತು. ಮೊದಲ ಅವಧಿಗೆ ಚಿತ್ರ ನಿರ್ದೇಶಕ ಟಿ.ಎಸ್. ನಾಗಾಭರಣ ಅವರು ಇದರ ಚುಕ್ಕಾಣಿ ಹಿಡಿದರು. ಈಗ ಅವರ ಅವಧಿ ಮುಗಿದಿದೆ.

ಅಕಾಡೆಮಿಯ ಮೊದಲ ಅವಧಿಯ ಸಾಧನೆಯನ್ನು ತುಲನೆ ಮಾಡಿದರೆ ಬಹಳಷ್ಟು ನಿರೀಕ್ಷೆ ಈಡೇರದಿದ್ದರೂ, ನಿರಾಶೆ ಮೂಡದು. ಸಾಮಾನ್ಯವಾಗಿ ಒಂದು ಸಂಸ್ಥೆಯ ಮೊದಲ ಒಂದೆರಡು ವರ್ಷ ಕಂಡ ಕನಸಿಗೆ ಮೂರ್ತ ರೂಪ ನೀಡುವ ಪ್ರಯತ್ನವಷ್ಟೇ ನಡೆಯುತ್ತದೆ. ಬಹಳ ನೇರವಾಗಿ ಹೇಳುವುದಾದರೆ, ಕನಸಿಗೆ ಕಾಲು, ಕೈ, ಮೂಗು-ಬಾಯಿ ಮೂಡಿಸುವ ಹೊಣೆ. ಎಷ್ಟೋ ಬಾರಿ ಹೀಗೂ ಆಗುವುದುಂಟು. ಮೂರ್ತ ರೂಪ ಕೊಡುವ ಹೊಣೆ ಹೊತ್ತ ಮಂದಿ ಕಾಲು, ಕೈ-ಮೂಗು-ಬಾಯಿ ಎಲ್ಲವನ್ನೂ ಕೊಟ್ಟು ಹೃದಯವನ್ನು ಕೊಡುವುದನ್ನೇ ಮರೆಯುವ ಅಪಾಯವಿದ್ದೇ ಇರುತ್ತದೆ. ಅಂಥ ಅವಘಡ ಈ ಅಕಾಡೆಮಿಯ ಸಂದರ್ಭದಲ್ಲಿ ಘಟಿಸಿಲ್ಲ. ಬೆಳೆಯಬೇಕಾದ ಅಂಗಗಳು ಕ್ರಮಬದ್ಧವಾಗಿ ಬೆಳೆಯದಿರಬಹುದು, ಹೃದಯವನ್ನು ಕೊಡಲು ಮರೆತಿಲ್ಲವೆಂಬುದೇ ಸದ್ಯದ ಸಮಾಧಾನ.
ಅಕಾಡೆಮಿ ಸಿನಿಮಾ ಚಳವಳಿಯನ್ನು ಪ್ರೋತ್ಸಾಹಿಸಲು, ರಾಜ್ಯಾದ್ಯಂತ ಬೆಳ್ಳಿಸಾಕ್ಷಿ-ಬೆಳ್ಳಿ ಮಂಡಲದಂಥ ಕಲ್ಪನೆಗಳ ಮೂಲಕ ಫಿಲ್ಮ್ ಸೊಸೈಟಿಗಳನ್ನು ಸೃಷ್ಟಿಸಲು ಪ್ರಯತ್ನಿಸಿತು. ಈ ಪ್ರಯತ್ನದಲ್ಲಿ ಶೇ. ೭೦ ರಷ್ಟು ಯಶಸ್ವಿಯಾಗಿದೆ. ಕೆಲವೆಡೆ ಬೆಳ್ಳಿ ಸಾಕ್ಷಿ-ಬೆಳ್ಳಿಮಂಡಲಗಳು ಬಹಳ ಸಕ್ರಿಯವಾಗಿದ್ದರೆ, ಕೆಲವೆಡೆ ಇನ್ನೂ ಎದ್ದೇ ಇಲ್ಲ. ಇದು ಬಿತ್ತಿದ ಎಲ್ಲವೂ ಮೊಳಕೆಯೊಡೆಯುವುದಿಲ್ಲವೆಂಬ ಮಾತಿಗೆ ನಿದರ್ಶನ. ಉಳಿದಂತೆ ನಮ್ಮ ಹಿಂದಣವನ್ನು ನೆನಪಿಸಿಕೊಳ್ಳಲು ‘ಬೆಳ್ಳಿಹೆಜ್ಜೆ’ ಎಂಬ ಕಾರ್‍ಯಕ್ರಮ ನಡೆಸಿತು. ಕನ್ನಡದ ಹಿರಿಯ ನಟ-ನಟಿ, ನಿರ್ದೇಶಕರೂ ಸೇರಿದಂತೆ ಸಿನಿ ಜಗತ್ತಿನ ಮಹನೀಯರನ್ನು ಕರೆದು ಕುಳ್ಳಿರಿಸಿ, ಅವರ ಅನುಭವವನ್ನು ಕೇಳುವಂಥ ಕಾರ್‍ಯಕ್ರಮ. ಇದು ಕೊಂಚ ಜನಪ್ರಿಯತೆ ತಂದುಕೊಟ್ಟಿದೆ. ಉಳಿದಂತೆ ನಡೆಯುವ ಮಾರ್ಗದ ನಕ್ಷೆಯನ್ನು ರೂಪಿಸಿಕೊಂಡಿದ್ದು ದೊಡ್ಡದು, ಮುಟ್ಟಿದ್ದು ಕಡಿಮೆ. Continue reading

ಅವರು ಕಾಯುತ್ತಿದ್ದಾರೆ ನಮ್ಮ ಚಟುವಟಿಕೆಯನ್ನೂ !

ಹೀಗೆ ಎಲ್ಲದಕ್ಕೂ ಪುಟ್ಟ ಪುಟ್ಟ ಇತಿಹಾಸ ಹೊಂದಿರುವ ಸಂಸತ್ತು ಒಂದು ನೆಲೆಯಲ್ಲಿ ಬರಿಯ ನಮ್ಮ ಪ್ರಜಾತಂತ್ರ ವ್ಯವಸ್ಥೆಯ ಪರಮೋಚ್ಛ ಕಾರ್ಯ ಸಾಧನೆಯ ನೆಲವಾಗಿಯಷ್ಟೆ ಅಲ್ಲ, ನಮ್ಮ ಸಂಸ್ಕೃತಿ, ನಮ್ಮ ಮಾದರಿಗಳ ಷೋಕೇಸ್ ಸಹಿತ ಹೌದು. ಸಂಸತ್ತಿನ ಪ್ರಾಕಾರದಲ್ಲಿ ಅಥವಾ ಆವರಣದ ಸುತ್ತ ಮುತ್ತಲೆಲ್ಲಾ ನಾವು ಮಾದರಿ ಎಂದುಕೊಂಡವರೆಲ್ಲಾ ತಣ್ಣಗೆ ವಿರಾಜಮಾನವಾಗಿದ್ದಾರೆ. ಒಂದರ್ಥದಲ್ಲಿ ಇದು ಬಯಲು ಮ್ಯೂಸಿಯಂ.

ಸಂಸತ್ತಿನ ಐದನೇ ಗೇಟ್‌ನ ಎದುರು ಚಂದ್ರಗುಪ್ತ ಮೌರ್ಯನ ಪುತ್ಥಳಿಯಿದೆ. 0.74 ಮೀಟರ್ ಉದ್ದದ ಕಂಚಿನ ಪುತ್ಥಳಿಯನ್ನು ರಚಿಸಿದವರು ಹಿದಾ ಸೆಲ್ಗಮಾನ್. ಕ್ರಿ.ಪೂ 321 ರಿಂದ 296 ರವರೆಗೆ ಆಡಳಿತ ನಡೆಸಿದ ಈತ ಮೌರ್ಯ ವಂಶದ ಸ್ಥಾಪಕ. ಹೀಗೆ ಕಣ್ಣರಳಿಸುತ್ತಾ ಸೆಂಟ್ರಲ್ ಹಾಲ್‌ಗೆ ಪ್ರವೇಶಿಸುವ ಒಂದನೇ ಗೇಟಿನ ಬಳಿ ಬಂದರೆ ಮಹಾತ್ಮಾಗಾಂಧಿಯ ರಾಜಕೀಯ ಗುರು ಗೋಪಾಲಕೃಷ್ಣ ಗೋಖಲೆಯವರ ಅಮೃತಶಿಲೆಯ ಪುತ್ಥಳಿ ನಿಮ್ಮನ್ನು ಸ್ವಾಗತಿಸುತ್ತದೆ. ಜಿ. ಕೆ. ಮಹಾತ್ರೆ ರೂಪಿಸಿದ ಪುತ್ಥಳಿ 1966 ರಲ್ಲಿ ಸ್ಥಾಪನೆಯಾದದ್ದು. ದೇಶದ ದೊಡ್ಡ ಅಧ್ಯಾತ್ಮ ಗುರು ಅರವಿಂದ್ ಘೋಷ್ ಸಹ ಇರುವುದು ಇಲ್ಲೇ ಹತ್ತಿರದಲ್ಲಿ. ಅದೂ ಅಮೃತಶಿಲೆಯದ್ದು. ಲೋಕಸಭೆ ಸ್ಪೀಕರ್ ಆಗಿದ್ದ ಕರ್ನಾಟಕದ ಕೆ.ಎಸ್. ಹೆಗ್ಡೆ ಇದನ್ನು ಅನಾವರಣಗೊಳಿಸಿದ್ದು 1970ರಲ್ಲಿ. ಹದಿನಾರು ಅಡಿಯ ಕುಳಿತ ಗಾಂಧಿಯ ಪ್ರತಿಮೆ ಕಾಣಲು ಗೇಟ್ ನಂ. 1 ಬಳಿ ಬರಬೇಕು. ರಾಮ್ ಸುತಾರ್ ರಚಿಸಿದ ಕಂಚಿನ ಪ್ರತಿಮೆಯನ್ನು ರಾಷ್ಟ್ರಪತಿ ಡಾ. ಶಂಕರದಯಾಳ್ ಶರ್ಮ ಅನಾವರಣಗೊಳಿಸಿದ್ದು 1993 ರ ಅಕ್ಟೋಬರ್ 2 ರಂದು.
ಪಂಡಿತ್ ಮೋತಿಲಾಲ್ ನೆಹರೂ ಇಲ್ಲಿ ನೆಲೆಯಾಗಿದ್ದು 1963 ರಲ್ಲಿ. ರಾಷ್ಟ್ರಪತಿಯಾಗಿದ್ದ ಡಾ. ಸರ್ವಪಲ್ಲಿ ರಾಧಾಕೃಷ್ಣನ್, 3.75 ಮೀಟರ್‌ನ ಕಂಚಿನ ಪ್ರತಿಮೆಯನ್ನು ಅನಾವರಣಗೊಳಿಸಿದರು. ಡಿ. ಪಿ. ರಾಯ್‌ಚೌಧರಿ ಮೂಡಿಸಿದ ಪ್ರತಿಮೆ ಸಂಸತ್ ಮಾರ್ಗದ ಕಡೆಯಿಂದ ಪ್ರವೇಶಿಸುವಲ್ಲಿ ಇದೆ. ಹಾಗೆಯೇ ಒಂದನೇ ಗೇಟ್ ನ ಬಳಿ ರಾಮ್ ಸುತಾರ್ ರಚನೆಯ 16 ಅಡಿಯ ಆಳೆತ್ತರದ ಪಂಡಿತ್ ಜವಾಹರಲಾಲ್ ನೆಹರೂ ಅವರ ಕಂಚಿನ ಪ್ರತಿಮೆ 1995 ರ ಗಣರಾಜ್ಯೋತ್ಸವ ದಿನ ಅನಾವರಣಗೊಂಡಿತು. ಈ ಗಳಿಗೆಗೆ ಸಾಕ್ಷಿಯಾಗಿದ್ದು ದಕ್ಷಿಣ ಆಫ್ರಿಕಾದ ಹೋರಾಟಗಾರ ನೆಲ್ಸನ್ ಮಂಡೇಲಾ. ಇದೊಂದು ವಿಶೇಷ.

ಲೋಕಸಭೆ ಆವರಣದಲ್ಲಿರುವ ಪ್ರಧಾನಮಂತ್ರಿ ಕಚೇರಿ ಬಳಿ ಬಂದರೆ, ನಿಮ್ಮನ್ನು ಮಾತನಾಡಿಸುವವರು ನೇತಾಜಿ ಸುಭಾಷ್ ಚಂದ್ರ ಬೋಸ್. ಕಾರ್ತಿಕ್ ಚಂದ್ರಪೌಲ್ ರಚಿಸಿದ ಕಂಚಿನ ಪ್ರತಿಮೆ 1997 ರಲ್ಲಿ ನೆಲೆಗೊಂಡಿತು. ಹೀಗೇ ಡಾ. ಬಿ.ಆರ್. ಅಂಬೇಡ್ಕರ್ ಅವರ ಪ್ರತಿಮೆ 366ಮೀಟರ್‌ನದ್ದು. ಬಿ.ವಿ. ವಾಗ್ ರೂಪಿಸಿದ ಈ ಪ್ರತಿಮೆ ಲೋಕಸಭೆಗೆ ಹೋಗುವ ದಾರಿಯಲ್ಲೇ ಸಿಗುತತದೆ. ಡಾ. ಸರ್ವಪಲ್ಲಿ ರಾಧಾಕೃಷ್ಣನ್ 1967 ರಲ್ಲೇ ಅನಾವರಣಗೊಳಿಸಿದರು. ಕಂಕುಳಲ್ಲಿ ಸಂವಿಧಾನ ಹಿಡಿದು ಭವಿಷ್ಯದತ್ತ ತೋರ‍್ಬೆರಳು ತೋರಿಸುತ್ತಿರುವ ಅಂಬೇಡ್ಕರ್, ದಾರ್ಶನಿಕನಾಗಿ ತೋರುತ್ತಾರೆ. ಲೋಕಸಭೆಗೆ ಹೊರ ಆವರಣಕ್ಕೆ ಬರುವಲ್ಲಿ ಜಗಜೀವನರಾಂರ 9 ಅಡಿಯ ಕಂಚಿನ ಪ್ರತಿಮೆ ಅನಾವರಣಗೊಂಡಿದೆ.
ಸ್ವಾತಂತ್ರ ಹೋರಾಟಗಾರರಾದ ಮೌಲಾನಾ ಅಬ್ದುಲ್ ಕಲಾಂ ಆಜಾದ್‌ರ 16 ಅಡಿಯ ಕಂಚಿನ ಪ್ರತಿಮೆ ಗೇಟ್ ನಂ. 1 ರಲ್ಲಿ, ಲೋಕಸಭೆ ಹೊರ ಪಡಸಾಲೆಯ ಬಳಿ 9 ಅಡಿಯ ಪಂಡಿತ್ ಗೋವಿಂದ್ ವಲ್ಲಭ್ ಪಂತ್ ರ ಪ್ರತಿಮೆ, ಪಂಡಿತ್ ರವಿಶಂಕರ್ ಶುಕ್ಲಾ, ವೈ.ಬಿ. ಚವಾಣ್, ಕುಮಾರಸ್ವಾಮಿ ಕಾಮರಾಜ್‌ರ ಪ್ರತಿಮೆ, ಹತ್ತಿರವೇ ಇರುವ ಗೇಟ್ ನಂ. 5 ರ ಮೂಲಕ ಒಳ ಪ್ರವೇಶಿಸುವಲ್ಲಿ ೧೬ ಅಡಿಯ ಇಂದಿರಾಗಾಂಧಿಯ ಕಂಚಿನ ಪ್ರತಿಮೆ ಅನಾವರಣಗೊಂಡಿವೆ. ಹಾಗೆಯೇ ಪ್ರೊ. ಎನ್.ಜಿ. ರಂಗ ಸಹ ಗೇಟ್ ನಂ. 4 ರ ಮೂಲಕ ಲೋಕಸಭೆ ಪಡಸಾಲೆಗೆ ಬರುವಲ್ಲಿ ರಾರಾಜಿಸುತ್ತಿದ್ದಾರೆ.

ಇದು ಪ್ರತಿಮೆ-ಪುತ್ಥಳಿಗಳ ಕಥೆ. ಅದರಂತೆಯೇ ರಾಜ್ಯಸಭೆಯ ಒಳಗೆ ಮತ್ತು ಪಡಸಾಲೆಯಲ್ಲಿ ಡಾ.ಎ ಸ್. ರಾಧಾಕೃಷ್ಣನ್, ಡಾ. ಜಾಕಿರ್ ಹುಸೇನ್, ಎಂ. ಹಿದಾಯಿತುಲ್ಲಾ, ವಿ. ವಿ. ಗಿರಿ, ಬಿ. ಡಿ. ಜತ್ತಿ, ಜಿ. ಎಸ್. ಪಾಠಕ್, ಆರ್. ವೆಂಕರಾಮನ್, ಡಾ. ಶಂಕರದಯಾಳ್ ಶರ್ಮರ ತೂಗುಪಟ ವಿರಾಜಿಸಿದ್ದರೆ, ಲೋಕಸಭೆ ಮತ್ತು ಪಡಸಾಲೆಯಲ್ಲಿ ವಿಠ್ಠಲ್‌ಬಾಯಿ ಜಿ. ಪಟೇಲ್, ಫೆಡ್ರ್ವಿಕ್ ವ್ಹೈಟ್, ಮೊಹಮ್ಮದ್ ಯಾಕುಬ್, ಸರ್. ಇಬ್ರಾಹಿಂ ರಹೀಂತುಲ್ಲಾ, ಆರ್. ಷಣ್ಮುಖಂ ಚೆಟ್ಟಿ, ಸರ್. ಅಬ್ದುಲ್ ರಹೀಂ, ಜಿ. ವಿ. ಮಾವಳಂಕರ್,

ನಮ್ಮನ್ನು ಕಾಯುತ್ತಿದ್ದಾರೆ, ನಮ್ಮ ಪ್ರತಿ ಚಟುವಟಿಕೆಯ ಮೇಲೂ ಆತ್ಮಸಾಕ್ಷಿಯಂತೆ !

ಸಂಸತ್ತಿನ ಕಲಾಪದ ಪ್ರಸಾರದ ಇತಿಹಾಸ

ಸಂಸದೀಯ ಜ್ಞಾನಪೀಠದ ಪಥ ತಿಳಿದ ಮೇಲೆ ಸ್ವಲ್ಪ ಸಂಸತ್ತಿನೊಳಗಿನ ಪದ್ಧತಿ ಕುರಿತು ಕಣ್ಣು ಹಾಯಿಸುವಂತದ್ದಿದೆ. ಇಡೀ ಜಗತ್ತು ತಂತ್ರಜ್ಞಾನದೊಂದಿಗೆ ಬೆಸೆದುಕೊಳ್ಳುತ್ತಿರುವಾಗ ಸಂಸತ್ತೂ ಸುಮ್ಮನಿರಲಿಲ್ಲ. ಅದರೊಳಗಿನ ವ್ಯವಸ್ಥೆಯೆಲ್ಲಾ ತಾಂತ್ರಿಕ ರೂಪ ಪಡೆದುಕೊಂಡಿತು. ಇದರ ಮಹತ್ವದ ಘಟ್ಟವೆಂದರೆ ಸಂಸತ್ತಿನ ಕಲಾಪಗಳೆಲ್ಲಾ ಸಾರ್ವಜನಿಕವಾಗಿ ಪ್ರಸಾರವಾಗತೊಡಗಿದ್ದು.

1989 ರವರೆಗೆ ಸಂಸತ್ತಿನಲ್ಲಿ ನಡೆವ ಕಲಾಪಗಳನ್ನು ನೋಡುವ ಭಾಗ್ಯ ಇರಲಿಲ್ಲ. ಆ ಕಲಾಪಗಳ ವರದಿಗಳು ಪತ್ರಿಕೆಯಲ್ಲಿ ಪ್ರಕಟವಾಗಿದ್ದನ್ನು ಓದಿದರೆ ಮುಗಿದಂತೆ. ನಮ್ಮ ಸಂಸದರು ಅಲ್ಲಿ ಎಷ್ಟು ಹೊತ್ತು ಮಾತನಾಡಿದರು ? ಏನೆಲ್ಲಾ ಮಾತನಾಡಿದರು? ಯಾವುದೂ ತಿಳಿಯುತ್ತಿರಲಿಲ್ಲ. ಪತ್ರಿಕೆಗಳಲ್ಲಿ ಬಂದಷ್ಟೇ ವರದಿ. ದೂರದರ್ಶನದ ವಾರ್ತೆಯಲ್ಲಿ ಬರುವ ಕೆಲವು ತುಣುಕುಗಳಷ್ಟೇ.

ಇಂಥ ಸಂದರ್ಭದಲ್ಲಿ ಸಂಸತ್ತಿನ ಕಲಾಪ ಸಾರ್ವಜನಿಕಗೊಳಿಸಬೇಕೆಂಬ ಪ್ರಯತ್ನ ಶುರುವಾಗಿದ್ದು 1989 ರಲ್ಲಿ. ಜಗತ್ತಿನ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರದ ಕಲಾಪಗಳು ಪಾರದರ್ಶಕವಾಗಿರಲಿ ಎಂಬ ಸದಾಶಯವೂ ಇದರ ಬೆನ್ನಿಗಿತ್ತು. 1989 ರ 20 ರಂದು ಎರಡೂ ಸಭೆಗಳ (ಲೋಕಸಭೆ-ರಾಜ್ಯಸಭೆ)ನ್ನು ಉದ್ದೇಶಿಸಿ ರಾಷ್ಟ್ರಪತಿಗಳು ಮಾಡಿದ ಭಾಷಣವನ್ನು ನೇರ ಪ್ರಸಾರ ಮಾಡಲಾಯಿತು. ನಂತರ ಈ ಪರಂಪರೆ ಮುಂದುವರಿಯಿತು.

1992 ರಲ್ಲಿ ಹಲವು ಉದ್ದೇಶಗಳಿಂದ ಶ್ರವ್ಯ-ದೃಶ್ಯ ಘಟಕವನ್ನು ಆರಂಭಿಸಲಾಯಿತು. ಎಲ್ಲವನ್ನೂ ಧ್ವನಿಮುದ್ರಿಸಿದ, ಚಿತ್ರೀಕರಿಸಿದ ಧ್ವನಿಸುರುಳಿಗಳನ್ನು ಸಂಗ್ರಹಿಸಿಡುವ, ಸದಸ್ಯರು ಕೇಳಿದ್ದನ್ನು ಒದಗಿಸುವ ಕೆಲಸ ಈ ಘಟಕಕ್ಕೆ ನೀಡಲಾಯಿತು. ಜತೆಗೆ ಕಲಾಪಗಳ ಪ್ರಸಾರಕ್ಕೆ ಸಂಬಂಧಿಸಿ 1994 ರಲ್ಲಿ ಸಂಸತ್ ಭವನದಲ್ಲಿ ಲೋ ಪವರ್ ಟ್ರಾನ್ಸ್‌ಮಿಟರ್‌ ಗಳನ್ನು ಅಳವಡಿಸಲಾಯಿತು. ಇದರಿಂದ ಸುತ್ತಲಿನ 10-25 ಕಿ. ಮೀ ವರೆಗೆ ನೇರ ಪ್ರಸಾರ ಸಾಧ್ಯವಾಯಿತು. ಇದೇ ಸಂದರ್ಭದಲ್ಲಿ ರಾಜ್ಯಸಭೆಗೆ ಪ್ರತ್ಯೇಕ ವ್ಯವಸ್ಥೆ ಕಲ್ಪಿಸಲಾಯಿತು. ಇದರಿಂದ ಕ್ರಮೇಣ 1994 ರ ಡಿಸೆಂಬರ್ 7 ರ ನಂತರ ದೇಶಾದ್ಯಂತ ದೂರದರ್ಶನ ವಾಹಿನಿಯಲ್ಲಿ ಲೋಕಸಭೆ ಮತ್ತು ರಾಜ್ಯಸಭೆಯ ಪ್ರಶ್ನೋತ್ತರ ಕಲಾಪಗಳನ್ನು ನೇರ ಪ್ರಸಾರ ಮಾಡಲಾಯಿತು. ಈ ವಾರ ಲೋಕಸಭೆಯ ಕಲಾಪ ಪ್ರಸಾರವಾದರೆ, ಮುಂದಿನ ವಾರ ರಾಜ್ಯಸಭೆಗೆ ಕಲಾಪಕ್ಕೆ ಮೀಸಲು.

2003 ರಲ್ಲಿ ಡಿಡಿ ನ್ಯೂಸ್ ವಾಹಿನಿ ಆರಂಭವಾದ ಮೇಲೆ, ಎರಡೂ ಸಭೆಗಳ ಪ್ರಶ್ನೋತ್ತರ ಕಲಾಪವನ್ನು ಏಕಕಾಲಕ್ಕೆ ಪ್ರಸಾರ ಮಾಡುವ ಮೂಲಕ ಇತಿಹಾಸ ಬರೆಯಲಾಯಿತು. ಆಕಾಶವಾಣಿ ಮತ್ತು ದೂರದರ್ಶನದ ನಡುವಿನ ಸಮನ್ವಯತೆಯಿಂದ ಕಲಾಪದ ಪ್ರಮುಖಾಂಶ ಜನರಿಗೆ ತಲುಪಲು ಸಾಧ್ಯವಾಯಿತು. ದೂರದರ್ಶನದಲ್ಲಿ ಲೋಕಸಭೆಯ ಕಲಾಪ ಪ್ರಸಾರವಾಗುವ ವಾರ, ಆಕಾಶವಾಣಿ ರಾಜ್ಯಸಭೆಯತ್ತ ದೃಷ್ಟಿ ನೆಟ್ಟಿರುತ್ತದೆ. ಹಾಗೆಯೇ ನಂತರದ ವಾರ ಅದರ ವಿರುದ್ಧ.

2004 ಡಿಸೆಂಬರ್ 14 ಕ್ಕೆ ಪ್ರಜಾಪ್ರಭುತ್ವಕ್ಕೂ ಐತಿಹಾಸಿಕ ದಿನ ಹಾಗೂ ಸಂಸತ್ತಿನ ಆಧುನಿಕ ವ್ಯವಸ್ಥೆಗೂ ಮಹತ್ವದ ದಿನ. ಪ್ರಸಾರ ಭಾರತಿ ಮತ್ತು ಲೋಕಸಭೆ ಪ್ರಯತ್ನದ ಫಲವಾಗಿ ಅಂದು ಎರಡು ಪ್ರತ್ಯೇಕ ವಾಹಿನಿ ಕ್ರಮವಾಗಿ ಲೋಕಸಭೆ ಮತ್ತು ರಾಜ್ಯಸಭೆಯ ಕಲಾಪ ಪ್ರಸಾರ ಮಾಡಲೆಂದೇ ಹುಟ್ಟಿಕೊಂಡವು.

ರಾಜ್ಯಸಭೆಯ ಸಭಾಪತಿ ಉಪ ರಾಷ್ಟ್ರಪತಿಯವರು ರಾಜ್ಯಸಭೆ ವಾಹಿನಿಗೆ ಚಾಲನೆ ಕೊಟ್ಟರೆ, ಲೋಕಸಭೆಯ ಸ್ಪೀಕರ್ ಲೋಕಸಭೆಯ ವಾಹಿನಿಗೆ ಹಸಿರು ನಿಶಾನೆ ತೋರಿದರು. ಇಂಥದೊಂದು ಕಾರ‍್ಯಕ್ರಮಕ್ಕೆ ಮತ್ತೆ ಸಂಸತ್ತಿನ ಸೆಂಟ್ರಲ್ ಹಾಲ್ ಸಾಕ್ಷಿಯಾಯಿತು. ಹೀಗೆ ಅತ್ಯಾಧುನಿಕಗೊಂಡ ಸಂಸತ್ತಿನಲ್ಲಿ ನಡೆಯುವ ಕಲಾಪಗಳನ್ನೆಲ್ಲಾ ಚಿತ್ರೀಕರಿಸಲು ಸ್ವಯಂಚಾಲಿತ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಎಂಟೂ ಕ್ಯಾಮೆರಾಗಳನ್ನು ಪ್ರೊಡಕ್ಷನ್ ಘಟಕದಲ್ಲಿರುವ ವ್ಯವಸ್ಥೆ ನಿಯಂತ್ರಿಸುತ್ತದೆ. ಅಲ್ಲಿಗೆ ನಮ್ಮ ಸಂಸದರು, ಚುನಾಯಿತ ಪ್ರತಿನಿಧಿಗಳಿಗೆ ಮಾತನಾಡಲು, ಧ್ವನಿ ಎತ್ತಲು ಎಷ್ಟೊಂದು ವ್ಯವಸ್ಥೆ ಮಾಡಿದ್ದೇವೆ. ಆದರೂ ದನಿ ಎತ್ತಲು ಮೀನಾ ಮೇಷ ಎಣಿಸಿದರೆ ಹೇಗೆ ?

ನಮ್ಮ ಸಂಸದರೂ ಅಧ್ಯಯನಶೀಲರು !

ಈ ವಿಷಯ ಕೇಳಿ ಕೊಂಚ ಖುಷಿಪಡಬಹುದು. ನಮ್ಮ ಸಂಸದರು ಓದುವುದಿಲ್ಲ, ಅಧ್ಯಯನಶೀಲರಲ್ಲ…ಎನ್ನುವ ಕೂಗಿರುವ ಸಂದರ್ಭದಲ್ಲಿ ಚಿಕ್ಕ ನೀರಿನ ಬುಗ್ಗೆ ಮರಳುಗಾಡಿನಲ್ಲಿ ತೋರಿದಂತೆ ಅನಿಸುತ್ತಿದೆ. ಸಂಸತ್ತಿನ ಗ್ರಂಥಾಲಯದ ಮಾಹಿತಿ ಪ್ರಕಾರ ಮಾಹಿತಿ ಕೋರಿ ಸಲ್ಲಿಸುವ ಮನವಿಗಳು ಹೆಚ್ಚಿವೆಯಂತೆ.

ನಮ್ಮ ಸಂಸದರು ಕೈ ಉದ್ದ ಮಾಡಿದರೆ ಮಾಹಿತಿ ಎಂಬುದು ರಾಶಿ ಬಂದು ಬೀಳುತ್ತದೆ. ಅಂಥ ವ್ಯವಸ್ಥೆ ಇರುವುದು ಬಹಳಷ್ಟು ಮಂದಿಗೆ ಗೊತ್ತಿಲ್ಲ. ತಾವು ಮಾತನಾಡುವ ಕುರಿತ ವಿಷಯವನ್ನು ಅವರೇನೂ ಅಗೆದು ಸಂಶೋಧಿಸಬೇಕಾಗಿಲ್ಲ. ಸಂಸದೀಯ ಜ್ಞಾನಪೀಠ (ಗ್ರಂಥಾಲಯ) ದ ಅಧಿಕಾರಿಗಳಿಗೆ ಹೇಳಿದರೆ, ಅವರಂದುಕೊಂಡ ದಿನ ಆ ಮಾಹಿತಿ ಲಭ್ಯ.

ಈ ಮಧ್ಯೆ ನಿಮಗೆಲ್ಲಾ ಖುಷಿ ನೀಡುವ ಸಂಗತಿಯಿದೆ. ನಮ್ಮ ಸಂಸದರು ಓದುತ್ತಾರೆ, ಪ್ರಶ್ನೆ ಕೇಳುತ್ತಾರೆ, ಚರ್ಚೆಯಲ್ಲಿ ಭಾಗವಹಿಸುತ್ತಾರೆ. ಅಂದರೆ ಅಂಥವರ ಸಂಖ್ಯೆ ಅಧಿವೇಶನದಿಂದ ಅಧಿವೇಶನಕ್ಕೆ ಹೆಚ್ಚುತ್ತಿದೆ. ಸಂಸದೀಯ ಜ್ಞಾನಪೀಠವೇ ಒದಗಿಸಿರುವ ಮಾಹಿತಿ ಪ್ರಕಾರ ಪರಾಮರ್ಶನ ಸೇವೆಯನ್ನು ಚೆನ್ನಾಗಿ ಬಳಸಿಕೊಳ್ಳುತ್ತಿದ್ದಾರಂತೆ.

ಪ್ರತಿ ಹತ್ತುವರ್ಷಗಳ ಲೆಕ್ಕಾಚಾರ ತೆಗೆದುಕೊಂಡು ನಡೆಸಿರುವ ಸಮೀಕ್ಷೆ ಪ್ರಕಾರ ಗ್ರಂಥಾಲಯಕ್ಕೆ 1950 ರಲ್ಲಿ 150 ಮಂದಿಯ ಮನವಿ ಸಲ್ಲಿಕೆಯಾಗಿತ್ತು. ಆ ಸಂಖ್ಯೆ ಕ್ರಮೇಣವಗಿ 1960 ರಲ್ಲಿ 425, 1970 ರಲ್ಲಿ 700 ಕ್ಕೆ ಏರಿತು. ಅತ್ಯಂತ ಅಚ್ಚರಿಯ ಅಂಶವೆಂದರೆ 1970 ರಿಂದ 1980 ಕ್ಕೆ ಈ ಸೇವೆ ಬಳಸಿಕೊಳ್ಳುವವವರ ಸಂಖ್ಯೆ ಅಥವಾ ಮನವಿ 3, 627 ಕ್ಕೆ ಮುಟ್ಟಿತು. 1990 ರಲ್ಲಿ 5, 167 ಅನ್ನು ತಲುಪಿದರೆ, 2000 ದಲ್ಲಿ 6, 508 ಮನವಿಗಳು ಸಲ್ಲಿಕೆಯಾಗಿದ್ದವು. ಆದರೆ 2000-2009 ರ ಲೆಕ್ಕ ಇನ್ನೂ ಹಾಕಿಲ್ಲವಂತೆ. ಆದರೆ 2000-2005 ರವರೆಗೆ ಅಂದರೆ ಐದು ವರ್ಷಗಳಲ್ಲೇ 8,570 ಮನವಿಗಳಿಗೆ ಮಾಹಿತಿ ಒದಗಿಸಲಾಗಿದೆ.

ಹಾಗಾದರೆ, ನಮ್ಮವರು ಪ್ರಶ್ನೆ ಕೇಳುತ್ತಾರೆಂದಾಯಿತು. ಹಿಂದಿನವರೇ ಅಧ್ಯಯನಶೀಲರೆಂದು ತಿಳಿದಿದ್ದೆವು, ಈಗಿನವರು ಅವರಿಗಿಂತ ಹೆಚ್ಚಲ್ಲವೇ ಎಂಬ ಪ್ರಶ್ನೆ ಉದ್ಭವಿಸಬಹುದು. ಆದರೆ ವಸ್ತು ಸ್ಥಿತಿ ಹಾಗಲ್ಲ. ಆಗಿನವರು ಅವರೇ ಅಧ್ಯಯನ ಮಾಡುತ್ತಿದ್ದರು. ‘ಹೋಂವರ್ಕ್’ ಮಾಡಿ, ಮಾಹಿತಿ ಕಲೆ ಹಾಕುತ್ತಿದ್ದರು. ಈಗಿನವರು ಅಧಿಕಾರಿಗಳಿಗೆ ಚೀಟಿ ಕೊಟ್ಟು ಬಿಡುತ್ತಾರೆ.

ಈ ಸೇವೆ ಬಗ್ಗೆ ಉಲ್ಲೇಖಿಸುವುದು ಸೂಕ್ತ. ಪ್ರಮುಖ ವಿಷಯಗಳಿಗೆ ಕುರಿತಂತೆ ಪೀಠಿಕೆ ಬರೆಯುವುದು, ಮಾಹಿತಿ ಕ್ರೋಡೀಕರಣ, ವಿಷಯ ಹಿನ್ನೆಲೆಯ ಸಂರಚನೆ ಇವೆಲ್ಲವನ್ನೂ ಈ ಸೇವೆ ಒಳಗೊಂಡಿದೆ. ಒಂದೇ ಒಂದು ಸಮಸ್ಯೆಯೆಂದರೆ ನಮ್ಮವರಿಗೆ ಇಂಗ್ಲಿಷ್ ಅಥವಾ ಹಿಂದಿ ಬರಬೇಕು. ಆ ಭಾಷೆ ಗೊತ್ತಿದ್ದವರಿಗಷ್ಟೇ ಈ ಸೇವೆ ಉಪಯೋಗವಾದೀತು. 11 ನೇ ಲೋಕಸಭೆಯಿಂದ ಹಿಡಿದು ನಿತ್ಯ ಸಲ್ಲಿಸಿದ ಸರಾಸರಿ ಮನವಿ ಲಭ್ಯ.

ಹಾಗಾದರೆ ಸಹಜ ಕುತೂಹಲದ ಪ್ರಶ್ನೆಯೊಂದಿದೆ. ಅದೆಂದರೆ, ಯಾವ ವಿಷಯ ಸಂಬಂಧಿ ಪ್ರಶ್ನೆಗಳು ಹೆಚ್ಚಿರಬಹುದು. 11,12 ಹಾಗೂ 13 ನೇ ಲೋಕಸಭೆ ಲೆಕ್ಕಾಚಾರಕ್ಕೆ ತೆಗೆದುಕೊಂಡರೆ ಶೇ. 44 ರಷ್ಟು ಮಂದಿ ಆರ್ಥಿಕ ವಿಷಯ ಸಂಬಂಧಿ ಪ್ರಶ್ನೆ ಕೇಳಿದ್ದರೆ, 43 ರಷ್ಟು ಮಂದಿ ರಾಜಕೀಯ ಮತ್ತು ಸಂಸದೀಯ ವಿಷಯಗಳಿಗೆ ಸಂಬಂಧಿಸಿದಂತೆ ಮಾಹಿತಿ ಕೋರಿದ್ದಾರೆ. ಉಳಿದದ್ದು ವಿಜ್ಞಾನ, ತಂತ್ರಜ್ಞಾನ, ರಕ್ಷಣಾ ವಿಷಯಗಳಿಗೂ ಮನವಿ ಸಲ್ಲಿಸಿದ್ದಾರೆ.

ಈಗ ಈ ಸೇವೆ ಇನ್ನಷ್ಟು ಸೂಕ್ಷ್ಮವಾಗಿದೆ. ನಮ್ಮ ಸಂಸದರ ಅಗತ್ಯವನ್ನು ಪೂರೈಸಲು ವಿಶೇಷ ಮಾಹಿತಿ ಕೇಂದ್ರಗಳನ್ನು (ಡೆಸ್ಕ್) ತೆರೆಯಲಾಗಿದೆ. ಅದರಂತೆ ಕಾನೂನು, ಸಂವಿಧಾನ, ಸಾಮಾಜಿಕ ಹಾಗೂ ರಾಜಕೀಯ ವಿಷಯಕ್ಕೆ ಸಂಬಂಧಿಸಿದ ಐದು ಡೆಸ್ಕ್ ಗಳಿದ್ದರೆ, ಆರ್ಥಿಕ, ಹಣಕಾಸು, ಮೂಲಭೂv ಸೌಲಭ್ಯಕ್ಕೆ ಕುರಿತಂತೆ ನಾಲ್ಕು ಪ್ರತ್ಯೇಕ ಡೆಸ್ಕ್‌ಗಳಿವೆ. ಪ್ರತಿಯೊಂದಕ್ಕೂ ಒಬ್ಬೊಬ್ಬ ಅಧಿಕಾರಿಯನ್ನು ನಿಯೋಜಿಸಲಾಗಿದ್ದು, ಅವರಲ್ಲಿ ಮನವಿ ಸಲ್ಲಿಸಿದರೆ ಸಾಕು. ಸಕಾಲದಲ್ಲಿ ಮನವಿ ಅವರನ್ನು ಬಂದು ತಲುಪುತ್ತದೆ.

ಸಂಸದರು, ಇಂಥ ದಿನದೊಳಗೆ ಮಾಹಿತಿ ಬೇಕು ಎಂದು ಹೇಳಿದರೆ ಸಾಕು, ಕೆಲಸ ಮುಗಿದಂತೆ. ಹೀಗಿದ್ದರೂ ಶೇ. 56 ರಷ್ಟು ಮಂದಿ ಒಂದರ್ಥದಲ್ಲಿ ಫಾಸ್ಟ್‌ಪುಡ್ ಹೋಟೆಲ್‌ಗೆ ಹೋದಂಗೆ ಅಂತಲೇ ಈ ಸೇವೆಯನ್ನು ಪರಿಗಣಿಸಿದ್ದಾರೆ. ಕಾರಣ, ಕಳೆದ ಮೂರು ಲೋಕಸಭೆಗಳಲ್ಲಿ ಶೇ. 56 ರಷ್ಟು ಮಂದಿ ‘ನಮಗೆ ಇಂದೇ ಮಾಹಿತಿ ಬೇಕು’ ಎಂದು ಅರ್ಜಿ ಸಲ್ಲಿಸಿದವರೇ.

ಇವಿಷ್ಟು ಲೈಬ್ರರಿಯ ಮಾಹಿತಿ. ಸಂಸತ್ ಆವರಣದಲ್ಲೇ ಇತ್ತೀಚೆಗೆ ಆರಂಭವಾಗಿರುವ ಪಾರ್ಲಿಮೆಂಟರಿ ಮ್ಯೂಸಿಯಂ ಅತ್ಯಂತ ಹೊಸದು. ಅದರಲ್ಲೇನಿದೆ ಗೊತ್ತೇ ? ಇಡೀ ಪ್ರಜಾಪ್ರಭುತ್ವ ವ್ಯವಸ್ಥೆಯ ಮಾದರಿ ರೂಪ !

ಸಂಸತ್ತಿನ ಗ್ರಂಥಾಲಯ ಕಂಡರೆ ಬೆಚ್ಚಿ ಬೀಳುತ್ತೀರಿ…


ಸಂಸತ್ತಿನ ಗ್ರಂಥಾಲಯ, ನಮ್ಮ ಜನ ಪ್ರತಿನಿಧಿಗಳಿಗೆ ಅಧ್ಯಯನಕ್ಕಾಗಿ ಒದಗಿಸುವ ವ್ಯವಸ್ಥೆ ಎಲ್ಲವನ್ನೂ ಕಂಡರೆ ಬೆಚ್ಚಿ ಬೀಳದೇ ವಿಧಿಯಿಲ್ಲ. ಆ ಪೈಕಿ ಇದರ ಸದುಪಯೋಗ ಎಷ್ಟಾಗುತ್ತಿದೆ ಎಂದು ಕೇಳಬೇಡಿ. ಒಂದಂತೂ ನಿಜ. ನಮ್ಮ ಸಂಸದರು ಓದದಿದ್ದರೂ ಅವರ ಆಪ್ತ ಸಹಾಯಕರು, ಅಧಿಕಾರಿಗಳು ಓದುತ್ತಿರಬಹುದು. ಅಷ್ಟಕ್ಕೇ ಸಮಾಧಾನ ಪಡಬೇಕು !


ಒಂದು ಕಾಲದಲ್ಲಿ ಎಲ್ಲೆಲ್ಲೂ ಅಧ್ಯಯನ ಶೀಲರಿದ್ದರು. ಈ ಮಾತಿಗೆ ಸಂಸತ್ತೂ ಅಪವಾದವಾಗಿರಲಿಲ್ಲ. ಅದರಲ್ಲೂ ಭಾರತ ಜ್ಞಾನ ಸಂಪನ್ನರ ದೇಶ. ಅವರನ್ನು ಪ್ರತಿನಿಧಿಸುವವರೆಲ್ಲಾ ಜ್ಞಾನ ಸಂಪನ್ನರೇ ಎನ್ನುವಂತಿತ್ತು. ಒಂದು ವಿಷಯ ಕುರಿತು ಫಲಪ್ರದ ಚರ್ಚೆಗೆ ಅವಕಾಶ ಕಲ್ಪಿಸುತ್ತಿದ್ದ ಎರಡೂ ಸದನಗಳಲ್ಲಿ ಮಾತನಾಡಿದ್ದೆಲ್ಲವೂ ದಾಖಲೆಯಾಗುತ್ತಿತ್ತು. ಹಾಗಾಗಿ ಸದಸ್ಯರು ಏನೇನೋ ಮಾತನಾಡುವಂತಿರಲಿಲ್ಲ.

ಅದಕ್ಕೇ ಸಭಾ ನಡವಳಿಗೆ ಸಂಬಂಧಿಸಿದಂತೆ ಒಂದಿಷ್ಟು ನಿಯಮಗಳಿವೆ. ಇವೆಲ್ಲವನ್ನೂ ಮಾಡಿಕೊಂಡಿದ್ದು ಚರ್ಚೆಯ ದಿಕ್ಕು ತಪ್ಪದಿರಲೆಂಬ ಉದ್ದೇಶದಿಂದಲೇ. ಅಂದರೆ ಅನಗತ್ಯ ಚರ್ಚೆ ಎನ್ನುವುದು ಮತ್ತೊಂದು ಅಪವಾದಕ್ಕೆ ಕಾರಣವಾಗಬಾರದೆಂಬ ಕಾಳಜಿ ಕೆಲಸ ಮಾಡಿತ್ತು. ಅಲ್ಲಿಗೆ, ಇಷ್ಟೊಂದು ಮಂದಿಗೆ ಏನಾದರೂ ಮಾಹಿತಿ ಬೇಕೆಂದರೆ ಎಲ್ಲಿಗೆ ಹೋಗಬೇಕು ? ಎಂಬ ಸಮಸ್ಯೆ ಉದ್ಭವಿಸಿದ ಹಿನ್ನೆಲೆಯಲ್ಲಿ ಗ್ರಂಥಾಲಯ ಕಟ್ಟಡ ಅಸ್ತಿತ್ವಕ್ಕೆ ಬಂದಿತು.

1926 ರಲ್ಲೇ ಸ್ಥಾಪಿಸಲ್ಪಟ್ಟ ಗ್ರಂಥಾಲಯ ಇಂದು ಗ್ರಂಥಗಳ ಕಣಜ. ಸಂಶೋಧನಾರ್ಥಿಗಳ ಕಾಶಿಯಾಗಿದೆ. ನಿಮಗೆ ಅಚ್ಚರಿ ಎನಿಸಿದರೂ ಸತ್ಯ. ದೇಶದ ಎರಡನೇ ಅತ್ಯಂತ ಹೆಚ್ಚು ಗ್ರಂಥಗಳನ್ನು ಹೊಂದಿರುವ ಗ್ರಂಥಾಲಯವಿದು. ಅಂದಾಜು ಲೆಕ್ಕ ಹಾಕಿ ಅಲ್ಲಿರಬಹುದಾದ ಪುಸ್ತಕಗಳ ಬಗ್ಗೆ. ಸುಮಾರು 1.27 ದಶಲಕ್ಷ ಪುಸ್ತಕ, ವರದಿ, ಸರಕಾರಿ ಪ್ರಕಟಣೆಗಳು, ವಿಶ್ವಸಂಸ್ಥೆ ವರದಿಗಳು, ಚರ್ಚೆಯ ವಿವರಗಳು, ಗೆಜೆಟ್ ಅಧಿಸೂಚನೆಗಳು…ಇತ್ಯಾದಿ ಇಲ್ಲಿ ಲಭ್ಯ. ಮೊದಲನೇ ಸ್ಥಾನದಲ್ಲಿರುವಂಥದ್ದು 1836 ರಲ್ಲಿ ಕೋಲ್ಕತ್ತಾದಲ್ಲಿ ಆರಂಭವಾದ ಸಾರ್ವಜನಿಕ ಗ್ರಂಥಾಲಯ. ಅದೀಗ ನ್ಯಾಷನಲ್ ಲೈಬ್ರರಿ ಆಗಿದೆ.

ಸಂಸತ್ತಿನ ಗ್ರಂಥಾಲಯದಲ್ಲಿ 150 ದೇಶಿ, ವಿದೇಶಿ ಪತ್ರಿಕೆಗಳು, 587 ಇಂಗ್ಲಿಷ್, ಹಿಂದಿ ಹಾಗೂ ಇತರೆ ಭಾರತೀಯ ಭಾಷೆಗಳ ನಿಯತಕಾಲಿಕೆಗಳು ಇಲ್ಲಿ ಲಭ್ಯ. ಇಷ್ಟಕ್ಕೇ ಇದರ ಕೀರ್ತಿ ಮುಗಿಯಲಿಲ್ಲ. ಗ್ರಂಥಾಲಯವೇ ಪ್ರತಿ ತಿಂಗಳೂ ಒಂದು ಪತ್ರಿಕೆಯನ್ನು ಹೊರ ತರುತ್ತದೆ. ಈ ಪತ್ರಿಕೆಯಲ್ಲಿ ಗ್ರಂಥಾಲಯದಲ್ಲಿ ಲಭ್ಯವಿರುವ ಹೊಸ ಪ್ರಕಟಣೆಗಳು ಇತ್ಯಾದಿಗಳ ಮಾಹಿತಿ. ಜತೆಗೆ ಗ್ರಂಥಾಲಯ ಏರ್ಪಡಿಸುವ ವಿಶೇಷ ಕಾರ್ಯಕ್ರಮ, ಗಣ್ಯ ವ್ಯಕ್ತಿಗಳ ಭೇಟಿ…ಮುಂತಾದ ಮಾಹಿತಿ ನೀಡಲಾಗುವುದು. ಇದರಲ್ಲಿ ಸದಸ್ಯರಿಗೆಂದು ಹತ್ತು ಹಲವು ಸೌಲಭ್ಯಗಳನ್ನು ಕಲ್ಪಿಸಲಾಗಿದೆ.

ಸಂಸತ್ತಿನ ಎದುರೇ ಹೊಸ ಕಟ್ಟಡವನ್ನು ಒದಗಿಸಲಾಗಿದ್ದು, ಅದು ಬಹಳ ವಿಶಿಷ್ಟವಾಗಿ ವಿನ್ಯಾಸಗೊಂಡಿದೆ. ರಾಜ್ ರೇವಲ್ ಎಂಬವರು ರೂಪಿಸಿದ ವಿನ್ಯಾಸ ಸಂಪೂರ್ಣ ಭಾರತೀಯ ನೆಲೆಯದ್ದೇ. ಅಂದಹಾಗೆ ಗ್ರಂಥಾಲಯ ಕಟ್ಟಡಕ್ಕೆ ಕಾಲಿಡುತ್ತಿದ್ದಂತೆಯೇ ನಿಮ್ಮನ್ನು ಸ್ವಾಗತಿಸುವುದು ನೊಬೆಲ್ ಪ್ರಶಸ್ತಿ ಪುರಸ್ಕೃತ ಕವಿ ರವೀಂದ್ರ ನಾಥ ಠಾಕೂರರ ಬೃಹತ್ತಾದ ಪ್ರತಿಮೆ. ಜ್ಞಾನದ ಪಿತಾಮಹ ಎಂಬ ಅಭಿದಾನ ಹೊಂದಿರುವ ಠಾಗೋರರ ಪ್ರತಿಮೆಯೇ ಅತ್ಯಂತ ಆಕರ್ಷಣೀಯ.
ನಂತರ ಇಲ್ಲಿಯ ಮತ್ತೊಂದು ಇತಿಹಾಸದ ಹಿರಿಮೆಯೆಂದರೆ ಸಂವಿಧಾನದ ಮೂಲಪ್ರತಿ ಸಂರಕ್ಷಿಸಲ್ಪಟ್ಟ ತಾಣ. ಇಲ್ಲಿ 1949 ನೇ ಇಸವಿಯ ನವೆಂಬರ್ 26 ರಂದು ಸಂವಿಧಾನ ಕರಡು ಸಮಿತಿ ಸದಸ್ಯರು ಸಹಿ ಮಾಡಿದ ಗ್ರಂಥಾಲಯದ ಕರಡು ಪ್ರತಿಯನ್ನು ಇಲ್ಲಿಯೇ ಸಂರಕ್ಷಿಸಲಾಗಿದೆ. ನೈಟ್ರೋಜನ್ ಅನಿಲವನ್ನು ಬಳಸಿ ಇದನ್ನು ಸಂರಕ್ಷಿಸಿರುವುದು ಒಂದು ಅದ್ಭುತವೇ.

ಇದೆಲ್ಲದರ ಮಧ್ಯೆ ಸಂಸತ್ತಿನ ಸಿಬ್ಬಂದಿಗೆಂದೇ ಪ್ರತ್ಯೇಕ ಗ್ರಂಥಾಲಯವಿದೆ. ಹೊಸ ಕಟ್ಟಡದಲ್ಲಿದ್ದರೂ ಗ್ರಂಥಾಲಯದೊಳಗೆ ಮತ್ತೊಂದು ಗ್ರಂಥಾಲಯ ಎನ್ನಲಡ್ಡಿಯಿಲ್ಲ. ಇಲ್ಲಿಯೂ ೨೬ ಸಾವಿರ ಪುಸ್ತಕಗಳಿಂದ ಹಿಡಿದು ವಿವಿಧ ನಿಯತಕಾಲಿಕೆ, ಪರಾಮರ್ಶನ ಗ್ರಂಥಗಳೆಲ್ಲಾ ಪರಿಮಳ ಬೀರುತ್ತಿವೆ. ಲೋಕಸಭಾ ಮತ್ತು ರಾಜ್ಯಸಭಾ ಸಚಿವಾಲಯದ 3, 100 ಕ್ಕೂ ಹೆಚ್ಚು ಮಂದಿ ಇದರ ಸದಸ್ಯರು.

ಇವೆಲ್ಲಾ ಇರಲಿ, ಇಂಥದೊಂದು ವ್ಯವಸ್ಥೆ ದೇಶದ (ಕೋಲ್ಕತ್ತಾ ಬಿಟ್ಟರೆ) ಉಳಿದ ಸಾರ್ವಜನಿಕ ಗ್ರಂಥಾಲಯಗಳಿಲ್ಲವೆಂದೇ ಹೇಳಬಹುದು. ರಾಜ್ಯದಲ್ಲಿ ಗ್ರಂಥಾಲಯಗಳೆಲ್ಲಾ ರದ್ದಿ ಪುಸ್ತಕದ ಅಂಗಳವಾಗಿರುವಾಗ, ನಮ್ಮನ್ನಾಳುವ ಮಂದಿಯ ಗ್ರಂಥಾಲಯದ ವ್ಯವಸ್ಥೆ ಕಂಡರೆ ನಿಜಕ್ಕೂ ಬೆಚ್ಚಿ ಬೀಳುತ್ತೇವೆ !

ವರ್ತುಲಾಕಾರದ ಸೆಂಟ್ರಲ್ ಹಾಲ್

ಸೆಂಟ್ರಲ್ ಹಾಲ್, ವರ್ತುಲಾಕಾರದಲ್ಲಿರುವಂಥದ್ದು. ಅದರ ಗೋಲ 98 ಅಡಿ ವ್ಯಾಸವುಳ್ಳದ್ದು. ಅಷ್ಟೇ ಅಲ್ಲ ; ಈ ಗೋಲ ಇಡೀ ಜಗತ್ತಿನಲ್ಲೇ ಬಹಳ ವಿಶಿಷ್ಟವಾದ ವಿನ್ಯಾಸದ್ದು. ಇಡೀ ಕಟ್ಟಡಕ್ಕೆ ಹೊರಗಿನಿಂದ ಮತ್ತು ಒಳಗಿನಿಂದ ಹೊಸ ಚೆಂದವನ್ನು ಕೊಟ್ಟಿರುವುದೇ ಈ ಗೋಲ ಮತ್ತು ಹಾಲ್ (ಪಡಸಾಲೆ).
ಈ ಪಡಸಾಲೆ ಅಥವಾ ಹಾಲ್, ಹಲವು ಐತಿಹಾಸಿಕ ಕ್ಷಣಗಳಿಗೆ ಸಾಕ್ಷಿಯಾಗಿದೆ. ಅದರಲ್ಲೂ ಬಹಳ ಮುಖ್ಯವಾಗಿ ನಮಗೆಲ್ಲಾ ಸ್ವಾತಂತ್ರ್ಯದ ಗರಿ ಕಟ್ಟಿಕೊಟ್ಟಿದ್ದು ಇದೇ ಹಾಲ್ ಅಂದರೆ ಇಲ್ಲಿಯೇ. ಬ್ರಿಟಿಷ್ ಗವರ್ನರ್ ಜನರಲ್ ಮೌಂಟ್ ಬ್ಯಾಟನ್, ಜವಾಹರಲಾಲ್ ನೆಹರೂ ಅವರಿಗೆ ಅಧಿಕಾರ ಹಸ್ತಾಂತರಿಸಿ ಪ್ರಧಾನಿಯಾಗಿ ಘೋಷಿಸಿದ್ದು ಇದೇ ಹಾಲ್‌ನಲ್ಲಿ. ಮತ್ತೊಂದು ಮಹತ್ವದ ಕ್ಷಣಗಳೆಂದರೆ…ಭಾರತೀಯ ಸಂವಿಧಾನವನ್ನು ರಚಿಸಿದ್ದೂ ಇದೇ ಹಾಲ್‌ನಲ್ಲಿ ಸಭೆ ನಡೆಸಿ.

ಮೊದಲು ಈ ಹಾಲ್ ಅನ್ನು ಲೋಕಸಭೆ ಮತ್ತು ರಾಜ್ಯಸಭೆಯ ಗ್ರಂಥಾಲಯವಾಗಿ ಬಳಸುತ್ತಿದ್ದರು. ಆದರೆ 1946 ರಲ್ಲಿ , ಇದನ್ನು ನವೀಕರಿಸಿ ಶಾಸನ ಸಭೆಯ ಹಾಲ್ ಅನ್ನಾಗಿ ಪರಿವರ್ತಿಸಲಾಯಿತು. 1946 ರ ಡಿಸೆಂಬರ್ 9 ರಿಂದ 1950 ರ ಜನವರಿ 24 ರವರೆಗೆ ಇದನ್ನು ಸಭೆ ಸೇರಲು ಬಳಸಿಕೊಳ್ಳಲಾಗುತ್ತಿತ್ತು.

ಪ್ರಸ್ತುತ ಈ ಹಾಲ್ ಬಳಕೆಯಾಗುತ್ತಿರುವುದು ಜಂಟಿ ಅಧಿವೇಶನಗಳಿಗಾಗಿ. ಸಾಮಾನ್ಯವಾಗಿ ಸಾರ್ವತ್ರಿಕ ಚುನಾವಣೆಯ ನಂತರ ಅಧಿಕಾರ ಸ್ವೀಕರಿಸಿದ ನೂತನ ಸರಕಾರದ ಮೊದಲ ಅಧಿವೇಶನ, ಪ್ರತಿ ವರ್ಷದ ಮೊದಲ ಅಧಿವೇಶನ ಎರಡೂ ಸಭೆಗಳನ್ನು (ಲೋಕಸಭೆ, ರಾಜ್ಯಸಭೆ) ಉದ್ದೇಶಿಸಿ ರಾಷ್ಟ್ರಪತಿಗಳು ಇಲ್ಲಿಯೇ ಭಾಷಣ ಮಾಡುವರು. ಲೋಕಸಭೆಯೊಳಗೆ ಅಧಿವೇಶನ ನಡೆಯುವ ಸಂದರ್ಭದಲ್ಲಿ ಎರಡೂ ಮನೆಯ ಸದಸ್ಯರು ಅನೌಪಚಾರಿಕವಾಗಿ ನಡೆಸುವ ಚರ್ಚೆಗೆ, ಮಾತುಕತೆಗೆ ಇದೇ ಸ್ಥಳ.

ವೇದಿಕೆಯ ಅಂದ ಹೆಚ್ಚಿಸಿರುವುದು ಮಹಾತ್ಮಾ ಗಾಂಧೀಜಿಯವರ ಕಲಾಕೃತಿ. ಇದನ್ನು ಬಿಡಿಸಿದವರು ಸರ ಓಸ್ವಾಲ್ಡ್ ಬರ್ಲಿ, ಹೆಸರಾಂತ ಕಲಾವಿದ. ರಾಷ್ಟ್ರಕ್ಕೆ ಈ ಕಲಾಕೃತಿಯನ್ನು ಅರ್ಪಿಸಿದವರು ಸದಸ್ಯರಾದ ಎ.ಪಿ. ಪಟ್ಟಾನಿ.

ವಾಸ್ತವವಾಗಿ ಇದರೊಳಗೆ ಕಾಲಿಟ್ಟರೆ ನೆನಪುಗಳೆಲ್ಲಾ ಗರಿ ಗೆದರಿ ಹಾರತೊಡಗುತ್ತವೆ. ಅಷ್ಟೊಂದು ನೆನಪುಗಳಿವೆ. ಅದಕ್ಕೆ ತಕ್ಕಂತೆ ನಮ್ಮ ಸ್ವಾತಂತ್ರ್ಯದಾಸೆಯ ಈಡೇರಿಸಲು ಬೆವರು ಹರಿಸಿ ದುಡಿದ ಮಹನೀಯರೆಲ್ಲಾ ಇಲ್ಲಿ ಕುಳಿತಿದ್ದಾರೆ. ಅದೇ ಖುಷಿಯ ಸಂಗತಿ. ವೇದಿಕೆ ಅಕ್ಕಪಕ್ಕ, ಗೋಡೆಯ ಮೇಲೆ ಇವರ ವ್ಯಕ್ತಿಚಿತ್ರಗಳು ನಮ್ಮ ಪ್ರತಿ ನಡವಳಿಕೆಯನ್ನೂ ಆತ್ಮಸಾಕ್ಷಿಯಂತೆ ಕಾಯುತ್ತಿವೆ, ನೋಡುತ್ತಿವೆ. ನಮ್ಮ ತಪ್ಪುಗಳಿಗೂ ಸಾಕ್ಷಿಯಾಗುತ್ತಿವೆ.

ಅಲ್ಲಿರುವ ಮಹನೀಯರು ಯಾರೆಂದರೆ, ಮದನ ಮೋಹ ಮಾಳವೀಯ, ದಾದಾಬಾಯಿ ನವರೋಜಿ, ಲೋಕಮಾನ್ಯ ಬಾಲಗಂಗಾಧರ ತಿಲಕ್, ಲಾಲಾಲಜಪತ್ ರಾಯ್, ಮೋತಿಲಾಲ್ ನೆಹರು, ಸರ್ದಾರ್ ವಲ್ಲಭಬಾಯಿ ಪಟೇಲ್, ರವೀಂದ್ರ ನಾಥ ಠಾಗೋರ್, ಸರೋಜಿನಿ ನಾಯ್ಡು, ಮೌಲಾನಾ ಅಬ್ದುಲ್ ಕಲಾಂ ಆಜಾದ್, ಡಾ. ಬಾಬು ರಾಜೇಂದ್ರ ಪ್ರಸಾದ್, ಜವಾಹರಲಾಲ್ ನೆಹರೂ, ನೇತಾಜಿ ಸುಭಾಶ್ ಚಂದ್ರ ಬೋಸ್, ಸಿ. ರಾಜಗೋಪಾಲಚಾರಿ, ಇಂದಿರಾಗಾಂಧಿ, ಡಾ. ಬಿ. ಆರ್. ಅಂಬೇಡ್ಕರ್, ಡಾ. ರಾಮಮನೋಹರ ಲೋಹಿಯಾ, ಡಾ. ಶ್ಯಾಮ ಪ್ರಸಾದ್ ಮುಖರ್ಜಿ, ರಾಜೀವ್ ಗಾಂಧಿ, ಲಾಲ್‌ಬಹಾದೂರ್ ಶಾಸ್ತ್ರಿ, ಚರಣ್ ಸಿಂಗ್, ಮೊರಾರ್ಜಿ ದೇಸಾಯಿ, ವಿನಾಯಕ ದಾಮೋದರ ಸಾವರ್ಕರ್.

ಜತೆಗೆ ಗೋಡೆಯಲ್ಲಿ ರಾರಾಜಿಸುತ್ತಿರುವ ೧೨ ಲಾಂಛನಗಳಿದ್ದು, ಅವುಗಳು ಅಖಂಡ ಭಾರತದ ೧೨ ಅವಿಚ್ಛಿನ್ನ ರಾಜ ಮನೆತನಗಳನ್ನು ಬಿಂಬಿಸುತ್ತವೆ. ಹಾಲ್‌ನ ಸುತ್ತಲೂ ಆರು ಲಾಬಿ (ಕುಳಿತುಕೊಳ್ಳುವ ಸ್ಥಳ, ವರಾಂಡ) ಗಳಿದ್ದು, ಒಂದು ಮಹಿಳಾ ಸದಸ್ಯರಿಗೇ ಮೀಸಲು.

ಹಾಲ್‌ನ ಮೊದಲ ಅಂತಸ್ತಿನಲ್ಲಿ ಆರು ಗ್ಯಾಲರಿಗಳಿವೆ. ಜಂಟಿ ಅಧಿವೇಶನ ನಡೆಯುವಾಗ ಆ ಪೈಕಿ ವೇದಿಕೆಯ ಬಲಭಾಗದ ಎರಡು ಗ್ಯಾಲರಿಗಳು ಪತ್ರಕರ್ತರಿಗೆ ಮೀಸಲು. ವೇದಿಕೆಯ ಎದುರಿರುವ ಮತ್ತೊಂದು ಗಣ್ಯ ಅತಿಥಿಗಳಿಗೆ ಕಲಾಪ ನೋಡಲು. ಉಳೀದ ಮೂರರಲ್ಲಿ ಎರಡೂ ಮನೆಯ ಸದಸ್ಯರ ಅತಿಥಿಗಳಿಗೆ. ಹೀಗೇ ಸೆಂಟ್ರಲ್ ಹಾಲ್ ಭವನಕ್ಕೇ ಕಳೆಗಟ್ಟಿದೆ. ದೇಶದಲ್ಲಿ ಅತಿದೊಡ್ಡ ಗ್ರಂಥ ಭಂಡಾರ ಎಲ್ಲಿರಬಹುದು ಗೊತ್ತೇ?

ಸಂಸತ್ ಕಟ್ಟಡಕ್ಕೆ ಪ್ರೇರಣೆ ಶಿವನ ದೇವಸ್ಥಾನ !

ಸಂಸದ ಭವನ ಸಂಕೀರ್ಣ ಇರುವುದು ದಿಲ್ಲಿಯ ಸಂಸತ್ ಮಾರ್ಗದಲ್ಲಿ. ಈ ಸಂಕೀರ್ಣ ಇರುವ ಪ್ರದೇಶದ ವ್ಯಾಪ್ತಿ ಎಷ್ಟು ಗೊತ್ತೇ ?

ಬರೋಬ್ಬರಿ 6 ಎಕರೆ ಪ್ರದೇಶ. ಸುಮಾರು 560 ಅಡಿ ವ್ಯಾಸವುಳ್ಳ ವೃತ್ತದಂತಿದೆ ಈ ಪ್ರದೇಶ. ಈ ಸಂಕೀರ್ಣದಲ್ಲಿ ಸಂಸತ್ ಭವನ, ಸ್ವಾಗತಕಾರ ಕಟ್ಟಡ, ಸಂಸದೀಯ ಭವನ, ಸಂಸದರ ಗ್ರಂಥಾಲಯ ಕಟ್ಟಡ, ಉದ್ಯಾನ (ಲಾನ್), ಸಮೃದ್ಧಕೊಳಗಳಲ್ಲಿ ಕಾರಂಜಿಯ ಸೊಬಗು. ಸಂಸತ್ತು ಕಲಾಪ ನಡೆಯುವ ಸಂದರ್ಭದಲ್ಲಿ ಇಡೀ ಕಟ್ಟಡದ ಕೆಲ ಭಾಗಗಳಲ್ಲಿ ಹೂಗಳಿಂದ ಸಿಂಗರಿಸಲಾಗುತ್ತದೆ. ಕಣ್ಣಿಗೆ ಸೊಬಗು ತರಲೆಂದು.

1912-13 ರಲ್ಲಿ ವಿನ್ಯಾಸ ಪರಿಷ್ಕೃತಗೊಂಡು ಕಟ್ಟಡವಾಗಿ ಜನ್ಮ ತಳೆದದ್ದು 1927 ರಲ್ಲಿ. ಪ್ರಪಂಚದ ಅತ್ಯಂತ ವಿಶಿಷ್ಟ ವಿನ್ಯಾಸದ ಕಟ್ಟಡಗಳಲ್ಲಿ ಇದೂ ಒಂದು. ಬಹಳ ವಿಭಿನ್ನವಾಗಿ ಕಾಣುವ ಈ ವಿನ್ಯಾಸದ ಹಿಂದಿನ ಪ್ರೇರಣೆ ಏನು ಎಂಬುದನ್ನು ಹುಡುಕಿ ಹೊರಟರೆ ನಾನಾ ಸಂಗತಿಗಳು ಸಿಗುತ್ತವೆ. ಲಭ್ಯ ಮಾಹಿತಿ ಪ್ರಕಾರ ಸಿಕ್ಕ ಮೊದಲ ಪ್ರೇರಣೆಯೆಂದರೆ ‘ಶಿವನ ದೇವಸ್ಥಾನ’.

ಮಧ್ಯಪ್ರದೇಶದ ಮೊರೆನಾ ಜಿಲ್ಲೆಯ ಮಿತಾವಲಿ ಹಳ್ಳಿಯಲ್ಲಿರುವ ಎಂಟನೇ ಶತಮಾನದಷ್ಟು ಹಳೆಯ ಶಿವನ ದೇವಸ್ಥಾನವೇ ಇದರ ಹಿಂದಿನ ವಿನ್ಯಾಸಶಕ್ತಿ.

170 ಅಡಿ ಸುತ್ತಳತೆಯಲ್ಲಿ ವರ್ತುಲಾಕಾರದ ವಾಸ್ತು ವಿನ್ಯಾಸದಿಂದ ಕೂಡಿದ ಅಪರೂಪದ ದೇವಸ್ಥಾನ. 64 ಯೋಗಿನಿಯರರ ಚಿತ್ರಗಳನ್ನು ದೇವಸ್ಥಾನದೊಳಗಿನ ಸ್ತಂಭಗಳಲ್ಲಿ ಕೆತ್ತಲಾಗಿದೆ. ಇದು ೬೪ ಕೋಣೆಗಳನ್ನು ಹೊಂದಿದ್ದು, ಪ್ರತಿಯೊಂದರಲ್ಲೂ ಶಿವಲಿಂಗ ಸ್ಥಾಪಿಸಿರುವುದು ವಿಶೇಷ. ಪುರಾತತ್ವ ಶಾಸ್ತ್ರಜ್ಞರು ಹೇಳುವ ಪ್ರಕಾರ, ಇದು ವೇದ ಹಾಗೂ ಖಗೋಳ ಶಾಸ್ತ್ರ ಅಧ್ಯಯನದ ಮಹತ್ವವಾದ ಸ್ಥಳವಾಗಿತ್ತು. ಇದೇ ಸಂಸತ್ ಭವನದ ವಿನ್ಯಾಸಕ್ಕೆ ಮೂಲ ಪ್ರೇರಣೆ ಎನ್ನಲಾಗಿದೆ.

ಸಂಸತ್ ಕಟ್ಟಡದಲ್ಲಿ ಮೂರು ಅರ್ಧ ಚಂದ್ರಾಕೃತಿಯ ಕಟ್ಟಡಗಳಿದ್ದು, ಅವುಗಳು ಶಾಸನ ಸಭೆ ನಡೆಸಲು ನಿಯೋಜಿಸಲಾಗಿದೆ. ಈ ಮೂರು ಕೊಠಡಿಗಳು ಛೇಂಬರ್ ಆಫ್ ಪ್ರಿನ್ಸ್, ಕೌನ್ಸಿಲ್ ಆಫ್ ಸ್ಟೇಟ್ ಹಾಗೂ ಶಾಸನ ಸಭೆ ಎಂದು ವಿಂಗಡಿಸಲಾಗಿದೆ. ಪ್ರಸ್ತುತ ಅವು ಲೊಕಸಭೆ ಹಾಗೂ ರಾಜ್ಯಸಭೆ, ಗ್ರಂಥಾಲಯವಾಗಿ ಬಳಕೆಯಾಗುತ್ತಿದೆ. ಇದರ ಗಡಿಗೋಡೆಯೂ ಸುಂದರವೇ. ಮರಳುಗಲ್ಲಿನ ಬ್ಲಾಕ್ಸ್ ಗಳನ್ನು (ಸ್ಯಾಂಡ್‌ಸ್ಟೋನ್)ಜಾಮಿತಿಯ ವಿವಿಧಾಕಾರಗಳಲ್ಲಿ ಕೆತ್ತಿ ಬಳಸಲಾಗಿದೆ. ಇದು ಮೊಗಲ್‌ರ ಶೈಲಿಯ ಕಟಾಂಜನ ಮಾದರಿಯನ್ನು ಹೋಲುತ್ತದೆ.

ಛೇಂಬರ್ ಆಫ್ ಪ್ರಿನ್ಸ್ ಎಂಬ ವ್ಯವಸ್ಥೆ ಸ್ಥಾಪನೆಯಾಗಿದ್ದು 1920 ರಲ್ಲಿ. ಇಲ್ಲಿ ಭಾರತದ ರಾಜರುಗಳು ಬ್ರಿಟಿಷ್ ಸರಕಾರಗಳೊಂದಿಗೆ ತಮ್ಮ ರಾಜ್ಯಗಳ ಬೇಕು-ಬೇಡಗಳನ್ನು ಚರ್ಚಿಸಲು ಅವಕಾಶ ಕಲ್ಪಿಸಲಾಗುತ್ತಿತ್ತು. ಈ ವ್ಯವಸ್ಥೆ ಬ್ರಿಟಿಷರ ಆಡಳಿತ ಕೊನೆಗೊಳ್ಳುವವರೆಗೂ ಮುಂದುವರಿದಿತ್ತು. ಅದರ ಮೊದಲ ಸಭೆ ಸೇರಿದ್ದು 1921 ರಲ್ಲಿ.

ಇದೆಲ್ಲದರ ಮಧ್ಯೆ ಸಂಸತ್ತಿನ ಕಟ್ಟಡದಲ್ಲಿರುವ ಸೆಂಟ್ರಲ್ ಹಾಲ್‌ನ ಕಥೆ ಕೇಳಬೇಕು…ಅದೇ ಎಲ್ಲದರ ಜೀವಂತಿಕೆ !

ನಾವು ಕಂಡಿರುವುದು ಅರ್ಧ ಸಂಸತ್ತನ್ನು !

ನಾವು ಚಿತ್ರದಲ್ಲಿ ಕಂಡಿರುವುದೂ ಅರ್ಧ ಸಂಸತ್ತನ್ನ. ಅಂದರೆ ಮಾಧ್ಯಮಗಳಾಗಲೀ, ಟಿ. ವಿ. ವಾರ್ತೆಯಲ್ಲಾಗಲೀ ಎಲ್ಲ ಕಡೆಯೂ ಅರ್ಧ ಚಂದ್ರಾಕೃತಿಯ ಸಂಸತ್ತಿನ ಪ್ರತಿಕೃತಿಯನ್ನೇ ತೋರಿಸುತ್ತಾರೆ. ಅಷ್ಟರಲ್ಲೇ ಮನೆಸೆಳೆಯುವ ಸಂಸತ್ತು ಎರಡು ಕಾರಣಕ್ಕೆ ಗಮನಾರ್ಹ. ಒಂದು ಅಧಿಕಾರ ಕೇಂದ್ರ, ಮತ್ತೊಂದು ಇಡೀ ದೇಶಕ್ಕೆ ಆಡಳಿತದ ಬೆಳಕು ನೀಡುತ್ತಿರುವ ದೊಡ್ಡ ದೀಪಸ್ತಂಭ.
ಈ ಕಟ್ಟಡಕ್ಕೆ 72 ವರ್ಷ. 57 ವರ್ಷಗಳ ಕಾಲ ನಮ್ಮ ನೆಲೆಯಾಗಿದ್ದರೆ, ಉಳಿದಷ್ಟು ವರ್ಷ ಬ್ರಿಟಿಷರ ಆಡಳಿತ ಬಿಂದುವಾಗಿತ್ತು.parli

ಮಾಂಟೆಗ್ ಮತ್ತು ಚೆಮ್‌ಪೋರ್ಡ್ ಅವರ ಸುಧಾರಣಾ ವರದಿಗಳು ಬಾರದಿದ್ದರೆ ಇಂತದೊಂದು ವ್ಯವಸ್ಥೆಯೂ ಬರುತ್ತಿರಲಿಲ್ಲ, ಕಟ್ಟಡವೂ ಏಳುತ್ತಿರಲಿಲ್ಲ. ಬ್ರಿಟಿಷ್ ಅಧಿಕಾರಿಗಳಾದ ಇವರ ವರದಿ ನಮ್ಮೊಳಗೆ ಒಂದು ಹೊಸ ವ್ಯವಸ್ಥೆಯನ್ನು ಹುಟ್ಟುಹಾಕಿತು. ಬ್ರಿಟಿಷ್ ಸರಕಾರ, 1909 ರಲ್ಲಿ ಭಾರತೀಯರಿಗೆ ಅಂದರೆ ಭಾರತೀಯ ನಾಯಕರಿಗೆ ಕೊಟ್ಟ ಭರವಸೆಯೆಂದರೆ ಪ್ರತಿ ಹತ್ತು ವರ್ಷಗಳಿಗೊಮ್ಮೆ ಹೊಸ ಸಾಂವಿಧಾನಿಕ ಸುಧಾರಣೆಗಳನ್ನು ಕೈಗೊಳ್ಳಲಾಗುವುದು. ಅದು ಭಾರತದಲ್ಲಿ ಸ್ವಾತಂತ್ರ್ಯ ಹಾಗೂ ನಮ್ಮನ್ನು ನಾವು ಆಳಿಕೊಳ್ಳುವ ಪದ್ಧತಿಯನ್ನು ಪೋಷಿಸುವ ನೆಲೆಯಾಗಬೇಕೆಂಬ ಉದ್ದೇಶವಿತ್ತು.

ಈ ಹಿನ್ನೆಲೆಯಲ್ಲಿ 1919 ರಲ್ಲಿ ಮಾಂಟೆಗ್-ಚೆಮ್‌ಫೋರ್ಡ್ ಸುಧಾರಣಾ ವರದಿ ಕೊಟ್ಟರು. ಅದರ ಪ್ರಕಾರ ಭಾರತದಲ್ಲಿ ದ್ವಿಪ್ರಭುತ್ವ ಆಡಳಿತ ಜಾರಿ, ಅದಕ್ಕೆ ಸೂಕ್ತವಾದ ಮೇಲ್ಮನೆ, ಕೆಳಮನೆ ವ್ಯವಸ್ಥೆ, ಮತ ನೀಡುವ ಅಧಿಕಾರ- ಎಲ್ಲವೂ ವಿವರಿಸಿತು. ಅದಕ್ಕಿಂತ ಮೊದಲು ಬರಿಯ ಆಡಳಿತಕ್ಕೆ ಸರ್ಕ್ಯುಲರ್ ಹೌಸ್ ಅನ್ನು ನಿರ್ಮಿಸಬೇಕೆಂದು ತೀರ್ಮಾನಿಸಲಾಗಿತ್ತು. ಆದರೆ ಆಧುನಿಕ ಪ್ರಜಾತಂತ್ರ ವ್ಯವಸ್ಥೆಯ ರೀತಿ ನೀತಿ ಇದ್ದ ವರದಿ ಆಧರಿಸಿ ಇಡೀ ಲೆಕ್ಕಾಚಾರವೇ ಬದಲಾಯಿತು. ಸರ್ಕ್ಯುಲರ್ ಹೌಸ್ ಬದಲು ವಿನ್ಯಾಸವೇ ಬದಲಾಯಿತು. ಅದಕ್ಕೂ ಒಬ್ಬ ಅಧಿಕಾರಿಯ ದೂರದೃಷ್ಟಿಯೂ ಕಾರಣ.

ವರದಿಯ ಪ್ರಕಾರ ಮೇಲ್ಮನೆಗೆ 60 ಮಂದಿ ಸದಸ್ಯರು, ಕೆಳಮನೆಗೆ 145 ಮಂದಿ ಸದಸ್ಯರು. ಇವರೆಲ್ಲಾ ಕುಳಿತು ಚರ್ಚಿಸಿ ತೀರ್ಮಾನಗಳನ್ನು ಕೈಗೊಳ್ಳಬೇಕಾದರೆ ಪ್ರತ್ಯೇಕ ವ್ಯವಸ್ಥೆ ಅನಿವಾರ‍್ಯವಾಯಿತು. ಬ್ರಿಟಿಷ್ ವಾಸ್ತುಶಿಲ್ಪಿಗಳಾದ ಹರ್ಬರ್ಟ್ ಬೇಕರ್ ಎಂಬಾತ ಇದರ ಮೊದಲ ವಿನ್ಯಾಸ ರೂಪಿಸಿದ. ವಾಸ್ತವವಾಗಿ ಈ ಭವನ ಸಂಕೀರ್ಣ ಇವನದ್ದೇ ಕನಸಿನ ಕೂಸು. ನಂತರ ಇವನ ಲೆಕ್ಕಾಚಾರಕ್ಕೆ ತನ್ನದನ್ನೂ ಸೇರಿಸಿದವನು ಎಡ್ವರ್ಡ್ ಲೂಟೆನ್ಸ್. ಇವರಿಬ್ಬರೇ ದಿಲ್ಲಿಗೆ ಬಂದು ಇದರ ನಿರ್ಮಾಣ ಉಸ್ತುವಾರಿ ನೋಡಿಕೊಂಡರು. ಕನಸು ಸಾಕಾರಗೊಳ್ಳುವಂತೆ ಗಮನಹರಿಸಿದರು. ಆದರೂ ನಂತರ ವಿನ್ಯಾಸದ ಬಗ್ಗೆ ಕೆಲವೊಂದು ಟೀಕೆ ಕೇಳಿಬಂತು. ಅದು ಇದ್ದದ್ದೇ, ಯಾಕೆಂದರೆ ನಮ್ಮದು ಪ್ರಜಾತಂತ್ರವಲ್ಲವೇ?

1921 ರ ಫೆಬ್ರವರಿ 12 ರಂದು ಇದರ ಶಂಕುಸ್ಥಾಪನೆ ನೆರವೇರಿತು. ನಿರಂತರ ಆರು ವರ್ಷಗಳ ಪ್ರಯತ್ನದಿಂದ ರೂಪುಗೊಂಡ ಕಟ್ಟಡ ಭಾರತಕ್ಕೆ ಸಮರ್ಪಿತವಾಗಿದ್ದು 1927 ರ ಜನವರಿ 18 ರಂದು. ಇದನ್ನು ಉದ್ಘಾಟಿಸಿದ್ದು ಭಾರತೀಯ ಗವರ್ನರ್ ಜನರಲ್ ಲಾರ್ಡ್ ಇರ್ವಿನ್. ಇಂಥ ಅದ್ಭುತವಾದ ಕಟ್ಟಡಕ್ಕೆ ವೆಚ್ಚವಾದದ್ದು 83 ಲಕ್ಷ ರೂ. ಗಳು ಮಾತ್ರ.

ವೆಚ್ಚವಾದದ್ದು ಇರಲಿ, ಮಾಂಟೆಗ್ ನೀಡಿದ ಸುಧಾರಣಾ ವರದಿ ಪ್ರಕಾರ 1919 ರಲ್ಲಿ ಮತ ಚಲಾಯಿಸುವ ಅಧಿಕಾರ ನಮ್ಮಲ್ಲಿ ಎಷ್ಟು ಮಂದಿಗೆ ಕೊಟ್ಟಿದ್ದರು ಗೊತ್ತೇ ? ಕೇವಲ 8.6 ದಶಲಕ್ಷ ಮಂದಿಗೆ ಮಾತ್ರ. ಈಗ ನಮ್ಮ ಜನಸಂಖ್ಯೆ ಲೆಕ್ಕ ಹಾಕಿ..ನೂರು ಕೋಟಿ !

ಇಂಗ್ಲಿಷ್ ಬಾರದ್ದರಿಂದಲೇ ಪ್ರಧಾನ ಮಂತ್ರಿ ಹುಟ್ಟಿಕೊಂಡ !

ಸಂಸತ್ತಿನ ಮಾಲಿಕೆಯ ಎರಡನೇ ಲೇಖನವಿದು. ಓದಿ ಅಭಿಪ್ರಾಯ ತಿಳಿಸಿ.

ಹೌದು, ಎಷ್ಟೋ ಬಾರಿ ಒಂದು ವ್ಯವಸ್ಥೆಯ ಹಿಂದಿನ ಹಿನ್ನೆಲೆಯ ಗೊತ್ತಾಗದ ಹೊರತು ಅದು ಅಚ್ಚರಿ ಎನಿಸುವುದಿಲ್ಲ.

ವೇದಗಳ ಕಾಲದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಇದ್ದರೂ ನಮಗೆ ಕಣ್ಣಿಗೆ ಕಾಣುತ್ತಿದ್ದ ಮಾದರಿ ಬ್ರಿಟನ್ ನದ್ದು. ಅಲ್ಲಿ ರಾಜ ಆಡಳಿತ. ಈ ಮಧ್ಯೆ ಪ್ರಜಾಪ್ರಭುತ್ವ ಅಂದರೆ ಪ್ರಧಾನಮಂತ್ರಿ ವ್ಯವಸ್ಥೆ ಯಾಕೆ ಬಂದಿತೆಂದರೆ ಬ್ರಿಟನ್‌ನ ರಾಜ ಮೊದಲ ಜಾರ್ಜ್‌ಗೆ (1721-1772)ಇಂಗ್ಲಿಷ್ ಬರುತ್ತಿರಲಿಲ್ಲ. ಆಡಳಿತ ಮಾಡುವುದು ಹೇಗೆ ?

ಹಾಗಾಗಿ ರಾಜ, ತನ್ನ ಆಡಳಿತದಲ್ಲಿ ನೇಮಿಸಿಕೊಂಡಿದ್ದ ಮಂತ್ರಿಗಳಲ್ಲಿ ಹೆಚ್ಚು ಬುದ್ಧಿವಂತ, ಹೆಚ್ಚು ನಂಬಿಕಸ್ಥನಿಗೆ ‘ಪ್ರಧಾನ’ ಎಂಬ ಪಟ್ಟ ಕಟ್ಟಿದ. ಇದರರ್ಥ ಆ ಮಂತ್ರಿ ಪ್ರಧಾನ ಮಂತ್ರಿ. ಉಳಿದವರೆಲ್ಲರೂ ಅವನೊಂದಿಗಿದ್ದರು. ಅದುವೇ ಮಂತ್ರಿಮಂಡಲ. ಆ ಮೂಲಕ ಆಡಳಿತ ನಡೆಸಲು ಶುರು ಮಾಡಿದ ರಾಜ. ಅದೇ ಪ್ರಧಾನಮಂತ್ರಿ ಮೂಲಕ ರಾಜ್ಯ ನಡೆಸುವ ಕಲ್ಪನೆಗೆ ಮೂಲ ಎಂಬುದು ಲಭ್ಯ ಮಾಹಿತಿ. ಆದರೆ ಹೀಗೆ ಸಂಸತ್ತಿನ ಮಾದರಿಗೆ ಇನ್ನೂ ಹಿಂದಿನ ಇತಿಹಾಸವಿದೆ. ಬುದ್ಧನ ಕಾಲದಿಂದಲೂ ನಡೆಯುತ್ತಿದ್ದ ಸಂಘ ಅಂಥದೊಂದು ಉದಾಹರಣೆ. ನಂತರ ಬುದ್ಧನ ಅನುಯಾಯಿಗಳಾದ ಅಶೋಕ ಸೇರಿದಂತೆ ಹಲವು ರಾಜರು ಇಂಥದೊಂದು ಪದ್ಧತಿಯನ್ನು ಜಾರಿಯಲ್ಲಿಟ್ಟಿದ್ದರು.

ಹೀಗೆ ತಲೆ ಎತ್ತಿದ ವ್ಯವಸ್ಥೆ ಆರಂಭದಲ್ಲಿ ರಾಜ ನಿರ್ದೇಶಿತವಾಗಿತ್ತಾದರೂ, ಕ್ರಮೇಣ ಸರಕಾರದ ಮೇಲೆ (ರಾಜರ ಆಡಳಿತ) ಸಂಸತ್ತಿನ ಅಂದರೆ ಮಂತ್ರಿ ಮಂಡಲದ ಹಿಡಿತ ಹೆಚ್ಚುತ್ತಾ ಹೋಯಿತು. ಅದರ ಪರಿಣಾಮ, ಪ್ರಜಾಪ್ರಭುತ್ವೀಕರಣ. ಒಂದು ಹಂತದಲ್ಲಿ ರಾಜಾ, ಪ್ರಧಾನಮಂತ್ರಿಯನ್ನು ಕರೆದು ಸರಕಾರ ರಚಿಸುವ ಅವಕಾಶ ನೀಡುವ ಮಟ್ಟಿಗೆ ತಲುಪಿತು. ಈಗಿನ ರಾಷ್ಟ್ರಪತಿಗಳು ಪಕ್ಷಗಳಿಗೆ ಸರಕಾರ ರಚಿಸಲು ಅವಕಾಶ ನೀಡಿದಂತೆಯೇ.

1832 ರಲ್ಲಿ ಜಾರಿಗೆ ಬಂದ ರಾಜಕೀಯ ವ್ಯವಸ್ಥೆಯ ಸುಧಾರಣಾ ಕಾಯ್ದೆ, ಸಂಸತ್ತಿನ ಸಾರ್ವಭೌಮತ್ವವನ್ನು ಎತ್ತಿ ಹಿಡಿಯಿತು. ಆಗ ಪ್ರಧಾನಮಂತ್ರಿ ಮತ್ತು ಮಂತ್ರಿಮಂಡಲವನ್ನು ಸಂಸತ್ತೇ ನಿರ್ಧರಿಸುವಂತಾಯಿತು. ಹೀಗಿದ್ದರೂ ಸಂಸತ್ತು-ಚರ್ಚೆಯ ವೇದಿಕೆ ಎನ್ನುವ ರೀತಿಯಲ್ಲಿ ಮೂರ್ತ ರೂಪಕ್ಕೆ ಬಂದದ್ದು 1707 ರಲ್ಲಿ. ಬ್ರಿಟನ್‌ನ ಮೊದಲ ಸಭೆ ನಡೆದದ್ದು ಆಗಲೇ.

ಬ್ರಿಟನ್ ರೂಪಿತ ವೆಸ್ಟ್‌ಮಿನಿಸ್ಟರ್ ಪದ್ಧತಿಯನ್ನೇ ಬಹಳಷ್ಟು ರಾಷ್ಟ್ರಗಳು ಅಳವಡಿಸಿಕೊಂಡಿದ್ದು, ಭಾಗಶಃ ನಾವೂ ಅದನ್ನೇ ಆಧರಿಸಿ ನಮ್ಮ ಸಂಸದೀಯ ವ್ಯವಸ್ಥೆಯನ್ನು ರೂಪಿಸಿಕೊಂಡಿದ್ದೇವೆ. ಇದರಡಿ ನಡೆಯುವ ಆಡಳಿತವೆಲ್ಲವೂ ರಾಷ್ಟ್ರದ, ರಾಜ್ಯದ ಮುಖ್ಯಸ್ಥನ ಹೆಸರಿನಲ್ಲಿ. ಆ ಕಾರ್ಯಗಳನ್ನು ಅನುಷ್ಠಾನಿಸುವವರು ಮಾತ್ರ ಶಾಸಕಾಂಗದವರು. ನಡೆಯುವುದೆಲ್ಲವೂ ಕಾರ‍್ಯಾಂಗದ ಹೆಸರಿನಲ್ಲಿ. ಶಾಸಕಾಂಗದ ಮುಖ್ಯಸ್ಥನಾಗಿ ಪ್ರಧಾನ ಮಂತ್ರಿ, ಮುಖ್ಯಮಂತ್ರಿ ಕಾರ‍್ಯ ನಿರ್ವಹಿಸಿದರೆ, ಕಾರ‍್ಯಾಂಗದ ಮುಖ್ಯಸ್ಥನಾಗಿ ರಾಷ್ಟ್ರಪತಿ, ರಾಜ್ಯಪಾಲರ ನೇತೃತ್ವ. ಹಾಗಾಗಿಯೇ ನಮ್ಮಲ್ಲಿ ಹೊರಬೀಳುವ ಪ್ರತಿ ಆದೇಶಗಳಿಗೂ ರಾಷ್ಟ್ರಪತಿಗಳ, ರಾಜ್ಯಪಾಲರ ಸಹಿ ಇರಬೇಕು.

ಹೀಗೆ ಜಾರಿಗೆ ಬಂದ ಸಂಸದೀಯ ವ್ಯವಸ್ಥೆಯನ್ನು ಅನುಸರಿಸುತ್ತಿರುವ ಬಹುದೊಡ್ಡ ದೇಶ ನಮ್ಮದು. ಆದ ಕಾರಣ ಜಗತ್ತಿನ ಬಹುದೊಡ್ಡ ಪ್ರಜಾಪ್ರಭುತ್ವ ಭಾರತದ್ದು ಎಂಬ ಅಭಿದಾನವಿದೆ. ಹೀಗೆ ಪಾಶ್ಚಾತ್ಯ ಮತ್ತು ವೇದಗಳ ಕಲ್ಪನೆಯಿಂದ ಒಡಮೂಡಿದ ನಮ್ಮ ವ್ಯವಸ್ಥೆ ಇಂದು ಸಂಸತ್ತಾಗಿದೆ.
ಅದಕ್ಕೆ ಎರಡು ಮನೆಗಳು. ಒಂದು ಕೆಳಮನೆ ಮತ್ತೊಂದು ಮೇಲ್ಮನೆ. ಲೋಕಸಭೆಗೆ ಜನರಿಂದ ನೇರವಾಗಿ ಆಯ್ಕೆಯಾದವರೇ ಸದಸ್ಯರು. ರಾಜ್ಯಸಭೆಗೆ ಜನಪ್ರತಿನಿಧಿಗಳಿಂದ ಹಾಗೂ ಸರಕಾರದ ನಾಮನಿರ್ದೇಶನದಿಂದ ನೇಮಿತಗೊಂಡವರು ಸದಸ್ಯರು. ಕೆಳಮನೆಯ ಸದಸ್ಯರಿಗೆ ಆರ್ಥಿಕ ಅಧಿಕಾರಿಗಳುಂಟು, ಮೇಲ್ಮನೆಯವರಿಗೆ ಆ ಅಧಿಕಾರವಿಲ್ಲ. ಹಾಗಾಗಿ ಮೇಲ್ಮನೆಯನ್ನು ಹಿರಿಯರ ಸಭೆ, ತಜ್ಞರ ಸಭೆ ಎನ್ನುವುದೂ ಉಂಟು.

ಇದೆಲ್ಲವನ್ನೂ ಒಳಗೊಂಡ ಸಂಸತ್ತಿನ ಕಟ್ಟಡಕ್ಕೂ ದೊಡ್ಡ ಇತಿಹಾಸವಿದೆ. ಈ ಕಟ್ಟಡ ನಾವು ಕಟ್ಟಿಸಿದ್ದಲ್ಲ ; ಬ್ರಿಟಿಷರದ್ದು. ಅದು ಕಾರ್ಯಾರಂಭ ಮಾಡಿದ್ದೂ ಅವರ ಕಾಲದಲ್ಲೇ.

ನಮ್ಮ ಸಂಸತ್ತಿನ ಕಥೆ ಕೇಳಿ

ಸಂಸತ್ತಿನ ಬಗ್ಗೆ ಬರೆದ ಲೇಖನ ಮಾಲಿಕೆಯನ್ನು ಇಲ್ಲಿ ಹಾಕುತ್ತಿದ್ದೇನೆ. ಸುಮಾರು ಎಂಟು ಕಂತುಗಳ ಬರಹ ನಿರಂತರವಾಗಿ ಪ್ರಕಟವಾಗಲಿದೆ.

ಹದಿನೈದನೇ ಲೋಕಸಭೆಗೆ ನಮ್ಮ ಪ್ರತಿನಿಧಿಯಾಗಿ ಯಾರನ್ನು ಆರಿಸಿ ಕಳುಹಿಸಬೇಕು ? ಯಾರನ್ನು ಆರಿಸಿ ಕಳುಹಿಸಬಾರದು ? ಯಾರು ಆ ಸ್ಥಾನಕ್ಕ ಯೋಗ್ಯ ? ಯಾರೂ ಯೋಗ್ಯರಲ್ಲ? ಮಾಧ್ಯಮಗಳಿಂ ದ ಹಿಡಿದು ಹಲವು ಸೇವಾ ಸಂಸ್ಥೆಗಳವರೆಗೂ ಎಲ್ಲವೂ ಜನರಿಗೆ ಒಂದೇ ಹೇಳಿದ್ದು – ‘ನೀವು ಮತ ಹಾಕಿ ನಿಮ್ಮ ಜನಪ್ರತಿನಿಧಿಯನ್ನು ಆರಿಸಿ’- ಈ ಚರ್ಚೆ ಮುಗಿದು ಯುಪಿಎ ಮತ್ತೆ ಆಡಳಿತ ವಹಿಸಿಕೊಂಡಿದೆ.ಈ ಸಂದರ್ಭದಲ್ಲಿ ನಮ್ಮ ಸಂಸತ್ತಿನ ಬಗ್ಗೆ ಗಮನಿಸಿದರೆ ಹೇಗೆ ಅನಿಸಿತು ? ವಿಜಯ ಕರ್ನಾಟಕಕಕ್ಕೆ ಎಂಟು ದಿನ ನಿರಂತರವಾಗಿ ಬರೆದೆ. ಆ ಬರಹಗಳನ್ನು ಇಲ್ಲಿ ಹಾಕಿದ್ದೇನೆ.

ವಾಸ್ತವವಾಗಿ ತಮ್ಮ ಜನಪ್ರತಿನಿಧಿಗಳ ಬಗೆಗಿನ ಕಾಳಜಿ ಜನರಲ್ಲಿ ಹೆಚ್ಚೆಚ್ಚು ವ್ಯಕ್ತವಾಗುತ್ತಿದೆ. ‘ಇಂಥವರೇ ನಮ್ಮ ಪ್ರತಿನಿಧಿಗಳಾಗಬೇಕು, ನಮ್ಮನ್ನು ಪ್ರತಿನಿಧಿಸುವವರು ಹೀಗೇ ಇರಬೇಕು’ ಎಂದು ಗುಣ ವ್ಯಾಖ್ಯಾನಗಳನ್ನು ಮಾಡ ತೊಡಗಿದ್ದಾರೆ. ಅದಕ್ಕೇ ಬಹುಶಃ ರಾಜ್ಯದಲ್ಲೇ ಈ ಬಾರಿ ಮೊದಲ ಬಾರಿಗೆ ಮೂರಕ್ಕೂ ಹೆಚ್ಚು ಮಂದಿ ‘ಇವರ್ಯಾರೂ ನಮ್ಮನ್ನು ಪ್ರತಿನಿಧಿಸಲು ಅರ್ಹರಲ್ಲ’ ಎಂದು ನಕಾರಾತ್ಮಕ ಮತದಾನ ಮಾಡಿದ್ದು.

ಹೀಗೆ ನಮ್ಮನ್ನು ಆಳಿಕೊಳ್ಳಲು ನಾವೇ ಮನಸ್ಸಿನಲ್ಲಿ ನೆನೆಸಿಕೊಂಡು ರೂಪಿಸಿಕೊಂಡ ವ್ಯವಸ್ಥೆ ಪ್ರಜಾತಂತ್ರ. ಅದು ನಮಗೆ ಕಾಣುವುದಿಲ್ಲ. ಒಂದು ರೀತಿಯಲ್ಲಿ ದೇವರಿದ್ದ ಹಾಗೆ, ಅವನು ಕಾಣುವುದಿಲ್ಲ, ಕೇವಲ ಅನುಭವವಕ್ಕೆ ಮಾತ್ರ ನಿಲುಕುವವನು. ನಮ್ಮ ಪ್ರಜಾತಂತ್ರವೂ ತೋರುವುದಿಲ್ಲ ; ಅನುಭವಕ್ಕೆ ನಿಲುಕುತ್ತದೆ. ಆದರೆ ನಾವು ಅದಕ್ಕೆ ಒಂದು ಮೂರ್ತ ರೂಪ ಕೊಟ್ಟದ್ದು ಸಂಸತ್ತು ಅಥವಾ ಪಾರ್ಲಿಮೆಂಟ್ ಮೂಲಕ. ಅದಕ್ಕೆ ಜೀವ ತುಂಬುವವರು ನಾವು ಆರಿಸಿ ಕಳಿಸಿದ ಜನಪ್ರತಿನಿಧಿಗಳು. ಇಂಥ ಸಂಸತ್ತಿಗೊಂದು ಇತಿಹಾಸವಿದೆ. ಅದಕ್ಕೊಂದು ಹಿನ್ನೆಲೆಯಿದೆ. ಅದರಲ್ಲಿ ಎಂಥೆಂಥವರೆಲ್ಲಾ ಅಗಿ ಹೋಗಿದ್ದಾರೆ.

ನಮ್ಮದು ಸಂಸದೀಯ ಪ್ರಜಾಪ್ರಭುತ್ವ. ಅಂದರೆ ಸಂಸತ್ತಿಗೆ ಪರಮೋಚ್ಚ ಅಧಿಕಾರ. ರಾಷ್ಟ್ರಪತಿಗಳು ರಾಷ್ಟ್ರದ ಪ್ರಥಮ ಪ್ರಜೆಯಾದರೂ, ಆಡಳಿತ ನಡೆಸುವುದು ಸರಕಾರವೇ. ಆ ಸರಕಾರದಲ್ಲಿ ನಾವು ಅರಿಸಿ ಕಳಿಸಿದ ಸಂಸದರು (ಲೋಕಸಭೆ ಸದಸ್ಯರು) ಇರುತ್ತಾರೆ. ಅವರು ಆಯ್ಕೆ ಮಾಡಿದವ ಪ್ರಧಾನ ಮಂತ್ರಿಯಾಗಿ ಕಾರ‍್ಯ ನಿರ್ವಹಿಸುತ್ತಾನೆ. ಆ ಪ್ರಧಾನ ಮಂತ್ರಿ ತನ್ನ ಆಡಳಿತಕ್ಕೆ ಅನುಕೂಲವಾಗು ವವರನ್ನು ಸಚಿವರನ್ನಾಗಿ ನೇಮಿಸಿಕೊಳ್ಳುತ್ತಾನೆ. ಅದರಲ್ಲಿ ಕ್ಯಾಬಿನೆಟ್, ರಾಜ್ಯ ದರ್ಜೆಯ ಮಂತ್ರಿ ಸ್ಥಾನವಿದೆ. ಎಲ್ಲವೂ ನಿಜ. ಅದೂ ನಮ್ಮಲ್ಲಿ ಪಕ್ಷೀಯ ರಾಜಕಾರಣ ಇರುವುದರಿಂದ ಬಹುಮತ ಪಡೆದ ಪಕ್ಷ ತನ್ನ ನಾಯಕನನ್ನು ಆಯ್ಕೆ ಮಾಡಿ ಈ ಪ್ರಧಾನ ಮಂತ್ರಿ ಸ್ಥಾನ ನೀಡುತ್ತದೆ. ಅದೆಲ್ಲವೂ ನಾವು ನೋಡುತ್ತಿರುವಂಥದ್ದು.

ನಮ್ಮ ಸಂಸದೀಯ ವ್ಯವಸ್ಥೆ ಅಥವಾ ಸಂಸತ್ತು ವ್ಯವಸ್ಥೆಗೆ ಬ್ರಿಟನ್‌ನ ಹೌಸ್ ಆಫ್ ಲಾರ್ಡ್ಸ್ ಮತ್ತು ಹೌಸ್ ಆಫ್ ಕಾಮನ್ಸ್ ಪ್ರೇರಣೆ ಎನ್ನಲಾಗುತ್ತದೆ. ಬ್ರಿಟನ್‌ನಲ್ಲೂ ಹೌಸ್ ಆಫ್ ಕಾಮನ್ಸ್ ಎಂದರೆ ನಮ್ಮಲ್ಲಿನ ಲೋಕಸಭೆ (ಕೆಳಮನೆ) ಇದ್ದ ಹಾಗೆ. ಹೌಸ್ ಆಫ್ ಲಾರ್ಡ್ಸ್ ಎಂದರೆ ನಮ್ಮ ರಾಜ್ಯಸಭೆ (ಮೇಲ್ಮನೆ) ಇದ್ದ ಹಾಗೆ. ಎರಡನ್ನೂ ಸಮಾನವಾಗಿ ಕಂಡರೂ ಹೌಸ್ ಆಫ್ ಕಾಮನ್ಸ್ ಗೆ ಹೆಚ್ಚು ಅಧಿಕಾರ. ಅದೇ ಪರಿಸ್ಥಿತಿ ನಮ್ಮಲ್ಲೂ. ಲೋಕಸಭೆಗೆ ಹೆಚ್ಚು ಅಧಿಕಾರ.

ಆದರೆ ಇಂಥದೊಂದು ಕಲ್ಪನೆ ನಮ್ಮ ವೇದದ ಕಾಲದಲ್ಲೇ ಇತ್ತು ಎಂಬುದು ಇತಿಹಾಸಕಾರರ ವಿವರಣೆ. ಆರ‍್ಯನ್ನರ ರಾಜ್ಯಾಡಳಿತದಲ್ಲಿ ‘ಸಭೆ’ ಮತ್ತು ’ಸಮಿತಿ’ ಎಂಬವುಗಳಿದ್ದವು. ಇಲ್ಲೂ ‘ಸಭಾ’ ಎಂದರೆ ಜನರ ಪ್ರತಿನಿಧಿ. ಅಂದರೆ ರಾಜ್ಯದ ಆಡಳಿತದಲ್ಲಿ ನಿತ್ಯ ಭಾಗಿಯಾಗಿರುವವರ ಪ್ರತಿನಿಧಿಗಳಿವರು. ‘ಸಮಿತಿ’ ಎಂದರೆ ರಾಜ್ಯದ ಎಲ್ಲ ಪುರುಷ ಸದಸ್ಯರು ಪಾಲ್ಗೊಳ್ಳುವ ವ್ಯವಸ್ಥೆ. ಇದು ಸಭೆ ಸೇರುವುದೇ ಹೊಸ ರಾಜನನ್ನು ಆರಿಸಲು ಅಥವಾ ಈಗಿರುವ ರಾಜನ ಕಾರ‍್ಯನೀತಿಯನ್ನು ವಿಮರ್ಶಿಸಲು. ಈ ಎರಡೂ ವ್ಯವಸ್ಥೆ ಪ್ರಜಾಪತಿಯ ಮಕ್ಕಳು ಎಂಬ ಕಲ್ಪನೆ ಆಗಿತ್ತು.
SansadBhavan
ಪಾಶ್ಚಾತ್ಯ ಅದರಲ್ಲೂ ಬ್ರಿಟನ್‌ನ ಪ್ರಜಾಪ್ರಭುತ್ವ ಮಾದರಿಯನ್ನು ಒಪ್ಪಿಕೊಂಡ ರಾಷ್ಟ್ರಗಳು ಹಲವು. ಆ ಅರ್ಥದಲ್ಲಿ ನಮ್ಮಲ್ಲೂ ಇರುವ ‘ಪಾರ್ಲಿಮೆಂಟ್’ ಎಂಬ ಪದ ಫ್ರೆಂಚ್ ಮೂಲದ್ದು. ಆ ಭಾಷೆಯಲ್ಲಿ ಹಾಗೆಂದರೆ ‘ಮಾತನಾಡಲು ಅಥವಾ ಮಾತನಾಡುವುದು’ ಎಂದರ್ಥ. ಈಗ ಅದೊಂದು ವ್ಯವಸ್ಥೆಯಾಗಿ ಪರಿವರ್ತಿತವಾಗಿರುವುದರಿಂದ ‘ ಮಾತನಾಡುವವರ ಸಭೆ’ ಎಂದು ಅರ್ಥಾಂತರವಾಗಿದೆ. ಹಾಗಾಗಿ ಜನರ ಕಷ್ಟ ಸುಖಗಳ ಬಗ್ಗೆ ಕೈಗೊಳ್ಳಬೇಕಾದ ತೀರ್ಮಾನಗಳು, ಸಲಹೆಗಳನ್ನು ಕುರಿತು ಚರ್ಚಿಸುವ ಸಭೆಯಿದು ಎಂದು ಅರ್ಥ ತುಂಬಲಾಗಿದೆ. ನಮ್ಮನ್ನು ಪ್ರತಿನಿಧಿಸುವವರೆಲ್ಲಾ ಒಂದೆಡೆ ಸೇರಿ ಮಾತನಾಡುವ, ತಮ್ಮನ್ನು ಆರಿಸಿ ಕಳುಹಿಸಿದವರ ಧ್ವನಿಯಾಗುವ ಕ್ಷೇತ್ರ ಈ ‘ಪಾರ್ಲಿಮೆಂಟ್’. ನಮ್ಮ ಸಂಸತ್ತು.

ಹನ್ನೆರಡನೆ ಶತಮಾನದಲ್ಲಿ ಬಸವಣ್ಣನವರ ಅನುಭವ ಮಂಟಪ ‘ಸಂಸತ್ತು’ ಆಗಿತ್ತು ಎಂದು ಹೇಳಲಾಗುತ್ತಿದೆ. ಎಲ್ಲ ಸಜ್ಜನರು, ಜ್ಞಾನಿಗಳು ಇದರ ಸದಸ್ಯರಾಗಿ ಲೋಕ ಹಿತ ಚಿಂತನೆಯನ್ನು ಮಾಡುತ್ತಿದ್ದರಂತೆ. ಅದು ಅಧ್ಯಾತ್ಮದ ನೆಲೆ ಎನ್ನಬಹುದು. ಅದೇ ಅರ್ಥದಲ್ಲಿ ಈಗ ನಮ್ಮ ಸಂಸತ್ತಿನಲ್ಲಿ ಲೋಕ ಚಿಂತನೆಯನ್ನೇ ಮಾಡುತ್ತಿದ್ದಾರೆ, ಅದೂ ಈ ಲೋಕದ್ದು.

ಪ್ರತಿ ಕಲ್ಪನೆಯ ಹಿಂದೆಯೂ ಒಂದೊಂದು ಕಥೆ ಇರುತ್ತದೆ. ಇಷ್ಟಕ್ಕೂ ಬ್ರಿಟನ್‌ನಲ್ಲಿ ಇಂಥದೊಂದು ವ್ಯವಸ್ಥೆ ಯಾಕೆ ಬಂತು ಗೊತ್ತೇ ? ಆ ರಾಜನ ಭಾಷಾ ಸಮಸ್ಯೆಯಿಂದ !