ಎಜುಕೇಟೆಡ್ ಸರಕಾರ ?

ನಾವು ಎಂತಹ ಹೇಸಿಗೆ ವ್ಯವಸ್ಥೆಯಲ್ಲಿದ್ದೇವೆ ಎಂದೆನಿಸುತ್ತದೆ.

ಲೋಕಾಯುಕ್ತರ ಗಣಿ ಕುರಿತ ವರದಿಯನ್ನು ಸೋರಿಕೆ ಮಾಡಿದ ಸರಕಾರದ ಭಾಗಿದಾರರು ಬಹಳ ಹರ್ಷ ವ್ಯಕ್ತಪಡುತ್ತಿರಬಹುದು. ಮಾನ್ಯ ಮುಖ್ಯಮಂತ್ರಿ ಯಡಿಯೂರಪ್ಪನವರು ಆ ಗ್ಯಾಂಗ್ ಗೆ ಒಂದು ಒಳ್ಳೆಯ ಭಕ್ಷೀಸನ್ನೇ ಕೊಡಬಹುದು. ಗುಮ್ಮನ ಗುಸಕ್ಕನ ತರಹ ಮಾರಿಷಸ್ ನಲ್ಲಿ ಕುಳಿತಿರುವ ಸಿಎಂ ಮಹಾಶಯರಿಗೆ ಇದು ಒಳ್ಳೆಯ ಬೆಳವಣಿಗೆಯಾಗಿರಬಹುದು. ಅದಕ್ಕಿಂತಲೂ ಮತ್ತೊಂದು ಅಗ್ನಿಪರೀಕ್ಷೆಯಲ್ಲಿ ಪಾಸಾಗಿದ್ದೇನೆ ಎಂದುಕೊಂಡು ಬೀಗುತ್ತಿರಬಹುದು. ಆದರೆ, ಇಡೀ ವ್ಯವಸ್ಥೆಯ ಬಗ್ಗೆಯೇ ಬೇಸರ ಮೂಡುತ್ತದೆ. ಇದು ಸುಧಾರಿಸುವ ನೆಲೆಯಲ್ಲಿ ಇಲ್ಲವೆಂಬ ಹತಾಶೆಯೂ ಮೂಡುತ್ತದೆ.

ಮೂರು ವರ್ಷಗಳಲ್ಲಿ ನಮ್ಮ ಮಾನ್ಯ ಮುಖ್ಯಮಂತ್ರಿ ಯಡಿಯೂರಪ್ಪನವರು 30 ಕ್ಕೂ ಹೆಚ್ಚು ಬಾರಿ ಘೋಷಿಸಿದ್ದಾರೆ ರಾಜಾರೋಷವಾಗಿ, “ಭ್ರಷ್ಟರನ್ನು ಸಹಿಸುವುದಿಲ್ಲ, ನಮ್ಮ ಸರಕಾರ ಭ್ರಷ್ಟರಿಗೆ ಬೆಂಬಲ ನೀಡುವುದಿಲ್ಲ” ಇತ್ಯಾದಿ. ಅವೆಲ್ಲವೂ ಎಷ್ಟೊಂದು ಬಾಲಿಶವಾಗಿದ್ದವು ಎಂಬುದಕ್ಕೆ ಸದ್ಯದ ಘಟನೆಯೇ ನಿದರ್ಶನ.

ಪ್ರಜಾತಂತ್ರ ವ್ಯವಸ್ಥೆಯಲ್ಲಿರುವ ನಾವು ಎಷ್ಟೊಂದು ಮೂಢರಂತೆ ಈ ಜನಪ್ರತಿನಿಧಿಗಳಿಗೆ ಅಧಿಕಾರ ಕೊಟ್ಟಿದ್ದೇವೆ ಎಂದೆನಿಸುತ್ತಿದೆ. ಮುಖ್ಯಮಂತ್ರಿಯೆಂಬ ಪದಸ್ಥಾನವನ್ನು ಸ್ಥಾಪಿಸಿ, ಅವನಿಗೆ ಎಲ್ಲ ಅಧಿಕಾರ ಕೊಟ್ಟು-ಎಲ್ಲಿಯವರೆಗೆ ಎಂದರೆ ನಮ್ನನ್ನೂ ನಾಳೆ ಬೇರೆಯವರಿಗೆ ಮಾರಿಬಿಡಬಹುದು. ನಾವು ಜೀತದಾಳುಗಳಂತಿದ್ದೇವೆ ಅವನಿಗೆ-ಆಡಳಿತ ನಡೆಸಲು ಕೂರಿಸಿದ್ದೇವೆ. ಅಂತಹವನೇ ಭ್ರಷ್ಟರನ್ನು ಪೋಷಿಸಿ, ಒಳ್ಳೆಯದನ್ನು ನಿರಾಕರಿಸುವ ಸ್ಥಿತಿಗೆ ಮುಟ್ಟಿದೆ ಎಂದರೆ ಏನು ಹೇಳಬೇಕೆಂದೇ ಅರ್ಥವಾಗುತ್ತಿಲ್ಲ.

ಗುರುವಾರ ವಾಹಿನಿಯೊಂದರಲ್ಲಿ ಲೋಕಾಯುಕ್ತರ ವರದಿ ಸೋರಿಕೆ ಕುರಿತ ಬೆಳವಣಿಗೆಯನ್ನು ವ್ಯಾಖ್ಯಾನಿಸುತ್ತಿದ್ದ ಪತ್ರಕರ್ತರೊಬ್ಬರು,”ಒಬ್ಬ ಪ್ರಾಮಾಣಿಕ ವ್ಯಕ್ತಿಯನ್ನು ಎಲ್ಲ ಭ್ರಷ್ಟ ಅಧಿಕಾರಿಗಳು, ಸರಕಾರ ಎಲ್ಲವೂ ಸೇರಿ ಹೇಗೆ ಸುತ್ತುವರಿದು ಜರ್ಝರಿತಗೊಳಿಸುತ್ತವೆ’. ಈ ಮಾತು ಅಕ್ಷರಶಃ ನಿಜ. ಸಂತೋಷ್ ಹೆಗ್ಡೆಯವರು ರಾಜಕಾರಣಿಗಳಿಗೆ ಮಗ್ಗುಲ ಮುಳ್ಳಾಗಿದ್ದು ನಿಜ. ಅದಕ್ಕಾಗಿ ಈ ವರಸೆ ಆರಂಭಿಸಿದರು. ಎಲ್ಲ ರಾಜಕಾರಣಿಗಳೂ ಬಾಯಿಗೆ ಬಂದಂತೆ ಮಾತನಾಡಿದರು. ಬಿ. ಕೆ. ಹರಿಪ್ರಸಾದ್ ರಂತಹವರೂ ನಾಚಿಕೆ ಬಿಟ್ಟು ಮಾತನಾಡಿದರು. ಎಲ್ಲರದ್ದೂ ಒಂದೇ ಉದ್ದೇಶ-ಹತಾಶೆಗೊಂಡು ಪದವಿ ಬಿಟ್ಟರೆ ನಾವೂ ಕ್ಷೇಮ-ನೀವೂ ಕ್ಷೇಮವೆಂಬ ಲೆಕ್ಕಾಚಾರ. ಅದೇ ಈಗ ಆಗಿರುವುದು.

ಅಣ್ಣಾ ಹಜಾರೆಯಂತಹವರು ಕಠಿಣ ಲೋಕಪಾಲ ಕಾಯಿದೆಗೆ ಆಗ್ರಹಿಸಿ ನಿರಶನ ನಡೆಸಿದಾಗಲೂ ಕೆಲವರು ಬಾಯಿಗೆ ಬಂದಂತೆ ಮಾತನಾಡಿದರು. ಅದೂ ತಂತ್ರವೇ. ಉದ್ದೇಶಿತ ಮಾರ್ಗದಿಂದ ದೂರಸರಿಸುವುದಷ್ಟೇ ಏಕೈಕ ಉದ್ದೇಶ. ಅದಕ್ಕೆ ಆರೋಪಿ ಸ್ಥಾನದಲ್ಲಿ ನಿಲ್ಲಲು ಅರ್ಹರಾದವರೂ ಪ್ರಾಮಾಣಿಕ ವ್ಯಕ್ತಿಗಳ ಬಗ್ಗೆ ಟೀಕೆ ಮಾಡುತ್ತಾರೆ. ಅವರಿಗೆ ಜನರು ಏನೆಂದುಕೊಳ್ಳುತ್ತಾರೋ ಎನ್ನುವುದಕ್ಕಿಂತಲೂ ತಮ್ಮ ಕೆಲಸ ಸಾಧಿಸಿದರೆ ಸಾಕು. ಹಾಗಾಗಿ ಜನರ ಟೀಕೆಗಳಿಗೆ, ವ್ಯಂಗ್ಯಗಳಿಗೆ ಬಗ್ಗುವುದಿಲ್ಲ.

“ವಿಶ್ವಾಸಘಾತುಕತನಕ್ಕೆ ಹಲವರು ಅಪ್ಪಂದಿರು, ವಿಶ್ವಾಸಕ್ಕೆ ಒಂದೇ ಅಮ್ಮ’. ಬಹಳಷ್ಟು ಮಂದಿಗೆ ವಿಶ್ವಾಸಘಾತುಕತನದ ಅಪ್ಪಂದರಿ ಮಗನೆಂದೇ ಹೇಳಿಕೊಳ್ಳಲು ಚಟ, ಹಾಗಾಗಿ ಇಂದಿನ ಸಂದರ್ಭದಲ್ಲಿ ವಿಶ್ವಾಸ ಅನಾಥ. ಒಂದು ಎಜುಕೇಟೆಡ್ ಸರಕಾರ ಮಾಡುವ ರೀತಿಯಾ ಇದು ? ಎಂಬುದು ನನ್ನ ಪ್ರಶ್ನೆ.

ನೈತಿಕ ಎಚ್ಚರ ಪ್ರಶಸ್ತಿ ನೀಡುವವರಿಗೂ ಇರಬೇಕು !

ಇದು ಸಂಪೂರ್ಣ ನನ್ನ ವೈಯಕ್ತಿಕ ಅಭಿಪ್ರಾಯ ಮತ್ತು ನಿಲುವು. ಇದನ್ನು ಸಾಂಸ್ಥಿಕ ನೆಲೆಯಲ್ಲಿ ನೋಡಬೇಕಿಲ್ಲ ಮತ್ತು ಅರ್ಥೈಸಬೇಕೂ ಇಲ್ಲ.

ಹಿಂದೆಲ್ಲಾ ಗೌರವ, ಪ್ರಶಸ್ತಿ ಹೇಗೆ ಬರುತ್ತೆ ಎಂಬುದು ಮುಖ್ಯವಾಗಿತ್ತು. ಅದೇ ದೊಡ್ಡ ಸಂಗತಿಯೂ ಆಗಿತ್ತು. ಈಗೆಲ್ಲಾ ಗೌರವ, ಪ್ರಶಸ್ತಿ ಯಾರು ಕೊಡುತ್ತಾರೆ ಎನ್ನುವುದಕ್ಕಿಂತಲೂ ಯಾರೊಂದಿಗೆ ನಾವು ಪಡೆಯುತ್ತೇವೆ ಎನ್ನವುದೂ ಬಹಳ ಮುಖ್ಯವಾಗಿದೆ. ಕನ್ನಡ ಸಾಹಿತ್ಯದಲ್ಲೋ, ಸಂಗೀತದಲ್ಲೋ, ಸಂಸ್ಕೃತಿ ಕ್ಷೇತ್ರದಲ್ಲೋ, ವಿಜ್ಞಾನದಲ್ಲೋ, ತಂತ್ರಜ್ಞಾನದಲ್ಲೋ ಸಾಕಷ್ಟು ಕೆಲಸ ಮಾಡಿ ಕನ್ನಡದ ಕೀರ್ತಿ ಪತಾಕೆ ಹಾರಿಸಿದ ಮಂದಿಯ ಸಾಧನೆಯನ್ನೂ, ಒಂದಿಷ್ಟು ವಾಹಿನಿಗಳಲ್ಲಿ ಹರಟೆ ಹೊಡೆದುಕೊಂಡು, ಜೋಕು ಕಟ್ ಮಾಡಿಕೊಂಡು ಚಪ್ಪಾಳೆ ಗಿಟ್ಟಿಸುವ ಮಂದಿಗಳ ಸಾಧನೆಯನ್ನೂ ಒಟ್ಟಿಗೆ ತೂಗು ಹಾಕುವುದಿದೆಯಲ್ಲ ಅದೇ ದೊಡ್ಡ ಸರಕಾರದ ಅವಿವೇಕದ ನಿರ್ಧಾರ.

ಇಡೀ ಪ್ರಶಸ್ತಿಯ ಪಟ್ಟಿಯನ್ನು ಕುರಿತು ಹೇಳುವುದಾದರೆ ಅದೇ ಅವಘಡಗಳು. ಅಧಿಕಾರಿಗಳು ತಮ್ಮನ್ನು ಓಲೈಸುವವರ ಒಂದು ಪಟ್ಟಿಯನ್ನು ಅಖೈರುಗೊಳಿಸಿದ್ದರೆ, ಅದಕ್ಕೆ ಉಳಿದ ಮಂತ್ರಿ ಮಹೋದಯರು ತಮ್ಮ ಹೆಸರನ್ನು ಸೇರಿಸಿದ್ದಾರೆ. ಪ್ರಶಸ್ತಿಯನ್ನೇ ದಂಧೆಯನ್ನಾಗಿಸಿಕೊಂಡಿರುವ ಕೆಲವು ಖಾಸಗಿ ಸಂಸ್ಥೆಗಳೂ ಉದ್ದೇಶಪೂರ್ವಕವಾಗಿ ಇಂಥದೆ ತಪ್ಪನ್ನು ಎಸಗುತ್ತವೆ. ಅದು ಸಾರ್ವಜನಿಕರನ್ನು, ಮಾಧ್ಯಮಗಳನ್ನು ವಂಚಿಸುವ ತಂತ್ರ ಅಂದರೆ ಅವರ/ಅವುಗಳ ಕಣ್ಣಿಗೆ ಮಣ್ಣೆರಚುವ ತಂತ್ರ. ಒಂದಿಷ್ಟು ಮಂದಿ ಹೇಳ ಹೆಸರಿಲ್ಲದ, ಸಾಧಕರೇ ಅಲ್ಲದವರಿಂದ ಅರ್ಜಿ ಪಡೆದು, ಹಣಕ್ಕಾಗಿ ಪ್ರಶಸ್ತಿ ಮಾರಿ, ಕೆಲವು ಮಹೋನ್ನತ ಸಾಧಕರ ಹೆಸರನ್ನು ಆ ಪಟ್ಟಿಗೆ ಸೇರಿಸಿ ಪ್ರಶಸ್ತಿ ಪ್ರದಾನ ಮಾಡುವ ದಂಧೆ ರಾಜ್ಯದಲ್ಲಿ ಹೊಸದೇನೂ ಅಲ್ಲ. ಜನರೂ ಮತ್ತು ಮಾಧ್ಯಮಗಳೂ “ಅಂಥ ಸಾಧಕರಿಗೆ ಕೊಡಲೇ ಬೇಕಿತ್ತು’ ಎಂದು ಹೇಳಿ ಉಳಿದವರನ್ನೆಲ್ಲಾ ಸಹಿಸಿಕೊಂಡು ಕಾರ್ಯಕ್ರಮಕ್ಕೂ ಬರುತ್ತಾರೆ, ಪ್ರಚಾರವನ್ನೂ ಕೊಡುತ್ತಾರೆ. ಇದು ಉದ್ದೇಶಪೂರ್ವಕವಾಗಿ ನಡೆಯುವ ಪ್ರಯತ್ನ. ನಿಜವಾದ ಅರ್ಥದಲ್ಲಿ ವಂಚನೆ.

ಹೀಗೆ ಮಾಧ್ಯಮಗಳನ್ನು ಸಂತೃಪ್ತಿಗೊಳಿಸುವಲ್ಲಿ ಪ್ರಯತ್ನಿಸಿದ ಸರಕಾರವೆಂದರೆ ಶ್ರೀಮಾನ್ ಯಡಿಯೂರಪ್ಪನವರದೇ ಮೊದಲಿನದು. ಒಂದು ರೀತಿಯಲ್ಲಿ ಬುಕ್ ಮಾಡಿಕೊಳ್ಳುವಂಥ ಪ್ರಯತ್ನ ಎಷ್ಟೊಂದು ಢಾಳಾಗಿದೆಯೆಂದರೆ ನಿಜಕ್ಕೂ ಅಚ್ಚರಿಯೂ ಆಗುತ್ತದೆ, ನಾಚಿಕೆಯೂ ಆಗುತ್ತದೆ. ಈ ಹಿಂದೆಯೂ ಕೆಲವು ಮುಖ್ಯಮಂತ್ರಿಗಳು “ಮೀಡಿಯಾ ಮ್ಯಾನೇಜ್” ಮಾಡಲು ಪ್ರಯತ್ನಿಸಿದ್ದಾರೆ. ಆದರೆ ಹೀಗೆ ಸಾರಾಸಗಟಲ್ಲ, ಢಾಳು ಢಾಳಾಗಿಯೂ ಅಲ್ಲ. ಏನಿದ್ದರೂ ಸೊಫಿಸ್ಟಿಕೇಟೆಡ್ ಆಗಿ ಮತ್ತು ಆಯ್ಕೆ ಮಂದಿಯನ್ನಷ್ಟೇ ಮ್ಯಾನೇಜ್ ಮಾಡುತ್ತಿದ್ದರು. ನಮ್ಮ ಶ್ರೀಮಾನ್ ಯಡಿಯೂರಪ್ಪನವರದ್ದು ಏನಿದ್ದರೂ ಹೋಲ್ ಸೇಲ್ ವ್ಯಾಪಾರ. ಅದಕ್ಕೇ ಇಂಥದೊಂದು ಐಡಿಯಾವನ್ನು ಪ್ರಯೋಗಿಸಿದ್ದಾರೆ. ಯಾವ ಮಹಾನುಭಾವ ಈ ಐಡಿಯಾ ಕೊಟ್ಟರೋ, ಅವರನ್ನು ಅಭಿನಂದಿಸಲೇಬೇಕು. ಅಂಥವರ ಐಡಿಯಾವನ್ನು ಮತ್ತಷ್ಟು ಕೇಳಿದರೆ ಯಡಿಯೂರಪ್ಪನವರ ಸರಕಾರ ಜನರ ಮುಂದೆ ಮತ್ತಷ್ಟು ಬಾರಿ ಹರಾಜು ಆಗಲು ಏನೂ ಅಡ್ಡಿಯಿಲ್ಲ.

ರಾಜ್ಯೋತ್ಸವ ಪ್ರಶಸ್ತಿ ಪಟ್ಟಿಯಲ್ಲಿ ಮಾಧ್ಯಮದವರಿಗೆ ಅತಿ ಹೆಚ್ಚು ಸ್ಥಾನ ಸಿಕ್ಕಿದೆ. ಇದುವರೆಗೆ ಸಾಹಿತ್ಯ ಮತ್ತು ಸಂಗೀತ ಕ್ಷೇತ್ರದ ಸಾಧಕರಿಗೆ ಅತಿ ಹೆಚ್ಚು ಸಿಗುತ್ತಿತ್ತು. ಪ್ರಶಸ್ತಿಯ ಇತಿಹಾಸದಲ್ಲೇ ಮೊದಲ ಬಾರಿಗೆ ಅತಿ ಹೆಚ್ಚು ಎಂದರೆ 15 ಮಂದಿ ಮಾಧ್ಯಮದವರಿಗೆ ಪ್ರಶಸ್ತಿ ನೀಡಲಾಗಿದೆ. ಸಾಹಿತ್ಯ, ಸಮಾಜಸೇವೆ, ಕ್ರೀಡೆ ಎಲ್ಲವೂ ಸೇರಿದಂತೆ ಪ್ರಮುಖ ಕ್ಷೇತ್ರಗಳಲ್ಲಿ ಕೊಟ್ಟಿರುವುದು 10 ಮಂದಿಗೆ ಮಾತ್ರ. ಮಾಧ್ಯಮದಲ್ಲಿಯೂ ಅದೇ ಸಂಖ್ಯೆಗೆ ಮಿತಿಗೊಳಿಸಬಹುದಿತ್ತು. ಆದರೆ ಅದು ಏಕೆ ಸಾಧ್ಯವಾಗಲಿಲ್ಲವೆಂದರೆ ಓಲೈಸುವುದು ಸರಕಾರಕ್ಕೆ ಅತ್ಯಂತ ತುರ್ತಾಗಿತ್ತು/ಇದೆ ಎಂದೇ ಅನಿಸುತ್ತದೆ.

ಇಷ್ಟೊಂದು ಮಾಧ್ಯಮ ಮಂದಿಗೆ ಕೊಟ್ಟರೆಂದು ಬೇಸರವೂ ಅಲ್ಲ, ಹೊಟ್ಟೆಕಿಚ್ಚೂ ಅಲ್ಲ. ವಿಪರ್ಯಾಸದಂತೆ ಕಾಣುವುದೆಂದರೆ ಅದಕ್ಕೊಂದು ಮಾನದಂಡ, ಹಿರಿತನ ಏನೂ ಬೇಡವೇ ? ಎಂಬುದು ನನ್ನ ಪ್ರಶ್ನೆ. ಯಾರು ವಿಭಾಗದ ಮುಖ್ಯಸ್ಥರಾಗಿರುತ್ತಾರೋ ಅವರಿಗೆಲ್ಲಾ ಪ್ರಶಸ್ತಿ ಕೊಡುತ್ತೇವೆಂದು ಇಳಿದು ಬಿಟ್ಟರೆ, ಇಂಥದೇ ಅನಾಹುತವಾಗುತ್ತದೆ. ಅದು ಆಗಿದೆ. ಹದಿನೈದು ಮಂದಿಯಲ್ಲಿ ಬಹುತೇಕರು ಯೋಗ್ಯರಿರಬಹುದು. ಅಂದರೆ ಹತ್ತು ಮಂದಿ ಎಂದಿಟ್ಟುಕೊಳ್ಳಿ. ಉಳಿದ ಐದು ಮಂದಿ ಆ ಹತ್ತು ಮಂದಿಯ ಮಾನವನ್ನೂ ಹರಾಜಿಗಿಟ್ಟರೆಂದರೆ ತಪ್ಪಾಗದು. ಪ್ರಶಸ್ತಿ ಪಡೆಯುವವರೂ ತಮ್ಮೊಳಗೆ ಆತ್ಮಾವಲೋಕನ ಮಾಡಿಕೊಂಡು ತಿರಸ್ಕರಿಸುವ ದೊಡ್ಡ ಗುಣವನ್ನೂ ಹೊಂದಿದರೆ ಇಂಥ ಮುಜುಗುರಗಳನ್ನು ಕಡಿಮೆ ಮಾಡಬಹುದೇನೋ ಎಂಬುದು ನನ್ನ ಅನಿಸಿಕೆಯಷ್ಟೇ.

ಯಾಕೆಂದರೆ, ಆ ಮೂಲಕ ಸರಕಾರದ ಎಲ್ಲ (ಪ್ರಶಸ್ತಿಯ ಪಟ್ಟಿಯಲ್ಲಿನ ಅನೈತಿಕತೆಯನ್ನೇ ಪಟ್ಟಿಮಾಡಿಕೊಂಡರೂ ಸಾಕು) ಅನೈತಿಕತೆಯನ್ನೂ ಒಪ್ಪಿಕೊಂಡಂತಾದೀತೆಂಬ ಎಚ್ಚರವೂ ಇದ್ದರೆ ಒಳಿತು. ಹೀಗೆ ಅರ್ಹರನ್ನು ಅನರ್ಹರೊಂದಿಗೆ (ಇದರ್ಥ ಯೋಗ್ಯರಲ್ಲವೆಂದಷ್ಟೇ) ಕುಳ್ಳಿರಿಸಿ ಸನ್ಮಾನಿಸುವುದೂ ಸತ್ಸಂಪ್ರದಾಯಕ್ಕೆ ಸಲ್ಲಿಸುವ ಗೌರವವಲ್ಲ. ಆ ಮೂಲಕ ಅರ್ಹರ ಸಾಧನೆಯನ್ನು ಕಡಿಮೆಗೊಳಿಸಿದಂತೆಯೇ. ಕೆಳಗಿರುವವನು ಮೇಲಿನವನಷ್ಟು ಎತ್ತರಕ್ಕೆ ಬೆಳೆಯದಿದ್ದಾಗ, ಮೇಲಿನವನನ್ನೇ ಕೆಳಗಿನವನ ಸಮಾನಕ್ಕೆ ತಂದರೆ ಹೇಗೆ ಎಂಬುದು ತತ್ ಕ್ಷಣದ ಮ್ಯಾನೇಜ್ ಮೆಂಟ್ ಎನಿಸಬಹುದೇನೋ ನಮ್ಮ ಆಡಳಿತ ಬೃಹಸ್ಪತಿಗಳ ಲೆಕ್ಕಾಚಾರದಲ್ಲಿ. ಆದರೆ, ಅದು ವಾಸ್ತವವಾಗಿ ಸಾಧಕನನ್ನು ಅವಮಾನಿಸುವುದಲ್ಲದೇ ಮತ್ತೇನೂ ಅಲ್ಲ. ಅಂಥ ಸಂಪ್ರದಾಯವನ್ನು ಸರಕಾರ ಮಾಡಬಾರದು, ಅದಕ್ಕೆ ಅರ್ಹರೂ ಅವಕಾಶ ಕಲ್ಪಿಸಬಾರದು ಎಂಬುದೂ ನನ್ನ ಅನಿಸಿಕೆ.

ಕನ್ನಡ ಪತ್ರಿಕೋದ್ಯಮಕ್ಕೆ ಕೊಟ್ಟಿರುವ ಕೊಡುಗೆಯೇನು ? ಕನ್ನಡಕ್ಕೂ ಅವರಿಗೂ ಏನು ಸಂಬಂಧ ? ಎಂಬುದನ್ನೂ ತಾಳೆ ಹಾಕಿ ನೋಡದೇ, ಎಲ್ಲ ಮುಖ್ಯಸ್ಥರಿಗೆ ಕೊಡುವ ಇರಾದೆಯಲ್ಲಿ ಓಲೈಸುವಿಕೆಯಲ್ಲದೇ ಬೇರೇನೂ ಕಾಣದು. ಕನ್ನಡಕ್ಕೂ ಕೆಲವರಿಗೂ ಸುತರಾಂ ಸಂಬಂಧವೇ ಇಲ್ಲದಿದ್ದರೂ ಅವರಿಗೆ ನೀಡಿರುವುದು ಸೋಜಿಗವೇ. ಆಯಾ ಪತ್ರಿಕೆಯಲ್ಲಿ, ವಾಹಿನಿಗಳಲ್ಲಿ “ಸುದ್ದಿಯನ್ನು ನಿರ್ಧರಿಸುವ ನೆಲೆಯ’ ಮುಖ್ಯಸ್ಥರಾಗಿದ್ದಾರೆಂಬ ಮಾತ್ರಕ್ಕೆ ಪ್ರಶಸ್ತಿ ನೀಡಿ ಗೌರವಿಸುವುದಾದರೆ ಯಾವುದಕ್ಕೆ ಗೌರವ ? ಪ್ರಶಸ್ತಿಗೋ ? ಅವರ ಸ್ಥಾನಕ್ಕೋ ? ಅವರ ಯೋಗ್ಯತೆಗೋ? ಎಷ್ಟೊಂದು ಬೇಸರದ ಸಂಗತಿಯಲ್ಲವೇ ಇದು. ಅವರಿಗೆ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಕೊಡಿ, ಪರವಾಗಿಲ್ಲ. ಅದನ್ನು ಒಪ್ಪಿಕೊಳ್ಳೋಣ. ಆದರೆ, ಹೀಗೆ ರಾಜಾರೋಷವಾಗಿ ಮಾಧ್ಯಮಗಳನ್ನು ಓಲೈಸುವ ಮಟ್ಟಕ್ಕೆ ಯಾವ ಸರಕಾರವೂ ಇಳಿದಿರಲಿಲ್ಲ. ಈ ಐಡಿಯಾ ಕೊಟ್ಟವರಿಗೆ ಮತ್ತೊಮ್ಮೆ ಹ್ಯಾಟ್ಸಾಫ್ !

ರಾಜ್ಯ ಸರಕಾರದ ಪ್ರಶಸ್ತಿಗಳಲ್ಲೂ ವಶೀಲಿ, ಬಾಜಿ ಹೆಚ್ಚಿ, ಅಧಿಕಾರಿಗಳ ಮಧ್ಯವರ್ತಿತನ, ಮಂತ್ರಿ ಮಹೋದಯರ ಮತ್ತು ಅವರ ಸಹಾಯಕರ ಕ್ಷೇತ್ರಗಳಲ್ಲಿನ ಅರಿವಿನ ಅಜ್ಞಾನ ಎಲ್ಲವೂ ಪ್ರಶಸ್ತಿಯ ಮರ್ಯಾದೆಯನ್ನು ಕಳೆಯುತ್ತಿವೆ. ಯಾವುದ್ಯಾವುದೋ ಹಂತಗಳಲ್ಲಿ ಆಗುತ್ತಿರುವ ತಪ್ಪು ಖಾಸಗಿಯವರು ನೀಡುವ ಪ್ರಶಸ್ತಿಯಷ್ಟೇ “ಗೌರವವನ್ನು’ ತಂದುಕೊಡುತ್ತಿವೆ. ಜನ, ಮಾಧ್ಯಮಗಳು ಅನುಮಾನದಿಂದಲೇ ನೋಡುವ, ಅರ್ಥೈಸುವ ಮಟ್ಟಿಗೆ ಪ್ರಶಸ್ತಿ ತಲುಪುತ್ತಿದೆ. ಈಗಲಾದರೂ ಸರಕಾರ ಎಚ್ಚೆತ್ತುಕೊಂಡರೆ ಈ ಗೌರವ ಸಲ್ಲಿಸುವ ಪದ್ಧತಿಗೆ ಗೌರವ ಬಂದೀತು, ಇಲ್ಲದಿದ್ದರೆ ಬೆಟ್ಟಕ್ಕೆ ಕಲ್ಲು ಹೊತ್ತಂತೆಯೇ ಸರಿ, ಸಮುದ್ರಕ್ಕೆ ಹುಣಸೆಹಣ್ಣು ಕಿವುಚಿದಂತೆಯೇ, ಮತ್ತ್ಯಾವ ದೊಡ್ಡಸ್ಥಿಕೆಯೂ ತಾರದು. ಅಷ್ಟೇ ಆದರೆ ಪರವಾಗಿಲ್ಲ.

ಒಂದಷ್ಟು ಗೌರವಕ್ಕೆ ವಶೀಲಿ, ಬಾಜಿ ಅನಿವಾರ್ಯವೆಂದು ಹೇಳಿಕೊಟ್ಟು ಹಲವು ತಲೆಮಾರುಗಳ ನೈತಿಕ ಅಧಃಪತನಕ್ಕೆ ಸರಕಾರವೇ ಕಾರಣವಾದ ಪಾಪವನ್ನು ಕಟ್ಟಿಕೊಳ್ಳಬೇಕಾದೀತು. ಆ ಎಚ್ಚರ ಸದಾ ಆಳುವವರನ್ನು ಕಾಡಬೇಕು, ಜತೆಗೆ ಗುಂಪಿನಲ್ಲಿ ತೆಗೆದುಕೊಳ್ಳುವ ಒಂದಿಷ್ಟು ಮಂದಿ ಅರ್ಹರಿಗೂ ಸಹ. ಸ್ವತಃ ಅಪ್ಪ-ಅಮ್ಮನೇ ತಮ್ಮ ಮಕ್ಕಳನ್ನು ಅನೈತಿಕತೆಯ ದಾರಿಗೆ ತಳ್ಳಿದಷ್ಟೇ ಕೀರ್ತಿ ಇವರಿಗೂ ಸಹ. ಇಲ್ಲದಿದ್ದರೆ ಏನೂ ಮಾಡಲಾಗದು. ಪ್ರಶಸ್ತಿ ಪಡೆಯುವವರ ಕ್ಯೂ ಮುಗಿಯುವವರೆಗೆ ಕಾದು, ನಂತರ ಮುಚ್ಚಿ ಎನ್ನಬೇಕಷ್ಟೇ.

ಹೀಗೆ ಪ್ರಶಸ್ತಿಗೂ ಕೋಟಾ ಫಿಕ್ಸ್ ಆದರೆ ‘ಗೋವಿಂದ’ನೆ ಗತಿ !

ಸಂಸ್ಕೃತಿ ಇಲಾಖೆಯ ರಾಜ್ಯೋತ್ಸವ ಪ್ರಶಸ್ತಿಯ ಎರಡನೇ ಅವಾಂತರವಿದು.

ಇದುವರೆಗೂ ಇಂಥವರಿಗೆ ಇಷ್ಟೆಂದು ಕೋಟಾ ಫಿಕ್ಸ್ ಆಗಿರಲಿಲ್ಲ. ಈ ಸರಕಾರ ಅದನ್ನೂ ಮಾಡಿಬಿಟ್ಟಿದೆ. ‘ಮಾನ್ಯ’ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಸಚಿವರಾದ ಶೋಭಾ ಕರಂದ್ಲಾಜೆ, ಗೋವಿಂದ ಕಾರಜೋಳ ಅವರಿಗೆ ತಲಾ 15, ಬೆಂಗಳೂರು ಉಸ್ತುವಾರಿ ಸಚಿವ ಆರ್. ಅಶೋಕ್ ರಿಗೆ 10, ಉಳಿದ ಸಚಿವರಿಗೆಲ್ಲಾ 2 ರಿಂದ 5 ಅಂತೆ, ಇದರ ಮಧ್ಯೆ ಎಂಟು ಸಾಂಸ್ಕೃತಿಕ ಅಕಾಡೆಮಿ ಅಧ್ಯಕ್ಷರಿಗೆ 2 (ಇದರಲ್ಲೂ ತಮ್ಮ ಪಟ್ಟಿ ನಡುವೆ ನುಸಳಲು ಸಾಧ್ಯವಾದರೆ ಮಾತ್ರ ಈ ಅಧ್ಯಕ್ಷರಿಗೆ ಮಾನ್ಯತೆ, ಇಲ್ಲದೆ ಇದ್ದರೆ ಢಮಾರ್)…ಅಲ್ಲಿಗೆ ರಾಜ್ಯೋತ್ಸವ ಪಟ್ಟಿ ಮುಗಿದೇ ಹೋಯಿತು.

ಎಲ್ಲರೂ ತಮ್ಮ ತಮ್ಮ ಮೂಗಿಗೆ ನೇರವಾಗಿ ಮಾತನಾಡುವವರದ್ದೇ ಪಟ್ಟಿ ಮಾಡಿರುತ್ತಾರೆಯೇ ಹೊರತು “ಅರ್ಹ’ರನ್ನು ಕಡಿಮೆ. ಒಂದುವೇಳೆ ಅರ್ಹತೆ ಇದ್ದೂ ಹುಡುಕುವವರ ಕಣ್ಣಿಗೆ ಕಂಡರೆ “ಯೋಗ ಭಾಗ್ಯ’ ಎರಡೂ ಕೂಡಿ ಬಂದಿರಲೇಬೇಕು. ಮೊನ್ನೆಯಷ್ಟೇ ಪ್ರಶಸ್ತಿ ಸಮಿತಿಯ ಸಭೆ ನಡೆದಾಗ, ಸಾಹಿತ್ಯ ಅಕಾಡೆಮಿ ಮತ್ತು ಜಾನಪದ ಅಕಾಡೆಮಿ ಅಧ್ಯಕ್ಷರು ಸಚಿವರನ್ನು ಪ್ರಶ್ನಿಸಿ ಇರಿಸುಮುರಿಸು ಉಂಟು ಮಾಡಿದ್ದು ನಿಜ.

“ಏನ್ರೀ, ನಮ್ಮನ್ನು ಕರೆಯೋದು ನೀವು ಮಾಡಿರೋ ಪಟ್ಟಿಗೆ ಸಹಿ ಹಾಕಿಸಿಕೊಳ್ಳೋದಿಕ್ಕಾ ? ಅದಕ್ಯಾಕೆ ಕರೀತೀರಿ ? ನೀವೇ ಸಹಿ ಹಾಕಿಕೊಂಡು ಬಿಡಿ’ ಎಂದು ಗುಡುಗಿದಾಗ ಸಚಿವರಿಗೆ ಏನು ಮಾಡಬೇಕೋ ತಿಳಿಯಲಿಲ್ಲ. ಆಗ ಮುಖ್ಯಮಂತ್ರಿ ಸಚಿವಾಲಯದಿಂದ ಬಂದ ಉತ್ತರ, “ಮಾನ್ಯರೇ, ನಿಮ್ಮದೂ ಪಟ್ಟಿ ಇದ್ದರೆ ಕೊಡಿ, ಸೇರಿಸ್ತೀವಿ’ ಎಂಬುದು. ಅಲ್ಲಿಗೆ, ಅಕಾಡೆಮಿ ಅಧ್ಯಕ್ಷರುಳ್ಳ ರಾಜ್ಯೋತ್ಸವ ಪ್ರಶಸ್ತಿ ಸಮಿತಿ ಸಭೆ ಸೇರುವ ಮೊದಲೇ ಪಟ್ಟಿ ಸಿದ್ಧವಾಗಿತ್ತು ಎನ್ನುವುದನ್ನು ಆ ಸಚಿವಾಲಯವೂ ಒಪ್ಪಿಕೊಂಡಿತಲ್ಲ.

ಎಲ್ಲವೂ ಮುಗಿದು, ಅರೆ ಮನಸ್ಸಿನಿಂದಲೇ ಆ ಅಧ್ಯಕ್ಷರು ‘ಏನ್ ಬೇಕಾದ್ರೂ ಮಾಡ್ಕೊಳ್ಳಿ’ ಎಂದು ಯಾವುದೋ ಎರಡು ಹೆಸರು ಕೊಟ್ಟು ಬಂದರಂತೆ. ಅವರಿಗೂ ಪ್ರಶಸ್ತಿ ಬರುವವರೆಗೂ ತಾವು ಕೊಟ್ಟ ಹೆಸರು ಉಳಿದೀತೆಂಬ ಭರವಸೆಯೇ ಇಲ್ಲ. ಅದೂ ಕಷ್ಟವೇ. ಎಲ್ಲ ಅಕಾಡೆಮಿ ಅಧ್ಯಕ್ಷರು ಹೀಗಿರುವುದಿಲ್ಲ, ಬಿಡಿ. ಬಹುತೇಕರು ವೇಷ ಹಾಕಿಕೊಂಡು ಕುಣಿಯುವುದಕ್ಕೇನೋ ಹೊರಟಿರುತ್ತಾರೆ, ವೇದಿಕೆಗೆ ಬಂದ ಮೇಲೆ ತಾಳವೇ ನೆನಪಿರುವುದಿಲ್ಲ. ಸುಮ್ಮನೆ ತಣ್ಣಗಾಗಿ ವೇಷ ಕಳಚಿಕೊಂಡು ಬರುತ್ತಾರೆ. ಅದೇ ರೀತಿ. “ಏನ್ಮಾಡೋದು, ನಾವು ನಮ್ಮ ಕ್ಷೇತ್ರದವರನ್ನು ಗುರುತಿಸಿಕೊಡ್ತೀವಿ. ಅವರಿಗೂ ಬೇರೆ ಬೇರೆ ಒತ್ತಡ ಇರುತ್ತೆ. ನಾವು ಕೊಟ್ಟ ಪಟ್ಟಿಯಲ್ಲಿ ಒಂದೆರಡು ಹೆಸರು ಬಿಟ್ಟು ಹೋಗಿ, ಅವರದ್ದು ಸೇರುತ್ತೆ. ಇವೆಲ್ಲಾ ಸಹಜ’ ಎಂದುಕೊಂಡು ಪಾಪ, ಎಂದು ಸುಮ್ಮನಾಗುವವರೇ ಎಲ್ಲರೂ. ಈ ಬಾರಿಯೂ ಹಾಗೆಯೇ. Continue reading

ಸಂಸ್ಕೃತಿ ಇಲಾಖೆಯ ಅಂಗಡಿಯಲ್ಲಿ ರಾಜ್ಯೋತ್ಸವ ಪ್ರಶಸ್ತಿ ಸೇಲ್ !

ರಾಜ್ಯೋತ್ಸವ ಪ್ರಶಸ್ತಿ ಈ ಬಾರಿಯೂ ಸೇಲ್ !

ಈ ಮಾತು ಸುಳ್ಳಲ್ಲ. ರಾಜ್ಯ ಸರಕಾರ ಅನಧಿಕೃತವಾಗಿ ಹರಾಜು ಹಾಕಿದೆ ಪ್ರಶಸ್ತಿಗಳನ್ನು. ಎಷ್ಟೋ ಬಾರಿ ಪ್ರಶಸ್ತಿಗೆ ಗೌರವ ತಂದುಕೊಡುವವರು ಯಾರು ಮತ್ತು ಯಾವುದು ಎಂಬ ಪ್ರಶ್ನೆ ಉದ್ಭವಿಸುವುದು ಸಹಜ. ನನ್ನ ಪ್ರಕಾರ ವ್ಯಕ್ತಿಯೊಬ್ಬ ಅದನ್ನು ಅಲಂಕರಿಸಿ ಪ್ರಶಸ್ತಿಗೆ ಗೌರವ ತಂದುಕೊಡುತ್ತಾನೆ. ಆ ಕೆಲಸ ಈಗ ಆಗುತ್ತಿದೆಯೇ ಎಂದು ಕೇಳಿದರೆ ಉತ್ತರವಿಲ್ಲ.

ಪಿ. ಲಂಕೇಶರು ತಮ್ಮ ಪತ್ರಿಕೆಯಲ್ಲಿ ಬಂಗಾರಪ್ಪ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಕರೆದು, ಕರೆದು ಸಿಕ್ಕ ಸಿಕ್ಕವರಿಗೆಲ್ಲಾ ಪ್ರಶಸ್ತಿಯನ್ನು ಪ್ರಕಟಿಸಿದಾಗ ಅಚ್ಚರಿ ಪಟ್ಟಿದ್ದರು. “ಮುಂದಿನ ಬಾರಿ ಅರ್ಹರಿಗೆ” ಎಂಬ ಲೇಖನವನ್ನೂ ಪ್ರಕಟಿಸಿದ್ದರು. ಅದರರ್ಥ ಆ ಬಾರಿ ಯಾರೂ ಅರ್ಹರಿರಲಿಲ್ಲವೇ ? ಎಂದು ಕೇಳಿದರೂ ನನ್ನಲ್ಲಿ ಉತ್ತರವಿಲ್ಲ. ಆದರೆ, ಅವರು ಹೇಳಿದಂತೆ “ಮುಂದಿನ ಬಾರಿ ಅರ್ಹರಿಗೆ” ಎಂಬ ವಾಕ್ಯ ಮಾತ್ರ ಪ್ರತಿ ಬಾರಿಯೂ ಪುನರಾವರ್ತಿತವಾಗುವಂತೆಯೇ ನಡೆಯುತ್ತಿದೆ. ಅವರೋ-ಇವರೋ ಒಂದಿಷ್ಟು ಮಂದಿ ಮಾತ್ರ ಅರ್ಹರು ಉಳಿದವರ ಮಧ್ಯೆ ತಲೆತಗ್ಗಿಸಿ ಬಲಿಪಶುವಿನಂತೆ ನಿಂತಿರುತ್ತಾರೆ. ಅದನ್ನು ಕಂಡರೇ ಅಯ್ಯೋ ಎನಿಸುವುದುಂಟು.

ಸರಕಾರಕ್ಕೂ , ಪ್ರಶಸ್ತಿಯದೇ ದಂಧೆ ನಡೆಸುವ ಖಾಸಗಿ ಸಂಸ್ಥೆಗಳ ಪ್ರಶಸ್ತಿಗೂ ಯಾವ ವ್ಯತ್ಯಾಸವೂ ಇಲ್ಲ. ಅಲ್ಲಿ ನಡೆಯುವ ಎಲ್ಲ ಉಪದ್ಯ್ವಾಪಗಳೂ ಇಲ್ಲಿಯೂ ನಡೆಯುತ್ತವೆ. ಈ ಬಾರಿಯದೆ ತೆಗೆದುಕೊಳ್ಳಿ. ಕಳೆದ ವರ್ಷ ನೆರೆ ಬಂದಿತೆಂದು, ರಾಜ್ಯೋತ್ಸವ ಪ್ರಶಸ್ತಿಯನ್ನು ಪ್ರದಾನ ಮಾಡಲಿಲ್ಲ. ಅದಕ್ಕೇ ಈ ಬಾರಿ 100ಮಂದಿಗೆ ಪ್ರಶಸ್ತಿ ನೀಡಲು ಮೊದಲು ಸರಕಾರ ನಿರ್ಧರಿಸಿತು. ಆಯಿತು, ಪಟ್ಟಿ ಹನುಮಂತನ ಬಾಲದಂತೆ ಬೆಳೆದು ಮುಟ್ಟಿರುವುದು ಈಗ 160 ಕ್ಕೆ. ರಾಜ್ಯೋತ್ಸವಕ್ಕೆ ಇನ್ನೂ ಮೂರು ದಿನಗಳಿವೆ, ಅದು ಹತ್ತು ಹೆಚ್ಚಾಗಬಹುದು ಅಥವಾ ಹತ್ತು ಕಡಿಮೆ ಆಗಬಹುದು. ಇನ್ನೂ ಪಟ್ಟಿ ಫೈನಲ್ ಆಗುತ್ತಲೇ ಇದೆ. Continue reading

ಇದು ಮಾನ್ಯ ಯಡಿಯೂರಪ್ಪನವರು ಕೊಡುತ್ತಿರುವ ಶಿಕ್ಷೆ

ಎರಡು ವರ್ಷದ ಸಾಧನೆಯ ಸಂಭ್ರಮದಲ್ಲಿದ್ದ ಬಿಜೆಪಿಯ ರಾಜ್ಯ ಸರಕಾರಕ್ಕೆ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ ಹೆಗ್ಡೆ ಕೊಟ್ಟದ್ದು ಬರಿದೇ ಶಾಕ್ ಅಲ್ಲ, ವಾಸ್ತವವಾಗಿ ಆ ನಡೆಗೆ ಕೊಟ್ಟ ‘ಚೆಕ್’.

ಈಗ ರಾಜ್ಯ ಸರಕಾರದ ಮುಂದಿನ ನಡೆಯೇನು ಎಂಬ ಕುತೂಹಲವಿದ್ದದ್ದು ನಿಜ. ಆದರೆ, ಮಾನ್ಯ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಒಬ್ಬ ಅಪ್ರಬುದ್ಧ ಆಟಗಾರನಂತೆ ಸೋಲು ಒಪ್ಪಿಕೊಂಡಿದ್ದಾರೆ. ಚೆಕ್ ಕೊಡುವುದಿರಲಿ, ಪಂದ್ಯವನ್ನೇ ಆಡುವುದಿಲ್ಲ ಎಂದು ಘೋಷಿಸಿದರು. ಇದು ಅವರ ರಾಜಕೀಯ ದಡ್ಡತನವನ್ನೂ, ಅಪ್ರಬುದ್ಧತೆಯನ್ನೂ ಸಾಬೀತುಪಡಿಸಿದೆ. ಆ ಲೆಕ್ಕದಲ್ಲಿ ಹೇಳುವುದಾದರೆ ಇನ್ನೂ ನಮ್ಮ ಮುಖ್ಯಮಂತ್ರಿ ವಿರೋಧ ಪಕ್ಷದ ನಾಯಕರೇ ಹೊರತು, ಒಬ್ಬ ಧೀಮಂತ ಮುಖ್ಯಮಂತ್ರಿಯಲ್ಲ !

ಮೂರು ವರ್ಷದ ಅವಧಿ ಇರುವಾಗಲೇ ಲೋಕಾಯುಕ್ತರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಅಧಿಕಾರ ಸ್ವೀಕರಿಸಿದಾಗ ‘ನಾನು ಹಿಂದಿನವರಂತೆ ದಾಳಿ ಮಾಡಲಾರೆ’ ಎಂದು ಉಚ್ಚರಿಸಿದ್ದರು. ನಂತರ ವಿಜಯ ಕರ್ನಾಟಕ ಪತ್ರಿಕೆಯೇ ಸಂಗ್ರಹಿಸಿದ ಜನಾಭಿಪ್ರಾಯ ಹೇಗಿತ್ತೆಂದರೆ ಅವರನ್ನು ದಾಳಿಯತ್ತ ಚಿಮ್ಮಿಸಿತು ಎಂದರೆ ತಪ್ಪೇನೂ ಇಲ್ಲ. ಆದರೆ ಎಂದಿಗೂ ಇವರು ಪ್ರಚಾರಕ್ಕೆ ದಾಳಿ ಮಾಡಿದವರಲ್ಲ. ಹಿಂದಿನವರಿಗೆ (ಎನ್. ವೆಂಕಟಾಚಲ)ಹೋಲಿಸಿದರೆ ಹೆಚ್ಚು ವ್ಯವಸ್ಥಿತವಾಗಿ ದಾಳಿ ನಡೆಸಿ ದೊಡ್ಡ ದೊಡ್ಡ ತಿಮಿಂಗಲಗಳನ್ನು ಹಿಡಿದರು. ಜನರ ಮೆಚ್ಚುಗೆ ಗಳಿಸಿದರು. ಜತೆಗೆ ತಪ್ಪಿತಸ್ಥರ ಅಥವಾ ಭ್ರಷ್ಟರ ಬಗ್ಗೆ ತಾವು ನೀಡಿದ ವರದಿಯನ್ನು ಸರಕಾರ ಉಪೇಕ್ಷಿಸತೊಡಗಿದಾಗ ಹೆಚ್ಚು ನಿಷ್ಠುರವಾಗಿಯೇ ಮಾಧ್ಯಗಳ ಮುಂದೆ, ಜನರೆದುರು ಬಿಚ್ಚಿಟ್ಟರು. ಆಗಲೇ ಅವರು ಎಂದಿಗೂ ಹುದ್ದೆ ಬಿಡಲು ಸಿದ್ಧವಾಗಿಯೇ ಇಂಥದೊಂದು ನಿಷ್ಠುರ ಅಧ್ಯಾಯ ಬರೆಯಲಾರಂಭಿಸಿದ್ದು. ಇಂದಿನ ರಾಜೀನಾಮೆ ಆ ಅಧ್ಯಾಯದ ಕ್ಲೈಮ್ಯಾಕ್ಸ್ ಹೊರತು ಹೊಸದಲ್ಲ. Continue reading

ಪ್ರಜಾತಂತ್ರದ ದೊಡ್ದ ತಮಾಷೆ !

ಪ್ರಜಾತಂತ್ರದ ತಮಾಷೆ ನೋಡುತ್ತಿದ್ದೀರಿ. ಅನುಕೂಲಸಿಂಧು ರಾಜಕಾರಣದ ಪರಾಕಾಷ್ಠೆಯೂ ಹೌದು. ಪ್ರತಿ ಪಕ್ಷಗಳಿಗೂ ಗೆಲ್ಲುವ ಅಭ್ಯರ್ಥಿಗಳೇ ಬೇಕು. ಅಂದರೆ ಗೆಲ್ಲುವ ಕುದುರೆಯ ಬಾಲಕ್ಕೆ ಹಣ ಕಟ್ಟುವವರೇ ಆಗಿದ್ದಾರೆ. ಇಷ್ಟೇ ಆಗಿದ್ದರೆ ತಮಾಷೆಯಲ್ಲ. ಜಾತ್ಯತೀತತೆ ಬಗ್ಗೆ ಗಂಟೆಗಟ್ಟಲೆ ಭಾಷಣ ಬಿಗಿಯುವವರೆಲ್ಲಾ ಜಾತಿ, ಒಳಜಾತಿಯನ್ನು ಹುಡುಕಿಕೊಂಡು ಆ-ಈ ಜನಾಂಗಗಳ ಪಟ್ಟಿ ಹಿಡಿದುಕೊಂಡು ಟಿಕೆಟ್ ಹಂಚುತ್ತಿದ್ದಾರೆ.

ಈ ಮಾತು ಆ ಪಕ್ಷ-ಈ ಪಕ್ಷಕ್ಕೆ ಅನ್ವಯಿಸುವುದಿಲ್ಲ . ಎಲ್ಲವುಗಳ ಕಥೆಯೂ ಅದೇ. ಹೀಗೆ ಆಯ್ಕೆಯಾಗಿ ಸೀಟು ಪಡೆದು ಗೆದ್ದ ನಮ್ಮ ಜನ ಪ್ರತಿನಿಧಿಗಳಲ್ಲಿ ‘ಎಲ್ಲರನ್ನೂ ಸಮಾನವಾಗಿ ಕಾಣಿರಿ’ ಎಂದು ಬೇಡಿಕೊಳ್ಳುವ ಸ್ಥಿತಿ ಎಲ್ಲರದ್ದು. ಜತೆಗೆ ಜಾತಿ ಕಾರಣದಿಂದಲೇ ಸೀಟು ಪಡೆದವರಿಗೆ ಎಲ್ಲ ಜಾತಿಯವರೂ ಓಟು ಹಾಕಿ ಗೆಲ್ಲಿಸಬೇಕು. ಇದೆಂಥಾ ವಿಪರ್ಯಾಸವಲ್ಲವೇ?

ಮೂರು ದಿನಗಳಿಂದ ಎಲ್ಲೆಲ್ಲೂ ಬಂಡಾಯದ ಮಾತು ಕೇಳಿ ಬರುತ್ತಿದೆ. ಎಲ್ಲರಿಗೂ ನಾಯಕರಾಗಬೇಕೆಂಬ ತುಡಿತ-ಹಂಬಲದ ತೀವ್ರತೆ ಎಷ್ಟಿದೆಯೆಂದರೆ ಎಲ್ಲರ ಬೆಂಬಲಿಗರು ಇಂಥ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುತ್ತಾರೆ. ಒಂದು ಕಥೆ ನೆನಪಾಗುತ್ತದೆ. ಒಂದೂರಿನಲ್ಲಿ ಆರು ಮಂದಿ ರುಡಾಲಿಗಳಿದ್ದರಂತೆ. ಅಂದರೆ ಯಾರಾದರೂ ಸತ್ತಾಗ ಬಾಡಿಗೆಗೆ ಅಳುವವರು. ಸತ್ತವರ ಮನೆ ಮುಂದೆ ಅಂಥದೊಂದು ದುಃಖದ ವಾತಾವರಣ ನಿರ್ಮಿಸುವುದು ಅವರ ಕೆಲಸ. ವಾಸ್ತವವಾಗಿ ವೃತ್ತಿಪರ ರೋದಕರು ಅವರು.

ಊರಿನಲ್ಲಿ ಯಾರೇ ಸತ್ತರೂ ಅವರೇ ಹೋಗಬೇಕು. ಆ ಊರಿನಲ್ಲಿ ಬೇರೆ ರುಡಾಲಿಗಳಿಲ್ಲ. ಪಕ್ಕದೂರಿನಲ್ಲಿ ಹೀಗೇ ಒಬ್ಬ ಶ್ರೀಮಂತ ಒಮ್ಮೆ ಸತ್ತ. ಆ ಊರಿನಲ್ಲಿ ರುಡಾಲಿಗಳಿರಲಿಲ್ಲ. ಈ ಊರಿನಿಂದ ಬಾಡಿಗೆಗೆ ಕರೆ ತರಬೇಕು. ಆದರೆ ಈ ಊರಿನ ರುಡಾಲಿಗಳಿಗೆ ಒಂದೇ ಚಿಂತೆ. ಒಂದುವೇಳೆ ಈ ಊರಿನಲ್ಲಿ ಯಾರಾದರೂ ಆಕಸ್ಮತ್ತಾಗಿ ಸತ್ತರೆ ಯಾರು ಅಳುತ್ತಾರೆ? ಅದೂ ನಿಜವೇ.

ಹೇಗೂ ಕಷ್ಟಪಟ್ಟು ಆ ಊರಿಗೆ ಹೋಗಿ ಶ್ರೀಮಂತನ ಮನೆ ಮುಂದೆ ಅಳುತ್ತಿದ್ದರಂತೆ. ಆಗ ಸುದ್ದಿ ಬಂತು. ತಮ್ಮ ಊರಿನಲ್ಲಿ ಯಾರೋ ಒಬ್ಬರು ಸತ್ತಿದ್ದಾರೆ ಎಂದು ತಿಳಿಯಿತು. ಆದರೆ ಹೊರಡುವಂತಿಲ್ಲ. ಇಲ್ಲಿ ಹಣ ಪಡೆದ ಋಣ ಅವರನ್ನು ಕಾಡುತ್ತಿತ್ತು. ಆಗ ಏನು ಮಾಡುವುದು ತಿಳಿಯದೇ ಮನೆಯವರಿಗೆ ಹೋಗಿ ಹೇಳಿದರಂತೆ- ‘ನಮ್ಮ ಪರಿಸ್ಥಿತಿ ಹೀಗಿದೆ. ಏನಾದರೂ ಉಪಾಯ ಹೇಳುತ್ತೀರಾ?’ ಎಂದು ಕೇಳಿದ್ದಕ್ಕೆ ‘ಅದ್ಹೇಗೆ ಸಾಧ್ಯ ?’ ಎಂದರಂತೆ ಮನೆಯವರು. ಅತ್ತ ಹೋಗಲೂ ಆಗಲಿಲ್ಲ. ಅಂದಿನಿಂದ ಬೇರೆ ಊರಿಗೆ ಹೋಗಿ ಅಳುವುದನ್ನೇ ರುಡಾಲಿಗಳು ನಿಲ್ಲಿಸಿದರಂತೆ.

ಇಂಥ ಕನಿಷ್ಠ ನಿಯತ್ತು ನಮ್ಮ ನಾಯಕರ ಬೆಂಬಲಿಗರಿಗಿಲ್ಲ, ಬಿಡಿ. ಇದು ಗಂಭೀರವಾದ ಲೇಖನ ಎಂದುಕೊಳ್ಳಬೇಡಿ. ಮೂರ್‍ನಾಲ್ಕು ದಿನಗಳಿಂದ ನಡೆಯುತ್ತಿರುವ ಬೆಳವಣಿಗೆಯನ್ನು ಕಂಡಾಗ ಅನಿಸಿದ್ದು. ಇಲ್ಲಿ ಈ ನಾಯಕರ ಪರವಾಗಿ ಪ್ರತಿಭಟಿಸಿದವರೇ ನಾಳೆ ನಡೆಯುವ ಅವರ ವಿರೋಧಿ ಪ್ರತಿಭಟನೆಯಲ್ಲೂ ಇರುತ್ತಾರೆ. ಅದರಲ್ಲೇನೂ ಅಚ್ಚರಿಯಿಲ್ಲ.

ನಮ್ಮ ನಾಯಕರೂ ಹಾಗೆಯೇ. ಬೆಳಗ್ಗೆ ಕಾಂಗ್ರೆಸ್ ಬಾಗಿಲಲ್ಲಿ ನಿಂತವರು, ಮಧ್ಯಾಹ್ನ ಬಿಜೆಪಿಯ ಪಡಸಾಲೆಯಲ್ಲಿರುತ್ತಾರೆ. ಸಂಜೆ ಎನ್ನುವಷ್ಟರ ಮಟ್ಟಿಗೆ ಜೆಡಿಎಸ್‌ನ ಉಪ್ಪರಿಗೆಯಲ್ಲಿ ಇರುತ್ತಾರೆ. ದುರಂತವೆಂದರೆ ಎಲ್ಲೆಲ್ಲೂ ಕಾಯುವುದೇ ನಮ್ಮವರ ಸರದಿ. ‘ಅಪಾಯಿಂಟ್‌ಮೆಂಟ್’ಗೆ ಕಾದುಕೊಂಡು ರಾಜಕೀಯ ಮಾಡಬೇಕು. ಸದಾ ಬೆಂಕಿಯಿಂದ ಬಾಣಲೆಗೆ ಬೀಳುತ್ತಾ, ಬಾಣಲೆಯಿಂದ ಬೆಂಕಿಗೆ ಬೀಳುತ್ತಾ ನಮ್ಮನ್ನು ಆಳುವಂಥ ಕಷ್ಟವನ್ನು ನಿಭಾಯಿಸಬೇಕು. ಅಯ್ಯೋ ಪಾಪ ಎನಿಸುವುದಿಲ್ಲವೇ? ನಮ್ಮ ಆಳುವವರ ಕಂಡು.

ಯಾರು ಹಿತವರು ಈ ಮೂವರೊಳಗೆ ಎಂದರು ಪುರಂದರದಾಸರು. ನಮ್ಮ ಹಿತ ಕಾಯುವವರು ಯಾರೂ ಇಲ್ಲವೆನ್ನಿ. ಜತೆಗೆ ಹಿತವಾಗುವವರೂ ಇಲ್ಲ.  ಇನ್ನೂ ಬೇಸರದ ಸಂಗತಿಯೆಂದರೆ ನಮ್ಮ ನಾಯಕರಿಗೆ ತಮ್ಮ ಹಿತವನ್ನೂ ಸ್ವಾಭಿಮಾನಿಯಾಗಿ, ಸಾತ್ವಿಕ ನೆಲೆಯಲ್ಲಿ ಕಾದುಕೊಳ್ಳಲು ಬರುವುದಿಲ್ಲ. ಅದಕ್ಕೆ ರಸ್ತೆ ತಡೆ ನಡೆಸಬೇಕು, ಟೈರ್‌ಗಳನ್ನು ಸುಡಬೇಕು. ಸಿಕ್ಕವರ ವಿರುದ್ಧ ಗಲಾಟೆ ನಡೆಸಿ ‘ಹೋ…ಹೋ…’ ಎನ್ನಬೇಕು.

ದೊಡ್ಡ ಚುನಾವಣೆ ನಡೆಯುವ ಮುನ್ನ ಘಟಿಸುವ ಟಿಕೆಟ್ ಮ್ಯಾರಥಾನ್ ನೋಡಿದರೆ ಅಯ್ಯೋ ಎನಿಸುತ್ತದೆ. ಒಬ್ಬರು ಟಿಕೆಟ್ ಸಿಗಲಿಲ್ಲ ಎಂದು ಅಳುತ್ತಾರೆ. ಮತ್ತೊಬ್ಬರು ತಮ್ಮ ಬೆಂಬಲಿಗರನ್ನು ಆತ್ಮಹತ್ಯೆ ಮಾಡಿಕೊಳ್ಳಲು ಹುರಿದುಂಬಿಸುತ್ತಾರೆ. ಮಗದೊಬ್ಬರು ಈ ಎಲ್ಲ ತಂತ್ರಗಳನ್ನು ಬಿಟ್ಟು ಮತ್ತೇನನ್ನೋ ಹುನ್ನಾರ ನಡೆಸುತ್ತಾರೆ. ಸ್ವಲ್ಪ  ಜಾತಿ ಬಲವಿದ್ದರೆ, ಹಣದ ಬಲವೂ ಇದ್ದರೆ ಬೇರೆ ಪಕ್ಷಗಳು ಗಾಳಕ್ಕೆ ಸಿಲುಕುತ್ತಾರೆ. ಇಲ್ಲದಿದ್ದರೆ ಅತೃಪ್ತ ಪ್ರೇತಾತ್ಮಗಳಂತೆ ಅಲ್ಲಿಯೂ ಇಲ್ಲಿಯೂ ಅಲೆದಾಡಬೇಕು.

ಅರವತ್ತು ವಯಸ್ಸಿನವರ ರಾಜಕಾರಣಕ್ಕೆ ಕೊನೆ ಹೇಳಬೇಕೆನ್ನುವುದು ನಿಜ. ಆದರೆ ಆ ನಿಟ್ಟಿನಲ್ಲಿ ಪ್ರಯತ್ನವೂ ನಡೆಯುತ್ತಿಲ್ಲ. ಮತ್ತೆ ಎಲ್ಲ ಪಕ್ಷಗಳಲ್ಲೂ ಐವತ್ತರ ನಂತರದವರೇ ಮಂತ್ರಿಯಾಗಬೇಕು, ಮುಖ್ಯಮಂತ್ರಿಯಾಗಬೇಕು ಎಂದು ಹಪಹಪಿಸುತ್ತಿದ್ದಾರೆ. ಹಾಗಾದರೆ ಯುವಜನರು ರಾಜಕೀಯ ಮಾಡೋದು ಹೇಗೆ ಎಂದು ಹಿರಿಯ ರಾಜಕಾರಣಿಯೊಬ್ಬರನ್ನು ಕೇಳಿದರೆ ಅತ್ಯಂತ ಉಲ್ಲಸಿತರಾಗಿ ‘ನಮ್ಮನ್ನು ನೋಡಿಕೊಂಡು ಕಲಿತುಕೊಳ್ಳಿ’ ಎನ್ನುತ್ತಾರೆ. ಇವರಿಂದ ಏನನ್ನು ಕಲಿಯಬೇಕೆಂದು ಮಾತ್ರ ಹೇಳುವುದಿಲ್ಲ.

ಇನ್ನೊಂದು ತಿಂಗಳ ಇಂಥದೊಂದು ಚುನಾವಣೆಯ ತಮಾಷೆ ನಡೆಯುತ್ತದೆ. ಈ ಮಾತನ್ನು ಅತ್ಯಂತ ಲಘುವಾಗಿ ಹೇಳುತ್ತಿಲ್ಲ. ಆದರೆ ಪ್ರತಿದಿನ ನಡೆಯುವ ರಾಜಕಾರಣ ಒಂದು ನಾಟಕಕ್ಕಿಂತ ಹೆಚ್ಚಿನದಾಗಿ ಏನೂ ಅನಿಸುವುದಿಲ್ಲ. ಸಿದ್ದರಾಮಯ್ಯನವರು ಜೆಡಿಎಸ್‌ನಲ್ಲಿ ಬೇಸರಗೊಂಡು ಕಾಂಗ್ರೆಸ್‌ಗೆ ಹೋದರು. ಹೋಗುವಾಗ ಬರಿಗೈಲಿ  ಹೋಗಲಿಲ್ಲ. ಪಟಾಲಾಂನೊಂದಿಗೆ ಹೋದರು. ಅವರಿಗೆಲ್ಲಾ ಟಿಕೆಟ್ ಕೊಡಿಸಲು ದಿಲ್ಲಿಯಲ್ಲಿ ಕಸರತ್ತು ನಡೆಸಿದ್ದೇ ನಡೆಸಿದ್ದು. ಪುಣ್ಯಕ್ಕೆ ಜಾತಿ ಬಲವಿತ್ತು. ಹೇಳಿದವರಿಗೆಲ್ಲಾ ಟಿಕೆಟ್ ಸಿಗಲಿಲ್ಲವೆಂದರೂ ಶೆ. ೯೦ ರಷ್ಟು ಟಿಕ್ ಮಾಡಿದವರಿಗೆ ಟಿಕೇಟು ಸಿಕ್ಕಿತು. ಹಾಗೆಂದು ಜೆಡಿಎಸ್ ನಲ್ಲಿ ತಮಗೆ ಕೇಳಿದಲ್ಲಿ ಟಿಕೆಟ್ ಸಿಗಲಿಲ್ಲವೆಂದು ಬೇಸತ್ತವರು ಬಿಜೆಪಿಗೆ ಸೇರಲು ಹೊರಟಿದ್ದಾರೆ. ಒಟ್ಟಿನಲ್ಲಿ ತಾವು ಭದ್ರ ಎಂದು ತಿಳಿದುಕೊಂಡಲ್ಲಿ ಸ್ಪರ್ಧಿಸಲು ಅವರಿಗೆ ಟಿಕೆಟ್ ಬೇಕು. ಪಕ್ಷವಾಗಲೀ, ನಿಷ್ಠೆಯಾಗಲೀ ಬೇಕಿಲ್ಲ. ಹಾಗೆಂದು ನೀವು ಕೇಳಿದರೆ ‘ಮಸ್ಕಿರಿ’ ಮಾಡ್ತಿರೇನು? ಎಂದು ಪ್ರಶ್ನಿಸಿ ಕಳಿಸಿಯಾರು. ಹೀಗೆ ಗಂಟೆಗೊಂದು ಪಕ್ಷ ಬದಲಿಸುವವರಿಗೆ ಮತ ಹಾಕಬೇಕೇನು ? ಎಂದೆನಿಸುವುದು ಸಹಜ.

ಆದರೆ ಪ್ರಜಾತಂತ್ರದಲ್ಲಿ ಪಾಲ್ಗೊಳ್ಳಬೇಕಾದ ಹೊಣೆ ಹೊತ್ತಿರುವ ನಾವೆಲ್ಲಾ ಯಾರಿಗಾದರೂ ಒಬ್ಬರಿಗೆ ಮತ ಹಾಕಬೇಕು. ಅಂದರೆ ಎಲ್ಲರೂ ಕಳ್ಳರು, ಸುಳ್ಳರೇ. ಅವರಲ್ಲಿ ಪ್ರಮಾಣ ಆಧರಿಸಿ ಆಯ್ಕೆ ಮಾಡಬೇಕು. ದೊಡ್ಡ ಕಳ್ಳನಿಗಿಂತ ಸಣ್ಣ ಕಳ್ಳ ಪರವಾಗಿಲ್ಲ. ಅದೂ ಅವನು ದೊಡ್ಡ ಕಳ್ಳನಾಗುವವರೆಗೆ. ಇದರರ್ಥ ಎಲ್ಲ ಜನಪ್ರತಿನಿಧಿಗಳನ್ನು ಒಂದೇ ತಕ್ಕಡಿಯಲ್ಲಿ ಇಡುತ್ತಿಲ್ಲ. ಅವರೇ ಕುಳಿತುಕೊಳ್ಳುತ್ತಿದ್ದಾರೆ. ಇಂಥದೊಂದು ತಮಾಷೆಗೆ ಸಾಕ್ಷಿಯಾಗುವ ಮುನ್ನ ಕೊಂಚ ಆಲೋಚಿಸುವುದೊಳಿತಲ್ಲವೇ?